ಮಕ್ಕಳ ಕವಿತೆ: ಗುಟುಕು
– ವೆಂಕಟೇಶ ಚಾಗಿ.
ಹಸಿರಿನ ಗಿಡದಲಿ ಹಕ್ಕಿಯ ಮರಿಗಳು
ಚಿಂವ್ ಚಿಂವ್ ಎನ್ನುತಿವೆ
ಹಸಿವನು ನೀಗಲು ತಾಯಿ ಹಕ್ಕಿಯು
ಅಕ್ಕಿಯ ಹುಡುಕುತಿದೆ
ಬೆಟ್ಟದ ಕೆಳಗಿನ ವಿಶಾಲ ಗದ್ದೆಯ
ಬತ್ತವು ಕರೆಯುತಿದೆ
ಹಕ್ಕಿಯು ಹಾರಿ ಕೆಳಗಡೆ ಬಂದು
ಕೊಕ್ಕಲಿ ಅಕ್ಕಿಯ ಒಯ್ಯುತಿದೆ
ತಾಯಿ ಹಕ್ಕಿಯು ಬರುವ ಸುಳಿವಿಗೆ
ಕೂಗಿವೆ ಹಕ್ಕಿಯ ಮರಿಗಳು
ಬಾಯಿಯ ತೆರೆದು ಗುಟುಕನು ಪಡೆಯಲು
ಕುಣಿದಿವೆ ಪುಟಾಣಿ ಮರಿಗಳು
ಮರಿಗಳಿಗೆಲ್ಲ ಗುಟುಕನು ನೀಡಿ
ಹಕ್ಕಿಯು ನಲಿದಿದೆ ಕುಶಿಯಲ್ಲಿ
ರೆಕ್ಕೆಯ ಚಾಚಿ ಬೆಚ್ಚನೆ ಗೂಡಲಿ
ಹಕ್ಕಿಯು ಮುಳುಗಿತು ಕನಸಲ್ಲಿ
ಹಕ್ಕಿಯ ಮರಿಗಳು ಅಕ್ಕಿಯ ತಿಂದು
ಕುಶಿಯಲ್ಲಿ ಹಾಡುತ ನಲಿಯುತಿವೆ
ಹಗಲು ಕಳೆದು ಇರುಳು ಬರಲು
ಚಂದ್ರನ ಗೂಡಿಗೆ ಕರೆಯುತಿವೆ
(ಚಿತ್ರ ಸೆಲೆ: wikimedia.org)
ಇತ್ತೀಚಿನ ಅನಿಸಿಕೆಗಳು