ಗಾಂದೀಜಿಯವರ ಸ್ವಚ್ಚ ಬಾರತದ ಕನಸು ನನಸು ಮಾಡೋಣ

– ಶಿವಮೂರ‍್ತಿ. ಹೆಚ್. ದಾವಣಗೆರೆ.

gandhi, ಗಾಂದಿ

“ಇಂದಿನ ಮಕ್ಕಳೇ ನಾಳಿನ ಪ್ರಜೆಗಳು” ಎಂಬ ನಾಣ್ಣುಡಿಯಂತೆ ಸದ್ರುಡ ಸಮಾಜದ ನಿರ‍್ಮಾಣ, ಸಾಮಾಜಿಕ ಸ್ವಾಸ್ತ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಚತೆಯ ಅರಿವನ್ನೂ ಸಹ ಮಕ್ಕಳಲ್ಲಿ ಮೂಡಿಸುವ ಕೆಲಸವಾಗಬೇಕಾಗಿದೆ. ಯಾಕೆಂದರೆ ಹಿರಿಯರಿಗಿಂತಲೂ ಕಿರಿಯರೇ ಮಾತು ಕೇಳುವುದರ ಜೊತೆಗೆ, ಕೇಳಿದ್ದನ್ನು ಜೀವನದಲ್ಲಿ ಅಳವಡಿಸಿಕೊಂಡು ಸರಿಯಾದ ದಾರಿಯಲ್ಲಿ ನಡೆಯುವರು. ಅಲ್ಲದೆ ಮಕ್ಕಳಲ್ಲಿ ಒಮ್ಮೆ ಸ್ವಚ್ಚತೆಯ ಬಗೆಗೆ ಜಾಗ್ರುತಿ ಮೂಡಿತೆಂದರೆ ಸಾಕು.‌ ಅವರು ಇಡೀ ಸಮುದಾಯವನ್ನು ಬದಲಾಯಿಸುವ ಶಕ್ತಿಯು ಅವರಲ್ಲಿರುತ್ತದೆ.

ಮಹಾತ್ಮ ಗಾಂದೀಜಿಯವರು ಕಂಡಂತಹ ಸ್ವಚ್ಚ ಬಾರತದ ಕನಸು ಮರುಹುಟ್ಟು ಪಡೆದಿದ್ದು 2014ರ ಅಕ್ಟೋಬರ್ 2 ರಂದು, ಅಂದರೆ ಗಾಂದೀಜಿಯವರ 145ನೇ ಜನ್ಮ ದಿನಾಚರಣೆಯಂದು. ಗಾಂದೀಜಿಯವರ ಕಂಡಂತಹ ಕನಸು ನನಸಾಗಬೇಕಾದರೆ ಪ್ರತಿಯೊಬ್ಬರಲ್ಲಿಯೂ ಸ್ವಚ್ಚತೆಯ ಬಗೆಗೆ ಜಾಗ್ರುತಿ ಮೂಡಬೇಕಾಗಿದೆ. ಈ ನಿಟ್ಟಿನಲ್ಲಿ ಸ್ವಚ್ಚತೆಯ ಅರಿವು ಮೂಡಿಸುವ ಕಾರ‍್ಯ ಮೊದಲು ಮನೆ ಹಾಗೂ ಶಾಲೆಗಳಿಂದಲೇ ಆರಂಬವಾಗಬೇಕಾಗಿದೆ.

ಒಂದು ಮಗುವು ತನ್ನ ಹೆಚ್ಚಿನ ಸಮಯವನ್ನು ಮನೆ ಹಾಗೂ ಶಾಲೆಯಲ್ಲಿಯೇ ಕಳೆಯುತ್ತದೆ. ಮಕ್ಕಳಿಗೆ ಮನೆಯೇ ಮೊದಲ ಪಾಟಶಾಲೆ, ಪೋಶಕರೇ ಮೊದಲ ಗುರುಗಳು. ಹಾಗೂ ಎರಡನೇ ಮನೆಯು ಶಾಲೆಯು, ಶಿಕ್ಶಕರೇ ಎರಡನೇ ಪೋಶಕರು. ಬಾಲ್ಯದಿಂದಲೇ ಮಕ್ಕಳಿಗೆ ದೈಹಿಕ ಸ್ವಚ್ಚತೆಯ ಪಾಟದೊಂದಿಗೆ, ದಿನ ನಿತ್ಯವೂ ಆಟಪಾಟದ ಜೊತೆಯಲ್ಲಿಯೇ ಅವರಿಗೆ ತಮ್ಮ ಸುತ್ತಮುತ್ತಲಿನ ಪರಿಸರ, ನೆರೆಹೊರೆಯ, ರಸ್ತೆಬೀದಿಗಳ, ಶಾಲೆಯ ಆವರಣಗಳ ಕಡೆಯಲ್ಲಿ ಬಿದ್ದಿರುವ ಕಸವನ್ನು ಸಂಗ್ರಹಿಸಿ ಒಂದು ತೊಟ್ಟಿಯಲ್ಲಿ ಹಾಕುವಂತೆ, ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯ ಮಾಡದಂತೆ ಪ್ರಜ್ನೆಯನ್ನು ಮೂಡಿಸಬೇಕು. ಜೀವಜಲವನ್ನು ರಕ್ಶಿಸುವ ಮತ್ತು ಮಿತವಾಗಿ ಬಳಸುವಂತೆ ಪ್ರೇರೇಪಿಸಬೇಕು. ಪ್ರತಿನಿತ್ಯ ಎದ್ದೊಡನೆ ಮಕ್ಕಳು ನಿತ್ಯಕರ‍್ಮಗಳನ್ನು ಚಾಚು ತಪ್ಪದಂತೆ ಮಾಡುವುದರ ಜೊತೆಗೆ ತಮ್ಮ ಸುತ್ತಲಿನ ಮಕ್ಕಳಿಗೆ ಈ ಕಾರ‍್ಯಗಳ ಬಗ್ಗೆ ಅರಿವು ಮೂಡಿಸಬೇಕು. ಮನೆ ಹಾಗೂ ಶಾಲೆಗಳಲ್ಲಿ ಕಸ ಗುಡಿಸುವ ಮನೋಬಾವನೆ, ಗಿಡಮರಗಳ ಸಂರಕ್ಶಣೆ ಮಾಡುವ ಆಲೋಚನೆ ಬೆಳೆಸಬೇಕು. ಮನೆಯಲ್ಲಿ ಮಕ್ಕಳು ಸ್ವಚ್ಚತೆಯ ಕಾರ‍್ಯ ಮಾಡಿದಾಗ ಅವರನ್ನು ಅಬಿನಂದಿಸುವ ಕೆಲಸವನ್ನು ಪೋಶಕರು ಮಾಡಬೇಕು.

ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಶಕರು ಸ್ವಚ್ಚತೆಯ ಬಗ್ಗೆ ಪಾಟದ ಜೊತೆಗೆ ಪಟ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸುವ ಮೂಲಕ ಅರಿವು ಮೂಡಿಸಬೇಕಾಗಿದೆ. ಸ್ವಚ್ಚತೆಯ ಬಗ್ಗೆ ಮಕ್ಕಳಿಗೆ ಕವನ, ಕತೆ, ಚಿತ್ರಕಲೆ, ಗಾಯನ, ನಾಟಕ, ಪ್ರಬಂದ ಮುಂತಾದ ಅನೇಕ ಸ್ಪರ‍್ದೆಗಳನ್ನು ಏರ‍್ಪಡಿಸಿ ಜಾಗ್ರುತಿ ಮೂಡಿಸುವ ಮೂಲಕ ಪ್ರೇರಣೆ ನೀಡಬೇಕು. ಪೋಶಕರು ಹಾಗೂ ಶಿಕ್ಶಕರು ಮಕ್ಕಳೆದುರು ತಾವುಗಳು ಮೊದಲು ಸ್ವಚ್ಚತಾ ಆಂದೋಲನದಲ್ಲಿ ತೊಡಗಿರುವುದನ್ನು ತೋರಿಸಿದಾಗ ಮಕ್ಕಳು ತಾವಾಗಿಯೇ ಪ್ರೇರಿತಗೊಳ್ಳುತ್ತಾರೆ.

ನೂಲಿನಂತೆ ಸೀರೆ, ಹೆತ್ತವರಂತೆ ಮಕ್ಕಳು, ಗುರುಗಳಂತೆ ಶಿಶ್ಯರಲ್ಲವೇ? ಅದರಿಂದ ನಾವುಗಳು ಬದಲಾವಣೆ ತರಲು ಮುಂದಾದರೆ, ಮಕ್ಕಳು ಸಹ ಆ ಬದಲಾವಣೆಯ ದಾರಿಯಲ್ಲಿ ಬಂದೇ ಬರುತ್ತಾರೆ. ಮತ್ತು ಒಮ್ಮೆ ಅವರಿಗೆ ತಮ್ಮ ಮನೆ, ಶಾಲೆ, ಬೀದಿ, ದಾರ‍್ಮಿಕ ಪೂಜಾ ಕೇಂದ್ರಗಳು, ಊರು, ನಗರ, ತಾಲ್ಲೂಕು, ಜಿಲ್ಲಾ, ರಾಜ್ಯ, ದೇಶದ ಸ್ವಚ್ಚತೆಗೊಳಿಸುವ ಸಂಕಲ್ಪವನ್ನು ಮೈಗೂಡಿಸಿಕೊಟ್ಟರೆ ಸಾಕು ಕೆಲವೇ ಕೆಲವು ವರ‍್ಶಗಳಲ್ಲಿ ಬಾರತ ದೇಶವು ಸುಂದರವಾಗುವುದರಲ್ಲಿ ಸಂಶಯವಿಲ್ಲ.

ಒಟ್ಟಾಗಿ ಕೈ ಜೋಡಿಸೋಣ. ಇಂದಿನ ಮಕ್ಕಳಲ್ಲಿ ನಾವು ಸ್ವಚ್ಚತೆಯ ಪಾಟವನ್ನು ಕಲಿಸೋಣ, ಜೊತೆಯಾಗಿಯೇ ಕಲಿಯೋಣ, ಗಾಂದೀಜಿಯವರ ಕನಸು ನನಸು ಮಾಡೋಣ.

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: