ಕವಿತೆ : ಬಾ ತಾಯೇ ವರಲಕುಮಿ

ಶ್ಯಾಮಲಶ್ರೀ.ಕೆ.ಎಸ್.

ಬಾ ತಾಯೇ ವರಲಕುಮಿ
ಬಕುತರ ಪಾಲಿನ ಬಾಗ್ಯದಾತೆ
ವೈಕುಂಟ ವಾಸಿನಿ ನೀ ಬುವಿಗಿಳಿದು
ಬಕ್ತ ಕೋಟಿಯ ಹರಸು ಮಾತೆ

ಶ್ರಾವಣ ಮಾಸದ ಶುಕ್ಲಪಕ್ಶದಿ
ಸುಮಂಗಲೆಯರೆಲ್ಲಾ ನಿನ್ನನ್ನೇ ನೆನೆದಿಹರು
ಶುಬ ಶುಕ್ರವಾರದ ದಿನದಿ
ನಿನ್ನ ಆರಾದನೆಗೆ ಅಣಿ ಮಾಡುವರು

ಕಳಸದ ಪ್ರತಿರೂಪವನಿಟ್ಟು
ನಿನಗೆ ಮಂಗಳ ದ್ರವ್ಯಗಳ ಅರ‍್ಪಿಸುವರು
ಹೆಂಗಳೆಯರೆಲ್ಲಾ ಕಂಕಣ ಕಟ್ಟಿ
ಸಂಕಲ್ಪವ ಮಾಡಿ ಬಕ್ತಿಸುದೆಯ ಹರಿಸುವರು

ಬಣ್ಣ ಬಣ್ಣದ ಪುಶ್ಪಗಳ ನಿನಗೇರಿಸಿ
ವಿದ ವಿದ ಪಲಗಳ ಜೋಡಿಸುವರು
ಬಗೆ ಬಗೆ ಬಕ್ಶ್ಯಗಳ ನೈವೇದ್ಯವ ಸಮರ‍್ಪಿಸಿ
ತುಪ್ಪದಾರತಿಯ ಬೆಳಗುವರು

ಅಶ್ಟ ರೂಪೇ ಮಹಾಮಾಯೇ
ಶಕ್ತಿ ಸ್ವರೂಪೇ ಜ್ನಾನವಿದಾತೆ
ಜಯ ಅಬಯಂಕರಿ ಕಮಲಪ್ರಿಯೆ
ನಾರಾಯಣ ಸತಿ ಸರ‍್ವಲೋಕ ಪೂಜಿತೆ

ಹೇ ಜಗದಾಂಬೆ ಬಕ್ತರ ಮೊರೆಯನಾಲಿಸಿ
ಇಶ್ಟಾರ‍್ತಗಳ ಪೂರೈಸುವೆಯಾ
ಅಜ್ನಾನದ ಅಂದಕಾರವ ಅಳಿಸಿ
ಜ್ನಾನದ ಹಣತೆಯ ಹಚ್ಚುವೆಯಾ

(ಚಿತ್ರ ಸೆಲೆ: freepngimg.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks