ಆದಯ್ಯನ ವಚನಗಳ ಓದು

ಸಿ.ಪಿ.ನಾಗರಾಜ.

ವಚನಗಳು, Vachanas

ಚೌಷಷ್ಠಿ ವಿದ್ಯೆಗಳ ಕಲಿತಡೇನೊ
ಅಷ್ಟಾಷಷ್ಠಿ ಕ್ಷೇತ್ರಗಳ ಮೆಟ್ಟಿದಡೇನೊ
ಬಿಟ್ಟಡೇನೊ ಕಟ್ಟಿದಡೇನೊ
ಅರಿವನಾಚಾರ ಕರಿಗೊಳ್ಳದನ್ನಕ್ಕ
ಘನಲಿಂಗದ ಬೆಳಗು
ಸ್ವಯವಾದ ಶರಣಂಗಲ್ಲದೆ
ಸೌರಾಷ್ಟ್ರ ಸೋಮೇಶ್ವರಲಿಂಗ
ಸುಖವೆಡೆಗೊಳ್ಳದು.

ವ್ಯಕ್ತಿಯು ಕಲಿಯುವ ವಿದ್ಯೆ ಮತ್ತು ಮಾಡುವ ದೇವರ ಪೂಜೆಗಿಂತ ಒಳ್ಳೆಯ ನಡೆನುಡಿಗಳಿಂದ ಕೂಡಿದ ಸಾಮಾಜಿಕ ವ್ಯಕ್ತಿತ್ವ ದೊಡ್ಡದು ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

‘ಸಾಮಾಜಿಕ ವ್ಯಕ್ತಿತ್ವ’ ಎಂದರೆ “ವ್ಯಕ್ತಿಯು ಆಡುವ ನುಡಿ ಮತ್ತು ಮಾಡುವ ಕೆಲಸದಿಂದ ಅವನಿಗೆ, ಅವನ ಕುಟುಂಬಕ್ಕೆ ಒಳಿತಾಗುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವ ಗುಣ.”

ಚೌಷಷ್ಠಿ=ಅರವತ್ನಾಲ್ಕು; ವಿದ್ಯೆ=ತಿಳುವಳಿಕೆ/ಅರಿವು/ಓದು; ಚೌಷಷ್ಠಿ ವಿದ್ಯೆ=ಅರವತ್ನಾಲ್ಕು ಬಗೆಯ ವಿದ್ಯೆ/ಬಹುಬಗೆಯ ವಿದ್ಯೆ; ಕಲಿತಡೆ+ಏನೊ; ಕಲಿ=ಅರಿತುಕೊಳ್ಳುವುದು/ತಿಳಿದುಕೊಳ್ಳುವದು; ಕಲಿತಡೆ=ಕಲಿತರೆ; ಏನು=ಯಾವುದು;

ಚೌಷಷ್ಠಿ ವಿದ್ಯೆಗಳ ಕಲಿತಡೇನೊ=ಅರವತ್ನಾಲ್ಕು ಬಗೆಯ ವಿದ್ಯೆಗಳನ್ನು ಕಲಿಯುವುದರಿಂದ ಬಂದ ಪ್ರಯೋಜನವೇನು; ಅಂದರೆ ವ್ಯಕ್ತಿಯು ಕಲಿತಿರುವ ಯಾವುದೇ ಬಗೆಯ ವಿದ್ಯೆಯು ಅವನನ್ನು ಒಳಗೊಂಡಂತೆ ಎಲ್ಲರಿಗೂ ಒಳಿತನ್ನು ಮಾಡುವಂತಿರಬೇಕು. ಇಲ್ಲದಿದ್ದರೆ ಅಂತಹ ವಿದ್ಯೆಯಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ;

ಅಷ್ಟಾಷಷ್ಠಿ=ಅರವತ್ತೆಂಟು; ಕ್ಷೇತ್ರಂಗಳ=ಕ್ಷೇತ್ರಗಳನ್ನು; ಕ್ಷೇತ್ರ=ಪ್ರದೇಶ/ಪ್ರಾಂತ್ಯ/ದೇಗುಲಗಳು ಇರುವ ಊರು; ಅಷ್ಟಾಷಷ್ಠಿ ಕ್ಷೇತ್ರ=ನಾಡಿನಲ್ಲಿ ಹೆಸರಾಂತ ದೇಗುಲಗಳಿರುವ ಅರವತ್ತೆಂಟು ಪ್ರದೇಶಗಳು/ಹೆಚ್ಚಿನ ಸಂಕೆಯ ಊರುಗಳು; ಮೆಟ್ಟದಡೆ+ಏನೊ; ಮೆಟ್ಟು=ನಡೆ/ಹೆಜ್ಜೆ ಇಡು; ಮೆಟ್ಟಿದಡೆ=ಮೆಟ್ಟಿದರೆ; ಮೆಟ್ಟದಡೇನೊ=ಹೋಗಿಬರುವುದರಿಂದ ಉಂಟಾಗುವ ಪ್ರಯೋಜನವೇನು;

ಅಷ್ಟಾಷಷ್ಠಿ ಕ್ಷೇತ್ರಗಳ ಮೆಟ್ಟಿದಡೇನೊ=ಅರವತ್ತೆಂಟು ಊರುಗಳ ದೇಗುಲಗಳಲ್ಲಿರುವ ದೇವರ ವಿಗ್ರಹವನ್ನು ಕಂಡು ಪೂಜೆ ಮಾಡುವುದರಿಂದ ಬರುವ ಪ್ರಯೋಜನವೇನು; ಅಂದರೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುವ ವ್ಯಕ್ತಿಯು ಮಾಡುವ ಪೂಜೆಯಿಂದ ಯಾವುದೇ ಪ್ರಯೋಜನವಿಲ್ಲ;

ಬಿಟ್ಟಡೆ+ಏನೊ; ಬಿಡು=ತ್ಯಜಿಸು/ತೊರೆ; ಬಿಟ್ಟಡೆ=ಬಿಟ್ಟರೆ;

ಬಿಟ್ಟಡೇನೊ=ತಿನ್ನುವ ಆಹಾರದ ವಸ್ತುಗಳಲ್ಲಿ ಕೆಲವನ್ನು ಬಿಡುವುದರಿಂದ ಇಲ್ಲವೇ ಸಂಪತ್ತಿನ ಮೇಲಣ ಆಸೆಯನ್ನು ತೊರೆಯುವುದರಿಂದ ಇಲ್ಲವೇ ಹೆಣ್ಣಿನೊಡನೆ ಕಾಮದ ನಂಟನ್ನು ಪಡೆಯದೆ ದೂರವಿರುವುದರಿಂದ ಪ್ರಯೋಜನವೇನು; ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡದೆ, ಇಂತಹ ವಿರಕ್ತಿಯಿಂದ ಕೂಡಿರುವ ವ್ಯಕ್ತಿಯು ಅಂತರಂಗದ ಬದುಕಿನಲ್ಲಿ ತನ್ನ ಬಯಕೆಗಳನ್ನು ಈಡೇರಿಸಿಕೊಳ್ಳುತ್ತ, ಬಹಿರಂಗದ ಬದುಕಿನಲ್ಲಿ ತೋರಿಕೆಯ ನಡೆನುಡಿಯಿಂದ ಎಲ್ಲರನ್ನೂ ವಂಚಿಸುತ್ತಿರುತ್ತಾನೆ;

ಕಟ್ಟಿದಡೆ+ಏನೊ; ಕಟ್ಟು=ನಿರ‍್ಮಿಸು/ರಚಿಸು/ರೂಪಿಸು; ಕಟ್ಟಿದಡೆ=ಕಟ್ಟಿದರೆ; ಕಟ್ಟಿದಡೇನು=ದೇಗುಲಗಳನ್ನು ಕಟ್ಟಿಸುವುದರಿಂದ ಉಂಟಾಗುವ ಪ್ರಯೋಜನವೇನು; ಜನರ ಬದುಕಿಗೆ ಅಗತ್ಯವಾದ ಅನ್ನ, ಬಟ್ಟೆ, ವಸತಿ, ವಿದ್ಯೆ,ಉದ್ಯೋಗ,ಆರೋಗ್ಯಕ್ಕೆ ವೆಚ್ಚವನ್ನು ಮಾಡಬೇಕಾದ ಸಂಪತ್ತನ್ನು ಗುಡಿಗೋಪುರಗಳನ್ನು ಕಟ್ಟಿಸುವುದಕ್ಕೆ ವೆಚ್ಚ ಮಾಡುವುದರಿಂದ ಜನಸಮುದಾಯಕ್ಕೆ ಯಾವುದೇ ಪ್ರಯೋಜನವಿಲ್ಲ; ದೇಗುಲಗಳು ಹೆಚ್ಚು ಹೆಚ್ಚು ನಿರ‍್ಮಾಣಗೊಂಡ ನಾಡಿನಲ್ಲಿ ಮೇಲು-ಕೀಳಿನ ಜಾತಿ ವ್ಯವಸ್ತೆಯು ಇನ್ನೂ ಹೆಚ್ಚಿನ ಮಟ್ಟದಲ್ಲಿ ಆಚರಣೆಗೆ ಬರುತ್ತದೆ. ದೇವರ ಹೆಸರಿನಲ್ಲಿ ಮೇಲು ಜಾತಿ ಮತ್ತು ಮೇಲು ವರ‍್ಗದವರು ಕೆಳಜಾತಿಗಳ ದುಡಿಯುವ ವರ‍್ಗದ ಜನರನ್ನು ಸುಲಿಗೆಮಾಡಲು ನೆರವಾಗುತ್ತದೆ. ಏಕೆಂದರೆ ದುಡಿಯುವ ವರ‍್ಗದ ಜನರು ತಮ್ಮ ಹಸಿವು, ಬಡತನ ಮತ್ತು ಅಪಮಾನದ ಬದುಕಿಗೆ “ ದೇವರು ತಮ್ಮ ಹಣೆಯಲ್ಲಿ ಬರೆದಿರುವ ಬರಹವೇ ಕಾರಣ ” ಎಂದು ನಂಬಿ, ಉಳ್ಳವರು ತಮಗೆ ಮಾಡುತ್ತಿರುವ ವಂಚನೆಯನ್ನು ಅರಿಯದವರಾಗುತ್ತಾರೆ;

ಅರಿವಿನ+ಆಚಾರ; ಅರಿವು=ತಿಳುವಳಿಕೆ; ಆಚಾರ=ನಡೆನುಡಿ; ಅರಿವಿನ ಆಚಾರ=ಜೀವನದಲ್ಲಿ “ ಯಾವುದು ಒಳ್ಳೆಯದು-ಯಾವುದು ಕೆಟ್ಟದ್ದು; ಯಾವುದು ಸರಿ-ಯಾವುದು ತಪ್ಪು ” ಎಂಬುದನ್ನು ತಿಳಿದುಕೊಂಡು, ಕೆಟ್ಟದ್ದನ್ನು ತ್ಯಜಿಸಿ ಒಳ್ಳೆಯ ನಡೆನುಡಿಗಳಿಂದ ಬಾಳುವುದು; ಕರಿಗೊಳ್ಳು+ಅನ್ನಕ್ಕ; ಕರಿಗೊಳ್ಳು=ನೆಲಸು; ಅನ್ನಕ್ಕ=ತನಕ/ವರೆಗೆ; ಕರಿಗೊಳ್ಳದನ್ನಕ್ಕ=ನೆಲಸುವವರೆಗೆ;

ಅರಿವಿನಾಚಾರ ಕರಿಗೊಳ್ಳದನ್ನಕ್ಕ=ವ್ಯಕ್ತಿಯು ತಾನು ಪಡೆದ ಅರಿವಿನಿಂದ ಒಳ್ಳೆಯ ನಡೆನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳುವವರೆಗೆ, ಅವನು ಯಾವ ವಿದ್ಯೆಗಳನ್ನು ಕಲಿತಿದ್ದರೂ ಇಲ್ಲವೇ ಅವನು ಯಾವ ದೇಗುಲಗಳನ್ನು ಹೊಕ್ಕಿದ್ದರೂ , ಅದರಿಂದ ಯಾವುದೇ ಪ್ರಯೋಜನವಿಲ್ಲ;

ಘನ=ದೊಡ್ಡ; ಲಿಂಗ=ಶಿವ; ಬೆಳಗು=ಕಾಂತಿ/ಪ್ರಕಾಶ; ಘನಲಿಂಗದ ಬೆಳಗು=ಇದೊಂದು ನುಡಿಗಟ್ಟಾಗಿ ಬಳಕೆಗೊಂಡಿದೆ. ಒಳ್ಳೆಯ ನಡೆನುಡಿಗಳಿಂದ ಕೂಡಿದ ಬದುಕಿಗೆ ಶಿವಲಿಂಗವನ್ನೇ ಸಂಕೇತವನ್ನಾಗಿ ಮಾಡಿಕೊಳ್ಳಲಾಗಿದೆ;

ಸ್ವಯ+ಆದ; ಸ್ವಯ=ಹತೋಟಿ/ತನ್ನತನ; ಸ್ವಯವಾದ=ತನ್ನದನ್ನಾಗಿಸಿಕೊಂಡಿರುವ; ಶರಣಂಗೆ+ಅಲ್ಲದೆ; ಶರಣಂಗೆ=ಶರಣನಿಗೆ; ಅಲ್ಲದೆ=ಹೊರತು ಪಡಿಸಿ; ಶರಣ=ಶಿವನನ್ನು ಒಲಿದವನು;

ಘನಲಿಂಗದ ಬೆಳಗು ಸ್ವಯವಾದ ಶರಣ=ತನ್ನ ಮಯ್ ಮನವನ್ನು ಹತೋಟಿಯಲ್ಲಿಟ್ಟುಕೊಂಡು, ಒಳ್ಳೆಯ ನಡೆನುಡಿಯನ್ನೇ ಶಿವನ ಸಂಕೇತವನ್ನಾಗಿ ಮಾಡಿಕೊಂಡು ಬಾಳುತ್ತಿರುವ ಶರಣ;

ಸೌರಾಷ್ಟ್ರ=ಒಂದು ದೇಶದ ಹೆಸರು. ಈಗಿನ ಗುಜರಾತ್ ರಾಜ್ಯದ ಸೂರತ್ ಎಂಬ ಪ್ರಾಂತ್ಯ; ಸೋಮೇಶ್ವರ=ಶಿವನ ಹೆಸರು; ಸೌರಾಷ್ಟ್ರ ಸೋಮೇಶ್ವರ=ಆದಯ್ಯನವರ ವಚನಗಳ ಅಂಕಿತನಾಮ; ಸುಖ+ಎಡೆಗೊಳ್ಳದು; ಸುಖ=ನಲಿವು/ನೆಮ್ಮದಿ; ಎಡೆಗೊಳ್=ಪಡೆ/ಹೊಂದು; ಎಡೆಗೊಳ್ಳದು=ದೊರಕುವುದಿಲ್ಲ;

ಸೋಮೇಶ್ವರಲಿಂಗಸುಖ=ಒಳ್ಳೆಯ ನಡೆನುಡಿಗಳಿಂದ ದೊರೆಯುವ ನೆಮ್ಮದಿ/ನಲಿವು/ಆನಂದ; ಸುಖವೆಡೆಗೊಳ್ಳದು=ನೆಮ್ಮದಿಯು ದೊರೆಯುವುದಿಲ್ಲ;

ಘನಲಿಂಗದ ಬೆಳಗು ಸ್ವಯವಾದ ಶರಣಂಗಲ್ಲದೆ ಸೌರಾಷ್ಟ್ರ ಸೋಮೇಶ್ವರಲಿಂಗ ಸುಖವೆಡೆಗೊಳ್ಳದು=ಯಾವ ವ್ಯಕ್ತಿಯು ತನ್ನ ಮಯ್ ಮನವನ್ನು ಹತೋಟಿಯಲ್ಲಿಟ್ಟುಕೊಂಡು ಒಳ್ಳೆಯ ನಡೆನುಡಿಗಳನ್ನೇ ದೇವರೆಂದು ಅರಿತುಕೊಂಡು ಬಾಳುತ್ತಾನೆಯೋ ಅಂತಹ ವ್ಯಕ್ತಿಗೆ ಮಾತ್ರ ಜೀವನದಲ್ಲಿ ಒಲವು,ನಲಿವು ಮತ್ತು ನೆಮ್ಮದಿ ದೊರೆಯುತ್ತದೆಯೇ ಹೊರತು, ಕೆಟ್ಟ ನಡೆನುಡಿಯುಳ್ಳ ವ್ಯಕ್ತಿಗಳಿಗೆ ಯಾವುದೇ ವಿದ್ಯೆಯಿಂದಾಗಲಿ ಇಲ್ಲವೇ ಯಾವುದೇ ದೇವರ ಪೂಜೆಯಿಂದಾಗಲಿ ಜೀವನದಲ್ಲಿ ನೆಮ್ಮದಿ ದೊರೆಯುವುದಿಲ್ಲ ಎಂಬ ನಿಲುವನ್ನು ಹನ್ನೆರಡನೆಯ ಶತಮಾನದ ಶಿವಶರಣಶರಣೆಯರು ಹೊಂದಿದ್ದರು.

( ಚಿತ್ರ ಸೆಲೆ: sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: