ಅನದಿಕ್ರುತ ಸೆಂಚೂರಿಯನ್ ಟೆಸ್ಟ್ ಪ್ರಹಸನ

– ರಾಮಚಂದ್ರ ಮಹಾರುದ್ರಪ್ಪ.

ಬಾರತ ಮತ್ತು ದಕ್ಶಿಣ ಆಪ್ರಿಕಾ ದೇಶಗಳ ನಡುವೆ ಮಹಾತ್ಮ ಗಾಂದಿರವರ ಕಾಲದಿಂದಲೂ ಒಂದು ಅವಿನಾಬಾವ ಸಂಬಂದವಿದೆ. ಈ ನಂಟು ರಾಜಕೀಯ ಕ್ಶೇತ್ರದಿಂದಾಚೆಗೂ ಮೀರಿ ಬೆಳೆದು ಕ್ರಿಕೆಟ್ ಅಂಕಣದಲ್ಲೂ ಅದರದೇ ಆದ ಐತಿಹಾಸಿಕ ಪ್ರಾಮುಕ್ಯತೆಯನ್ನು ಪಡೆದುಕೊಂಡಿದೆ. ಅಪಾರ‍್ತೀಡ್ ನ (Apartheid) ಕರಾಳ ದಿನಗಳಿಂದ ಹೊರಬಂದು ಎರಡು ದಶಕಗಳ ನಿಶೇದದ ಬಳಿಕ ದಕ್ಶಿಣ ಆಪ್ರಿಕಾ ಮತ್ತೆ ಅಂತರಾಶ್ಟ್ರೀಯ ಕ್ರಿಕೆಟ್ ಆಡಲು ಮೊದಲು ಮಾಡಿದ್ದು 1991ರ ಬಾರತ ಪ್ರವಾಸದಿಂದ. ಹಾಗೇ 1992 ರಲ್ಲಿ ದಕ್ಶಿಣ ಆಪ್ರಿಕಾಕ್ಕೆ ಒಂದು ಪೂರ‍್ಣಪ್ರಮಾಣದ ಪ್ರವಾಸ ಕೈಗೊಂಡ ಮೊದಲ ದೇಶ ಬಾರತ. ಹೀಗೆ ಒಬ್ಬರಿಗೊಬ್ಬರು ನೆರವಾಗುತ್ತಾ ಕ್ರಿಕೆಟ್ ವಲಯದಲ್ಲಿ ಎರಡೂ ದೇಶಗಳ ಸ್ನೇಹ ಸಂಬಂದ ಸಾದಿಸಿವೆ. ಆದರೆ 2000ದ ಇಸವಿಯ ಮೋಸದಾಟದ ಪ್ರಕರಣದಲ್ಲಿ ಬಾರತ ಹಾಗೂ ದಕ್ಶಿಣ ಆಪ್ರಿಕಾ ಎರಡೂ ತಂಡಗಳ ಕೆಲ ಪ್ರಮುಕ ಆಟಗಾರರು ಸಿಕ್ಕಿಕೊಂಡಾಗ ತೀವ್ರ ಅವಮಾನ ಅನುಬವಿಸಿದ್ದು ಸುಳ್ಳಲ್ಲ. ಅಲ್ಲಿಂದ ಒಂದು ವರ‍್ಶದಲ್ಲಿ ಎರಡೂ ತಂಡಗಳು ಹೊಸ ನಾಯಕನ ಮಾರ‍್ಗದರ‍್ಶನದಲ್ಲಿ ಕಹಿ ನೆನಪುಗಳನ್ನು ಮರೆತು ಯುವ ಆಟಗಾರರ ಪಡೆಯನ್ನು ಕಟ್ಟಿಕೊಂಡು ಜನರ ನಂಬಿಕೆಯನ್ನು ಮತ್ತೆ ಗಳಿಸಲು ಸಜ್ಜಾದವು. ಆ 2001ರ ರುತುವಿನಲ್ಲೇ ಬಾರತ ಕ್ರಿಕೆಟ್ ತಂಡ ಸೌರವ್ ಗಂಗೂಲಿರ ಮುಂದಾಳ್ತನದಲ್ಲಿ 3 ಟೆಸ್ಟ್ ಹಾಗೂ ಆತಿತೇಯ ದಕ್ಶಿಣ ಆಪ್ರಿಕಾ ಮತ್ತು ಕೀನ್ಯಾ ತಂಡಗಳನ್ನೊಳಗೊಂಡ ಒಂದು ದಿನದ ಪಂದ್ಯಗಳ ತ್ರಿಕೋನ ಸರಣಿಯಲ್ಲಿ ಸೆಣಸಲು ದಕ್ಶಿಣ ಆಪ್ರಿಕಾ ಪ್ರವಾಸ ಕೈಗೊಂಡಿತು.

ಪೋರ‍್ಟ್ ಎಲಿಜಿಬತ್ ಟೆಸ್ಟ್ – ಮೈಕ್ ಡೆನ್ನಿಸ್ ರ ಆಟ

ಒಂದು ದಿನದ ಪಂದ್ಯಗಳ ತ್ರಿಕೋನ ಸರಣಿಯ ಪೈನಲ್ ನಲ್ಲಿ ದಕ್ಶಿಣ ಆಪ್ರಿಕಾ ಎದುರು ಮುಗ್ಗರಿಸಿದ ಬಾರತ ಬ್ಲೋಮ್ಪೆನ್ಟೈನ್ ನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಒಳ್ಳೆ ಆರಂಬ ಪಡೆದ ನಂತರವೂ ಸೋಲಿಗೆ ಶರಣಾಗುತ್ತದೆ. ಈ ಸೋಲುಗಳನ್ನು ಮರೆತು ತಂಡದಲ್ಲಿ ಕೆಲ ಮಾರ‍್ಪಾಡುಗಳನ್ನು ಮಾಡಿಕೊಂಡು ಸರಣಿಯ ಎರಡನೇ ಟೆಸ್ಟ್ ಅನ್ನು ಪೋರ‍್ಟ್ ಎಲಿಜಿಬೆತ್ ನಲ್ಲಿ ಆಡಲು ಬಾರತ ಸಜ್ಜಾಗುತ್ತದೆ. ಆದರೆ ಜಾವಗಲ್ ಶ್ರೀನಾತ್ ರ 6/76 ದಾಳಿಯ ಹೊರತಾಗಿಯೂ ಆತಿತೇಯರು 362 ರನ್ ಗಳಿಸುತ್ತಾರೆ. ಮೊದಲನೇ ಇನ್ನಿಂಗ್ಸ್ ನಲ್ಲಿ ನೆಲ ಕಚ್ಚಿದ ಬಾರತ ದೊಡ್ಡ ಹಿನ್ನಡೆ ಅನುಬವಿಸಿ ಎರಡನೇ ಇನ್ನಿಂಗ್ಸ್ ನಲ್ಲಿ 394 ರನ್ ಗಳ ಗುರಿ ಪಡೆದು ಸೋಲನ್ನು ಎದುರು ನೋಡುತ್ತಿರುವಾಗ ಕಡೆಯ ದಿನ ರಾಹುಲ್ ದ್ರಾವಿಡ್ ರ (87) ಮತ್ತು ದೀಪ್ ದಾಸ್ ಗುಪ್ತಾರ (63) ತಾಳ್ಮೆಯ ಬ್ಯಾಟಿಂಗ್ ನಿಂದ ಬಾರತ ಪಂದ್ಯ ಡ್ರಾ ಮಾಡಿಕೊಂಡು ಸದ್ಯಕ್ಕೆ ಸರಣಿ ಸೋಲನ್ನು ತಪ್ಪಿಸಿಕೊಳ್ಳುತ್ತದೆ. ಅಂಗಳದ ಆಟ ಮುಗಿಯಿತು ಎಂದು ಆಟಗಾರರು ನಿಟ್ಟುಸಿರು ಬಿಡುವಶ್ಟರಲ್ಲಿ ಮ್ಯಾಚ್ ರೆಪ್ರೀ ಇಂಗ್ಲೆಂಡ್ ನ ಮೈಕ್ ಡೆನ್ನಿಸ್ ರ ಕೋಣೆಯಿಂದ ಹೊರಬಂದ ಸುದ್ದಿ ಇಡೀ ಕ್ರಿಕೆಟ್ ಜಗತ್ತನ್ನೇ ತಲ್ಲಣಗೊಳಿಸುತ್ತದೆ. ಹಿಂದೆಂದೂ ನೋಡದಂತ ಪ್ರಮಾಣದಲ್ಲಿ ಆರು ಮಂದಿ ಬಾರತೀಯ ಆಟಗಾರರ ಮೇಲೆ ದಂಡ ಹಾಗೂ ನಿಶೇದ ಹೇರಲಾಗುತ್ತದೆ. ಬಾರತದ ಪಾಳಯದಲ್ಲಿ ಅಕ್ಶರಶಹ ಸ್ಮಶಾಣ ಮೌನ ಆವರಿಸುತ್ತದೆ. ಆಟಗಾರರು ಮುಂದೇನು ಎಂದು ತಿಳಿಯದೆ ಗರ ಬಡೆದವರಂತೆ ಕುಗ್ಗಿ ಹೋಗುತ್ತಾರೆ. ವಿಕೆಟ್ ಕೀಪರ್ ದೀಪ್ ದಾಸ್ ಗುಪ್ತಾ, ಶಿವಸುಂದರ್ ದಾಸ್, ಹರ‍್ಬಜನ್ ಸಿಂಗ್ ಮತ್ತು ಸೆಹ್ವಾಗ್ ಅಂಪೈರ್ ಗಳ ಮೇಲೆ ಒತ್ತಡ ಹೇರುವಂತೆ ಅಗತ್ಯಕ್ಕಿಂತ ಹೆಚ್ಚು ಅಪೀಲ್ ಮಾಡಿ ತಮಗೆ ಬೇಕಾದಂತ ನಿರ‍್ಣಯ ಪಡೆಯುವ ಹುನ್ನಾರ ಮಾಡಿದ್ದಾರೆಂಬ ಆರೋಪ ಹೊರಿಸಿ ಪಂದ್ಯದ ರೆಪ್ರೀ ಮೈಕ್ ಡೆನ್ನಿಸ್ ಅವರು ನಾಲ್ವರಿಗೂ ಒಂದು ಟೆಸ್ಟ್ ನಿಶೇದ ಮತ್ತು ಪಂದ್ಯದ ಶುಲ್ಕದ 75% ಮೊತ್ತವನ್ನು ದಂಡದ ರೂಪದಲ್ಲಿ ತಡೆ ಹಿಡಿಯುತ್ತಿರುವಂತೆ ತಮ್ಮ ನಿರ‍್ದಾರ ಗೋಶಿಸುತ್ತಾರೆ. ಇವರೊಟ್ಟಿಗೆ ತನ್ನ ಆಟಗಾರರನ್ನು ಅಂಗಳದಲ್ಲಿ ಹತೋಟಿಯಲ್ಲಿ ಇಟ್ಟುಕೊಳ್ಳದೆ ಕ್ರಿಕೆಟ್ ಆಟಕ್ಕೆ ಚ್ಯುತಿ ತಂದಿದ್ದಾರೆ ಎಂದು ನಾಯಕ ಗಂಗೂಲಿರಿಗೂ 75% ಪಂದ್ಯ ಶುಲ್ಕದ ದಂಡ ಮತ್ತು ಒಂದು ಪಂದ್ಯದ ನಿಶೇದ ಹೇರಲಾಗುತ್ತದೆ. ಆದರೆ ಬಾರತದಲ್ಲಿ ಕ್ರಿಕೆಟ್ ದೇವರು ಎಂದೇ ಹೆಸರುವಾಸಿಯಾಗಿದ್ದ ಸಚಿನ್ ತೆಂಡೂಲ್ಕರ್ ರನ್ನು ಚೆಂಡು ಕೆಡಿಸಿದ (ball-tampering) ಆರೋಪದ ಮೇಲೆ ಒಂದು ಟೆಸ್ಟ್ ನಿಶೇದ ಹೇರಿದ್ದು ಬಾರತದ ಕ್ರಿಕೆಟ್ ಅಬಿಮಾನಿಗಳನ್ನು ಕೆರಳಿಸುತ್ತದೆ. ಅದರಲ್ಲೂ ಅಂಪೈರ್ ಗಳು ಸಚಿನ್ ರ ಮೇಲೆ ಯಾವುದೇ ಬಗೆಯ ದೂರು ಸಲ್ಲಿಸದೆ ಇದ್ದರೂ ಡೆನ್ನಿಸ್ ರೇ ಕುದ್ದು ಪಂದ್ಯದ ಕೆಲ ನಿಮಿಶಗಳ ತುಣುಕನ್ನು ತರಿಸಿಕೊಂಡು ಸಚಿನ್ ಚೆಂಡಿನ ಸೀಮ್ ಅನ್ನು ಅಂಪೈರ್ ರಿಗೆ ತಿಳಿಸದೇ ಸ್ಪಚ್ಚ ಮಾಡಿದ್ದನ್ನು ಗುರುತಿಸಿ, ಇದು ಐಸಿಸಿಯ 42.3 (b) ಕಟ್ಟಳೆಯಡಿ ಅಪರಾದ ಎಂದು ತಮ್ಮ ನಿಶೇದದ ತೀರ‍್ಮಾನವನ್ನು ಸಮರ‍್ತಿಸಿಕೊಳ್ಳುತ್ತಾರೆ.

ಇದರ ಪರಿಣಾಮವಾಗಿ ಬಾರತದಲ್ಲಿ ಜನ ಬೀದಿಗಿಳಿದು ಡೆನ್ನಿಸ್ ರ ಪ್ರತಿಕ್ರುತಿ ಸುಟ್ಟು ತಮ್ಮ ಆಕ್ರೋಶ ಹೊರಹಾಕುತ್ತಾರೆ. ಈ ಪ್ರವಾಸದಲ್ಲಿ ನೇರುಲಿಗರಾಗಿದ್ದ ಮಾಜಿ ಆಟಗಾರರಾದ ಸುನಿಲ್ ಗಾವಸ್ಕರ್, ರವಿ ಶಾಸ್ತ್ರಿ ಮತ್ತು ನವಜೋತ್ ಸಿಂಗ್ ಸಿದ್ದು ಕೂಡ ಡೆನ್ನಿಸ್ ರ ಬದಿಯೊಲವನ್ನು ಮತ್ತವರ ಕುಟಿಲತನವನ್ನು ತೀವ್ರವಾಗಿ ಟೀಕಿಸುತ್ತಾರೆ. ಪತ್ರಿಕಾಗೋಶ್ಟಿಯ ಹೊತ್ತಿನಲ್ಲಿ ಒಂದೂ ಕೇಳ್ವಿಗೆ ಬದಲು ನೀಡದ ಡೆನ್ನಿಸ್ ರ ನಡೆಯನ್ನು ಸಂಯಮ ಕಳೆದುಕೊಂಡ ರವಿಶಾಸ್ತ್ರಿ ಎಲ್ಲರ ಮುಂದೆಯೇ ವ್ಯಂಗ್ಯ ಮಾಡುತ್ತಾರೆ. ಇದೇ ವೇಳೆ ಬಿಸಿಸಿಐ ಬೇಗ ಕಾರ‍್ಯೋನ್ಮುಕವಾಗಿ ಈ ನಿಶೇದವನ್ನು ಹಿಂಪಡೆಯದಿದ್ದರೆ ತಮ್ಮ ತಂಡವನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಾಗುತ್ತದೆ ಎಂದು ಐಸಿಸಿಗೆ ಎಚ್ಚರಿಕೆ ನೀಡುತ್ತದೆ. ನಮ್ಮಆಟಗಾರರಂತೆ ದಕ್ಶಿಣ ಆಪ್ರಿಕಾದ ಕೆಲವು ಆಟಗಾರರು ಹೆಚ್ಚು ಅಪೀಲ್ ಮಾಡಿದ್ದು ಕಣ್ಣಿಗೆ ರಾಚುವಂತಿದ್ದರೂ ಅದನ್ನು ಕಡೆಗಣಿಸಿ ಬಾರತೀಯರನ್ನು ಮಾತ್ರ ಶಿಕ್ಶೆಗೆ ಗುರಿ ಪಡಿಸಿ ಡೆನ್ನಿಸ್ ತಮ್ಮಲ್ಲಿರುವ ವರ‍್ಣಬೇದದ ತಾರತಮ್ಯವನ್ನು ತೋರ‍್ಪಡಿಸಿಕೊಂಡಿದ್ದಾರೆ ಎಂದು ಬಾರತೀಯ ಮಾದ್ಯಮಗಳು ತಮ್ಮ ತಂಡದ ಬೆನ್ನಿಗೆ ನಿಲ್ಲುತ್ತವೆ. ಆತಿತೇಯರ ತಂಡದ ನಾಯಕ ಶಾನ್ ಪೊಲಾಕ್ ಲಕ್ಶ್ಮಣ್ ಎದುರು ಸುಮಾರು ಹೊತ್ತು ತೀವ್ರತೆಯಿಂದ ಎಡಬಿಡದೆ ಸಲ್ಲಿಸಿದ LBW ಅಪೀಲ್ ಅನ್ನು ಹೇಗೆ ಕಡೆಗಣಿಸಲಾಯಿತು? ಪೊಲಾಕ್ ರ ಮೇಲೆ ಏಕೆ ನಿಶೇದ ಹೇರಲಾಗಿಲ್ಲ? ಕ್ರಿಕೆಟ್ ಈಗಲೂ ಬಿಳಿಯರ ಆಟವೇ? ಎಂದೆಲ್ಲಾ ಬಾರತದ ಪತ್ರಿಕೆಗಳು ವರದಿ ಮಾಡಿ ಅನ್ಯಾಯಕ್ಕೆ ಕನ್ನಡಿ ಹಿಡಿದವು. ಬಿಸಿಸಿಐ ಅದ್ಯಕ್ಶ ಜಗಮೋಹನ್ ಡಾಲ್ಮಿಯಾ ಮೂರನೇ ಸೆಂಚೂರಿಯನ್ ಟೆಸ್ಟ್ ನಡೆಯಬೇಕೆಂದರೆ ನೇರ‍್ಮೆ, ವ್ರುತ್ತಿಪರತೆ ಇಲ್ಲದ ರೆಪ್ರೀ ಮೈಕ್ ಡೆನ್ನಿಸ್ ರನ್ನು ಬದಲಾಯಿಸಲೇಬೇಕು ಎಂಬ ಬೇಡಿಕೆಯನ್ನು ಐಸಿಸಿ ಮುಂದಿಡುತ್ತಾರೆ. ಈ ಪ್ರಹಸನದಿಂದ ಕ್ರಿಕೆಟ್ ವಲಯವೇ ಎರಡು ಬಾಗವಾಗಿ ಬೇರ‍್ಪಡುತ್ತದೆ. ಏಶಿಯಾದ ಕ್ರಿಕೆಟ್ ದೇಶಗಳು ಬಾರತದ ಪರವಾಗಿ ನಿಂತರೆ ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಐಸಿಸಿ ಪರ ಬೆಂಬಲ ಸೂಚಿಸುತ್ತದೆ.

ಕಡೆಗೂ ಮೊದಲಾಯ್ತು ಸೆಂಚೂರಿಯನ್ ಟೆಸ್ಟ್ – ಅನದಿಕ್ರುತ ಟೆಸ್ಟ್

ಹಲವಾರು ವಿವಾದಗಳು ಮತ್ತು ಊಹಾಪೋಹಗಳ ನಡುವೆಯೇ ಸರಣಿಯ ಮೂರನೇ ಹಾಗೂ ಕೊನೆ ಟೆಸ್ಟ್ ಸೆಂಚೂರಿಯನ್ ನ ಸೂಪರ್ ಸ್ಪೋರ‍್ಟ್ ಪಾರ‍್ಕ್ ನಲ್ಲಿ ಮೊದಲಾಗುತ್ತದೆ. ಐಸಿಸಿ ರೆಪ್ರೀ ಡೆನ್ನಿಸ್ ರನ್ನು ಯಾವುದೇ ಕಾರಣಕ್ಕೂ ಬದಲಾಯಿಸಲಾಗದು ಎಂದು ಕಡಾಕಂಡಿತವಾಗಿ ಹೇಳಿದ ಬಳಿಕ ಬಿಸಿಸಿಐ ಮತ್ತು ದಕ್ಶಿಣ ಆಪ್ರಿಕಾ ಕ್ರಿಕೆಟ್ ಮಂಡಳಿಗಳು ಪರಸ್ಪರ ಒಪ್ಪಂದದ ಮೇರೆಗೆ ಐಸಿಸಿಯನ್ನು ದಿಕ್ಕರಿಸಿ ಪಂದ್ಯಕ್ಕೆ ಒಮ್ಮತದಿಂದ ತಮಗೆ ಬೇಕಾದ ರೆಪ್ರೀಯನ್ನು ನೇಮಿಸಿಕೊಳ್ಳುತ್ತವೆ. ಪಂದ್ಯ ರದ್ದಾದರೆ ಆಗಲಿರುವ ಹಣಕಾಸಿನ ನಶ್ಟದ ಅರಿವಿದ್ದ ದಕ್ಶಿಣ ಆಪ್ರಿಕಾಕ್ಕೆ ಶತಾಯಗತಾಯ ಪಂದ್ಯ ನಡೆಯವುದು ಬೇಕಿತ್ತು. ಹಾಗಾಗಿ ಬಾರತದ ಬೇಡಿಕೆಗೆ ಚಕಾರವೆತ್ತದೆ ಒಪ್ಪಿಕೊಳ್ಳುತ್ತದೆ. ಪಂದ್ಯ ಮೊದಲ್ಗೊಳ್ಳುವ ಕೆಲ ಹೊತ್ತಿಗೆ ಮೊದಲು ನಾಯಕ ಗಂಗೂಲಿ ಗಾಯಾಳುವಾಗಿ ಹೊರಗುಳಿಯುತ್ತಾರೆ. ಅದರಿಂದ ಟೆಸ್ಟ್ ನಲ್ಲಿ ಬಾರತವನ್ನು ಮೊದಲಬಾರಿಗೆ ಮುನ್ನಡೆಸುವ ಹೊಣೆ ರಾಹುಲ್ ದ್ರಾವಿಡ್ ರ ಪಾಲಾಗುತ್ತದೆ. ಬರೋಡದ ಬ್ಯಾಟ್ಸ್ಮನ್ ಕಾನರ್ ವಿಲಿಯಮ್ಸ್ ತಮ್ಮ ಟೆಸ್ಟ್ ಪಾದಾರ‍್ಪಣೆ (ಟೆಸ್ಟ್ ಕ್ಯಾಪ್ 240), ಮಾಡಿದರೆ ವೆಂಕಟೇಶ್ ಪ್ರಸಾದ್ ಮತ್ತೆ ತಂಡಕ್ಕೆ ಮರಳುತ್ತಾರೆ. ಹಾಗೂ ಸೆಹ್ವಾಗ್ ಹೊರತಾಗಿ ನಿಶೇದಕ್ಕೆ ಗುರಿಯಾಗಿದ್ದ ಉಳಿದ ನಾಲ್ವರೂ ಆಡುವ ಹನ್ನೊಂದರಲ್ಲಿ ಎಡೆ ಪಡೆಯುತ್ತಾರೆ. ಪಂದ್ಯವೇನೋ ನಿಗದಿಯಾದಂತೆ ಮೊದಲ್ಗೊಂಡು ಸಾಗುತ್ತದೆ, ಆದರೆ ವಿರೋದದ ನಡುವೆಯೂ ರೆಪ್ರೀಯನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡು ಪಂದ್ಯ ಆಯೋಜಿಸಿದ ಎರಡೂ ದೇಶದ ಕ್ರಿಕೆಟ್ ಮಂಡಳಿಗಳನ್ನು ತರಾಟೆಗೆ ತಗೆದುಕೊಂಡ ಐಸಿಸಿ, ಈ ಟೆಸ್ಟ್ ಅನದಿಕ್ರುತ – ಇದಕ್ಕೆ ಟೆಸ್ಟ್ ಮಾನ್ಯತೆ ಇರುವುದಿಲ್ಲ, ಈ ಪಂದ್ಯದ ಪಲಿತಾಂಶ, ಆಟಗಾರರ ರನ್ ಮತ್ತು ವಿಕೆಟ್ ಗಳು ಟೆಸ್ಟ್ ದಾಕಲೆ ಸೇರುವುದಿಲ್ಲ ಎಂದು ಮೊದಲನೆ ದಿನವೇ ಗೋಶಿಸುತ್ತದೆ. ಇದರಿಂದ ಈ ಟೆಸ್ಟ್ ಆರಂಬದಲ್ಲೇ ಕಳೆ ಕಳೆದುಕೊಂಡರೂ ಸಪ್ಪೆಯಾಗಿಯೇ ಐದು ದಿನ ಸಾಗಿ ಬಾರತ ಇನ್ನಿಂಗ್ಸ್ ಮತ್ತು 73 ರನ್ ಗಳ ಹೀನಾಯ ಸೋಲು ಅನುಬವಿಸುತ್ತದೆ. ಕಾನರ್ ವಿಲಿಯಮ್ಸ್ ಎರಡನೇ ಇನ್ನಿಂಗ್ಸ್ ನಲ್ಲಿ ಸೊಗಸಾದ 42 ರನ್ ಗಳಿಸುತ್ತಾರೆ. ಆದರೆ ದುರಂತವೆಂದರೆ ಬಾರತದ ಪರ 240ನೇ ಟೆಸ್ಟ್ ಆಟಗಾರನಾಗಿ ಕಣಕ್ಕಿಳಿದ ವಿಲಿಯಮ್ಸ್ ರ ಹೆಸರು ಇತಿಹಾಸದಲ್ಲಿ ದಾಕಲೆಯಾಗಿಲ್ಲ. ಆ ಬಳಿಕ ಗಾಯದ ಮೇಲೆ ಬರೆ ಎಳೆದಂತೆ ಮುಂದೆಂದೂ ಅವರಿಗೆ ಬಾರತದ ಪರ ಅದಿಕ್ರುತ ಟೆಸ್ಟ್ ಆಡಲು ಒಂದೂ ಅವಕಾಶ ಸಿಗುವುದಿಲ್ಲ. ಹಾಗಾಗಿ ಈಗಲೂ ಅವರನ್ನು ಮೊದಲ ದರ‍್ಜೆ ಕ್ರಿಕೆಟರ್ ಎಂದಶ್ಟೇ ಗುರುತಿಸಲಾಗುತ್ತದೆ. ದಶಕಗಳ ಕಾಲ ದೇಸೀ ಕ್ರಿಕೆಟ್ ನಲ್ಲಿ ರನ್ ಹೊಳೆ ಹರಿಸಿ ಅಂತರಾಶ್ಟ್ರೀಯ ಮಟ್ಟಕ್ಕೆ ಏರಿದರೂ ಅವರ ಬಯಕೆ ಈಡೇರುವುದಿಲ್ಲ. ಹಾಗೂ ವೆಂಕಟೇಶ್ ಪ್ರಸಾದ್ ರಿಗೂ ಇದು ಬಾರತದ ಪರ ಅವರ ಕಟ್ಟಕಡೆಯ ಪಂದ್ಯವಾಗುತ್ತದೆ. ಮತ್ತು ರಾಹುಲ್ ದ್ರಾವಿಡ್ ಬಾರತದ ನಾಯಕನಾಗಿ ಟೆಸ್ಟ್ ತಂಡವನ್ನು ಅದಿಕ್ರುತವಾಗಿ ಮುನ್ನಡೆಸಲು ಇನ್ನೆರಡು ವರುಶ ಕಾಯಬೇಕಾಗುತ್ತದೆ. ಈ ಪಂದ್ಯದ ಬಳಿಕವೂ ಐಸಿಸಿ-ಬಿಸಿಸಿಐ ನಡುವೆ ಜಟಾಪಟಿ ಒಂದು ವಾರ ಸಾಗಿ ಕಡೆಗೆ ಐಸಿಸಿ, ಬಿಸಿಸಿಐನ ಪ್ರಬಾವದ ಪರಿಣಾಮವಾಗಿ ಮಂಡಿಯೂರುತ್ತದೆ. ಆದರೆ ಬಾರತದ ಐದು ಆಟಗಾರರ ನಿಶೇದವನ್ನು ಹಿಂಪಡೆದ ಐಸಿಸಿ ಸೆಹ್ವಾಗ್ ಮಾತ್ರ ಒಂದು ಟೆಸ್ಟ್ ಪಂದ್ಯದಿಂದ ತಪ್ಪದೇ ಹೊರಕೂರಲೇಬೇಕು ಎಂದು ತಾಕೀತು ಮಾಡುತ್ತದೆ. ಸೆಹ್ವಾಗ್ ಅಂಪೈರ್ ರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು, ಹಾಗಾಗಿ ಅದನ್ನು ಹಗುರವಾಗಿ ಪರಿಗಣಿಸಲಾಗದು, ನಿಶೇದವನ್ನು ತಡೆಹಿಡಿಯಲಾಗದು ಎಂದು ಐಸಿಸಿ ಪಟ್ಟು ಬಿಗಿಮಾಡುತ್ತದೆ. ವಿದಿ ಇಲ್ಲದೆ ಬಿಸಿಸಿಐ ಇಂಗ್ಲೆಂಡ್ ಎದುರು ಮೊಹಾಲಿಯಲ್ಲಿ 2001 ರ ಡಿಸೆಂಬರ್ ನಲ್ಲಿ ನಡೆದ ಟೆಸ್ಟ್ ತಂಡದಿಂದ ಸೆಹ್ವಾಗ್ ರನ್ನು ಕೈಬಿಟ್ಟು ಡೆನ್ನಿಸ್-ಮೆನ್ನಿಸ್ ವಿವಾದ ಎಂದೇ ಜಗಜ್ಜಾಹೀರಾಗಿದ್ದ ಈ ದೊಡ್ಡ ವಿವಾದಕ್ಕೆ ತೆರೆ ಎಳೆಯುತ್ತದೆ. ಕೆಲ ಕಾಲದ ಬಳಿಕ ರೆಪ್ರೀ ಡೆನ್ನಿಸ್ ಕೂಡ ಕ್ರಿಕೆಟ್ ಕ್ಶೇತ್ರದಿಂದ ದೂರ ಸರಿಯುತ್ತಾರೆ.

ಈ ಸೆಂಚೂರಿಯನ್ ಟೆಸ್ಟ್ ನ ದಾಕಲೆ ಇತಿಹಾಸದ ಪುಟ ಸೇರದಿದ್ದರೂ, ಈ ಕೆಲದಿನಗಳ ಪ್ರಹಸನ ಒಬ್ಬ ರೆಪ್ರೀಯ ಉದ್ದಟತನದಿಂದ ಆಗಬಹುದಾದ ಅನಾಹುತ ಎಂತಹುದು ಎಂಬುದಕ್ಕೆ ಎತ್ತುಗೆಯಾಗಿ ಕ್ರಿಕೆಟ್ ಇತಿಹಾಸದ ಪುಟ ಸೇರಿದೆ. ಕ್ರಿಕೆಟ್ ಮೊದಲ್ಗೊಂಡಾಗಿನಿಂದಲೂ ತಾವು ಮಾಡಿದ್ದೆ ಕಾನೂನು, ಆಡಿದ್ದೇ ಆಟ ಎಂದು ಮೆರೆಯುತ್ತಿದ್ದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳು, ಮತ್ತೆಂದೂ ತಾರತಮ್ಯ ಮಾಡದಂತೆ, ಬಾರತ ಈ ವಿವಾದದ ವೇಳೆ ಹೋರಾಡಿ ಚುರುಕು ಮುಟ್ಟಿಸಿದ್ದು ಸುಳ್ಳಲ್ಲ.

(ಚಿತ್ರ ಸೆಲೆ: BBC news)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications