ನಾವೇಕೆ ಬಯ್ಯುತ್ತೇವೆ? – 11ನೆಯ ಕಂತು
– ಸಿ.ಪಿ.ನಾಗರಾಜ.
(ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು)
ಶಾಪ ರೂಪದ ಬಯ್ಗುಳ
ವ್ಯಕ್ತಿಗೆ ಸಾವು ನೋವು ಉಂಟಾಗಲಿ; ವ್ಯಕ್ತಿಗೆ ಸೇರಿದ ಒಡವೆ ವಸ್ತು ಆಸ್ತಿಪಾಸ್ತಿಯು ನಾಶವಾಗಲಿ; ವ್ಯಕ್ತಿಯ ಕುಟುಂಬದ ಮಕ್ಕಳು ಮೊಮ್ಮಕ್ಕಳು ಮರಿಮೊಮ್ಮಕ್ಕಳೆಲ್ಲರೂ ಸಾವನ್ನಪ್ಪಿ ಮನೆತನವೇ ನಾಶವಾಗಲಿ; ಒಟ್ಟಿನಲ್ಲಿ ವ್ಯಕ್ತಿಗೆ ಒಂದಲ್ಲ ಒಂದು ಬಗೆಯ ಕೇಡು ತಟ್ಟಲಿ ಎಂಬ ಉದ್ದೇಶದಿಂದ ಆಡುವ ನುಡಿಯನ್ನು ಶಾಪವೆಂದು ಕರೆಯುತ್ತಾರೆ. ಶಾಪದ ನುಡಿಯ ಮೂಲಕ ಬಯ್ಯುವುದನ್ನು ‘ಶಾಪ ಹಾಕುವುದು’ ಎನ್ನುತ್ತಾರೆ. ಶಾಪ ಎಂಬ ಪದಕ್ಕೆ “ಕೆಡುಕನ್ನು ಬಯಸಿ ಹೇಳುವ ಮಾತು” ಎಂಬ ತಿರುಳಿದೆ.
ಜನರು ತುಂಬಾ ಹತಾಶೆಗೆ ಒಳಗಾದಾಗ, ಅಂದರೆ ಹೆಚ್ಚಿನ ಮಟ್ಟದ ಹಾನಿ, ನೋವು ಇಲ್ಲವೇ ಅಪಮಾನಕ್ಕೆ ಗುರಿಯಾಗಿ ನರಳುತ್ತಿರುವಾಗ, ತಮ್ಮ ಸಂಕಟಕ್ಕೆ ಕಾರಣರಾದ ವ್ಯಕ್ತಿಗಳಿಗೆ ಶಾಪವನ್ನು ಹಾಕುತ್ತಾರೆ. ಕೆಲವೊಮ್ಮೆ ತಮ್ಮ ಚಲನವಲನಕ್ಕೆ ಅಡ್ಡಿಯಾದ ಹಾಗೂ ಇನ್ನಿತರ ತೊಂದರೆಗೆ ಕಾರಣವಾದ ಜಡವಸ್ತುಗಳನ್ನು ಮತ್ತು ಜೀವಜಂತುಗಳನ್ನು ಶಪಿಸುತ್ತಾರೆ.
ಶಾಪದ ನುಡಿಗಳಿಗೆ ಒಂದು ಬಗೆಯ ಮಾಂತ್ರಿಕ ಶಕ್ತಿಯಿದೆಯೆಂಬ ನಂಬಿಕೆಯು ಜನಸಮುದಾಯದಲ್ಲಿದೆ. ‘ಮಾಂತ್ರಿಕ ಶಕ್ತಿ’ ಎಂದರೆ ದೇವತೆ, ದೆವ್ವ ಇಲ್ಲವೇ ಅತಿಮಾನವ ಶಕ್ತಿಗಳನ್ನು ಕೆಲವೊಂದು ಬಗೆಯ ಆಚರಣೆಗಳಿಂದ ಮತ್ತು ಮಂತ್ರಗಳಿಂದ ಒಲಿಸಿಕೊಂಡು, ಆ ಮೂಲಕ ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಬಲ್ಲ ಶಕ್ತಿ. ಇದನ್ನು ‘ಮಾಟ-ಮಂತ್ರ’ ಎಂದು ಕರೆಯುತ್ತಾರೆ.
ಮಾಟ-ಮಂತ್ರಗಳ ಮೂಲಕ ವ್ಯಕ್ತಿಯು ತನ್ನ ಬಯಕೆಗಳನ್ನು ಈಡೇರಿಸಿಕೊಳ್ಳುವುದರ ಜತೆಗೆ ತನ್ನ ಹಗೆಗಳಿಗೆ ಸಾವು ನೋವುಗಳನ್ನು ಉಂಟುಮಾಡಬಹುದೆಂಬ ನಂಬಿಕೆಯು ಜನಮನದಲ್ಲಿದೆ. ಮಾಟ-ಮಂತ್ರದ ಕ್ರಿಯೆಗಳು ಹೇಗೆ ತಮ್ಮ ಶತ್ರುಗಳನ್ನು ನಾಶಪಡಿಸುತ್ತವೆಯೋ ಅಂತೆಯೇ ಶಾಪದ ನುಡಿಗಳು ಕೂಡ ಕ್ರಿಯೆಯ ರೂಪವನ್ನು ಪಡೆದು ತಮ್ಮ ಹಗೆಗಳನ್ನು ನಾಶಪಡಿಸುವಂತಾಗಲಿ ಎಂಬ ಉದ್ದೇಶವು ಬಯ್ಯುವವರಲ್ಲಿ ಇರುತ್ತದೆ. ಆದ್ದರಿಂದ ಶಾಪಗಳನ್ನು “ಮಾತಿನ ರೂಪದಲ್ಲಿಯ ಮಾಟ ಮತ್ತು ಕೇಡಿನ ಮಂತ್ರಗಳು” ಎಂದು ಕರೆಯುತ್ತಾರೆ. ಜನಸಮುದಾಯದ ಮಾತುಕತೆಗಳಲ್ಲಿ ಬಳಕೆಯಾಗುವ ಕನ್ನಡ ಶಾಪಗಳು ಈ ಕೆಳಕಂಡಂತಿವೆ.
1. ಸಾವು ಉಂಟಾಗಲಿ ಎಂಬ ಶಾಪಗಳು:
ನಿನ್ ಬಾಯ್ಗೆ ಮಣ್ ಬೀಳ.
ನಿಂಗೆ ಆಪತ್ ಬಂದ್ ಚಾಪೇಲಿ ಹೊತ್ಕೊಂಡೋಗ.
2. ಮನೆಯು ಹಾಳಾಗಲಿ ಎಂಬ ಶಾಪಗಳು:
ನಿನ್ ಮನೇಗೆ ಬೆಂಕಿ ಬೀಳ.
ನಿನ್ ಮನೆ ಪಾಳ್ ಮನೆಯಾಗ.
3. ದೇಹದ ಅಂಗಗಳು ಹಾಳಾಗಲಿ ಎಂಬ ಶಾಪಗಳು:
ನಿನ್ ಕಣ್ ಇಂಗೋಗ.
ನಿನ್ ಕಯ್ ಸೇದೋಗ.
4. ರೋಗಗಳು ತಟ್ಟಲಿ ಎಂಬ ಶಾಪಗಳು:
ನಿಂಗೆ ಮೊಲ್ಲಾಗ್ರು ಬರ.
ನಿಂಗೆ ಸಾಲೆ ರೋಗ್ಬರ.
5. ಮಕ್ಕಳಿಗೆ ಸಾವು ಬರಲಿ ಇಲ್ಲವೇ ಮನೆತನ ನಾಶವಾಗಲಿ ಎಂಬ ಶಾಪಗಳು:
ನಿನ್ ಸುಳಿ ಸತ್ತೋಗ.
ನಿನ್ ಕಂದನ್ನ ತಿನ್ನ.
6. ಮದುವೆಯಾಗದಿರಲಿ ಎಂಬ ಶಾಪಗಳು:
ನಿನ್ ಹಣೆ ಮ್ಯಾಲೆ ಬಾಸಿಂಗ ಕಟ್ದೇ ಹೋಗ.
ನೀನ್ ಹಸೆಮಣೆ ಮ್ಯಾಲೆ ಅಕ್ಕಸ್ದಕ್ಕಿ ಕಾಣ್ದೆ ಹೋಗ.
7. ಬಡತನ ಉಂಟಾಗಲಿ ಎಂಬ ಶಾಪಗಳು:
ನಿಂಗೆ ಬರಬಾರದ್ದು ಬಂದು ಬೀದೀಲಿ ನಿಂತ್ಕೊಳ.
ನಿನ್ ಕಯ್ಗೆ ಬಂದದ್ದು ಬಾಯ್ಗೆ ಬರದೇ ಹೋಗ.
8. ದನಕರು ಮುಂತಾದ ಪ್ರಾಣಿ ಸಂಪತ್ತು ನಾಶವಾಗಲಿ ಎಂಬ ಶಾಪಗಳು:
ನಿನ್ ಎತ್ಗೆ ಜರಾ ಬರ.
ನಿನ್ ಎಮ್ಮೇಗೆ ದೊಡ್ರೋಗ ಬರ.
ಶಾಪವನ್ನು ಹಾಕುವವರು ಅತಿ ಹೆಚ್ಚಿನ ಸನ್ನಿವೇಶಗಳಲ್ಲಿ ಹಗೆಯನ್ನು ಎದುರಿಸುವ ಇಲ್ಲವೇ ಮಟ್ಟಹಾಕುವ ದೇಹ ಬಲ/ಜಾತಿ ಬಲ/ಹಣ ಬಲ/ಗದ್ದುಗೆಯ ಬಲ/ಜನ ಬಲ ತಮ್ಮಲ್ಲಿ ಇಲ್ಲವೆಂಬ ಕೊರಗು ಮತ್ತು ಅಸಹಾಯಕತೆಯಿಂದಾಗಿ, ತಾವು ನಂಬಿರುವ ಅತಿಮಾನವ ಶಕ್ತಿಗೆ ಮೊರೆಹೋಗುತ್ತಾರೆ. ಆದ್ದರಿಂದಲೇ ಪ್ರತಿಯೊಂದು ಶಾಪದ ನುಡಿಯ ಕೊನೆಯಲ್ಲಿ ಬೀಳ (ಬೀಳಲಿ/ಬೀಳುವಂತಾಗಲಿ); ಆಗ (ಆಗಲಿ/ಆಗುವಂತಾಗಲಿ); ಹೋಗ (ಹೋಗಲಿ/ಹೋಗುವಂತಾಗಲಿ); ಬರ (ಬರಲಿ/ಬರುವಂತಾಗಲಿ) ಎಂಬ ರೂಪದ ಕ್ರಿಯಾಪದಗಳಿರುತ್ತವೆ.
ಶಾಪವನ್ನು ಹಾಕುವಾಗ ಕೆಲವೊಮ್ಮೆ ಎತ್ತರದ ದನಿಯಲ್ಲಿ ಬಯ್ಯುತ್ತ, ತಮ್ಮ ಶಾಪಕ್ಕೆ ಗುರಿಯಾದ ವ್ಯಕ್ತಿಯ ಮಯ್ ಮೇಲೆ ಉಗಿಯುವ, ದೂಳನ್ನು ಎರಚುವ ಇಲ್ಲವೇ ತಮ್ಮ ಹಸ್ತಗಳೆರಡನ್ನು ಮುಂದೆ ಒಡ್ಡಿ ಬೆರಳುಗಳಿಂದ ನಟಿಕೆಗಳನ್ನು ಮುರಿಯುವ ಕ್ರಿಯೆಗಳನ್ನು ಶಾಪವಾಹಕಗಳಾಗಿ ಬಳಸುತ್ತಾರೆ. ನುಡಿಗಳ ಮೂಲಕ ತಾವು ವ್ಯಕ್ತಪಡಿಸುತ್ತಿರುವ ಕೇಡಿನ ಆಶಯವು ತಾವು ಉದ್ದೇಶಿಸಿದ ವ್ಯಕ್ತಿಗೆ ತಟ್ಟಬೇಕೆಂಬ ತೀವ್ರತರವಾದ ಹಂಬಲವು ಬಯ್ಯುವವರಲ್ಲಿ ಇರುತ್ತದೆ.
ಸಾವಿರಾರು ವರುಶಗಳಿಂದಲೂ ಕನ್ನಡ ಜನಸಮುದಾಯದ ಮದುವೆ ಮತ್ತು ಸಾವಿನ ಸನ್ನಿವೇಶಗಳಲ್ಲಿ ಮಾಡುತ್ತಿರುವ ಆಚರಣೆಗಳ ಸ್ವರೂಪವನ್ನು ಸೂಚಿಸುವ ನುಡಿಗಟ್ಟುಗಳು ಶಾಪಗಳಲ್ಲಿ ಕಂಡುಬರುತ್ತವೆ. ಶಾಪದ ನುಡಿಗಳ ಓದಿನಿಂದ ನಾವು ಕನ್ನಡ ನುಡಿ ಸಮುದಾಯದ ಸಾಂಸ್ಕ್ರುತಿಕ ಚರಿತ್ರೆಯನ್ನು ಅರಿಯಬಹುದು.
ನಾನು ಮದ್ದೂರು, ಮಂಡ್ಯ, ಮಳವಳ್ಳಿ ಮತ್ತು ಚನ್ನಪಟ್ಟಣ ತಾಲ್ಲೂಕುಗಳ ಪ್ರಾಂತ್ಯದಲ್ಲಿರುವ ಜನರ ಮಾತುಕತೆಗಳಲ್ಲಿ ಬಳಕೆಯಾಗುತ್ತಿರುವ ಬಯ್ಗುಳಗಳನ್ನು ಸಂಗ್ರಹಿಸುವಂತೆಯೇ, ಗುಲ್ಬರ‍್ಗಾ ನಗರದ ಆಸುಪಾಸಿನಲ್ಲಿದ್ದ ಹತ್ತಾರು ಹಳ್ಳಿಗಳಲ್ಲಿ ಸಂಚರಿಸಿ ಶಾಪರೂಪದ ಬಯ್ಗುಳಗಳನ್ನು ಸಂಗ್ರಹಿಸಿದ್ದೇನೆ. ಕನ್ನಡಿಗರು ಆಡುವ ಶಾಪದ ನುಡಿಗಳಲ್ಲಿ ಕಂಡು ಬರುವ ಸಾಂಸ್ಕ್ರುತಿಕ ಸಂಗತಿಗಳ ಸ್ವರೂಪವನ್ನು ತಿಳಿಸುವ ನುಡಿಗಟ್ಟುಗಳು ಈ ಕೆಳಕಂಡ ಬಗೆಯಲ್ಲಿವೆ.
1. ನಿನ್ ಕಣ್ಣಿನ ಗೊಂಬೆ ತಿದ್ದ.
ಮದುವೆಯಾಗುವುದಕ್ಕೆ ಮುನ್ನವೇ ಸಾವು ಬರಲಿ ಎಂಬ ಉದ್ದೇಶದಿಂದ ಹಾಕುವ ಶಾಪದ ನುಡಿ.
‘ಕಣ್ಣಿನ ಗೊಂಬೆ ತಿದ್ದುವುದು’ ಒಂದು ಬಗೆಯ ಆಚರಣೆಯನ್ನು ತಿಳಿಸುವ ನುಡಿಗಟ್ಟು. ಮದುವೆಯಾಗದಿರುವ ವ್ಯಕ್ತಿಯು ಸತ್ತರೆ, ಹೆಣವನ್ನು ಒಪ್ಪಮಾಡುವ ಮೊದಲು ಸತ್ತ ವ್ಯಕ್ತಿಯು ಗಂಡಾಗಿದ್ದರೆ ಹೆಣ್ಣು ಬೊಂಬೆಯನ್ನು, ಹೆಣ್ಣಾಗಿದ್ದರೆ ಗಂಡು ಬೊಂಬೆಯನ್ನು ಮಣ್ಣಿನಿಂದ ಇಲ್ಲವೇ ಮಯ್ದಾ ಹಿಟ್ಟಿನಿಂದ ತಯಾರಿಸುತ್ತಾರೆ. ಆ ಬೊಂಬೆಗೆ ಕಣ್ಣು ಮೂಗು ಎಲ್ಲವನ್ನೂ ತಿದ್ದಿ ತೀಡಿ ಅಲಂಕಾರ ಮಾಡಿ, ಬೊಂಬೆಯನ್ನು ಹೆಣದ ಪಕ್ಕದಲ್ಲಿಟ್ಟು ಅರಿಸಿನ ಬೆರೆತ ಅಕ್ಕಿಕಾಳನ್ನು ಹಾಕುತ್ತ ಮದುವೆಯ ಶಾಸ್ತ್ರವನ್ನು ಮಾಡುತ್ತಾರೆ. ಅನಂತರ ಹೆಣದ ಜತೆಯಲ್ಲಿ ಬೊಂಬೆಯನ್ನು ಹೂಳುತ್ತಾರೆ ಇಲ್ಲವೇ ಸುಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬೊಂಬೆಯನ್ನು ಬಳಸುತ್ತಾರೆ. ‘ತಿದ್ದ ’ ಎನ್ನುವುದು ತಿದ್ದಲಿ/ತಿದ್ದುವಂತಾಗಲಿ ಎಂಬ ತಿರುಳಿನ ಕ್ರಿಯಾಪದ. ತಿದ್ದುವುದು ಎಂದರೆ ಹೊಸದಾಗಿ ಮಾಡುವುದು.
2. ನಿನ್ ಇಂಡೆಕೂಳ್ ಮಾಡ.
ಸಾವು ಬರಲಿ ಎಂಬ ಉದ್ದೇಶದಿಂದ ಹಾಕುವ ಶಾಪದ ನುಡಿ.
‘ಇಂಡೆಕೂಳು ಮಾಡುವುದು’ ಒಂದು ಬಗೆಯ ಆಚರಣೆ. ವ್ಯಕ್ತಿಯ ಹೆಣವನ್ನು ಹೂಳಿದ ಇಲ್ಲವೇ ಸುಟ್ಟ ಜಾಗದಲ್ಲಿ ಮೂರು/ಏಳು/ಹನ್ನೊಂದನೆಯ ದಿನದಂದು ಸುಮಾರು ಒಂದೂವರೆ ಅಡಿ ಎತ್ತರ, ಮೂರು ಅಡಿ ಅಗಲ ಮತ್ತು ಆರು ಅಡಿ ಉದ್ದದ ಮಣ್ಣಿನ ದಿಬ್ಬವನ್ನು ಕಟ್ಟಿ, ಅದರ ಮೇಲೆ ಎಣ್ಣೆಯಲ್ಲಿ ಕರಿದ ಕಜ್ಜಾಯ-ಚಿಕ್ಕಿನುಂಡೆ-ಚಕ್ಕಲಿ ಮುಂತಾದ ತಿಂಡಿಗಳನ್ನು ಮತ್ತು ನಾನಾ ಬಗೆಯ ಹಣ್ಣುಗಳ ತೊಳೆಗಳನ್ನು ಬಿಡಿಸಿ ಇಡುತ್ತಾರೆ. ಇದರ ಜತೆಗೆ ಅಕ್ಕಿ-ಜೀರಿಗೆ-ಅರಿಸಿನವನ್ನು ಹಾಕಿ ಮಸಣದಲ್ಲಿಯೇ ಬೇಯಿಸಿ ತಯಾರಿಸಿದ ಅನ್ನವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಕಟ್ಟಿ ದಿಬ್ಬದ ಮೇಲೆ ಹಾಕುತ್ತಾರೆ. ಈ ಬಗೆಯ ಅನ್ನವನ್ನು ‘ಇಂಡೆಕೂಳು’ ಎನ್ನುತ್ತಾರೆ.
ದಿಬ್ಬದ ಮೇಲೆ ಹಾಕಿರುವ ಉಣಿಸು ತಿನಸುಗಳನ್ನು ಕಾಗೆ, ಹದ್ದು, ಗರುಡ ಮುಂತಾದ ಹಕ್ಕಿಗಳು ಮತ್ತು ಇನ್ನಿತರ ಪ್ರಾಣಿಗಳು ತಿಂದರೆ ಸತ್ತವರ ಆತ್ಮಕ್ಕೆ ಶಾಂತಿ ದೊರೆಯುವುದು ಎಂಬ ನಂಬಿಕೆಯು ತಲೆತಲಾಂತರಗಳಿಂದಲೂ ಜನಮನದಲ್ಲಿದೆ. ‘ಪಿಂಡದ ಕೂಳು’ ಎಂಬ ಪದಕಂತೆಯು ದಿನಬಳಕೆಯ ಮಾತುಕತೆಯ ಉಚ್ಚಾರಣೆಯಲ್ಲಿ ‘ಇಂಡೆಕೂಳು’ ಎಂದಾಗಿದೆ. ಪಕಾರ ಹಕಾರಗೊಂಡು ಅನಂತರ ಹಕಾರ ಉಚ್ಚಾರಣೆಯಿಂದ ಬಿಟ್ಟುಹೋಗಿದೆ. ಪಿಂಡ ಎಂದರೆ ‘ಉಂಡೆ’; ಕೂಳು ಎಂದರೆ ಅನ್ನ. ಪಿಂಡದ ಕೂಳು ಎಂದರೆ ಅನ್ನದ ಉಂಡೆ.
3. ನಿನ ಗ್ವಾಡಿಗಿ ಬಡೀಲಿ.
ಸಾವು ಬರಲಿ ಎಂಬ ಉದ್ದೇಶದಿಂದ ಹಾಕುವ ಶಾಪದ ನುಡಿ.
‘ಗೋಡೆಗೆ ಬಡಿಯುವುದು’ ಒಂದು ಬಗೆಯ ಆಚರಣೆ. ಗುಲ್ಬರ‍್ಗಾದ ಪ್ರಾಂತ್ಯದಲ್ಲಿ ವ್ಯಕ್ತಿಯು ಸಾವನ್ನಪ್ಪಿದಾಗ ಹೆಣವನ್ನು ಒಪ್ಪಮಾಡುವುದಕ್ಕೆ ಮೊದಲು , ಬಂದ ಜನರೆಲ್ಲರೂ ನೋಡಲು ಅವಕಾಶವಾಗುವಂತೆ ಹೆಣವನ್ನು ಗೋಡೆಗೆ ಆನಿಸಿ ಇಲ್ಲವೇ ಒರಗಿಸಿ ಕುಳ್ಳಿರಿಸುತ್ತಾರೆ. ದೇಹ ಅತ್ತಿತ್ತ ವಾಲಿಕೊಂಡು ಬೀಳದಿರಲೆಂದು ಹಾಗೂ ತಲೆಯು ಕೆಳಬಾಗದೆ ನೆಟ್ಟಗಿರಲೆಂದು ಗೋಡೆಗೆ ಗೂಂಟಗಳನ್ನು ಬಡಿದು ಬಟ್ಟೆಯ ತುಂಡುಗಳಿಂದ ಹೆಣವನ್ನು ಬಿಗಿದು ಕಟ್ಟುತ್ತಾರೆ. ಸಾವಿನ ಉದ್ದೇಶವನ್ನು ಹೇಳುವ “ನಿನ ಗೂಂಟಕ ಬಡಿಯ” ಎಂಬ ಶಾಪದ ನುಡಿಯು ಈ ಪ್ರದೇಶದಲ್ಲಿ ಬಳಕೆಯಲ್ಲಿದೆ.
4. ನಿನ ದಂಡಿದಾರ ಹರೀಲಿ.
‘ನಿನ್ನ ಗಂಡನಿಗೆ ಸಾವು ಬರಲಿ’ ಎಂಬ ಉದ್ದೇಶದಿಂದ ಹೆಂಗಸಿಗೆ ಹಾಕುವ ಶಾಪದ ನುಡಿ.
ಗುಲ್ಬರ‍್ಗಾ ಪ್ರಾಂತ್ಯದಲ್ಲಿ “ದಂಡಿದಾರ ಹರಿಯುವುದು” ಒಂದು ಬಗೆಯ ಆಚರಣೆಯಾಗಿದೆ. ದಂಡಿ ಎಂದರೆ ಹಣೆಯ ಎರಡು ಕಡೆಗಳಲ್ಲಿ ಹೂಗೊಂಚಲು ಇಳಿಬಿದ್ದಿರುವಂತೆ ತಲೆಗೆ ಕಟ್ಟಿರುವ ಹೂವಿನ ಕುಚ್ಚು/ಗೊಂಚಲು. ಗಂಡನ ಹೆಣವನ್ನು ಹೂಳಿರುವ ಇಲ್ಲವೇ ಸುಟ್ಟಿರುವ ಜಾಗಕ್ಕೆ ಆತನ ಹೆಂಡತಿಯನ್ನು ಮೂರು/ಏಳು/ಹನ್ನೊಂದನೆಯ ದಿನದಂದು ಮುತ್ತಯ್ದೆತನದ ಕುರುಹುಗಳಿಂದ ಸಿಂಗರಿಸಿ ಕರೆದೊಯ್ಯುತ್ತಾರೆ. ಹೆಣವನ್ನು ಒಪ್ಪಮಾಡಿದ ಎಡೆಯಲ್ಲಿ ಆಕೆಯನ್ನು ಕುಳ್ಳಿರಿಸಿ, ಗಂಡ ಸತ್ತಿರುವ ಹಿರಿಯ ವಯಸ್ಸಿನ ಇಬ್ಬರು ಹೆಂಗಸರು ಆಕೆಯ ಕಯ್ಗಳಲ್ಲಿರುವ ಗಾಜಿನ ಬಳೆಗಳನ್ನು ಒಡೆದು, ಹಣೆಯಲ್ಲಿರುವ ಕುಂಕುಮವನ್ನು ಅಳಿಸಿ, ಮುಡಿಯಲ್ಲಿರುವ ದಂಡಿದಾರವನ್ನು ಹರಿದು ಕಿತ್ತು, ಒಗೆಯುತ್ತಾರೆ. ಗಂಡನನ್ನು ಕಳೆದುಕೊಂಡ ಆ ಹೆಂಗಸು ಅಂದಿನಿಂದ ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವ ಮತ್ತು ತಲೆಗೆ ಹೂವನ್ನು ಮುಡಿದುಕೊಳ್ಳುವ ಅವಕಾಶದಿಂದ ವಂಚಿತಳಾಗುತ್ತಾಳೆ.
ಶಾಪಗಳ ಬಗೆಗೆ ಜಗತ್ತಿನ ಹಲವು ಜನಾಂಗಗಳಲ್ಲಿ ನಾನಾ ಬಗೆಯ ನಂಬಿಕೆಗಳು ಇರುವುದನ್ನು ಸಾಂಸ್ಕ್ರುತಿಕ ಮಾನವಶಾಸ್ತ್ರಜ್ನರು ಗುರುತಿಸಿದ್ದಾರೆ. ಎ.ಇ.ಕ್ರಾಲಿ ಎಂಬುವರು ಶಾಪಗಳ ಬಗೆಗಿನ ಜನಪದರ ನಂಬಿಕೆಗಳನ್ನು ಈ ಕೆಳಕಂಡಂತೆ ನಿರೂಪಿಸಿದ್ದಾರೆ.
- “ಒಂದು ಸಾರಿ ಹಾಕಿದ ಶಾಪ ಹಾಕಿಸಿಕೊಂಡ ವ್ಯಕ್ತಿಗೆ ತಟ್ಟಲೇ ಬೇಕು. ಏಕೆಂದರೆ ಒಮ್ಮೆ ಹಾಕಿದ ಶಾಪವು ಏಳು ವರುಶಗಳ ಕಾಲ ಗಾಳಿಯಲ್ಲಿ ತೇಲುತ್ತಿದ್ದು, ಅವಕಾಶ ಸಿಕ್ಕಿದ ಕೂಡಲೇ ಉದ್ದೇಶಿತ ಶತ್ರುವಿಗೆ ಹೋಗಿ ಬಡಿಯುತ್ತದೆ ” ಎಂಬ ನಂಬಿಕೆಯು ಐರಿಶ್ ಜನಾಂಗದಲ್ಲಿದೆ.
- ಅರಬ್ಬರು ತಾವು ಶಾಪಕ್ಕೆ ಗುರಿಯಾದಾಗ ನೆಲದ ಮೇಲೆ ಮಲಗುತ್ತಾರೆ. ಶಾಪಗಳು ತಮ್ಮ ಮೇಲೆ ಹಾರಿ ಹೋಗುವುದರಿಂದ, ಅವುಗಳ ಹೊಡೆತದಿಂದ ತಪ್ಪಿಸಿಕೊಂಡೆವೆಂದು ನಂಬುತ್ತಾರೆ.
- ಸಕಾರಣವಿಲ್ಲದೆ ಮತ್ತೊಬ್ಬರಿಗೆ ಹಾಕಿದ ಶಾಪವು, ಹಿಂತಿರುಗಿ ಬಂದು ಶಾಪವನ್ನು ಹಾಕಿದ ವ್ಯಕ್ತಿಗೆ ತಟ್ಟಿ ಹಾನಿಯನ್ನುಂಟುಮಾಡುತ್ತದೆ ಎಂಬ ನಂಬಿಕೆಯು ಅನೇಕ ಜನಾಂಗಗಳಲ್ಲಿದೆ.
- “ಹಿರಿಯರು ಹಾಕಿದ ಶಾಪ, ಅದರಲ್ಲಿಯೂ ತಂದೆ-ತಾಯಿ ಹಾಕಿದ ಶಾಪವು ಬಿಡದೆ ತಟ್ಟುತ್ತದೆ ” ಎಂಬ ನಂಬಿಕೆಯು ಎಲ್ಲಾ ಜನಾಂಗಗಳಲ್ಲಿಯೂ ಇದೆ. ಮೋರಿಸ್ ಜನಾಂಗದ ಗಾದೆಯೊಂದು ಈ ರೀತಿ ಹೇಳುತ್ತದೆ. “ಸಂತರು ಶಾಪವನ್ನು ಕೊಟ್ಟರೆ ತಂದೆ-ತಾಯಿ ಅದರಿಂದ ನಿಮ್ಮನ್ನು ಕಾಪಾಡುತ್ತಾರೆ. ಆದರೆ ತಂದೆ-ತಾಯಿ ಶಾಪ ಹಾಕಿದರೆ ಸಂತರು ನಿಮ್ಮನ್ನು ಕಾಪಾಡಲಾರರು.”
ಮಾಟ-ಮಂತ್ರಗಳಿಂದ ಇಲ್ಲವೇ ಇತರರು ಆಡುವ ಶಾಪದ ನುಡಿಗಳಿಂದ ಕೇಡಾಗುತ್ತದೆ ಎನ್ನುವ ಸಂಗತಿಯು ಜನಸಮುದಾಯದ ಮನದಲ್ಲಿರುವ ಒಂದು ನಂಬಿಕೆಯೇ ಹೊರತು ವಾಸ್ತವವಲ್ಲ. ಆದರೂ ಜನರು ಇತರರಿಂದ ಶಾಪ ಹಾಕಿಸಿಕೊಳ್ಳಲು ತುಂಬಾ ಹೆದರುತ್ತಾರೆ. ಏಕೆಂದರೆ ಯಾವುದೋ ಕೆಟ್ಟ ಗಳಿಗೆಯೊಂದರಲ್ಲಿ ಹಗೆಗಳು ತಮಗೆ ಹಾಕಿದ ಶಾಪದ ನುಡಿಯು ಜೀವನದಲ್ಲಿ ಒಂದಲ್ಲ ಒಂದು ಬಗೆಯ ಕೇಡನ್ನು ಉಂಟುಮಾಡಬಹುದೆಂಬ ಹೆದರಿಕೆಯು ಜನಮನದಲ್ಲಿ ಬೇರೂರಿದೆ.
(ಚಿತ್ರ ಸೆಲೆ: learnitaliango.com)
ಇತ್ತೀಚಿನ ಅನಿಸಿಕೆಗಳು