ಚಳ್ಳೆ ಹಣ್ಣು ಮತ್ತು ಇದರ ಹಲವು ಬಳಕೆಗಳು
– ಕೆ.ವಿ.ಶಶಿದರ.
“ಪೋಲೀಸರಿಗೆ ಚಳ್ಳೇ ಹಣ್ಣು ತಿನ್ನಿಸಿ ಪರಾರಿಯಾದ” ಈ ಮಾತನ್ನು ಕೇಳದವರೇ ಇಲ್ಲ. ಮುದ್ರಣ ಮಾದ್ಯಮದಲ್ಲಿ, ದ್ರುಶ್ಯ ಮಾದ್ಯಮದಲ್ಲಿ ಇದು ಸಾಕಶ್ಟು ಪ್ರಚಲಿತ. ಪೋಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳರು, ಉಪಾಯದಿಂದ ತಪ್ಪಿಸಿಕೊಂಡಾಗ ಮೇಲಿನ ಪದಪುಂಜವನ್ನು ದಾರಾಳವಾಗಿ ಬಳಸುತ್ತಾರೆ. ಅಂದಹಾಗೆ ಚಳ್ಳೆ ಹಣ್ಣಿಗೂ, ಪೋಲೀಸರ ಕೈಯಿಂದ ಕೈದಿಗಳು ತಪ್ಪಿಸಿಕೊಂಡು ಹೋಗುವುದಕ್ಕೂ ಸಂಬಂದವಾದರು ಏನು? ಚಳ್ಳೆಹಣ್ಣಿನ ಯಾವ ಗುಣ ಈ ಪ್ರಚಲಿತ ನುಡಿಗಟ್ಟಿಗೆ ಸಂಬಂದಿಸಿದೆ ಎಂದು ಹುಡುಕುತ್ತಾ ಹೋದಲ್ಲಿ ನಮಗೆ ನಿರಾಶೆ ಕಟ್ಟಿಟ್ಟ ಬುತ್ತಿ.
ಗೋಲಿಯ ಗಾತ್ರದ ಈ ಹಣ್ಣು ಸಾಮಾನ್ಯವಾಗಿ ಮಲೆನಾಡಿನ ಕಾಡುಗಳಲ್ಲಿನ ಮರದಲ್ಲಿ ಕಂಡುಬರುತ್ತವೆ. ಇದನ್ನು ಬಿಡಿಸಿ ನೋಡಿದರೆ, ಒಳಗೆ ಅಂಟಿನಂತಹ ದ್ರವ ಹಾಗೂ ಚಿಕ್ಕ ಗಾತ್ರದ ಬೀಜ ಕಂಡುಬರುತ್ತದೆ, ಅಂಟಿನಂತಹ ದ್ರವವಿರುವ ಕಾರಣ ಹಣ್ಣನ್ನು ಬಲವಾಗಿ ಒತ್ತಿದರೆ ಅದರಲ್ಲಿನ ಬೀಜ ಪುಟಿದು ಹಾರಿ ಹೋಗುತ್ತದೆ. ಚಿಕ್ಕ ಬೀಜವಾದ ಕಾರಣ ಅದನ್ನು ಹುಡುಕುವ ಪ್ರಯತ್ನ ವಿಪಲವಾಗುತ್ತದೆ. ಬಹುಶಹ ಈ ಒಂದು ಗುಣ ‘ಪೋಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ” ಎಂಬ ನುಡಿಗಟ್ಟಿನ ಚಾಲ್ತಿಗೆ ಒಂದು ಕಾರಣವಿರಬಹುದು.
ಚಳ್ಳೆ ಹಣ್ಣು ಮರದಲ್ಲೇ ಹಣ್ಣಾದರೆ ಅದನ್ನು ಆಸ್ವಾದಿಸಬಹುದು. ಹುಳಿ ಮಿಶ್ರಿತ ಸಿಹಿಯ ರುಚಿ ಇದರ ವಿಶೇಶತೆ. ಆದರೆ ಇದು ಸಿಗುವುದು ಲೋಳೆ ಲೋಳೆಯಂತಿರುವ ರಸದೊಂದಿಗೆ ಮಾತ್ರ. ಇದನ್ನು ಆಸ್ವಾದಿಸಿದರೆ, ಇದರಲ್ಲಿನ ಅಂಟು ತುಟಿ, ಗಂಟಲನ್ನು ಅಂಟುವಂತೆ ಮಾಡುತ್ತದೆ. ಈ ಅಂಟು ದ್ವನಿಯನ್ನು ಏರುಪೇರು ಮಾಡುತ್ತದೆ. ಕಾರ್ಡಿಯಾ ಮೈಕ್ಸಾ ಎಂಬ ಜೈವಿಕ ನಾಮದೇಯವನ್ನು ಹೊಂದಿರುವ ಚಳ್ಳೆ ಹಣ್ಣನ್ನು ಆಡುಬಾಶೆಯಲ್ಲಿ ‘ಗೊಣ್ಣೆ ಹಣ್ಣು’ ಅಂತಲೂ ಗುರುತಿಸುತ್ತಾರೆ. ಹಣ್ಣಿನ ಮೇಲಿನ ಸಿಪ್ಪೆಯನ್ನು ತೆಗೆದರೆ ಅದರಲ್ಲಿ ಅಂಟು ಅಂಟಾದ ಜಿಗುಟಾದ ಲೋಳೆಯಂತಹ ದ್ರವ ಕೈಗೆ ಮೆತ್ತುತ್ತದೆ. ಇದು ಜಾರುವ ಗುಣವನ್ನು ಹೊಂದಿದೆ. ಬಹುಶಹ ಈ ಮತ್ತೊಂದು ಕಾರಣ ಸಹ ಈ ನುಡಿಗಟ್ಟಿನ ಬಳಕೆಗೆ ಕಾರಣವಾಗಿರಬಹುದು.
ಕೋತಿ, ಅಳಿಲು ಮತ್ತು ಹಲವು ಪಕ್ಶಿಗಳಿಗೆ ಅತ್ಯಂತ ಪ್ರಿಯವಾದ ಹಣ್ಣೆಂದರೆ ಅದು ಈ ಚಳ್ಳೆ ಹಣ್ಣು. ಚಳ್ಳೆ ಹಣ್ಣಿನ ಮರದ ವಿಶೇಶವೆಂದರೆ ಇದು ಹಳ್ಳದ ಬದಿಯಲ್ಲಿ, ಪೊದೆ ಗಿಡಗಂಟಿಗಳು ಇರುವಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಗ್ರಾಮೀಣ ಪ್ರದೇಶದ ಜನರು ಚಳ್ಳೆ ಹಣ್ಣಿನ ಉಪಯೋಗವನ್ನು ಬಲ್ಲರು. ಅಡುಗೆ ತಯಾರಿಕೆಯಲ್ಲೂ, ಸಾಂಬಾರಿನ ತಯಾರಿಕೆಯಲ್ಲೂ ಇದನ್ನು ಉಪಯೋಗಿಸುವುದುಂಟು. ಮಾವಿನ ಮಿಡಿಯ ಉಪ್ಪಿನಕಾಯಿಯಂತೆ ಇದರಲ್ಲೂ ಉಪ್ಪಿನಕಾಯಿಯನ್ನು ತಯಾರಿಸಲಾಗುತ್ತದೆ. ಮಾನವನ ದೈಹಿಕ ಆರೋಗ್ಯದ ದ್ರುಶ್ಟಿಯಿಂದ ಇದೊಂದು ಅತ್ಯಂತ ಅಪರೂಪದ ಹಣ್ಣು. ಚಳ್ಳೆ ಹಣ್ಣಿನಲ್ಲಿ ಪ್ರೋಟೀನ್, ಕಬ್ಬಿಣ, ಮೆಗ್ನೀಶಿಯಮ್, ಪೊಟಾಶಿಯಮ್ ಹಾಗೂ ಸುಣ್ಣದ ಅಂಶಗಳು ಯತೇಚ್ಚವಾಗಿವೆ. ಕನಿಜ ಅಂಶಗಳಿಂದ ಕೂಡಿರುವುದರಿಂದ ಇದು ಔಶದೀಯ ಗುಣಕ್ಕೆ ಹೆಸರುವಾಸಿ. ಚಳ್ಳೆ ಹಣ್ಣಿನ ಔಶದೀಯ ಗುಣ ಪ್ರಾಚೀನ ಈಜಿಪ್ಟಿನವರಿಗೂ ತಿಳಿದಿದ್ದ ಬಗ್ಗೆ ಇತಿಹಾಸದಲ್ಲಿ ದಾಕಲೆಗಳಿವೆ. ಚಳ್ಳೆ ಹಣ್ಣಿನ ಮರದಲ್ಲಿ ಮರದ ತೊಗಟೆ, ಎಲೆಗಳು ಮತ್ತು ಹಣ್ಣು ಎಲ್ಲವೂ ಔಶದೀಯ ಗುಣ ಹೊಂದಿದೆ. ಈ ಹಣ್ಣಿನಲ್ಲಿರುವ ಲೋಳೆಯು ಮೂತ್ರವರ್ದಕವಾಗಿದೆ. ವಿಶೇಶವಾಗಿ ಲೋಳೆಯನ್ನು ಹೊಟ್ಟೆ ನೋವು, ಕೆಮ್ಮು ಮತ್ತು ಎದೆ ನೋವಿನ ಉಪಶಮನಕ್ಕೆ ಬಳಸುತ್ತಾರೆ. ಚರ್ಮದ ಮೇಲೆ ಹಚ್ಚುವ ಮುಲಾಮಿನಂತೆ, ಲೋಳೆಯನ್ನು ಉಪಯೋಗಿಸಲಾಗುತ್ತದೆ. ಸಂದಿವಾತ ನೋವಿನ ಉಪಶಮನಕ್ಕೆ ಮತ್ತು ತಾಮರೆಯ ಪರಾವಲಂಬಿ ವಿರೋದಿ ಚಿಕಿತ್ಸೆಗೆ ಇದನ್ನು ಬಳಸಲಾಗುತ್ತದೆ. ಈ ಮರದ ತೊಗಟೆಯಿಂದ ತಯಾರಿಸಲಾದ ರಸವನ್ನು ಜ್ವರದ ಚಿಕಿತ್ಸೆಗಾಗಿ ತೆಗೆದುಕೊಳ್ಳಬಹುದಾಗಿದೆ.
ಮೂಳೆ ಮುರಿತದ ಸಂದರ್ಬದಲ್ಲಿ ತೊಗಟೆಯ ಪುಡಿಯನ್ನು ಲೇಪಿಸಿ ನಂತರ ಪ್ಲಾಸ್ಟರ್ ಹಾಕಿದಲ್ಲಿ, ಬೇಗನೆ ಗುಣಮುಕರಾಗುತ್ತಾರೆ. ಚರ್ಮ ರೋಗದ ಚಿಕಿತ್ಸೆಗಾಗಿ ಸಹ ತೊಗಟೆಯ ಪುಡಿಯನ್ನು ಬಳಸಲಾಗುತ್ತದೆ.
ಇನ್ನು ಈ ಮರದ ಎಲೆಗಳನ್ನು ಗಮನಿಸೋಣ. ಇದರ ಎಲೆಗಳನ್ನು ನೀರಿನಲ್ಲಿ ನೆನೆಸಿ ಮೆದು ಮಾಡಿ ಅದರ ರಸವನ್ನು ತೆಗೆದುಕೊಂಡರೆ, ನಿದ್ರಾಹೀನತೆಯ ಸಮಸ್ಯೆಯಿಂದ ಮುಕ್ತವಾಗಬಹುದು. ಟ್ಸೆಟ್ಸೆ ಎಂಬ ನೊಣ ಕಚ್ಚಿದರೆ, ಆ ಜಾಗ ಅತಿಯಾದ ನೋವಿನಿಂದ ಕೂಡಿರುತ್ತದೆ. ಅದು ಕಚ್ಚಿದ ಜಾಗದಲ್ಲಿ ಕೆಂಪು ಹುಣ್ಣು ಕಾಣಿಸಿಕೊಳ್ಳುತ್ತದೆ. ಜ್ವರ, ತೀವ್ರ ತಲೆನೋವು, ನವೆಯಂತಹ ಕಿರಿಕಿರಿ, ವಿಪರೀತ ಆಯಾಸ, ಊದಿಕೊಂಡ ದುದ್ಗರಸ ಗ್ರಂತಿಗಳು, ಸ್ನಾಯು ಮತ್ತು ಕೀಲು ನೋವುಗಳ ಜೊತೆ ನಿದ್ರಾಹೀನತೆಯೂ ಉಂಟಾಗುತ್ತದೆ. ಚರ್ಮದ ಮೇಲೆ ದದ್ದುಗಳು ಸಹ ಕಾಣಿಸಿಕೊಳ್ಳಬಹುದು. ಚಳ್ಳೆ ಹಣ್ಣಿನ ಮರದ ಎಲೆಯ ರಸವನ್ನು ಟ್ಸೆಟ್ಸೆ ನೊಣ ಕಚ್ಚಿದ ಜಾಗದ ಮೇಲೆ ಲೇಪಿಸಿದರೆ ನೋವು ಶಮನವಾಗುತ್ತದೆ. ಇದೇ ರಸವನ್ನು ಹಣೆಗೆ ಹಚ್ಚಿದರೆ ತಲೆ ನೋವು ಸಹ ನಿವಾರಣೆಯಾಗುತ್ತದೆ.
ಹೀಗೆ ಚಳ್ಳೆ ಹಣ್ಣಿನ ಮರ ಬಹುಪಯೋಗಿಯಾಗಿದೆ. ಇಂತಹ ಮರದ ಬಗ್ಗೆ ಮಾನವ ಹೆಚ್ಚು ಗಮನ ಕೊಡದೆ ಇರುವುದು ಆಶ್ಚರ್ಯವಲ್ಲವೇ? ಈ ಮರ ಈಗ ಅವಸಾನದ ಅಂಚಿಗೆ ತಲುಪುತ್ತಿದೆ ಎನ್ನುತ್ತದೆ ಒಂದು ಅದ್ಯಯನ. ಅತ್ಯಂತ ಉಪಯುಕ್ತ ಹಾಗೂ ಔಶದೀಯ ಗುಣಗಳನ್ನು ಹೊಂದಿರುವ ಚಳ್ಳೆ ಹಣ್ಣಿನ ಮರವನ್ನು ಉಳಿಸಿ ಬೆಳೆಸುವ ಕರ್ತವ್ಯ ಮಾನವನ ಹೆಗಲ ಮೇಲಿದೆ.
( ಮಾಹಿತಿ ಮತ್ತು ಚಿತ್ರಸೆಲೆ: wikipedia.org, nanugauri.com , wikimedia.org )
ಇದರ ಎಲೆಯನ್ನು ತಿನ್ನಬಹುದು … ಇದರ ಎಲೆ ತಿಂದ ಮೇಲೆ ಬಾಯಿ ಕೆಂಪಗಾಗುತ್ತದೆ.