ಟೆನ್ನಿಸ್ ಅಂಗಳದಿಂದಾಚೆಯ ರೋಜರ್ ಪೆಡರರ್

ರಾಮಚಂದ್ರ ಮಹಾರುದ್ರಪ್ಪ.

ಜನಪ್ರಿಯ ಆಟಗಾರರನ್ನು ಅವರ ತವರು ದೇಶಗಳಲ್ಲಲ್ಲದೇ ಹೊರದೇಶಗಳಲ್ಲಿಯೂ, ಆರಾದಿಸಿ ಅವರ ನಡೆ-ನುಡಿಗಳನ್ನು ಹಿಂಬಾಲಿಸೋ ಸಹಸ್ರಾರು ಅಬಿಮಾನಿಗಳು ಸದಾ ಇರುತ್ತಾರೆ. ಪುಟ್ಬಾಲ್, ಟೆನ್ನಿಸ್, ಕ್ರಿಕೆಟ್, ಅತ್ಲೆಟಿಕ್ಸ್, ಗಾಲ್ಪ್ ಆದಿಯಾಗಿ ಈ ಆಟಗಳ ದಿಗ್ಗಜ ಆಟಗಾರರು ಎಶ್ಟೋ ಅಬಿಮಾನಿಗಳ ಆರಾದ್ಯ ದೈವವಾಗಿರುವ ಎತ್ತುಗೆಗಳು ನಮ್ಮ ಕಣ್ಣ ಮುಂದಿವೆ. ಹಾಗಾಗಿ ಆಟದ ಅಂಗಳದ ಹೊರಗೂ ಸಂಯಮ ಹಾಗೂ ಸನ್ನಡತೆ ಕಾಪಿಡಿಕೊಳ್ಳುವ ಒತ್ತಡ ಆಟಗಾರರ ಮೇಲೆ ಇದ್ದೇ ಇರುತ್ತದೆ. ಕ್ರಿಕೆಟ್‍‍ನಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆರಂತಹ ದಿಗ್ಗಜ ಆಟಗಾರರು ಆಟದ ಹೊರಗೂ ಬದುಕಲ್ಲಿ ತಮ್ಮ ತಾಳ್ಮೆ ಹಾಗೂ ಶ್ರೇಶ್ಟ ವ್ಯಕ್ತಿತ್ವದಿಂದ ಯುವಜನತೆಗೆ ಮಾದರಿಯಾಗಿದ್ದಾರೆ. ಇದೇ ರೀತಿ ಟೆನ್ನಿಸ್‍‍ನಲ್ಲಿ ರೋಜರ್ ಪೆಡೆರರ್ ಹಾಗೂ ರಪೇಲ್ ನಡಾಲ್ ಪ್ರಪಂಚದಾದ್ಯಂತ ತಮ್ಮ ಸೊಗಸಾದ ಟೆನ್ನಿಸ್ ಚಳಕ ಮತ್ತು ಆಟದ ಹೊರಗಿನ ನಡುವಳಿಕೆಯಿಂದ ಸಹಸ್ರಾರು ಅಬಿಮಾನಿಗಳನ್ನು ಸಂಪಾದಿಸಿ ಮಾದರಿಯಾಗಿದ್ದಾರೆ. ಈ ಆಟಗಾರರ ವ್ಯಕ್ತಿತ್ವ ಎಶ್ಟೋ ಜನರ ಬದುಕಿನ ಮೇಲೆ ಪ್ರಬಾವ ಬೀರಿ ಅವರಿಗೆ ಕಶ್ಟಗಳು ಎದುರಾದಾಗ ಕುಂದದೆ ಎದುರಿಸೋ ತನ್ನಂಬಿಕೆ ಮೂಡಿಸಿದೆ ಎಂದರೆ ತಪ್ಪಾಗಲಾರದು.

ಪೆಡೆರರ್ ಮತ್ತು ಅವರ ಕೋಚ್ ಪೀಟರ್ ಕಾರ‍್ಟರ್ ನಡುವಣ ಸಂಬಂದ

ಇಂದು ಟೆನ್ನಿಸ್ ದಂತಕತೆಯಾಗಿರುವ ರೋಜರ್ ಪೆಡೆರರ್ ಎಂಟು ವರುಶದ ಹುಡುಗನಾಗಿದ್ದಾಗ ವ್ರುತ್ತಿಪರ ಆಟಗಾರನಾಗಲು ಬೆಸೆಲ್‍‍ನ ‘ಓಲ್ಡ್ ಬಾಯ್ಸ್’ ಕ್ಲಬ್ ಸೇರುತ್ತಾರೆ. ಅಲ್ಲಿ ಅವರ ಮೊದಲ ಕೋಚ್ ಆದ ಆಸ್ಟ್ರೇಲಿಯಾದ ಪೀಟರ್ ಕಾರ‍್ಟರ್ ಪುಟ್ಟ ಪೆಡೆರರ್‍‍ನ ಆಟಕ್ಕೆ ಒಳ್ಳೆ ಅಡಿಪಾಯ ಹಾಕಿಕೊಟ್ಟು ಸೊಗಸಾದ ತಂತ್ರಗಾರಿಕೆಯನ್ನು ರೂಪಿಸುತ್ತಾರೆ. ತಾಳ್ಮೆ, ಸಂಯಮ, ಶಿಸ್ತು ಇವ್ಯಾವೂ ಇಲ್ಲದೆ ಸದಾ ಚೇಶ್ಟೆ ಮಾಡುತ್ತಾ ಹಟಮಾರಿ ಎನಿಸಿಕೊಂಡಿದ್ದ ಪೆಡೆರರ್ ತಮ್ಮ ಕ್ಲಬ್‍‍ನ ಉತ್ತಮ ಆಟಗಾರನಾಗದೆ ಇದ್ದ ಹೊತ್ತಲ್ಲೂ ಅವರ ಅಳವನ್ನು ಗುರುತಿಸಿ, ನಿಮ್ಮ ಮಗ ಮುಂದೆ ದೊಡ್ಡ ಆಟಗಾರನಾಗಿ ಗ್ರಾಂಡ್ಸ್ಲಾಮ್ ಗಳನ್ನು ಗೆಲ್ಲಲ್ಲಿದ್ದಾನೆ ಎಂದು ಪೆಡೆರರ್‍‍ರ ಹೆತ್ತವರಿಗೆ ಕೋಚ್ ಪೀಟರ್ ಕಾರ‍್ಟರ್ ಹೇಳಿರುತ್ತಾರೆ. ಇಂತಹ ಹುಡುಗನಿಗೆ ಕೋಚ್‍‍ಗಿಂತ ಹೆಚ್ಚಾಗಿ ಒಬ್ಬ ಗೆಳೆಯನಾಗಿ, ಹಿರಿಯಣ್ಣನಾಗಿ ಕಾಲಕ್ರಮೇಣ ತಿದ್ದಿ-ತೀಡಿ ಆಟದಲ್ಲಿ ಬೆಳೆಯುವುದರ ಜೊತೆಗೆ ಅವನ ವ್ಯಕ್ತಿತ್ವವನ್ನೂ ಜನ ಮೆಚ್ಚುವಂತೆ ಕಾರ‍್ಟರ್ ಮಾಡುತ್ತಾರೆ. ಆಟದ ಕೋರ‍್ಟ್ ನಲ್ಲಿ ಸಿಟ್ಟಾಗದೆ ಸಂಯಮದಿಂದ ವರ‍್ತಿಸುತ್ತಾ ಎದುರಾಳಿಯನ್ನು ಗೌರವಿಸುವ ಪರಿಪಾಟವನ್ನು ಕಾರ‍್ಟರ್ ಅವರು ಪೆಡೆರರ್ ಆಟದಲ್ಲಿ ರೂಡಿಸುತ್ತಾರೆ. ಆಟದಲ್ಲಿ ಸೋಲು-ಗೆಲುವು ಇದ್ದದ್ದೇ! ಅವನ್ನು ಒಂದೇ ರೀತಿಯಲ್ಲಿ ಸ್ವೀಕರಿಸಬೇಕು ಎಂಬ ಅವರ ನಂಬಿಕೆಯನ್ನು ತಮ್ಮ ಶಿಶ್ಯನಿಗೂ ಮನದಟ್ಟು ಮಾಡಿಸುತ್ತಾರೆ. ವಾಲೀ ಸ್ಟ್ರೋಕ್‌ಗಳಿಂದ ಬೇಸ್‌ಲೈನ್ ಸ್ಟ್ರೋಕ್‌ಗಳಿಗೆ ಮಾರ‍್ಪಡಿಸಿ, ಎರಡು-ಕೈಗಳ ಬ್ಯಾಕ್ ಹ್ಯಾಂಡ್ ಹೊಡೆತಗಳ ಬದಲಾಗಿ ಒಂದು ಕೈನ ಹೊಡೆತಗಳನ್ನು ಆಡುವಂತೆ ಪೆಡೆರರ್‍‍ರಿಗೆ ಪ್ರೇರೇಪಿಸುತ್ತಾರೆ. ಇಂದು ಇವೇ ಅವರ ಆಟದ ದೊಡ್ಡ ಶಕ್ತಿಯಾಗಿರುವುದು ಕಾರ‍್ಟರ್‍‍ರ ದೂರದ್ರುಶ್ಟಿಗೆ ಎತ್ತುಗೆ. ಒಂದು ಮಟ್ಟಕ್ಕೆ ಕಾರ‍್ಟರ್, ಸಂಯಮದ ಕೊರತೆ ಇದ್ದ ಪೆಡೆರರ್‍‍ರನ್ನು ಹದ ಮಾಡಿದರು ಎಂದೇ ಹೇಳಬೇಕು. ಬಳಿಕ ಹಂತ ಹಂತವಾಗಿ ಬೆಳೆದ ಪೆಡೆರರ್ 1998ರಲ್ಲಿ ಕಿರಿಯರ ವಿಂಬಲ್ಡನ್ ಗೆದ್ದು ಆ ಬಳಿಕ ವ್ರುತ್ತಿಪರ ಆಟಗಾರನಾಗಿ ATP ಪಂದ್ಯಾವಳಿಗಳನ್ನು ಆಡಲು ಬಡ್ತಿ ಪಡೆಯುತ್ತಾರೆ. ಇನ್ನೂ ದೊಡ್ಡ ಮಟ್ಟದ ಗ್ರಾಂಡ್ಸ್ಲಾಮ್‍‍ಗಳಲ್ಲಿ ಯಶಸ್ಸು ಕಾಣಲು ಕಾತರರಾಗಿ ಅಣಿಯಾಗುತ್ತಿದ್ದ ಪೆಡೆರರ್‍‍ರ ಬದುಕಲ್ಲಿ ದೊಡ್ಡ ಆಗಾತ ಕಾದಿರುತ್ತದೆ. 2002 ರ ಆಗಸ್ಟ್ 1 ರಂದು ಪೀಟರ್ ಕಾರ‍್ಟರ್ ದಕ್ಶಿಣ ಆಪ್ರಿಕಾದಲ್ಲಿ ಒಂದು ರಸ್ತೆ ಅಪಗಾತದಲ್ಲಿ ಸಾವಿಗೀಡಾಗುತ್ತಾರೆ. ಆ ವೇಳೆ ATP ಪಂದ್ಯಾವಳಿಗಾಗಿ ಟೊರಾಂಟೋಲಿ ಬೀಡು ಬಿಟ್ಟಿದ್ದ ಪೆಡೆರರ್ ಸುದ್ದಿ ತಿಳಿದೊಡನೆ ದಿಗ್ಬ್ರಮೆಗೊಳಗಾಗುತ್ತಾರೆ. ದಿಕ್ಕೇ ತೋಚದೆ ಬಿಕ್ಕಿ-ಬಿಕ್ಕಿ ಅಳುತ್ತಾ ತಾನೆಲ್ಲಿದ್ದೇನೆ ಎಂಬುದರ ಅರಿವೇ ಇಲ್ಲದೆ ತಮ್ಮ ಹೋಟೆಲ್ ಕೋಣೆಯಿಂದ ಹೊರಬಂದು ಟೊರಾಂಟೋದ ರಸ್ತೆಗಳಲ್ಲಿ ಗಂಟೆಗಟ್ಟಲೆ ಗೊತ್ತು-ಗುರಿಯಿಲ್ಲದೆ ಅಲೆದಾಡುತ್ತಾರೆ. ಕೋಚ್‍‍ನ ದಿಡೀರ್ ಸಾವು ಪೆಡೆರರ್‍‍ರ ಬದುಕನ್ನು ಅಕ್ಶರಶಹ ಬುಡಮೇಲು ಮಾಡುತ್ತದೆ.

ಎಚ್ಚರಿಕೆಯ ಕರೆಗಂಟೆ!

ಯಾರೂ ಸಹ ತಮ್ಮನ್ನು, ತಮ್ಮ ಆಟದ ಅಳವನ್ನು ನಂಬದೆ ಇದ್ದ ಹೊತ್ತಿನಲ್ಲಿ ಪೆಡೆರರ್ ಬೆನ್ನಿಗೆ ನಿಂತು ಹುರಿದುಂಬಿಸಿ ಪರಿಪಕ್ವ ಆಟಗಾರನನ್ನಾಗಿ ಮಾಡಿದ ಕೋಚ್ ಪೀಟರ್ ಕಾರ‍್ಟರ್‍‍ರ ಸಾವು ಪೆಡೆರರ್ ರನ್ನು ಅವರ ಆಟದಲ್ಲಿ ಸಾದಿಸಬೇಕಾದ್ದನ್ನು ನೆನಪಿಸಿ ಎಚ್ಚರಿಸುತ್ತದೆ. ಬಳಿಕ ಶಿಸ್ತನ್ನು ಮೈಗೂಡಿಸಿಕೊಂಡು ಶಾಂತ ಮೂರ‍್ತಿಯಾಗಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡ ಪೆಡೆರರ್ ತಮ್ಮ ಪ್ರತಿಬೆಯನ್ನು ಅರಿತು ಬೆವರು ಹರಿಸುತ್ತಾ ಆಟದಲ್ಲಿ ದಾಪುಗಾಲಿಡುತ್ತಾರೆ. ತನ್ನಂಬಿಕೆಯಿಂದ, ಸಾದಿಸುವ ಚಲದಿಂದ ಕಣಕ್ಕಿಳಿದ ಪೆಡೆರರ್ ಮೊದಲಿಗೆ ವಿಯೆನ್ನಾ ಓಪನ್ ಗೆದ್ದು ಅದರ ಬೆನ್ನಲ್ಲೇ 2002 ರ ATP ಮಾಸ್ಟರ‍್ಸ್ ಪಂದ್ಯಾವಳಿಗೂ ಅರ‍್ಹತೆ ಪಡೆಯುತ್ತಾರೆ. ಆ ನಂತರ ಅಲ್ಲಿಂದ ಕೆಲವೇ ತಿಂಗಳಲ್ಲಿ ತಮ್ಮ ಮೊದಲ ಗ್ರಾಂಡ್ಸ್ಲಾಮ್, 2003 ರ ವಿಂಬಲ್ಡನ್ ಗೆದ್ದು, ಬಾವುಕರಾಗಿ ಆ ಗೆಲುವನ್ನು ತಮ್ಮ ಎಳವೆಯ ಕೋಚ್ ಕಾರ‍್ಟರ್‍‍ರಿಗೆ ಅರ‍್ಪಿಸುತ್ತಾರೆ. “ನನಗೆ ಮಾದರಿಯಾಗಿ ನನ್ನನ್ನು ಬೆಳೆಸಿದ ಕಾರ‍್ಟರ್ ನನ್ನ ಬದುಕಿನಲ್ಲಿ ಅತ್ಯಂತ ಮುಕ್ಯ ವ್ಯಕ್ತಿ. ಅವರು ಇಂದು ನನ್ನೊಂದಿಗಿದ್ದಿದ್ದರೆ ಇಬ್ಬರೂ ಒಟ್ಟಿಗೆ ಈ ಗೆಲುವನ್ನು ಸಂಬ್ರಮಿಸುತ್ತಿದ್ದೆವು. ಅವರು ಎಲ್ಲಿಂದಾದರೂ ನನ್ನ ಗೆಲುವನ್ನು ನೋಡಿರುತ್ತಾರೆ ಎಂದು ನಂಬುತ್ತೇನೆ” ಎಂದು ಪೆಡೆರರ್ ನುಡಿದಾಗ ಅಂಗಳದಲ್ಲಿ ನೆರೆದಿದ್ದ ಎಲ್ಲರ ಕಣ್ಣಾಲೆಗಳು ಒದ್ದೆಯಾಗಿದ್ದವು.

ಕಾರ‍್ಟರ್ ಕುಟುಂಬದೊಂದಿಗೆ ಪೆಡೆರರ್ ನಂಟು

ಕಾರ‍್ಟರ್ ಸಾವಿಗೀಡಾಗಿ ಎರಡು ದಶಕಗಳೇ ಕಳೆದರೂ ಪೆಡೆರರ್ ತಮ್ಮ ನೆಚ್ಚಿನ ಕೋಚ್‍‍ನ ಕುಟುಂಬದ ಒಬ್ಬ ಸದಸ್ಯನಂತೆ ಇಂದಿಗೂ ತಮ್ಮ ನಂಟನ್ನು ಉಳಿಸಿಕೊಂಡಿದ್ದಾರೆ. ಇಂದಿಗೆ 20 ಗ್ರಾಂಡ್ಸ್ಲಾಮ್ ಗೆದ್ದಿರುವ ಪೆಡೆರರ್ ತಮ್ಮ ಪ್ರತೀ ಗ್ರಾಂಡ್ಸ್ಲಾಮ್ ಗೆಲುವಿನ ಬಳಿಕ ಬಾವುಕರಾಗಿ, ನೆನೆದು ಮೊದಲು ದನ್ಯವಾದ ಹೇಳುವುದು ಕಾರ‍್ಟರ್‍‍ರಿಗೆ. 2005 ರಿಂದ ಪ್ರತೀ ಬಾರಿ ಆಸ್ಟ್ರೇಲಿಯಾ ಓಪನ್ ಆಡಲು ಮೆಲ್ಬರ‍್ನ್ ಗೆ ಹೋದಾಗ ಆಟಗಾರರ ಬಾಕ್ಸ್ ನಲ್ಲಿ ಕಾರ‍್ಟರ‍್ರ ಹೆತ್ತವರಾದ ಡೈಯಾನ ಮತ್ತು ಬಾಬ್ ಅವರಿಗೆ ವಿಶೇಶ ಆಸನಗಳನ್ನು ಪೆಡೆರರ್ ಮೀಸಲಿಡಿಸುತ್ತಾ ಬಂದಿದ್ದಾರೆ. ಈ ಪರಿಪಾಟ ಇಂದಿಗೂ ಮುಂದುವರೆದಿದೆ.

ಪೆಡೆರರ್‍‍ರನ್ನು ಇಂದು ದಿಗ್ಗಜ, ಸೌಮ್ಯ ಸ್ವಬಾವದ ಶ್ರೇಶ್ಟ ವ್ಯಕ್ತಿ ಎಂದು ಕೋಟ್ಯಾನು ಕೋಟಿ ಅಬಿಮಾನಿಗಳು ಕೊಂಡಾಡುವುದು ಸರ‍್ವೇ ಸಾಮಾನ್ಯವಾಗಿದೆ. ಆದರೆ, ಅವರನ್ನು ಮತ್ತವರ ಆಟವನ್ನು ಎಲ್ಲರೂ ಮೆಚ್ಚುವಂತಹ ಬಗೆಯಲ್ಲಿ ರೂಪಿಸಿದ ವ್ಯಕ್ತಿ ಪೀಟರ್ ಕಾರ‍್ಟರ್‍‍ರನ್ನು ಯಾರೂ ಮರೆಯಕೂಡದು. ಹಾಗೇ, ಒಂದು ಸಾವು ಪೆಡೆರರ್ ರಬದುಕಿನ ಮೇಲೆ ಹೇಗೆ ಪ್ರಬಾವ ಬೀರಿ ಅವರನ್ನು ಮಾರ‍್ಪಡಿಸಿತು ಎಂಬುದು ಟೆನ್ನಿಸ್ ಅಬಿಮಾನಿಗಳೆಲ್ಲರಿಗೂ ತಿಳಿದಿರಲೇಬೇಕು. ಪೆಡೆರರ್ 2018 ರ ಆಸ್ಟ್ರೇಲಿಯಾ ಓಪನ್ ಗೆದ್ದು ತಮ್ಮ ಗ್ರಾಂಡ್ಸ್ಲಾಮ್ ಎಣಿಕೆಯನ್ನು 20ಕ್ಕೆ ಏರಿಸಿದ ಮೇಲೆ ಒಂದು ಕಾಸಗಿ ಸಂದರ‍್ಶನದಲ್ಲಿ ನಿರೂಪಕಿ ಕೋಚ್ ಪೀಟರ್ ಕಾರ‍್ಟರ್ ಬಗ್ಗೆ ಕೇಳಿದಾಗ, ಅವರು ಹಳೆಯದನ್ನೆಲ್ಲಾ ನೆನೆದು ಮಾತಿನ ನಡುವೆ ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತದು ಅವರ ಗುರುವಿನ ಬಗೆಗಿನ ಮಾಸದ ಪ್ರೀತಿಗೆ ಸಾಕ್ಶಿಯಾಯಿತು. ಇಂತಹ ದಿಗ್ಗಜ ಆಟಗಾರನ ಟೆನ್ನಿಸ್ ಚಳಕವನ್ನು ನೋಡುತ್ತಾ ನಲಿದ ಈ ಪೀಳಿಗೆ ನಿಜಕ್ಕೂ ಅದ್ರುಶ್ಟಶಾಲಿ!

(ಚಿತ್ರ ಸೆಲೆ: tennisworldusa.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks