ತೈಲಾಂಡಿನಲ್ಲಿ ಹೀಗೊಂದು ನೀರೆರಚಾಟದ ಹಬ್ಬ

– .

ತೈಲ್ಯಾಂಡ್ ಪ್ರತಿ ವರ‍್ಶ ಏಪ್ರಿಲ್ 13,14 ಮತ್ತು 15ರಂದು ಹೊಸ ವರ‍್ಶವನ್ನು ಆಚರಿಸಿಕೊಳ್ಳುತ್ತದೆ. ಸಾಂಗ್ಕ್ರಾನ್ ಎಂದು ಹೆಸರಾಗಿರುವ ಈ ಹಬ್ಬ ನೀರಿನ ಓಕುಳಿಯ ಹಬ್ಬ. ಇದು ವರ‍್ಶದ ಅತ್ಯಂತ ಬಿರು ಬೇಸಿಗೆಯ ಕಾಲವಾದ ಕಾರಣ, ಈ ಸಾಂಪ್ರದಾಯಿಕ ಆಚರಣೆಯನ್ನು ಆನಂದಿಸಲು, ತಣ್ಣಗಿನ ನೀರನ್ನು ಒಬ್ಬರ ಮೇಲೊಬ್ಬರು ಎರಚಾಡಿಕೊಂಡು ಸಂಬ್ರಮಿಸುತ್ತಾರೆ. ಪಾಶ್ಚಿಮಾತ್ಯ ಸಮಾಜದಲ್ಲಿ ಆಚರಿಸಲಾಗುವ ಅನೇಕ ಪ್ರಮುಕ ದಾರ‍್ಮಿಕ ಸಂಪ್ರದಾಯಗಳಿಗಿಂತ ಇದು ಬಿನ್ನವಾಗಿದೆ. ಕಳೆದ ನೂರಾರು ವರ‍್ಶಗಳಿಂದ ಕೊಂಚವೂ ಬದಲಾಗದೆ ಹಾಗೇ ಉಳಿದಿದೆ. ತಣ್ಣೀರಿನ ಎರಚಾಡುವಿಕೆ ಅಂದಿನಿಂದಲೂ ಚಾಚೂ ತಪ್ಪದೆ ನಡೆದು ಬಂದಿದೆ. ಬಾರತದಲ್ಲಿನ ಹೋಲಿಯಂತೆ.

ರಣ ರಣಗುಡುವ ಬೇಸಿಗೆಯಲ್ಲಿ ಬಾರತದ ನಗರಗಳಲ್ಲಿ ನೀರಿಗಾಗಿ ನಡೆಯುವ ಯುದ್ದದಂತಲ್ಲಾ ಈ ವಿಶ್ವದ ಅತಿ ದೊಡ್ಡ ವಾಟರ್ ಪೈಟ್. ಇದಕ್ಕೆ ಇದರದೇ ಆದ ಶತಮಾನಗಳ ಇತಿಹಾಸವಿದೆ ಹಾಗೂ ಈ ಯುದ್ದದಲ್ಲಿ ಮೋಜು ಮಸ್ತಿ ಬಹಳವಾಗಿದ್ದು, ವೈಯುಕ್ತಿಕ ದ್ವೇಶ, ವೈಶಮ್ಯ ಇರುವುದಿಲ್ಲ. ಈ ದಿನಗಳಲ್ಲಿ ನೀರೆರೆಚಾಟದಿಂದ ತಪ್ಪಿಸಿಕೊಳ್ಳುವವರ ಸಂಕ್ಯೆ ಬಹಳ ಕಡಿಮೆ. ಪ್ಲಾಸ್ಟರ್ ಹಾಕಿದ್ದವರು, ತುಂಬಾ ವಯಸ್ಸಾಗಿ ಗಾಲಿ ಕುರ‍್ಚಿಯಲ್ಲಿ ಕುಳಿತವರು, ಕಾಯಿಲೆಯಿಂದ ನರಳುತ್ತಿರುವವರು ಇವರುಗಳನ್ನು ಮಾನವೀಯತೆಯ ದ್ರುಶ್ಟಿಯಿಂದ ದೂರವಿಡಲಾಗುತ್ತದೆ.

ಪ್ರತಿಯೊಬ್ಬ ವಯಸ್ಕನಲ್ಲೂ ಮಗುವಿನ ಅಂಶ ಇದ್ದೇ ಇರುತ್ತದೆ. ಯಾವುದಾದರೊಂದು ಸಮಯದಲ್ಲಿ ಅದು ಪ್ರಕಟಗೊಳ್ಳುತ್ತದೆ. ಇಂತಹ ನೀರೆರೆಚುವ ಸಾಂಪ್ರದಾಯಿಕ ಹಬ್ಬಗಳಲ್ಲಿ ಮನದಲ್ಲಿ ಮಡುಗಟ್ಟಿದ್ದ ಮಗುವಿನ ಅಂಶ ಮುನ್ನೆಲೆಗೆ ಬರುತ್ತದೆ. ಹಾಗಾಗಿ ಇದು ತೈಲ್ಯಾಂಡಿನ ಎಲ್ಲಾ 60 ಮಿಲಿಯನ್‍ಗೂ ಹೆಚ್ಚು ನಿವಾಸಿಗಳು ಅದರಲ್ಲಿ ಸ್ವಯಂ ಬಾಗಿಯಾಗಲು ಇಶ್ಟಪಡುತ್ತಾರೆ.

ತೈಲ್ಯಾಂಡಿನ ಬ್ಯಾಂಕಾಕ್‍ನ ಕೋಸಾನ್ ರಸ್ತೆ ಪ್ರದೇಶದಲ್ಲಿ ಸಾಂಗ್ಕ್ರಾನ್ ಉತ್ಸವ ಮತ್ತು ಚಿಯಾಂಗ್ ಮಾಯ್‍ನಲ್ಲಿನ ಆಚರಣೆಗಳು ಹೆಚ್ಚು ಕ್ರೇಜಿಯಾಗಿರುತ್ತದೆ. ಆದರೆ ಇಡೀ ದೇಶದಲ್ಲೆಲ್ಲಾ ಆಚರಿಸಲ್ಪಡುವ ಸಾಂಗ್ರ್ಕಾನ್ ನಿಸ್ಸಂದೇಹವಾಗಿ ವಿಶ್ವದ ಅತಿ ದೊಡ್ಡ ವಾಟರ್ ಪೈಟ್ ಆಗಿದೆ.

ಈ ದಿನಗಳಲ್ಲಿ ತಾಯ್‌ನ ಎಲ್ಲಾ ನಗರಗಳಲ್ಲಿ ಜನ ಗುಂಪು ಗುಂಪಾಗಿ ದ್ವಿಚಕ್ರ ವಾಹನ, ತ್ರಿಚಕ್ರವಾಹನಗಳಲ್ಲಿ, ಸೈಕಲ್ ರಿಕ್ಶಾಗಳಲ್ಲಿ ನೀರನ್ನು ಶೇಕರಿಸಿಕೊಂಡು, ಕೈಯಲ್ಲಿ ವಾಟರ್ ಗನ್ ಹಿಡಿದು ರಸ್ತೆ ರಸ್ತೆಗಳಲ್ಲಿ ಕಂಡ ಕಂಡವರ ಮೇಲೆ ನೀರನ್ನು ಎರೆಚುತ್ತಾ, ಗನ್ನಿನಿಂದ ಶೂಟ್ ಮಾಡುತ್ತಾ, ತಾವುಗಳೂ ಸಹ ನೀರಿನ ಎರೆಚಾಟಕ್ಕೆ ಸಿಕ್ಕು, ನೆನೆದು, ಕುಶಿ ಪಡುತ್ತಾರೆ. ರಸ್ತೆ ಬದಿಯಲ್ಲಿ ದೊಡ್ಡ ದೊಡ್ಡ ಐಸ್ ಚೆಸ್ಟ್ ಗಳಲ್ಲಿ ನೀರನ್ನು ಇದಕ್ಕಾಗಿಯೇ ಶೇಕರಿಸಿಟ್ಟಿರುತ್ತಾರೆ. ಐಸ್ ಟ್ರಕ್ಕುಗಳೂ ಸಹ ಬೀದಿ ಬೀದಿಯಲ್ಲಿ ಗಸ್ತು ತಿರುಗುತ್ತಿರುತ್ತದೆ. ಮೇಲೆ ಎರೆಚುವ ನೀರಿಗೆ ಐಸ್ ಸೇರಿಸಿ ಎರೆಚಲಾಗುತ್ತದೆ. ಮೈಮೇಲೆ ಬಿದ್ದ ಮಂಜುಗಡ್ಡೆ ಕರಗಿ ನೀರಾಗಿ ಕೆಳಗೆ ಹರಿದು ಬರುವುದನ್ನು ಅವರುಗಳು ಬಹುವಾಗಿ ಆನಂದಿಸುತ್ತಾರೆ. ಏಕೆಂದರೆ ಆ ದಿನಗಳು ಅತ್ಯಂತ ಕಾವಿನ (ಉಶ್ಣದ) ದಿನಗಳು.

ಈ ಮೂರು ದಿನಗಳು ‘ಪ್ರೀ ಪಾರ್ ಆಲ್’ ಎನ್ನುವಂತೆ ನಡೆಯುವ ನೀರೆರಚಾಟಕ್ಕೆ ಯಾವುದೇ ನಿಗದಿತ ಸಮಯವಿಲ್ಲ. ದಿನದ ಯಾವುದೇ ಸಮಯದಲ್ಲೂ ನಿಮ್ಮ ಮೇಲೆ ನೀರಿನಿಂದ ಪ್ರಹಾರವಾಗಬಹುದು. ಅದಕ್ಕೆ ಪ್ರತಿ ಕ್ಶಣವೂ ತಯಾರಾಗಿರಬೇಕು. ಐಸ್ ಕ್ಯೂಬ್‌ಗಳನ್ನು ಸೇರಿಸಿರುವ ತಣ್ಣನೆಯ ನೀರು ಇಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಡುತ್ತದೆ. ಮೂರು ದಿನಗಳ ಕಾಲ ಎರೆಚಲು ಉಪಯೋಗಿಸಲ್ಪಡುವ ಸಾವಿರಾರು ಲೀಟರ್ ಗಟ್ಟಲೆ ನೀರು, ತೈಲ್ಯಾಂಡಿನ ಪ್ರತಿಯೊಂದು ರಸ್ತೆಯನ್ನೂ ಸ್ವಚ್ಚಗೊಳಿಸುತ್ತದೆ ಮತ್ತು ವಾತಾವರಣವನ್ನು ಕೊಂಚ ಮಟ್ಟಿಗೆ ತಂಪಾಗಿಸುತ್ತದೆ.

ಬಹಳ ಹಿಂದೆ ರಾತ್ರಿಯಾಗುತ್ತಿದ್ದಂತೆ, ನೀರೆರೆಚಾಟ ಸಹ ಕೊನೆಗೊಳ್ಳುತ್ತಿತ್ತು. ಸದ್ಯದ ಪರಿಸ್ತಿತಿಯಲ್ಲಿ ಅದಿಕ್ರುತ ಮೊದಲ ದಿನದ ಮುನ್ನಾ ದಿನವೇ ಆಚರಣೆ ಚಾಲು ಆಗುತ್ತದೆ. ರಾತ್ರಿಯಾದರೂ ನೀರೆರೆಚಾಟ ನಿಲ್ಲದೆ ಅವ್ಯಾಹತವಾಗಿ ಮುಂದುವರೆಯುತ್ತದೆ ಹಾಗೂ ಕೆಲವಡೆ ಮೂರು ದಿನದ ಸಾಂಪ್ರದಾಯಿಕ ಆಚರಣೆ ಮುಗಿದರೂ, ಹಲವು ದಿನಗಳ ಕಾಲ ಮುಂದುವರೆಯುತ್ತದೆ.

ನೀರಿನಲ್ಲಿ ಇಲ್ಲವೇ ಮಣ್ಣಿನಲ್ಲಿ ಆಟವಾಡುವುದೆಂದರೆ ಮಕ್ಕಳು ಒಂದು ಹೆಜ್ಜೆ ಮುಂದೆಯೇ. ಇಂತಹ ಆಟಗಳಲ್ಲಿ ಮಕ್ಕಳು ನಿರತರಾದರೆ ಅವರಿಗೆ ಸಮಯದ ಪರಿವೆಯೇ ತಿಳಿಯುವುದಿಲ್ಲ. ಸಂಪೂರ‍್ಣ ಆಟದಲ್ಲಿ ಮಗ್ನರಾಗುತ್ತಾರೆ. ಈ ಉತ್ಸವದ ದಿನಗಳಲ್ಲಿ ಮಕ್ಕಳು ನೀರೆರೆಚುವ ಆಟದಲ್ಲಿ ಬಾಗಿಯಾದರೂ, ಅವಕ್ಕೆ ತೊಂದರೆಯಾಗದಂತೆ ಅತ್ಯಂತ ಮ್ರುದುವಾಗಿ ನೀರೆರೆಚಲಾಗುತ್ತದೆ. ಅವುಗಳ ಸಂತೋಶ, ಅವುಗಳ ಆಟ, ಇಡೀ ಗುಂಪನ್ನೇ ಸಂತೋಶವಾಗಿಡುತ್ತದೆ. ಮಕ್ಕಳ ಜೊತೆಯಲ್ಲಿನ ವಿನೋದ, ಹಿರಿಯರನ್ನೂ ಮಕ್ಕಳನ್ನಾಗಿಸುತ್ತದೆ. ಮಕ್ಕಳ ಉಪಸ್ತಿತಿ ಹಿರಿಯರಲ್ಲಿ ಹುರುಪು ಹುಮ್ಮಸ್ಸನ್ನು ದ್ವಿಗುಣಗೊಳಿಸುತ್ತದೆ. ಕುಟುಂಬದ ಬಹುತೇಕ ಎಲ್ಲಾ ಸದಸ್ಯರೂ ಇದರಲ್ಲಿ ಪಾಲ್ಗೊಳ್ಳುವಾಗ ಮಕ್ಕಳನ್ನು ದೂರವಿಡಲು ಸಾದ್ಯವೇ? ಕಂಡಿತ ಸಾದ್ಯವಿಲ್ಲ.

(ಮಾಹಿತಿ ಮತ್ತು ಚಿತ್ರ ಸೆಲೆ: pixabay.com, andanyways.com, theplanetd.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: