ನಾವೇಕೆ ಬಯ್ಯುತ್ತೇವೆ? – 4ನೆಯ ಕಂತು

– ಸಿ.ಪಿ.ನಾಗರಾಜ.

 

ಕಂತು – 1 | ಕಂತು – 2 | ಕಂತು – 3

ನಮ್ಮ ನಿತ್ಯ ಜೀವನದ ವ್ಯವಹಾರಗಳಲ್ಲಿ ಇದ್ದಕ್ಕಿದ್ದಂತೆಯೇ ಯಾವುದೇ ಬಗೆಯ ಅಡೆತಡೆಗಳು, ಆತಂಕ ಇಲ್ಲವೇ ಹಾನಿಯುಂಟಾದಾಗ ಮರುಗಳಿಗೆಯಲ್ಲಿಯೇ ನಮಗೆ ಅರಿವಿಲ್ಲದಂತೆಯೇ ನಮ್ಮ ಬಾಯಿಂದ ಒಂದೋ ಎರಡೋ ಬಯ್ಗುಳದ ಪದಗಳು ಹೊರಹೊಮ್ಮುತ್ತವೆ. ಆ ಸಮಯದಲ್ಲಿ ನಮ್ಮ ಮೈ ಮನಕ್ಕೆ ಉಂಟಾದ ಗಾಸಿಯಿಂದ ಕೆರಳಿ ಕೋಪಗೊಂಡು ಇಲ್ಲವೇ ಹತಾಶೆಗೊಂಡು ಈ ರೀತಿ ಬಯ್ದು ನಮ್ಮ ಮನದ ಉದ್ವೇಗವನ್ನು ಹೊರಹಾಕುತ್ತೇವೆ. ಕೆಲವೊಮ್ಮೆ ನಾವು ಆಡಿದ ಬಯ್ಗುಳದ ನುಡಿಗಳನ್ನು ಕೇಳಿ ಬಯ್ಯಿಸಿಕೊಂಡವರು ಪ್ರಶ್ನಿಸಿದಾಗ ಇಲ್ಲವೇ ಬಯ್ಯತೊಡಗಿದಾಗ, ನಾವು ಆ ಸಮಯ ಸನ್ನಿವೇಶವನ್ನು ಗಮನಿಸಿ ಅಂದರೆ ನಾವು ಆಗ ಯಾವ ಜಾಗದಲ್ಲಿದ್ದೇವೆ ಮತ್ತು ಯಾರೊಡನೆ ಮಾತನಾಡುತ್ತಿದ್ದೇವೆ ಎಂಬುದನ್ನು ಗಮನಿಸಿ ಮತ್ತೆ ಬಯ್ಯತೊಡಗುತ್ತೇವೆ ಇಲ್ಲವೇ ಬಯ್ಯುವುದನ್ನು ನಿಲ್ಲಿಸುತ್ತೇವೆ. ಈ ರೀತಿ ಉದ್ದೇಶಪೂರ‍್ವಕವಾಗಿ ಬಯ್ಗುಳವನ್ನು ಬಳಸುವ ಮುನ್ನ ನಾವು ಎಚ್ಚರದಿಂದಿರುತ್ತೇವೆ. ನಮ್ಮ ಇಂತಹ ವರ‍್ತನೆಗಳಿಗೆ ಅಂದರೆ ಇದ್ದಕ್ಕಿದ್ದಂತೆ ಬಯ್ಯುವ ಬಗೆಯಿಂದ ಹಿಡಿದು ಉದ್ದೇಶಪೂರ‍್ವಕವಾಗಿ ಬಯ್ಯುವುದಕ್ಕೆ ಇಲ್ಲವೇ ಬಯ್ಯದಿರುವುದಕ್ಕೆ ನಮ್ಮ ಮೆದುಳಿನ ನರಮಂಡಲದಲ್ಲಿ ನಡೆಯುವ ಬಹುಬಗೆಯ ಕ್ರಿಯೆಗಳು ಕಾರಣವಾಗಿರುವುದನ್ನು ನರವಿಜ್ನಾನಿಗಳು ಗುರುತಿಸಿ ವಿವರಿಸಿದ್ದಾರೆ.

ಹದಿನಾಲ್ಕರ ಪ್ರಾಯಕ್ಕೆ ಬಂದಿರುವ ಪ್ರತಿಯೊಬ್ಬ ಮಾನವನ ತಲೆಬುರುಡೆಯಲ್ಲಿರುವ ಮೆದುಳು ಸರಿಸುಮಾರು 1,400 ಗ್ರಾಮ್ ತೂಕವಿರುವ ಒಂದು ಮಾಂಸದ ಮುದ್ದೆ. ಮಗು ಹುಟ್ಟಿದಾಗ ಸುಮಾರು 400 ಗ್ರಾಮ್ ತೂಕವಿದ್ದ ಮೆದುಳು, ಹದಿನಾಲ್ಕರ ಹರೆಯದ ತನಕ ಬೆಳೆಯುತ್ತಿರುತ್ತದೆ. ಕೋಟಿಗಟ್ಟಲೆ ನರಕೋಶ ಮತ್ತು ನರತಂತುಗಳಿಂದ ಕೂಡಿರುವ ಮೆದುಳನ್ನು ನರವಿಜ್ನಾನಿಗಳು ಗೋಳಾಕಾರದಲ್ಲಿ ಕಲ್ಪಿಸಿಕೊಂಡು ಮೆದುಳನ್ನು ಎಡ ಮತ್ತು ಬಲ ಅರೆಗೋಳಗಳನ್ನಾಗಿ ವಿಂಗಡಿಸಿಕೊಂಡು ಮೆದುಳಿನ ರಚನೆ ಮತ್ತು ಕೆಲಸಗಳನ್ನು ಗಮನಿಸಿ ವಿವರಿಸಿದ್ದಾರೆ.

ಮೆದುಳಿನ ನರಮಂಡಲದಲ್ಲಿ ಮಾತನ್ನು ಆಡುವುದಕ್ಕೆ ಮತ್ತು ಗ್ರಹಿಸಿಕೊಳ್ಳುವುದಕ್ಕೆ ಕಾರಣವಾಗಿರುವ, ಮನದಲ್ಲಿ ಮೂಡುವ ಬಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ನೆರವಾಗುವ ಮತ್ತು ಮಾತಿನ ಸನ್ನಿವೇಶದಲ್ಲಿ ಯಾವ ಬಗೆಯ ಮಾತನ್ನು ಆಡಬೇಕು ಇಲ್ಲವೇ ಆಡಬಾರದು ಎಂಬ ಅರಿವನ್ನು ನೀಡಿ, ಮಾತನ್ನು ನಿಯಂತ್ರಿಸಿ ನಿರ‍್ದೇಶಿಸುವ ನರಕೋಶಗಳನ್ನು ಗುರುತಿಸಿ, ನುಡಿಗೆ ಸಂಬಂದಪಟ್ಟ ಕೆಲಸಗಳನ್ನು ವಿವರಿಸಿದ್ದಾರೆ.

ಮಾತಿನ ಮೂಲಕ ಯಾವುದೇ ಒಂದು ಸಂಗತಿಯನ್ನು ಅದರ ಕಾರ‍್ಯಕಾರಣಗಳ ಹಿನ್ನೆಲೆಯಲ್ಲಿ ಕುರಿತು ಮಾಡುವ ಚಿಂತನೆಗೆ; ಯಾವುದೇ ಒಂದು ಕೆಲಸವನ್ನು ಮಾಡುವ ಮುನ್ನ ಹಾಕುವ ಲೆಕ್ಕಾಚಾರಕ್ಕೆ; ಸಂಗತಿಯೊಂದರ ಪ್ರತಿಪಾದನೆಗೆ ಪೂರಕವಾಗುವ ನರಕೋಶಗಳು ಮೆದುಳಿನ ಎಡ ಅರೆಗೋಳದಲ್ಲಿವೆ. ನುಡಿ ಸಾಮಗ್ರಿಗಳಾದ ಮಾತಿನ ದನಿಗಳು, ಪದಗಳು, ಪದಗಳನ್ನು ಜತೆಗೂಡಿಸಿ ವಾಕ್ಯರೂಪದಲ್ಲಿ ಮಾತನ್ನಾಡುವುದಕ್ಕೆ ಮತ್ತು ಆಡಿದ ವಾಕ್ಯಗಳನ್ನು ಗ್ರಹಿಸಿಕೊಳ್ಳುವುದಕ್ಕೆ ನೆರವಾಗುವ ನರಕೋಶಗಳು ಎಡ ಅರೆಗೋಳದಲ್ಲಿವೆ.

ಎಡ ಅರೆಗೋಳದ ಒಂದು ಎಡೆಯಲ್ಲಿರುವ ಮಾತನ್ನು ಆಡುವುದಕ್ಕೆ ಇಲ್ಲವೇ ಮಾತಿನ ಉತ್ಪಾದನೆಗೆ(Speech Production) ನೆರವಾಗುವ ನರಕೋಶಗಳ ಚಿಕ್ಕ ಮಂಡಲವನ್ನು ಬ್ರೋಕ ಜಾಗ(Broca’s Area) ಎಂದು ಕರೆಯುತ್ತಾರೆ. ಎಡ ಅರೆಗೋಳದ ಮತ್ತೊಂದು ಎಡೆಯಲ್ಲಿರುವ ಮಾತನ್ನು ಗ್ರಹಿಸಿಕೊಳ್ಳುವುದಕ್ಕೆ(Speech Perception) ನೆರವಾಗುವ ನರಕೋಶಗಳ ಚಿಕ್ಕ ಮಂಡಲವನ್ನು ವರ‍್ನಿಕೆಯ ಜಾಗ(Wernicke’s Area) ಎಂದು ಕರೆಯುತ್ತಾರೆ. ಪ್ರಾನ್ಸ್ ನಗರದಲ್ಲಿ ಡಾಕ್ಟರ್ ಆಗಿದ್ದ ಪಿಯರೆ ಪಾಲ್ ಬ್ರೋಕ(1824-1880) ಮತ್ತು ಜರ‍್ಮನಿಯಲ್ಲಿದ್ದ ನರವಿಜ್ನಾನಿ ಕಾರ‍್ಲ್ ವರ‍್ನಿಕೆ(1848-1905) ಎಂಬ ಹೆಸರಿನ ಈ ಇಬ್ಬರು ವ್ಯಕ್ತಿಗಳು ಮೆದುಳಿನಲ್ಲಿ ನಡೆಯುವ ಮಾತಿಗೆ ಸಂಬಂದಿಸಿದ ನರಕೋಶಗಳ ನೆಲೆ ಮತ್ತು ಕೆಲಸಗಳನ್ನು ಮೊತ್ತಮೊದಲು ವಿವರಿಸಿದ್ದರಿಂದ, ಆ ಜಾಗಗಳನ್ನು ಅವರ ಹೆಸರಿನಿಂದ ಕರೆಯಲಾಗುತ್ತಿದೆ.

ಬಲ ಅರೆಗೋಳದಲ್ಲಿ ಬಾವನಾತ್ಮಕವಾದ ಮಾತಿಗೆ ನೆರವಾಗುವ ನರಕೋಶಗಳಿವೆ. “ಬಾವನಾತ್ಮಕ ಮಾತು” ಎಂದರೆ ಆನಂದ, ಅಚ್ಚರಿ, ಸಂಕಟ, ಮೆಚ್ಚುಗೆ ಇಲ್ಲವೇ ಹತಾಶೆಯುಂಟಾದಾಗ ಹೊರಹೊಮ್ಮುವ ಬಿಡಿ ಬಿಡಿಯಾದ ಒಂದೆರಡು ಪದಗಳು ಇಲ್ಲವೇ ಉದ್ಗಾರದ ದನಿಗಳು; ಇದರ ಜತೆಗೆ ಮನದಲ್ಲಿಯೇ ನೂರಾರು ಬಗೆಯ ವಸ್ತುಗಳನ್ನು, ಸನ್ನಿವೇಶಗಳನ್ನು ಮತ್ತು ಸಂಗತಿಗಳನ್ನು ಕಲ್ಪಿಸಿಕೊಂಡು ಕಾಣುವ ಮತ್ತು ರಾಗಮಯವಾಗಿ ಹಾಡುವ ಸಂಗೀತದ ಕಸುವಿನ ನರಕೋಶಗಳಿವೆ. ಎಡ ಅರೆಗೋಳದಲ್ಲಿನ ನರಕೋಶಗಳು ಯಾವುದೇ ಒಂದು ಸಂಗತಿಯನ್ನು ಬಿಡಿಬಿಡಿಯಾಗಿ ಒರೆಹಚ್ಚಿ ನೋಡಿ ಗ್ರಹಿಸಿಕೊಳ್ಳಲು ನೆರವಾಗುವಂತಿದ್ದರೆ, ಬಲ ಅರೆಗೋಳದಲ್ಲಿನ ನರಕೋಶಗಳು ಇಡಿಯಾಗಿ ಒಂದು ಸಂಗತಿಯನ್ನು ಗ್ರಹಿಸಿಕೊಳ್ಳುವುದಕ್ಕೆ ನೆರವಾಗುತ್ತವೆ.

ಮೆದುಳಿನ ಎಡ ಅರೆಗೋಳದ ಮುಂಚೂಣಿಯಲ್ಲಿರುವ ನರಕೋಶಗಳನ್ನು ‘ಪ್ರಂಟಲ್ ಲೋಬ್’ ಎಂದು ಕರೆಯುತ್ತಾರೆ. ಯಾವುದೇ ಒಂದು ನುಡಿ ಸಮುದಾಯದ ನಿತ್ಯ ಜೀವನದ ಆಚರಣೆಯಲ್ಲಿರುವ ಗಂಡು ಹೆಣ್ಣಿನ ಕಾಮದ ನಂಟು ಮತ್ತು ಸಾಮಾಜಿಕ ಸಂಪ್ರದಾಯ, ನಂಬಿಕೆ ಮತ್ತು ಕಟ್ಟುಪಾಡುಗಳಿಗೆ ಹಾನಿ ತಟ್ಟುವಂತೆ ಕೆಟ್ಟ ಮಾತುಗಳನ್ನು ಆಡುವುದನ್ನು ಪ್ರಂಟಲ್ ಲೋಬ್ ನರಕೋಶಗಳು ನಿಯಂತ್ರಿಸುತ್ತವೆ. ಸಾಮಾಜಿಕ ಸನ್ನಿವೇಶಗಳಲ್ಲಿ ಯಾವ ಬಗೆಯ ಮಾತನ್ನು ಆಡಬೇಕು ಇಲ್ಲವೇ ಆಡಬಾರದು ಎಂಬ ತೀರ‍್ಮಾನವನ್ನು ಮಾಡುವುದಕ್ಕೆ ಪ್ರಂಟಲ್ ಲೋಬ್ ನರಕೋಶಗಳು ನೆರವಾಗುತ್ತವೆ.

ವ್ಯಕ್ತಿಯು ಇದ್ದಕ್ಕಿದ್ದಂತೆಯೇ ನಡೆಯುವ ಪ್ರಸಂಗಗಳಲ್ಲಿ ತನ್ನ ಮನದ ಬಾವನೆಗಳನ್ನು ಉದ್ಗಾರದ ದನಿಗಳ ಮೂಲಕ ಇಲ್ಲವೇ ಒಂದೆರಡು ಬಿಡಿ ಪದಗಳ ಮೂಲಕ ಹೊರಹಾಕುವಾಗ ಮತ್ತು ಉದ್ದೇಶಪೂರ‍್ವಕವಾಗಿ ಪದಗಳನ್ನು ಜತೆಗೂಡಿಸಿ ವಾಕ್ಯರೂಪದಲ್ಲಿ ಮಾತನಾಡುವಾಗ ಮೆದುಳಿನ ಎಡ ಮತ್ತು ಬಲ ಅರೆಗೋಳಗಳಲ್ಲಿರುವ ನರಕೋಶಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತವೆ.

ಜಗತ್ತಿನ ಉದ್ದಗಲದಲ್ಲಿ ನೆಲೆಸಿರುವ ಜನಸಮುದಾಯಗಳಲ್ಲಿ ಬಳಕೆಯಲ್ಲಿರುವ ಸಾವಿರಾರು ಬಗೆಯ ನುಡಿಗಳನ್ನು ಕುರಿತು ಚರ‍್ಚೆ ಮಾಡಿ , ನುಡಿ ರಚನೆಯ ಸಂಗತಿಗಳನ್ನು ವಿವರಿಸುತ್ತಿದ್ದ ನುಡಿ ವಿಜ್ನಾನಿಗಳು ನುಡಿಯಲ್ಲಿ ಬಳಕೆಯಾಗುವ ಮಾತಿನ ದನಿಗಳನ್ನು, ಪದರೂಪಗಳನ್ನು, ಪದಗಳಿಗೆ ಸೇರುವ ಪ್ರತ್ಯಯಗಳನ್ನು ಮತ್ತು ವಾಕ್ಯರೂಪಗಳ ವಿನ್ಯಾಸಗಳನ್ನು ಮೊದಮೊದಲು ವಿವರಿಸುತ್ತಿದ್ದರು. ಅನಂತರ ನುಡಿ ವಿಜ್ನಾನಿಗಳು ಮಾನವ ಸಮುದಾಯದ ಸಾಮಾಜಿಕ ಜೀವನದ ಮಾತುಕತೆಗಳಲ್ಲಿ ನಿತ್ಯವೂ ಬಳಕೆಯಾಗುತ್ತಿರುವ ಬಯ್ಗುಳದ ನುಡಿಗಳನ್ನು ಗಮನಿಸಿ, ಬಯ್ಯುವಿಕೆಯನ್ನು ಮಾನವನ ಸಾಮಾಜಿಕ ವರ‍್ತನೆಯ ಒಂದು ಬಗೆಯಾಗಿ ಗುರುತಿಸಿದರು.

ಮಾನವರು ಕೋಪ ಮತ್ತು ಹತಾಶೆಗೆ ಗುರಿಯಾದ ಸನ್ನಿವೇಶಗಳಲ್ಲಿ ಅದಕ್ಕೆ ಕಾರಣವಾದ ವಸ್ತು, ಜೀವಿ ಇಲ್ಲವೇ ವ್ಯಕ್ತಿಗಳ ಮೇಲೆ ಹಲ್ಲೆ ಮಾಡದೆ, ಬಯ್ಯುವಿಕೆಯ ಮೂಲಕ ತಮ್ಮ ಆತಂಕ ಮತ್ತು ಆಕ್ರೋಶವನ್ನು ಹೊರಹಾಕುತ್ತಿದ್ದುದರಿಂದ ಅನೇಕ ಬಗೆಯ ದುರಂತಗಳಿಂದ ಜನರು ಪಾರಾಗುತ್ತಿರುವುದನ್ನು ನುಡಿ ವಿಜ್ನಾನಿಗಳು ಗಮನಿಸಿದರು.

ಈ ಹಿನ್ನೆಲೆಯಿಂದ ಬಯ್ಯುವಿಕೆಯನ್ನು ನೋಡಿದಾಗ, ಬಯ್ಯುವಿಕೆಯು ಮಾನವರ ದೇಹ ಮತ್ತು ಮನಸ್ಸಿನ ಸಮತೋಲನ ಕ್ರಿಯೆಗಳಿಗೆ ನೆರವಾಗುವ ಒಂದು ಸಾಮಾಜಿಕ ವರ‍್ತನೆಯಾಗಿ ಕಂಡುಬಂದಿತು.

(ಚಿತ್ರ ಸೆಲೆ: learnitaliango.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: