‘ಗೆಲೆಡೆ’ – ಯೊರೂಬಾ ಜನಾಂಗದ ತಾಯಂದಿರ ದಿನ

– .

ಗೆಲೆಡೆ, gelede

ಪ್ರತಿ ವರುಶ ಮೇ ತಿಂಗಳ ಎರಡನೇ ಬಾನುವಾರವನ್ನು ವಿಶ್ವದಾದ್ಯಂತ ತಾಯಂದಿರ ದಿನವನ್ನಾಗಿ ಆಚರಿಸಲಾಗವುದು. ಆಪ್ರಿಕನ್ ದೇಶಗಳು ಸಹ ಇದಕ್ಕೆ ಹೊರತಾಗಿಲ್ಲ. ಅಂದಿನ ದಿನ, ಜನ ತಮ್ಮ ತಾಯಂದಿರಿಗೆ ಉಡುಗೊರೆಗಳನ್ನು ನೀಡಿ, ವರ‍್ಶಗಳ ಕಾಲ ನಿಸ್ವಾರ‍್ತವಾಗಿ ತಮ್ಮ ಬೇಕು ಬೇಡಗಳಿಗೆ ಸ್ಪಂದಿಸಿದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿ ಸಂಬ್ರಮಿಸುತ್ತಾರೆ. ಇದು ತಾಯಿಗೆ ಎಲ್ಲರೂ ಸಲ್ಲಿಸುವ ಅಲ್ಪ ಕ್ರುತಜ್ನತೆ.

ಇದರ ವ್ಯಾಪಕ ಆಚರಣೆ ವಿಶ್ವದಾದ್ಯಂತ ಪ್ರಾರಂಬವಾಗಿದ್ದು ಇತ್ತೀಚೆಗೆ. ಅಂದರೆ 20ನೇ ಶತಮಾನದ ಆದಿ ಬಾಗದಲ್ಲಿ. ಆದರೆ ಇದಕ್ಕಿಂತಲೂ ಬಹಳ ವರ‍್ಶಗಳ ಮುಂಚಿನಿಂದಲೇ ನೈಜೀರಿಯಾದ ನೈರುತ್ಯ ಮತ್ತು ಬೆನಿನ್‌ನ ಆಗ್ನೇಯ ಬಾಗದಲ್ಲಿ ನೆಲೆಸಿರುವ ಯೊರೂಬಾ ಜನರು ತಾಯಂದಿರ ದಿನವನ್ನು ಆಚರಿಸಿಕೊಂಡು ಬಂದಿರುವ ಬಗ್ಗೆ ದಾಕಲೆಗಳಿರುವುದು ಕಂಡು ಬಂದಿದೆ.

ಗೆಲೆಡೆ ಎಂದು ಹೆಸರಾಗಿರುವ ಈ ಆಚರಣೆ ಹತ್ತೊಂಬತ್ತನೇ ಶತಮಾನದ ನಡುವಿನಿಂದ ನಡೆದುಕೊಂಡು ಬಂದಿದೆ. ಮಾರ‍್ಚ್ ಮತ್ತು ಮೇ ತಿಂಗಳ ನಡುವಿನ ಹೊತ್ತಿನಲ್ಲಿ ಯೊರೂಬಾ ಜನರು ಸಂಗೀತ, ನ್ರುತ್ಯ, ಡ್ರಮ್‍ಗಳ ನಾದ ಸೌರಬದಲ್ಲಿ ‘ಗೆಲೆಡೆ’ ಉತ್ಸವವನ್ನು ಆಚರಿಸುತ್ತಾರೆ. ಸ್ತಳೀಯರು ಹೇಳುವಂತೆ ಗೆಲೆಡೆ ಹಬ್ಬವನ್ನು ತಾಯಂದಿರಿಗೆ ಸಮರ‍್ಪಿಸಲಾಗಿದೆ. ಯೆರೂಬಾ ಬಾಶೆಯಲ್ಲಿ ಇದನ್ನು “ಅವಾನ್ ಐಯಾ ವಾ” ಎನ್ನುತ್ತಾರೆ.

ಯೊರುಬಾ ಮಹಿಳೆಗೆ ಜೀವನದ ರಹಸ್ಯ ತಿಳಿದಿರುವ ಕಾರಣ, ಆಕೆ ದೇವರ ಪ್ರತಿರೂಪ. ಮಾನವನ ನೋವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದ್ದಾಳೆ. ಸಾವಿನಿಂದ ಮತ್ತು ಮಾನವನ ಪಲವತ್ತತೆಯನ್ನು ಕಾಪಾಡುವ ದಿವ್ಯ ಶಕ್ತಿ ಆಕೆಗೆ ಇದೆ ಎಂದು ಆ ಜನಾಂಗದವರು ನಂಬಿದ್ದಾರೆ. ಇದೇ ತಾಯಂದಿರ ದಿನವನ್ನು ಆಚರಿಸಲು ಮೂಲ ಕಾರಣ. ಯೊರೂಬಾ ಸಮಾಜದಲ್ಲಿ ಮಹಿಳೆಯರ ಆದ್ಯಾತ್ಮಿಕ ಪಾತ್ರವನ್ನು, ಅದರಲ್ಲೂ ಹಿರಿಯ ಮಹಿಳೆಯರನ್ನು ಬಹಳವಾಗಿ ಗೌರವಿಸುತ್ತಾರೆ ಹಾಗೂ ಅವರಲ್ಲಿ ಅಡಗಿರುವ ಸಹಜ ಶಕ್ತಿಯನ್ನು ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಬಳಸುತ್ತಾರೆ.

ವರ‍್ಶಕ್ಕೊಮ್ಮೆ ನಡೆಯುವ ಈ ಉತ್ಸವ ಪ್ರಾರಂಬವಾಗುವುದು ಹಗಲಿನಲ್ಲಿ, ಎಲ್ಲಾ ಜನ ಬಹುವಾಗಿ ಸೇರುವ ಮಾರುಕಟ್ಟೆ ಪ್ರದೇಶದಲ್ಲಿ, ಅದೂ ಗಾನಗೋಶ್ಟಿಯೊಂದಿಗೆ. ಈ ಉತ್ಸವಕ್ಕಾಗಿ, ಗೆಲೆಡೆ ಮುಕವಾಡಗಳು ಪಟ್ಟಣ ಹಾಗೂ ಹಳ್ಳಿ ಹಳ್ಳಿಗಳಲ್ಲಿ ತಯಾರಾಗಿ ಮಾರುಕಟ್ಟೆ ಪ್ರದೇಶವನ್ನು ತಲುಪಿ ಜೋಡಿಗಳಾಗಿ ನ್ರುತ್ಯ ನಿರ‍್ವಹಿಸುತ್ತವೆ. ಇವೆಲ್ಲಾ ತಾಯಂದಿರ ಹಾಗೂ ಪೂರ‍್ವಜ ಮಹಿಳೆಯರ ಗೌರವಾರ‍್ತ. ಮುಕವಾಡಗಳನ್ನು ದರಿಸಿರುವವರು ಪುರುಶರಾದರೂ, ನ್ರುತ್ಯದಲ್ಲಿ ಅವರುಗಳು ಪುರುಶ ಮತ್ತು ಮಹಿಳೆ ಇಬ್ಬರನ್ನೂ ಪ್ರತಿನಿದಿಸುತ್ತಾರೆ.

ಪುರುಶರು, ಮುಕವಾಡಗಳನ್ನು ವೇಶಬೂಶಣಗಳನ್ನು ದರಿಸಿದರೂ, ಗೆಲೆಡೆ ಮಹಿಳೆಯರ ಶಿರಸ್ತ್ರಾಣಗಳನ್ನು, ಸ್ಕರ‍್ಟ್‍ಗಳು, ಮತ್ತು ಇನ್ನಿತರೆ ಮಹಿಳಾ ಆಬರಣ ವಸ್ತುಗಳನ್ನು ಸಾಮಾನ್ಯವಾಗಿ ದರಿಸುತ್ತಾರೆ. ಸಮಾಜದಲ್ಲಿನ ವಿವಿದ ಪಾತ್ರಗಳನ್ನು, ಅಂದರೆ, ಹದಿಹರೆಯದವರು, ತಾಯಂದಿರು, ಪುರೋಹಿತರು, ಬೇಟೆಗಾರರು, ವ್ಯಾಪಾರಿಗಳು ಹಾಗೂ ಇನ್ನಿತರ ಪಾತ್ರದಾರಿಗಳನ್ನು ಇಲ್ಲಿ ಕಾಣಬಹುದು. ಈ ಗೆಲೆಡೆ ಉತ್ಸವ ಸಾವು, ಕ್ಶಾಮ/ಬರ ಜಲಕ್ಶಾಮ ಮುಂತಾದ ಕಶ್ಟಕರ ಪರಿಸ್ತಿತಿಯಲ್ಲೂ, ನಿಗದಿತ ದಿನವೇ ನಡೆಯುತ್ತದೆ. ಎಂತಹ ಕಶ್ಟದ ಪರಿಸ್ತಿತಿ ಎದುರಾದರೂ ಈ ಉತ್ಸವವನ್ನು ಮುಂದೂಡುವುದಾಗಲಿ, ರದ್ದು ಪಡಿಸುವುದಾಗಲಿ ಮಾಡುವುದಿಲ್ಲ. ಯೊರುಬಾ ಜನಾಂಗದ ಅನೇಕರು ಈ ಅತಿರಂಜಿತ ಸಂಪ್ರದಾಯವನ್ನು ಉಳಿಸಲು, ಬೆಳೆಸಲು ಪಣತೊಟ್ಟಿದ್ದು, ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ.

ಗೆಲೆಡೆ ಉತ್ಸವವನ್ನು, ವಿಶ್ವಸಂಸ್ತೆಯು ಮೌಕಿಕ ಪರಂಪರೆಗಳ ಮೇರು ಕ್ರುತಿಗಳ ಪಟ್ಟಿಯಲ್ಲಿ, ಸೇರಿಸಿ ಅದಕ್ಕೆ ಸೂಕ್ತ ಸ್ತಾನಮಾನಗಳನ್ನು ನೀಡಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: unesco.org, face2faceafrica.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: