ಉಪವಾಸ ಎಂಬ ಪರಮೌಶದ

– ಸಂಜೀವ್ ಹೆಚ್. ಎಸ್.

‘ಲಂಗನಂ ಪರಮೌಶದಂ’ ಎಂಬುದು ಪುರಾತನ ಚಿಕಿತ್ಸಾ ವಿದಾನವಾದ ಆಯುರ‍್ವೇದದ ನುಡಿ. ಉಪವಾಸವೇ ಅತ್ಯಂತ ಶ್ರೇಶ್ಟ ಔಶದ ಎನ್ನುವುದು ಇದರ ಅರ‍್ತ. ಈ ಮಾತು ದೀರ‍್ಗಕಾಲದ ಕಾಯಿಲೆಗಳನ್ನು ಗುಣಪಡಿಸುವಲ್ಲಿ, ಪ್ರಮುಕವಾಗಿ ಸಂದಿವಾತದಂತಹ ಸಮಸ್ಯೆಗಳಿಗೆ ಈಗಲೂ ಉಪಯುಕ್ತವೆನ್ನುವುದನ್ನು ವೈದ್ಯಕೀಯ ಕ್ಶೇತ್ರ ಅಂಗೀಕರಿಸಿದೆ.

ನಮ್ಮ ಮೆದುಳಿನಲ್ಲಿರುವ ‘ಹೈಪೊತೆಲಮಸ್’ ಗ್ರಂತಿಯ ಪಾತ್ರ ಬಹಳ ಮಹತ್ಪದ್ದು. ಇದು ಹಸಿವು, ನೀರಡಿಕೆಗಳ ಕುರಿತು ನಮಗೆ ಸಂದೇಶ ರವಾನಿಸುತ್ತಿರುತ್ತದೆ. ದೇಹದಲ್ಲಿ ಸಕ್ಕರೆಯ (ಗ್ಲುಕೊಸ್) ಮಟ್ಟ ಹಾಗೂ ಪಿ.ಎಚ್. ಮಟ್ಟದಲ್ಲಿ ವ್ಯತ್ಯಾಸವಾದಾಗ ಹಸಿವಿನ ಅನುಬವ ನಮಗಾಗುತ್ತದೆ. 15-20 ನಿಮಿಶಗಳು ಮಾತ್ರ ಹಸಿವಿನ ತೀವ್ರತೆಯ ಅನುಬವವಾಗುತ್ತದೆ. ಆಹಾರ ಸೇವಿಸಿದ ನಂತರ ‘ಸಾಕು’ ಎನ್ನುವ ಸಂದೇಶ ಬರುತ್ತದೆ. ನಂತರವೇ ನಾವು ನಿಲ್ಲಿಸುತ್ತೇವೆ. ನಾವು ಹಸಿವಿನ ತೀವ್ರತೆಯಲ್ಲಿರುವಾಗ ಆಹಾರ ಸೇವನೆ ಮಾಡದಿದ್ದರೆ, ದೇಹದಲ್ಲಿರುವ ಕೊಬ್ಬನ್ನು ಕರಗಿಸಿ ಇಂದನವನ್ನಾಗಿ ಉಪಯೋಗಿಸಿಕೊಳ್ಳುತ್ತದೆ. ಆದ್ದರಿಂದ ಕೊಬ್ಬು ಹೆಚ್ಚಾಗಿರುವವರಿಗೆ ‘ಉಪವಾಸ’ ಕ್ರಮ ಒಳ್ಳೆಯದು.

ಜೀರ‍್ಣಾಂಗಗಳಿಗೆ ವಿಶ್ರಾಂತಿ

ನಾವು ದಿನಕ್ಕೆ 3 ಬಾರಿ ಆಹಾರ ಸೇವನೆ ಮಾಡುವುದರಿಂದ ಹೊಟ್ಟೆಯಿಂದ ಆರಂಬವಾಗಿ ದೊಡ್ಡ ಕರುಳಿನವರೆಗೂ ನಿರಂತವಾಗಿ ಜೀರ‍್ಣ ಕ್ರಿಯೆ ನಡೆಯುತ್ತಿರುತ್ತದೆ. ಉಪವಾಸ ಆಚರಿಸುವುದರಿಂದ ಜೀರ‍್ಣಾಂಗಗಳಿಗೆ ವಿಶ್ರಾಂತಿ ದೊರೆಯುತ್ತದೆ. ಜ್ವರ, ಅಜೀರ‍್ಣವಾದಾಗ ಒಂದು ದಿನ ಉಪವಾಸ ಮಾಡಿದರೆ ದೇಹ ತನ್ನನ್ನು ತಾನು ರಿಪೇರಿ ಮಾಡಿಕೊಂಡು ಸರಿಪಡಿಸಿಕೊಳ್ಳುತ್ತದೆ. ದೇಹವು ಒಂದು ನಿಸರ‍್ಗ ರೂಪುಗೊಳಿಸಿದ ಯಂತ್ರ. ಆ ಯಂತ್ರಕ್ಕೆ ಸಣ್ಣ ಪುಟ್ಟ ತೊಂದರೆಗಳು ಉಂಟಾದಾಗ ಉಪವಾಸದ ಮೂಲಕ ಸರಿಪಡಿಸಿಕೊಳ್ಳಬಹುದು. ದೇಹದ ಜೀರ‍್ಣಾಂಗಗಳಿಗೆ ಸ್ವಲ್ಪ ವಿಶ್ರಾಂತಿ ಅಗತ್ಯವಿರುತ್ತದೆ ಮತ್ತು ಪುನಹ ಸಮರ‍್ತ ರೀತಿಯಲ್ಲಿ ಕಾರ‍್ಯನಿರ‍್ವಹಿಸಲು ತಯಾರಿ ಮಾಡುವುದೇ ಉಪವಾಸದ ಉದ್ದೇಶ.

ಹೊಟ್ಟೆಯ ತೊಂದರೆಯಿಂದ ಬಳಲುವವರು, ಮೂತ್ರಪಿಂಡದ ರೋಗಿಗಳು, ಯಕ್ರುತ್ತಿನ (ಲಿವರ್) ತೊಂದರೆ ಇರುವವರು, ಚರ‍್ಮರೋಗದಿಂದ ಬಳಲುವವರಿಗೆ, ಉಪವಾಸ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ. ವೈದ್ಯಕೀಯ ಡಾಟಾ ಹಾಗೂ ಸಂಶೋದನೆಗಳ ಪ್ರಕಾರ ಕ್ಯಾಲೊರಿಗಳಿಗೆ ಕಡಿವಾಣ ಹಾಕುವುದು ಹಾಗೂ ಉಪವಾಸ ಮಾಡುವುದರಿಂದ ಅದಿಕ ರಕ್ತದೊತ್ತಡ, ಚಯಾಪಚಯ ಸಮಸ್ಯೆಗಳು, ಉರಿಯೂತದ ಕಾಯಿಲೆಗಳು, ಮಾನಸಿಕ ಅಸ್ವಸ್ತತೆಗಳು ಮತ್ತು ಅಟೊಪಿಕ್ ಸಮಸ್ಯೆಗಳಿಗೆ ವೈದ್ಯಕೀಯ ಪ್ರಯೋಜನಗಳಾಗುವುದು ಸ್ಪಶ್ಟವಾಗಿದೆ.

ಬಾರತದಲ್ಲಿ 61% ರಶ್ಟು ಸಾವುಗಳು ಸಾಂಕ್ರಾಮಿಕವಲ್ಲದ ಆರೋಗ್ಯ ಸಮಸ್ಯೆಗಳಿಂದ ಸಂಬವಿಸುತ್ತಿದ್ದು, ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಹಾಗೂ ತಡೆಗಟ್ಟುವುದಕ್ಕೆ ಉಪವಾಸ ವಿದಾನ ಅತ್ಯವಶ್ಯಕ.

ಉಪವಾಸಕ್ಕೆ ಅನುಸರಿಸಬೇಕಾದ ವಿದಾನಗಳು

ನಿರ‍್ದಿಶ್ಟ ಅವದಿಯ ವರೆಗೆ ಗಟ್ಟಿ ಆಹಾರ, ನಿಕೋಟಿನ್ ಮತ್ತು ಕೆಪೀನ್ ನಂತಹ ಅಂಶಗಳನ್ನು ಸೇವಿಸದೇ ಇರುವುದು ಉಪವಾಸದ ಕ್ರಮ. ಇದನ್ನು ಕ್ರಮಬದ್ದವಾಗಿ ಆಚರಿಸಿದರೆ ಹೊಸ ಚೈತನ್ಯ ಮೂಡಿ, ಬಯಕೆಗಳನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಉಪವಾಸದ ಅವದಿಯಲ್ಲಿ ತಾಜಾ ಹಣ್ಣಿನ ಜ್ಯೂಸ್, ನಿಂಬೆ ಹಣ್ಣಿನ ರಸ, ಜೇನುತುಪ್ಪ, ವೆಜಿಟೆಬಲ್ ಸೂಪ್ ಗಳನ್ನು ಸೇವಿಸುವ ಮೂಲಕ ದಿನವೊಂದಕ್ಕೆ ಕ್ಯಾಲೋರಿಯನ್ನು ಗರಿಶ್ಟ 300ಕ್ಕೆ ಸೀಮಿತಗೊಳಿಸಬಹುದಾಗಿದ್ದು, ಈ ಪ್ರಕ್ರಿಯೆ ಪಿತ್ತಜನಕಾಂಗ, ಮೂತ್ರಪಿಂಡಗಳು, ಕರುಳುಗಳು, ಚರ‍್ಮ ಮತ್ತು ಶ್ವಾಸಕೋಶಗಳನ್ನು ಸ್ವಾಸ್ತ್ಯವಾಗಿರಿಸುತ್ತದೆ. ಉಪವಾಸದ ಅವದಿಯಲ್ಲಿ ಚಟುವಟಿಕೆಗಳು ಹಾಗೂ ವಿಶ್ರಾಂತಿಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅತ್ಯಗತ್ಯ.

ಒಮ್ಮೆ ಉಪವಾಸದ ನಂತರ, ಆರೋಗ್ಯಕರ ಜೀವನಶೈಲಿ ರೂಡಿಸಿಕೊಳ್ಳುವುದಕ್ಕೆ ಸಾವದಾನದಿಂದ ಗನ ಆಹಾರಗಳನ್ನು ಪುನಹ ಸೇವಿಸಬೇಕಾಗುತ್ತದೆ. ಉಪವಾಸ ಪ್ರಕ್ರಿಯೆ ಚಯಾಪಚಯ, ಹ್ರುದಯರಕ್ತನಾಳದ ಮತ್ತು ಮಾನಸಿಕ ಪರಿಣಾಮಗಳನ್ನು ಹೊಂದಿರುತ್ತದೆಯಾದ್ದರಿಂದ ಇವುಗಳ ಬಗ್ಗೆ ಸಂಪೂರ‍್ಣ ನಿಗಾ ವಹಿಸಬೇಕಾಗುತ್ತದೆ.

ಸಾಮಾನ್ಯವಾಗಿ ಆಚರಿಸುವ ಉಪವಾಸದ ಮೂರು ವಿದಾನಗಳು

ನೀರಿನ ಉಪವಾಸ: ವ್ಯಕ್ತಿಯ ದೇಹದ ತೂಕಕ್ಕೆ ತಕ್ಕಂತೆ ಆಹಾರ ಬಿಟ್ಟು, ನೀರನ್ನು ಮಾತ್ರ ಕುಡಿಯುವುದಕ್ಕೆ ಅನುಮತಿಸುವುದು. ಬೇರೆ ಯಾವುದೇ ದ್ರವ, ಗನ ಆಹಾರಗಳನ್ನು ಸೇವಿಸದೇ ಕೇವಲ ನೀರನ್ನಶ್ಟೇ ಸೇವಿಸಿ ಮಾಡುವ ಉಪವಾಸ ಸಂದಿವಾತ ಸಮಸ್ಯೆಗೆ ಅತ್ಯುತ್ತಮ, ಅತಿ ಪರಿಣಾಮಕಾರಿ ಚಿಕಿತ್ಸೆ ಎನ್ನುತ್ತದೆ ಲ್ಯಾನ್ಸೆಟ್ ನಲ್ಲಿ ಪ್ರಕಟವಾದ ವರದಿ.

ಹಣ್ಣಿನ ಉಪವಾಸ: ದೇಹ ಶುದ್ದೀಕರಿಸಲು ಸೇವಿಸುವ ತಾಜಾ ಹಣ್ಣುಗಳ ಸೇವನೆ ಮಾಡುವುದು. ಇದನ್ನು ಚಿಕಿತ್ಸಕ ಉಪವಾಸ ಅತವಾ ತೆರೆಪ್ಯುಟಿಕ್ ಪಾಸ್ಟಿಂಗ್ ಎನ್ನುತ್ತಾರೆ. ಈ ರೀತಿಯ ಉಪವಾಸದಲ್ಲಿ, ತರಕಾರಿಯ ಸಾರು, ತರಕಾರಿಯ ಜ್ಯೂಸ್, ಜೇನುತುಪ್ಪ, ನೀರು ಹಾಗೂ ದ್ರವರೂಪದ ಆಹಾರ ಸೇವನೆ ಮಾಡುವುದು.

ನಿಯಮಿತ ಉಪವಾಸ: ನಿಯಮಿತ ಉಪವಾಸ ಮಾಡುವುದರಿಂದ ಮದುಮೇಹ, ಹ್ರುದಯ ಸಮಸ್ಯೆಗಳ ಅಪಾಯವನ್ನು ತಡೆಗಟ್ಟಬಹುದು ಹಾಗೂ ಕ್ಯಾನ್ಸರ್ ನ ಚಿಕಿತ್ಸೆಗೆ ಇದು ಅತ್ಯಂತ ಸಹಕಾರಿ ಎನ್ನುವುದು ವೈದ್ಯಕೀಯ ಸಂಶೋದನೆಯಿಂದ ದ್ರುಡಪಟ್ಟಿದೆ.

ಹಿಂದು, ಮುಸ್ಲಿಂ, ಕ್ರೈಸ್ತ, ಜೈನ, ಪಾರ‍್ಸಿ ಎಲ್ಲ ಮತಗಳಲ್ಲಿ ‘ಉಪವಾಸ’ ಒಂದು ದಾರ‍್ಮಿಕ ಆಚರಣೆಯ ಮಹತ್ವ ಪಡೆದುಕೊಂಡಿದೆ. ಉಪವಾಸಕ್ಕೆ ಆದ್ಯಾತ್ಮಿಕ ಹಿನ್ನೆಲೆಯೂ ಬೆಸೆದುಕೊಂಡಿದೆ. ಹಬ್ಬ ಹರಿದಿನಗಳಲ್ಲಿ ಮತ್ತು ತಿತಿಗಳನ್ನಾಚರಿಸುವಾಗ ಸಂಪ್ರದಾಯವಾಗಿ ಉಪವಾಸ ರೂಡಿಯಲ್ಲಿದೆ.

ಆಯುರ‍್ವೇದದ ಪ್ರಕಾರ, ಮನುಶ್ಯನ ಎಲ್ಲ ರೋಗಗಳಿಗೂ ಆತನ ದೇಹದ ಅಸಮರ‍್ಪಕ ಜೀರ‍್ಣಕ್ರಿಯೆ ಹಾಗೂ ಉತ್ಪತ್ತಿಯಾಗುವ ಮಲ ವಿಶವೇ ಮುಕ್ಯ ಕಾರಣ. ಜೀರ‍್ಣಕ್ರಿಯೆಯನ್ನು ಸಮತೋಲನದಲ್ಲಿ ಇಡಲು ಹಿಂದಿನವರು ವಾರ ಇಲ್ಲವೇ ತಿಂಗಳಿಗೊಮ್ಮೆ ಉಪವಾಸವಿರುವ ಪದ್ದತಿ ರೂಡಿಸಿಕೊಂಡಿದ್ದರು. ದಾರ‍್ಮಿಕ ಹಿನ್ನೆಲೆಯಲ್ಲಿ ಉಪವಾಸ ಮಾಡುತ್ತಿದ್ದರಾದರೂ, ಅದರ ಹಿಂದಿನ ಉದ್ದೇಶ ಆರೋಗ್ಯವೇ ಆಗಿತ್ತು.

ಉಪವಾಸದ ನಂತರದ ಕ್ರಮಗಳು

ಉಪವಾಸವನ್ನು ಆಚರಿಸುವುದು ಎಶ್ಟು ಮುಕ್ಯವೋ, ಅಶ್ಟೇ ಮುಕ್ಯವಾದುದು ಉಪವಾಸದಿಂದ ಹೊರಗೆ ಬರುವ ಕ್ರಮ. ದಿನವಿಡೀ ಉಪವಾಸವಿದ್ದು ರಾತ್ರಿಯ ವೇಳೆ ಕೆಲವರು ಹೊಟ್ಟೆ ತುಂಬಾ ಊಟ ಮಾಡಿ ಮಲಗುತ್ತಾರೆ. ಇದು ಆರೋಗ್ಯಕ್ಕೆ ಹಾನಿಕಾರಕ. ಉಪವಾಸದ ಅಂತ್ಯ ಸರಿಯಾದಲ್ಲಿ ದೇಹವು ಇನ್ನಶ್ಟು ಬಲಶಾಲಿಯಾಗುತ್ತದೆ. ಉಪವಾಸ ಮಾಡುವಾಗ ನಮ್ಮ ಜೀರ‍್ಣಶಕ್ತಿ ಮತ್ತು ನಮ್ಮ ಜೀರ‍್ಣಾಳ ತುಂಬಾ ದುರ‍್ಬಲವಾಗಿರುತ್ತದೆ. ಈ ರೀತಿ ದುರ‍್ಬಲವಾದ ಜೀರ‍್ಣಕ್ರಿಯೆ ಇದ್ದಾಗ ಹೊಟ್ಟೆ ತುಂಬಾ ತಿನ್ನುವುದರಿಂದ ಜೀರ‍್ಣಕ್ರಿಯೆ ನಾಶವಾಗಿ, ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಉಪವಾಸ ಮುರಿಯುವಾಗ ಅಲ್ಪ ಪ್ರಮಾಣದ, ಜೀರ‍್ಣಕ್ರಿಯೆಯನ್ನು ವ್ರುದ್ದಿಸುವ ಆಹಾರವನ್ನು ಸೇವಿಸಿ ಮಲಗಬೇಕು. ಉಪವಾಸ ಮುಗಿದ ಮರುದಿನದ ಆಹಾರವೂ ಕೂಡ ಜೀರ‍್ಣಕ್ರಿಯೆಯನ್ನು ವ್ರುದ್ದಿಸುವಂತಹದ್ದಿರಬೇಕು. ಬೇಯಿಸಿದ ತರಕಾರಿ, ಹಸಿ ತರಕಾರಿಯನ್ನು ಅದಿಕ ಪ್ರಮಾಣದಲ್ಲಿ ತಿನ್ನಬೇಕು. ಜಿಡ್ಡಿರುವ ಆಹಾರ, ಸಂಸ್ಕರಿಸಿದ ಆಹಾರಗಳನ್ನು ಒಂದು ವಾರದವರೆಗೆ ವರ‍್ಜಿಸಬೇಕು.

ಉಪವಾಸವೆಂದರೆ ಕೇವಲ ನಿರಾಹಾರಿಯಾಗಿ ಇರುವುದು ಎಂದರ‍್ತವಲ್ಲ. ಬದಲಿಗೆ, ಆಹಾರ ಸೇವನೆಯ ಕ್ರಮಗಳನ್ನು ಪಾಲಿಸುವ ವ್ರತ ಅತವಾ ಚಿಕಿತ್ಸಾ ಪದ್ದತಿ ಎನ್ನಬಹುದು.

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: