ಮಕ್ಕಳ ಕವಿತೆ: ನಮ್ಮ ಪುಟ್ಟಿ
– ವೆಂಕಟೇಶ ಚಾಗಿ.
ನಮ್ಮ ಪುಟ್ಟಿಯ ಚಂದದ ಆಟ
ನೋಡಲು ಎಶ್ಟು ಸುಂದರ
ಪುಟ್ಟಿ ಜೊತೆಗೆ ಆಟವನಾಡಲು
ಬರುವನು ಬಾನಿಗೆ ಚಂದಿರ
ಪುಟ್ಟಿಯ ಕೈಯಲಿ ಗೊಂಬೆ ಇದ್ದರೆ
ಆಡಿಸಿ ನಗುತ ನಲಿಯುವಳು
ಗೊಂಬೆಗೆ ಬಣ್ಣದ ಅಂಗಿಯ ಹಾಕಿ
ಲಾಲಿಸಿ ಅಳುವ ಮರೆಯುವಳು
ಪುಟ್ಟ ಪುಟ್ಟ ಹೆಜ್ಜೆಗಳಿಡುತ
ಓಟದ ಆಟವ ಆಡುವಳು
ಓಡುವ ಅವಳ ಹಿಡಿದುಬಿಟ್ಟರೆ
ಕುಶಿಯಲಿ ಕೇಕೆ ಹಾಕುವಳು
ಪಾಟ ಓದಲು ಕುಳಿತರೆ ನಾನು
ತನಗೂ ಪುಸ್ತಕ ಕೇಳುವಳು
ಚಿತ್ರವ ನೋಡಿ ಪುಟಗಳ ತಿರುವಿ
ಓದನು ಕ್ಶಣದಲಿ ಮುಗಿಸುವಳು
ಊಟ ಮಾಡುವ ರೀತಿ ಚಂದ
ನನಗೂ ತುತ್ತನು ನೀಡುವಳು
ತಿನ್ನುವ ಹಣ್ಣನು ಕಸಿದುಕೊಂಡರೆ
ನೆಲಕೆ ಬಿದ್ದು ಗೋಳಾಡುವಳು
ನಮ್ಮನೆ ಚೆಲುವೆ ಪುಟಾಣಿ ಪುಟ್ಟಿ
ಮಹಾರಾಣಿಯು ಅವಳೆ ನಮ್ಮನೆಗೆ
ನನ್ನ ಮುದ್ದಿನ ಪ್ರೀತಿಯ ಪುಟ್ಟಿ
ಅವಳಿದ್ದರೆ ಬೇರೆ ಬೇಡೆನಗೆ
(ಚಿತ್ರ ಸೆಲೆ: freegreatpicture.com)
ಇತ್ತೀಚಿನ ಅನಿಸಿಕೆಗಳು