ಅಮುಗೆ ರಾಯಮ್ಮನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ.

ಅಮುಗಿದೇವಯ್ಯ, AmugiDevayya

ಶೀಲವಂತನಾದಡೆ ಜಾತಿಯ ಬಿಡಬೇಕು
ಶಿವಜ್ಞಾನಿಯಾದಡೆ ಸಮಯವ ಬಿಡಬೇಕು
ಹೀಂಗಲ್ಲದೆ ಜಗದಲ್ಲಿ ನಡೆವ ಭ್ರಾಂತರ ಸುದ್ದಿಯೇಕೆ
ನಿಭ್ರಾಂತನಾದ ಶರಣಂಗೆ ಅಮುಗೇಶ್ವರಾ.

ಒಳ್ಳೆಯ ನಡೆನುಡಿಗಳಿಂದ ಕೂಡಿ ಶಿವನನ್ನು ಪೂಜಿಸುವ ವ್ಯಕ್ತಿಯು ಜಾತಿಮತದ ಕಟ್ಟುಪಾಡುಗಳನ್ನು, ಸಂಪ್ರದಾಯಗಳನ್ನು ಮತ್ತು ಆಚರಣೆಗಳನ್ನು ಬಿಟ್ಟು ಬಾಳಬೇಕು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ಶೀಲವಂತನ್+ಆದಡೆ; ಶೀಲವಂತ=ಒಳ್ಳೆಯ ನಡೆನುಡಿಯುಳ್ಳವನು. ಅಂದರೆ ತಾನು ಆಡುವ ಮಾತಿನಿಂದ ಮತ್ತು ಮಾಡುವ ದುಡಿಮೆಯಿಂದ ತನಗೆ ಮತ್ತು ತನ್ನ ಕುಟುಂಬಕ್ಕೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವವನು;

ಆದಡೆ=ಆಗಿದ್ದರೆ; ಜಾತಿ=ಸಮಾಜದಲ್ಲಿರುವ ಜನಸಮುದಾಯವನ್ನು ಮೇಲು ಕೀಳು ಎಂದು ವಿಂಗಡಿಸಿರುವ ಒಂದು ಸಾಮಾಜಿಕ ಒಕ್ಕೂಟ; ಈ ಒಕ್ಕೂಟದಲ್ಲಿ ಬ್ರಾಹ್ಮಣ-ಕ್ಶತ್ರಿಯ-ವೈಶ್ಯ-ಶೂದ್ರ ಎಂಬ ನಾಲ್ಕು ವರ‍್ಣಗಳು ಮತ್ತು ಚಂಡಾಲರು ಎಂಬ ಮತ್ತೊಂದು ವರ‍್ಗವಿತ್ತು. ಇವು ಕಾಲದಿಂದ ಕಾಲಕ್ಕೆ ಕವಲೊಡೆದು ನೂರೆಂಟು ಬಗೆಯ ಜಾತಿಗಳಾಗಿ ಸಾವಿರಾರು ಬಗೆಯ ಉಪಜಾತಿಗಳಾಗಿ ರೂಪುಗೊಂಡು ಜನಸಮುದಾಯದ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಬಿಡು=ತೊರೆ/ತ್ಯಜಿಸು;

ಶೀಲವಂತನಾದಡೆ ಜಾತಿಯ ಬಿಡಬೇಕು=ಶೀಲವಂತನಾದವನು ಸಮಾಜದಲ್ಲಿ ಮತ್ತೊಬ್ಬರೊಡನೆ ವ್ಯವಹರಿಸುವಾಗ, ಅವರು ತನ್ನ ಜಾತಿಗಿಂತಲೂ ಮೇಲಿನ ಜಾತಿಯವರು ಎಂಬ ಕಾರಣಕ್ಕಾಗಿ ಕೀಳರಿಮೆಯಿಂದ ಕುಗ್ಗಿ ಹಿಂಜರಿಯಬಾರದು ಇಲ್ಲವೇ ಅವರು ತನ್ನ ಜಾತಿಗಿಂತಲೂ ಕೆಳ ಜಾತಿಯವರು ಎಂಬ ಕಾರಣಕ್ಕಾಗಿ ಮೇಲರಿಮೆಯಿಂದ ಹಿಗ್ಗಿ ಅಹಂಕಾರದಿಂದ ಮೆರೆಯಬಾರದು. ಜಾತಿಯೆಂಬುದು ಮಾನವರೇ ಕಟ್ಟಿಕೊಂಡಿರುವ ಒಂದು ಒಕ್ಕೂಟವೇ ಹೊರತು ನಿಸರ್ಗ ಸಹಜವಲ್ಲ ಎಂಬ ವಾಸ್ತವವನ್ನು ಅರಿತುಕೊಂಡು, ಜಾತಿಯ ನೆಲೆಯಲ್ಲಿ ತಾನು ಯಾರಿಗಿಂತಲೂ ಮೇಲಲ್ಲ ಇಲ್ಲವೇ ಕೀಳಲ್ಲ ಎಂಬ ನಿಲುವನ್ನು ಹೊಂದಿ, ಜಾತಿಯನ್ನು ಕಡೆಗಣಿಸಬೇಕು;

ಶಿವಜ್ಞಾನಿ+ಆದಡೆ; ಶಿವ=ಈಶ್ವರ; ಜ್ಞಾನಿ=ತಿಳಿದವನು; ಶಿವಜ್ಞಾನಿ=ಒಳ್ಳೆಯ ನಡೆನುಡಿಗಳಿಂದ ಬಾಳುವುದೇ ಶಿವಪೂಜೆಯೆಂದು ಅರಿತು ಬಾಳುತ್ತಿರುವವನು; ಸಮಯ=ಮತ/ದರ‍್ಮ;

ಶಿವಜ್ಞಾನಿಯಾದಡೆ ಸಮಯವ ಬಿಡಬೇಕು=ಶಿವನನ್ನು ಪೂಜಿಸುವ ವ್ಯಕ್ತಿಯು ನೂರೆಂಟು ಜಾತಿಗಳ ಹೆಣಿಗೆಯಿಂದಾಗಿರುವ ಮತದಲ್ಲಿ ಹೇಳಿರುವಂತೆ ಬಗೆಬಗೆಯ ಯಾಗ, ವ್ರತ ಮತ್ತು ಇನ್ನಿತರ ಪೂಜೆಯ ಆಚರಣೆಗಳಲ್ಲಿ ತೊಡಗಬಾರದು; ಏಕೆಂದರೆ ಅಂತಹ ಆಚರಣೆಗಳಲ್ಲಿ ದೇವರು ಇಲ್ಲ; ದೇವರ ಇರುವಿಕೆಯು ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವ ನಡೆನುಡಿಗಳಲ್ಲಿ ಕಂಡುಬರುತ್ತದೆ ಎಂಬ ನಿಲುವನ್ನು ವಚನಕಾರರು ಹೊಂದಿದ್ದರು;

ಹೀಂಗೆ+ಅಲ್ಲದೆ; ಹೀಂಗೆ=ಈ ರೀತಿ; ಅಲ್ಲದೆ=ಹೊರತು;

ಹೀಂಗಲ್ಲದೆ=ಈ ರೀತಿ ಜಾತಿ ಮತಗಳನ್ನು ಬಿಟ್ಟು ಎಲ್ಲರೊಡನೆ ಒಲವು ನಲಿವು ನೆಮ್ಮದಿಯಿಂದ ಜತೆಗೂಡಿ ಬಾಳದೆ;

ಜಗ+ಅಲ್ಲಿ; ಜಗ=ಲೋಕ/ಪ್ರಪಂಚ; ನಡೆ=ವ್ಯವಹರಿಸು; ಭ್ರಾಂತ=ಇರುವುದನ್ನು ಇಲ್ಲವೆಂದು, ಇಲ್ಲದಿರುವುದನ್ನು ಇದೆಯೆಂದು ನಂಬಿರುವುದು; ಜಗದಲ್ಲಿ ನಡೆವ ಭ್ರಾಂತರು=ಜಾತಿಮತಗಳೇ ದಿಟವೆಂದು ನಂಬಿ, ಮೇಲು ಕೀಳಿನ ತಾರತಮ್ಯವನ್ನು ಒಪ್ಪಿಕೊಂಡು ಬಾಳುವವರು; ಸುದ್ದಿ+ಏಕೆ; ಸುದ್ದಿ=ಸಮಾಚಾರ/ಸಂಗತಿ; ಏಕೆ=ಏತಕ್ಕೆ; ಸುದ್ದಿಯೇಕೆ=ಸಮಾಚಾರವಾಗಲಿ ಇಲ್ಲವೇ ಸಹವಾಸವಾಗಲಿ ಬೇಕಾಗಿಲ್ಲ;

ನಿಭ್ರಾಂತನ್+ಆದ; ನಿಭ್ರಾಂತ=ವಾಸ್ತವವನ್ನು ಅರಿತವನು; ಕಣ್ಣ ಮುಂದಿನ ಜಗತ್ತಿನಲ್ಲಿ ಮತ್ತು ಸಮಾಜದಲ್ಲಿ ಯಾವುದು ನಿಸರ‍್ಗ ನಿರ‍್ಮಿತ ಮತ್ತು ಯಾವುದು ಮಾನವ ನಿರ‍್ಮಿತ ಎಂಬುದನ್ನು ತಿಳಿದವನು; ಶರಣಂಗೆ=ಶರಣನಿಗೆ; ಶರಣ=ಒಳ್ಳೆಯ ನಡೆನುಡಿಯಲ್ಲಿ ಶಿವನನ್ನು ಕಾಣುವವನು; ಅಮುಗೇಶ್ವರ=ಶಿವನ ಮತ್ತೊಂದು ಹೆಸರು/ಅಮುಗೆ ರಾಯಮ್ಮನ ವಚನಗಳ ಅಂಕಿತನಾಮ;

ನಿಭ್ರಾಂತನಾದ ಶರಣಂಗೆ ಜಗದಲ್ಲಿ ನಡೆವ ಭ್ರಾಂತರ ಸುದ್ದಿಯೇಕೆ=ಈ ಜಗತ್ತಿನ ವ್ಯವಹಾರದಲ್ಲಿ ಜಾತಿಯ ಕಟ್ಟುಪಾಡುಗಳನ್ನೇ ದಿಟವೆಂದು ನಂಬಿರುವ ಮತ್ತು ಮತದ ಆಚರಣೆಗಳನ್ನೇ ದೊಡ್ಡದಾಗಿ ಮೆರೆಸುವ ವ್ಯಕ್ತಿಗಳು, ಇತರ ಜಾತಿಮತದವರ ಬಗ್ಗೆ ತೀವ್ರವಾದ ಅಸಹನೆ, ಆಕ್ರೋಶ, ಹಗೆತನ ಮತ್ತು ಸೇಡನ್ನು ಹೊಂದಿರುತ್ತಾರೆ. ಆದ್ದರಿಂದ ಅಂತಹ ಕ್ರೂರತನದ ನಡೆನುಡಿಯುಳ್ಳ ವ್ಯಕ್ತಿಗಳೊಡನೆ ವಾಸ್ತವವನ್ನು ಅರಿತು ಬಾಳುತ್ತಿರುವ ಶೀಲವಂತನಾದ ಶಿವಶರಣನು ವ್ಯವಹರಿಸಲು ಇಲ್ಲವೇ ಒಡನಾಡಲು ಆಗುವುದಿಲ್ಲವೆಂಬ ತಿರುಳನ್ನು ಈ ನುಡಿಗಳು ಸೂಚಿಸುತ್ತಿವೆ.

ಹನ್ನೆರಡನೆಯ ಶತಮಾನದ ಶಿವಶರಣಶರಣೆಯರು ಜಾತಿಯನ್ನು ಸಾಮಾಜಿಕ ಕೆಡುಕಿನ ಸಂಗತಿಯನ್ನಾಗಿ ಗುರುತಿಸಿದ್ದರು. ಏಕೆಂದರೆ ಮೇಲಿನ ಜಾತಿಯವರಿಗೆ ಮಾತ್ರ ವಿದ್ಯೆ, ಸಂಪತ್ತು ಮತ್ತು ರಾಜಕೀಯ ಗದ್ದುಗೆಯನ್ನು ಪಡೆಯುವ ಅವಕಾಶವಿತ್ತು. ಕೆಳಜಾತಿಯವರು ಮೇಲಿನ ಜಾತಿಯವರ ಸೇವೆಯನ್ನು ಮಾಡುವ ದಾಸರಾಗಿದ್ದರೇ ಹೊರತು ಯಾವುದೇ ಬಗೆಯ ಹಕ್ಕುಗಳನ್ನಾಗಲಿ ಇಲ್ಲವೇ ಸವಲತ್ತುಗಳನ್ನಾಗಲಿ ಹೊಂದಿರಲಿಲ್ಲ. ಕೆಳಜಾತಿಯವರ ಹಸಿವು, ಬಡತನ ಮತ್ತು ಅಪಮಾನದ ಬದುಕಿಗೆ ಜಾತಿ ವ್ಯವಸ್ತೆಯೇ ದೊಡ್ಡ ಕಾರಣವಾಗಿತ್ತು. ಆದ್ದರಿಂದ ಶಿವಶರಣಶರಣೆಯರು ಮೇಲು ಕೀಳಿನ ಮೆಟ್ಟಲುಗಳಿಂದ ಕೂಡಿದ ಜಾತಿ ವ್ಯವಸ್ತೆಯನ್ನು ತೊಡೆದುಹಾಕಿ, ಒಳ್ಳೆಯ ನಡೆನುಡಿಗಳಿಂದ ಕೂಡಿದ ಸರ‍್ವ ಸಮಾನತೆಯ ಸಮಾಜವನ್ನು ರೂಪಿಸಲು ಪಣತೊಟ್ಟಿದ್ದರು.

(ಚಿತ್ರ ಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: