ರಾರಾಜಿಸುತ್ತಿರುವ ಆಹಾರದ ಸುತ್ತಲಿನ ಜಾಹೀರಾತುಗಳು

– ಸಂಜೀವ್ ಹೆಚ್. ಎಸ್.

ನಮ್ಮ ದೇಶ ನಮ್ಮ ಆಹಾರ ಸಂಸ್ಕ್ರುತಿ ಆಹಾರ ಪದ್ದತಿ ಎಲ್ಲವೂ ಕೂಡ ಕಾಲಕ್ಕೆ ತಕ್ಕ ಹಾಗೆ ಬದಲಾಗಿದೆ. ಬದಲಾವಣೆ ಜಗದ ನಿಯಮ ಹೌದು, ಆದರೆ ಆ ಬದಲಾವಣೆಯ ಹಾದಿಯಲ್ಲಿ ಒಂದಶ್ಟು ಒಳ್ಳೆಯ ಬೆಳವಣಿಗೆಗಳು ಹಾಗೂ ಕೆಲವಶ್ಟು ಹಾದಿತಪ್ಪಿಸುವ ಬದಲಾವಣೆಗಳು ಆಗಿರುವುದು ಹೌದು. ಇಂತಹ ಕಾಲಕಾಲಕ್ಕೆ ಬದಲಾವಣೆಗೆ ಮತ್ತಶ್ಟು ವೇಗ ಹೆಚ್ಚಿಸುವುದು ಜಾಹೀರಾತು. ಆದುನಿಕ ಜೀವನದಲ್ಲಿ ಜಾಹೀರಾತು ಪ್ರಮುಕ ಪಾತ್ರ ವಹಿಸುತ್ತದೆ. ಇದು ಸಮಾಜದ ಮತ್ತು ವ್ಯಕ್ತಿಯ ವರ‍್ತನೆಗಳನ್ನು ರೂಪಿಸುತ್ತದೆ ಮತ್ತು ಗ್ರಾಹಕರ ನಡವಳಿಕೆಯ ಮೇಲೆ ಪ್ರಬಾವ ಬೀರುತ್ತದೆ. ಪ್ರತಿದಿನ ಜಾಹೀರಾತಿನ ಬಗ್ಗೆ ಕೇಳುತ್ತೇವೆ, ಜಾಹೀರಾತುಗಳನ್ನು ನೋಡುತ್ತೇವೆ, ಆನಂದಿಸುತ್ತೇವೆ, ಅನುಬವಿಸುತ್ತೇವೆ, ಜ್ನಾನ ಹೆಚ್ಚಿಸಿಕೊಳ್ಳುತ್ತೇವೆ. ಇದಲ್ಲದೇ ಹೊಸ ಆಸೆ ಮತ್ತು ಕನಸುಗಳನ್ನು ಕಟ್ಟಿಕೊಳ್ಳುತ್ತೇವೆ, ಗೊತ್ತಿಲ್ಲದೆ ಇರುವುದರ ಬಗ್ಗೆ ಗೊತ್ತು ಮಾಡಿಕೊಳ್ಳುತ್ತೇವೆ, ಗೊಂದಲಕ್ಕೀಡಾಗುತ್ತೇವೆ, ಜಿಜ್ನಾಸೆಗೆ ಒಳಗಾಗುತ್ತೇವೆ, ಇನ್ನಶ್ಟು ಮತ್ತಶ್ಟು ಬೇಕು ಎಂಬ ದುರಾಸೆಗೆ ಒಳಪಡುತ್ತೇವೆ. ಒಂದಾ ಎರಡಾ ಜಾಹೀರಾತಿನಿಂದ ಆಗುವ ಅನುಕೂಲಗಳು ಅನಾನುಕೂಲಗಳು!

ಉತ್ತಮ ಜಾಹೀರಾತು, ಮಾರಾಟ ಮತ್ತು ಬ್ರ‍್ಯಾಂಡ್ ಜಾಗ್ರುತಿಯನ್ನು ಹೆಚ್ಚಿಸುತ್ತದೆ. ಗ್ರಾಹಕರಿಗೆ ಅಗತ್ಯವಿರುವ ಉತ್ಪನ್ನಗಳು ಅತವಾ ಸೇವೆಗಳ ಬಗ್ಗೆ ತಿಳಿದುಕೊಳ್ಳಲು ಜಾಹೀರಾತು ಉತ್ತಮ ಮಾರ‍್ಗವಾಗಿದೆ. ನಮ್ಮ ಮೆದುಳಿನೊಳಗೆ ಜಾಹೀರಾತಿನಲ್ಲಿ ತೋರಿಸುವ ವಿಶಯಗಳು ಬಂದು ಕೂತಾಗ ನಮ್ಮ ಆಹಾರದ ಬಗೆಗಿನ ಆಯ್ಕೆ ಮತ್ತು ನಿಲುವುಗಳನ್ನು ಬದಲಾಯಿಸಿಬಿಡುತ್ತದೆ. ಕಂಪನಿಗಳು ಪ್ರತಿದಿನ ಸರಾಸರಿ 6,000 ಜಾಹೀರಾತು ಸಂದೇಶಗಳನ್ನು ಜನರಿಗೆ ಕಳುಹಿಸುತ್ತವೆ. ಇವುಗಳಲ್ಲಿ ಸ್ವಲ್ಪ ಬಾಗ ಮಾತ್ರ ವಾಸ್ತವಕ್ಕೆ ಹತ್ತಿರವಾಗಿರುತ್ತದೆ. ಜಾಹೀರಾತುಗಳು ಸುಪ್ತಾವಸ್ತೆಯ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಉಂಟುಮಾಡುತ್ತವೆ, ಉದಾಹರಣೆಗೆ ಉತ್ಪನ್ನಗಳನ್ನು ಕೊಂಡುಕೊಳ್ಳುವಲ್ಲಿ ನಾವು ಅದನ್ನು ಒಪ್ಪಿಕೊಳ್ಳಲು ಬಯಸದಿದ್ದರೂ ಸಹ ಜಾಹೀರಾತು ಕೆಲಸ ಮಾಡುತ್ತದೆ! ಜಾಹೀರಾತು ಮನುಶ್ಯನ ಆಹಾರ ಪದ್ದತಿಯ ಕ್ರಮವನ್ನು ನಿರ‍್ದರಿಸುವಂತಹ ಶಕ್ತಿ ಹೊಂದಿದೆ. ಇಂದು ನಾವು ಏನು ತಿನ್ನಬೇಕು ಏನು ತಿನ್ನಬಾರದು ಎಂಬುದನ್ನು ನಿರ‍್ದರಿಸುವಲ್ಲಿ ಜಾಹೀರಾತಿನದ್ದು ಪ್ರಮುಕಪಾತ್ರವಿದೆ ಎಂದರೆ ಅತಿಶಯವೇನಲ್ಲ ಎಂದು ನನ್ನ ಅನಿಸಿಕೆ.. ಇದು ಪ್ಯೂರ‍್‍‍ಲಿ ಸೈಕಲಾಜಿಕಲ್ ಇಂಪ್ಯಾಕ್ಟ್.

ಆಹಾರ ಜಾಹೀರಾತುಗಳ ಪರಿಣಾಮಗಳು

ಆಹಾರ ಜಾಹೀರಾತುಗಳು ನಮ್ಮನ್ನು ಅತಿಯಾಗಿ ತಿನ್ನುವಂತೆ ಮಾಡುತ್ತವೆ ಎಂದು ವಿಜ್ನಾನಿಗಳು ಅದ್ಯಯನಗಳನ್ನು ನಡೆಸಿ ಹೇಳಿದ್ದಾರೆ. ವಯಸ್ಕರು ಮತ್ತು ಮಕ್ಕಳು ಹೆಚ್ಚೆಚ್ಚು ಆಹಾರ ಸಂಬಂದಿತ ಜಾಹೀರಾತುಗಳಿಗೆ ಒಡ್ಡಿಕೊಳ್ಳುವುದರಿಂದ(ಪ್ರಬಾವಕ್ಕೆ ಒಳಪಡುವುದರಿಂದ), ಹೆಚ್ಚು ತಿನ್ನಲು ಪ್ರೇರೇಪಿಸಿ, ಅವರ ತೂಕವನ್ನು ಹೆಚ್ಚಿಸಲು ಕಾರಣವಾಗಬಹುದು. ಆಹಾರ ಜಾಹೀರಾತಿಗೆ ತೆರೆದುಕೊಂಡಾಗ ಮಕ್ಕಳು 45% ಹೆಚ್ಚು ಸೇವಿಸುತ್ತಾರೆ. ಟಿವಿಯಲ್ಲಿ ಬರುವ ಜಾಹೀರಾತನ್ನು ನೋಡಿ ನನ್ನ ತಂಗಿಯ ಮಗ ಕೂಡ ಕಿಂಡರ‍್ ಜಾಯ್ ಮತ್ತು ಬಿಸ್ಕೆಟ್ ಒಳಗಡೆ ತುಂಬುವ ಚಾಕಲೇಟ್ ಬೇಕೇ ಬೇಕು ಎಂದು ಹಟ ಹಿಡಿದು ಕೂತಿದ್ದ. ಇದರ ಪರಿಣಾಮವನ್ನು ನಾನು ಎದುರಿಸಿದ್ದೇನೆ ಈಗಲೂ ಎದುರಿಸುತ್ತಿದ್ದೇನೆ. ಆಹಾರ ಜಾಹೀರಾತು ಮಕ್ಕಳ ಆಹಾರದ ಆದ್ಯತೆಗಳು, ಕರೀದಿ, ಸೇವನೆಯ ಮೇಲೆ ಪ್ರಬಾವ ಬೀರುತ್ತದೆ, ಅದಿಕ ತೂಕ ಮತ್ತು ಸ್ತೂಲಕಾಯದಂತಹ ಕಳಪೆ ಆರೋಗ್ಯ ಪಲಿತಾಂಶಗಳಿಗೆ ಎಡೆಮಾಡಿಕೊಡುತ್ತದೆ ಎಂಬುದು ಹಲವಾರು ಸಂಶೋದನೆಗಳಿಂದ ತಿಳಿದುಬಂದಿದೆ. ಬಾಲ್ಯದ ಸ್ತೂಲಕಾಯತೆಯು ಗಂಬೀರವಾದ ಆರೋಗ್ಯ ಸಮಸ್ಯೆಯಾಗಿದ್ದು, ಇದು ರೋಗಗ್ರಸ್ತವಾಗುವಿಕೆ, ಮರಣವನ್ನು ಹೆಚ್ಚಿಸುತ್ತದೆ. ಮಕ್ಕಳು ಮತ್ತು ಯುವಕರಲ್ಲಿ ಸ್ತೂಲಕಾಯದ ಪ್ರಮಾಣವು ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಮಕ್ಕಳ ಬುದ್ದಿ ಶಕ್ತಿಯನ್ನು ಕಡಿಮೆ ಮಾಡಿ ಅವರ ಗ್ರಹಣ ಶಕ್ತಿಯನ್ನು ಕೂಡ ಹಾಳು ಮಾಡುವಲ್ಲಿ ಇಂತಹ ಜಾಹೀರಾತುಗಳು ಪಾತ್ರವಹಿಸುತ್ತದೆ, ಏಕೆಂದರೆ ಬಹುಪಾಲು ಆಹಾರ ಪದಾರ‍್ತಗಳು ಸಕ್ಕರೆಯಿಂದ ಮಾಡಲ್ಪಟ್ಟ ಆಹಾರ.

ಅಮೇರಿಕನ್ ಅಕಾಡೆಮಿ ಆಪ್ ಪೀಡಿಯಾಟ್ರಿಕ್ಸ್ ನ ಅದಿಕ್ರುತ ಜರ‍್ನಲ್ ಪ್ರಕಾರ, ಹದಿಹರೆಯದವರ ಮೇಲೆ ಜಾಹೀರಾತಿನ ರುಣಾತ್ಮಕ ಪರಿಣಾಮಗಳು ಹೆಚ್ಚಿದ ಸಿಗರೇಟ್ ಮತ್ತು ಆಲ್ಕೋಹಾಲ್ ಬಳಕೆ, ಸ್ತೂಲಕಾಯತೆ, ಕಳಪೆ ಪೋಶಣೆ ಮತ್ತು ತಿನ್ನುವ ಅಸ್ವಸ್ತತೆಗಳಿಗೆ ದಾರಿ ಮಾಡಿಕೊಡುತ್ತದೆ. ಆಹಾರದ ಜಾಹೀರಾತು ಬದಲಾಗುತ್ತಿರುವ ಆಹಾರ ಅಬಿರುಚಿಗಳು, ಆಹಾರ ಪದ್ದತಿ ಮತ್ತು ಆಹಾರ ಪದ್ದತಿಗಳನ್ನು ಪ್ರತಿಬಿಂಬಿಸುತ್ತದೆ.  ಆಹಾರ ಜಾಹೀರಾತಿನಲ್ಲಿ ಸ್ಪಶ್ಟ ಮಾಹಿತಿಗಳನ್ನು ನೀಡುವುದು ಅತಿ ಸೂಕ್ತ. ಆಹಾರದ ದುಶ್ಪರಿಣಾಮಗಳ ಬಗ್ಗೆ ಕೂಡ ಜನರಿಗೆ ಮಾಹಿತಿ ಒದಗಿಸುವುದು ಮೊದಲ ಕರ‍್ತವ್ಯವೂ ಹೌದು. ಆದರೆ ಅವುಗಳೆಲ್ಲವನ್ನೂ ಮರೆಮಾಚಿ ಆಹಾರವನ್ನು ಕೇವಲ ವೈಬವೀಕರಿಸಿ ಮಾರಾಟ ಮಾಡುವುದು ತಪ್ಪು. ಯಾವ ಆಹಾರ ಪದಾರ‍್ತ ಯಾರಿಗೆ ಸೂಕ್ತ ಯಾರು ಸೇವಿಸಬಹುದು, ಯಾರು ಸೇವಿಸಬಾರದು ಎಂಬುದರ ಸಂಕ್ಶಿಪ್ತ ವಿವರವನ್ನು ಒದಗಿಸುವುದು ಜಾಹೀರಾತಿನ ಮೂಲ ಆದ್ಯತೆ ಆಗಿರಬೇಕು.

(ಮಾಹಿತಿ ಮತ್ತು ಚಿತ್ರ ಸೆಲೆ: ncbi.nlm.nih.gov, hobesityevidencehub.org.au, pxhere.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.