ನಾವೇಕೆ ಬಯ್ಯುತ್ತೇವೆ? 5 ನೆಯ ಕಂತು
– ಸಿ.ಪಿ.ನಾಗರಾಜ.
(ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು)
ಕ್ರಿ.ಶ.1901 ರಲ್ಲಿ ಪ್ಯಾಟ್ರಿಕ್ ಎಂಬ ಮನೋವಿಜ್ನಾನಿಯು “ಜನರೇಕೆ ಬಯ್ಯುತ್ತಾರೆ? ಬಯ್ಯುವಾಗ ಏಕೆ ಕೆಲವೇ ಬಗೆಯ ಪದಗಳನ್ನು ಮಾತ್ರ ಬಯ್ಗುಳಗಳಾಗಿ ಬಳಸುತ್ತಾರೆ?“ ಎಂಬ ಪ್ರಶ್ನೆಯನ್ನು ವಿಜ್ನಾನಿಗಳ ಮುಂದೆ ಇಟ್ಟಿದ್ದರು. ನರ ವಿಜ್ನಾನಿಗಳು, ನುಡಿ ವಿಜ್ನಾನಿಗಳು ಮತ್ತು ಮನೋ ವಿಜ್ನಾನಿಗಳು ಜತೆಗೂಡಿ ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲೆಂದು ನಡೆಸಿದ ಹುಡುಕಾಟದಲ್ಲಿ, ಆರೋಗ್ಯ ರಂಗದಲ್ಲಿ ಮಾನಸಿಕ ರೋಗಿಗಳನ್ನು ಉಪಚರಿಸುತ್ತಿದ್ದಾಗ ಕಂಡು ಬಂದ ಸಂಗತಿಗಳನ್ನು ವಿವರಿಸಿರುವ ನರ ವಿಜ್ನಾನದ ಬರಹಗಳಲ್ಲಿ ತುಸುಮಟ್ಟಿನ ಮಾಹಿತಿಯು ದೊರೆಯತೊಡಗಿತು. ಈ ಬರಹಗಳಲ್ಲಿ ಮಾನವನ ಮೆದುಳು ಮತ್ತು ನುಡಿಯ ನಡುವಣ ನಂಟಿನ ವಿವರಗಳಿವೆ.
ಮಾನಸಿಕ ರೋಗಕ್ಕೆ ಗುರಿಯಾಗಿ ನರಳುತ್ತಿದ್ದ ರೋಗಿಗಳನ್ನು ಉಪಚರಿಸುತ್ತಿದ್ದ ಡಾಕ್ಟರುಗಳು ರೋಗಿಗಳ ನಡೆನುಡಿಗಳಲ್ಲಿ ಕಂಡು ಬರುತ್ತಿದ್ದ ವರ್ತನೆಗಳನ್ನು ಬರೆದಿಡುತ್ತಿದ್ದರು. ಇಂತಹ ರೋಗಿಗಳಲ್ಲಿ ಕೆಲವರು ಸಾವನ್ನಪ್ಪಿದ ನಂತರ, ಅವರ ಮೆದುಳಿನ ನರಮಂಡಲದಲ್ಲಿನ ನರಕೋಶಗಳಲ್ಲಿ ಉಂಟಾಗಿರುವ ವ್ಯತ್ಯಯಗಳನ್ನು ಗುರುತಿಸಿ, ಮಾನಸಿಕ ರೋಗಿಗಳ ವರ್ತನೆಗೆ ಕಾರಣವಾದ ಸಂಗತಿಗಳನ್ನು ವಿವರಿಸುತ್ತಿದ್ದರು.
ಮಾನಸಿಕ ರೋಗಿಗಳ ದೇಹ ಮತ್ತು ಮನಸ್ಸಿನ ಚಿತ್ರ ವಿಚಿತ್ರವಾದ ನೂರೆಂಟು ಬಗೆಯ ಸಾಮಾಜಿಕ ವರ್ತನೆಗಳಲ್ಲಿ (Social Behavior) ಮಾತಿನ ವರ್ತನೆಯಲ್ಲಿ(Speech Behavior) ಕಂಡುಬರುವ ಸಂಗತಿಗಳನ್ನು ನುಡಿ ವಿಜ್ನಾನಿಗಳು ಮತ್ತು ಮನೋ ವಿಜ್ನಾನಿಗಳು ಕಳೆದ ಎಪ್ಪತ್ತು ವರುಶಗಳಿಂದ ಪರಿಶೀಲಿಸುತ್ತ, ಮೆದುಳಿನ ನರಮಂಡಲದಲ್ಲಿ ನಡೆಯುವ ಯಾವ ಬಗೆಯ ಕ್ರಿಯೆಗಳು ಬಯ್ಯುವಿಕೆಗೆ ಕಾರಣವಾಗಿವೆ ಎಂಬುದನ್ನು ವಿವರಿಸಿದ್ದಾರೆ.
ಅಪೇಸಿಯಾ, ಆಲ್ಜಮೀರ್, ಸ್ಕಿಜೋಪ್ರೇನಿಯಾ ಮುಂತಾದ ಬಹುಬಗೆಯ ಮಾನಸಿಕ ರೋಗಗಳಿಗೆ ಒಳಗಾದ ರೋಗಿಗಳಲ್ಲಿ ಬಯ್ಯುವಿಕೆಯು ಸಾಮಾನ್ಯವಾಗಿ ಕಂಡು ಬರುವ ಮಾತಿನ ಚಹರೆಯಾಗಿದೆ. ಕೆಲವು ರೋಗಿಗಳು ಇದ್ದಕ್ಕಿದ್ದಂತೆಯೇ ಆಗಾಗ್ಗೆ ಒಂದೆರಡು ಬಯ್ಗುಳದ ಪದಗಳನ್ನು ಆಡುತ್ತಿದ್ದರೆ, ಮತ್ತೆ ಕೆಲವರು ನಿರಂತರವಾಗಿ ಬಯ್ಯುವಿಕೆಯಲ್ಲಿ ತೊಡಗಿ ಬಯ್ಗುಳದ ಪದಗಳನ್ನು, ನುಡಿಗಟ್ಟುಗಳನ್ನು ಮತ್ತು ವಾಕ್ಯಗಳನ್ನು ಬಳಸುತ್ತಿರುತ್ತಾರೆ. ಇದಕ್ಕೆ ಕಾರಣವೇನೆಂದರೆ ಮಾತನ್ನು ಆಡುವುದಕ್ಕೆ, ಮಾತನ್ನು ಗ್ರಹಿಸಿಕೊಳ್ಳುವುದಕ್ಕೆ ಮತ್ತು ಬಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ನೆರವಾಗುವ ಮೆದುಳಿನ ನರಮಂಡಲದಲ್ಲಿರುವ ನರಕೋಶಗಳಿಗೆ ಹಾನಿಯುಂಟಾಗಿರುವುದು.
ಮೆದುಳಿಗೆ ಹರಿಯುವ ರಕ್ತ ಸಂಚಾರದಲ್ಲಿ ಮತ್ತು ಮೆದುಳಿಗೆ ಸರಬರಾಜಾಗುವ ಆಮ್ಲಜನಕದ ಪ್ರಮಾಣದಲ್ಲಿ ಹೆಚ್ಚುಕಡಿಮೆಯಾದಾಗ, ಮೆದುಳಿನ ನರಮಂಡಲಕ್ಕೆ ಸಾಂಕ್ರಾಮಿಕ ರೋಗಗಳು ಅಂಟಿ ನರಕೋಶಗಳು ಇಲ್ಲವಾದಾಗ ಮತ್ತು ಬಹುಬಗೆಯ ಅವಗಡಗಳಿಂದ ತಲೆಗೆ ಪೆಟ್ಟು ಬಿದ್ದು ನರಕೋಶಗಳಿಗೆ ಹಾನಿಯುಂಟಾದಾಗ ಮಾತನ್ನು ಆಡುವುದರಲ್ಲಿ (Speech Production) ಮತ್ತು ಆಡಿದ ಮಾತನ್ನು ಗ್ರಹಿಸಿಕೊಳ್ಳುವುದರಲ್ಲಿ(Speech Comprehension) ಬಹುಬಗೆಯ ಏರುಪೇರುಗಳು ಕಂಡುಬರುತ್ತವೆ.
ಕ್ರಿ.ಶ.1824 ರಿಂದ 1880 ಕಾಲದಲ್ಲಿ ಪ್ರಾನ್ಸ್ ನಗರದಲ್ಲಿದ್ದ ಶಸ್ತ್ರಚಿಕಿತ್ಸಕ(Physician), ಅಂಗರಚನಾ ವಿಜ್ನಾನಿ (Anatomist) ಮತ್ತು ಮಾನವಶಾಸ್ತ್ರಜ್ನನಾಗಿದ್ದ (Anthropologist) ಪಿಯರೆ ಪಾಲ್ ಬ್ರೋಕ ಅವರು ತಮ್ಮ ಬಳಿ ಬರುತ್ತಿದ್ದ ನೂರಾರು ಮಾನಸಿಕ ರೋಗಿಗಳ ಮಾತಿನ ವರ್ತನೆಗಳನ್ನು ಗಮನಿಸಿ, ಆ ಬಗೆಯ ವರ್ತನೆಗಳಿಗೆ ಮೆದುಳಿನ ನರಕೋಶಗಳಲ್ಲಿ ಉಂಟಾಗಿದ್ದ ಹಾನಿಯ ಸ್ವರೂಪವನ್ನು ತಿಳಿದುಕೊಂಡು ವಿವರಿಸುತ್ತಿದ್ದರು. ಇಂತಹ ರೋಗಿಗಳಲ್ಲಿ ಟ್ಯಾನ್(Tan) ಎಂಬ ಹೆಸರಿನ ವ್ಯಕ್ತಿಯ ಮಾತಿನ ಚಹರೆಗಳನ್ನು ಈ ರೀತಿ ಬರೆದಿಟ್ಟಿದ್ದಾರೆ.
ಪದ ಮತ್ತು ಪ್ರತ್ಯಯಗಳಿಂದ ಜತೆಗೂಡಿ ತಿರುಳನ್ನು ಒಳಗೊಂಡು ಸಂಗತಿಯನ್ನು ತಿಳಿಸುವ ಒಂದೇ ಒಂದು ವಾಕ್ಯವನ್ನಾದರೂ ಈ ರೋಗಿಯಿಂದ ನುಡಿಯಲಾಗುತ್ತಿರಲಿಲ್ಲ. ಆದರೆ ಈತ ತನ್ನ ಮನದ ಒಳಮಿಡಿತಗಳನ್ನು ಹೊರಹಾಕಲು ಆಗಾಗ್ಗೆ ‘Sacre-nom-de-Dieu ‘ ಎಂಬ ಒಂದು ಮಾತನ್ನು ಮಾತ್ರ ಆಡಬಲ್ಲವನಾಗಿದ್ದ. ಪ್ರೆಂಚ್ ನುಡಿಯಲ್ಲಿ ಇದು ಒಂದು ವಾಕ್ಯವಲ್ಲ; ಒಂದು ನುಡಿಗಟ್ಟು. ಈ ನುಡಿಗಟ್ಟು ವ್ಯಕ್ತಿಯು ಹತಾಶೆಗೊಂಡಾಗ ಇಲ್ಲವೇ ಹೆಚ್ಚಿನ ಆತಂಕಕ್ಕೆ ಒಳಗಾದಾಗ ತನ್ನ ಒಳಮಿಡಿತವನ್ನು ಹೊರಹಾಕುವ ಉದ್ಗಾರ ಸೂಚಕವಾಗಿದೆ. ಪ್ರೆಂಚ್ ನುಡಿಯ ಈ ಉದ್ಗಾರವು ಕನ್ನಡ ನುಡಿಯಲ್ಲಿ ನಾವು ಹತಾಶೆ, ಆತಂಕ, ಒತ್ತಡ ಇಲ್ಲವೇ ಹೆದರಿಕೆಯ ಸನ್ನಿವೇಶಗಳಲ್ಲಿ ಆಡುವ “ಅಯ್ಯೋ ದೇವರೇ“ ಎಂಬ ಉದ್ಗಾರದಂತಿದೆ. ಈ ರೋಗಿಯ ಮೆದುಳಿನ ನರಮಂಡಲದಲ್ಲಿನ ನರಕೋಶಗಳನ್ನು ಪಾಲ್ ಬ್ರೋಕ ಅವರು ಪರಿಶೀಲಿಸಿದಾಗ ಕಂಡು ಬಂದ ಸಂಗತಿಗಳು ಈ ಕೆಳಕಂಡಂತೆ ಇದ್ದವು.
- ರೋಗಿಯ ಮೆದುಳಿನ ಎಡ ಅರೆಗೋಳದಲ್ಲಿ ಮಾತಿನ ಉತ್ಪಾದನೆಗೆ ನೆರವಾಗುವ ಬ್ರೋಕ ಜಾಗದಲ್ಲಿನ ನರಕೋಶಗಳು ಹಾನಿಗೊಂಡಿದ್ದವು. ಇದರಿಂದಾಗಿ ರೋಗಿಯು ಯಾವುದೇ ಒಂದು ವಾಕ್ಯವನ್ನು ಪರಿಪೂರ್ಣವಾಗಿ ಆಡಬಲ್ಲ ಕಸುವನ್ನು ಕಳೆದುಕೊಂಡಿದ್ದನು.
- ರೋಗಿಯು ಆಗತಾನೇ ಉಚ್ಚರಿಸಿದ್ದ ಉದ್ಗಾರದ ನುಡಿಯನ್ನು ಮತ್ತೊಮ್ಮೆ ಆಡುವಂತೆ ರೋಗಿಗೆ ಸೂಚಿಸಿದರೆ, ಅದನ್ನು ಆತ ಆಡಲಾಗುತ್ತಿರಲಿಲ್ಲ. ಅಂದರೆ ಆತನಿಗೆ ಅರಿವಿಲ್ಲದಂತೆಯೇ ತನಗೆ ತಾನಾಗಿಯೇ ಕೆಲವೊಮ್ಮೆ ಅವನ ಬಾಯಿಂದ ನುಡಿಯು ಹೊರಹೊಮ್ಮುತ್ತಿತ್ತು.
- ಈ ರೋಗಿಯ ಮೆದುಳಿನ ನರಮಂಡಲದಲ್ಲಿ ಬಾವನೆಗಳನ್ನು ಅಂದರೆ ಕೋಪ, ಹತಾಶೆ, ಸಂಕಟವನ್ನು ವ್ಯಕ್ತಪಡಿಸಲು ನೆರವಾಗುವ ಬಲ ಅರೆಗೋಳದಲ್ಲಿರುವ ನರಕೋಶಗಳಿಗೆ ಯಾವುದೇ ಬಗೆಯ ಹಾನಿಯುಂಟಾಗಿರಲಿಲ್ಲ. ಬಲ ಅರೆಗೋಳದ ನರಕೋಶಗಳು ಎಂದಿನಂತೆ ತಮ್ಮ ಕೆಲಸವನ್ನು ಮಾಡುತ್ತಿದ್ದವು. ಆದ್ದರಿಂದಲೇ ರೋಗಿಯು ತನ್ನ ಒಳಮಿಡಿತಗಳನ್ನು ‘Sacre-nom-de-Dieu‘ ಎಂಬ ನುಡಿಗಟ್ಟಿನ ಮೂಲಕ ಹೊರಹಾಕುತ್ತಿದ್ದನು.
ಬ್ರೋಕ ಅವರ ಈ ವರದಿಯನ್ನು ಗಮನಿಸಿದ ವಿಜ್ನಾನಿಗಳು ಬಯ್ಯುವುದಕ್ಕೆ ಕಾರಣವಾಗಿರುವ ಮೆದುಳಿನ ನರಮಂಡಲದ ಸಂಗತಿಗಳನ್ನು ಇನ್ನೂ ಹಲವಾರು ನೆಲೆಗಳಿಂದ ತಿಳಿಯಲು ತಮ್ಮ ಪ್ರಯತ್ನಗಳನ್ನು ಮುಂದುವರಿಸಿದರು.
ಮಾತನ್ನು ಆಡುವುದರಲ್ಲಿ ಮತ್ತು ಗ್ರಹಿಸಿಕೊಳ್ಳುವುದರಲ್ಲಿ ಉಂಟಾಗುವ ತೊಂದರೆಗಳನ್ನು “ ಅಪೇಸಿಯ “ ಎಂಬ ಹೆಸರಿನಲ್ಲಿ ಕರೆಯುತ್ತಾರೆ. ಅಪೇಸಿಯ ರೋಗಕ್ಕೆ ಬಲಿಯಾದ ವ್ಯಕ್ತಿಗಳ ಮಾತಿನ ವರ್ತನೆಯಲ್ಲಿ ಹಲವು ಬಗೆಯ ವ್ಯತ್ಯಯಗಳು ಕಂಡುಬರುತ್ತವೆ. ಅಪೇಸಿಯ ರೋಗದಲ್ಲಿ ಬ್ರೋಕ ಅಪೇಸಿಯ ಮತ್ತು ವರ್ನಿಕೆಯ ಅಪೇಸಿಯ ಎಂಬ ಎರಡು ಬಗೆಗಳಿವೆ.
ಬ್ರೋಕ ಅಪೇಸಿಯ:
ಮಿದುಳಿನ ಎಡ ಅರೆಗೋಳದ ಬ್ರೋಕ ಜಾಗದಲ್ಲಿ ಮಾತಿನ ಉತ್ಪಾದನೆಗೆ ಅಂದರೆ ಸಾಮಾಜಿಕ ವ್ಯವಹಾರಗಳಲ್ಲಿ ಅಗತ್ಯವಿರುವಾಗ ಸರಿಯಾಗಿ ಮಾತನಾಡುವುದಕ್ಕೆ ನೆರವಾಗುವ ನರಕೋಶಗಳ ಜಾಲವಿದೆ. ಮಾತಿನ ದನಿಗಳನ್ನು, ಪದಗಳನ್ನು ಮತ್ತು ಪ್ರತ್ಯಯಗಳನ್ನು ಜತೆಗೂಡಿಸಿ ವಾಕ್ಯಗಳನ್ನು ರಚಿಸಿಕೊಂಡು ಮಾತನಾಡುವುದಕ್ಕೆ ಬ್ರೋಕ ಜಾಗದ ನರಕೋಶಗಳು ನೆರವಾಗುತ್ತವೆ. ಮಾತನ್ನು ಉತ್ಪಾದಿಸುವ ಈ ನರಕೋಶಗಳಿಗೆ ಹಾನಿ ತಟ್ಟಿದಾಗ, ಯಾವುದೇ ವ್ಯಕ್ತಿಯು ವಾಕ್ಯವನ್ನು ಸರಿಯಾಗಿ ರಚಿಸಿ ಮಾತನಾಡುವುದಕ್ಕೆ ಆಗುವುದಿಲ್ಲ. ಮಾತಿನಲ್ಲಿ ಉಂಟಾಗುವ ಈ ಬಗೆಯ ತೊಂದರೆಯನ್ನು ಬ್ರೋಕ ಅಪೇಸಿಯ ಎನ್ನುತ್ತಾರೆ.
ಬ್ರೋಕ ಅಪೇಸಿಯ ರೋಗಕ್ಕೆ ಒಳಗಾದವರು ವಾಕ್ಯ ರೂಪದ ಮಾತುಗಳನ್ನಾಡಲಾಗದೆ, ತಮ್ಮ ಮನದ ಒಳಮಿಡಿತಗಳನ್ನು ಮತ್ತು ಇಂಗಿತವನ್ನು ಹೊರಹಾಕಲು ಬಿಡಿ ಬಿಡಿ ರೂಪದ ಒಂದೆರಡು ಉದ್ಗಾರದ ಪದಗಳನ್ನು ಇಲ್ಲವೇ ಬಯ್ಗುಳದ ಪದಗಳನ್ನಾಡುತ್ತಾರೆ.
ವರ್ನಿಕೆಯ ಅಪೇಸಿಯ:
ವ್ಯಕ್ತಿಯು ತಾನು ಆಡಿದ ಮತ್ತು ಇತರರು ಆಡಿದ ಮಾತುಗಳನ್ನು ಕೇಳಿ ತಿಳಿದುಕೊಳ್ಳಬಲ್ಲ ನರಕೋಶಗಳ ಜಾಲವು ಮಿದುಳಿನ ಎಡ ಅರೆಗೋಳದ ಮತ್ತೊಂದು ನೆಲೆಯಲ್ಲಿದೆ . ಇದನ್ನು ವರ್ನಿಕೆಯ ಜಾಗವೆನ್ನುತ್ತಾರೆ. ವರ್ನಿಕೆಯ ಜಾಗದಲ್ಲಿನ ನರಕೋಶಗಳಿಗೆ ಹಾನಿಯುಂಟಾದ ರೋಗಿಗಳಿಗೆ ತಾವು ಮತ್ತು ಇತರರು ಆಡುವ ಮಾತುಗಳ ತಿರುಳನ್ನು ಸರಿಯಾಗಿ ಗ್ರಹಿಸಿಕೊಳ್ಳುವ ಕಸುವು ಇರುವುದಿಲ್ಲ. ಆದರೆ ಇವರ ಮಿದುಳಿನಲ್ಲಿರುವ ಮಾತಿನ ಉತ್ಪಾದನೆಯ ಬ್ರೋಕ ಜಾಗ ಸರಿಯಿರುತ್ತದೆ. ಆದ್ದರಿಂದ ವಾಕ್ಯ ರೂಪದಲ್ಲಿ ಮಾತನಾಡಬಲ್ಲರು. ಆದರೆ ತಾವೇನು ಮಾತನಾಡುತ್ತಿದ್ದೇವೆ ಎಂಬುದರ ಅರಿವು ಅವರಿಗೆ ಇರುವುದಿಲ್ಲ. ಅವರು ಆಡುತ್ತಿರುವ ಮಾತುಗಳಲ್ಲಿ ಪರಸ್ಪರ ಹೊಂದಾಣಿಕೆಯಾಗಲಿ ಇಲ್ಲವೇ ಯಾವುದೇ ಬಗೆಯ ತಿರುಳು ಇರುವುದಿಲ್ಲ. ಈ ಬಗೆಯ ಮಾತಿನ ತೊಂದರೆಯನ್ನು ವರ್ನಿಕೆಯ ಅಪೇಸಿಯ ಎನ್ನುತ್ತಾರೆ. ವರ್ನಿಕೆಯ ಅಪೇಸಿಯ ರೋಗಿಗಳು ಒಂದೇ ಸಮನೆ ಮಾತನಾಡುತ್ತಿರುವಂತೆಯೇ ಬಯ್ಗುಳದ ನುಡಿಗಳನ್ನು ನಿರಂತರವಾಗಿ ಆಡುತ್ತಿರುತ್ತಾರೆ.
ಸಾಮಾಜಿಕ ವ್ಯವಹಾರದಲ್ಲಿ ನುಡಿಯನ್ನು ಬಳಸುವಾಗ ಮೆದುಳಿನ ಮುಂಚೂಣಿಯಲ್ಲಿರುವ ನರಕೋಶಗಳ ಪಾತ್ರ ಬಹು ದೊಡ್ಡದಾಗಿದೆ. ಇದನ್ನು ‘ಪ್ರಂಟಲ್ ಲೋಬ್‘ ಎಂದು ಕರೆಯುತ್ತಾರೆ. ಮಾತಿನ ಸನ್ನಿವೇಶಗಳಲ್ಲಿ ಯಾವ ಬಗೆಯ ಮಾತನ್ನು ಆಡಬೇಕು ಇಲ್ಲವೇ ಆಡಬಾರದು ಎಂಬ ವಿವೇಚನೆಯ ಮಾಡುವ ಕಸುವನ್ನು ಪ್ರಂಟಲ್ ಲೋಬ್ ನರಕೋಶಗಳು ಹೊಂದಿವೆ. ಮಾತನ್ನು ಆಡುತ್ತಿರುವ ಸನ್ನಿವೇಶದಲ್ಲಿ “ಯಾವ ಜಾಗದಲ್ಲಿ, ಯಾವ ಸಮಯದಲ್ಲಿ, ಯಾರೊಡನೆ , ಹೇಗೆ ಮಾತನಾಡಬೇಕು“ ಎಂಬ ಲೆಕ್ಕಾಚಾರವನ್ನು ಹಾಕಿಕೊಂಡು ಎಚ್ಚರದ ತೀರ್ಮಾನವನ್ನು ತೆಗೆದುಕೊಳ್ಳಲು ಪ್ರಂಟಲ್ ಲೋಬ್ ನರಕೋಶಗಳು ನೆರವಾಗುತ್ತವೆ. ಸಾಮಾಜಿಕ ಸನ್ನಿವೇಶಗಳಲ್ಲಿ ಬಾವನಾತ್ಮಕವಾಗಿ ಇಲ್ಲವೇ ಚಿಂತನಶೀಲವಾಗಿ ಹೇಗೆ ಮಾತನಾಡಬೇಕು ಮತ್ತು ಸಾಮಾಜಿಕವಾಗಿ ಒಪ್ಪಿತವಾದ ಮಾತಿನ ವರ್ತನೆಗಳು ಹೇಗಿರಬೇಕು ಎಂಬ ಕುಶಲತೆಯನ್ನು ರೂಪಿಸುವ ಕಸುವನ್ನು ಪ್ರಂಟಲ್ ಲೋಬ್ ನರಕೋಶಗಳು ಹೊಂದಿವೆ.
ನರವಿಜ್ನಾನದ ಸಂಗತಿಗಳನ್ನು ವಿವರಿಸಿರುವ ಬರಹಗಳಲ್ಲಿ ವಿಜ್ನಾನಿಗಳು ಪ್ರಂಟಲ್ ಲೋಬ್ ಹಾನಿಗೊಂಡ ವ್ಯಕ್ತಿಯೊಬ್ಬನ ವರ್ತನೆಗಳನ್ನು ಗಮನಿಸಿದ್ದಾರೆ. ಅಂತಹ ಬರಹಗಳಲ್ಲಿ ಈ ಕೆಳಕಂಡ ಪ್ರಸಂಗವು ಒಂದಾಗಿದೆ.
ಕ್ರಿ.ಶ.1948 ರಲ್ಲಿ ಅಮೆರಿಕೆಯ ವರ್ಮೌಂಟ್ ನಗರದಲ್ಲಿ ನಡೆದ ವಾಹನದ ಅವಗಡವೊಂದರಲ್ಲಿ ಪೀನಿಯಸ್ ಗಾಜ್ ಎಂಬ ವ್ಯಕ್ತಿಯ ತಲೆಗೆ ಬಲವಾದ ಪೆಟ್ಟು ಬಿದ್ದು, ಅವನ ಮೆದುಳಿನ ಮುಂಚೂಣಿಯ ಪ್ರಂಟಲ್ ಲೋಬ್ ನರಕೋಶಗಳಿಗೆ ಹಾನಿಯುಂಟಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಚೇತರಿಸಿಕೊಂಡ ಹೊರಬಂದ ನಂತರ ಪೀನಿಯಸ್ ಗಾಜನ ಮಾತಿನ ವರ್ತನೆಯಲ್ಲಿ ಬಹು ದೊಡ್ಡ ಬದಲಾವಣೆಗಳು ಕಂಡುಬಂದವು. ಆತ ಸಾಮಾಜಿಕವಾಗಿ ಒಪ್ಪಿತವಲ್ಲದ ರೀತಿಯಲ್ಲಿ ಮಾತನಾಡುತ್ತಿದ್ದನು. ಬಯ್ಗುಳದ ಪದಗಳನ್ನು ಆಗಾಗ್ಗೆ ಬಳಸುತ್ತಿದ್ದನು. ಸಾಮಾಜಿಕ ಸನ್ನಿವೇಶದ ಮಾತುಕತೆಗಳಲ್ಲಿ ಸರಿಯಾದ ತೀರ್ಮಾನಗಳನ್ನು ಕಯ್ಗೊಳ್ಳಲಾಗದೆ ಇಕ್ಕಟ್ಟುಗಳಿಗೆ ಸಿಲುಕುತ್ತಿದ್ದನು. ಅಂದರೆ ಮಾತಿನ ಕುಶಲತೆಯು ಅವನಲ್ಲಿ ಇಲ್ಲವಾಗಿತ್ತು.
ಜನರು ಬಯ್ಯುವಿಕೆಯಲ್ಲಿ ತೊಡಗುವುದಕ್ಕೆ ಕಾರಣವಾಗುವ ಮೆದುಳಿನ ನರಮಂಡಲದ ಕ್ರಿಯೆಗಳನ್ನು ತಿಳಿಯುವುದಕ್ಕಾಗಿ ವಿಜ್ನಾನಿಗಳು ಮಾನಸಿಕ ರೋಗಿಗಳ ಬಯ್ಯುವಿಕೆಯಲ್ಲಿ ಕಂಡು ಬರುವ ಸಂಗತಿಗಳನ್ನು ಒರೆಹಚ್ಚಿ ನೋಡಿ ನಿತ್ಯ ಜೀವನದ ವ್ಯವಹಾರಗಳಲ್ಲಿ ಜನರು ಇದ್ದಕ್ಕಿದ್ದಂತೆಯೇ ಬಯ್ಯಲು ಇಲ್ಲವೇ ಉದ್ದೇಶಪೂರ್ವಕವಾಗಿ ಬಯ್ಯಲು ಕಾರಣವಾದ ಮೆದುಳಿನ ನರಮಂಡಲದ ಸಂಗತಿಗಳನ್ನು ಈ ರೀತಿ ವಿವರಿಸಿದ್ದಾರೆ.
ವ್ಯಕ್ತಿಯ ಮೆದುಳಿನಲ್ಲಿರುವ ಕೋಟಿಗಟ್ಟಲೆ ನರಕೋಶಗಳೆಲ್ಲಕ್ಕೂ ಒಂದೊಂದು ಬಗೆಯ ಕೆಲಸವನ್ನು ಮಾಡುವ ಕಸುವು ಇದೆ. ಒಂದು ನರಕೋಶಕ್ಕೆ ಇತರ ವ್ಯಕ್ತಿಗಳ ಮೊಕವನ್ನು ಸರಿಯಾಗಿ ಗುರುತಿಸುವ ಕಸುವು ಇದ್ದರೆ, ಮತ್ತೊಂದು ನರಕೋಶಕ್ಕೆ ಸಂಗೀತದ ರಾಗವನ್ನು ಕೇಳಿ ಗ್ರಹಿಸುವ ಕಸುವು ಇರುತ್ತದೆ. ಯಾವುದೇ ಕಾರಣದಿಂದ ಈ ನರಕೋಶಗಳಿಗೆ ಹಾನಿಯುಂಟಾದರೆ ಆಗ ವ್ಯಕ್ತಿಗಳ ಮುಕವನ್ನು ನೋಡಿದರೂ ಅದು ಯಾರೆಂದು ಸರಿಯಾಗಿ ಗುರುತಿಸಲು ಆಗುವುದಿಲ್ಲ; ಸಂಗೀತವನ್ನು ಕೇಳಿದರೂ ಅದನ್ನು ಗ್ರಹಿಸಿಕೊಳ್ಳಲು ಆಗುವುದಿಲ್ಲ. ಮೆದುಳಿನ ನರಮಂಡಲದಲ್ಲಿ ಬಯ್ಯುವುದಕ್ಕೆ ನೆರವಾಗುವ ನರಕೋಶಗಳ ಜಾಲವು ಬಲ ಮತ್ತು ಎಡ ಅರೆಗೋಳಗಳಲ್ಲಿ ನೆಲೆಸಿರುವುದನ್ನು ವಿಜ್ನಾನಿಗಳು ಗುರುತಿಸಿದ್ದಾರೆ.
ವ್ಯಕ್ತಿಯು ತನ್ನ ದಿನ ನಿತ್ಯದ ಸಾಮಾಜಿಕ ಸನ್ನಿವೇಶಗಳಲ್ಲಿ ಇತರರೊಡನೆ ಮಾತಿನ ಮೂಲಕ ಸರಿಯಾಗಿ ವ್ಯವಹರಿಸಬೇಕಾದರೆ, ವ್ಯಕ್ತಿಯ ಮೆದುಳಿನ ನರಮಂಡಲದ ಎಡ ಅರೆಗೋಳದಲ್ಲಿರುವ ಮಾತಿನ ಉತ್ಪಾದನೆಯ ಬ್ರೋಕ ಜಾಗ ಮತ್ತು ಮಾತಿನ ಗ್ರಹಿಕೆಯ ವರ್ನಿಕೆಯ ಜಾಗ, ಬಲ ಅರೆಗೋಳದಲ್ಲಿರುವ ಬಾವನೆಗಳನ್ನು ಉದ್ದೀಪಿಸುವ ನರಕೋಶಗಳ ಜಾಗ ಮತ್ತು ಮೆದುಳಿನ ಮುಂಚೂಣಿಯ ಎಡೆಯಲ್ಲಿ ಸಾಮಾಜಿಕ ಒಪ್ಪಿತವಾದ ನಡೆನುಡಿಗಳನ್ನು ನಿಯಂತ್ರಿಸಿ ನಿರ್ದೇಶಿಸುವ ಪ್ರಂಟಲ್ ಲೋಬ್ ನರಕೋಶಗಳು ಸರಿಯಾಗಿರಬೇಕು. ಇವುಗಳಲ್ಲಿ ಯಾವುದೇ ಒಂದು ನೆಲೆಯ ನರಕೋಶಗಳಿಗೆ ಹಾನಿಯುಂಟಾದರೂ ಮಾತಿನ ಬಳಕೆಯಲ್ಲಿ ತೊಂದರೆಗಳು ಕಂಡುಬರುತ್ತವೆ.
ಇದ್ದಕ್ಕಿದ್ದಂತೆಯೇ ನಡೆದ ಪ್ರಸಂಗಗಳಿಂದ ಬಹುಬಗೆಯ ಬಾವೋದ್ರೇಕಗಳಿಗೆ ಒಳಗಾದಾಗ ಮಾನವನ ಮೆದುಳಿನ ನರಮಂಡಲದಲ್ಲಿರುವ ತನಗೆ ತಾನೇ ಕ್ರಿಯಾಶೀಲವಾಗುವ ನರಕೋಶಗಳ (Autonomic Nervous System) ನೆರವಿನಿಂದ ಉದ್ಗಾರ ಸೂಚಕ ಪದಗಳನ್ನು ಆಡುವುದಕ್ಕೆ ಬಲ ಅರೆಗೋಳದಲ್ಲಿರುವ ನರಕೋಶಗಳು ಕಾರಣವಾಗುತ್ತವೆ. ಇದೇ ರೀತಿಯಲ್ಲಿ ಇದ್ದಕ್ಕಿದ್ದಂತೆಯೇ ನಾವು ಆಡುವ ಅಂದರೆ ನಮ್ಮ ಹತೋಟಿಯಿಲ್ಲದೆ ನಮ್ಮ ಬಾಯಿಂದ ಹೊರಬೀಳುವ ಬಯ್ಗುಳದ ನುಡಿಗಳಿಗೆ ಬಲ ಅರೆಗೋಳದಲ್ಲಿರುವ ನರಕೋಶಗಳು ಕಾರಣವಾಗಿವೆ.
ಎಡ ಅರೆಗೋಳದಲ್ಲಿರುವ ಬ್ರೋಕ ಜಾಗ ಮತ್ತು ವರ್ನಿಕೆಯ ಜಾಗ ಹಾಗೂ ಮೆದುಳಿನ ಮುಂಚೂಣಿಯಲ್ಲಿರುವ ಪ್ರಂಟಲ್ ಲೋಬ್ ನರಕೋಶಗಳು ಮಾತಿನ ಸನ್ನಿವೇಶಗಳಲ್ಲಿ ಲೆಕ್ಕಾಚಾರವನ್ನು ಹಾಕಿಕೊಂಡು ಉದ್ದೇಶಪೂರ್ವಕವಾಗಿ ಮಾತನಾಡುವುದಕ್ಕೆ ನೆರವಾಗುವ ರೀತಿಯಲ್ಲಿಯೇ ನಾವು ಇತರರನ್ನು ಉದ್ದೇಶಪೂರ್ವಕವಾಗಿ ಬಯ್ಯುವುದಕ್ಕೆ ಈ ಮೂರು ನೆಲೆಗಳಲ್ಲಿರುವ ನರಕೋಶಗಳು(Central Nervous System) ಕಾರಣವಾಗಿವೆ.
ಕೋಪ, ಹತಾಶೆ, ಹೆದರಿಕೆ, ಆನಂದ ಮತ್ತು ಅಚ್ಚರಿ ಮುಂತಾದ ಬಾವನೆಗಳನ್ನು ವ್ಯಕ್ತಪಡಿಸಲು ನೆರವಾಗುವ ನರಕೋಶಗಳಿಂದ ಕೂಡಿದ ಬಲ ಅರೆಗೋಳದ ನರಮಂಡಲಕ್ಕೆ ಹಾನಿಯುಂಟಾದರೆ, ಅಂತಹ ರೋಗಿಗಳು ಯಾವುದೇ ಬಗೆಯ ಬಯ್ಯುವಿಕೆಯಲ್ಲಿ ತೊಡಗುವುದಿಲ್ಲ.
ವಿಜ್ನಾನಿಗಳು ಮಾನವ ಜೀವಿಯ ಮೆದುಳಿನ ನರಮಂಡಲದಲ್ಲಿ ನಡೆಯುವ ಎಲ್ಲಾ ಬಗೆಯ ಪ್ರಕ್ರಿಯೆಗಳನ್ನು ಗಮನಿಸಿ “ವ್ಯಕ್ತಿಯು ತನ್ನ ಮಯ್ ಮನದ ಹತೋಟಿಗೆ ಒಳಗಾಗದೆ ಇದ್ದಕ್ಕಿದ್ದಂತೆಯೇ ಬಯ್ಯುವುದಕ್ಕೆ ಸಂಬಂದಿಸಿದ ನರಕೋಶಗಳ ಜಾಲವು ಬಲ ಅರಗೋಳದಲ್ಲಿದೆಯೆಂದು ಮತ್ತು ಮಯ್ ಮನದ ಎಚ್ಚರದಿಂದಲೇ ಉದ್ದೇಶಪೂರ್ವಕವಾಗಿ ಬಯ್ಯುವುದಕ್ಕೆ ಸಂಬಂದಿಸಿದ ನರಕೋಶಗಳ ಜಾಲವು ಎಡ ಅರೆಗೋಳದಲ್ಲಿದೆ“ ಎಂದು ವಿವರಿಸಿದ್ದಾರೆ.
(ಚಿತ್ರ ಸೆಲೆ: learnitaliango.com)
ಇತ್ತೀಚಿನ ಅನಿಸಿಕೆಗಳು