ನಾವೇಕೆ ಬಯ್ಯುತ್ತೇವೆ ? – 13ನೆಯ ಕಂತು

ಸಿ.ಪಿ.ನಾಗರಾಜ.

(ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು)

ಬಯ್ಗುಳದ ಬಗೆಗಿನ ಸಾಮಾಜಿಕ ನಿಲುವು

ಬಯ್ಗುಳದ ನುಡಿಗಳನ್ನು ಕೇಳಲು ಎಲ್ಲಾ ಜಾತಿ, ಮತ ಮತ್ತು ವರ‍್ಗದ ಜನರು ಸಾಮಾನ್ಯವಾಗಿ ಹಿಂಜರಿಯುತ್ತಾರೆ. ‘ ಬಯ್ಗುಳ ’ ಎಂದ ಕೂಡಲೇ “ ಅದನ್ನು ಕೇಳಲು ಅಸಹ್ಯವಾಗಿರುತ್ತದೆ ಮತ್ತು ಅಶ್ಲೀಲವಾಗಿರುತ್ತದೆ ” ಎಂಬ ನಿಲುವು ಎಲ್ಲರಲ್ಲಿಯೂ ಇದೆ. ಅತಿ ಹೆಚ್ಚಾಗಿ ಬಯ್ಗುಳವನ್ನು ಆಡುವ ವ್ಯಕ್ತಿಯ ಬಗೆಗಂತೂ ಅತ್ಯಂತ ತಿರಸ್ಕಾರವಿರುತ್ತದೆ. ಮಾತಿನಲ್ಲಿ ಹೆಚ್ಚಾಗಿ ಬಯ್ಗುಳದ ಪದಗಳನ್ನು ಆಡುವ ವ್ಯಕ್ತಿಯನ್ನು ‘ಹೊಲಸು ಬಾಯಿ ನನ್ಮಗ / ಹೊಲಸು ಬಾಯಿ ಮುಂಡೆ’ ಎಂದು ಜನರು ಕರೆಯುತ್ತಾರೆ.

ತಮ್ಮ ಮಕ್ಕಳಿಗೆ ನೆರೆಹೊರೆಯವರು ಇಲ್ಲವೇ ಅನ್ಯರು ಬಯ್ದಾಗ, ಅಂತಹ ಸಮಯದಲ್ಲಿ ಆ ಮಕ್ಕಳ ತಂದೆತಾಯಿಗಳು ತುಂಬಾ ನೊಂದುಕೊಂಡು, ಬಯ್ದವರೊಡನೆ ಜಗಳಕ್ಕೆ ನಿಲ್ಲುತ್ತಾರೆ. “ ನಮ್ಮ ಹುಡುಗ/ಹುಡುಗಿ ತಪ್ಪು ಮಾಡಿದ್ರೆ ಚೆನ್ನಾಗಿ ನಾಲ್ಕೇಟು ಬಾರಿಸಬೇಕಾಗಿತ್ತು. ನಿಮ್ಮನ್ನು ಯಾರು ತಡೀತಿದ್ದೋರು. ಆದರೆ ಹಿಂಗೆಲ್ಲಾ ಬಾಯಿಗೆ ಬಂದಂಗೆ ಬಯ್ದು ಕಳಿಸಿದ್ದೀರಲ್ಲ, ಇದು ಸರಿಯೇ?” ಎಂದು ಬಯ್ದವರನ್ನು ಪ್ರಶ್ನಿಸುತ್ತಾರೆ. ಮಯ್ ಮೇಲೆ ಬೀಳುವ ಏಟಿಗಿಂತಲೂ ಬಯ್ಗುಳದ ನುಡಿಗಳ ಮೂಲಕ ಮನಸ್ಸಿಗೆ ಆಗುವ ಪೆಟ್ಟು ದೊಡ್ಡದೆಂಬ ನಿಲುವು ಈ ಮಾತುಗಳಲ್ಲಿ ಕಂಡು ಬರುತ್ತದೆ.

ಈ ಕೆಳಕಂಡ ಗಾದೆಗಳಲ್ಲಿ ಕಂಡು ಬರುವ ಮಾತುಗಳು ಬಯ್ಗುಳದ ಬಗ್ಗೆ ಜನಮನದಲ್ಲಿರುವ ಮತ್ತೊಂದು ಬಗೆಯ ನಿಲುವನ್ನು ಸೂಚಿಸುತ್ತದೆ.

1. ಬಯ್ದು ಹೇಳ್ದೋರು ಉದ್ದಾರ ಆಗೋಕೆ ಹೇಳುದ್ರು
ನಗ್ತಾ ಹೇಳ್ದೋರು ಹಾಳಾಗೋಕೆ ಹೇಳುದ್ರು.

2. ಬಯ್ದೋರು ಬುದ್ದಿ ಹೇಳುದ್ರಂತೆ
ನಗಿಸಿದೋರು ಹದಗೆಡಿಸಿದರಂತೆ.

3. ಬಯ್ದು ಹೇಳಿದಾವ ಬುದ್ದಿ ಹೇಳಿದ
ನಕ್ಕು ಹೇಳಿದಾವ ಕೆಡುಕು ಹೇಳಿದ.

ಬಯ್ಯುವಿಕೆಯಿಂದ ಹಾನಿಯಾಗುತ್ತದೆ ಎಂಬ ನಿಲುವಿಗಿಂತ ಬೇರೆಯಾದ ನಿಲುವನ್ನು ಈ ಗಾದೆಗಳಲ್ಲಿ ನಾವು ಕಾಣಬಹುದು. ಸಕಾಲದಲ್ಲಿ, ಸಕಾರಣಕ್ಕಾಗಿ, ಸದುದ್ದೇಶದಿಂದ ಬಯ್ಯುವುದರಿಂದ “ ತಪ್ಪು ಮಾಡಲು ತೊಡಗಿರುವ ವ್ಯಕ್ತಿಗಳನ್ನು ಅಲ್ಲಲ್ಲೇ ತಿದ್ದಿ ಸರಿಪಡಿಸಿ, ಅವರು ಜೀವನದಲ್ಲಿ ಒಳ್ಳೆಯ ನಡೆನುಡಿಗಳನ್ನು ಅಳವಡಿಸಿಕೊಂಡು ಬಾಳಲು ಅಗತ್ಯವಾದ ಎಚ್ಚರಿಕೆಯನ್ನು ಮತ್ತು ತಿಳುವಳಿಕೆಯನ್ನು ನೀಡಬಹುದು” ಎಂಬ ಸಂಗತಿಯನ್ನು ಈ ಗಾದೆಗಳು ಸೂಚಿಸುತ್ತಿವೆ.

ಬಯ್ಗುಳದ ಬಗೆಗಿನ ನಂಬಿಕೆಗಳು:

1. ಅನ್ಯರ ಕಯ್ಯಲ್ಲಿ ಬಯ್ಯಿಸಿಕೊಳ್ಳುವುದರಿಂದ ನಮಗೆ ಒಳ್ಳೆಯದಾಗುತ್ತದೆ. ಇತರರು ನಮ್ಮನ್ನು ಹೆಚ್ಚು ಹೆಚ್ಚು ಬಯ್ದಂತೆಲ್ಲಾ, ನಾವು ಮಾಡಿರುವ ಪಾಪ ಅವರಿಗೆ ಹೋಗಿ, ಅವರು ಮಾಡಿರುವ ಪುಣ್ಯ ನಮಗೆ ಬರುತ್ತದೆ.

2. ನಮ್ಮ ಜೀವನದಲ್ಲಿ ಪದೇ ಪದೇ ನಾನಾ ಬಗೆಯ ಸಂಕಟ ಮತ್ತು ಹಾನಿ ಉಂಟಾಗುತ್ತಿದ್ದರೆ, ಅದರಿಂದ ಪಾರಾಗಲು ನಾವು ಯಾರಿಂದಲಾದರೂ ಬಯ್ಯಿಸಿಕೊಳ್ಳಬೇಕು. ಈ ರೀತಿ ಬಯ್ಯಿಸಿಕೊಂಡರೆ ನಮ್ಮ ಜೀವನದಲ್ಲಿನ ಕೆಟ್ಟದ್ದು ತೊಲಗಿ ಒಳ್ಳೆಯದು ಬರುತ್ತದೆ.

ಈ ಮೇಲ್ಕಂಡ ನಂಬಿಕೆಗಳು ಜನಸಮುದಾಯದಲ್ಲಿರುವುದು ಕಂಡುಬರುತ್ತದೆ. ಈ ನಂಬಿಕೆಗಳೇ ಮುಂದುವರಿದು ಕೆಲವು ಸಂಪ್ರದಾಯಗಳಾಗಿ ಸಾಮಾಜಿಕ ಆಚರಣೆಯಲ್ಲಿ ಕಳೆದ 50 ವರುಶಗಳ ವರೆಗೂ ಇದ್ದುವು ಎಂದು ಹಳ್ಳಿಗಳಲ್ಲಿನ ಹಿರಿಯರು ಹೇಳುತ್ತಾರೆ.

ಮಂಡ್ಯ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಯುಗಾದಿ ಹಬ್ಬದ ಮಾರನೆಯ ದಿನವನ್ನು ‘ ವರುಶ ತೊಡಕು ‘ ಎಂದು ಕರೆಯುತ್ತಾರೆ. ಅಂದಿನ ದಿನದ ರಾತ್ರಿ ಊರಿನ ತರುಣರು ಮತ್ತು ಚಿಕ್ಕ ಹುಡುಗರು ಗುಂಪುಗುಂಪಾಗಿ ಜತೆಗೂಡಿ ಊರಿನ ದಾರಿಯಲ್ಲಿ ಸಾಗುತ್ತ ಮನೆಗಳ ಮೇಲೆ ಕಲ್ಲುಗಳನ್ನು ಎಸೆಯುತ್ತಿದ್ದರು. ಈ ರೀತಿ ಕಲ್ಲನ್ನು ಹೊಡೆಸಿಕೊಂಡ ಮನೆಯವರು ಬಯ್ಯತೊಡಗಿದಾಗ, ಅಲ್ಲೇ ಅಕ್ಕಪಕ್ಕದಲ್ಲಿ ಕತ್ತಲೆಯ ಎಡೆಗಳಲ್ಲಿ ನಿಂತುಕೊಂಡಿರುವ ಈ ಗುಂಪಿನ ಮಂದಿ “ ಹಬ್ಬದ ದಿನ ಚೆನ್ನಾಗಿ ಬಯ್ಸಿಕೊಂಡೆವು. ಇನ್ನು ವರುಶ ಪೂರ‍್ತಾ ನಮಗೆ ಒಳ್ಳೆಯದಾಗುತ್ತದೆ “ ಎಂಬ ನಂಬಿಕೆಯಿಂದ ಕೇಕೆ ಹಾಕುತ್ತ ಆನಂದಪಡುತ್ತಿದ್ದರು. ಕೆಲವು ಗ್ರಾಮಗಳಲ್ಲಿ ಕಲ್ಲುಗಳನ್ನು ಎಸೆಯುವ ಬದಲು ಹುಣಿಸೆ ಬೀಜಗಳನ್ನು ಎಸೆಯುವ ಆಚರಣೆಯಿತ್ತು. ಈ ಬಗ್ಗೆ ಇಂತಹ ಕ್ರಿಯೆಗಳಲ್ಲಿ ಪಾಲ್ಗೊಂಡಿದ್ದ ಹಳ್ಳಿಗರನ್ನು ಪ್ರಶ್ನಿಸಿದಾಗ, ಅವರು ನೀಡಿದ ಉತ್ತರಗಳು ಈ ಕೆಳಕಂಡಂತಿವೆ.

1. “ ಹಿಂದಿನಿಂದಲೂ ಈ ರೀತಿ ಮಾಡ್ಕೊಂಡು ಬಂದಿದ್ರು. ಅದಕ್ಕೆ ನಾವು ಮಾಡ್ತಿದ್ದೊ.”

2. ನಗ್ಸಕ್ಕೆ (ಹಾಸ್ಯ/ವಿನೋದ) ಈ ರೀತಿ ಮಾಡ್ತಿದ್ದೊ. ಇನ್ನೇನು ಇಲ್ಲ.”

3. “ ವರುಶಕ್ಕೆ ಒಂದ್ ಸತಿನಾದ್ರು ಬೇರೆಯವರ ಕೈಲಿ ಬಯ್ಯಿಸಿಕೊಂಡ್ರೆ ಒಳ್ಳೇದಾಗುತ್ತೆ. ಅದಕ್ಕೆ ಹಿಂಗೆ ಮಾಡ್ತಿದ್ದೊ.”

ಹಳ್ಳಿಗಳಲ್ಲಿರುವ ಎಲ್ಲಾ ಜಾತಿಯವರು ಇಂತಹ ಕ್ರಿಯೆಗಳಲ್ಲಿ ಮೊದಲು ಪಾಲ್ಗೊಳ್ಳುತ್ತಿದ್ದರಂತೆ. ಇತ್ತೀಚೆಗೆ ಜನರು ವಿದ್ಯಾವಂತರಾದಂತೆಲ್ಲಾ ಈ ಸಂಪ್ರದಾಯ ಸಂಪೂರ‍್ಣವಾಗಿ ನಿಂತುಹೋಗಿದೆ.

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಂಡುಬರುವ ಒಂದು ಸಂಪ್ರದಾಯವನ್ನು ಬಸವರಾಜ ನೆಲ್ಲಿಸರ(1979) ಅವರು ತಮ್ಮ ಬರಹವೊಂದರಲ್ಲಿ ದಾಕಲಿಸಿದ್ದಾರೆ.

“ ಗೌರಿ ಹಬ್ಬದಲ್ಲಿ ಒಂದು ವೈಶಿಷ್ಟ್ಯವಿದೆ. ಏನೆಂದರೆ , ಚೌತಿ ಚಂದ್ರನನ್ನು ನೋಡಬಾರದು. ನೋಡಿದರೆ ಏನಾದರೂ ಕೆಡುಕಾಗುತ್ತದೆ ಎಂಬ ನಂಬಿಕೆಯಿದೆ. ಆದರೂ ಅಪ್ಪಿ ತಪ್ಪಿ ನೋಡಿದರೆ, ಬೇರೊಬ್ಬರ ಹತ್ತಿರ ಬೈಸಿಕೊಳ್ಳಬೇಕಂತೆ. ಅದಕ್ಕಾಗಿ ಅವರು ಕುಂಬಳಕಾಯಿ ಒಡೆದು, ಅದರಲ್ಲಿ ಪಾಯಿಕಾನಿ ಮಾಡಿ ಯಾರದಾದರೂ ಮನೆಯ ಅಂಗಳದಲ್ಲಿಟ್ಟು ಬರುತ್ತಾರೆ. ಬೆಳಗ್ಗೆ ಎದ್ದು ನೋಡಿದ ಆ ಮನೆಯವರು “ ಯಾವ ಮುಂಡೆಗಂಡ ಹಿಂಗೆ ಹೇತು ಹೋಗಿದ್ದಾನೋ, ಅವನಿಗೇನು ಅಮ್ಮನ ಜಡ ಹಿಡಿದಿತ್ತಾ “ ಎಂದು ಬೈಯುತ್ತಾರೆ. ಆಗ ಅವರ ಕಷ್ಟ ಪರಿಹಾರವಾಗುತ್ತದೆಯಂತೆ. ಈ ಸಂಪ್ರದಾಯ ಇಂದಿಗೂ ಉಂಟು.”

ಜೇಮ್ಸ್ ಪ್ರೇಜರ‍್ (1976) ಅವರು ಸಂಪಾದಿಸಿರುವ “ ದಿ ಗೋಲ್ಡನ್ ಬೋ “ ಪುಸ್ತಕದಲ್ಲಿ ಬಯ್ಗುಳದ ಸಂಪ್ರದಾಯಗಳ ಬಗ್ಗೆ ವಿವರಿಸಿರುವ ಕೆಲವು ಸಂಗತಿಗಳು ಈ ಕೆಳಕಂಡಂತಿವೆ.

1. ಇಂಡಿಯಾ ದೇಶದ ಬಿಹಾರ ರಾಜ್ಯದಲ್ಲಿನ ಜನರು ಅನ್ಯರಿಂದ ಬಯ್ಗುಳಗಳನ್ನು ಕೇಳುವುದರಿಂದ ತಮ್ಮ ಪಾಲಿಗೆ ಒಳ್ಳೆಯದಾಗುತ್ತದೆ ಎಂದು ನಂಬಿದ್ದಾರೆ. ಮದುವೆಯ ಗಂಡನ್ನು ಮೆರವಣಿಗೆಯ ಮೂಲಕ ಕರೆದುಕೊಂಡು ಹೋಗುತ್ತಿರುವ ದಿಬ್ಬಣವು ಹೆಣ್ಣಿನ ಮನೆಗೆ ಬಳಿಗೆ ಬಂದಾಗ, ಅಲ್ಲಿ ಹೆಣ್ಣಿನ ಕುಟುಂಬಕ್ಕೆ ಸೇರಿದ ಒಬ್ಬ ಹೆಂಗಸು ಅತ್ಯಂತ ಕೆಟ್ಟ ಬಯ್ಗುಳಗಳಿಂದ ಅಲ್ಲಿದ್ದ ಜನರನ್ನು ಬಯ್ಯುತ್ತಿದ್ದರೆ , ಮದುವೆಯಾಗಲಿರುವ ಮದುಮಕ್ಕಳ ಮುಂದಿನ ಜೀವನದಲ್ಲಿ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯು ಜನಮನದಲ್ಲಿದೆ.

2. ಬಿಹಾರದಲ್ಲಿ ನಡೆಯುವ ಹಬ್ಬವೊಂದರ ಸಮಯದಲ್ಲಿ ತಮ್ಮ ಸೋದರಿಯರಿಂದ ಸೋದರರು ಚೆನ್ನಾಗಿ ಬಯ್ಯಿಸಿಕೊಂಡರೆ, ಅದರಿಂದ ಸೋದರರ ವಯಸ್ಸು ಹೆಚ್ಚಾಗಿ, ಜೀವನದ ಉದ್ದಕ್ಕೂ ಒಳಿತಾಗುವುದೆಂಬ ನಂಬಿಕೆಯಿದೆ.

3. ಬಂಗಾಳ ರಾಜ್ಯದ ಬರ‍್ಬಮ್ ಜಿಲ್ಲೆಯ ದುಬ್ ರಾಜಪುರ ಎಂಬ ಗ್ರಾಮದಲ್ಲಿ ಮಳೆಯಿಲ್ಲದೆ ಅತಿ ದೊಡ್ಡ ಬರಗಾಲ ಬಂದ ಕಾಲದಲ್ಲಿ ಜನರು ಕೆಸರು, ಕಸ, ಮಲ ಮುಂತಾದ ಹೊಲಸಾದ ವಸ್ತುಗಳನ್ನು ಅಕ್ಕಪಕ್ಕದ ಮನೆಗಳ ಮೇಲೆ ಎಸೆಯುತ್ತಾರೆ ಮತ್ತು ಆ ಗ್ರಾಮದಲ್ಲಿನ ಕುರುಡರು, ಕುಂಟರು ಮತ್ತು ಹೆಳವರ ಮೇಲೆ ನೀರನ್ನು ಎರಚಿ ಅವರನ್ನು ಸಂಪೂರ‍್ಣವಾಗಿ ಒದ್ದೆ ಮಾಡುತ್ತಾರೆ. ಇಂತಹ ಕ್ರಿಯೆಗಳಿಂದ ನೊಂದ ಜನರು ಮನೆಯ ಮೇಲೆ ಹೊಲಸನ್ನು ಅತವಾ ತಮ್ಮ ಮೇಲೆ ನೀರನ್ನು ಎರಚಿದ ಜನರನ್ನು ಕುರಿತು ಬಯ್ಗುಳಗಳಿಂದ ನಿಂದಿಸತೊಡಗಿದಾಗ ಮಳೆ ಸುರಿಯುತ್ತದೆ ಎಂಬ ನಂಬಿಕೆಯಿದೆ.

4. ಪಂಜಾಬು ರಾಜ್ಯದ ಶಹಾಪುರ ಜಿಲ್ಲೆಯಲ್ಲಿ ಬರಗಾಲ ಬಂದಾಗ ಆಚರಿಸುವ ಮತ್ತೊಂದು ಬಗೆಯ ಸಂಪ್ರದಾಯವಿದೆ. ಅದೇನೆಂದರೆ ಮಲ ಇಲ್ಲವೇ ಹೊಲಸು ತುಂಬಿದ ಮಡಕೆಯೊಂದನ್ನು ಬಹಳ ಗಯ್ಯಾಳಿಯಾದ ಹೆಂಗಸಿನ ಮನೆಯ ಹೊಸ್ತಿಲಲ್ಲಿ ಚೆಲ್ಲಿ ಹೋದರೆ, ಆಕೆ ಅದನ್ನು ಕಂಡು ಹೀನಾಮಾನವಾಗಿ ಬಯ್ಗುಳದ ನುಡಿಗಳ ಮೂಲಕ ತನ್ನ ಉದ್ರಿಕ್ತ ಬಾವನೆಗಳನ್ನು ಕಾರತೊಡಗುತ್ತಾಳೆ. ಒಂದೇ ಸಮನೆ ಎಡೆಬಿಡದೆ ಹೊರಹೊಮ್ಮುತ್ತಿರುವ ಅವಳ ಬಯ್ಗುಳದ ನುಡಿಗಳ ಅಬ್ಬರದ ದನಿಯು ಮುಗಿಲಿನಲ್ಲಿರುವ ಮಳೆಯ ಮೋಡಗಳಿಗೆ ಬಡಿದು ಮಳೆ ಬರುವಂತೆ ಮಾಡುತ್ತದೆ ಎಂಬ ನಂಬಿಕೆಯಿದೆ.

5. ಕೊಚ್ಚಿನ್ ರಾಜ್ಯದ ಕ್ರಾಂಗನೂರು ಎಂಬ ಊರಿನಲ್ಲಿ ದೇವಿ ಬಗವತಿಯ ದೇವಾಲಯವಿದೆ. ಪ್ರತಿ ವರುಶ ಮಾರ‍್ಚಿ-ಏಪ್ರಿಲ್ ತಿಂಗಳಿನಲ್ಲಿ ಇಲ್ಲಿ ನಡೆಯುವ ದೇವಿಯ ಉತ್ಸವಕ್ಕೆ ಕೊಚ್ಚಿನ್, ಮಲಬಾರ‍್ ಮತ್ತು ಟ್ರಾವಂಕೂರ‍್ ಮುಂತಾದ ಕಡೆಗಳಿಂದ ದೇವಿಯನ್ನು ಪೂಜಿಸುವ ಜನರು “ ಮಾರ‍್ಚ್….ಮಾರ‍್ಚ್ “ ಎಂದು ದೊಡ್ಡ ದನಿಯಲ್ಲಿ ಜಪಿಸುತ್ತ ಗುಂಪು ಗುಂಪಾಗಿ ಆಗಮಿಸುತ್ತಾರೆ. ದೇವಿ ಬಗವತಿ ದೇಗುಲದ ಮೇಲೆ ಕಲ್ಲುಗಳನ್ನು ತೂರುತ್ತಾ, ಹೊಲಸಾದ ವಸ್ತುಗಳನ್ನು ಎಸೆಯುತ್ತಾ, ದೇವಿಯನ್ನು ಕುರಿತು ಬಯ್ಗುಳದ ನುಡಿಗಳನ್ನಾಡುತ್ತ, ತಮ್ಮ ಬಕ್ತಿಯನ್ನು ನಿವೇದಿಸಿಕೊಳ್ಳುತ್ತಾರೆ. ಈ ಬಗೆಯ ಆಚರಣೆಯು ದೇವಿ ಬಗವತಿಗೆ ಪ್ರಿಯವೆಂದು ಜನರು ನಂಬಿದ್ದಾರೆ. ಇಂತಹ ಆಚರಣೆಯಿಂದ ದೇವಿಯ ಅನುಗ್ರಹ ದೊರೆತು, ಮುಂಬರಲಿರುವ ವರುಶದಲ್ಲಿ ತಮಗೆ ಯಾವುದೇ ಬಗೆಯ ರೋಗದ ಸೋಂಕು ತಟ್ಟುವುದಿಲ್ಲವೆಂಬ ನಂಬಿಕೆಯು ಜನಮನದಲ್ಲಿದೆ.

ಹೀಗೆ ಬಯ್ಗುಳದ ಬಗೆಗಿನ ಹತ್ತಾರು ನಂಬಿಕೆಗಳು ಮತ್ತು ಸಂಪ್ರದಾಯಗಳು ಜಗತ್ತಿನ ಉದ್ದಗಲದಲ್ಲಿರುವ ಎಲ್ಲಾ ಸಮಾಜಗಳಲ್ಲೂ ನಮಗೆ ದೊರಕುತ್ತವೆ.

( ಚಿತ್ರ ಸೆಲೆ: learnitaliango.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks