ಕವಿತೆ: ಕಾವ್ಯಸಾರ
– ರಾಜೇಶ್.ಹೆಚ್.
ಅಕ್ಶರ ಅಕ್ಶರ ಕೂಡಿಸಿ
ಪದ ಪದಗಳ ಸೇರಿಸಿ
ಬರೆದು ನಾ ಕಲೆ ಹಾಕಿದೆ
ಸಹಸ್ರ ಸಹಸ್ರ ಕಾವ್ಯರಾಶಿ
ಕಾವ್ಯವೊಂದಿದ್ದರೆ ಸಾಕೇ?
ಅದರೊಳು ಸಂದೇಶವಿರಬೇಕು
ಸಂದೇಶಕ್ಕೆ ಮೌಲ್ಯವಿರಬೇಕು
ಮೌಲ್ಯವಿದ್ದರೆ ಸಾಕೇ? ಪ್ರಕಾಶಕರಿರಬೇಕು
ಪ್ರಕಾಶನವಾದರೆ ಸಾಕೇ? ಓದುಗರಿರಬೇಕು
ಓದಿದರೆ ಸಾಲದು ಅರ‍್ತೈಸಿಕೊಳ್ಳಬೇಕು
ಶ್ರೋತ್ರುಗಳೊಡನೆ ಹಂಚಿಕೊಳ್ಳಬೇಕು
ಹಂಚಿಕೊಂಡು ವಿಶ್ಲೇಶಿಸಬೇಕು
ಆಗ ಪರದೆಗಳು ಸರಿಯುವವು
ಅದರೊಳಿರುವ ಮಾಯಾ ಪ್ರಪಂಚ
ತೆರೆದುಕೊಂಡು ಎಳೆ ಎಳೆಯಾಗಿ
ಪದರು ಪದರಾಗಿ ನೂರಾರು
ಕತೆಗಳ ಸಾರಗಳು ಹರಡಿಕೊಳ್ಳುವವು
ಕೇವಲ ಲಿಪಿಗಳ ಜೋಡಣೆಯು
ಕಂಡು ಕೇಳರಿಯದ ಮಾಯಾ
ಪ್ರಪಂಚದ ಸ್ರುಶ್ಟಿ ಮಾಡುವ
ಅತ್ಯದ್ಬುತ ಪ್ರಕ್ರಿಯೆ ನಿದಾನವಾಗಿ
ಅನಾವರಣಗೊಳ್ಳುವುದು ಮೈ ಮನವೆಲ್ಲ
ಪುಳಕಗೊಂಡು ಮತ್ತಶ್ಟು ಬೇಕೆನ್ನುತ್ತಿರುವಾಗಲೇ
ಜೀವನದ ಆಗುಹೋಗುಗಳ ಕನ್ನಡಿಯ
ಹಿಡಿದು ಪರದೆ ಬಿದ್ದು ಮುಗಿದುಹೋಗುವುದು
ಕವಿಗೂ ಮನೆ ಸಂಸಾರವಿದೆಯಲ್ಲವೇ?
(ಚಿತ್ರಸೆಲೆ : sloanreview.mit.edu)
ಇತ್ತೀಚಿನ ಅನಿಸಿಕೆಗಳು