ಕವಿತೆ: ದೇವಿಯರ ದಸರಾ

– ಮೈತ್ರೇಯಿ ಸಚ್ಚಿದಾನಂದ ಹೆಗಡೆ.

ತಾಯಿ, ಅಮ್ಮ, Mother

ದಸರೆಯೆಂದರೆ ದೇವಿಯರದೇ ದರ‍್ಬಾರು
ಅವತಾರಗಳು, ಅಲಂಕಾರಗಳು, ಅಬಿಶೇಕಗಳು,
ಸ್ತುತಿ, ಸಡಗರ ಸಂಗಡ ಸಂಗೀತ,
ಎಲ್ಲೆಲ್ಲಿಯೂ ಎನ್ನಮ್ಮ
ಹತ್ತು ಹಗಲು, ಹತ್ತು ಹಮ್ಮಿನ ಹರವು
ಸುಂದರ ಸೌಮ್ಯ ಸಿರಿಯೊಂದು ಸಾರಿ,
ರುದ್ರ ರೂಪದ ರಂಗಿನ್ನೊಮ್ಮೆ
ದಸರೆಯೆಂದು ದಕ್ಶಿಣದವರೆಂದರೆ,
ದುರ‍್ಗಾಪೂಜೆಯೆಂದರು,
ಬಡಗಿನ ಬಡಿವಾರದವರು
ಮೈಸೂರಿನ ಮಂಟಪದಲ್ಲಿ,
ಆನೆಗಳ ಆಗೋಶವಾದರೆ,
ಗರ‍್ಬಾದ ಗಮ್ಮತ್ತು ಗುಜರಾತಿನಲ್ಲಿ
ಸಿಹಿಯೂಟ ಸವಿಯಲು ಸಬೂಬು ಸಾಲದು

ಹಬ್ಬ ಹರಿದಿನದ ಹಿಂದೇನಿದೆ?
ಅದಾರು ಆ ಅಮ್ಮ?
ಹೊಗಳಿಕೆಗೆ ಹಿಗ್ಗುವ
ಹೊನ್ನಿನಂತಹ ಹೆಣ್ಣು
ಹೊನ್ನಶೂಲಕ್ಕೇರಿದರೂ
ಹಿಡಿಯೊಲವು ಹಂಚುವ ಹೆಣ್ಣು

ಕಾಳಿಯ ಕಾಲಿಗೆ ಕೈಮುಗಿಯುವವರು
ಮನೆ – ಮಗಳ
ಕಣ್ಣು ಕೆಂಪಾದರೆ ಕೆಂಡವಾದಾರು
ಹರನ ಹಟತೊಟ್ಟು ಹಾರಹಾಕಿದ
ಪಾರ‍್ವತಿಗೆ ಪ್ರಣಾಮವೆನ್ನುವವರು,
ಹೊಟ್ಟೆಯಲ್ಲಿ ಹುಟ್ಟಿದ ಹುಡುಗಿ,
ತಾನೇ ತನ್ನಿನಿಯನ ತಾವಿಗೆ ತಂದರೆ,
ಕೆಡುಕು ಕಲಕುವ ಕೇಡಿಗಳಾದಾರು
ಉಡುವ ಉಡುಗೆಗೆ
ಆಡುವ ಆಟಕ್ಕೆ
ನಡೆಗೆ, ನೋಟಕ್ಕೆ
ಕಟ್ಟಳೆಗಳ ಕಟ್ಟುವ ಕಟುಕರು
ಬಾಯಲ್ಲಿ ಬಡಾಯಿ ಬಡಿಸುವರು

ಪೂಜೆಗೆಂದು ಪೇರಿಸುವ ಪ್ರಾಮಾಣಿಕತೆಯ
ಅರ‍್ದದಶ್ಟೂ ಅಗತ್ಯವಿಲ್ಲ
ನಮ್ಮ ನಲ್ಮೆಯಿಂದ ನೋಡಲು

ನಿಮಗಿದು ನಿಚ್ಚಳವಾದಾಗ
ದೇವಿ ದಾರಿಯಾದಾಳು
ದಾರಿದ್ರ್ಯ ದೂರವಾಗಿಸಿಯಾಳು
ಮನ್ನಿಸಿ ಮೋಕ್ಶದ ಮನಸು ಮಾಡಿಯಾಳು

(ಚಿತ್ರ ಸೆಲೆ: artponnada.blogspot.in )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.