ಶ್ರೀರಾಮನವಮಿ

ಶ್ಯಾಮಲಶ್ರೀ.ಕೆ.ಎಸ್.

ರಾಮನವಮಿ

ಶ್ರೀರಾಮನವಮಿಯು ಒಂದು ಸರಳವಾದ ಹಬ್ಬವೆಂದು ಎನಿಸಿದರೂ, ಹಿಂದೂ ಸಂಪ್ರದಾಯದಲ್ಲಿ ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ದಾರ‍್ಮಿಕ ಆಚರಣೆಯಾಗಿದೆ. ಪುರಾಣಗಳ ಪ್ರಕಾರ ಚೈತ್ರ ಮಾಸದ ಶುಕ್ಲಪಕ್ಶದ ನವಮಿಯಂದು ಶ್ರೀ ರಾಮನು ಅಯೋದ್ಯೆಯಲ್ಲಿ ಹುಟ್ಟಿದನೆಂದು ಹೇಳಲಾಗುತ್ತದೆ. ಆ ದಿನವನ್ನು ಶ್ರೀರಾಮನವಮಿ ಹಬ್ಬದ ದಿನವಾಗಿ ಬಾರತದೆಲ್ಲೆಡೆ ಆಚರಿಸಲಾಗುತ್ತದೆ. ಪ್ರತಿ ವರ‍್ಶವೂ ಯುಗಾದಿ ಹಬ್ಬವೂ ಚೈತ್ರ ಮಾಸದ ಆದಿಯಲ್ಲಿ ಬಂದರೆ, ಎಂಟು ದಿನಗಳ ಬಳಿಕ ಒಂಬತ್ತನೇ ದಿನ ಶ್ರೀ ರಾಮನವಮಿ ಹಬ್ಬ ತಪ್ಪದೇ ಬರುವುದು.

ಪುರಾಣದ ಪ್ರಕಾರ ತ್ರೇತಾಯುಗದಲ್ಲಿ ಬಗವಾನ್ ವಿಶ್ಣುವು ತನ್ನ ಏಳನೇ ಅವತಾರವಾಗಿ ಅಯೋದ್ಯೆಯ ಮಹಾರಾಜ ದಶರತ ಮತ್ತು ಆತನ ಮೊದಲನೇ ಪತ್ನಿ ಕೌಸಲ್ಯೆಯರ ಸುಪುತ್ರನಾಗಿ, ದುಶ್ಟರ ಸಂಹರಿಸಲು ಶ್ರೀರಾಮಚಂದ್ರನಾಗಿ ಜನ್ಮತಾಳಿ ದರ‍್ಮದಿಂದ ನಡೆದು, ಜನಕ ಮಹಾರಾಜನ ಪುತ್ರಿ ಜಾನಕಿಯ ಕೈಹಿಡಿದು ಏಕಪತ್ನೀವ್ರತಸ್ತನೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಶ್ರೀರಾಮನಿಗೆ ಮರ‍್ಯಾದಾಪುರುಶೋತ್ತಮನೆಂಬ ಬಿರುದಿನ ಗೌರವವೂ ಇದೆ. ಅಂದಿನಿಂದ ಇಂದಿನವರೆಗೂ ಶ್ರೀರಾಮನ ವ್ರುತ್ತಾಂತವನ್ನು ರಾಮಬಕ್ತರು ತಿಳಿಸುತ್ತಾ ರಾಮನಾಮವನ್ನು ಜಪಿಸುತ್ತಾ ತಮ್ಮ ಅಬೀಶ್ಟಗಳ ಈಡೇರಿಕೆಗೆ ರಾಮನವಮಿಯನ್ನು ಆಚರಿಸುತ್ತಾ ಬಂದಿರುವರು.

ಬಾರತದ ಅನೇಕ ಕಡೆಗಳಲ್ಲಿ ರಾಮನವಮಿಯ ಆಚರಣೆ ವಿಬಿನ್ನವಾಗಿದೆ. ನಮ್ಮ ಕರುನಾಡಿನಲ್ಲಿ ಇದರ ಆಚರಣೆ ವಿಶೇಶವಾಗಿಯೇ ಇದೆ. ಅರಳಿಮರ(ಅಶ್ವತ್ತ ವ್ರುಕ್ಶ) ಹಾಗೂ ರಾಮನ ಗುಡಿಗಳಲ್ಲಿ ಬಕ್ತರೆಲ್ಲರು ಒಟ್ಟಿಗೆ ಸೇರಿ ತಮ್ಮ ಇಶ್ಟಾರ‍್ತ ಸಿದ್ದಿಗಾಗಿ ರಾಮನ ಬಜನೆ ಮಾಡುವ ಮೂಲಕ ರಾಮನನ್ನು ಜಪಿಸಿ ಪೂಜಿಸುತ್ತಾರೆ. ಹೀಗೆ ಎಲ್ಲರೂ ಒಟ್ಟಾಗಿ ಬಜನೆಗಳನ್ನು ಮಾಡುವುದರಿಂದ ಬಕ್ತಿಯ ಬಾವ ಹೆಚ್ಚಾಗಿ ಮನಸ್ಸಿಗೆ ಹಿತವೆನಿಸುವುದು. ಒಳ್ಳೆಯ ಚಿಂತನೆಗಳು ಹೆಚ್ಚುವುದು.

ಪೂಜಾಕಾರ‍್ಯಗಳ ನಂತರ ಬಕ್ತರಿಗೆ ಕೋಸಂಬರಿ, ಕರ‍್ಬೂಜ ಹಣ್ಣಿನ ಪಾನಕ, ನೀರುಮಜ್ಜಿಗೆಯನ್ನು ಪ್ರಸಾದವಾಗಿ ನೀಡಲಾಗುತ್ತದೆ. ಇನ್ನೂ ಕೆಲವೆಡೆ ಬಾಳೆಹಣ್ಣಿನ ರಸಾಯನವನ್ನೂ ಬಕ್ತರಿಗೆ ಹಂಚಲಾಗುವುದು. ಹಿಂದಿನ ಕಾಲದಿಂದಲೂ ಈ ಬಗೆಯ ಆಚರಣಾ ಪದ್ದತಿ ಜರುಗುತ್ತಾ ಬಂದಿದೆ.
ರಾಮನವಮಿಯು ಬೇಸಿಗೆಯ ತಿಂಗಳುಗಳಲ್ಲಿ ಬರುವುದರಿಂದ ನಮ್ಮ ಹಿರಿಯರು ವೈಗ್ನಾನಿಕವಾಗಿಯೂ ಯೋಚಿಸಿ ದೇಹವನ್ನು ತಂಪಾಗಿಡಲು ಪಾನಕ, ಹೆಸರುಬೇಳೆ ಕೋಸಂಬರಿಯನ್ನು ತಯಾರಿಸಿ ಸೇವಿಸುತ್ತಿದ್ದರು. ಈ ರೀತಿಯ ಆದ್ಯಾತ್ಮಿಕ ಆಚರಣೆಗಳು ಈಗಲೂ ನಡೆಯುತ್ತಿರುವುದರಿಂದ ಎಲ್ಲರಲ್ಲೂ ಐಕ್ಯತೆಯನ್ನು ಮೂಡಿಸಿ ದಾರ‍್ಮಿಕ ಆಚರಣೆಗಳ ಬಗೆಗೆ ಗೌರವವನ್ನು ಮೂಡಿಸಿವೆ. ರಾಮನವಮಿ ಆಚರಣೆಯು ಕೇವಲ ಹಳ್ಳಿಗಳಲ್ಲದೇ ನಗರಗಳಲ್ಲಿಯೂ ವಿಜ್ರುಂಬಿಸುತ್ತಿರುವುದು ವಿಶೇಶವಾಗಿದೆ.

( ಚಿತ್ರಸೆಲೆ :  https://www.thestatesman.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: