ವಿನ್ಯಾಸಗೊಳಿಸಿದ ಮರಗಳು
– ಕೆ.ವಿ.ಶಶಿದರ.
ಮರ ಗಿಡ ಎಂದರೆ ಸಾಮಾನ್ಯರ ಮನದಲ್ಲಿ ಕಂಡುಬರುವ ಚಿತ್ರಣ ಎಂದರೆ, ಬೂಮಿಯಲ್ಲಿ ಹುದುಗಿರುವ ಬೇರು, ಬೂಮಿಯಿಂದ ಹೊರ ಬಂದಿರುವ ಕಾಂಡ, ಕಾಂಡದಿಂದ ಕವಲೊಡೆದಿರುವ ಕೊಂಬೆಗಳು, ಕೊಂಬೆಗಳಿಂದ ಮತ್ತೆ ಕವಲೊಡೆದಿರುವ ಸಣ್ಣ ಸಣ್ಣ ಕೊಂಬೆಗಳು, ಅದರಲ್ಲಿರುವ ಅಸಂಕ್ಯಾತ ಎಲೆಗಳು. ಹೆಚ್ಚಾಗಿ ಕೊಡೆಯಾಕಾರದಲ್ಲಿ ಕಂಡುಬರುವ, ಬಿಸಿಲಿಗೆ ತಂಪಾದ ನೆರಳನ್ನು ನೀಡುವ, ನಿಂತಲ್ಲೇ ನಿಂತಿರುವುದೇ ಮರದ ವೈಶಿಶ್ಟ್ಯ. ಬೂಮಿಯಲ್ಲಿ ಬೀಜ ಮೊಳೆತಾಗಲಿಂದಲೂ, ಅದು ಮರವಾಗಿ, ಹೆಮ್ಮರವಾಗಿ ಬೆಳೆದು ನಿಲ್ಲುವವರೆಗೂ, ಪ್ರಕ್ರುತಿಯೇ ಅದಕ್ಕೆ ನೀರುಣಿಸಿ ಪೋಶಣೆ ಮಾಡಿರುವುದನ್ನು ಕಾಡುಗಳಲ್ಲಿ ಕಾಣಬಹುದು.
ಏನಿವು ವಿನ್ಯಾಸಗೊಳಿಸಿದ ಮರಗಳು?
ಪ್ರಕ್ರುತಿದತ್ತವಾದ ಮರದ ಬೆಳವಣಿಗೆಯನ್ನು ಮಾನವ ತನ್ನಿಶ್ಟದಂತೆ ಮಾರ‍್ಪಾಡು ಮಾಡಲು ಸಾದ್ಯವೇ? ಸಾದ್ಯ ಎಂದವರು ಸ್ವೀಡಿಶ್ ಮೂಲದ ಆಕ್ಸೆಲ್ ಎರ‍್ಲೆಂಡ್ಸನ್. ತನ್ನ ಕುಟುಂಬವನ್ನು ಮನರಂಜಿಸಲು ತಾನೇ ಬೆಳೆಸಿಕೊಂಡ ಈ ಹವ್ಯಾಸದಿಂದ ಆತ ಇಂದು ಈ ಪ್ರಕಾರದ ಕಲಾ ಚಳುವಳಿಯ ಜನಕನಾಗಿದ್ದಾನೆ. ಸ್ವೀಡನ್ನಿನ ಆಕ್ಸೆಲ್ ಎರ‍್ಲೆಂಡ್ಸನ್‍ನ ಕುಟುಂಬವು, ಆತ ಹದಿನೇಳರ ಹರೆಯದಲ್ಲಿದ್ದಾಗಲೇ ಮದ್ಯ ಕ್ಯಾಲಿಪೋರ‍್ನಿಯಾದ ಟರ‍್ಲಾಕ್‍ಗೆ ಸ್ತಳಾಂತರಗೊಂಡಿತು. ಅಲ್ಲಿ ಅವನ ಕುಟುಂಬವು ಕ್ರುಶಿಯನ್ನೇ ಕಸುಬಾಗಿ ಸ್ವೀಕರಿಸಿತ್ತು. 1925ರಲ್ಲಿ ಆಕ್ಸೆಲ್‍ಗೆ ಮರದ ಆಕಾರ, ವಿನ್ಯಾಸವನ್ನು ಬದಲಿಸುವ ಹವ್ಯಾಸದ ಬೀಜಾಂಕುರವಾಯಿತು. ಈ ಹವ್ಯಾಸವನ್ನು ಪೋಶಿಸಲು ಆತ ಕೆಲವು ನಿರ‍್ದಿಶ್ಟ ಮಾದರಿಯ ಮರಗಳನ್ನು ಆಯ್ಕೆ ಮಾಡಿಕೊಂಡು, ಅದರ ಬೀಜಗಳನ್ನು ನೆಡಲು ಆರಂಬಿಸಿದ. ಬೆಳೆಯಲು ಪ್ರಾರಂಬವಾದ ಮರಗಳು, ಇನ್ನೂ ಎಳೆಯದಾಗಿರುವಾಗಲೇ, ಅದರ ಕಾಂಡ ಮತ್ತು ಕೊಂಬೆಗಳನ್ನು ಬಹಳ ಎಚ್ಚರಿಕೆಯಿಂದ, ತನ್ನ ಪೂರ‍್ವಯೋಜಿತ ವಿನ್ಯಾಸದಂತೆ ಬಾಗಿಸಿ, ಹ್ರುದಯ, ಬುಟ್ಟಿ, ಉಂಗುರ, ಚೇರು, ಮುಂತಾದ ಸಣ್ಣ ಪುಟ್ಟ ಆಕಾರಗಳನ್ನು ರಚಿಸಲು ಶುರುಮಾಡಿದ.
ಮುಂದಿನ ದಿನಗಳಲ್ಲಿ ಇನಾಸ್ಕ್ಯುಲೇಶನ್ ಎನ್ನಲಾಗುವ ಕಸಿ ಪದ್ದತಿಯಿಂದ, ಒಂದು ಮರದ ಕೊಂಬೆಗಳ ಸಂಗಡ ಮತ್ತೊಂದು ಮರದ ಕೊಂಬೆಗಳನ್ನು ಬೆಸೆಯುವ ಕೆಲಸಕ್ಕೆ ಕೈ ಹಾಕಿದ. ಜೀಜಗಳ ನಾಟಿ, ಮ್ರುದುವಾದ ಗಿಡಗಳನ್ನು ಕತ್ತರಿಸುವುದು, ತನಗೆ ಬೇಕಾದ ಆಕಾರದ ಅಚ್ಚುಗಳ ತಯಾರಿಕೆ ಇವೇ ಮುಂತಾದ ಕೆಲಸಗಳನ್ನು ಬಹಳ ಶ್ರದ್ದೆಯಿಂದ ಮಾಡಿದ. ತನಗೆ ಬೇಕಾದ ವಿನ್ಯಾಸಕ್ಕೆ ಸರಿ ಹೊಂದುವಂತೆ ಅವುಗಳನ್ನು ಜೋಡಿಸಿದ. ಈ ಸರಣಿ ಯೋಜನೆಗಳು ‘ರಾತ್ರಿ ಕಳೆದು ಹಗಲಾಗುವುದರೊಳಗೆ’ ಪಲಿತಾಂಶ ನೀಡುವಂತಹವು ಆಗಿರಲಿಲ್ಲ. ಇದಕ್ಕೆ ವರ‍್ಶಾನುಗಟ್ಟಲೆ ಕಾಯುವಿಕೆ, ಸತತ ಪರಿಶ್ರಮ ಹಾಗೂ ಅತ್ಯಂತ ಹೆಚ್ಚು ತಾಳ್ಮೆಯ ಅವಶ್ಯಕತೆಯಿತ್ತು. ಆಕ್ಸೆಲ್ ನಲ್ಲಿ ಅದು ಹೇರಳವಾಗಿತ್ತು. ಈ ರೀತಿಯಲ್ಲಿ ಸಂಯೋಜಿಸಿದ ಮರಗಳು ಅವನಿಗೆ ಹಾಗೂ ಅವನ ಕುಟುಂಬಕ್ಕೆ ತ್ರುಪ್ತಿ ನೀಡಿದ್ದವು. ಅಕ್ಕಪಕ್ಕದವರು ಇದನ್ನು ಮೂಗಿನ ಮೇಲೆ ಬೆರಳಿಟ್ಟು ನೋಡಿದ್ದರು. ಆಕ್ಸೆಲ್ ನ ಮೊದಲ ಸ್ರುಶ್ಟಿ “ನಾಲ್ಕು ಕಾಲುಗಳ ದೈತ್ಯ” ಅದರಲ್ಲಿ ನಾಲ್ಕು ಕಾಂಡಗಳು ಸೇರಿ ಮುಂದೆ ಒಂದೇ ಕಾಂಡವಾಗಿ ಮೇಲೇರಿದ ಮರ. ಆ ಮರದ ನಾಲ್ಕು ಕಾಲುಗಳ ಮದ್ಯ ಒಂದು ಸಣ್ಣ ಮೊಗಸಾಲೆ ಸ್ರುಶ್ಟಿಯಾಗಿತ್ತು. ಆಕ್ಸೆಲ್ ನ ಪ್ರಕಾರ ಈ ರೀತಿಯ ವಿನ್ಯಾಸದ ಮರಗಳ ಸ್ರುಶ್ಟಿ, ದೈವಿಕ ಸ್ಪೂರ‍್ತಿಯಂತೆ. ಆತ ಏನೇ ಹೇಳಿದರೂ ಮರಗಳಿಗೆ ನೀಡಬೇಕಾದ ವಿನ್ಯಾಸ, ಆಕಾರ ಇವುಗಳ ನಿಯಂತ್ರಣ ಅವನ ಕೈಯಲ್ಲೇ ಇದ್ದುದು ಸುಳ್ಳಲ್ಲ. ಆಕ್ಸೆಲ್‍ನ ಈ ಕೆಲಸ ನೋಡಿದರೆ ‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ’ ಎಂಬ ನಾಣ್ಣುಡಿ ನೆನಪಿಸುತ್ತದಲ್ಲವೇ?
ಟ್ರೀ ಸರ‍್ಕಸ್
ವಿನ್ಯಾಸಗೊಳಿಸಿದ ಮರಗಳನ್ನು ಪ್ರದರ‍್ಶನಕ್ಕಿಟ್ಟು ಹಣ ಸಂಪಾದನೆ ಮಾಡಬಹುದೆಂಬ ಆತನ ಪತ್ನಿ ಮತ್ತು ಪುತ್ರಿಯ ಸಲಹೆಯನ್ನು ಒಪ್ಪಿದ ಎರ‍್ಲೆಂಡ್ಸನ್, ತಾನೇ ಬೆಳೆದು ಪೋಶಿಸಿದ್ದ ಮರಗಳನ್ನು ಅತಿ ಎಚ್ಚರಿಕೆಯಿಂದ ಅಗೆದು ತೆಗೆದು, ಸ್ಕಾಟ್ಸ್ ವ್ಯಾಲಿಗೆ ಸ್ತಳಾಂತರಿಸಿ, ಅಲ್ಲಿ ಮರು ನೆಟ್ಟಿದ್ದ. ಮರಗಳನ್ನು “ಟ್ರೀ ಸರ‍್ಕಸ್” ಎಂಬ ಹೆಸರಿನಲ್ಲಿ ಸಾರ‍್ವಜನಿಕರ ವೀಕ್ಶಣೆಗೆ ತೆರೆದಿಟ್ಟ. ‘ಟ್ರೀ ಸರ‍್ಕಸ್’ ನಲ್ಲಿದ್ದ ವಿಚಿತ್ರ ವಿನ್ಯಾಸದ, ಆಕಾರದ ಮರಗಳ ಸಂಗ್ರಹವನ್ನು ನೋಡಿದ ಜನ ನಿಬ್ಬೆರೆಗಾದರು. ‘ರಿಪ್ಲೇಸ್ ಬಿಲೀವ್ ಇಟ್ ಆರ್ ನಾಟ್’ ನಲ್ಲಿಯೂ ಇದರ ವಿವರ ಪ್ರಕಟಗೊಂಡ ನಂತರ ಇದರ ಕ್ಯಾತಿ ಎಲ್ಲೆಡೆ ಹಬ್ಬಿತು. ತನ್ನ ಜೀವಿತದ ನಲವತ್ತು ವರ‍್ಶಗಳ ಸಮಯದಲ್ಲಿ ಆಕ್ಸೆಲ್ ಎಪ್ಪತ್ತಕ್ಕೂ ಹೆಚ್ಚು ವಿವಿದ ವಿನ್ಯಾಸದ ಮರಗಳನ್ನು ಸ್ರುಶ್ಟಿಸಿದ್ದ. ಅವುಗಳಲ್ಲಿ ಮರದ ಕಾಂಡ ಕವಲುಗಳಾಗಿ ಗನದಂತೆ (ಕ್ಯೂಬ್), ಕಮಾನಿನಂತೆ, ಬುಟ್ಟಿ ಹೆಣೆದಂತೆ ಮಾರ‍್ಪಾಡಾಗುವ ಹೊಸ ಹೊಸ ವಿನ್ಯಾಸ ಹುಟ್ಟು ಹಾಕಿದ್ದ. ಈ ರೀತಿಯ ವಿನ್ಯಾಸದ ಮರಗಳನ್ನು ಸ್ರುಶ್ಟಿಸುವ ಹಿಂದಿರುವ ರಹಸ್ಯವನ್ನು ಮಾತ್ರ ಆಕ್ಸೆಲ್ ಎರ‍್ಲೆಂಡ್ಸನ್ ಯಾರಿಗೂ ಬಿಟ್ಟುಕೊಡಲಿಲ್ಲ.
ಆರೋಗ್ಯದ ಕೊರತೆ ಹಾಗೂ ವಯೋಸಹಜ ಕಾಯಿಲೆಗಳಿಂದ 1963ರಲ್ಲಿ ಆಕ್ಸೆಲ್ ಎರ‍್ಲೆಂಡ್ಸನ್ ಒಲ್ಲದ ಮನಸ್ಸಿನಿಂದ ತನ್ನ ಆಸ್ತಿಯನ್ನು ಹಾಗೂ ತನ್ನದೇ ಸ್ರುಶ್ಟಿಯ ವಿನ್ಯಾಸಗೊಳಿಸಿದ ಮರಗಳನ್ನು ಮಾರಿದ್ದ. ತದನಂತರ ಈ ವಿಬಿನ್ನ ವಿನ್ಯಾಸದ ಮರಗಳು ಹಲವಾರು ಕೈ ಬದಲಾವಣೆಯಾದಾಗ, ಸರಿಯಾದ ಪೋಶಣೆಯಿಲ್ಲದೆ ಹಲವು ಮರಗಳು ಒಣಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು. 1976ರಲ್ಲಿ ಇದನ್ನು ಕಂಡ ಸಾಂತಾ ಕ್ರೂಜ್‌ನ ವಾಸ್ತು ಶಿಲ್ಪಿ ಮಾರ‍್ಕ್ ಪ್ರಿಮಾಕ್ ಈ ವಿಶೇಶ ಮರಗಳನ್ನು ಉಳಿಸುವ ಪ್ರಯತ್ನಕ್ಕೆ ಕೈ ಹಾಕಿದ. ಪ್ರಿಮಾಕ್‍ನ ಈ ಪ್ರಯತ್ನ ಗಿಲ್ರಾಯ್ ಗಾರ‍್ಡನ್ಸ್ ನ ಸಂಸ್ತಾಪಕ ಮೈಕೇಲ್ ಬಾನ್ಪಾಂಟೆಯವರನ್ನು ಆಕರ‍್ಶಿಸಿತು. 1984ರಲ್ಲಿ ಆತ ಬದುಕುಳಿದಿದ್ದ ಆಕ್ಸೆಲ್ ಎರ‍್ಲೆಂಡ್ಸನ್ ನ 25 ಮರಗಳನ್ನು ಕರೀದಿಸಿದ. ತನ್ನ ಎಲ್ಲಾ ಪ್ರಯತ್ನಗಳಿಂದ ಅವುಗಳಿಗೆ ಪುನರ‍್ಜನ್ಮ ಕರುಣಿಸಿ, ಇನ್ನಾವುದೇ ತೊಂದರೆ ಇಲ್ಲ ಎಂದು ಕಂಡುಬಂದಾಗ, ಅವುಗಳು ಒಂದು ಹಂತಕ್ಕೆ ಬಂದ ನಂತರ, ಅಂದರೆ 1985ರಲ್ಲಿ ಸಾರ‍್ವಜನಿಕರಿಗೆ ತೆರೆದಿಟ್ಟ. ನಂತರದ ದಿನಗಳಲ್ಲಿ ಈ ಸರ‍್ಕಸ್ ಮರಗಳು ಬಾನ್ಪಾಂಟೆ ತೀಮ್ ಪಾರ‍್ಕ್, ಗಿಲ್ರಾಯ್ ಗಾರ‍್ಡನ್ಸ್ ನ ಪ್ರಮುಕ ಆಕರ‍್ಶಣೆಯ ಕೇಂದ್ರವಾದವು.
(ಮಾಹಿತಿ ಮತ್ತು ಚಿತ್ರ ಸೆಲೆ: roadsideamerica.com, destinationtrees.meetatree.com atlasobscura.com gilroygardens.org beqbe.com, treehugger.com)
ಇತ್ತೀಚಿನ ಅನಿಸಿಕೆಗಳು