ಟಿಯಾನ್ಮೆನ್ ಪರ‍್ವತ: ಚೀನಾದ ಸ್ವರ‍್ಗದ ಬಾಗಿಲು
– ಕೆ.ವಿ.ಶಶಿದರ.
ಚೀನಾ ಅನೇಕ ನೈಸರ‍್ಗಿಕ ಆಕರ‍್ಶಣೆಗಳನ್ನು ಹೊಂದಿರುವ ದೇಶ. ಚೀನಾ ಗೋಡೆ ಮಾನವ ನಿರ‍್ಮಿತವಾದರೆ, ಟಿಯಾನ್ಮೆನ್ ಪರ‍್ವತದಲ್ಲಿನ ‘ಸ್ವರ‍್ಗದ ಬಾಗಿಲು’ ನೈಸರ‍್ಗಿಕವಾದದ್ದು. ಇದು ಜಾಂಗ್ಜಿಯಾಜಿ ನಗರದಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಹುನಾನ್ ಪ್ರಾಂತ್ಯದಲ್ಲಿದೆ. ಟಿಯಾನ್ಮೆನ್ ಪರ‍್ವತ, ವಿಶ್ವದ ಅತಿ ಎತ್ತರದ ಗುಹೆಗಳಿಗೆ ಹೆಸರುವಾಸಿಯಾಗಿದೆ. ಈ ಪರ‍್ವತದ ಎತ್ತರವನ್ನು ಅತ್ಯಂತ ನಿಕರವಾಗಿ ವಿಜ್ನಾನಿಗಳು ಅಳತೆ ಮಾಡಿರುವ ಕಾರಣ ಸೆಂಟಿಮೀಟರ್ ನಶ್ಟು ಸಣ್ಣ ಅಳತೆಯಲ್ಲಿ ಈ ಪರ‍್ವತದ ಎತ್ತರವನ್ನು ದಾಕಲಿಸಿದ್ದಾರೆ. ಈ ಪರ‍್ವತ 1,518.6 ಮೀಟರ್ ಎತ್ತರವಿದೆ.
ಈ ಪರ‍್ವತವು ಪ್ರಕ್ರುತಿ ಜನ್ಯ. ‘ಸ್ವರ‍್ಗದ ಬಾಗಿಲು’ ಎಂದು ಇಂದು ಗುರುತಿಸುವ ಪ್ರದೇಶ ನೈಸರ‍್ಗಿಕ ಸವೆತದಿಂದ ರೂಪುಗೊಂಡಿದೆ. 60ಮೀಟರ್ ಉದ್ದ, 131.5 ಮೀಟರ್ ಎತ್ತರ ಮತ್ತು 57 ಮೀಟರ್ ಅಗಲದ ಈ ಗುಹೆ, ಕ್ರಿ.ಶ. 263ರಲ್ಲಿ ಮೂಲ ಪರ‍್ವತದಿಂದ ಬೇರ‍್ಪಟ್ಟಾಗ ಗುಹೆಯ 60 ಮೀಟರ್ ಹಿಂಬಾಗ ಕುಸಿದ ಕಾರಣ ಸ್ವರ‍್ಗದ ಬಾಗಿಲು ತೆರೆದುಕೊಂಡಿತು. ಇದು 5,000 ಮೀಟರ್ ಎತ್ತರದಲ್ಲಿದೆ. ಸ್ವರ‍್ಗದ ಬಾಗಿಲು ಸದಾ ಕಾಲ ಮೋಡಗಳಿಂದ ಆವ್ರುತವಾದ ಕಲ್ಲಿನ ಕಮಾನು. ವಿಶ್ವದ ಅತ್ಯಂತ ಅದ್ಬುತ ಸ್ತಳ ಇದು. ಈ ನೈಸರ‍್ಗಿಕ ಕಮಾನಿನ ಬಳಿ ತಲುಪಲು ಬ್ರುಹತ್ ಮೆಟ್ಟಲುಗಳಿವೆ. ಕಾಲ್ನಡಿಗೆಯಲ್ಲಿ ಹೋಗ ಬಯಸುವವರು ಬಯ ಹುಟ್ಟಿಸುವ ಈ ಮೆಟ್ಟಲುಗಳನ್ನು ಹತ್ತಿ ಹೋಗಬಹುದು. ವಾಸ್ತವವಾಗಿ 999 ಮೆಟ್ಟಿಲುಗಳಿದ್ದು, ಇವು 45 ಡಿಗ್ರಿ ಇಳಿಜಾರಿನಲ್ಲಿ ನಿರ‍್ಮಿತವಾಗಿವೆ. ತಾವೋ ತತ್ವಶಾಸ್ತ್ರದಂತೆ 999 ಅತೀಂದ್ರಿಯ ಹಂತಗಳು. ಇದು ಸರ‍್ವೋಚ್ಚ ಸಂಕ್ಯೆ ಹಾಗೂ ಚಕ್ರವರ‍್ತಿಯ ಸಂಕೇತವೂ ಆಗಿದೆ. ಸ್ತಳೀಯರು, ಈ ಪರ‍್ವತ ಮತ್ತು ಸ್ವರ‍್ಗದ ಬಾಗಿಲು ಅತೀಂದ್ರಿಯ ಶಕ್ತಿಯನ್ನು ಹೊಂದಿದೆ ಎಂದು ನಂಬಿದ್ದಾರೆ. ಮಿಂಗ್ ರಾಜವಂಶದ ರಾಜರುಗಳು ಇಲ್ಲಿ ಅಸಂಕ್ಯಾತ ನಿದಿಯನ್ನು ಹುದುಗಿಸಿಟ್ಟಿದ್ದಾರೆ ಎಂಬ ಬಗ್ಗೆ ಸಾಕಶ್ಟು ದಂತಕತೆಗಳಿವೆ. ಶತ ಶತಮಾನಗಳ ಕಾಲದಿಂದಲೂ ಅವಿತಿಟ್ಟಿರುವ ನಿದಿಯನ್ನು ಹುಡುಕಲು, ನಿದಿ ಹುಡುಕಾಟದವರು ಅವ್ಯಾಹತ ಪ್ರಯತ್ನಗಳನ್ನು ನಡೆಸಿದ್ದಾರೆ. ಅವರೆಲ್ಲಾ ಹುಡುಕಾಟಗಳೂ ನಿಶ್ಪಲವಾಗಿವೆ.
ಟಿಯಾನ್ಮೆನ್ ಪರ‍್ವತ ಮತ್ತು ಸ್ವರ‍್ಗದ ಬಾಗಿಲು ಚೀನಾದ ಅತ್ಯಂತ ಜನಪ್ರಿಯ ಪ್ರವಾಸಿ ಆಕರ‍್ಶಣೆಗಳಲ್ಲಿ ಒಂದು. ಇಲ್ಲಿ ವಿಶ್ವದ ಅತಿ ಉದ್ದದ ಮತ್ತು ಅತಿ ಎತ್ತರದ ಕೇಬಲ್ ವೇ ಸಹ ಇದೆ. ಇದು ಗಿನ್ನೆಸ್ ಬುಕ್ ಆಪ್ ರೆಕಾರ‍್ಡ್ಸ್ ನಲ್ಲಿ ದಾಕಲಾಗಿದೆ. ಕೇಬಲ್ ವೇಯ ಉದ್ದ 7,455 ಮೀಟರ್. ಸ್ವರ‍್ಗದ ಬಾಗಿಲಿಗೆ ತಲುಪಲು ರಸ್ತೆ ಮಾರ‍್ಗವನ್ನು ಸಹ ಬಳಸಬಹುದು. ದ ರೋಡ್ ಟುನ್ಟ್ಯಾನ್ ಅತವಾ 99 ತಿರುವುಗಳ ರಸ್ತೆ ಎಂದು ಕರೆಯಲ್ಪಡುವ ಹೆದ್ದಾರಿ ಮೂಲಕ 11 ಕಿಲೋಮೀಟರ್ ಕ್ರಮಿಸಿ ಇಲ್ಲಿಗೆ ಬಂದು ಸೇರಬಹುದು. ಇದು ವಿಶ್ವದಲ್ಲೇ ಅತ್ಯಂತ ಕಡಿದಾದ ಪರ‍್ವತ ರಸ್ತೆಗಳಲ್ಲಿ ಒಂದಾಗಿದ್ದು, ಇಲ್ಲಿನ ತಿರುವುಗಳ ಅಂತರ 200 ರಿಂದ 1300 ಮೀಟರ್ ನಶ್ಟಿದೆ. ಸ್ವರ‍್ಗದ ಬಾಗಿಲನ್ನು ತಲುಪಿದ ಮೇಲೆ ಆಚೆ ಬದಿಯಲ್ಲಿ ಕಂಡು ಬರುವ ರುದ್ರ ರಮಣೀಯ ನೈಸರ‍್ಗಿಕ ದ್ರುಶ್ಯಗಳು ಎಂತಹವರ ಮನಸ್ಸನ್ನೂ ಸೂರೆಗೊಳ್ಳುವುದರಲ್ಲಿ ಆಶ್ಚರ‍್ಯವಿಲ್ಲ. ಇಲ್ಲಿ ಕಲ್ಪನೆಯ ಸ್ವರ‍್ಗವನ್ನು ಕಾಣಬಹುದು. ಆ ಪ್ರಾಕ್ರುತಿಕ ವೈಬವವನ್ನು ನೋಡಿ ಅನುಬವಿಸಬೇಕಶ್ಟೆ ಹೊರತು, ಅಕ್ಶರಗಳಲ್ಲಿ ವರ‍್ಣಿಸಲು ಸಾದ್ಯವಿಲ್ಲ.
ಟಿಯಾನ್ಮೆನ್ ಪರ‍್ವತದ ಸುತ್ತಲೂ ಹಲವಾರು ಕಿಲೋಮೀಟರ್ ನಶ್ಟು ಉದ್ದವಿರುವ ವಿಶೇಶ ಪರ‍್ವತ ಹಾದಿಯಿದೆ. ಇದರಲ್ಲಿ 70 ಮೀಟರ್ ನಶ್ಟು ಉದ್ದವನ್ನು ಗಾಜಿನಿಂದ ನಿರ‍್ಮಿಸಿದ್ದಾರೆ. ಇದರ ಮೂಲಕ ತಳವಿರದ ಪಾತಾಳವನ್ನು ವೀಕ್ಶಿಸಬಹುದು. ಇದರ ಮೇಲೆ ನಡೆಯುವವರ ಗುಂಡಿಗೆ ಗಟ್ಟಿ ಇರಬೇಕು. ದುರ‍್ಬಲ ಹ್ರುದಯದವರಿಗೆ ಇದು ಅಸಾದ್ಯದ ಮಾತು.
1949 ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಪ್ ಚೀನಾ ಅಸ್ತಿತ್ವಕ್ಕೆ ಬರುವವರೆವಿಗೂ ಇದು ಮನುಶ್ಯನಿಂದ ಬಹುತೇಕ ದೂರವಿತ್ತು. 1988 ರಲ್ಲಿ ಈ ಇಡೀ ಪ್ರದೇಶ ರಮಣೀಯ ಮತ್ತು ಐತಿಹಾಸಿಕ ಆಸಕ್ತಿಯ ಪ್ರದೇಶವೆಂದು ಅನುಮೋದನೆ ಪಡೆಯಿತು. 1992ರಲ್ಲಿ ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಗುರುತಿಸಿ ರಕ್ಶಣಾ ಕಾರ‍್ಯಕ್ಕೆ ಮುಂದಾಯಿತು. ಪ್ರವಾಸಿಗರ ಮತ್ತು ಯಾತ್ರಿಕರ ಮತ್ತೊಂದು ಪ್ರಮುಕ ಆಕರ‍್ಶಣೆಯೆಂದರೆ ಹತ್ತು ಸಾವಿರ ಚದರ ಮೀಟರ್ ಪ್ರದೇಶದಲ್ಲಿ ನಿರ‍್ಮಾಣವಾಗಿರುವ ಇಲ್ಲಿನ ಬೌದ್ದ ದೇವಾಲಯ.
(ಮಾಹಿತಿ ಮತ್ತು ಚಿತ್ರ ಸೆಲೆ: chinahighlights.com, travelandleisure.com, insightguides.com, dangerousroads.org, wonderopolis.org )
ಇತ್ತೀಚಿನ ಅನಿಸಿಕೆಗಳು