ಅಚ್ಚರಿಯ ಬಾನ್ಗಲ್ಲಿನ ಗುಂಡಿಗಳು

– ಪ್ರಶಾಂತ. ಆರ್. ಮುಜಗೊಂಡ.

ಏನಿದು ಬಾನ್ಗಲ್ಲು?

ಬೂಮಿಯ ಮೇಲೆ ಬಾನಿನಿಂದ ಬಂದು ಬೀಳುವ ಕಲ್ಲುಗಳಿಗೆ ಬಾನ್ಗಲ್ಲುಗಳು ಎಂದು ಕರೆಯುತ್ತಾರೆ.
ಅರಿಮೆಗಾರರು ಬಾನಂಗಳದ ಕಲಿಕೆಗಾಗಿ ಬಾನ್ಗಲ್ಲಿನ ನಮೂನೆಯನ್ನೇ ಬಳಸಿ ಸೂರ‍್ಯ, ಗ್ರಹಗಳು ಮತ್ತು ನೇಸರನ ಬಳಗದ [Solar System] ಹುಟ್ಟಿಗೆ ಕಾರಣಗಳನ್ನು ತಿಳಿಯಲು ಅರಕೆ ಮಾಡುತ್ತಾರೆ.

ಬೂಮಿಯ ಮೇಲಿರುವ ಕಲ್ಲುಗಳಿಗೆ ಮತ್ತು ಬಾನಿನಿಂದ ಬಂದು ಬೀಳುವ ಕಲ್ಲುಗಳ ನಡುವೆ ತುಂಬಾ ವ್ಯತ್ಯಾಸಗಳಿವೆ. ಬೂಮಿಯ ಮೇಲಿರುವ ಕಲ್ಲುಗಳಿಗಿಂತ ಬಾನಿನಿಂದ ಬಂದು ಬೀಳುವ ಕಲ್ಲುಗಳು ತುಂಬಾ ಹಳೆಯದಾಗಿದ್ದು, ಬೂಮಿಯ ಬಗೆಗಿನ ಕಲಿಕೆಗೆ ಹೇಗೆ ಬೂಮಿಯ ಮೇಲಿರುವ ಕಲ್ಲುಗಳು ಸಹಾಯವಾಗುತ್ತವೆಯೋ ಹಾಗೆ ಈ ಬಾನ್ಗಲ್ಲುಗಳು ಬಾನಿನಲ್ಲಿರುವ ನಕ್ಸತ್ರಗಳು, ಗ್ರಹಗಳು, ಮತ್ತು ಬಾನಚುಕ್ಕಿ ಇತರೆ ಸಣ್ಣ ಆಕಾಶಕಾಯಗಳ ಕಲಿಕೆಗೆ ನೆರವಾಗುತ್ತವೆ.

ಎಲ್ಲಿಂದ ಬರುತ್ತವೆ ಈ ಬಾನ್ಗಲ್ಲು?

ಬಾನ್ಗಲ್ಲುಗಳು ನಮ್ಮ ನೇಸರನ ಬಳಗದಲ್ಲಿಯೇ ಹುಟ್ಟುತ್ತವೆ. ಕೆಲವು ಮಂಗಳ ಮತ್ತು ಗುರು ಗ್ರಹಗಳ ನಡುವೆ ಇರುವ ಕ್ಶುದ್ರಗ್ರಹಗಳ ಗುಂಪಿನಿಂದ ಬೇರ‍್ಪಟ್ಟು ಸೂರ‍್ಯನ ಸುತ್ತಲಿನ ಕಕ್ಶೆಯಲ್ಲಿ ಹಲವು ವರುಶಗಳು ಸುತ್ತು ಹಾಕಿ ನಂತರ ಅಲ್ಲಿಂದ ಬೇರ‍್ಪಟ್ಟು ಬೂಮಿಯ ಸುತ್ತ ಸುತ್ತುಹಾಕಿ ನಂತರ ಬೂಮಿಗೆ ಬಂದು ಅಪ್ಪಳಿಸುತ್ತವೆ. ಇನ್ನು ಕೆಲವು ಬೇರೆ ಗ್ರಹಗಳಿಂದ ಬೇರ‍್ಪಟ್ಟು ಬೂಮಿಗೆ ಬಂದು ಅಪ್ಪಳಿಸುತ್ತವೆ. ಕೆಲವು ಬಾರಿ ಚಂದ್ರನ ಮೇಲಿರುವ ಬಾನ್ಗಲ್ಲುಗಳು ಕೂಡ ಅಲ್ಲಿಂದ ಬೇರ‍್ಪಟ್ಟು ಬೂಮಿಯತ್ತ ಬಂದಿವೆ.

ದೊಡ್ಡ ದೊಡ್ಡದಾದ ಬಾನ್ಗಲ್ಲುಗಳು ಬೂಮಿಗೆ ಬಂದು ಅಪ್ಪಳಿಸಿದಾಗ ಆ ಜಾಗಗಳು ದೊಡ್ಡ ದೊಡ್ಡ ಗುಂಡಿಗಳಾಗಿ, ಸಣ್ಣ ಪುಟ್ಟ ಕೆರೆಗಳಾಗಿ ಮಾರ‍್ಪಾಡು ಹೊಂದಿ ಅಲ್ಲಿರುವ ಸುತ್ತಮುತ್ತಲಿನ ಪರಿಸರ, ಮನುಶ್ಯ, ಪ್ರಾಣಿ ಮತ್ತು ಪಕ್ಶಿಗಳ ಜೀವನದ ಮೇಲೆ ಬೇರೆ ಬೇರೆ ರೀತಿಯಲ್ಲಿ ಪ್ರಬಾವವನ್ನು ಬೀರಿವೆ. ಅಂತಹ ಕೆಲವು ಸೋಜಿಗದ ಬಾನ್ಗಲ್ಲುಗಳಿಂದ ಮಾರ‍್ಪಾಡಾದ ಗುಂಡಿಗಳ ಬಗ್ಗೆ ಈ ಬರಹದಲ್ಲಿ ಓದಿ ತಿಳಿಯೋಣ.

ಲೋನಾರ್ ಕ್ರೇಟರ್ ಲೇಕ್ [Lonar Crater Lake]

ಮಹಾರಾಶ್ಟ್ರದಲ್ಲಿರುವ ಈ ಗುಂಡಿ ಸುಮಾರು 50,000 ವರುಶಗಳ ಹಿಂದೆ ಬಾನ್ಗಲ್ಲೊಂದು ಬೂಮಿಗೆ ಬಂದು ಅಪ್ಪಳಿಸಿದ ಕಾರಣದಿಂದ ನಿರ‍್ಮಾಣವಾಗಿದೆ. 1.2 km ಅಡ್ಡಗಲ [diameter] ಮತ್ತು 137 ಮೀಟರ್‍‍ಗಳಶ್ಟು ಆಳವಾಗಿರುವ ಈ ಗುಂಡಿಯು ಉಪ್ಪು ನೀರಿನ ಕೆರೆಯಾಗಿ ಮಾರ‍್ಪಟ್ಟಿದೆ. ಕಳೆದ ವರುಶ ಈ ಗುಂಡಿಯ ನೀರೆಲ್ಲ ಗುಲಾಬಿ ಬಣ್ಣಕ್ಕೆ ತಿರುಗಿ ತುಂಬಾ ಕುತೂಹಲವನ್ನು ಮೂಡಿಸಿ ಸುದ್ದಿಯಲ್ಲಿತ್ತು.ಇದರ ಸುತ್ತಮುತ್ತ ಬಹಳ ಅಂಕಿಯಲ್ಲಿ ದೇವಾಲಯಗಳಿದ್ದು ಅದರಲ್ಲಿ ಕೆಲವು ಗಾಳಿ, ಮಳೆಯಿಂದ ಹಾಳಾಗಿವೆ. ದೈತ್ಯಾಸೂದನ ಎಂಬ ವಿಶ್ಣುವಿನ ದೇವಾಲಯವು ತುಂಬಾ ಪ್ರಸಿದ್ದಿಯಾಗಿದ್ದು ಪುಣ್ಯ ಕ್ಶೆತ್ರವಾಗಿ ವಿಶ್ಣು ಬಕ್ತರನ್ನು ಬರಮಾಡಿಕೊಳ್ಳುತ್ತದೆ. ಈ ಅಚ್ಚರಿಯ ಕೆರೆಯನ್ನು ನೋಡಲು ಪ್ರವಾಸಿಗರು ಟ್ರೆಕ್ ಮಾಡಿಕೊಂಡು ಬೇರೆ ಬೇರೆ ಕಡೆಯಿಂದ ಬರುವುದರಿಂದ ಲೋನಾರ್ ಕ್ರೇಟರ್ ಲೇಕ್ ಒಂದು ಟ್ರೆಕಿಂಗ್ ತಾಣವಾಗಿಯು ಹೆಸರುವಾಸಿಯಾಗಿದೆ.

ಬ್ಯಾರಿಂಜ್‍ರ್ ಕ್ರೇಟರ್ [ Barringer Crater]

40,0000 ಸಾವಿರ ವರುಶಗಳ ಹಿಂದೆ ಕಬ್ಬಿಣದ ಬಾನ್ಗಲ್ಲೊಂದು ಅಮೆರಿಕಾದ ಅರಿಜೋನಾದ ಪ್ಲಾಗ್‍‍ಸ್ಟಾಪ್ ಎಂಬ ಊರಿನ ಮೇಲೆ ಸುಮಾರು 12.8 ಕಿ.ಮಿ/ಸೆಕೆಂಡ್ ವೇಗದಲ್ಲಿ ಬಂದು ಅಪ್ಪಳಿಸಿತ್ತು. ಈ ಜೋರಾದ ಹೊಡೆತಕ್ಕೆ ಸುಮಾರು 1200 ಮೀಟರ್ ಅಡ್ಡಗಲದ [Diameter], 170 ಮೀಟರ್ ಆಳದ ಗುಂಡಿಯೊಂದು ನಿರ‍್ಮಾಣವಾಯಿತು. ಈ ಬಾನ್ಗಲ್ಲಿನ ಗುಂಡಿಗೆ ಅರಿಜೋನಾ ಕ್ರೆಟೆರ್ ಅಂತಲೂ ಕರೆಯುತ್ತಾರೆ. ಈ ಗುಂಡಿಯು ಬಾನ್ಗಲ್ಲು ಅಪ್ಪಳಿಸಿ ರಚನೆಯಾಗಿದ್ದು ಎಂದು ಮೊದಲಿಗೆ ಅರಿಕೆ ಮಾಡಿ ಸೂಚಿಸಿದ ಬೂವಿಜ್ನಾನಿ ಡ್ಯಾನಿಯಲ್ ಬ್ಯಾರಿಂಜ್‍‍ರ್ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ. ಈ ಗುಂಡಿಯನ್ನು ಈಗಲೂ ಬ್ಯಾರಿಂಜ್‍‍ರ್ ಕುಟುಂಬದ ಕಾಸಗಿ ಕಂಪನಿಯೊಂದು ನೋಡಿಕೊಳ್ಳುತ್ತಿದೆ.

ವಲ್ಪ್ ಕ್ರಿಕ್ ಕ್ರೇಟರ್ [ Wolfe Creek Crater ]

3,00,000 ವರುಶಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಅಪ್ಪಳಿಸಿದ ಈ ಬಾನ್ಗಲ್ಲು ಸುಮಾರು 50,000 ತೂಕವನ್ನು ತೂಗುತ್ತಿತ್ತು ಎಂದು ಬೂವಿಜ್ನಾನಿಗಳು ಹೇಳುತ್ತಾರೆ. ಈ ಬಾರೀ ಗಾತ್ರದ ಕಲ್ಲಿನ ಹೊಡೆತಕ್ಕೆ 875 ಮೀಟರ್ ಆಳದ ಗುಂಡಿಯೊಂದು ನಿರ‍್ಮಾಣವಾಗಿದೆಯಂತೆ. ಇದರ ಆಳದಲ್ಲಿ ಸಣ್ಣ ಸಣ್ಣ ಕಬ್ಬಿಣದ ತುಂಡುಗಳು ದೊರೆತಿದ್ದು ಅವುಗಳನ್ನು ಬೂ ವಿಜ್ನಾನಿಗಳು ಬಾನಂಗಳದ ಸೋಜಿಗದ ಸಂಗತಿಗಳನ್ನು ತಿಳಿಯಲು ಬಳಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಗುಂಡಿಯಲ್ಲಿ ಮಣ್ಣು ಸೇರಿ ಅದರ ಆಳವು ಕಡಿಮೆಯಾಗುತ್ತಾ ಇದರ ಪುರಾವೆಗಳು ಹಾಳಾಗುತ್ತಿವೆಯಂತೆ.

ಅಂಗ್ವಿಡ್ ಕ್ರೆಟರ್ [Amguid Crater]

1,00,000 ವರುಶಗಳ ಹಿಂದೆ ಅಲ್ಜಿರಿಯಾದಲ್ಲಿ ಬಾನ್ಗಲ್ಲಿನ ಹೊಡೆತಕ್ಕೆ ನಿರ‍್ಮಾಣವಾದ ಈ ಗುಂಡಿಯು ತುಂಬಾ ಅಚ್ಚುಕಟ್ಟಾಗಿ ಮಾನವ ನಿರ‍್ಮಿತವೋ ಎನ್ನುವ ರೂಪದಲ್ಲಿದೆ. ಈ ಗುಂಡಿ 450 ಮೀಟರ್ ಅಡ್ಡಗಲವನ್ನು [diameter] ಹೊಂದಿದ್ದು, 30 ಮೀಟರ್‍‍ನಶ್ಟು ಆಳವಾಗಿದೆ. ಗುಂಡಿಯ ಮೇಲ್ಬಾಗದಲ್ಲಿ ಕಪ್ಪು ಬಣ್ಣದ ಮರಳಿನ ಎತ್ತರದ ಕಂಬಗಳಿದ್ದು, ಗುಂಡಿಯ ಮದ್ಯ ಬಾಗವು ಮಣ್ಣು ಜಾರಿ ಚಪ್ಪಟೆಯಾಗಿರುವಂತೆ ಕಾಣಿಸುತ್ತದೆ. ಈ ನೋಟವು ತುಂಬಾ ಆಕರ‍್ಶಿತವಾಗಿದ್ದು, ಬಹು ಅಂಕಿಯಲ್ಲಿ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.

ಪಿಂಗಾಲೂಯಿತ್ ಕ್ರೆಟರ್ [ Pingualuit Crater ]

ಪಿಂಗಾಲೂಯಿತ್ ಅಂದರೆ “ಎಲ್ಲಿ ಬೂಮಿ ಹುಟ್ಟುತ್ತದೆಯೋ ಅಲ್ಲಿ ಎಂಬ ಅರ‍್ತ”, 1943 ರಲ್ಲಿ ಅಮೆರಿಕಾದ ವಾಯುಪಡೆ ಪತ್ತೆಮಾಡಿದ ಈ ಗುಂಡಿಯು 1.4 ಮಿಲಿಯನ್ ವರುಶಗಳ ಹಿಂದೆ ಕೆನಡಾದ ಕ್ಯುಬೆಕ್ ನಗರದ ಮೇಲೆ ಅಪ್ಪಳಿಸಿದ ಬಾನ್ಗಲ್ಲೊಂದರ ಪರಿಣಾಮದಿಂದ ಆಗಿದೆ. 8500 ಹಿರೋಶಿಮಾ ಪರಮಾಣು ಬಾಂಬುಗಳನ್ನು ಕೂಡಿಸಿದಾಗ ಆಗುವಶ್ಟು ಬಲದಿಂದ ಈ ಬಾನ್ಗಲ್ಲು ಬಂದು ಬೂಮಿಯನ್ನು ಅಪ್ಪಳಿಸಿತಂತೆ. ಈ ಅಪ್ಪಳಿಸಿದ ಬಲಕ್ಕೆ ಆ ಜಾಗದಲ್ಲಿ ಸುಮಾರು 3.44Km ಅಡ್ಡಗಲದ [diameter] ಮತ್ತು 400 ಮೀಟರ್ ಆಳವಾದ ಗುಂಡಿಯೊಂದು ನಿರ‍್ಮಾಣವಾಗಿದೆ. ಈ ಗುಂಡಿಗೆ ಯಾವುದೇ ಕಡೆಯಿಂದ ನೀರು ಒಳಗೆ ಮತ್ತು ಹೊರಗೆ ಹೋಗಲು ಜಾಗವಿಲ್ಲದ ಕಾರಣ ಮಳೆಯ ನೀರು ಮತ್ತು ಮಂಜುಗಡ್ಡೆ ಕರಗಿದ ನೀರು ಮಾತ್ರ ಇಲ್ಲಿ ಶೇಕರಣೆಯಾಗುತ್ತದೆ. ಆದ ಕಾರಣದಿಂದ ಇದು ಪ್ರಪಂಚದಲ್ಲಿ ಅತಿ ಶುದ್ದವಾದ ನೀರನ್ನು ಒಳಗೊಂಡಿರುವ ಗುಂಡಿಗಳಲ್ಲಿ ಒಂದೆಂದು ಹೆಸರುವಾಸಿಯಾಗಿದೆ.

ಇದುವರೆಗೆ ಬೂಮಿಯ ಮೇಲೆ ಬಹಳಶ್ಟು ಅಂಕಿಯಲ್ಲಿ ಅದೆಶ್ಟೋ ಬಾನ್ಗಲ್ಲುಗಳು ಬಂದು ಅಪ್ಪಳಿಸಿವೆ. ಅವುಗಳಲ್ಲಿ ಕೆಲವನ್ನು ಪತ್ತೆಮಾಡಲು ಸಾದ್ಯವಾದರೆ ಇನ್ನು ಕೆಲವು ಕಾಣಸಿಗದೇ ಎಲ್ಲೋ ಒಂದೆಡೆ ಉಳಿದು ಕೊಂಡಿವೆ. ಅವುಗಳನ್ನು ಪತ್ತೆ ಹಚ್ಚಿದಾಗ ಅವುಗಳಿಂದ ದೊರೆಯುವ ಮಾಹಿತಿಗಳು ಹೊಸತೊಂದು ದಾರಿಯತ್ತ ಬಾನರಿಗರಿಗೆ(Space scientist) ಯೋಚನೆ ಮಾಡುವಂತೆ ಪ್ರೋತ್ಸಾಹ ತೋರುತ್ತಿವೆ.

( ಮಾಹಿತಿ ಮತ್ತು ಚಿತ್ರಸೆಲೆ: touropia.com, wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications