ಮಲೆನಾಡು ಕಾಡಿನ ವಿಶಿಶ್ಟ ಪ್ರಾಣಿ!
ಅದು ಮಲೆನಾಡಿನ ಶ್ರುಂಗೇರಿ ತಾಲೂಕು ಕೇಂದ್ರದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದ್ದ ಕುಗ್ರಾಮ, ಬಸ್ಸಿನ ಕೊನೆಯ ನಿಲ್ದಾಣ ಕೂಡ! ಅಲ್ಲಿಂದ ಪ್ರತಿದಿನ ಶ್ರುಂಗೇರಿಯ ಕಾಲೇಜಿಗೆ ಪಿಯುಸಿ ಕಲಿಯಲು ಹೋಗಿ ಬರುತ್ತಿದ್ದ ನಾನು, ಮೂಕಾಂಬಿಕಾ ಬಸ್ಸಿನಲ್ಲಿ ಕುಗ್ರಾಮ ತಲುಪುವ ವೇಳೆ ಸಂಜೆ 6.45 ಆಗುತ್ತಿತ್ತು. ಅಲ್ಲಿಂದ ಬಸ್ಸು ಇಳಿದು ಸುಮಾರು 1.5 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ನನ್ನ ಚಿಕ್ಕಮ್ಮನ ಮನೆ ತಲುಪಬೇಕಾಗಿತ್ತು. ಅದು ಅಮಾವಾಸ್ಯೆಯ ಆಸುಪಾಸಿನ ಒಂದು ಕಗ್ಗತ್ತಲ ಸಂಜೆ, ಸೂರ‍್ಯ ತುಸು ಬೇಗನೆ ಅಂದರೆ ಸುಮಾರು 6 ಗಂಟೆಗೆ ಮನೆ ಸೇರಿದ್ದ. ನಾನು ಆ ಕುಗ್ರಾಮಕ್ಕೆ ತಲುಪುವ ವೇಳೆ ಕತ್ತಲು ತನ್ನ ದರ‍್ಪವನ್ನು ತೋರಿಸುತಿತ್ತು. ಕೈಯಲ್ಲಿ ಯಾವುದೇ ಬೆಳಕಿನ ಉಪಕರಣ ಕೂಡ ಇರಲಿಲ್ಲ. ಸರಿ ಬೇಗ ಬೇಗ ನಡೆದರಾಯಿತೆಂದು ಬಸ್ಸಿನಿಂದ ಇಳಿದೊಡನೆ ಹೆಜ್ಜೆ ಹಾಕಲು ಶುರು ಮಾಡಿದೆ.
ನಡೆಯುವ ಅರ‍್ದ ದಾರಿ ಡಾಂಬರು ರಸ್ತೆಯಿಂದಲೂ ಇನ್ನರ‍್ದ ದಾರಿ ಮಣ್ಣು ರೋಡಿನಿಂದಲೂ ಕೂಡಿತ್ತು. ಕಪ್ಪೆಗಳ ವಟಗುಟ್ಟುವಿಕೆ ಹಾಗೂ ಜೀರುಂಡೆಗಳ ಸಂಗೀತಕೂಟದಿಂದ ಕಾಡುದಾರಿ ಬೇರೆಯದೇ ಲೋಕದ ಬಾವವನ್ನು ಮೂಡಿಸುತ್ತಿತ್ತು. ಮನುಶ್ಯರ ಸುಳಿವೇ ಇಲ್ಲದ ಲೋಕದಲ್ಲಿ ಡಾಂಬರು ರಸ್ತೆಯನ್ನು ಕ್ರಮಿಸಿದ ನಂತರ ಮಣ್ಣು ರೋಡು ಸೇರಿ ಮುಂದುವರೆಯುತ್ತಿದ್ದೆ. ದಾರಿಯಲ್ಲಿ ಒಂದು ಗುಡ್ಡವನ್ನು ಸುತ್ತಿ ಬಳಸಿ ಹೋಗಬೇಕಿತ್ತು. ನಾನು ಮಣ್ಣು ದಾರಿಯಲ್ಲಿ ಹೋಗುವಾಗ ಗುಡ್ಡದ ತುದಿಯಲ್ಲಿ ಯಾರೋ ಕೂಗಿದ ಹಾಗೆ ಕೇಳಿತು. ನಾನು ಅಶ್ಟೇನು ಗಮನ ಕೊಡದೆ ನನ್ನ ನಡಿಗೆಯನ್ನು ಮುಂದುವರೆಸಿದೆ. ಮತ್ತೆ ನಾಲ್ಕು ಹೆಜ್ಜೆ ಕ್ರಮಿಸಲು ಮತ್ತೊಮ್ಮೆ ಕೂಗಿದ ಶಬ್ದ ಕೇಳಿತು! ಒಂದು ಕ್ಶಣ ನಿಂತು ಗುಡ್ಡದ ತುದಿಗೆ ಕಿವಿಕೊಟ್ಟು ನಡೆಯುವ ವೇಗವನ್ನು ನಿದಾನಗೊಳಿಸಿ ಆ ಶಬ್ದ ಬಂದಿದ್ದ ದಿಕ್ಕಿನ ಕಡೆಗೆ ಗಮನವಿಟ್ಟು ನಡೆಯದೊಡಗಿದೆ, ಮತ್ತೊಮ್ಮೆ ಅದೇ ಕೂಗು ಕೇಳಿಸಿತು! ಅದೊಂದು ಹೆಂಗಸಿನ ಚೀರಾಟದ ದ್ವನಿ! ಸ್ತಬ್ದನಾಗಿ ಅಲ್ಲೇ ನಿಂತೆ! ಕೆಲವು ಕ್ಶಣಗಳ ನಂತರ ಆ ದ್ವನಿ ಮತ್ತೊಮ್ಮೆ ಇಡೀ ಗುಡ್ಡವನ್ನು ಆವರಿಸಿತು. ಬಯ ನನ್ನ ಇಡಿ ಶರೀರವನ್ನು ಆವರಿಸಿತು. ಹ್ರುದಯ ಬಡಿತಕ್ಕೂ ಹೆಚ್ಚತೊಡಗಿತ್ತು. ಹೆಜ್ಜೆಗಳ ವೇಗವನ್ನು ಜೋರು ಮಾಡಿದೆ, ಆಗ ಚೀರಾಟ ಮತ್ತಶ್ಟು ಜೋರಾಯಿತು. ನನ್ನಲ್ಲಿದ್ದ ಎಲ್ಲ ದೈರ‍್ಯ ಅದಕ್ಕೆ ಬಲಿಯಾಗಿತ್ತು, ಇದು ಹೆಣ್ಣಿನ ದ್ವನಿಯಲ್ಲದೆ ಯಾವುದೋ ಹೆಣ್ಣು ದೆವ್ವದ ದ್ವನಿಯೇ ಎಂದು ಮನಸ್ಸು ತೀರ‍್ಮಾನಿಸಿ, ನಂಬಿದ್ದ ಎಲ್ಲಾ ಸಿದ್ದಾಂತಗಳನ್ನು ಪಕ್ಕಕ್ಕಿಟ್ಟು, “ಬೂತ್ರಾಯ ನೀನೇ ನನ್ನ ಕಾಪಾಡು” ಎಂದು ಮನಸ್ಸಿನಲ್ಲಿಯೇ ಪ್ರಾರ‍್ತಿಸಿ ಒಂದೇ ಉಸಿರಿಗೆ ಮನೆ ಕಡೆ ಓಡಿದೆ! ಆ ಮಬ್ಬುಗತ್ತಲೆಯಲ್ಲಿ ಜಾರುವ ಮಣ್ಣು ದಾರಿಯಲ್ಲಿ ತುದಿಗಾಲಿನಲ್ಲಿ ಓಡುತ್ತಾ ಮನೆ ಸೇರಲು ಹೋದ ಜೀವ ಬಂದಂತಾಯ್ತು. ಮನೆಗೆ ಬಂದೊಡನೆ ಚಿಕ್ಕಪ್ಪನನ್ನು ಕರೆದು ಗುಡ್ಡದ ಕಡೆ ತೋರಿಸುತ್ತಾ ಆ ದೆವ್ವದ ದ್ವನಿಯನ್ನು ಆಲಿಸಲು ಹೇಳಿದೆ. ಅವರು ಆಲಿಸಿ ಅದು ಕಾಡು ಕುರಿ ಕೂಗುತ್ತಿರುವುದೆಂದು ಹೇಳಿದರು! “ಹಡ್ಬೇ ಕುರಿ” ಎಂದು ಮನಸ್ಸಿನಲ್ಲಿಯೇ ಆ ಪಾಪದ ಕಾಡು ಪ್ರಾಣಿಗೆ ಬೈಯ್ಯುತ್ತಾ ಕಾಲಿಗೆ ಹತ್ತಿದ್ದ ಇಂಬಳಗಳನ್ನು ತೆಗೆಯಲು ಬಚ್ಚಲು ಒಲೆಯ ಕಡೆ ಹೋದೆ.
ಅನಂತರ ಹೆಣ್ಣು ದೆವ್ವವಾಗಿ ಹೆದರಿಸಿದ ಈ ಪ್ರಾಣಿಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಶುರು ಮಾಡಿದಾಗ, ಬಾರ‍್ಕಿಂಗ್ ಡೀರ್ (Barking deer) ಎಂದು ಇಂಗ್ಲೀಶಿನಲ್ಲಿ ಕರೆಯುತ್ತಾರೆ ಎಂದು ತಿಳಿಯಿತು. ಮಲೆನಾಡಿನಲ್ಲಿ ಇದನ್ನು ಕಾಡು ಕುರಿ/ಕಾನು ಕುರಿ ಎಂದು ಕರೆಯುತ್ತಾರೆ. ಇದು ಸೆರ್‍ವಿಡೆ (Cervidae) ಕುಟುಂಬಕ್ಕೆ ಸೇರಿದೆ ಮತ್ತು ಇದರ ವೈಜ್ನಾನಿಕ ಹೆಸರು ಮುಂಟಿಯಾಕಸ್ ಮುಂಟ್ಜಕ್ (Muntiacus muntjak). ಇವುಗಳು ತಮ್ಮ ವಿಶಿಶ್ಟ ಬಗೆಯ ಕೂಗಿನಿಂದಲೇ ಹೆಸರುವಾಸಿಯಾಗಿವೆ. ಬೆದೆಗೆ ಬಂದ ಸಮಯದಲ್ಲಿ ಮತ್ತು ಬೇಟೆಗಾರ ಪ್ರಾಣಿಗಳು ಸುತ್ತಮುತ್ತ ಇರುವ ಸೂಚನೆ ಕಂಡುಬಂದಾಗ ಈ ರೀತಿ ಕೂಗುತ್ತವೆ. ಈ ಕೂಗು ಕಾಡಿನ ಇತರೆ ಪ್ರಾಣಿಗಳಿಗೆ ಎಚ್ಚರಿಕೆ ಗಂಟೆ ಕೂಡ!
ಇವುಗಳ ಇನ್ನೊಂದು ವೈಶಿಶ್ಟತೆ ಏನೆಂದರೆ ಇವುಗಳ ಕಣ್ಣಿನ ಕೆಳಗೆ ಇರುವ ಒಂದು ಗ್ರಂತಿ. ಈ ಗ್ರಂತಿಯಿಂದ ಒಂದು ಸುವಾಸನೆಯುಕ್ತ ರಸವನ್ನು ಹೊರಹಾಕುವ ಇವು ತಮ್ಮ ಮುಕವನ್ನು ಮರಗಳಿಗೆ ಉಜ್ಜಿ ತಮ್ಮ ಪ್ರದೇಶವನ್ನು ಗುರುತು ಮಾಡುತ್ತವೆ. ಚಂಗನೆ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹಾರಿ ಓಡುವ ಇವು ಹೆಚ್ಚಾಗಿ ಒಂಟಿಯಾಗಿಯೇ ಕಾಣಸಿಗುತ್ತವೆ. ಇವು ಅನೇಕ ಬಗೆಯ ಗಿಡ, ತೊಗಟೆ, ಹಣ್ಣು, ಹಕ್ಕಿಯ ಮೊಟ್ಟೆ, ಸಣ್ಣ ಪ್ರಾಣಿಗಳು ಮುಂತಾದವನ್ನು ತಿಂದು ಬದುಕುತ್ತವೆ. ನೋಡಲು ಬಹುತೇಕ ಜಿಂಕೆಯ ರೀತಿಯೇ ಇರುತ್ತವೆ. ಗಂಡು ಕುರಿಗಳ ನಡುವೆ ಹೆಣ್ಣಿಗಾಗಿ ಮತ್ತು ಅವುಗಳ ಪ್ರದೇಶಕ್ಕಾಗಿ ಕಾಳಗ ನಡೆಯುತ್ತದೆ. ಗಂಡಿಗೆ ಕೋಡು ಇರುತ್ತದೆ ಮತ್ತು ಹೆಣ್ಣಿಗೆ ಇರುವುದಿಲ್ಲ. ಸಾಮಾನ್ಯವಾಗಿ ಒಂದು ಮರಿ ಹಾಕುತ್ತವೆ. ಅಪರೂಪಕ್ಕೆ ಎರಡು ಮರಿಗಳೂ ಹಾಕಬಹುದು. ಇವುಗಳ ಕಾಡುಬೇಟೆ ಕೂಡ ಮಲೆನಾಡಿನಲ್ಲಿ ಯತೇಚ್ಚವಾಗಿ ನಡೆಯುತ್ತಿದೆ. ಈ ವಿಶಿಶ್ಟ ಬಗೆಯ ಪ್ರಾಣಿಗಳು ನಮ್ಮ ಮಲೆನಾಡಿನ ಕಾಡುಗಳಿಗೆ ಕಿರೀಟವಿದ್ದಂತೆ. ಇವುಗಳ ಸಂತತಿ ಇನ್ನೂ ಹೆಚ್ಚಾಗಲಿ. ಅಂದಹಾಗೆ ನೀವು ಮಲೆನಾಡಿಗೆ ಬಂದಾಗ ಕಾಡಿನಲ್ಲಿ ‘ಹೆದರಿಸುವ ದೆವ್ವ’ ಇದೇ ಆಗಿರಬಹುದು, ಹೆದರದಿರಿ!
(ಚಿತ್ರಸೆಲೆ : pixabay.com)
ಇತ್ತೀಚಿನ ಅನಿಸಿಕೆಗಳು