ಕಾಚಿಕಲ್ಲಿ: ಮೊಸಳೆಯ ಪವಿತ್ರ ಕೊಳ

– .

ಪಶ್ಚಿಮ ಆಪ್ರಿಕಾದಲ್ಲಿನ ರಿಪಬ್ಲಿಕ್ ಆಪ್ ಗ್ಯಾಂಬಿಯಾದ ಎರಡನೇ ಪ್ರಮುಕ ನಗರ ಬಕಾವು. ಈ ನಗರದ ಮುಕ್ಯ ಆಕರ‍್ಶಣೆಯೆಂದರೆ, ಅಟ್ಲಾಂಟಿಕ್ ಬೋಲೆವಾರ್‍ಡ್‌ನ ದಕ್ಶಿಣಕ್ಕೆ ಸುಮಾರು 700 ಮೀಟರ‍್ ದೂರದಲ್ಲಿರುವ ಕಾಚಿಕಲ್ಲಿ ವಸತಿ ಉಪನಗರದ ಹ್ರುದಯ ಬಾಗದಲ್ಲಿರುವ ಪುರಾತನ ಸಿಹಿ ನೀರಿನ ಕೊಳ.

ಈ ಕೊಳವು ಬೋಜಾಂಗ್ ಎಂಬ ಪ್ರಮುಕ ವಂಶಸ್ತರ ವಶದಲ್ಲಿದೆ. ಅವರ ಪೂರ‍್ವಜರು ಸುಮಾರು 500 ವರ‍್ಶಗಳ ಹಿಂದೆ ಈ ಪ್ರದೇಶಕ್ಕೆ ಬಂದಿದ್ದರು. ಅಂದಿನಿಂದಲೂ ಇಲ್ಲಿಯೇ ನೆಲೆಸಿದ್ದಾರೆ. ಸದರಿ ವಂಶಸ್ತರು ಹೇಳುವಂತೆ ಈ ಕೊಳದ ಜಾಗದಲ್ಲಿ ಒಂದು ಸಣ್ಣ ಬಾವಿಯಿತ್ತು. ಇದು ಬಕಾವು ಜನರ ಕುಡಿಯುವ ನೀರಿಗೆ ಏಕೈಕ ಮೂಲವಾಗಿತ್ತಂತೆ.

ಒಂದು ದಿನ ಜಿನ್ ತನ್ನ ಮಗುವಿನೊಂದಿಗೆ, ಬಕೆಟ್ ಹಿಡಿದು ನೀರಿಗಾಗಿ ಬಾವಿಯ ಬಳಿ ಬಂದಳಂತೆ. ಜಿನ್ ಬಾವಿಯಿಂದ ನೀರನ್ನು ತೆಗೆಯುವ ಮುನ್ನವೇ ತನ್ನೊಂದಿಗಿದ್ದ ಮಗು ಜಾರಿ ಬಾವಿಯಲ್ಲಿ ಬಿದ್ದಿತಂತೆ. ಅಸಹಾಯಕ ಜಿನ್ ಹತಾಶೆಯಿಂದ ಜೋರಾಗಿ ಕೂಗುತ್ತಾ ಸಹಾಯಕ್ಕಾಗಿ ಮೊರೆ ಹೋದಳು. ಹತ್ತಿರದಲ್ಲೇ ಇದ್ದ ತಾಂಬಾಸ್ ಮತ್ತು ಜಾಲಿ ತಂಬಾ ಆಕೆಯ ಮೊರೆಯನ್ನು ಆಲಿಸಿ ಅಲ್ಲಿಗೆ ದಾವಿಸಿ ಬಂದರಂತೆ. ಜಿನ್ ‘ಕಾಚಿಕಲ್ಲಿ’ ಎಂದು ಕೂಗುತ್ತಿದ್ದುದು ಕಿವಿಗೆ ಬಿತ್ತಂತೆ. ಮಂಡಿಕಾ ಬಾಶೆಯ ‘ಕಾಚಿಕಲ್ಲಿ’ ಎಂದರೆ ‘ಅದನ್ನು ಎತ್ತಿಕೊಳ್ಳಿ ಮತ್ತು ಕೆಳಗೆ ಇರಿಸಿ’ ಎಂದು ಅರ‍್ತೈಸಬಹುದು.

ತಾಂಬಾಸ್ ಮತ್ತು ಜಾಲಿ ತಂಬಾ, ಮಗುವನ್ನು ರಕ್ಶಿಸಿ ಜಿನ್ ಗೆ ಸಹಾಯ ಮಾಡಿದರಂತೆ. ಅವರುಗಳ ಸಹಾಯದಿಂದ ಸಂತುಶ್ಟಗೊಂಡ ಜಿನ್, ಅವರಿಗಾಗಿ ದೇವರಲ್ಲಿ ಪ್ರಾರ‍್ತಿಸಿದಳಂತೆ. ನಂತರ ಅವರಿಬ್ಬರಿಗೂ ‘ಇದು ಅತ್ಯಂತ ಪವಿತ್ರ ಯಾಚನಾ ಮತ್ತು ಪ್ರಾರ‍್ತನಾ ಸ್ತಳವಾಗುತ್ತದೆ, ಇದರಲ್ಲಿ ವನ್ಯ ಜೀವಿಗಳನ್ನು ಸಂರಕ್ಶಿಸಿ’ ಎಂದು ಆಶೀರ‍್ವದಿಸಿದಳಂತೆ. ಕ್ರಮೇಣ ಅದರಲ್ಲಿ ನೀರು ಹೆಚ್ಚಾಗಿ ಅದು ಕೊಳವಾಗಿ ಪರಿವರ‍್ತನೆಗೊಂಡಿತು. ಆ ಕುಟುಂಬದ ಸದಸ್ಯರು ಒಂದು ಜೋಡಿ ಮೊಸಳೆಗಳನ್ನು ಹಿಡಿದು ತಂದು ಕೊಳದಲ್ಲಿ ಬಿಟ್ಟರಂತೆ. ಅಂದಿನಿಂದ ಇಂದಿನವರೆವಿಗೂ ಆ ಕೊಳ ಮೊಸಳೆಗಳ ಆವಾಸ ಸ್ತಾನವಾಗಿದೆ. ಇಂದು ಅವುಗಳ ಸಂಕ್ಯೆ ಎಂಬತ್ತು ಮುಟ್ಟಿದೆ.

ಇದು ಕೊಂಚ ಮಟ್ಟಿಗೆ ಪ್ರವಾಸಿ ಕೇಂದ್ರವಾಗಿದ್ದರೂ, ಈ ಕೊಳವು ಮಕ್ಕಳಿಲ್ಲದ ಮಹಿಳೆಯರಿಗೆ ಅತ್ಯಂತ ಪವಿತ್ರ ಯಾತ್ರಾ ಸ್ತಳವಾಗಿದೆ. ದೂರದೂರುಗಳಿಂದ ಮಕ್ಕಳನ್ನು ಪಡೆಯುವ ಆಸೆಯಿಂದ ಮಹಿಳೆಯರು ಇಲ್ಲಿಗೆ ಬಂದು, ಈ ಪವಿತ್ರ ಕೊಳದ ನೀರಿನಲ್ಲಿ ಮಿಂದು ಹೋದಲ್ಲಿ, ಮಗು ಮಡಿಲು ತುಂಬುತ್ತದೆ ಎಂದು ನಂಬಿದ್ದಾರೆ. ಈ ಆಚರಣೆಯ ನಂತರ ದೇಹದ ಕೆಲವೊಂದು ಬಾಗಗಳಿಗೆ ಲೇಪಿಸಲು ಕೊಳದ ನೀರನ್ನು ಬಾಟಲಿಯಲ್ಲಿ ನೀಡಲಾಗುತ್ತದೆ. ಒಮ್ಮೆ ಈ ದಾರ‍್ಮಿಕ ಕ್ರಿಯೆಯಲ್ಲಿ ಪಾಲ್ಗೊಂಡ ನಂತರ, ಬಕಾವುವಿನ ಯಾರ ಜೊತೆಯೂ ಹಸ್ತಲಾಗವ ನೀಡುವಂತಿಲ್ಲ. ಈ ದಾರ‍್ಮಿಕ ಸ್ನಾನದ ನಂತರದ ದಿನಗಳಲ್ಲಿ ಜನಿಸಿದ ಯಾವುದೇ ಮಗುವಿಗೆ ‘ಕಾಚಿಕಲ್ಲಿ’ ಎಂದೇ ನಾಮಕರಣ ಮಾಡಬೇಕೆನ್ನುವ ನಂಬಿಕೆ ಇದೆ.

ಈ ಕೊಳದಲ್ಲಿರುವ ಮೊಸಳೆಗಳು, ದಡದಲ್ಲಿ ವಿರಳವಾಗಿ, ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಅಪರೂಪವಾಗಿ ಆರೇಳು ಮೊಸಳೆಗಳು ದಡದಲ್ಲಿರುವುದನ್ನು ಕಾಣಬಹುದು. ಎರಡು ಮೀಟರ‍್ ಉದ್ದದಿಂದ ಮೂರ‍್ನಾಲ್ಕು ಮೀಟರ‍್ ಉದ್ದದ ಮೊಸಳೆಗಳು ಈ ಕೊಳದಲ್ಲಿವೆ. ಸದ್ಯದಲ್ಲಿ 70 ವರ‍್ಶ ವಯಸ್ಸಿನ ಮೊಸಳೆಯೇ ಅತ್ಯಂತ ಹಿರಿಯದು.

ಕೊಳದಲ್ಲಿರುವ ಬುಲ್ ಪ್ರಾಗ್‍ಗಳು ಇಲ್ಲಿನ ಮೊಸಳೆಗಳಿಗೆ ಅತ್ಯಂತ ಪ್ರಿಯ ಆಹಾರ. ಪಾಚಿಯಿಂದ ಆವ್ರುತವಾಗಿರುವ ಕೊಳದ ದಡದಲ್ಲಿ, ಪಾಚಿಯಂತಯೇ ಕಾಣುವ ಮೊಸಳೆಗಳಿಂದ ದೂರವಿರುವುದು ಒಳ್ಳೆಯದು. ಗಂಟೆಗಟ್ಟಲೆ ಒಂದೇ ಸ್ತಿತಿಯಲ್ಲಿ ಸತ್ತು ಬಿದ್ದಂತಿರುವ ಮೊಳಸಳೆಗಳ ಬಳಿ ಹೋಗುವುದು ಅತ್ಯಂತ ಅಪಾಯಕಾರಿ. ಇಂತಹ ಮೊಸಳೆಗಳು ಕಣ್ಣು ಮಿಟುಕಿಸುವುದರಲ್ಲಿ ದಾಳಿ ಮಾಡಿ, ಮನುಶ್ಯನ ಜೀವಕ್ಕೆ ಕಂಟಕವಾಗುತ್ತವೆ.

ಮೊಸಳೆಯ ಪವಿತ್ರ ಕೊಳದ ವಸ್ತು ಸಂಗ್ರಹಾಲಯದಲ್ಲಿ, ಗ್ಯಾಂಬಿಯಾದ ಸಾಂಪ್ರದಾಯಿಕ ಆಚರಣೆಯಲ್ಲಿ ಬಳಸುವ ಆಬರಣಗಳು ಮತ್ತು ಮುಕವಾಡಗಳು, ಸ್ತಳೀಯ ಸಂಗೀತ ವಾದ್ಯಗಳು, ಕ್ರುಶಿಗೆ ಬಳಸಲಾಗುವ ಹಲವು ಸಾದನಗಳು ಪ್ರದರ‍್ಶನಕ್ಕಿವೆ.

ಬಕಾವು, ಗ್ಯಾಂಬಿಯಾದ ರಾಜದಾನಿ ಬನ್ಜುಲ್ ನಿಂದ ಕೇವಲ 16 ಕಿಲೋಮೀಟರ‍್ ದೂರದಲ್ಲಿದೆ. ಈ ಮೊಸಳೆಯ ಪವಿತ್ರ ಕೊಳದ ಬಗ್ಗೆ ಎಶ್ಟೇ ದಂತ ಕತೆಗಳಿದ್ದರೂ, ಪಲವತ್ತತೆಯನ್ನು ಅರಸಿ ಬಂದ ಮಹಿಳೆಯರು ಇದರಿಂದ ಸಂತುಶ್ಟಗೊಂಡಿರುವುದಂತೂ ಸತ್ಯ.

(ಮಾಹಿತಿ ಮತ್ತು ಚಿತ್ರ ಸೆಲೆ: lonelyplanet.comaccessgambia.combradtguides.com, kfntravelguide.com, readingthebooktravel.comtripadvisor.in, wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: