ಕವಿತೆ : ಕನಸು ಕಾಣಬೇಕು

– ದ್ವಾರನಕುಂಟೆ ಪಿ. ಚಿತ್ತನಾಯಕ.

ಮನಸು, Mind

ಬಾಯ್ದೆರೆದ ನೆಲಗಳು
ಎಲೆಯುದುರಿದ ಮರಗಳು
ಮೋಡಗಳಿಲ್ಲದ ಬಯಲಿನ ವಿಸ್ತಾರ ಬಾನು
ಅಶ್ಟೇ ಏಕೆ?
ತುಟಿಕಚ್ಚಿ ನಿಂತ ಮಾತುಗಳು
ಹಂಬಲಿಸಿ ನಿಂತ ತೋಳುಗಳು
ಬೆಸೆಯುವ ಕೈ ಬೆರಳುಗಳು
ಕನಸು ಕಾಣಬೇಕು
ಎದುರುಬದುರು ಬಂದಾಗ
ಕಣ್ಣುಗಳು ಕೂಡಿ ಹೂಬನದಲಿದ್ದಾಗ
ಏನೋ ಜಾತಕದ ದೋಶದಂತೆ
ವಾಸ್ತುವಿನ ಕುಚೇಶ್ಟೆಯಂತೆ
ಬೆಸೆಯುವ ಮಾತುಗಳ ನಡುವೆ
ಎದ್ದು ನಿಂತ ಗೋಡೆಗಳ ಮುರಿಯಲು
ಕನಸು ಕಾಣಬೇಕು
ಅವು ಸುಕಾಂತದ ಕನಸುಗಳಾಗಬೇಕು

ಹೂಬಿಡುವುದಕೂ ಮುನ್ನ
ಮೊಳೆವ ಕಾತುರತೆಯ ಬಳ್ಳಿಗೆ
ಆವಿಯಾಗುವುದಕೂ ಮುನ್ನ
ಕುಣಿವ ಚಾತುರತೆಯ ನೀರಿಗೆ
ಗೆಲ್ಲುವುದಕೂ ಮುನ್ನ
ಸೋಲು ಅಪ್ಪುವ ಮನಸ್ಸಿಗೆ
ಸಾಯುವುದಕೂ ಮುನ್ನ
ಬದುಕುವ ಚಲ ತುಂಬುವುದು ಜೀವಕೆ
ಆ ಕಾಣುವ ಕನಸುಗಳು

ಬೋದಿಸುತ್ತವೆ ಆ ನಾವೀನ್ಯ ಸ್ವಪ್ನಗಳು
ಮುಂದಿನ ರಂಗಸಜ್ಜಿಕೆಗೆ ಬಣ್ಣತುಂಬಿ
ನರ‍್ತಿಸುವವನ ಜೀವನಕ್ಕೆ
ಮತ್ತಶ್ಟು, ಮಗದಶ್ಟು,ಮೊಗೆದಶ್ಟು
ರಸಗಳಿಗೆಯಾಗಿಸುವ ಕಸುವ ತುಂಬಿ
ದುಕ್ಕಾಂತಗಳೊಳಗೆ ಬೆಳಕು ಹರಿವ
ಸುಕಾಂತ ಕನಸುಗಳ ಕಾಣಬೇಕು

( ಚಿತ್ರಸೆಲೆ : sloanreview.mit.edu )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: