ಆಟದ ಸ್ಪೂರ‍್ತಿಗೆ ಚ್ಯುತಿ ತಂದ ಕ್ರಿಕೆಟ್ ಪಂದ್ಯಗಳು

– ರಾಮಚಂದ್ರ ಮಹಾರುದ್ರಪ್ಪ.

ಕ್ರಿಕೆಟ್ ಅಟದಲ್ಲಿ ಐಸಿಸಿಯ ನಿಯಮಾವಳಿಗಳು ತೀರಾ ಸಡಿಲವಿದ್ದಾಗ ಆಟದ ಅಂಕಣದಲ್ಲಿ ಸಾಕಶ್ಟು ಅಚಾತುರ‍್ಯಗಳು ನಡೆದಿವೆ. ಇವುಗಳ ಪೈಕಿ ಬಾರತ ಎರಡು ಪಂದ್ಯಗಳನ್ನು ಅದಿಕ್ರುತವಾಗಿ ಸೋಲದಿದ್ದರೂ ಎದುರಾಳಿಯ ನಕಾರಾತ್ಮಕ ಹಾಗೂ ಕೇಡಿನ ತಂತ್ರಗಳಿಂದ ಶರಣಾಗಬೇಕಾಗಿ ಬಂದದ್ದು ದುರಂತವೇ ಸರಿ. ಕಾಕತಾಳೀಯವೆಂಬಂತೆ ಈ ಎರಡೂ ಪಂದ್ಯಗಳಲ್ಲಿ ದಿಗ್ಗಜ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ಅವರೇ ಬಾರತದ ಮುಂದಾಳು ಆಗಿದ್ದರು. ಶಿಸ್ತು ಹಾಗೂ ಕ್ರಿಕೆಟ್ ಕ್ರೀಡಾಸ್ಪೂರ‍್ತಿಯನ್ನೇ ತಮ್ಮ ಆಟದ ಬುನಾದಿಯೆಂದು ನಂಬಿದ್ದ ಬೇಡಿಯವರು ಈ ಪಂದ್ಯಗಳನ್ನು ಬಿಟ್ಟುಕೊಟ್ಟಿದ್ದರಲ್ಲಿ ಅಚ್ಚರಿ ಪಡುವಂತಹುದು ಏನೂ ಇಲ್ಲ. ಏಕೆಂದರೆ ಆಟದ ಬಗೆಗೆ ಬೇಡಿರವರ ನೇರ‍್ಮೆ ಅಂತಹುದಿತ್ತು. ತಪ್ಪೋ-ಸರಿಯೋ, ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಹೇಗಾದರೂ ಗೆಲ್ಲಲೇ ಬೇಕು ಎಂದು ಹಪಹಪಿಸುವ ತಂಡಗಳ ಎದುರು ಆಡುವುದರಲ್ಲಿ ಅರ‍್ತವಾದರೂ ಏನಿದೆ ಎಂದು ಈ ಪಂದ್ಯಗಳ ಬಳಿಕ ನಾಯಕ ಬೇಡಿ ಅಂದು ನುಡಿದದ್ದು ಕ್ರಿಕೆಟ್ ನ ಗನತೆಯನ್ನು ಹೆಚ್ಚಿಸಿದ್ದು ಸುಳ್ಳಲ್ಲ. ಮುಂದಿನ ಪೀಳಿಗೆಗೆ ಬೇಡಿರ ಈ ಮಾತುಗಳು ಒಂದು ಮಟ್ಟಕ್ಕಾದರೂ ತಲುಪಿದೆ ಎಂದು ನಂಬುವಂತಹ ಎತ್ತುಗೆಗಳು ನಮ್ಮ ಮುಂದೆ ಸಾಕಶ್ಟಿವೆ. ಈ ಪಂದ್ಯಗಳನ್ನು ಸೋತರೂ ಬೇಡಿರವರ ಕಾರ‍್ಯ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಸುವರ‍್ಣಾಕ್ಶರಗಳಲ್ಲಿ ಬರದಿಡುವಂತಹುದು ಎಂದರೆ ತಪ್ಪಾಗಲಾರದು.

ವೆಸ್ಟ್ ಇಂಡೀಸ್- ಬಾರತ, ಜಮೈಕಾ ಟೆಸ್ಟ್, 1976

ಆಸ್ಟ್ರೇಲಿಯಾದಲ್ಲಿ ಸರಣಿ ಸೋಲು ಹಾಗೂ ಆನಂತರ ಬಾರತದ ಎದುರಿನ ಸರಣಿಯ ಟ್ರಿನಡ್ಯಾಡ್ ಟೆಸ್ಟ್ ಸೋಲಿನಿಂದ ಕಂಗೆಟ್ಟಿದ್ದ ವಿಂಡೀಸ್ ನಾಯಕ ಕ್ಲೈವ್ ಲಾಯ್ಡ್, ಹೇಗಾದರೂ ಮಾಡಿ ಬಾರತವನ್ನು ಸೋಲಿಸಬೇಕು ಎಂದು ಪಣತೊಟ್ಟಿರುತ್ತಾರೆ. ಹಾಗಾಗಿ ಜಮೈಕಾ ಟೆಸ್ಟ್ ಗೆ ಇಬ್ಬರು ಸ್ಪಿನ್ನರ್ ಗಳನ್ನು ಕೈಬಿಟ್ಟು ನಾಲ್ಕು ಮಂದಿ ವೇಗಿಗಳನ್ನು ಕಣಕ್ಕಿಳಿಸುತ್ತಾರೆ. ಹೋಲ್ಡಿಂಗ್, ಜೂಲಿಯನ್, ವೇಯ್ನ್ ಡೇನಿಯಲ್ ಹಾಗೂ ಹೋಲ್ಡರ್ ಬೆಂಕಿ ಉಗುಳಲು ಅಣಿಯಾಗಿರುತ್ತಾರೆ. ಆದರೆ ಲಾಯ್ಡ್ ರ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡುವಂತೆ ಆರಂಬಿಕ ಆಟಗಾರರಾದ ಸುನಿಲ್ ಗಾವಸ್ಕರ್ ಮತ್ತು ಅನ್ಶೂಮನ್ ಗಾಯಕ್ವಾಡ್ 136 ರನ್ ಗಳ ಜೊತೆಯಾಟವಾಡಿ ಆತಿತೇಯರಿಗೆ ಸವಾಲೊಡ್ಡುತ್ತಾರೆ. ಆಗ ಕೆಂಡಾಮಂಡಲವಾದ ಮುಂದಾಳು ಲಾಯ್ಡ್ ಬೇರೆಯೇ ರೀತಿಯ ಆಟಕ್ಕೆ ಮೊರೆಹೋಗುತ್ತಾರೆ. ಅವರ ಕಟ್ಟಪ್ಪಣೆಯಂತೆ ವಿಂಡೀಸ್ ವೇಗಿಗಳು ಓವರ್ ಗೆ ಮೂರ‍್ನಾಲ್ಕು ಬೌನ್ಸರ್ ಗಳು ಹಾಗೂ ನಡುವೆ ಕನಿಶ್ಟ ಒಂದು ದಿಗಿಲು ಹುಟ್ಟಿಸುವ ಬೀಮರ್ ಅನ್ನು ಎಸೆಯುತ್ತಾ ಬಾರತದ ಬ್ಯಾಟ್ಸ್ಮನ್ ಗಳು ರನ್ ಗಳಿಸದಂತೆ ಕಡಿವಾಣ ಹಾಕುತ್ತಾರೆ. ಸಾಕಶ್ಟು ಪೆಟ್ಟು ತಿಂದಿದ್ದ ಗಾಯಕ್ವಾಡ್ ಕಡೆಗೆ ಚೆಂಡೊಂದು ಕೆನ್ನೆಗೆ ಬಡಿದಾಗ ನೆಲಕ್ಕುರುಳುತ್ತಾರೆ. ಚಿಕಿತ್ಸೆಗೆ ತೆರಳಿದ ಅವರು ಮತ್ತೆ ಪಂದ್ಯಕ್ಕೆ ಮರಳುವುದಿಲ್ಲ. ರಕ್ತದ ದಾಹ ಹತ್ತಿದ್ದ ಪ್ರೇಕ್ಶಕರೂ ಕೂಡ ತವರಿನ ಬೌಲರ್ ಗಳಿಗೆ ಹೀಗೇ ಪೆಟ್ಟು ನೀಡುವಂತೆಯೇ ಬೌಲ್ ಮಾಡಿ ಎಂದು ಹುರಿದುಂಬಿಸಿದ್ದು ಹೊಸ ಬ್ಯಾಟ್ಸ್ಮನ್ ಗೆ ಹೆದರಿಕೆ ಹುಟ್ಟಿಸುವಂತಿರುತ್ತದೆ. ಗುಂಡಪ್ಪ ವಿಶ್ವನಾತ್ ಸಹ ಸಾಕಶ್ಟು ಪೆಟ್ಟು ತಿಂದ ಬಳಿಕ ಬೆರಳು ಮುರಿದುಕೊಂಡು ಕ್ಯಾಚಿತ್ತು ಹೊರನಡೆಯುತ್ತಾರೆ. ಬಳಿಕ ಬ್ರಿಜೇಶ್ ಪಟೇಲ್, ಅಮರನಾತ್ ಮತ್ತು ವೆಂಗಸರ‍್ಕರ್ ಕೂಡ ಪೆಟ್ಟಿನ ಮೇಲೆ ಪೆಟ್ಟು ತಿಂದು ಔಟಾಗಿ ಹೊರನಡೆದ ಮೇಲೆ ಈ ಬಿರುಸಿನ ದಾಳಿಯ ಎದುರು ಬೌಲರ್ ಗಳನ್ನು ಬ್ಯಾಟ್ ಮಾಡಲು ಕಳಿಸುವುದು ಅಪಾಯ ಎಂದರಿತು ನಾಯಕ ಬೇಡಿ ತಂಡದ ಸ್ಕೋರ್ 306/6 ತಲುಪಿದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡುತ್ತಾರೆ. ಇದರ ಬೆನ್ನತ್ತಿ ಹೊರಟ ವಿಂಡೀಸ್ ಪಡೆ ಚಂದ್ರಶೇಕರರ ಐದು ವಿಕೆಟ್ ಗಳ ಹೊರತಾಗಿಯೂ 391 ರನ್ ಕಲೆ ಹಾಕುತ್ತದೆ. ಗಾಯಗೊಂಡಿದ್ದ ಗಾಯಕ್ವಾಡ್, ವಿಶ್ವನಾತ್, ಪಟೇಲ್, ಬೇಡಿ ಹಾಗೂ ಚಂದ್ರ ಬ್ಯಾಟ್ ಮಾಡುವ ಪರಿಸ್ತಿತಿಯಲ್ಲಿರುವುದಿಲ್ಲ. ಹಾಗಾಗಿ ಕೇವಲ ಆರು ಮಂದಿ ಆಟಗಾರರನ್ನು ನೆಚ್ಚಿಕೊಂಡು ಬಾರತ ತನ್ನ ಎರಡನೇ ಇನ್ನಿಂಗ್ಸ್ ಮೊದಲು ಮಾಡುತ್ತದೆ. ಎರಡು ದಿನಗಳ ವಿಶ್ರಾಂತಿ ಪಡೆದಿದ್ದ ವಿಂಡೀಸ್ ವೇಗಿಗಳು ಇನ್ನೂ ಹೆಚ್ಚು ಹುರುಪಿನಿಂದ ಬೌನ್ಸರ್, ಬೀಮರ್ ಗಳ ಬೆಂಕಿ ಉಗುಳುತ್ತಾರೆ. ಕಡೆಗೆ ಬಾರತ 97 ರನ್ ಗಳಿಗೆ 5ವಿಕೆಟ್ ಗಳನ್ನು ಕಳೆದುಕೊಂಡಾಗ ಇನ್ಯಾರು ಬಂದು ಬ್ಯಾಟ್ ಮಾಡುವಂತಿರಲಿಲ್ಲ, ಹಾಗಾಗಿ ಇನ್ನಿಂಗ್ಸ್ ಅಲ್ಲಿಗೇ ಕೊನೆಗೊಂಡು ವಿಂಡೀಸ್ ಗೆ ಕೇವಲ 13 ರನ್ ಗಳ ಗುರಿ ದೊರೆಯುತ್ತದೆ. ನಿರಾಯಾಸವಾಗಿ 10 ವಿಕೆಟ್ ಗಳಿಂದ ಲಾಯ್ಡ್ ರ ತಂಡ ಗೆದ್ದು ಬೀಗಿದರೂ ಕ್ರಿಕೆಟ್ ಪೀತಿಸುವ ಯಾವ ವಿಶ್ಲೇಶಕರೂ ಅವರ ತಂತ್ರಗಳನ್ನು ಒಪ್ಪುವುದಿಲ್ಲ. ಆದರೂ ಯಾವುದೇ ಪಶ್ಚಾತಾಪ ಇಲ್ಲದೆ ಪಂದ್ಯದ ಬಳಿಕ ತಮ್ಮ ನಡೆಯನ್ನು ಸಮರ‍್ತಿಸಿಕೊಂಡ ಲಾಯ್ಡ್ ಬಾರತದ ಬ್ಯಾಟ್ಸ್ಮನ್ ಗಳು ವೇಗಿಗಳನ್ನು ಎದುರಿಸಲು ಅಸಮರ‍್ತರು, ಹಾಗಾಗಿ ಪೆಟ್ಟು ತಿಂದರು. ಇದು ಟೆಸ್ಟ್ ಕ್ರಿಕೆಟ್, ರನ್ ಗಳಿಸಲು ಸುಳುವಾದ ಹಾಪ್ ವಾಲಿಗಳನ್ನು ಇವರು ನಮ್ಮ ಬೌಲರ್ ಗಳಿಂದ ಎದುರು ನೋಡುತ್ತಿದ್ದರೆ? ಎಂದು ಕಟುವಾಗಿ ನುಡಿಯುತ್ತಾರೆ. ಈ ಆರೋಪವನ್ನೊಪ್ಪದ ಬೇಡಿ ವಿಂಡೀಸ್ ಆಡಿದ್ದು ಕ್ರಿಕೆಟ್ ಅಲ್ಲವೇ ಅಲ್ಲ ಎಂದು ಮಾರುತ್ತರ ನೀಡುತ್ತಾರೆ. ಇದರ ಬೆನ್ನಲ್ಲೇ ಪ್ರವಾಸದಿಂದ ತವರಿಗೆ ಮರಳಿದ ಬಾರತದ ಆಟಗಾರರು ಯುದ್ದ ಮಾಡಿ ರಕ್ತದ ಮಡುವಿನಿಂದ ಎದ್ದು ಪ್ರಾಣ ಉಳಿಸಿಕೊಂಡು ಬಂದ ಯೋದರ ಹಾಗೆ ಕಂಡರು ಎಂದು ಆಗಿನ ಪತ್ರಿಕೆಗಳು ವರದಿ ಮಾಡಿದ್ದು ಅತಿಶಯೋಕ್ತಿಯೇನೂ ಆಗಿರಲಿಲ್ಲ. ಏಕೆಂದರೆ ಈ ಜಮೈಕಾ ದಾಳಿ ಆಟಗಾರರನ್ನು ಮಾನಸಿಕ ಹಾಗೂ ದೈಹಿಕವಾಗಿ ಆ ಮಟ್ಟಕ್ಕೆ ಜರ‍್ಜರಿತಗೊಳಿಸಿತ್ತು. ಇದರಿಂದ ಚೇತರಿಸಿಕೊಂಡು ಹೊರಬರಲು ನಮಗೆಲ್ಲಾ ಕೆಲವು ತಿಂಗಳುಗಳೇ ಹಿಡಿದವು ಎಂದು ಸ್ವತಹ ಆಟಗಾರರೇ ಹೇಳಿದ್ದುಂಟು.

ಪಾಕಿಸ್ತಾನ-ಬಾರತ, ಸಾಹಿವಾಲ್ ಒಂದು-ದಿನದ ಪಂದ್ಯ,1978

ಮೂರು ಒಂದು ದಿನದ ಪಂದ್ಯಗಳ ಸರಣಿಯಲ್ಲಿ ಒಂದು-ಒಂದರ ಸಮಬಲದ ನಂತರ ಆತಿತೇಯ ಪಾಕಿಸ್ತಾನ ಹಾಗೂ ಬಾರತದ ನಡುವಿನ ಮೂರನೇ ಹಾಗೂ ನಿರ‍್ಯಾಣಕ ಪಂದ್ಯ ಸಾಹಿವಾಲ್ ನಲ್ಲಿ ಜರುಗಿತು. ಮುಶ್ತಾಕ್ ಮೊಹಮ್ಮದ್ ರ ಪಡೆ ನಿಗದಿತ 40 ಓವರ್ ಗಳಲ್ಲಿ 205/7 ರನ್ ಗಳನ್ನು ಕಲೆ ಹಾಕಿ, ತಮ್ಮ ವೇಗದ ಬೌಲಿಂಗ್ ಬಲದ ಮೇಲೆ ಪಂದ್ಯ ಗೆಲ್ಲುವ ತನ್ನಂಬಿಕೆಯಲ್ಲಿತ್ತು. ಆದರೆ ಅನ್ಶೂಮನ್ ಗಾಯಕ್ವಾಡ್ ರ ಔಟಾಗದೆ 78 ರನ್ ಗಳು ಹಾಗೂ ಸುರಿಂದರ್ ಅಮರನಾತ್ ರ 62 ರನ್ ಗಳ ನೆರವಿನಿಂದ ಬಾರತ 183/2 ತಲುಪಿ ಪಂದ್ಯ ಗೆಲ್ಲುವ ಹೊಸ್ತಿಲಲ್ಲಿತ್ತು. ತವರಿನ ಕಿಕ್ಕಿರಿದು ತುಂಬಿರುವ ಅಂಕಣದಲ್ಲಿ ಅದೂ ಸಾಂಪ್ರಾದಾಯಿಕ ಎದುರಾಳಿ ಬಾರತದ ಎದುರು ಸರಣಿ ಸೋಲುಂಡರೆ ಆಗಬಹುದಾದ ಅನಾಹುತದ ಅರಿವು ನಾಯಕ ಮುಶ್ತಾಕ್ ರಿಗೆ ಚೆನ್ನಾಗಿಯೇ ಇತ್ತು. ಹಾಗಾಗಿ ತಮ್ಮ ವೇಗದ ಬೌಲರ‍್ಗಳಾದ ಇಮ್ರಾನ್ ಕಾನ್, ಸರ‍್ಪರಾಜ್ ನವಾಜ್, ಸಲೀಮ್ ಅಲ್ತಾಪ್ ಹಾಗೂ ಹಸನ್ ಜಮೀಲ್ ರಿಗೆ ಬ್ಯಾಟ್ಸ್ಮನ್ಗಳಿಗೆ ಎಟುಕದಂತೆ ಬೌಲ್ ಮಾಡಲು ಸೂಚಿಸುತ್ತಾರೆ. ಈ ತಂತ್ರದಿಂದ ಬೌಲ್ ಮಾಡಿದ ಪಾಕ್ ವೇಗಿಗಳು ಪಾಪಿಂಗ್ ಕ್ರೀಸ್ ನಿಂದ ಎರಡು-ಮೂರು ಹೆಜ್ಜೆ ದಾಟಿ ದೊಡ್ಡ-ದೊಡ್ಡ ನೋ ಬಾಲ್ ಮಾಡುವುದು ಮಾತ್ರವಲ್ಲದೆ ವಿಶ್ವನಾತ್ ಹಾಗೂ ಗಾಯಕ್ವಾಡ್ ರಿಗೆ ಎಟುಕದಂತೆ ಕನಿಶ್ಟ ಹತ್ತು ಅಡಿಯ ಬೌನ್ಸರ್ ಗಳ ಸುರಿಮಳೆಗಯ್ಯುತ್ತಾರೆ. ಇದನ್ನು ಗಮನಿಸಿದ ಗಾಯಕ್ವಾಡ್ ನಾನ್ ಸ್ಟ್ರೈಕ್ ಬದಿಯಿಂದ ಅಂಪೈರ್ ಹಾಯತ್ ರಿಗೆ ನೋ-ಬಾಲ್ ನೀಡಿ ಎಂದಾಗ, ಅವರು, ನನ್ನ ಕೆಲಸ ನಿಮ್ಮಿಂದ ಕಲಿಯಬೇಕಾಗಿಲ್ಲ ಎಂದು ಕಾರವಾಗಿ ನುಡಿಯುತ್ತಾರೆ. ಪಾಕಿಸ್ತಾನದ ಈ ಆಟಾಟೋಪಗಳನ್ನು ಮೂಕ ಪ್ರೇಕ್ಶಕರಂತೆ ನೋಡುತ್ತಾ ಸುಮ್ಮನಿದ್ದ ತವರಿನ ಅಂಪೈರ್ ಗಳಾದ ಹಾಯತ್ ಮತ್ತು ಅಕ್ತರ್ ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಅರಿಯಲು ಡ್ರೆಸ್ಸಿಂಗ್ ಕೋಣೆಯಲ್ಲಿದ್ದ ನಾಯಕ ಬೇಡಿರಿಗೆ ಹೆಚ್ಚು ಹೊತ್ತು ಹಿಡಿಯುವುದಿಲ್ಲ. ಆ ವೇಳೆ ಬೇಡಿರವರು ಪಾಕಿಸ್ತಾನದ ಮ್ಯಾನೇಜರ್ ರನ್ನು ಕಂಡು ಇದು ಸಲ್ಲದು ಎಂದು ಬೇಸರ ಹೊರಹಾಕುತ್ತಾರೆ. ಆಗವರು ವಿಶ್ವನಾತ್ ತುಂಬಾ ಕುಳ್ಳಗಿರುವುದರಿಂದ ಅವರಿಗೆ ಚೆಂಡು ಎಟುಕುತ್ತಿಲ್ಲ, ಹಾಗಾಗಿ ಅವರನ್ನು ರಿಟೈರ‍್ಡ್ ಔಟ್ ಎಂದು ಗೋಶಿಸಿ ಬೇರೆ ಬ್ಯಾಟ್ಸ್ಮನ್ ಅನ್ನು ಕಣಕ್ಕಿಳಿಸಿ ಎಂದು ಕಿಚಾಯಿಸುತ್ತಾರೆ. ನಂತರ ಕಣದಲಿದ್ದ ಇಬ್ಬರು ಬ್ಯಾಟ್ಸ್ಮನ್ ಗಳು ಕೂಡ ಸಂಬಾವಿತ ವ್ಯಕ್ತಿ ಎಂದು ಕರೆಸಿಕೊಳ್ಳುತ್ತಿದ್ದ ಇಮ್ರಾನ್ ಕಾನ್ ರಿಗೆ, ಈ ಪರಿಯ ನಕಾರಾತ್ಮಕ ಬೌಲಿಂಗ್ ತಪ್ಪು ಎಂದು ಕಿವಿಮಾತು ಹೇಳಿದಾಗ, ನಿಮ್ಮ ಕೈಲಿ ಬ್ಯಾಟ್ ಇದೆ ಅಲ್ಲವೇ? ನೀವು ಮಾಡಬೇಕಾದ್ದು ನೀವು ಮಾಡಿ, ನಾವು ಮಾಡಬೇಕಾದ್ದು ನಾವು ಮಾಡುತ್ತೇವೆ ಎಂದು ಉತ್ತರಿಸುತ್ತಾರೆ. ಹೀಗೇ ಕೆಲ ಹೊತ್ತು ನೀ ಕೊಡೆ – ನಾ ಬಿಡೆ ಎಂಬಂತೆ ಆಟ ಸಾಗಿ ಕಡೆಯ ಹಂತಕ್ಕೆ ತಲುಪುತ್ತದೆ. ಬಾರತಕ್ಕೆ ಗೆಲ್ಲಲು ಕಡೆಯ 3 ಓವರ್ ಗಳಲ್ಲಿ 23 ರನ್ ಗಳ ಅಗತ್ಯ ಇರುವಾಗ ನವಾಜ್ ಮತ್ತೊಮ್ಮೆ ಅದೇ ಬಗೆಯ ಎಟುಕದ ಬೌನ್ಸರ್ ಗಾಯಕ್ವಾಡ್ ರ ತಲೆ ಮೇಲೆ ಹೋಗುವಂತೆ ಬೌಲ್ ಮಾಡುತ್ತಾರೆ. ಓವರ್ ನ ಮೊದಲ ನಾಲ್ಕೂ ಎಸೆತಗಳು ಹೀಗೇ ಹೊರಹೊಮ್ಮುತ್ತವೆ. ಈ ಎಸೆತಗಳನ್ನು ಕಂಡೂ ಅಂಪೈರ್ ಗಳು ಮತ್ತೊಮ್ಮೆ ತಮ್ಮ ಬದಿಯೊಲವಿನಿಂದ ಇವು ‘ಸರಿಯಾದ ಎಸೆತಗಳು’ ಎಂದು ಗೋಶಿಸಿದಾಗ, ಇನ್ನು ಆಡುವುದರಲ್ಲಿ ಏನೂ ಅರ‍್ತವಿಲ್ಲ ಎಂದು ಅರಿವಾಗಿ ಬೇಡಿ ತಾಳ್ಮೆ ಕಳೆದುಕೊಳ್ಳುತ್ತಾರೆ. ಒಡನೇ ಇಬ್ಬರಿಗೂ ಪೆವಿಲಿಯನ್ ಗೆ ಮರಳಲು ಸೂಚಿಸುತ್ತಾರೆ. 37.4 ಓವರ್ ಗಳಲ್ಲಿ 183/2 ಕ್ಕೆ ಬಾರತದ ಇನ್ನಿಂಗ್ಸ್ ಕೊನೆಗೊಳ್ಳುತ್ತದೆ. ಗೆಲುವಿನ ಹೊಸ್ತಿಲಲ್ಲಿದ್ದ ಬಾರತ ತಂಡ ರೇಜಿಗೆಯಿಂದ ಪಂದ್ಯವನ್ನು ಬಿಟ್ಟುಕೊಡುತ್ತದೆ. ಬೇಡಿ ಆಡಲೊಲ್ಲೆವು ಎಂದುದರಿಂದ ಪಾಕಿಸ್ತಾನ ವಿಜಯಿ ಎಂದು ತೀರ‍್ಮಾನಿಸಲಾಗುತ್ತದೆ. ಆತಿತೇಯರು ಕೆಡಕಿನಿಂದ 2-1 ರಿಂದ ಸರಣಿ ಗೆದ್ದು ಸಂಬ್ರಮಿಸಿದರೂ ಕ್ರಿಕೆಟ್ ವಲಯದಲ್ಲಿ ಕ್ರೀಡಾ ಸ್ಪೂರ‍್ತಿ ಎತ್ತಿಹಿಡಿದ ನಾಯಕ ಬೇಡಿ ಹಾಗೂ ಬಾರತ ತಂಡದ ವರ‍್ಚಸ್ಸು ಹೆಚ್ಚುತ್ತದೆ.

ಈ ಮೇಲ್ಕಂಡ ಎತ್ತುಗೆಗಳಿಂದ ಪಾಟ ಕಲಿತ ಐಸಿಸಿ ಮುಂದಿನ ದಿನಗಳಲ್ಲಿ ಆಟಕ್ಕೆ ಕಳಂಕ ತರುವಂತಹ ಇಂತಹ ಗಟನೆಗಳು ಮತ್ತೆಂದೂ ನಡೆಯದಂತೆ, ಕಾರ‍್ಯೋನ್ಮುಕವಾಗಿ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರೂಪಿಸಿದ್ದು ಈಗ ಇತಿಹಾಸ. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳನ್ನು ಊಹಿಸಲೂ ಸಾದ್ಯವಿಲ್ಲ ಎಂದೇ ಹೇಳಬೇಕು. ಆದರೂ ಈ ಕರಾಳ ಗಟನೆಗಳು ಕ್ರಿಕೆಟ್ ಆಟಕ್ಕೆ ಕಳಂಕದಂತೆ ಇತಿಹಾಸದ ಪುಟಗಳನ್ನು ಸೇರಿ ಚ್ಯುತಿ ತಂದಿದ್ದು ಸುಳ್ಳಲ್ಲ.

(ಚಿತ್ರ ಸೆಲೆ: indiatimes.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Bharath BG says:

    ಹಾಗಾದ್ರೆ ಆವಾಗ ಬೌನ್ಸರ್ ಗಳನ್ನು ಎಷ್ಟು ಎತ್ತರ ಬೇಕಾದರೂ ಹಾಕಬಹುದಿತ್ತಾ…?

ಅನಿಸಿಕೆ ಬರೆಯಿರಿ: