ಬಣ್ಣ ಬದಲಿಸುವ ಹಣ್ಣುಗಳು

– ಕಿಶೋರ್ ಕುಮಾರ್.

ಸೇಬು

ಹಣ್ಣುಗಳನ್ನು ಕತ್ತರಿಸಿದಾಗ ಸ್ವಲ್ಪ ಹೊತ್ತಲ್ಲೇ ಅವು ಬೇರೆ ಬಣ್ಣಕ್ಕೆ ತಿರುಗುವುದನ್ನ ನೋಡೇ ಇರ‍್ತೀವಿ. ಇದರಲ್ಲಿ ಸೇಬು ಮೊದಲ ಸ್ತಾನದಲ್ಲಿ ನಿಲ್ಲುತ್ತೆ ಅನ್ನಬಹುದು. ಕತ್ತರಿಸುವಾಗ ಬೆಳ್ಳಗಿರುವ ಸೇಬು ತುಸು ಹೊತ್ತಲ್ಲೇ ಕಂದು ಬಣ್ಣಕ್ಕೆ ತಿರುಗುತ್ತದೆ. ನಾವು ಕೂಡ ಇದರ ಹಿಂದಿನ ಕಾರಣ ಏನಿರಬಹುದು ಅಂತ ತಲೆಕೆಡಿಸಿಕೊಂಡಿರ‍್ತೀವಿ. ಅದರ ಹಿಂದಿನ ಗುಟ್ಟನ್ನ ಹುಡುಕಲು ಹೊರಟರೆ ನಮಗೆ ಸಿಗುವ ಉತ್ತರ ಎನ್ಜೈಮ್ಯಾಟಿಕ್ ಬ್ರೌನಿಂಗ್ (enzymatic browning). ಈ ಬಣ್ಣ ಬದಲಾವಣೆಯ ಕ್ರಿಯೆಯನ್ನ ಎನ್ಜೈಮ್ಯಾಟಿಕ್ ಬ್ರೌನಿಂಗ್ ಎನ್ನುತ್ತಾರೆ. ಒಂದು ಸೇಬನ್ನ ಕತ್ತರಿಸಿದಾಗ ಇಲ್ಲವೇ ಅದಕ್ಕೆ ಪೆಟ್ಟು ಬಿದ್ದಾಗ ಹಣ್ಣಿನ ಒಳಮಯ್ ಗಾಳಿಗೆ ತೆರೆದುಕೊಳ್ಳುತ್ತದೆ, ಇದರಿಂದ ಗಾಳಿಯಲ್ಲಿರುವ ಆಕ್ಸಿಜನ್ ಜೊತೆಗೆ ಉಂಟಾಗುವ ರಾಸಾಯನಿಕ ಕ್ರಿಯೆಯಿಂದ ಸೇಬು ಕಂದು ಬಣ್ಣಕ್ಕೆ ತಿರುಗುತ್ತದೆ.

ಈ ಬದಲಾವಣೆಯನ್ನು ಮುಂದೂಡಬಹುದೇ?

ಬಣ್ಣ ಬದಲಾಗುವುದನ್ನು ತುಸು ಹೊತ್ತಿನವರೆಗೆ ತಡೆಯಲು ರೆಪ್ರಿಜಿರೇಟರ್ ನಲ್ಲಿ ಇಡಬಹುದು. ಇಲ್ಲವೇ ನಿಂಬೆ ರಸ/ಅನಾನಸ್ ಹಣ್ಣಿನ ರಸವನ್ನು ಸಿಂಪಡಿಸುವುದರಿಂದಲೂ ಸಹ ಬಣ್ಣ ಬದಲಾವಣೆಯನ್ನು ತುಸು ಮುಂದೂಡಬಹುದು. ಈ ಹಣ್ಣುಗಳಲ್ಲಿರುವ ಆಸಿಡ್ ಗಳು ಬಣ್ಣ ಬದಲಾವಣೆಯನ್ನು ತುಸು ನಿದಾನಪಡಿಸುತ್ತವೆ. ನೀವು ಸಿಹಿಯನ್ನು ಇಶ್ಟಪಡುವವರಾಗಿದ್ದರೆ ಜೇನು ಇಲ್ಲವೆ ಸಕ್ಕರೆ ಪಾಕವನ್ನು ಸಿಂಪಡಿಸಿ ಸಹ ಈ ಬಣ್ಣ ಬದಲಾವಣೆಯನ್ನು ಮುಂದೂಡಬಹುದು.

ಬಾಳೆಹಣ್ಣು

ತುಂಬಾ ಜನರಿಗೆ ಊಟದ ನಂತರ ಒಂದು ಬಾಳೆಹಣ್ಣು ಇರಲೇಬೇಕು. ಕಡಿಮೆ ಬೆಲೆಗೆ ಸಿಗುವ ಹಣ್ಣುಗಳಲ್ಲಿ ಬಾಳೆಹಣ್ಣು ಕೂಡ ಒಂದು. ಈ ಬಾಳೆ ಹಣ್ಣುಗಳು ಮೊದಲು ಹಸಿರು ಬಣ್ಣದಲ್ಲಿದ್ದು ನಂತರ ಅರಿಶಿಣ ಬಣ್ಣಕ್ಕೆ ತಿರುಗಿ ಕೊನೆಗೆ ಕಂದು ಬಣ್ಣಕ್ಕೆ ಬದಲಾಗುತ್ತವೆ. ಇದರ ಹಿಂದಿನ ಕಾರಣ ಏನು ಅಂತ ಹುಡುಕಲು ಹೊರಟರೆ ಸಿಗುವ ಉತ್ತರ “ಎತಲೀನ್”. ಹವ್ದು ಗಾಳಿಯಲ್ಲಿರುವ ಎತಲೀನ್ ಬಾಳೆಹಣ್ಣು ಮಾಗಲು ಕಾರಣವಾಗುತ್ತದೆ. ಯಾವುದೆ ಹಣ್ಣು ಮಾಗುವ ಮುನ್ನ ಸಿಹಿ ಕಡಿಮೆ ಇರುತ್ತದೆ, ಇದಕ್ಕೆ ಕಾರಣ ಆಸಿಡ್ ಗಳು. ಹಣ್ಣುಗಳು ಗಾಳಿಯಲ್ಲಿರುವ ಎತಲೀನ್ ಒಡನೆ ಸಂಪರ‍್ಕಕ್ಕೆ ಬಂದಾಗ ಮಾಗುವ ಕ್ರಿಯೆ ಮೊದಲಾಗಿ, ಹಣ್ಣಿನಲ್ಲಿರುವ ಆಸಿಡ್ ಗಳು ಒಡೆದು ಮ್ರುದುವಾಗುತ್ತಾ ಬಾಳೆಹಣ್ಣು ಅರಿಶಿಣ ಬಣ್ಣಕ್ಕೆ ತಿರುಗುತ್ತದೆ, ಎತನಾಲ್ ಸಂಪರ‍್ಕ ಹೆಚ್ಚಾದಂತೆ ಅರಿಶಿಣ ಬಣ್ಣದಲ್ಲಿದ್ದ ಬಾಳೆಹಣ್ಣು ಕಂದು ಬಣ್ಣಕ್ಕೆ ತಿರುಗುತ್ತದೆ. ಇದು ಬಾಳೆಹಣ್ಣಿನ ಕೊನೆಯ ಬದಲಾವಣೆ ಅನ್ನಬಹುದು. ಈ ಸ್ತಿತಿಯಲ್ಲಿ ಬಾಳೆಹಣ್ಣಿನ ಸಿಹಿಯ ಮಟ್ಟ ಹೆಚ್ಚಿರುತ್ತದೆ. ಕತ್ತರಿಸಿದ ಇಲ್ಲವೆ ಪೆಟ್ಟಾದ ಬಾಳೆಹಣ್ಣು ಇನ್ನೂ ಬೇಗನೆ ಹಣ್ಣಾಗುತ್ತದೆ. ಇದಕ್ಕೆ ಕಾರಣ ಬಾಳೆಹಣ್ಣಿನ ಮೈ ಗಾಳಿಗೆ ತೆರೆದುಕೊಳ್ಳುವುದು.

ಈ ಬಣ್ಣ ಬದಲಾವಣೆ ಬರೀ ಸೇಬು ಹಾಗು ಬಾಳೆಹಣ್ಣಿಗೆ ಸೀಮಿತವಾಗಿಲ್ಲ. ಸಪೋಟ, ಮರಸೇಬು, ಟೊಮ್ಯಾಟೊ ಹೀಗೆ ಹಲವಾರು ಹಣ್ಣುಗಳು ಗಾಳಿಗೆ ತೆರೆದುಕೊಂಡಾಗ ಬಣ್ಣ ಬದಲಾವಣೆಯಾಗುತ್ತದೆ.

(ಮಾಹಿತಿ ಹಾಗೂ ಚಿತ್ರಸೆಲೆ: britannica.com1, britannica.com2, pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: