ಜೇಡರ ದಾಸಿಮಯ್ಯನ ವಚನ ಓದು – 2ನೆಯ ಕಂತು

ಸಿ.ಪಿ.ನಾಗರಾಜ.

ಕಡೆಗೀಲಿಲ್ಲದ ಬಂಡಿ
ಹೊಡೆಗೆಡೆಯದೆ ಮಾಣ್ಬುದೆ
ಕಡೆಗೀಲು ಬಂಡಿಗಾಧಾರ
ಈ ಕಡುದರ್ಪವೇರಿದ
ಒಡಲೆಂಬ ಬಂಡಿಗೆ
ಮೃಢಭಕ್ತರ ನುಡಿಗಡಣವೆ
ಕಡೆಗೀಲು ಕಾಣಾ ರಾಮನಾಥ.

ಹಾದಿಯಲ್ಲಿ ಸಾಗುತ್ತಿರುವಾಗ ಬಂಡಿಯ ಚಕ್ರಗಳು ಕೆಳಕ್ಕೆ ಉರುಳದಂತೆ ತಡೆಯಲು ಕಡಾಣಿಗಳು ಇರುವಂತೆಯೇ , ವ್ಯಕ್ತಿಯ ಮಯ್ ಮನದಲ್ಲಿ ತುಡಿಯುವ ಕೆಟ್ಟ ಒಳಮಿಡಿತಗಳನ್ನು ತಡೆದು, ವ್ಯಕ್ತಿಯು ತನ್ನ ಜೀವನದಲ್ಲಿ ಒಳ್ಳೆಯ ಹಾದಿಯಲ್ಲಿ ನಡೆಯಲು ಅಗತ್ಯವಾದ ಸಾಮಾಜಿಕ ಅರಿವು ಮತ್ತು ಎಚ್ಚರವನ್ನು ಮೂಡಿಸುವ ಕಸುವು ಶಿವಶರಣಶರಣೆಯರ ನುಡಿಗಳಲ್ಲಿದೆ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

‘ಸಾಮಾಜಿಕ ಅರಿವು’ ಎಂದರೆ ವ್ಯಕ್ತಿಯು ತನ್ನ ನಡೆನುಡಿಗಳಿಂದ ತನಗೆ ಮತ್ತು ತನ್ನ ಕುಟುಂಬಕ್ಕೆ ಒಳಿತನ್ನು ಮಾಡಿಕೊಳ್ಳುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕು ಎಂಬ ತಿಳುವಳಿಕೆ.

‘ಸಾಮಾಜಿಕ ಎಚ್ಚರ’ ಎಂದರೆ ಜಾತಿ, ಮತ , ದೇವರ ಹೆಸರಿನಲ್ಲಿ ನಡೆಯುತ್ತಿರುವ ಆಚರಣೆಗಳಿಂದ ಮಾನವರ ಬದುಕಿನಲ್ಲಿ ಉಂಟಾಗುತ್ತಿರುವ ಪರಿಣಾಮಗಳನ್ನು ಸರಿಯಾಗಿ ಗಮನಿಸಿ , ಯಾವ ಬಗೆಯ ಆಚರಣೆಗಳು ಮಾನವ ಸಮುದಾಯದ ಸಂಕಟಗಳಿಗೆ ಕಾರಣವಾಗಿವೆ ಎಂಬುದನ್ನು ಅರಿತುಕೊಂಡು, ಅಂತಹ ಆಚರಣೆಗಳಿಂದ ದೂರವಿರುವುದು.

ಕಡೆ+ಕೀಲು+ಇಲ್ಲದ; ಕಡೆ=ಅಂಚು/ಕೊನೆ; ಕೀಲು=ಗೂಟ/ಬೆಣೆ; ಕಡೆಗೀಲು=ಗಾಡಿ, ತೇರು ಮತ್ತು ಇತರ ವಾಹನಗಳ ಅಚ್ಚಿನ ಕೊನೆಯಲ್ಲಿ ಚಕ್ರಗಳು ಉರುಳಿ ಕೆಳಕ್ಕೆ ಬೀಳದಂತೆ ಹಾಕಿರುವ ಕಬ್ಬಿಣದ ಗೂಟ/ಕಡಾಣಿ; ಬಂಡಿ=ಗಾಡಿ; ಹೊಡೆ+ಕೆಡೆ+ಅದೆ; ಹೊಡೆ=ಒಡಲು/ಹೊಟ್ಟೆ; ಕೆಡೆ=ಬೀಳು/ಕುಸಿ; ಹೊಡೆಗೆಡೆ=ಮಗುಚಿಬೀಳು/ಬೋರಲಾಗಿ ಬೀಳು; ಮಾಣ್=ಸುಮ್ಮನಿರು/ತಪ್ಪಿಹೋಗು;

ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ=ಚಕ್ರಗಳಿಗೆ ಕಡಾಣಿಯಿಲ್ಲದ ಬಂಡಿಯು ದಾರಿಯಲ್ಲಿ ಸಾಗುತ್ತಿರುವಾಗ ಒಂದಲ್ಲ ಒಂದು ಎಡೆಯಲ್ಲಿ ಉರುಳಿ ಬೀಳದಿರುವುದೇ, ಅಂದರೆ ಗಾಡಿಯು ಬಿದ್ದೇ ಬೀಳುವುದು ನಿಶ್ಚಿತ; ಬಂಡಿಗೆ+ಆಧಾರ; ಆಧಾರ=ಅವಲಂಬನ;

ಕಡೆಗೀಲು ಬಂಡಿಗಾಧಾರ=ಗಾಡಿಯು ಎಲ್ಲಿಯೂ ಬೀಳದಂತೆ ಸಾಗಬೇಕಾದರೆ ಕಡಾಣಿಯು ಬೇಕೇ ಬೇಕು;

ಕಡು+ದರ್ಪ+ಏರಿದ; ಕಡು=ಹೆಚ್ಚು; ದರ್ಪ=ಸೊಕ್ಕು; ಏರು=ಉಂಟಾಗು/ಒದಗು; ಒಡಲ್+ಎಂಬ; ಒಡಲು=ದೇಹ; ಎಂಬ=ಎನ್ನುವ;

ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ=ರೂಪ, ಸಂಪತ್ತು, ವಿದ್ಯೆ, ಉನ್ನತವಾದ ಗದ್ದುಗೆ ಮತ್ತು ಜಾತಿಮತದ ಮೇಲರಿಮೆಯ ಸೊಕ್ಕಿನಿಂದ ಮೆರೆಯುತ್ತಿರುವ ಈ ದೇಹವೆಂಬ ಬಂಡಿಗೆ;

ಮೃಢ=ಶಿವ; ಭಕ್ತ=ಒಳ್ಳೆಯ ನಡೆನುಡಿಗಳನ್ನೇ ದೇವರೆಂದು ಅರಿತು ಬಾಳುವವನು; ಮೃಢಭಕ್ತರು=ವಚನಕಾರರು/ಶಿವನನ್ನು ಪೂಜಿಸುವವರು; ನುಡಿ+ಗಡಣವೆ; ನುಡಿ=ಮಾತು; ಗಡಣ=ಸಮೂಹ/ರಾಶಿ;

ಮೃಢಭಕ್ತರ ನುಡಿಗಡಣ=ವಚನಕಾರರು ರಚಿಸಿರುವ ಸೂಳ್ನುಡಿಗಳು. ವಚನಗಳನ್ನು ‘ಸೂಳ್ನುಡಿ’ ಎಂದು ಕರೆಯುತ್ತಾರೆ. ಸೂಳ್ ಮತ್ತು ನುಡಿ ಎಂಬ ಎರಡು ಪದಗಳು ಸೇರಿ ‘ಸೂಳ್ನುಡಿ’ ಎಂದಾಗಿದೆ. ‘ಸೂಳ್’ ಎಂದರೆ ಸರದಿ, ವ್ಯಕ್ತಿಯ ಪಾಲಿಗೆ ದೊರೆತ ಅವಕಾಶ; ‘ನುಡಿ’ ಎಂದರೆ ಮಾತು. ಸರದಿಯ ಪ್ರಕಾರ ಆಡಿದ ಮಾತಿಗೆ ‘ಸೂಳ್ನುಡಿ’ ಎಂದು ಹೆಸರು.

ಹನ್ನೆರಡನೆಯ ಶತಮಾನದ ಶಿವಶರಣಶರಣೆಯರು ಸಾಮಾಜಿಕ ಆಂದೋಲನದ ಸನ್ನಿವೇಶದಲ್ಲಿ ತಮ್ಮ ವ್ಯಕ್ತಿಗತವಾದ ನಡೆನುಡಿಗಳನ್ನು ಒರೆಹಚ್ಚಿ ನೋಡಿಕೊಳ್ಳುವಾಗ ಮತ್ತು ಸಮಾಜದ ಅರೆಕೊರೆಗಳನ್ನು ಕುರಿತು ಒಬ್ಬರು ಮತ್ತೊಬ್ಬರೊಡನೆ ಚರ‍್ಚಿಸುವಾಗ ಆಡಿದ ನುಡಿಗಳೇ ವಚನಗಳಾಗಿ ರೂಪುಗೊಂಡಿವೆ ಎಂಬುದನ್ನು ‘ಸೂಳ್ನುಡಿ’ ಎಂಬ ಪದ ಸೂಚಿಸುತ್ತದೆ;

ಕಾಣ್=ನೋಡು/ತಿಳಿ; ಕಾಣಾ=ತಿಳಿದುಕೊ; ರಾಮನಾಥ=ಶಿವನಿಗೆ ಇದ್ದಂತಹ ಮತ್ತೊಂದು ಹೆಸರು. ವಚನಕಾರ ಜೇಡರ ದಾಸಿಮಯ್ಯನವರ ವಚನಗಳಲ್ಲಿ ಕಂಡು ಬರುವ ಅಂಕಿತನಾಮ;

ಮೃಢಭಕ್ತರ ನುಡಿಗಡಣವೆ ಕಡೆಗೀಲು=ವ್ಯಕ್ತಿಯ ಮಯ್ ಮನದಲ್ಲಿ ತುಡಿಯುವ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ಒಳ್ಳೆಯದನ್ನು ಜೀವನದಲ್ಲಿ ಆಚರಣೆಗೆ ತಂದು ಒಳ್ಳೆಯ ನಡೆನುಡಿಗಳಿಂದ ಬಾಳಲು ವ್ಯಕ್ತಿಗೆ ವಚನಕಾರರ ಸೂಳ್ನುಡಿಗಳು ನೆರವಾಗುತ್ತವೆ.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: