ಅಡಿಕೆಯ ಸುತ್ತಲಿನ ಕೆಲಸಗಳು ಮತ್ತು ಅಡಿಕೆಯ ಬಳಕೆಗಳ ಸುತ್ತ…

ಕಂತು-1, ಕಂತು-2

– ನಿತಿನ್ ಗೌಡ.

ಹಿಂದಿನ ಕಂತಿನಲ್ಲಿ ಅಡಿಕೆ ಗಿಡ ನೆಡುವ ಬಗೆಗಳು, ನೀರಿನ ಏರ‍್ಪಾಡು ಮತ್ತು ಅಡಿಕೆ ತಳಿಗಳ ಬಗೆಗೆ ತಿಳಿದು ಕೊಂಡಿದ್ದೆವು. ಈಗ ಅಡಿಕೆಯ ಹಲವು ಗಂಪುಗಳು, ಅವುಗಳ ಹಲವು ಬಳಕೆಗಳ ಬಗೆಗೆ ತಿಳಿಯೋಣ.

ಅಡಿಕೆ ತಯಾರಿಯಲ್ಲಿ ನಡೆವ ಬಗೆ ಬಗೆಯ ಹಂತದ ಕೆಲಸಗಳು

ಅಡಿಕೆ ಕುಯ್ಲು ಮತ್ತು ಅಡಿಕೆ ಸುಲಿತ

ಸಾಮಾನ್ಯವಾಗಿ ಜುಲೈ ನಿಂದ ಜನವರಿ ನಡುವೆ 2-3 ಬಾರಿ ಅಡಿಕೆ ಕುಯ್ಲಿಗೆ ಬರುತ್ತದೆ. ಕೊನೆಗಾರರಿಂದ ಅಡಿಕೆಗೊನೆಗಳನ್ನು ಕೊಯ್ಲು ಮಾಡಿ ಹಸಿ ಅಡಿಕೆಗಳನ್ನು ಸುಲಿಯಲಾಗುತ್ತದೆ. ಇದಕ್ಕೆ ಸಾಮಾನ್ಯವಾಗಿ ಮೀಟ್ಗತ್ತಿ/ಮೇಟ್ಗತ್ತಿ ಬಳಸಲಾಗುತ್ತದೆ. ಇತ್ತೀಚಿಗೆ ಅಡಿಕೆ ಕುಯ್ಲಿಗೆ ಮಶೀನು ಬಂದಿದ್ದು, ಹೇರಳ ಅಡಿಕೆ ಇದ್ದಲ್ಲಿ ಇದನ್ನು ಬಳಸಬಹುದು.

ಅಡಿಕೆ ಕುಚ್ಚುವುದು

ಸುಲಿದ ಹಸಿ ಅಡಿಕೆಯನ್ನು ತಾಮ್ರದ ಹಂಡೆಯಲ್ಲಿ ಒಂದು ಗಂಟೆಯಶ್ಟು ಕಾಲ ಬೇಯಿಸಲಾಗುತ್ತದೆ. ಬೇಯಿಸುವಾಗ ಈ ಹಿಂದೆ ಕಾಯಿಸಾದಾಗಿನ ಚೊಗರು(Tan), ತೇಗದ ತೊಗಟೆ ಬಳಸಲಾಗುತ್ತದೆ.

ಅಡಿಕೆ ಒಣಗಿಸುವುದು

ಹೀಗೆ ಬೇಯಿಸಿದ ಅಡಿಕೆಯನ್ನು ಒಂದೆರಡುವಾರ ಬಿದಿರಿನ ತಟ್ಟಿ ಮೇಲೆ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಬೇಸಿಗೆಯ ಕಾಲದಲ್ಲಿ 5 ಬಾರಿ ಒಣಗಿಸಿ ತೆಗೆಯಬೇಕು ಹಾಗೂ ಮಳೆಗಾಲದಲ್ಲಿ 6 ಬಾರಿ ಒಣಗಿಸಬೇಕು. ಹೀಗೆ ಅಡಿಕೆ ಚೆನ್ನಾಗಿ ಒಣಗಿದಲ್ಲಿ, ಮುಗ್ಗುವುದಿಲ್ಲ ಮತ್ತು ಹೆಚ್ಚುಕಾಲ ದಾಸ್ತಾನು ಇಡಬಹುದು.

ಹಲವು ಬಗೆಯ ಅಡಿಕೆಯ ಗುಂಪುಗಳು

1. ಹಸ: ಇದು ಎಳೆಯ ಅಡಿಕೆಯಾಗಿದ್ದು, ಹೆಚ್ಚು ಚೊಗರು ಹೊಂದಿರಲಿದ್ದು ಕಡಿಮೆ ತೂಕವಿರುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಉಳಿದೆಲ್ಲ ಅಡಿಕೆಗಿಂತ ಹೆಚ್ಚಾಗಿರುತ್ತದೆ.

2. ಬೆಟ್ಟೆ: ಅಡಿಕೆ ಸುಲಿಯುವಾಗ ಅಡಿಕೆಯನ್ನು ಎರಡು ಹೋಳು ಮಾಡಿ ಬೇಯಿಸಿದರೆ, ಅದನ್ನು ಬೆಟ್ಟೆ ಎನ್ನಲಾಗುತ್ತದೆ.

3. ರಾಶಿ ಇಡಿ/ದುಂಡಿ: ಸುಲಿದ ಅಡಿಕೆಯನ್ನು ಹೋಳು ಮಾಡದೆ ಬೇಯಿಸಿದಾಗ ದೊರೆಯುವ ಅಡಿಕೆಯನ್ನು ದುಂಡನೆಯ ಅಡಿಕೆ ಇಲ್ಲವೆ ರಾಶಿ ಇಡಿ ಎನ್ನುತ್ತಾರೆ.

4. ಗೋಟು/ಗೊರಬಲು : ಹಣ್ಣು ಅಡಿಕೆ ಸುಲಿಯುವಾಗ ಸಿಪ್ಪೆ ಉಳಿದುಕೊಂಡಲ್ಲಿ, ಅವುಗಳನ್ನು ಬೇಯಿಸಿದಾಗ ಸಿಗುವುದೇ ಗೊರಬಲು. ಹಸಿ ಅಡಿಕೆಗೆ ಹೋಲಿಸಿದಲ್ಲಿ, ಹಣ್ಣಡಿಕೆ ಸುಲಿಯುವುದು ಕೊಂಚ ಕಶ್ಟವಾಗಿರುತ್ತದೆ ಮತ್ತು ಅಡಿಕೆಯಲ್ಲಿ ಸಿಪ್ಪೆ ಉಳಿದುಕೊಳ್ಳುವ ಸಾದ್ಯತೆ ಹೆಚ್ಚಿರುತ್ತದೆ. ಇದಲ್ಲದೇ ಅಡಿಕೆ ಸುಲಿಯಲು ಮಶೀನು ಬಳಸಿದಲ್ಲಿ, ಕೆಲವು ಅಡಿಕೆಗಳಲ್ಲಿ ಸಿಪ್ಪೆ ಹಾಗೆಯೆ ಉಳಿದುಕೊಳ್ಳಬಹುದು. ಅಂತಹ ಅಡಿಕೆಯನ್ನು ಸಹ ಸಿಪ್ಪೆ ಗೋಟು ಎನ್ನುತ್ತಾರೆ.

5. ಚಾಲಿ – ಅಡಿಕೆ ಸುಲಿಯದೆ ಮತ್ತು ಬೇಯಿಸದೆ, ಹಾಗೆಯೇ ಬಿಸಿಲಿನಲ್ಲಿ ಒಣಗಿಸಿ ಸಿಪ್ಪೆ ತೆಗೆದಾಗ ಸಿಗುವವೇ ಚಾಲಿ. ಸಾಮಾನ್ಯವಾಗಿ ಅಡಿಕೆ ಮರದಿಂದ ಉದುರಿದ ಅಡಿಕೆಗಳನ್ನು ತೋಟದಿಂದ ಹೆಕ್ಕಿ ತಂದು, ಬಿಸಿಲಿನಲ್ಲಿ ಒಣಗಿಸುತ್ತಾರೆ.

ಅಡಿಕೆಯ ಬಳಕೆಗಳು ಮತ್ತು ಸಂಶೋದನೆ

  • ಅಡಿಕೆಯ ಚೊಗರನ್ನು ಪ್ಪೈ ವುಡ್ ಗಳನ್ನು ಜೋಡಿಸುವ ಅಂಟಾಗಿ, ಬಟ್ಟೆಗಳಿಗೆ ಹಚ್ಚುವ ಬಣ್ಣವಾಗಿ, ಆಹಾರದ ಬಣ್ಣವಾಗಿ, ಮಸಿಯಾಗಿ(ಇಂಕ್) ಲೆದರ‍್ ಟಾನ್‍‍ ಆಗಿ ಹೀಗೆ ಹಲವೆಡೆ ಬಳಸಬಹುದು.
  • ಅಡಿಕೆಯಲ್ಲಿ ಕೊಬ್ಬಿನ ಅಂಶವೂ ಕೂಡ ಇದ್ದೂ; ಇದನ್ನು ಟೀ, ಬಿಸ್ಕಟ್, ಸೋಪು, ಚಾಕಲೇಟು, ರಸಮ್ ಪುಡಿ, ಹೆಂಡ, ಸಿಹಿ ತಿಂಡಿ, ತಂಪು ಪಾನೀಯ, ಅಂಟು ಕೂಡಿದಂತೆ ಹಲವಾರು ಬಳಕೆಗಳಿದ್ದು, ಕಮರ‍್ಶಿಯಲಿ ಇದನ್ನು ಲಾಬದಾಯಕವಾಗಿಸುವ ಸುತ್ತ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಮಲೆನಾಡಿನ ಹುಡುಗ ನಿವೇದನ್ ನೆಂಪೆ ‘ಅರೆಕಾ ಟೀ’ ಎಂಬ ಕಂಪನಿ ಕಟ್ಟಿ ಅದು ಇಂದಿಗೆ ನೂರಾರು ಕೋಟಿ ಬ್ರಾಂಡ್ ಆಗಿ ಬೆಳೆದು ದೇಶ ಹೊರದೇಶಗಳೊಂದಿಗೆ ವಹಿವಾಟು ನಡೆಸುತ್ತಿದೆ.
  • ಅಡಿಕೆಯ ಸಿಪ್ಪೆಯಲ್ಲಿನ ನಾರಿನ ಗುಣ ಹಲಾವಾರು ಬಳಕೆಗಳನ್ನು ಹೊಂದಿದೆ. ಇದನ್ನು ಸ್ಯಾನಿಟರಿ ಪಾಡ್ ಪ್ಯಾಡ್, ಅಣಬೆ ಬೆಳೆಯುವ ಹೊತ್ತಲ್ಲಿ, ಕ್ರಾಪ್ಟ್ ಪೇಪರ‍್, ರಟ್ಟು ತಯಾರಿಕೆಯಲ್ಲಿ ಬಳಸಬಹುದಾಗಿದೆ. ಇದಲ್ಲದೇ ಇದನ್ನು ಉರುವಲಾಗಿ, ಕಳೆಸಿ ಒಳ್ಳೆಯ ಸಾವಯವ ಗೊಬ್ಬರವಾಗಿ ಬಳಸಬಹುದು.
  • ಅಡಿಕೆಯನ್ನು ನ್ಯಾನೋ ನಾನೋ ಕಣಗಳಾಗಿ ಮಾರ‍್ಪಡಸಿ ಗಾಜು, ಬ್ಯಾಟರಿ, ನೀರು ಸೋಸುಕ ಮತ್ತು ಮುರಿಯದ ಪೈಪುಗಳನ್ನು ಮಾಡಬಹುದೆಂಬುದನ್ನು ಇತ್ತೀಚಿನ ಅರಕೆಗಳು ತೋರಿಸಿಕೊಟ್ಟಿವೆ.
  • ಅಡಿಕೆಯಿಂದ ಊದಿನ ಬತ್ತಿ, ಚೂಯಿಂಗ್‍‍ಗಮ್, ಪ್ರೆಶ್ನರ್ (Mouth freshener), ಆಟಿಕೆಗಳು, ಹಲ್ಲಿನ ಪೇಸ್ಟ್, ಕರ ಕುಶಲ ವಸ್ತುಗಳು, ಹಾರ ಹೀಗೆ ಮೊದಲಾದವುಗಳನ್ನು ಮಾಡಬಹುದು.
  • ಅಡಿಕೆಯ ಹ್ಯಾಡ/ಹಾಳೆ ಬಳಸಿ ಊಟದ ತಟ್ಟೆ, ಲೋಟ, ಟೊಪ್ಪಿ, ಚಿತ್ತಾರ ಹಾಳೆ ಇತ್ಯಾದಿ ತಯಾರಿಸಬಹುದು. ಅಲ್ಲದೇ, ಇವುಗಳಿಂದ ಪ್ಲಾಸ್ಟಿಕ್ ಬಳಕೆಯನ್ನು ಸಹ ಕಡಿಮೆ ಮಾಡಬಹುದು. ಈ ನಿಟ್ಟಿನಲ್ಲಿ ಮಶೀನುಗಳು ಕೂಡ ಮಾರುಕಟ್ಟೆಗೆ ಬಂದಿವೆ. ಈ ಬಳಕೆಗಳ ಸುತ್ತ ಸಣ್ಣ ಕೈಗಾರಿಕೆ ಮೊದಲು ಮಾಡಬಹುದು.
  • ಅಡಿಕೆಯನ್ನು ಮದುವೆ ಸಮಾರಂಬಗಳಲ್ಲಿ ತಾಂಬೂಲವಾಗಿ ಬಳಸುವುದು ವಾಡಿಕೆ. ಹೆಣ್ಣು ಮಕ್ಕಳಿಗೆ ಬಾಗಿನ, ಕುಂಕುಮ ಕೊಡುವ ಹೊತ್ತಲ್ಲೂ ಎಲೆ ಅಡಿಕೆ ಬಳಸಲಾಗುತ್ತದೆ. ಅಡಿಕೆಯ ಹಿಂಗಾರವು ಮಲೆನಾಡು ಮತ್ತು ಕರಾವಳಿ ಕಡೆಗಳಲ್ಲಿನ ನಾಗರಪೂಜೆ, ಬೂತಾರಾದನೆಯಲ್ಲಿ ತನ್ನದೇ ಆದ ಹಿರಿತನದ ಬಳಕೆ ಹೊಂದಿದೆ.
  • ಅಡಿಕೆ ಮರದ ಕಂಬಗಳನ್ನು ಹಂಚಿನ ಮನೆಯ ಮಾಡು ಹೊಡೆಯೋ ಹೊತ್ತಲ್ಲಿ ರೀಪುಗಳಾಗಿ ಬಳಸಬಹುದು. ಟೆಂಟ್, ಚಪ್ಪರ ಕಟ್ಟುವಿಕೆಯಲ್ಲಿ, ಸಣ್ಣ ತೊರೆ ದಾಟಲು ಸಂಕ/ಸಾರ ವಾಗಿ ಬಳಸಬಹುದು. ಇದಲ್ಲದೆ ಚೇರು, ಟೇಬಲ್ಲು ಸೇರಿದಂತೆ ಪೀಟೋಪಕರಣಗಳ ತಯಾರಿಕೆಯಲ್ಲೂ ಬಳಸಬಹುದು.

  • ಅಡಿಕೆ ಮರವನ್ನು ಆಸರೆಯಾಗಿ ಬಳಸಿ ವೆನಿಲ್ಲಾ, ಕಾಳುಮೆಣಸು ಮತ್ತು ವೀಳ್ಯದೆಲೆಗಳನ್ನು ಬೆಳೆಯಬಹುದು.
  • ಅಡಿಕೆಯಲ್ಲಿ ಹಲವು ಔಶದೀಯ ಗುಣಗಳಿದ್ದು, ಹಲವಾರು ಕಾರಣಗಳಿಗೆ ಕಾಯಿಲೆಗೆ ಮದ್ದಾಗಿ ಇದನ್ನು ಬಳಸಿಕೊಳ್ಳಬಹುದು.ಕಂತು-1, ಕಂತು-2

( ಚಿತ್ರಸೆಲೆ: kirehalli.com, tssindia.in , vijaykarnataka.com, arecatea.in, viakspedia.in, cau.ac.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: