ಮೆಟಾವರ್ಸ್‍‍ – ಜಗತ್ತಿನೊಳಗಿನ ಜಗತ್ತು

– ನಿತಿನ್ ಗೌಡ.

ಕಂತು-2

“ನೀ ಮಾಯೆಯೊಳಗೊ
ನಿನ್ನೊಳು ಮಾಯೆಯೊ”

ಎಂಬ ಕನಕದಾಸರ ಪದ ಕೇಳುತ್ತಿದ್ದ ಹಾಗೆ, ನಮ್ಮ ಇರುವಿಕೆಯ ಬಗೆಗೊಂದು ಜಿಗ್ನಾಸೆ ಮೂಡುತ್ತದೆ. ಮುಂದೆ ಮನುಶ್ಯ ಮೆಟಾವರ್ಸ್‍‍ ಜಗತ್ತಿಗೆ ಲಗ್ಗೆ ಇಡುತ್ತಿದ್ದಂತೆ, ತನ್ನ ಗುರುತನ್ನು ಬೇರೊಂದು ಜಗತ್ತಿನೊಳಗೆ ತಳುಕು ಹಾಕಿಕೊಳ್ಳುತ್ತಾ, ಇಂತಹುದೇ ಮಾಯಾಲೋಕದಲ್ಲಿ ಕಳೆದುಹೋಗಬಹುದು. ನೀಲ್ ಸ್ಟೀಪನ್‍‍ಸನ್ ಅವರು 1992 ರಲ್ಲಿ ಹೊರತಂದ ತಮ್ಮ ಅರಿಮೆಯ ಕಟ್ಟುಕತೆ(Science Fiction Novel) ‘ಸ್ನೋ ಕ್ರ್ಯಾಶ್’ ನಲ್ಲಿ, ಮೆಟಾವರ್ಸ್‍‍ ಪದವನ್ನು ಮೊದಲಿಗೆ ಕಟ್ಟಿಕೊಟ್ಟರು. ಅವರ ಕತೆಯಲ್ಲಿ ನಿಜಬದುಕಿನ ಪಾತ್ರಗಳು ದಿಟದಂತೆ ಕಾಣುವ ತ್ರೀ ಡಿ (3D) ಕಟ್ಟಡಗಳಲ್ಲಿ ಮತ್ತು ಇನ್ನಿತರ ನೆನೆಸಿನ/ದಿಟದಂತಿರುವ ಎಡೆಗಳಲ್ಲಿ(Virtual spaces) ಬೇಟಿಯಾಗುತ್ತಾರೆ. ಅಂದಿನ ಅವರ ಕಟ್ಟುಕತೆ, ಇಂದು ಜೀವ ತಳೆದು ನಿಲ್ಲುವ ಹೊಸ್ತಿಲಲ್ಲಿದೆ.

ಹಾಗಿದ್ದರೆ ಏನಿದು ಮೆಟಾವರ್ಸ್‍‍?

ಸದ್ಯಕ್ಕೆ ಮೆಟಾವರ್ಸ್‍‍ ಎನ್ನುವುದು ಒಂದು ಡಿಜಿಟಲ್ ತಾಣವಾಗಿದೆ(Digital space). ಈ ಎಡೆಯನ್ನು ಮಂದಿಯ, ಸ್ತಳಗಳ ಮತ್ತು ವಸ್ತುಗಳ ಡಿಜಿಟಲ್ ನೆಲೆಗಟ್ಟಲ್ಲಿ ಪ್ರತಿನಿದಿಸುವ ಸಾಟಿ ಗುರುತುಗಳು ನೆಲೆಯಾಗಿಸಿಕೊಂಡಿರುತ್ತವೆ. ಮಂದಿಯ ಸಾಟಿಗುರುತುಗಳನ್ನು ಅವತಾರ್ ಎನ್ನುವರು. ಇದನ್ನು ಮಿಂಬಲೆಯ(Internet) ಮುಂದಿನ ಅವತರಣಿಕೆ ಅತವಾ ಮಿಂಬಲೆಯ ಹೊಸ ನೆಲೆಗಟ್ಟಿನ ನೋಟ ಎನ್ನಬಹುದೇನೋ! ಬೌತಿಕ ಜಗತ್ತಿನಲ್ಲಿನ ಒಡನಾಟವನ್ನು ಈ ಹೊಸ ಮಿಂಬಲೆಯ ಲೋಕದೊಳಗೆ ಹೊಂದಬಹುದಾಗಿದೆ. ಮೆಟಾವರ್ಸ್‍‍ ಬಗೆ ಬಗೆಯ ಚಳಕಗಳನ್ನು ಬಳಸಿಕೊಂಡು ಕಟ್ಟಲಾಗುತ್ತಿರುವ ಡಿಜಿಟಲ್ ಜಗತ್ತಿಗಿರುವ ಹೆಸರು ಅನ್ನಬಹುದು. ಹೇಗೆ ಮಲ್ಟಿವರ್ಸ್‍‍ಗಳು (ನಮ್ಮ ಬೌತಿಕ ಜಗತ್ತಿನಂತಹ ಹಲವು ಜಗತ್ತುಗಳು) ಇರಬಹುದೋ, ಹಾಗೆಯೇ ಒಂದಕ್ಕಿಂತ ಹೆಚ್ಚು ಮೆಟಾವರ್ಸ್‍‍ಗಳು ಇದ್ದಾವೆ. ಮೆಟಾವರ್ಸ್‍‍ ಜಗತ್ತಿನಲ್ಲಿನ ಹಣಕಾಸು ವ್ಯವಸ್ತೆ ಹೆಚ್ಚಾಗಿ ಡಿಜಿಟಲ್ ಕರೆನ್ಸಿ, ಕ್ರಿಪ್ಟೋ ಟೋಕನ್‍‍ಗಳ ಮೇಲೆ ನಡೆಯುತ್ತದೆ. ಹೆಚ್ಚಿನ ಕ್ರಿಪ್ಟೋ ಗಳು ಬ್ಲಾಕ್‌ಚೈನ್ ಚಳಕ ಬಳಸಿಕೊಳ್ಳುತ್ತವೆ. ಮೆಟಾವರ್ಸ್‍‍ ನಲ್ಲಿ NFTಗಳ (Non Fungible Token) ವಹಿವಾಟು ಕೂಡ ನಡೆಯುತ್ತದೆ.

ಹಾಗಾದರೆ ಮೆಟಾವರ್ಸ್‍‍ ಜಗತ್ತಿನ ಸಾದ್ಯತೆಗಳೇನು? ಇಂದಿಗೆ ಈ ನಿಟ್ಟಿನಲ್ಲಿ ಯಾರ‍್ಯಾರು ಕೆಲಸ, ಅರಕೆ ಮಾಡುತ್ತಿದ್ದಾರೆ? ಮೆಟಾವರ್ಸ್‍‍ ಬಳಕೆಗೆ ಬಂದಾಗಿದೆಯಾ? ಮೆಟಾವರ್ಸ್‍‍ ಜೀವ ತಳೆಯಲು ಬಳಸಲಾಗುತ್ತಿರುವ ಚಳಕಗಳೇನು? ಇಂತಹ ಹಲವು ಕೇಳ್ವಿಗಳಿಗೆ ಉತ್ತರ ಕಂಡುಕೊಳ್ಳುವ ಮೊಗಸು ಮಾಡೋಣ.

ಈ ಜಗತ್ತನ್ನು ಹುಟ್ಟು ಹಾಕಲು ಮೆಟಾವರ್ಸ್‍‍; ಹಿಗ್ಗಿಸಿದ ನನಸು (Augmented reality-AR), ಹುಸಿ-ನನಸು (virtual reality) ಮತ್ತು ಬೆರಕೆಯ ನನಸುಗಳಂತಹ (Mixed reality) ಮೈಮರೆಸುವ ಚಳಕಗಳನ್ನು(Immersive technologies) ಬಳಸಿಕೊಳ್ಳುತ್ತದೆ. ಇದಲ್ಲದೇ ವೆಬ್ 3.0 , ಹೋಲೋಗ್ರಾಮ್, ಬ್ಲಾಕ್‍‍ಚೈನ್, ಕಟ್ಟುಜಾಣ್ಮೆ (Artificial Intelligence) ಸೇರಿದಂತೆ ಇನ್ನೂ ಹಲವು ಚಳಕಗಳನ್ನು ಇದು ಒಳಗೊಂಡಿದೆ.

ಮೆಟಾವರ್ಸ್‍‍ನಲ್ಲಿ ಏನೇನು ಸಾದ್ಯ?

ಪೇಸ್ಬುಕ್ ಮತ್ತು ಮೈಕ್ರೋಸಾಪ್ಟ್ ಕಂಪನಿಗಳು ತಮ್ಮದೇ ಆದ ಮೆಟಾವರ್ಸ್‍‍ ಲೋಕ ಕಟ್ಟಲು ಹಲವಾರು ಅರಕೆಗಳನ್ನು ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುನ್ನುಡಿ ಬರೆಯಲು ಕೆಲವು ಪ್ರಾಡಕ್ಟ್ ಗಳನ್ನು ಹೊರತಂದಿದ್ದಾರೆ. ಎತ್ತುಗೆಗೆ ಪೇಸ್ಪುಕ್ ನ “ಪ್ರಾಜೆಕ್ಟ್ ಕೇಮ್‍‍ಬ್ರಿಯ” (High end VR headset). ಪೇಸ್ಬುಕ್ ಹುಟ್ಟುಹಾಕಿದ ಮಾರ‍್ಕ್ ಜಕರ್‌ಬರ್‍ಗ್ ಅವರು, ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಕಂಪನಿಯ ಹೆಸರನ್ನು ‘ಮೆಟಾ’ ಎಂದು ಇತ್ತೀಚಿಗೆ ಬದಲಾಯಿಸಿದ್ದಾರೆ.

ರಿಯಲ್ ಎಸ್ಟೇಟ್

ಇಂದು ನಾವು ಸಾಮಾನ್ಯವಾಗಿ ಒಂದು ಮನೆಕೊಳ್ಳುವುದಿದ್ದರೆ, ಆ ಜಾಗಕ್ಕೆ ನಾವೇ ಕುದ್ದಾಗಿ ಬೇಟಿ ನೀಡಿ, ನೋಡಿ-ಮಾಡಿ ಕೊಳ್ಳುತ್ತೇವೆ. ಇದಿಲ್ಲದಿದ್ದಲ್ಲಿ, ಮ್ಯಾಟರ‍್‍‍ಪೋರ‍್ಟ್(matterport) ಅಂತಹ ಮಿಂದಾಣದ ಆಸರೆಯಿಂದ ನಮ್ಮ ಕಂಪ್ಯೂಟರ‍್‍‍ನಲ್ಲಿ ಆ ಮನೆಯ ತ್ರೀಡಿ(3D) ನೋಟವನ್ನು ನೋಡಬಹುದಲ್ಲದೇ, ಪ್ರತೀ ಕೋಣೆಗೆ ಮೌಸ್ ಸಹಾಯದಿಂದ ಬೇಟಿ ನೀಡಬಹುದು. ಇದನ್ನೇ ನಾವು ವೇರೆಬಲ್ಸ್(wearables) ಆದ ಸ್ಮಾರ‍್ಟ್ ಗ್ಲಾಸ್ ಇಲ್ಲವೇ ಹೆಡ್‍‍ಸೆಟ್ ಬಳಸಿಕೊಂಡು, ಕುಳಿತಲ್ಲಿಂದಲೇ ಅನುಬವಿಸಿದರೆ ಹೇಗಿರುತ್ತದೆ? ಪ್ರತೀ ಕೋಣೆ ಹೇಗೆ ಕಾಣುವುದು ಎನ್ನುವ ಅನುಬವವನ್ನು ನಾವು ನಮ್ಮ ಅವತಾರ್‌ಗಳ ಮೂಲಕ ಪಡೆದುಕೊಳ್ಳಬಹುದು. ಈ ಮೂಲಕ ಮನೆ ಕೊಳ್ಳಬೇಕೋ ಇಲ್ಲವೋ ಎಂದು ನಿರ‍್ದರಿಸಬಹುದು.

ಸುತ್ತಾಟ

ಜಗತ್ತಿನ ಹೆಸರಾಂತ ತಾಣಗಳನ್ನು ನೆಚ್ಚಿನ ಗೆಳೆಯರೊಡನೆ ಸುತ್ತಾಡಲು ಯಾರಿಗೆ ತಾನೇ ಇಶ್ಟವಿರುವುದಿಲ್ಲ ಹೇಳಿ? ಆದರೆ ಎಲ್ಲರಿಗೂ ದುಡ್ಡಿನ ಹೊಂದಾಣಿಕೆಯಾಗಬೇಕಲ್ಲ! ಒಂದು ವೇಳೆ ಮೆಟಾವರ್ಸ್‍‍ ಅಲ್ಲಿ ನಿಮ್ಮ ಮತ್ತು ನಿಮ್ಮ ಗೆಳೆಯರ ಡಿಜಿಟಲ್ ಅವತಾರ‍್‍‍ಗಳು ಒಟ್ಟಿಗೆ ಸುತ್ತಾಟ ಮಾಡುವುದಾದರೆ ಹೇಗೆ? ರಾಶ್ಟ್ರಕೂಟರು ಕಟ್ಟಿದ ಎಲ್ಲೋರದ ಕೈಲಾಸನಾತ ಗುಡಿಯನ್ನೋ ಇಲ್ಲವೇ ಯೂರೋಪಿನ ಯಾವುದೋ ತಾಣಕ್ಕೋ ಬೇಟಿ ನೀಡಿ ಸುತ್ತಾಡುವ ಅನುಬೂತಿಯನ್ನು ಮೆಟಾವರ್ಸ್‍‍ ಮೂಲಕ ಪಡೆಯಬಹುದು. ಈ ಅನುಬವವನ್ನು ಇನ್ನೂ ಹೆಚ್ಚಿಸಲು, ವಿಶೇಶ ಬಗೆಯ ಜಾಕೆಟ್‌ಗಳನ್ನು ನಾವು ನಮ್ಮ ಬೌತಿಕ ಜಗತ್ತಿನಲ್ಲಿ ಹಾಕಿಕೊಳ್ಳಬಹುದೇನೋ. ಇದರ ಮೂಲಕ ಯೂರೋಪಿನ ಚಳಿಯನ್ನು ನಾವು ನಿಜವಾಗಿಯೂ ಅನುಬವಿಸಬಹುದು. ನನ್ನ ಗೆಳೆಯನ ಅವತಾರ್ ನನ್ನ ಅವತಾರ್ ಅನ್ನು ಮುಟ್ಟಿದಲ್ಲಿ, ನಿಜ ಜಗತ್ತಿನಲ್ಲಿ ಆ ಮುಟ್ಟಿದ ಅನುಬವವನ್ನು ನಾನು ಪಡೆಯಬಹುದೇನೋ!

ಕಲಿಕೆ

Metaverse classroom image

ಕೋವಿಡ್ ಬಂದ ನಂತರ ಆನ್ಲೈನ್ ತರಗತಿಗಳು ಮುನ್ನೆಲೆಗೆ ಬಂದವು. ಮಕ್ಕಳು ಮೊಬೈಲ್ ಮೂಲಕವೋ, ಇಲ್ಲವೇ ಕಂಪ್ಯೂಟರ್ ಮೂಲಕವೋ ತರಗತಿಗಳನ್ನು ಕೇಳುತ್ತಿದ್ದರು. ಎಶ್ಟು ಮಕ್ಕಳು ತಮ್ಮ ಗೆಳೆಯರೊಡನೆ ಶಾಲೆಯಲ್ಲಿ ಹೊತ್ತು ಕಳೆಯುವುದನ್ನು ಮಿಸ್ ಮಾಡಿಕೊಂಡರೋ! ಒಂದು ವೇಳೆ ಮೆಟಾವರ್ಸ್‍‍ ನಲ್ಲಿ ತರಗತಿ ನಡೆಯುತ್ತಿದ್ದರೆ ಆ ಜಗತ್ತಿನಲ್ಲಿ ನಮ್ಮ ಡಿಜಿಟಲ್ ಅವತಾರ್‌ಗಳು, ಗೆಳೆಯರ ಅವತಾರ್‌ಗಳೊಡನೆ ಕೂತು ಪಾಟ ಕೇಳಬಹುದಿತ್ತೇನೋ. ಎತ್ತುಗೆಗೆ, ನಮ್ಮ ವಿಜಯನಗರದ ಕರ‍್ನಾಟಕ ಸಾಮ್ರಾಜ್ಯದ ಹಳಮೆಯ ಬಗೆಗೆ ತಿಳಿದುಕೊಳ್ಳುವಾಗ, ಮೆಟಾವರ್ಸ್‍‍ ನಲ್ಲಿ ಹಂಪಿಯ ತೀಮ್‍‍ನಲ್ಲಿ(Virtual Hampi ) ತರಗತಿ ನಡೆಸುವ ಮೂಲಕ ಕಲಿಕೆಯನ್ನು ಇನ್ನೂ ಕುತೂಹಲಕಾರಿ ಆಗಿಸಬಹುದೇನೋ! ಇದಲ್ಲದೇ ಆಪೀಸ್ ಮೀಟಿಂಗ್ ಗಳನ್ನು ನಮ್ಮ ಅವತಾರ‍್ ಗಳ ಮೂಲಕ ಒಂದು ಡಿಗಿಟಲ್ ಕ್ಯಾಂಪಸ್ ಅಲ್ಲಿ ಮಾಡಬಹುದು

 

ಪಿಟ್ನೆಸ್ ಮತ್ತು ವೀಡೀಯೋ ಗೇಮ್ಸ್:

Metaverse Gym game image

ಪಿಟ್ನೆಸ್ ಅನ್ನು ಹೆಚ್ಚಾಗಿ ಎಲ್ಲರೂ ಬಯಸುತ್ತಾರೆ. ಆದರೆ ಎಲ್ಲರೂ ಗಂಟೆಗಟ್ಟಲೇ ಜಿಮ್ ನಲ್ಲಿ ಹೊತ್ತು ಕಳೆಯಲು ಆಸಕ್ತಿ ಹೊಂದಿರದೇ ಇರಬಹುದು. ಅದೇ ಪಿಟ್ನೆಸ್ ಅನ್ನು ಮೆಟಾವರ್ಸ್‍‍ ಅಲ್ಲಿ ನಡೆಯುವ ಆಟಗಳ(ಗೇಮಿಂಗ್) ಮೂಲಕ ಮಾಡಿದರೆ!! ಹುಸಿ ನನಸಿನ(VR) ಹೆಡ್ಸೆಟ್‍‍ಗಳನ್ನು ಹಾಕಿಕೊಂಡು, ಟ್ರೆಡ್‍‍ಮಿಲ್ ಮೇಲೆ ಓಡುವುದನ್ನೇ ಬೆಟ್ಟದ ಮೇಲೆ ಓಡುವಹಾಗೋ, ಇಲ್ಲವೇ ಇನ್ಯಾವುದೇ ದೈಹಿಕ ಚಟುವಟಿಕೆ ಇರೋ ಆಟ ಆಡುವ ಮೂಲಕ ಕಸರತ್ತು ಮಾಡುತ್ತಾ ಪಿಟ್ನೆಸ್ ಕಾಪಾಡಿಕೊಳ್ಳಬಹುದು.

ಆಕ್ಸಿ ಇನ್ಪಿನಿಟಿ (Axie Infinity) ಮೆಟಾವರ್ಸ್‍‍ ನಲ್ಲಿನ ಅತ್ಯಂತ ಹೆಸರುವಾಸಿ ಆಟವಾಗಿದೆ. ಈ ಆಟವಾನ್ನು ಆಡಿ ಸ್ಮೂತ್ ಲವ್ ಪೋಶನ್ (Smooth Love Potion -SLP) ಎಂಬ ಕ್ರಿಪ್ಟೋ ಟೋಕನ್ ಗಳನ್ನು ಕೂಡ ಗಳಿಸಬಹುದು. ಇದಕ್ಕೆ ತನ್ನದೇ ಆದ ಡಾಲರ್ ಬೆಲೆಯೂ ಇದೆ ಮತ್ತು ಇದನ್ನು ಕ್ರಿಪ್ಟೋ ಮಾರುಕಟ್ಟೆ ಎಕ್ಸ್ಛೇಂಜ್‍‍ನಲ್ಲಿ ವಹಿವಾಟು ನಡೆಸಬಹುದು. ಗಾನಾದಲ್ಲಿ ಸಾಕಶ್ಟು ಜನ ಇದನ್ನು ಆಡಿ ದುಡ್ಡು ಮಾಡುತ್ತಿದ್ದಾರೆ ಕೂಡ.

 

ಸಂಗೀತ ಮೇಳ ಮತ್ತು ಇತರೆ ಮನೋರಂಜನೆ

ಇತ್ತಿಚಿಗೆ ಜಸ್ಟಿನ್ ಬೀಬರ್ ವೇವ್ ಎಂಬ ಡಿಜಿಟಲ್ ಸಂಗೀತ ವೇದಿಕೆಯಲ್ಲಿ, ಲೈವ್ ಸಂಗೀತ ಮೇಳ(Live concert) ನಡೆಸಿದರು. ಅಂದು ಅವರ ಅವತಾರ್, 30 ನಿಮಿಶಗಳವರೆಗೆ ‘ಜಸ್ಟೀಸ್’ ಎಂಬ ಹೊಸ ಆಲ್ಬಮ್ ಅನ್ನು ಹಾಡುವ ಮೂಲಕ ಮೇಳ ನಡೆಸಿಕೊಟ್ಟಿತು. ಇತ್ತೀಚಿಗೆ ಕೆ.ಜಿ.ಎಪ್ ಚಿತ್ರದ ಟ್ರೈಲರ‍್ ಬಿಡುಗಡೆಯಾಗಿ ಎಲ್ಲೆಡೆ ಸಂಚಲನ ಹುಟ್ಟುಹಾಕಿತ್ತು. ಆದರೆ ಟ್ರೈಲರ‍್ ಬಿಡುಗಡೆಯಾಗುವ ವೇದಿಕೆಯಲ್ಲಿ ಆಯ್ದ ಕೆಲವರು ಮಾತ್ರ ಬಾಗವಹಿಸಿದ್ದರು. ಒಂದು ವೇಳೆ ಮೆಟಾವರ್ಸ್‍‍ ನಲ್ಲಿ ಇದು ನಡೆದಿದ್ದರೆ, ಲೆಕ್ಕವಿಲ್ಲದಶ್ಟು ಅಬಿಮಾನಿಗಳು ತಮ್ಮ ಅವತಾರ್ ಗಳ ಮೂಲಕ ಒಂದೇ ವೇದಿಕೆಯಲ್ಲಿ ಸೇರಬಹುದಿತ್ತೇನೋ! ಸದ್ಯದ ಮಾಹಿತಿ ಪ್ರಕಾರ ರಾಕಿ ಬಾಯ್, ಕೆ.ಜಿ.ಎಪ್ ವರ್ಸ್‍‍ (KGFVerse) ಮೂಲಕ ಮೆಟಾವರ್ಸ್‍‍ ಲೋಕಕ್ಕೂ ಲಗ್ಗೆ ಇಟ್ಟಿದ್ದಾನೆ. ಇಲ್ಲಿ ಆಸಕ್ತ ಅಬಿಮಾನಿಗಳಿಗೆ ಹಲವು ಆಟಗಳನ್ನು, ಹುಸಿ ಸುತ್ತಣಗಳನ್ನು(Virtual environment) ಕಟ್ಟಲು ಎಡೆಮಾಡಿಕೊಡುವ ಕನಸನ್ನು ಕೆ.ಜಿ.ಎಪ್ ವರ್ಸ್‍‍ ತಂಡ ಹೊಂದಿದೆ. ಎಲ್-ಡೋ-ರಾಡೋ(El-Do-Rado) ಹೊತ್ತಿಗೆಯ ಟೋಕನ್‍‍ಗಳು ಈ ಜಗತ್ತಿನೊಳ ಹೋಗಲು ಬೇಕಿರುವ ಕೀಲಿ ಕೈ ಆಗಿದೆ.

 

ಕೊಳ್ಳುವಿಕೆ (shopping)

ಇಂದು ನಾವು ಏನಾದರೂ ಕೊಳ್ಳುವುದಾದರೆ ನಾವೇ ಅಂಗಡಿಗೆ ಬೇಟಿ ನೀಡುತ್ತೇವೆ,ಇಲ್ಲವೇ ಅಮೆಜಾನ್ , ಬಿಗ್ ಬಾಸ್ಕೆಟ್ ಅಂತಹ ಮಿಂದಾಣಗಳ/ಮೊಬೈಲ್ ಆಪ್ ಮೂಲಕ ತರಿಸಿಕೊಳ್ಳುತ್ತೇವೆ. ಇಲ್ಲಿ ವಸ್ತುಗಳನ್ನು ನಮ್ಮ ಡಿಜಿಟಲ್ ಬುಟ್ಟಿಗೆ(cart) ಸೇರಿಸುತ್ತೇವೆ. ಆದರೆ ಮೆಟಾವರ್ಸ್‍‍ ನಲ್ಲಿ ಕೊಳ್ಳುವುದಾದರೆ ಹೇಗಿರಬಹುದು ? ಇಲ್ಲಿನ ಅಂಗಡಿಯಲ್ಲಿ, ವಸ್ತುಗಳ ಬಗ್ಗೆ ವಿವರಣೆ ನೀಡಲು ಒಂದು ಡಿಜಿಟಲ್ ಅವತಾರ‍್ ಇರಬಹುದು ಮತ್ತು ನಮಗೆ ಬೇಕಾದ ವಸ್ತುಗಳನ್ನು ನಮ್ಮ ಅವತಾರ‍್ ಹೆಕ್ಕಿ ತನ್ನ ಕೈಯ್ಯಿಂದ ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಾ ಸಾಗಬಹುದು. ಈ ನಿಟ್ಟಿನಲ್ಲಿ ಶಾಪಿಪೈ(shopify) ಅಂತಹ ಮಿಂದಾಣಗಳು ಈಗಾಗಲೇ ಇದರ ಸುತ್ತ ಕೆಲಸಗಳನ್ನು/ಅರಕೆಗಳನ್ನು ಮಾಡುತ್ತಿವೆ.

ಮೆಟಾವರ್ಸ್‍‍ ನಲ್ಲಿ ನಡೆದ ಏಶ್ಯಾದ ಮೊದಲ ಮದುವೆ ರಿಸೆಪ್ಶನ್

ತಮಿಳುನಾಡಿನ ಟೆಕ್ಕಿ ದಿನೇಶ್ ಮತ್ತು ಜಗನಂದಿನಿ ಇಬ್ಬರೂ ಮೆಟಾವರ್ಸ್‍‍ ನಲ್ಲಿ ರಿಸೆಪ್ಶನ್ ಕಾರ‍್ಯಕ್ರಮ ನೆರವೇರಿಸಿಕೊಂಡಿದ್ದಾರೆ. ಹ್ಯಾರಿ ಪಾಟರ್ ಸರಣಿಯ ಅಬಿಮಾನಿಯಾದ ದಿನೇಶ್ , ಹಾಗ್ವರ‍್ಟ್ಸ್ ಮಾದರಿಯ ತೀಮ್ ಅಲ್ಲಿ ರಿಸೆಪ್ಶನ್ ಮಾಡಿಕೊಂಡಿದ್ದಾರೆ. ಇದು ಏಶ್ಯಾದಲ್ಲೇ ಮೆಟಾವರ್ಸ್‍‍ ನಲ್ಲಿ ನಡೆದ ಮೊದಲ ರಿಸೆಪ್ಶನ್. ದಿನೇಶ್ ಒಬ್ಬ ಬ್ಲಾಕ್ ಚೈನ್ ಡೆವೆಲಪರ್ ಆಗಿದ್ದರು. ತಮ್ಮ ಸಂಗಾತಿಯ ಅಪ್ಪ, ಮದುವೆಯ ಕೆಲವೇ ತಿಂಗಳ ಹಿಂದೆ ತೀರಿಹೋಗಿದ್ದರಿಂದ, ದಿನೇಶ್ ಆಕೆಗೆ ಏನಾದರೂ ಉಡುಗೊರೆ ನೀಡಲು ಬಯಸಿದ್ದರು. ಅವರ ತಂದೆಯ 3D ಅವತಾರ್ ಅನ್ನು ಮೆಟಾವರ್ಸ್‍‍ ನಲ್ಲಿ ಹುಟ್ಟು ಹಾಕಿ, ಹಲವಾರು ಗೆಳೆಯರ ಸಮ್ಮುಕದಲ್ಲಿ ಮತ್ತು ಹುಡುಗಿಯ ತಂದೆಯ ಹಾರೈಕೆಯೊಟ್ಟಿಗೆ ಹೊಸಜೀವನಕ್ಕೆ ಕಾಲಿಟ್ಟರು. ಜಗನಂದಿನಿಗೆ ಇದೊಂದು ಬಾವನಾತ್ಮಕ ವಿಶಯವಾದ್ದರಿಂದ, ಬಹಳ ಕುಶಿ ಪಟ್ಟರು. 

ಮುಂದಿನ ಬಾಗದಲ್ಲಿ ಮೆಟಾವರ್ಸ್‍‍ ಲೋಕ ಕಟ್ಟುವ ಹಿಂದೆ ಬಳಸಲಾಗುವ ಮೈಮರೆಸುವ ಚಳಕಗಳು (Immersive Tech), ವೆಬ್ 3.0, ಈಗಿರುವ ಬಗೆ ಬಗೆಯ ಮೆಟಾವರ್ಸ್‍‍‍‍ ಲೋಕಗಳು, ಮೆಟಾವರ್ಸ್‍‍‍‍ ನ ಎಕಾನಮಿ, ಮೆಟಾವರ್ಸ್‍‍ ತಂದೊಡ್ಡುವ ತೊಡಕುಗಳು ಸೇರಿದಂತೆ ಇನ್ನಶ್ಟು ಕುತೂಹಲಕಾರಿ ವಿಶಯಗಳನ್ನು ತಿಳಿಯೋಣ.

ಕಂತು-2

( ಚಿತ್ರ ಸೆಲೆ ಮತ್ತು ಮಾಹಿತಿ ಸೆಲೆ: forbes.com , techcrunch.com, facebook.com,indianexpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: