ಹೋಯಾ ಬಸಿಯು – ದೆವ್ವದ ಕಾಡು

ರೊಮೇನಿಯಾದ ಟ್ರಾನ್ಸಿಲ್ವೇನಿಯಾ ಪ್ರದೇಶ ಅತೀಂದ್ರಿಯ ಶಕ್ತಿಗಳ ತಾಣ ಎಂದು ಹೆಸರುವಾಸಿಯಾಗಿದೆ. ಇಲ್ಲಿ ಡ್ರಾಕುಲಾಗಳು, ರಕ್ತ ಹೀರುವ ರಕ್ತ ಪಿಶಾಚಿಗಳು, ಹಾಗೂ ದೆವ್ವ ಬೂತಗಳ ಆವಾಸಸ್ತಾನವಾದ ಕೋಟೆಗಳು ಹೆಜ್ಜೆ ಹೆಜ್ಜೆಗೂ ಕಾಣ ಸಿಗುತ್ತವೆ. ಟ್ರಾನ್ಸಿಲ್ವೇನಿಯಾದ ಹ್ರುದಯಬಾಗದಲ್ಲಿರುವ ಕ್ಲೂಜ್-ನಪೋಕಾದಲ್ಲಿ ಅತೀಂದ್ರಿಯ ಮತ್ತು ವಿಚಿತ್ರವಾದ ಕಾಡು ಇದೆ. ಇದನ್ನು ಮತ್ತೊಂದು ಬರ್‍ಮುಡಾ ತ್ರಿಕೋನವೆಂದೂ ಕರೆಯಲಾಗುತ್ತದೆ. ಅಂತಹ ಅತಿಮಾನುಶ ಕ್ರಿಯೆಗಳನ್ನು ಇಲ್ಲಿ ಬಂದವರು ಅನುಬವಿಸಿದ್ದಾರೆ. ಇದು ಮೂಡನಂಬಿಕೆಯೇ? ಇಲ್ಲ ನಿಜವೇ? ಉತ್ತರ ಮಾತ್ರ ಇನ್ನೂ ನಿಗೂಡವಾಗಿಯೇ ಇದೆ.

ಹೋಯಾ ಬಸಿಯು ಕಾಡಿನಲ್ಲಿ ನಡೆಯುತ್ತಿರುವ ಚಿತ್ರ ವಿಚಿತ್ರ ಸಂಗತಿಗಳ ಬಗ್ಗೆ ಸ್ತಳೀಯರಿಗೆ ಬಹಳ ಹಿಂದಿನಿಂದಲೂ ತಿಳಿದಿತ್ತು. ಅದರ ಬಗೆಗಿನ ದಂತಕತೆಗಳು ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿವೆ. ಸ್ತಳೀಯರ ಪ್ರಕಾರ ಒಮ್ಮೆ ಹೋಯಾ ಬಸಿಯು ಕಾಡಿನ ಒಳ ಹೋದರೆ, ಕಾಡು ಮನುಶ್ಯನ ಆಂತರಿಕ ಉಪಪ್ರಜ್ನೆಯನ್ನು ಎಚ್ಚರಿಸಿ, ಬಯವನ್ನು ಹುಟ್ಟಿಸುತ್ತದಂತೆ. ಇದರೊಳಗೆ ಹೋದ ಹಳ್ಳಿಗರು ವಾಕರಿಕೆ, ಆತಂಕ, ತಲೆನೋವು ಮತ್ತು ಚರ‍್ಮದ ಮೇಲೆ ಸುಟ್ಟ ಗುರುತುಗಳು ಬರುವುದನ್ನು ಅನುಬವಿಸಿದ್ದಾರಂತೆ.

ಹೋಯಾ ಬಸಿಯು ಎಂದರೆ ಕುರುಬನ ಕಾಡು ಎಂಬರ‍್ತ ಬರುತ್ತದೆ. ಈ ಕಾಡಿಗೆ ಈ ಹೆಸರು ಬರಲು ಕಾರಣವಾದ ದಂತಕತೆ ಹೀಗಿದೆ. ಒಂದು ದಿನ ಹಳ್ಳಿಯ ಕುರುಬನೊಬ್ಬ ತನ್ನ ಕುರಿ ಹಿಂಡಿನೊಡನೆ ಕಾಡಿಗೆ ಹೋದನಂತೆ. ಸ್ವಲ್ಪ ಸಮಯದಲ್ಲೇ ಕುರುಬ ಮತ್ತು ಆತನ ಕುರಿ ಹಿಂಡು ಕಣ್ಮರೆಯಾಯಿತಂತೆ. ಕೆಲ ಸಮಯದ ನಂತರ ಮತ್ತೆ ಕಾಣಿಸಿಕೊಂಡಿತಂತೆ. ಹಾಗಾಗಿ ಸ್ತಳೀಯರು ಈ ಕಾಡನ್ನು ಕುರುಬನ ಕಾಡು ಎಂದು ಹೆಸರಿಸಿದರಂತೆ. ಈ ಕಾಡಿನಲ್ಲಿ, ಮಾನವನ ದೇಹದ ಮೇಲೆ ಮತ್ತು ಮನಸ್ಸಿನ ಮೇಲೆ ಆಗುವ ಬದಲಾವಣೆಗಳಿಗಿಂತಾ, ವೈಜ್ನಾನಿಕ ಬದಲಾವಣೆಗಳು ಮಾನವನ ಚಾತುರ‍್ಯಕ್ಕೆ ನಿಲುಕದಂತಿವೆ.

ಕಾಡಿನಲ್ಲಿ ಕಾಂತೀಯ ವೈಪರಿತ್ಯಗಳು, ವಿದ್ಯುತ್ಕಾಂತೀಯ ಕ್ಶೇತ್ರದ ಏರಿಳಿತಗಳು, ಇನ್ಪ್ರಾಸೌಂಡ್ ಹೊರಸೂಸುವಿಕೆಯ ಚಿಹ್ನೆಗಳನ್ನು ವಿವರಿಸಲು ವಿಜ್ನಾನ ಸೋತಿದೆ. ಈ ಕಾಡಿನಲ್ಲಿ ಸಸ್ಯಗಳು ಮತ್ತು ಸಸ್ಯವರ‍್ಗಗಳನ್ನು ಬದಲಾಯಿಸುವ ಜೈವಿಕ ಪರಿಣಾಮಗಳೂ ಇವೆ. ಕೆಲವು ಬಾಗಗಳಲ್ಲಿ ಇವುಗಳು ನಿರ‍್ಜಲೀಕರಣಕ್ಕೆ ತುತ್ತಾದ ಲಕ್ಶಣಗಳು ಕಂಡಿವೆ. ಇದರೊಂದಿಗೆ ಸುಟ್ಟಂತೆ ಕಂಡುಬರುವುದು, ಕಾಂಡ ಮತ್ತು ಎಲೆಗಳಿಗೆ ನೀರು ಸರಬರಾಜಾಗದ ಕಾರಣ ಸಾವು ಸಂಬವಿಸುವುದು, ಇವುಗಳಿಗೆ ಸೂಕ್ತ ವೈಜ್ನಾನಿಕ ಕಾರಣ ಲಬ್ಯವಿಲ್ಲ.

ಹೋಯಾ ಬಸಿಯುನ ಎಲ್ಲಾ ಅತಿಮಾನುಶ ಕ್ರಿಯೆಗಳ ಹಿಂದಿರುವ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ಜೀವಶಾಸ್ತ್ರಜ್ನ ಅಲೆಕ್ಸಾಂಡ್ರು ಸಿಪ್ಟ್ 50ರ ದಶಕದಲ್ಲಿ ವೈಜ್ನಾನಿಕ ತನಿಕೆ ಆರಂಬಿಸಿದರು. ಸ್ತಳೀಯರಿಂದ ತಿಳಿದುಬಂದ ಎಲ್ಲಾ ಬಯಾನಕ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ತಮ್ಮ ಸತ್ಯ ಶೋದನೆಯನ್ನು ಪ್ರಾರಂಬಿಸಿದರು. ಕಾಡಿನೊಳಗೆ ಅನೇಕ ಬಾರಿ ಪ್ರವೇಶಿಸಿ ಹಲವಾರು ಚಿತ್ರಗಳನ್ನು ಸೆರೆಹಿಡಿದರು. ಅವರಿಗಾದ ಅನುಬವವನ್ನು ಹಂಚಿಕೊಳ್ಳುತ್ತಾ, ಕಾಡಿನೊಳಗೆ ಪ್ರವೇಶಿಸಿದಾಗ ಅಲ್ಲಿನ ಮರಗಳ ನೆರಳುಗಳು ವಿಚಿತ್ರವಾಗಿ ಕಂಡುಬಂದವಂತೆ. ಆದರೂ ಆತ ತನ್ನ ಯೋಜನೆಯನ್ನು ಕೈಬಿಡದೆ ಮುಂದುವರೆದನಂತೆ. ಆ ಕಾಡಿನಲ್ಲಿ ತಾನು ತೆಗೆದ ಚಿತ್ರಗಳನ್ನು ಗಮನಿಸಿದಾಗ ಅವು ಇರಬಾರದ ಆಕಾರದಲ್ಲಿದ್ದವಂತೆ. ನೆರಳುಗಳೂ ಸಹ ಕಂಡಂತೆ ಚಿತ್ರದಲ್ಲಿ ಕಾಣಲಿಲ್ಲವಂತೆ. ತಾನು ಚಿತ್ರ ತೆಗೆದ ಕ್ರಮದಲ್ಲಿ ಅವು ಇರಲಿಲ್ಲವಂತೆ. ಈತನ ಸಂಶೋದನೆ ಮುಂದಿನ, ಬವಿಶ್ಯದ ಆನ್ವೇಶಣೆಗೆ ನಾಂದಿಯಾಯಿತಶ್ಟೆ.

ಎಮಿಲ್ ಬರ‍್ನಿಯಾ ಎಂಬ ಮಿಲಿಟರಿ ತಂತ್ರಜ್ನ ತನ್ನ ಕೆಲವು ಸ್ನೇಹಿತರೊಂದಿಗೆ ಈ ಕಾಡಿನಲ್ಲಿ ತಂಗಿದ್ದಾಗ ವಿಚಿತ್ರ ಅನುಬವಗಳಾದವಂತೆ. ಮರದ ತುಂಡನ್ನು ಎತ್ತುತ್ತಿರುವಾಗ, ತನ್ನ ಗೆಳೆಯರು ತನ್ನ ಹೆಸರನ್ನು ಕರೆದಂತೆ ಬಾಸವಾಯಿತಂತೆ. ಯಾರು ಕರೆದದ್ದು, ಅಲ್ಲಿ ಏನಾಗಿದೆ ಎಂದು ತಿಳಿಯಲು ಶಬ್ದ ಬಂದತ್ತ ಹೋದಾಗ, ಆತ ಯುಎಪ್ಓ ಬೂಮಿಗೆ ಅತಿ ಸಮೀಪದಲ್ಲಿ ಹಾದು ಹೋಗಿದ್ದನ್ನು ಕಂಡನಂತೆ. ಈ ಕಾಡಿನ ನಡು ಬಾಗದಲ್ಲಿಒಂದು ಪರಿಪೂರ‍್ಣ ವ್ರುತ್ತವಿದೆ. ಈ ವ್ರುತ್ತದಲ್ಲಿ ಯಾವುದೇ ಮರಗಿಡಗಳು ಬೆಳೆದಿಲ್ಲ. ಇಲ್ಲೇ  ಅನ್ಯಗ್ರಹದ ಯುಎಪ್ಓ ಇಳಿದಿರಬೇಕು ಎಂದು ಬಾವಿಸಲಾಗಿದೆ.

ವರ‍್ಶಗಳ ನಂತರ ಅಂತರರಾಶ್ಟ್ರೀಯ ಯುಎಪ್ಓಲಾಜಿಸ್ಟ್ಗಳು ಎಮಿಲ್ ಬರ‍್ನಿಯಾ ತೆಗೆದ ಚಾಯಾಚಿತ್ರವನ್ನು ರೊಮೇನಿಯಾದಲ್ಲಿ ತೆಗೆದ ಯುಎಪ್ಓದ ಅತ್ಯಂತ ಸ್ಪಶ್ಟವಾದ ಪೋಟೋಗಳಲ್ಲಿ ಒಂದು ಎಂದು ಮತ್ತು ಇಡೀ ಪ್ರಪಂಚದಲ್ಲಿ ಈ ರೀತಿಯ ಅತ್ಯತ್ತಮ ಚಿತ್ರಗಳಲ್ಲಿ ಒಂದಾಗಿದೆ ಎಂದು ವರ‍್ಗೀಕರಿಸಿದರಂತೆ. 1968ರಲ್ಲಿ ನಡೆದ ಈ ಗಟನೆ ಹೋಯಾ ಬಸಿಯು ಕಾಡಿಗೆ ವಿಶ್ವ ಕ್ಯಾತಿ ತಂದಿತು. ಜರ‍್ಮನಿ, ಯುಎಸ್, ಹಂಗೇರಿ ಮುಂತಾದ ಕಡೆಗಳಿಂದ ಸಂಶೋದಕರ ತಂಡಗಳು ಸಂಶೋದನೆಗಾಗಿ ಇಲ್ಲಿಗೆ ಬರಲಾರಂಬಿಸಿದರು. ಎಶ್ಟೇ ಸಂಶೋದನೆ ಕೈಗೊಂಡರೂ ಇಂದಿಗೂ ಇದರ ನಿಗೂಡತೆನ್ನು ಬೇದಿಸಲಾಗಿಲ್ಲ. ವೈಜ್ನಾನಿಕ ಕಾರಣ ಕಂಡುಹಿಡಿಯಲಾಗಿಲ್ಲ. ಹೋಯಾ ಬಸಿಯು ತನ್ನ ನಿಗೂಡತೆಯನ್ನು ಬಿಟ್ಟುಕೊಟ್ಟಿಲ್ಲ.

(ಮಾಹಿತಿ ಮತ್ತು ಚಿತ್ರಸೆಲೆ: wikipedia.org, atlasobscura.com, youtube.com, newsbytesapp.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks