ನಾವೇಕೆ ಬಯ್ಯುತ್ತೇವೆ ? – 14ನೆಯ ಕಂತು
– ಸಿ.ಪಿ.ನಾಗರಾಜ.
(ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು)
ಬಯ್ಯುವಿಕೆಯಲ್ಲಿ ತೊಡಗಿದವರ ದೇಹದ ಚಹರೆಗಳು
ಯಾವುದೇ ಒಂದು ಸನ್ನಿವೇಶದಲ್ಲಿ ವ್ಯಕ್ತಿಗಳು ಮಾತನಾಡುತ್ತಿರುವಾಗ ಅವರ ದೇಹದ ಚಹರೆಗಳು ಆಡುವ ಮಾತಿನ ಉದ್ದೇಶವನ್ನು ಮತ್ತು ತಿರುಳನ್ನು ತಿಳಿಸುವುದರಲ್ಲಿ ಬಹು ದೊಡ್ಡ ಪಾತ್ರವನ್ನು ವಹಿಸುತ್ತವೆ. ಆಲ್ಬರ‍್ಟ್ ಮೆಹರಾಬಿನ್ ಎಂಬ ಮನೋವಿಜ್ನಾನಿಯು ನಾವು ಆಡುವ ಮಾತಿನಲ್ಲಿ ಶಾಬ್ದಿಕ ರೂಪದ ಮಾತಿನ ಸಾಮಗ್ರಿಗೂ ಮತ್ತು ಅದರ ಜತೆಜತೆಯಲ್ಲಿಯೇ ಹೊರಹೊಮ್ಮುವ ದೇಹದ ಚಹರೆಗೂ ಇರುವ ನಂಟನ್ನು ಕುರಿತು ಈ ರೀತಿ ಹೇಳಿದ್ದಾರೆ. “ನಾವು ನುಡಿಯುವ ಮಾತಿನ ದನಿಗಳಿಂದ ಕೂಡಿದ ಸಂದೇಶದಲ್ಲಿ ಶಾಬ್ದಿಕ ಅಬಿವ್ಯಕ್ತಿಯ ಪಾತ್ರ ಕೇವಲ ಶೇಕಡ 7 ರಶ್ಟು ಮಾತ್ರ ಇರುತ್ತದೆ; ದ್ವನಿಯ ಏರಿಳಿತದಿಂದಾಗಿ ಸುಮಾರು ಶೇಕಡ 38 ರಶ್ಟು ಸಂವಹನ ಉಂಟಾಗುತ್ತದೆ; ಮೊಗಬಾವ, ಕಯ್ ಕಾಲುಗಳ ಚಲನವಲನ ಮುಂತಾದ ಅಶಾಬ್ದಿಕ ಅಬಿವ್ಯಕ್ತಿಗಳಿಂದ ಉಳಿದ ಶೇಕಡ 55 ರಶ್ಟು ಸಂವಹನಗೊಳ್ಳುತ್ತದೆ” ಎಂದು ಪ್ರತಿಪಾದಿಸಿದ್ದಾರೆ.
ವ್ಯಕ್ತಿಯು ಮಾತನಾಡಲು ತೊಡಗಿದಾಗ ಬಹು ಬಗೆಯ ಬಾವನೆಗಳು ಮೊಗದಲ್ಲಿ ಕಂಡುಬರುತ್ತವೆ. ಕಣ್ಣುಗಳ ನೋಟದಲ್ಲಿ, ಹುಬ್ಬುಗಳ ಏರಿಳಿತದಲ್ಲಿ, ಮೂಗಿನ ಹೊಳ್ಳೆಗಳ ಅದುರುವಿಕೆಯಲ್ಲಿ, ತುಟಿಗಳ ಚಲನೆಯಲ್ಲಿ ಮತ್ತು ಹಲ್ಲುಮುರಿಯನ್ನು ಕಚ್ಚುವುದರಲ್ಲಿ ತಿರಸ್ಕಾರದ, ಆಕ್ರೋಶದ, ಹೆದರಿಕೆಯ, ಗಂಬೀರತೆಯ, ಸಂಕಟದ, ಆನಂದದ ಇಲ್ಲವೇ ಇನ್ನಿತರ ಬಾವನೆಗಳನ್ನು ಕಾಣಬಹುದು. ಬಹುತೇಕ ಸನ್ನಿವೇಶಗಳಲ್ಲಿ ಮನಸ್ಸಿನ ಅಂತರಂಗದ ಒಳಮಿಡಿತಗಳು ಮೊಗದಲ್ಲಿ ಬಹು ಚೆನ್ನಾಗಿ ಬಹಿರಂಗಗೊಳ್ಳುತ್ತಿರುತ್ತವೆ. ಮೊಗದಲ್ಲಿ ಹೊರಹೊಮ್ಮುತ್ತಿರುವ ಚಹರೆಗಳ ಜತೆಜತೆಯಲ್ಲಿಯೇ ಮಾತನಾಡುತ್ತಿರುವ ವ್ಯಕ್ತಿಯ ಕಯ್ಗಳ ಚಲನೆಯು ಮಾತಿನ ಸಮಯದಲ್ಲಿ ಮುಕ್ಯವಾಗುತ್ತದೆ. ಕಯ್ಗಳನ್ನು ಇಲ್ಲವೇ ಕಯ್ ಬೆರಳುಗಳನ್ನು ಅತ್ತಿತ್ತ ಆಡಿಸುವುದು ; ಹಸ್ತಗಳನ್ನು ಅರಳಿಸುವುದು ಇಲ್ಲವೇ ಮುಶ್ಟಿ ಹಿಡಿಯುವುದು ; ಒಂದು ಗೊತ್ತಾದ ದಿಕ್ಕಿನ ಕಡೆಗೆ ಬೆರಳುಗಳನ್ನು ತೋರಿಸುವುದು-ಇವೆಲ್ಲವೂ ಆಡಿದ ಮಾತಿನ ತಿರುಳನ್ನು ಕೇಳುಗರು ಇನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುವುದಕ್ಕೆ ಪೂರಕವಾಗುತ್ತವೆ.
ಇಡೀ ದೇಹದ ಚಲನೆಯು ಮಾತಿನ ಮೇಲೆ ಪರಿಣಾಮವನ್ನು ಬೀರುತ್ತಿರುತ್ತದೆ. ಹಲವು ರೀತಿಗಳಲ್ಲಿ ಅತ್ತಿತ್ತ ಚಲಿಸುತ್ತಾ ಮಾತನಾಡುವುದು ಇಲ್ಲವೇ ಯಾವುದೋ ಒಂದು ನಿಲುವಿನಲ್ಲಿ ನಿಂತುಕೊಂಡು ಮಾತನಾಡುವುದು ಕೂಡ, ಆಡುವ ಮಾತಿನ ಸಂವಹನಕ್ಕೆ ನೆರವಾಗುತ್ತದೆ. ನಾವು ಮಾತನಾಡುವಾಗ ಇತರರಿಗೆ ಎಶ್ಟು ಹತ್ತಿರದಲ್ಲಿರುತ್ತೇವೆ ಇಲ್ಲವೇ ದೂರದಲ್ಲಿರುತ್ತೇವೆ ಎಂಬ ಅಂಶವೂ ಆಡುವ ಮಾತುಗಳ ಮೇಲೆ ಪರಿಣಾಮವನ್ನು ಬೀರುತ್ತಿರುತ್ತದೆ. ಮಾತನ್ನು ಪಿಸುಮಾತಿನಲ್ಲಿ ನುಡಿಯುವಾಗ ಇಲ್ಲವೇ ತುಸು ಗಟ್ಟಿ ದನಿಯಲ್ಲಿ ಹೇಳುವಾಗ ಇಲ್ಲವೇ ಅತಿ ದೊಡ್ಡ ದನಿಯಲ್ಲಿ ಕಿರುಚುವಾಗ ಪದಗಳ ತಿರುಳು ಒಂದೇ ಆಗಿದ್ದರೂ ಮಾತಿನ ಉದ್ದೇಶ ಬೇರೆ ಬೇರೆಯಾಗಿರುತ್ತದೆ. ಹೀಗೆ ಬಗೆಬಗೆಯ ದನಿಯ ಏರಿಳಿತದೊಡನೆ ಮೊಗ ಮತ್ತು ಕಯ್ಗಳನ್ನು ಒಳಗೊಂಡಂತೆ ಇಡೀ ದೇಹದ ಚಲನವಲನಗಳು ಮಾತಿನ ಸಂವಹನ ಕ್ರಿಯೆಯಲ್ಲಿ ಬಹು ದೊಡ್ಡ ಪಾತ್ರವನ್ನು ವಹಿಸುತ್ತವೆ. ಮಾತನಾಡುವಾಗ ಕಂಡುಬರುವ ಇಂತಹ ದೇಹದ ಚಹರೆಗಳ ಹಿನ್ನೆಲೆಯಲ್ಲಿ ಬಯ್ಗುಳದ ಪ್ರಸಂಗಗಳನ್ನು ಗಮನಿಸಿದಾಗ, ಬಯ್ಯುವಿಕೆಯ ಬಗ್ಗೆ ಅನೇಕ ಸಂಗತಿಗಳು ತಿಳಿದುಬರುತ್ತವೆ.
ಕುಟುಂಬದ ನೆಲೆ, ದುಡಿಮೆಯ ನೆಲೆ ಮತ್ತು ಸಾರ‍್ವಜನಿಕ ನೆಲೆಗಳಲ್ಲಿ ಬಯ್ಯುವಾಗ ದೇಹದ ಚಹರೆಗಳು ಬೇರೆ ಬೇರೆ ಬಗೆಗಳಲ್ಲಿ ಕಂಡುಬರುತ್ತವೆ. ಏಕೆಂದರೆ ಬಯ್ಯುವ ಮತ್ತು ಬಯ್ಯಿಸಿಕೊಳ್ಳುವ ವ್ಯಕ್ತಿಯ ಜಾತಿ, ಮತ, ಲಿಂಗ, ವರ‍್ಗವನ್ನು ಒಳಗೊಂಡ ಸಾಮಾಜಿಕ ಅಂತಸ್ತು ಮತ್ತು ವಯಸ್ಸಿನ ಸಂಗತಿಗಳು ಬಯ್ಗುಳದ ಪ್ರಸಂಗದಲ್ಲಿ ಮುಕ್ಯವಾಗುತ್ತವೆ.
ಸಾಮಾಜಿಕ ಅಂತಸ್ತಿನಲ್ಲಿ ಹಾಗೂ ವಯಸ್ಸಿನ ಹಿರಿಯತನದಲ್ಲಿ ದೊಡ್ಡಮಟ್ಟದಲ್ಲಿರುವ ವ್ಯಕ್ತಿಗಳು ಸಾರ‍್ವಜನಿಕ ನೆಲೆಯಲ್ಲಿ ಬಯ್ಗುಳದ ನುಡಿಗಳನ್ನು ಆದಶ್ಟು ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆ; ಅಂತೆಯೇ ತಮ್ಮ ದೇಹದ ಚಹರೆಗಳನ್ನು ಹೊರಹೊಮ್ಮಿಸುವುದರಲ್ಲಿಯೂ ಅತ್ಯಂತ ಸಂಯಮಶೀಲರಾಗಿರಲು ಪ್ರಯತ್ನಿಸುತ್ತಾರೆ. ಮಾತಿನ ಸನ್ನಿವೇಶಗಳಲ್ಲಿ ತಮ್ಮ ಮಯ್ ಮನದಲ್ಲಿ ಕೆರಳುವ ಬಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಂಡು ಮಾತನಾಡಲು ಬಯಸುತ್ತಾರೆ. ಆದರೆ ಇಂತಹ ವ್ಯಕ್ತಿಗಳೇ ತಮ್ಮ ಕುಟುಂಬದ ನೆಲೆಯಲ್ಲಿ ಮತ್ತು ತಮ್ಮದೇ ಒಡೆತನವನ್ನುಳ್ಳ ದುಡಿಮೆಯ ನೆಲೆಯಲ್ಲಿ ತಮ್ಮ ಕಯ್ ಕೆಳಗಿನವರನ್ನು ಬಯ್ಯುವಾಗ ತಮ್ಮ ಕೋಪ ತಾಪಗಳನ್ನು ಅತ್ಯಂತ ಆವೇಶಪೂರ‍್ಣವಾಗಿ ಇಲ್ಲವೇ ಉದ್ರೇಕಪೂರ‍್ಣವಾಗಿಯೇ ಹೊರಹಾಕುತ್ತಾರೆ. ಕುಟುಂಬದ ಮತ್ತು ದುಡಿಮೆಯ ನೆಲೆಯಲ್ಲಿ ಕಂಡುಬರುವ ದೇಹದ ಚಹರೆಯು ಅವರು ಹೊಂದಿರುವ ಸಿರಿವಂತಿಕೆಯ ಇಲ್ಲವೇ ಅದಿಕಾರದ ಸಂಕೇತವಾಗಿರುತ್ತದೆ.
ವ್ಯಕ್ತಿಗಳ ಸಾಮಾಜಿಕ ಅಂತಸ್ತು ತಗ್ಗಿದಂತೆಲ್ಲಾ ಅಂದರೆ ಸಾಮಾಜಿಕ ಜಾತಿರಚನೆಯಲ್ಲಿ ಕೆಳಹಂತದಲ್ಲಿರುವವರು, ಹಣಕಾಸು ಒಡವೆ ವಸ್ತು ಮತ್ತು ಇನ್ನಿತರ ಸಂಪತ್ತಿಲ್ಲದವರು, ಬಯ್ಗುಳದ ಮಾತಿನ ಪ್ರಸಂಗಗಳಲ್ಲಿ ತೊಡಗಿದಾಗ ಸಾರ‍್ವಜನಿಕ ರಂಗದಲ್ಲಾಗಲಿ ಇಲ್ಲವೇ ಕುಟುಂಬದ ನೆಲೆಯಲ್ಲಾಗಲಿ ಯಾವುದೇ ಸಂಕೋಚ, ಹಿಂಜರಿಕೆ, ಸಂಯಮವಿಲ್ಲದೆ ಉದ್ರಿಕ್ತ ಬಾವನೆಗಳನ್ನು ನೇರವಾಗಿ ಪ್ರಕಟಿಸುತ್ತಾರೆ. ಏಕೆಂದರೆ ಜೀವನಕ್ಕೆ ಅತ್ಯಗತ್ಯವಾದ ಅನ್ನ, ಬಟ್ಟೆ, ವಸತಿ, ವಿದ್ಯೆ ಮತ್ತು ಆರೋಗ್ಯದಿಂದ ವಂಚಿತರಾಗಿರುವ ಬಡವರು ಹಸಿವು, ಬಡತನ ಮತ್ತು ಅಪಮಾನದ ಬದುಕನ್ನು ನಡೆಸುತ್ತಿರುವುದರಿಂದ , ತಮ್ಮ ಮಯ್ ಮನದಲ್ಲಿ ಕೆರಳುವ ಬಾವನೆಗಳನ್ನು ಯಾವುದೇ ಆತಂಕವಿಲ್ಲದೇ ಹೊರಹಾಕುತ್ತಾರೆ. ಆದ್ದರಿಂದಲೇ ಕಡು ಬಡವರ ಮತ್ತು ಕೆಳವರ‍್ಗದವರ ಮಾತುಕತೆಗಳಲ್ಲಿ ಬಯ್ಗುಳದ ನುಡಿ ಸಾಮಗ್ರಿಗಳು ಹೆಚ್ಚಾಗಿ ಬಳಕೆಯಾಗುತ್ತವೆ.
ಕುಟುಂಬದ ನೆಲೆ, ದುಡಿಮೆಯ ನೆಲೆ ಮತ್ತು ಸಾರ‍್ವಜನಿಕ ನೆಲೆಗಳಲ್ಲಿ ಬಯ್ಯುವುದಕ್ಕೆ ಮತ್ತು ಬಯ್ಯಿಸಿಕೊಳ್ಳುವುದಕ್ಕೆ ಹೆದರುವ ಜನರೆಂದರೆ ಮದ್ಯಮ ವರ‍್ಗದ ಜನ. ‘ ಮದ್ಯಮ ವರ‍್ಗ ‘ ಎಂದರೆ ಉಣಲು ಉಡಲು ವಾಸಿಸಲು ಅನುಕೂಲವುಳ್ಳ ಆದರೆ ಅತಿ ಹೆಚ್ಚಿನ ಸಿರಿವಂತಿಕೆಯಾಗಲಿ ಇಲ್ಲವೇ ಅದಿಕಾರವಾಗಲಿ ಇಲ್ಲದ ಮಂದಿ. ಮದ್ಯಮ ವರ‍್ಗದ ಜನರಿಗೆ ತಮ್ಮ ಸಾಮಾಜಿಕ ಅಂತಸ್ತನ್ನು ಎಚ್ಚರದಿಂದ ಕಾಪಾಡಿಕೊಳ್ಳಬೇಕೆಂಬ ಕಾತರವಿರುವುದರಿಂದ ತಮ್ಮ ಉಡುಗೆ ತೊಡುಗೆಗಳ ಬಗ್ಗೆ ಎಚ್ಚರವಹಿಸುವಂತೆಯೇ ತಾವು ದುಡಿಯುವ ನೆಲೆ ಮತ್ತು ಸಾರ‍್ವಜನಿಕ ನೆಲೆಗಳಲ್ಲಿ ಆಡುವ ಮಾತಿನ ಬಗ್ಗೆ ಹೆಚ್ಚು ಕಾಳಜಿಯನ್ನು ಹೊಂದಿರುತ್ತಾರೆ. ತಮ್ಮ ಸಾಮಾಜಿಕ ಅಂತಸ್ತಿಗೆ ಕುಂದನ್ನು ಉಂಟುಮಾಡುವಂತಹ ಬಯ್ಗುಳದ ನುಡಿಗಳನ್ನು ಬೇರೆಯವರಿಂದ ಕೇಳಲು ಇಲ್ಲವೇ ಬೇರೆಯವರಿಗೆ ಹೇಳಲು ಹಿಂಜರಿಯುತ್ತಾರೆ. ತಮ್ಮ ಕುಟುಂಬದ ನೆಲೆಯಲ್ಲಿ ಬಳಸುವ ಬಯ್ಗುಳದ ನುಡಿಗಳು ಇತರರಿಗೆ ಕೇಳಿಸದಂತೆ ಎಚ್ಚರವಹಿಸುತ್ತಾರೆ. ಮದ್ಯಮ ವರ‍್ಗದ ಜನರು ತಮಗೆ ಸರಿಯೆನಿಸದ ಯಾವುದೇ ವ್ಯಕ್ತಿಗಳನ್ನು ನೇರವಾಗಿ ಅವರ ಮುಂದೆ ಬಯ್ಯುವುದಕ್ಕಿಂತ ಹೆಚ್ಚಾಗಿ ಅವರ ಹಿಂದೆ, ಅವರಿಗೆ ಗೊತ್ತಾಗದಂತೆ ಬಯ್ದುಕೊಳ್ಳುತ್ತಾರೆ.
ವ್ಯಕ್ತಿಗಳ ನಡುವೆ ಬಯ್ಗುಳವು ಏಕಮುಕವಾಗಿದ್ದರೆ ಅಂದರೆ ಬಯ್ಯುತ್ತಿರುವ ವ್ಯಕ್ತಿಗೆ ಯಾವುದೇ ಬಗೆಯ ಎದುರುತ್ತರವನ್ನು ಕೊಡದೆ ಮತ್ತೊಬ್ಬ ವ್ಯಕ್ತಿಯು ಸುಮ್ಮನೆ ಬಯ್ಯಸಿಕೊಳ್ಳುತ್ತಿದ್ದರೆ, ಬಯ್ಯುತ್ತಿರುವ ಮತ್ತು ಬಯ್ಯಿಸಿಕೊಳ್ಳುತ್ತಿರುವ ವ್ಯಕ್ತಿಗಳ ದೇಹದ ಚಹರೆಯಲ್ಲಿ ಬೇರೆ ಬೇರೆ ಬಗೆಯ ಅಂಶಗಳನ್ನು ನಾವು ಗಮನಿಸಬಹುದು. ಇಂತಹ ಸನ್ನಿವೇಶಗಳಲ್ಲಿ ಬಯ್ಯುವವರು ಆಕ್ರಮಣಶೀಲರಾಗಿರುತ್ತಾರೆ. ದೊಡ್ಡ ದನಿಯಲ್ಲಿ ಅಬ್ಬರಿಸಿ ನುಡಿಯುತ್ತಿರುತ್ತಾರೆ. ಬಯ್ಯುವವರ ಮೊಗದಲ್ಲಿ ತೀವ್ರವಾದ ಕೋಪ, ಆಕ್ರೋಶ ಮತ್ತು ತಿರಸ್ಕಾರದ ಬಾವಗಳು ಪ್ರಕಟಗೊಳ್ಳುತ್ತಿರುತ್ತವೆ. ಬಯ್ಯುತ್ತಿರುವವರು ತಮ್ಮ ಆಕ್ರೋಶಕ್ಕೆ ಗುರಿಯಾದವರನ್ನು ನೆಟ್ಟನೆಯ ನೋಟದಿಂದ ದುರುಗುಟ್ಟಿಕೊಂಡು ನೋಡುತ್ತಿರುತ್ತಾರೆ. ಹುಬ್ಬುಗಳ ಏರಿಳಿತ , ಮೂಗಿನ ಹೊಳ್ಳೆಗಳ ಅರಳುವಿಕೆ, ಹಲ್ಲುಮುರಿಯನ್ನು ಕಚ್ಚುವುದು ಮುಂತಾದ ಮೊಗಬಾವಗಳೂ ಕೂಡ ಈ ಸಮಯದಲ್ಲಿ ಕಂಡುಬರುತ್ತವೆ. ಇಂತಹ ಸಮಯದಲ್ಲಿ
ಸಂಯಮರಹಿತ ವ್ಯಕ್ತಿಗಳು ಅತ್ಯಂತ ಉದ್ರಿಕ್ತವಾದ ಬಾವಗಳನ್ನು ಪ್ರಕಟಿಸುತ್ತಾರೆ. ಕೈಗಳನ್ನು ಅತ್ತಿತ್ತ ಆಡಿಸುತ್ತಿದ್ದು, ಹಲವೊಮ್ಮೆ ಹಲ್ಲೆ ನಡೆಸುವಂತೆ ಬಯ್ಯಿಸಿಕೊಳ್ಳುತ್ತಿರುವವರ ಅತಿ ಹತ್ತಿರಕ್ಕೆ ಬಂದು ಅವರ ಮೊಗದ ಬಳಿ ತಮ್ಮ ಕಯ್ಗಳನ್ನು ಚಾಚುತ್ತಾರೆ. ಕಯ್ಗಳ ಚಲನೆಯಲ್ಲಿಯೇ ಬಯ್ಯಿಸಿಕೊಳ್ಳುತ್ತಿರುವವರನ್ನು ಕೀಳಾಗಿ ಮಾಡಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಬಯ್ಯಿಸಿಕೊಳ್ಳುತ್ತಿರುವವನ ಕೆನ್ನೆಯ ಮೇಲೆ ತಿವಿಯುವ ಇಲ್ಲವೇ ತಲೆಯ ಮೇಲೆ ಹೊಡೆಯುವ ಹಂತಕ್ಕೂ ಹೋಗುತ್ತಾರೆ.
ಇಂತಹ ಪ್ರಸಂಗಗಳಲ್ಲಿ ಬಯ್ಯುವವರ ಆಕ್ರಮಣಕ್ಕೆ ಒಳಗಾದವರ ದೇಹದ ಚಹರೆಗಳು ಈ ಕೆಳಕಂಡಂತಿರುತ್ತವೆ. ಬಯ್ಯಿಸಿಕೊಳ್ಳುತ್ತಿರವವರು ಹಿಂಜರಿಕೆಯಿಂದ ಸುಮ್ಮನೆ ನಿಂತಿರುತ್ತಾರೆ. ಇವರ ಮೊಗದಲ್ಲಿ ಅಪಮಾನದ ಇಲ್ಲವೇ ನೋವಿನ ಬಾವನೆಗಳು ಎದ್ದು ಕಾಣುತ್ತಿರುತ್ತವೆ. ತಲೆ ಬಗ್ಗಿಸಿ ನೆಲದತ್ತ ನೋಡುತ್ತಿರುತ್ತಾರೆ ಇಲ್ಲವೇ ಅತ್ತಿತ್ತ ನೋಡುತ್ತಾರೆಯೇ ಹೊರತು ಬಯ್ಯುತ್ತಿರುವವರನ್ನು ನೋಡುವುದಿಲ್ಲ. ಏಕೆಂದರೆ ಹಾಗೆ ಹಿಂತಿರುಗಿ ಬಯ್ಯುತ್ತಿರುವವರನ್ನು ನೋಡಿದರೆ ಅದು ಪ್ರತಿಬಟನೆಯ ಸಂಕೇತವಾಗುತ್ತದೆ. ಬಯ್ಯಿಸಿಕೊಳ್ಳುತ್ತಿರುವವರ ದೇಹವು ಸ್ವಲ್ಪ ಮಟ್ಟಿಗೆ ಮುದುಡಿಕೊಂಡಂತಿರುತ್ತದೆ.
ಒಂದು ವೇಳೆ ಬಯ್ಗುಳದ ಮಾತಿನ ಕ್ರಿಯೆಯಲ್ಲಿ ಬಾಗಿಗಳಾದವರು ಸಮಾನವಾದ ಸಾಮಾಜಿಕ ಅಂತಸ್ತು ಮತ್ತು ದೇಹದ ಬಲವನ್ನು ಹೊಂದಿದ್ದರೆ, ಆಗ ಅವರ ದೇಹದ ಚಹರೆಯು ಈ ರೀತಿ ಇರುತ್ತದೆ. ಬಾಗಿಗಳಿಬ್ಬರೂ ಆಕ್ರಮಣಶೀಲರಾಗಿ ನಡೆದುಕೊಳ್ಳುತ್ತಾರೆ. ಅವರ ಕಣ್ಣ ನೋಟಗಳು ಪರಸ್ಪರ ತಾಕುತ್ತಿರುತ್ತವೆ. ಒಬ್ಬರು ಮತ್ತೊಬ್ಬರತ್ತ ಪ್ರಕಟಿಸುವ ತಿರಸ್ಕಾರದ, ಆಕ್ರೋಶದ ಮತ್ತು ಅಸಹ್ಯಕರವಾದ ಬಾವಗಳು ಸಮ ಪ್ರಮಾಣದಲ್ಲಿಯೇ ಕಂಡುಬರುತ್ತವೆ.ಬಾಗಿಗಳಲ್ಲಿ ಒಬ್ಬರು ತೋರಿಸಿದ ಬಾವವನ್ನು ಮತ್ತೊಬ್ಬರು ಮರುಗಳಿಗೆಯಲ್ಲಿಯೇ ಅನುಕರಿಸುತ್ತಾರೆ. ಕಯ್ಗಳ ಮತ್ತು ದೇಹದ ಚಲನವಲನಗಳು ಬಹು ತೀವ್ರಗತಿಯಲ್ಲಿರುತ್ತವೆ. ಒಬ್ಬರು ಮತ್ತೊಬ್ಬರನ್ನು ಕಡೆಗಣಿಸುತ್ತಾ, ಆದಶ್ಟು ಅಸಹ್ಯಕರವಾದ ಬಾವಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಾರೆ.
ಬಯ್ಗುಳದ ಪ್ರಸಂಗಗಳಲ್ಲಿ ಗಂಡಸರು ಮತ್ತು ಹೆಂಗಸರಲ್ಲಿ ದೇಹದ ಚಹರೆಗಳು ಬೇರೆ ಬೇರೆ ರೀತಿಯಲ್ಲಿ ಕಂಡುಬರುತ್ತವೆ.
ಆಕ್ರಮಣಶೀಲರಾದ ಗಂಡಸರು ಎದುರಾಳಿಯನ್ನು ದಿಟ್ಟಿಸಿ ನೋಡುತ್ತಾ, ಹುಬ್ಬುಗಳನ್ನು ಗಂಟಿಕ್ಕಿಕೊಂಡು, ಮೊಗದಲ್ಲಿ ತೀವ್ರ ಕೋಪವನ್ನು ಪ್ರಕಟಿಸುತ್ತ ಮುನ್ನುಗ್ಗಲು ಪ್ರಯತ್ನಿಸುತ್ತಾರೆ. ಗಂಡಸರ ಕಾಮದ ಅಂಗದ ಆಕ್ರುತಿಯಲ್ಲಿ ಮುಂಗಯ್ ಅನ್ನು ಬಗ್ಗಿಸಿ ಅಲ್ಲಾಡಿಸುತ್ತಾರೆ. ಕಾಮದ ಕ್ರಿಯೆಯು ನಡೆಯುವ ರೀತಿಯನ್ನು ಎರಡು ಕಯ್ ಗಳಲ್ಲಿ ಅಬಿನಯಿಸಿ ತೋರಿಸುತ್ತ, ಎದುರಾಳಿಗೆ ಅಪಮಾನವನ್ನು ಉಂಟುಮಾಡಲು ಪ್ರಯತ್ನಿಸುತ್ತಾರೆ. ಇಂತಹ ಉದ್ರಿಕ್ತ ಬಾವದ ವರ‍್ತನೆಯು ಮದ್ಯಮ ಕೆಳವರ‍್ಗದ ಮತ್ತು ಅತಿ ಕೆಳವರ‍್ಗದ ಗಂಡಸರಲ್ಲಿ ಹೆಚ್ಚಾಗಿ ಕಾಣುತ್ತೇವೆ.
ಸಾಮಾಜಿಕವಾಗಿ ಮೇಲು ಮತ್ತು ಮದ್ಯಮ ವರ‍್ಗಕ್ಕೆ ಸೇರಿದ ಹೆಂಗಸರು ದುಡಿಮೆಯ ನೆಲೆ ಮತ್ತು ಸಾರ‍್ವಜನಿಕ ನೆಲೆಗಳಲ್ಲಿ ಎಲ್ಲರ ಮುಂದೆ ಬಹಿರಂಗವಾಗಿ ನಡೆಯುವ ಬಯ್ಗುಳ ಪ್ರಸಂಗಗಳಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಾರೆ. ತಮ್ಮ ಕುಟುಂಬದ ಮತ್ತು ತಮ್ಮ ನಡವಳಿಕೆಯ ಬಗ್ಗೆ ಕೆಟ್ಟ ಹೆಸರು ಬರುತ್ತದೆಯೆಂದು ಬಯ್ಗುಳದ ಮಾತುಗಳನ್ನಾಡಲು ಅಂಜುತ್ತಾರೆ. ಸಾಮಾನ್ಯವಾಗಿ ಮೇಲು ಮತ್ತು ಮದ್ಯಮ ವರ‍್ಗಕ್ಕೆ ಸೇರಿದ ಹೆಂಗಸರಲ್ಲಿ ಹೆಚ್ಚಿನವರು ಗಂಡಸರ ಆದಾಯದಿಂದಲೇ ಮನೆಯ ವ್ಯವಹಾರಗಳನ್ನು ನಡೆಸುತ್ತಿರುವ ಪರಾವಲಂಬಿಗಳಾಗಿರುತ್ತಾರೆ. ಇದರಿಂದಾಗಿ ಅವರು ತಮ್ಮ ನೋವಿಗೆ ಕಾರಣರಾದವರನ್ನು ನೇರವಾಗಿ ಬಯ್ಯಲು ಅಳುಕುತ್ತಾರೆ.
ಆದರೆ ಕೆಳ ವರ‍್ಗದ ಹೆಂಗಸರಲ್ಲಿ ಹೆಚ್ಚುಕಡಿಮೆ ಎಲ್ಲರೂ ಸ್ವಾವಲಂಬಿಯಾಗಿರುತ್ತಾರೆ. ಅಂದರೆ ತಮ್ಮ ದಿನನಿತ್ಯದ ಅನ್ನವನ್ನು ತಾವೇ ದುಡಿದು ತಿನ್ನುವ ಮಂದಿಯಾಗಿರುತ್ತಾರೆ. ಆದ್ದರಿಂದ ಗಂಡಸರೊಡನೆ ಸರಿಸಮಾನವಾಗಿ ನಿಂತು ಮಾತನಾಡಬಲ್ಲ ಕಸುವನ್ನು ಹೊಂದಿರುತ್ತಾರೆ. ದುಡಿಮೆಯ ನೆಲೆಯಲ್ಲಿ ಮೇಲು ಜಾತಿಯ ಗಂಡಸರಿಂದ ಬಹುಬಗೆಯ ಕಿರುಕುಳಕ್ಕೆ ಒಳಗಾಗುವುದರ ಜತೆಗೆ ಆಗಾಗ್ಗೆ ಬಯ್ಯಿಸಿಕೊಳ್ಳುವ ಕೆಳ ವರ‍್ಗದ ಹೆಂಗಸರು ಕೆಲಸವನ್ನು ಕಳೆದುಕೊಳ್ಳುವ ಹೆದರಿಕೆಯಿಂದ ಸುಮ್ಮನಾಗುತ್ತಾರೆ. ಆದರೆ ಇದೇ ಹೆಂಗಸರು ತಮ್ಮ ಕುಟುಂಬದ ವ್ಯಕ್ತಿಗಳೊಡನೆ ಮತ್ತು ತಮ್ಮಂತೆಯೇ ಬಡವರಾಗಿರುವ ಗಂಡುಹೆಣ್ಣುಗಳೊಡನೆ ಜಗಳವಾಡುವಾಗ ಬಯ್ಗುಳವನ್ನು ಯಾವ ಹಿಂಜರಿಕೆಯಿಲ್ಲದೆ ಬಳಸುತ್ತಾರೆ.
ಬಯ್ಯುವಾಗ ತಮ್ಮ ಕಯ್ ಗಳನ್ನು ತೀವ್ರಗತಿಯಲ್ಲಿ ಆಡಿಸುತ್ತಾ, ಎದುರಾಳಿಯ ಕೆನ್ನೆಯನ್ನು ತಿವಿಯಲು, ತಲೆಯ ಕೂದಲನ್ನು ಹಿಡಿದು ಎಳೆಯಲು, ಬಟ್ಟೆಯನ್ನು ಕೀಳಲು ಪ್ರಯತ್ನಿಸುತ್ತಾರೆ. ಇಂತಹ ಸಮಯದಲ್ಲಿ ಆಕ್ರಮಣಕಾರಿ ರೂಪದಲ್ಲಿ ಕಾಮದ ನಂಟಿನ ಬಯ್ಗುಳಗಳನ್ನು ಕೂಡ ಆಡುತ್ತಾರೆ. ಶಾಪರೂಪದ ಬಯ್ಗುಳಗಳನ್ನು ಹೆಚ್ಚಾಗಿ ಆಡುವ ಹೆಂಗಸರು ತಮ್ಮ ಎರಡು ಕೈಗಳನ್ನು ಮುಂದಕ್ಕೆ ಒಡ್ಡಿ ಬೆರಳುಗಳಿಂದ ನಟಿಕೆಯನ್ನು ಮುರಿಯುತ್ತಾ ಶಪಿಸುತ್ತಾರೆ. ಬೀದಿಯಲ್ಲಿರುವ ದೂಳನ್ನು ಎರಡು ಕಯ್ ಗಳಲ್ಲೂ ಗೋರಿಕೊಂಡು, ಎದುರಾಳಿಯ ಕಡೆಗೆ ಇಲ್ಲವೇ ಅವನ/ಅವಳ ಮನೆಯ ಮೇಲೆ ಎರಚುತ್ತಾ ಶಪಿಸುತ್ತಾರೆ. ಬಯ್ಗುಳದ ಪ್ರಸಂಗಗಳಲ್ಲಿ ಸಾಮಾನ್ಯವಾಗಿ ಗಂಡಸರು ಅಳುವುದು ಕಂಡುಬರುವುದಿಲ್ಲ. ಆದರೆ ಹೆಂಗಸರಲ್ಲಿ ಬಹಳಶ್ಟು ಮಂದಿ ಅಳುತ್ತಲೇ ಬಯ್ಯುತ್ತಿರುತ್ತಾರೆ.
ಬಯ್ಗುಳಗಳನ್ನು ಸದಾಕಾಲ ಆಡುತ್ತಲೇ ಇರುವ ಚಟವುಳ್ಳ ಕೆಲವು ಹೆಂಗಸರು ಮತ್ತು ಗಂಡಸರು ತಾವು ಕುಳಿತ ಕಡೆಯಲ್ಲಿಯೇ ಇಲ್ಲವೇ ತಾವು ಕೆಲಸ ಮಾಡುತ್ತಿರುವ ಜಾಗದಲ್ಲಿಯೇ ಅತ್ತಿತ್ತ ತಿರುಗಾಡುತ್ತಾ ಗಂಟೆಗಟ್ಟಲೆ ಏಕ ಪ್ರಕಾರವಾಗಿ ಬಯ್ಯುವಂತಹ ಕಸುವನ್ನು ಹೊಂದಿರುತ್ತಾರೆ. ಇಂತಹವರಲ್ಲಿ ಹೆಚ್ಚಿನ ಮಂದಿ ಒಂದಲ್ಲ ಒಂದು ಬಗೆಯ ಮಾನಸಿಕ ಒತ್ತಡದಿಂದ ನರಳುತ್ತಿರುತ್ತಾರೆ.
ಕುಟುಂಬದ ನೆಲೆಯಲ್ಲಿ ಬಯ್ಗುಳಗಳು ಪ್ರಯೋಗಗೊಂಡಾಗ, ಹಲವೊಮ್ಮೆ ಬಯ್ಯಿಸಿಕೊಳ್ಳುವವರ ಮೊಗವನ್ನು ದಿಟ್ಟಿಸಿ ನೋಡುವುದಾಗಲಿ ಇಲ್ಲವೇ ಬೇರೆ ಬೇರೆ ಬಗೆಯ ಬಾವಗಳಾಗಲಿ ಕಂಡುಬರುವುದಿಲ್ಲ. ಬಯ್ಯುತ್ತಿರುವವರು ತಮ್ಮ ಪಾಡಿಗೆ ತಾವು ಕೆಲಸಗಳನ್ನು ಮಾಡುತ್ತಲೇ ಬಯ್ಗುಳದ ನುಡಿಗಳನ್ನು ಆಡುತ್ತಿರುತ್ತಾರೆ.
(ಚಿತ್ರ ಸೆಲೆ: learnitaliango.com)
ಇತ್ತೀಚಿನ ಅನಿಸಿಕೆಗಳು