ಹಸಿರು ಅಣಬೆ ಮಸಾಲೆ

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು

  • ಅಣಬೆ – 250 ಗ್ರಾಂ
  • ಈರುಳ್ಳಿ – 2
  • ಚಕ್ಕೆ – 2 ಕಡ್ಡಿ
  • ಲವಂಗ – 4
  • ಏಲಕ್ಕಿ – 1
  • ಅರಿಶಿಣ – 1/2 ಚಮಚ
  • ಶುಂಟಿ – 1 ಇಂಚು
  • ಹಸಿ‌ ಮೆಣಸಿನ ಕಾಯಿ – 4-5
  • ಕೊತ್ತಂಬರಿ‌ ಸೊಪ್ಪು – 1/2 ಕಟ್ಟು
  • ಬೆಳ್ಳುಳ್ಳಿ – 10 -12 ಎಸಳು
  • ಪುದೀನ – 2 ಎಸಳು
  • ಗೋಡಂಬಿ – 4
  • ಕಾಳುಮೆಣಸು – 5-6
  • ಉಪ್ಪು – ರುಚಿಗೆ ತಕ್ಕಶ್ಟು
  • ಟೊಮೊಟೊ – 1
  • ಎಣ್ಣೆ – 4-5 ಚಮಚ

ಮಾಡುವ ಬಗೆ:

ಮೊದಲಿಗೆ ಒಂದು ಹಂಚು ಅತವಾ ಬಾಣಲಿಯಲ್ಲಿ /ಬಾಂಡಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ 1 1/2 ಹೆಚ್ಚಿದ ಈರುಳ್ಳಿ, ಚಕ್ಕೆ, ಲವಂಗ, ಕಾಳಮೆಣಸು, ಏಲಕ್ಕಿ, ಕಾಲು ಚಮಚ ಅರಿಶಿಣ, ಕೊತ್ತಂಬರಿ ಸೊಪ್ಪು (ಚಿಕ್ಕದಾಗಿ ಕತ್ತರಿಸಿಕೊಂಡಿರಬೇಕು), ಹಸಿಮೆಣಸಿನಕಾಯಿ, 1/2 ಟೊಮೊಟೊ, ಗೋಡಂಬಿ, ಪುದೀನ, ಶುಂಟಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ 2 ನಿಮಿಶ ನಡು ಉರಿಯ ಬೆಂಕಿಯಲ್ಲಿ ಹುರಿದುಕೊಳ್ಳಿ. ಹೀಗೆ ಹುರಿದುಕೊಂಡ ಮೇಲೆ, ಒಂದು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಈ ಗಸಿ ದಪ್ಪಗೆ ಬೇಕಾದಲ್ಲಿ ನೀರು ಕಡಿಮೆ ಹಾಕಿ.

ಈಗ ಜೊತೆ ಜೊತೆಗೆ,ಒಂದು ಪಾತ್ರೆಯಲ್ಲಿ ಚೂರು ಎಣ್ಣೆಹಾಕಿ, ಅದಕ್ಕೆ ತೊಳೆದಿಟ್ಟುಕೊಂಡ ಅಣಬೆಗಳನ್ನು ಹಾಕಿ ಹುರಿದುಕೊಳ್ಳಿರಿ. ಬೇಕಿದ್ದಲ್ಲಿ ಚಿಟಿಕೆ ಉಪ್ಪು ಹಾಕಿಕೊಳ್ಳಿರಿ. ಈಗ ಇನ್ನೊಂದು ಪಾತ್ರೆಗೆ 4 ಚಮಚ ಎಣ್ಣೆ, 1/2 ಈರುಳ್ಳಿ, 1/2 ಟೊಮೊಟೊ, ಸ್ವಲ್ಪ ಅರಿಶಿಣ ಮತ್ತು ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಹುರಿದುಕೊಳ್ಳಿರಿ. ಆಮೇಲೆ ಮಿಕ್ಸಿಯಲ್ಲಿ ಮಾಡಿದ ಗಸಿಯನ್ನು ಇದಕ್ಕೆ ಹಾಕಿ, ಸ್ವಲ್ಪ ನೀರು ಹಾಕಿ, ಅಣಬೆಯನ್ನು ಹಾಕಿ 10-15 ನಿಮಿಶ ಕುದಿಯಲು ಬಿಡಿ. ಹೀಗೆ ಕುದಿಸಿಕೊಂಡ ನಂತರ ಬಿಸಿ ಬಿಸಿ ಹಸಿರು ಅಣಬೆ ಮಸಾಲೆ ತಯಾರಿದ್ದು, ಇದನ್ನು ಅಕ್ಕಿ ರೊಟ್ಟಿ, ಅನ್ನ, ಚಪಾತಿ ಮತ್ತು ನೀರು ದೋಸೆಯ ಜೊತೆ ತಿನ್ನಲು ಬಹಳ ಚೆನ್ನಾಗಿರುತ್ತದೆ.

( ಚಿತ್ರಸೆಲೆ: youtube.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks