‘ರಾಮದಾನ್ಯ ಪ್ರಸಂಗ’ದ ಓದು : ನೋಟ-3

– ಸಿ.ಪಿ.ನಾಗರಾಜ.

‘ರಾಮದಾನ್ಯ ಪ್ರಸಂಗ’ದ ಓದು : ನೋಟ – 3

ಸಭೆಯಲಿ ನುಡಿಯ ಕೇಳುತ, ನರೆದಲೆಗ ಕನಲಿ ಕಂಗಳು ಕಿಡಿಮಸಗಿ ಖತಿಗೊಂಡು ಸಿಡಿಲ ಘರ್ಜನೆಯಂತೆ ನುಡಿದನು. ವ್ರಿಹಿಯ ಜರೆದನು…

ನರೆದಲೆಗ: ನುಡಿಗೆ ಹೇಸದ ಭಂಡ… ನಿನ್ನೊಳು ಮಾರುತ್ತರವ ಕೊಡುವರೇ.. ಕಡುಜಡನಲಾ… ನಿನ್ನೊಡನೆ ಮಾತೇಕೆ…

ಸತ್ಯಹೀನನು… ಬಡವರನು ಕಣ್ಣೆತ್ತಿ ನೋಡೆ… ಧನಾಢ್ಯರನು ಬೆಂಬತ್ತಿ ನಡೆವ ಅಪೇಕ್ಷೆ ನಿನ್ನದು…

ಅದನು ಹೇಳಲೇನು… ಹೆತ್ತ ಬಾಣಂತಿಯರು ರೋಗಿಗೆ ಪತ್ಯ ನೀನಹೆ… ಹೆಣದ ಬಾಯಿಗೆ ತುತ್ತು ನೀನಹೆ…

ನಿನ್ನ ಜನ್ಮ ನಿರರ್ಥಕರ… ಸತ್ತದಿನದಾರಭ್ಯ ಮನುಜರು ಮತ್ತೆ ಕರ್ಮವ ಹೊತ್ತು, ಪಿಂಡವನಿತ್ತು, ತಪ್ಪದೆ ಮತ್ತೆ ವಾಯಸಕುಲವ ಕರೆಕರೆದು ತುತ್ತನಿಡುವರು. ಎಳ್ಳು ದರ್ಭೆಗೆ ತೆತ್ತಿಗನು ನೀನಾದೆ… ಕೀರ್ತಿಯ ಹೊತ್ತುಕೊಂಡೆ…

ದುರಾತ್ಮ , ನಿನ್ನೊಳು ಮಾತು ಅದೇಕೆ… ಮಳೆ ತೆಗೆದು ಬೆಳೆ ಅಡಗಿ ಕ್ಷಾಮದ ವಿಲಯಕಾಲದೊಳು ಅನ್ನವಿಲ್ಲದೆ ಅಳಿವ ಪ್ರಾಣಿಗಳ ಜಗವರಿಯೆ ಆದರಿಸಿ ಸಲಹುವೆನು…

ಎಲವೊ, ನೀನು ಎಲ್ಲಿಹೆಯೊ… ನಿನ್ನಯ ಬಳಗವದು ತಾನು ಎಲ್ಲಿಹುದು… ಈ ಹಲವು ಹುಲು ಧಾನ್ಯಗಳು ಎನಗೆ ಸರಿದೊರೆಯೆ…

ಕೇಳು, ಬಲ್ಲಿದರು ಬರೆ, ಬಡವರಲಿ ನಿನ್ನಲ್ಲಿಯುಂಟು ಉಪೇಕ್ಷೆ… ನಮ್ಮಲಿ ಸಲ್ಲದು. ಈ ಪರಿ ಪಕ್ಷಪಾತವದಿಲ್ಲ…

ಭಾವಿಸಲು ಬಲ್ಲಿದರು ಬಡವರುಗಳೆನ್ನದೆ ಎಲ್ಲರನು ರಕ್ಷಿಸುವೆ… ನಿನ್ನಂತೆ ತಾ ನಿರ್ದಯನಲ್ಲ …

ಎಲೆ ಕುಟಿಲಾತ್ಮ , ಹೋಗು… ನಾನೆಲೈ, ಲೋಕದಲಿ ನಿರ್ದಯನು… ಬಳಿಕೇನಲೈ, ಸದ್ಧರ್ಮದಲಿ ಮಧುಪಾನವಾದೆಯಲಾ…

ದುರಾತ್ಮಕ, ನಿನ್ನ ಸೇವಿಸಿದ ದಾನವರು ಮಾನವ ಕಿರಾತರು ಜ್ಞಾನವಳಿದು ವಿಕಾರದಲಿ ಮತಿಹೀನರಾದರು…

ನಿನ್ನ ಗುಣವೇನು… ಆಡಬಹುದೆ ಅತಿಶಯವ…

ನೀ ಕೊಂಡಾಡಿ ಕೊಂಬರೆ… ಸಾಕು ಸಜ್ಜನರಾಡಿದರೆ, ಪತಿಕರಿಸೆ ಲಜ್ಜೆಗೆ ಸಿರವ ಬಾಗುವರು…

ನೋಡಿರೈ ಸಭೆಯವರು. ದುರ್ಮತಿಗೇಡಿ ಇವನು ಆಡುವುದ ನಾವು ಇನ್ನಾಡಿದರೆ ಹುರುಳಿಲ್ಲ ಶಿವಶಿವ…

ಸತ್ತವರ ಪ್ರತಿಬಿಂಬರೂಪನು ಬಿತ್ತರಿಸಿ ಪಿತೃನಾಮಗಳ ನಿನಗಿತ್ತು, ಮೂವರ ಪೆಸರಿನಲಿ ಕರೆಕರೆದು ದರ್ಭೆಯಲಿ ನೆತ್ತಿಯನು ಬಡಿಬಡಿದು, ಕಡೆಯಲಿ ಪಶುಗಳಿಗೆ ತುತ್ತನಿಡುವರು…

ನೀನು ಎತ್ತಿದೆಯೆಲಾ. ತನುವ ಸುಡಬೇಕು.

(ಎಂದ ನರೆದಲೆಗ. ಈಗ ಅಲ್ಲಿದ್ದ ಮುನಿಜನರನ್ನು ಕುರಿತು)

ಹಿರಿ ಕಿರಿದ ನುಡಿಯದೆ ಏನಿಹಿರಿ… ಮೌನದೀಕ್ಷಿತರಾದಿರಲ. ಕಂಡು ಏನು ಮುರಿದಾಡುವಿರಿ… ನಿಮಗೆ ಅಸಾಧ್ಯವೊ ಸಾಧ್ಯವೋ …

ಈ ನಪುಂಸಕನಲಿ ಏನು ಕಾರಣ ನಿರಂತರ ವಾದವಿದು. ಪೇಳಿ, ನಮಗೇನು ಬುದ್ಧಿಯನು ಅರುಹುವಿರಿ.

(ಎಂದ ನರೆದಲೆಗ. ಇತ್ತಂಡಕ್ಕೆ ಮತ್ಸರ ಮಸೆದುದು. ಪಿಸುಣ ಬಲರು, ಅತಿ ನಿಷ್ಠುರರು ವಾದಿಸಲು ನೃಪತಿ ಕಂಡನು. ನೋಡಿ ನೃಪತಿ ಮನದಲಿ ನಸುನಗುತ…)

ರಾಮ: (ತನ್ನ ಮನದಲ್ಲಿ) ಹಿಸುಣರು. ಇವದಿರ ಮತ್ಸರವ ಮಾಣಿಸುವ ಹದನೇನು.

(ಎನುತ ಯೋಚಿಸಿದ. ಅಸುರ ಮುನಿಪರ ನೋಡೆ ಗೌತಮ ಮುನಿಪನು ಇಂತು ಎಂದ.)

ಗೌತಮ: ನೆರೆದಿಹ ಅರಸುಗಳು, ಭೂಮೀ ಸುರರು , ದಾನವರು , ವಾನರರು ನಾವೆಲ್ಲ ನಮಗೆ ಈ ನ್ಯಾಯವನು ಪರಿಹರಸಲು ಅಳವಲ್ಲ. ಅಯೋಧ್ಯೆಗೆ ಹರಿಹರವಿರಿಂಚಾದ್ಯರನು ಕರೆಸುವೆವು. ಅವರ ಗುಣವ ನಯದೊಳು ಆಧರಿಸಿ ಪೇಳ್ವರು.

(ಎಂದನು. ಆಗ ರಾಮ ನಸುನಗುತ.)

ರಾಮ: ಕೇಳ್, ಪರಮ ಧಾನ್ಯದೊಳು ಇಬ್ಬರೇ ಇವರು ಆರು ತಿಂಗಳು ಸೆರೆಯೊಳಗೆ ಇರಲಿ. ಹಿರಿದು ಕಿರಿದು ಎಂಬ ಇವರ ಪೌರುಷವ ಅರಿಯಬಹುದು. ಇನ್ನು ಪುರಕೆ ಗಮನಿಸಿ. ನಾವು ನಿಮ್ಮನು ಕರೆಸುವೆವು.

(ಎನುತ ಆ ವಿಭೀಷಣಗೆ ಅಯೋಧ್ಯಾಪುರಿಗೆ ಪಯಣವ ಮಾಡಹೇಳಿದನು.)

ನರೆದಲೆಗ: ಸೆರೆಗೆ ನಮ್ಮನು ನೂಕಿ ದೇವರು ಸಿರಿಯ ಮದದಲಿ ಕಳೆದರೆ, ನಿಮ್ಮಯ ಕರುಣ ಹೊರತಾಗಿ ಎಮ್ಮನು ಮರದು ಆರು ಸಲಹುವರು. ಧರೆಯೊಳು ಇನ್ನು ಅಪಕೀರ್ತಿ ನಾರಿಯ ಸೆರಗ ಹಿಡಿವುದೆ ಲೇಸು.

(ಎನುತ ತವೆ ಕರಮುಗಿದು ತಲೆಗುತ್ತಿ ಪೇಳಿದನು.)

ರಾಮ: ಆಗಲಿ ಅದಕೇನು.

(ಎಂದು ಕರುಣಾ ಸಾಗರನು ಬೀಳ್ಕೊಟ್ಟನು. ಅವರನು ಯೋಗಿಗಳ ವಶಮಾಡಿ ಗೌತಮಮುನಿಯನು ಉಪಚರಿಸಿ, ರಾಗ ಮಿಗೆ ಮುನಿವರರನಲ್ಲಿ ಸರಾಗದಿಂದಲೆ ಕಳುಹಿ, ಬಳಿಕ ಆ ಯಾಗಸಂರಕ್ಷಕನು ಅನಿಬರಿಗೆ ವೀಳೆಯವಿತ್ತನು.)

***

ಪದ ವಿಂಗಡಣೆ ಮತ್ತು ಪದಗಳ ತಿರುಳು

(ವ್ರಿಹಿಯ ನಿಂದನೆಯ ನುಡಿಗಳನ್ನು ಕೇಳುತ್ತಿದ್ದಂತೆಯೇ ಕೋಪ ಮತ್ತು ಅಪಮಾನದಿಂದ ಕೆರಳಿದ ನರೆದಲೆಗನು ವ್ರಿಹಿಯ ಅಹಂಕಾರವನ್ನು ಅಡಗಿಸುವಂತೆ ನಿಂದಿಸುತ್ತಾ, ತಾನು ಹೇಗೆ ಜನಸಮುದಾಯದಲ್ಲಿ ಹೆಚ್ಚಿನ ಸಂಕೆಯಲ್ಲಿರುವ ಬಡಜನರ ಹಿತವನ್ನು ಕಾಪಾಡುತ್ತೇನೆ ಎಂಬುದನ್ನು ವಿವರಿಸಿ, ಅಲ್ಲಿ ನೆರೆದಿದ್ದ ಮುನಿಜನಗಳಲ್ಲಿ ತಮ್ಮಿಬ್ಬರಲ್ಲಿ ಯಾರು ಮೇಲು ಎಂಬುದನ್ನು ತಿಳಿಸಬೇಕೆಂದು ಕೇಳಿಕೊಳ್ಳುತ್ತಾನೆ. ವ್ರಿಹಿ ಮತ್ತು ನರೆದಲೆಗರ ಪರಸ್ಪರ ಮೇಲುಕೀಳಿನ ಈ ನಿಂದನೆಯ ಮಾತುಗಳನ್ನು ಕೇಳುತ್ತಿದ್ದ ರಾಮನು ಇವರಿಬ್ಬರ ನಿಜವಾದ ಕಸುವನ್ನು ತಿಳಿಯಲು ಒಂದು ಆದೇಶವನ್ನು ಹೊರಡಿಸುತ್ತಾನೆ. ವ್ರಿಹಿ ಮತ್ತು ನರೆದಲೆಗನನ್ನು ಆರು ತಿಂಗಳ ಕಾಲ ಸೆರೆಯಲ್ಲಿಡಬೇಕೆಂದು, ಅನಂತರ ಇವರ ಕಸುವನ್ನು ನೋಡಿ, ತೀರ‍್ಮಾನಿಸೋಣವೆಂದು ಹೇಳಿ, ಅವರನ್ನು ಸೆರೆಯಲ್ಲಿಡಿಸಿ, ಅಯೋದ್ಯೆಗೆ ಪರಿವಾರದೊಡನೆ ತೆರಳುತ್ತಾನೆ. ದಾನ್ಯಗಳನ್ನು ಸೆರೆಯಲ್ಲಿಡುವುದು ಎಂದರೆ “ಕೊಟಡಿಯ ಕಿಟಕಿ ಬಾಗಿಲುಗಳನ್ನು ಮುಚ್ಚಿ, ಅವುಗಳ ಸಂದನ್ನು ಸಗಣಿಯಿಂದ ಸಾರಿಸಿ ಮುಚ್ಚಿ, ಬೆಳಕು ಮತ್ತು ಗಾಳಿಯ ಪ್ರವೇಶವಿಲ್ಲದಂತೆ ಮಾಡಿ ಕತ್ತಲ ಕೊಟಡಿಯಲ್ಲಿ ದಾನ್ಯಗಳನ್ನು ಇಡುವುದು. ಈ ರೀತಿ ಇಡುವ ಕೊಟಡಿಯನ್ನು ‘ಕಣಜ’ ಎಂದು ಕರೆಯುತ್ತಾರೆ.)

ಕನಲಿ = ಕೋಪಗೊಂಡು ; ಕಿಡಿ = ಬೆಂಕಿಯ ಕಣ; ಮಸಗು = ಹೊರಹೊಮ್ಮಿ ; ಖತಿ = ಕೋಪ; ಘರ್ಜನೆ+ಅಂತೆ; ಘರ್ಜನೆ = ಗಟ್ಟಿಯಾದ ದನಿ/ಅಬ್ಬರದ ದನಿ; ಜರೆ = ನಿಂದಿಸು/ತೆಗಳು/ಬಯ್ಯುವುದು; ಹೇಸು = ಅಸಹ್ಯಪಡು; ಭಂಡ = ನಾಚಿಕೆಯಿಲ್ಲದವನು; ನುಡಿಗೆ ಹೇಸದ ಭಂಡ = ಎಲ್ಲಿ, ಯಾವಾಗ, ಹೇಗೆ ಮಾತನಾಡಬೇಕೆಂಬುದನ್ನು ತಿಳಿಯದೆ, ಬಾಯಿಗೆ ಬಂದಂತೆ ಮಾತನಾಡುವ ನೀಚ ವ್ಯಕ್ತಿ/ ತಾನಾಡುವ ಮಾತುಗಳು ಬೇರೆಯವರ ಮನಸ್ಸಿಗೆ ಅರಿವು ಮತ್ತು ಆನಂದವನ್ನು ನೀಡುವಂತಿರಬೇಕೆ ಹೊರತು ಬೇರೆಯವರ ಮನಸ್ಸನ್ನು ನೋಯಿಸುವಂತೆ ಇರಬಾರದು ಎಂಬ ವಿವೇಕವಿಲ್ಲದೆ ಮಾತನಾಡುವ ವ್ಯಕ್ತಿ;

ಮಾರುತ್ತರ = ಒಬ್ಬರು ಆಡಿದ ಮಾತಿಗೆ ಎದುರಾಗಿ ಮಾತನಾಡುವುದು/ಒಬ್ಬರು ಆಡಿದ ಮಾತನ್ನು ಅಲ್ಲಗಳೆದು ಮಾತನಾಡುವುದು; ನಿನ್ನೊಳು ಮಾರುತ್ತರವ ಕೊಡುವರೇ = ನಿನ್ನಂತಹ ನೀಚನೊಡನೆ ಮಾತನಾಡಲೇಬಾರದು;

ಕಡು = ಬಹಳ/ಅತಿ; ಜಡ = ಜೀವವಿಲ್ಲದ ವಸ್ತು; ಕಡುಜಡ = ಇದೊಂದು ನುಡಿಗಟ್ಟು. ಒಳ್ಳೆಯದಕ್ಕೆ ಬೆಲೆ ಕೊಡದ ಮತ್ತು ಒಳ್ಳೆಯದನ್ನು ಒಪ್ಪಿಕೊಳ್ಳದ ಮನಸ್ಸಿನವನು/ವಾಸ್ತವವನ್ನು ಅರಿಯದ ಮತ್ತು ವಾಸ್ತವವನ್ನು ಕಡೆಗಣಿಸುವ ವ್ಯಕ್ತಿ; ಸತ್ಯಹೀನ = ದಿಟವೇನೆಂಬುದನ್ನು ತಿಳಿಯದವನು/ವಾಸ್ತವವನ್ನು ಅರಿಯದವನು; ಕಣ್ಣೆತ್ತಿ ನೋಡು = ಇದೊಂದು ನುಡಿಗಟ್ಟು. ಕರುಣೆಯಿಂದ ಕಾಣು/ಇತರರ ಸಂಕಟವನ್ನು ಗಮನಿಸು; ಧನಾಢ್ಯ = ಸಿರಿವಂತ; ಬೆಂಬತ್ತು = ಹಿಂಬಾಲಿಸು; ಅಪೇಕ್ಷೆ = ಬಯಕೆ;

ಹೇಳಲ್+ಏನು; ಹೆತ್ತ = ಮಗುವನ್ನು ಹಡೆದ; ಬಾಣಂತಿ = ಮಗುವನ್ನು ಹಡೆದ ನಾಲ್ಕಾರು ತಿಂಗಳ ಕಾಲ ಆರಯಿಕೆಗೆ ಒಳಗಾಗಿರುವ ಹೆಂಗಸು; ಪತ್ಯ/ಪಥ್ಯ = ವ್ಯಕ್ತಿಗೆ ರೋಗ ಬಂದ ಸಮಯದಲ್ಲಿ ವೈದ್ಯರು ಹೇಳಿದಂತಹ ಆಹಾರವನ್ನು ಮಾತ್ರ ತೆಗೆದುಕೊಳ್ಳುವುದು; ನೀನ್+ಅಹೆ; ಅಹೆ = ಆಗಿರುವೆ; ಹೆಣ = ಜೀವವಿಲ್ಲದ ದೇಹ; ತುತ್ತು = ಆಹಾರವನ್ನು ಸೇವಿಸುವಾಗ ಒಂದು ಸಲಕ್ಕೆ ಬಾಯಿ ಹಿಡಿಸುವಶ್ಟು ಆಹಾರವನ್ನು ಕಯ್ಯಲ್ಲಿ ತೆಗೆದುಕೊಳ್ಳುವುದು; ಜನ್ಮ = ಹುಟ್ಟು; ನಿರರ್ಥಕರ = ಪ್ರಯೋಜನವಿಲ್ಲದ್ದು; ಸತ್ತದಿನದಾರಭ್ಯ = ಸತ್ತ ದಿನದಿಂದ ತೊಡಗಿ; ಮನುಜ = ಮಾನವ/ವ್ಯಕ್ತಿ; ಕರ್ಮ = ಬಹುಬಗೆಯ
ಆಚರಣೆ; ಕರ್ಮವ ಹೊತ್ತು = ವ್ಯಕ್ತಿಯು ಸತ್ತ ನಂತರ ಅವರನ್ನು ಮಣ್ಣಿನಲ್ಲಿ ಹೂಳಿ ಇಲ್ಲವೇ ಬೆಂಕಿಯಿಂದ ಸುಟ್ಟು, ಅವರಿಗೆ ಪರಲೋಕದಲ್ಲಿ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಮುಂದಿನ ಮೂರು/ಏಳು/ಹನ್ನೊಂದನೆಯ ದಿನದ ವರಗೆ ಮಾಡುವ ಆಚರಣೆಗಳ ಜವಾಬ್ದಾರಿಯನ್ನು ಹೊತ್ತು;

ಪಿಂಡವನ್+ಇತ್ತು; ಪಿಂಡ = ಅನ್ನದ ಉಂಡೆ/ಸತ್ತವರಿಗೆ ತಿತಿಯನ್ನು ಮಾಡುವಾಗ ಹೆಣವನ್ನು ಹೂಳಿರುವ ಇಲ್ಲವೇ ಸುಟ್ಟಿರುವ ಜಾಗದಲ್ಲಿ ಇಡುವ ಅನ್ನದ ಉಂಡೆ; ತುತ್ತನ್+ಇಡುವರು; ತಪ್ಪದೆ = ಬಿಡದೆ/ಒಂದೇ ಸಮನೆ;

ವಾಯಸ = ಕಾಗೆ; ಕುಲ = ಗುಂಪು; ತುತ್ತನು+ಇಡುವರು; ವಾಯಸ ಕುಲವ ಕರೆಕರೆದು ತುತ್ತನಿಡುವರು = ಹೆಣದ ಗುದ್ದದ ಮೇಲೆ ಅನ್ನದ ಉಂಡೆಯ ಜತೆಜತೆಗೆ ಬಗೆಬಗೆಯ ಉಣಿಸುತಿನಸುಗಳನ್ನಿಟ್ಟು ಪೂಜಿಸಿದ ನಂತರ, ಅವೆಲ್ಲವನ್ನೂ ಕಾಗೆಗಳು ಬಂದು ತಿಂದರೆ ಸತ್ತವರ ಜೀವಕ್ಕೆ ನೆಮ್ಮದಿ ದೊರೆಯುವುದು ಮತ್ತು ಸ್ವರ್ಗ ದೊರೆಯುವುದೆಂಬ ನಂಬಿಕೆಯು ಜನಮನದಲ್ಲಿದೆ; ದರ್ಭೆ = ಗರಿಕೆ ಹುಲ್ಲಿನ ಇಲ್ಲವೇ ಇನ್ನಿತರ ಪಯಿರನ ಎಸಳು; ತೆತ್ತಿಗ = ಆಳು/ಸೇವಕ; ನೀನ್+ಆದೆ;

ಎಳ್ಳು ದರ್ಭೆಗೆ ತೆತ್ತಿಗನು ನೀನಾದೆ = ತಿತಿಯನ್ನು ಮಾಡುವಾಗ ಎಳ್ಳಿನಿಂದ ಮಾಡಿದ ಉಂಡೆಗಳನ್ನು ಕಟ್ಟಿ, ಹುಲ್ಲಿನ ಎಳೆಗಳಿಂದ ಕೂಡಿದ ಸಣ್ಣಕಟ್ಟನ್ನು ಕಟ್ಟಿ, ಅದನ್ನು ಹಾಲು ಇಲ್ಲವೇ ನೀರಿನೊಳಕ್ಕೆ ಅದ್ದಿ ತೆಗೆದು ಅನ್ನದ ಮತ್ತು ಎಳ್ಳಿನ ಉಂಡೆಗಳ ಮೇಲೆ ಚಿಮುಕುಸುತ್ತ ಸತ್ತವರನ್ನು ಪೂಜಿಸುತ್ತಾರೆ.

ಕೀರ್ತಿ = ವರದಿ/ಹೇಳಿಕೆ; ಕೀರ್ತಿಯ ಹೊತ್ತುಕೊಂಡೆ = ವ್ಯಕ್ತಿಯ ಸತ್ತ ನಂತರ ಮಾಡುವ ತಿತಿಯ ಕಾರ‍್ಯದ ಆಚರಣೆಗಳಲ್ಲಿ ಬಳಕೆಯಾಗುತ್ತಿರುವೆ; ವ್ಯಕ್ತಿಯು ಜೀವಂತವಾಗಿರುವಾಗ ಹಸಿವನ್ನು ತಣಿಸಲು ದೊರಕದ ನೀನು, ಸತ್ತ ನಂತರ ಬಳಕೆಗೆ ಬರುವೆ. ಇಂತಹ ಕೀರ‍್ತಿಯು ನಿನ್ನದು ಎಂಬ ಅಣಕದ ದನಿಯು ಈ ನುಡಿಯಲ್ಲಿದೆ;

ಮಾತು+ಅದು; ದುರಾತ್ಮ = ಕೆಟ್ಟ ನಡೆನುಡಿಯುಳ್ಳ ವ್ಯಕ್ತಿ; ತೆಗೆ = ಮರೆಯಾಗು/ತಡೆ; ಮಳೆ ತೆಗೆದು = ಮಳೆ ಸುರಿಯದೆ; ಅಡಗು = ಕೊನೆಗೊಳ್ಳು; ಬೆಳೆ ಅಡಗಿ = ಬೆಳೆಯಾಗದೆ; ಕ್ಷಾಮ = ಬರಗಾಲ/ಉಣ್ಣುವುದಕ್ಕೆ ಆಹಾರವಿಲ್ಲದೆ, ಕುಡಿಯುವುದಕ್ಕೆ ನೀರಲ್ಲದೆ ಜೀವಿಗಳು ಹಸಿವು ಬಾಯಾರಿಕೆಯಿಂದ ಸಂಕಟಪಡುವ ಕಾಲ;

ವಿಲಯ = ನಾಶ; ವಿಲಯಕಾಲ = ಜಗತ್ತಿನ ಜೀವರಾಶಿಗಳೆಲ್ಲವೂ ಹಸಿವಿನ ಸಂಕಟದಿಂದ ನರಳುತ್ತ ಸಾವನ್ನಪ್ಪುವ ಕಾಲ; ಅಳಿ = ನಾಶ; ಜಗ+ಅರಿಯೆ; ಅರಿ = ತಿಳಿ; ಆದರ = ಒಲವು ನಲಿವಿನ ನಡೆನುಡಿ ; ಸಲಹು = ಕಾಪಾಡು; ಎಲ್ಲಿ+ಇಹೆಯೊ; ಇಹೆಯೊ = ಇರುವೆಯೊ; ಬಳಗ+ಅದು; ಬಳಗ = ಗುಂಪು/ಸಮೂಹ; ಎಲ್ಲಿ+ಇಹುದು; ಹುಲು = ಸಾಮಾನ್ಯ/ಅಲ್ಪ;

ಸರಿದೊರೆ = ಸರಿಜೋಡಿ/ಸರಿಸಮಾನ; ಬಲ್ಲಿದ = ಸಿರಿವಂತ; ನಿನ್ನಲ್ಲಿ+ಉಂಟು; ಉಂಟು = ಇದೆ; ಉಪೇಕ್ಷೆ = ಅಸಡ್ಡೆ/ತಿರಸ್ಕಾರ; ಸಲ್ಲು = ಸಮ್ಮತವಾಗು/ಒಪ್ಪಿಗೆಯಾಗು; ಪರಿ = ರೀತಿ; ಪಕ್ಷಪಾತ+ಅದು+ಇಲ್ಲ; ಪಕ್ಷಪಾತ = ಒಬ್ಬರಿಗೆ ಒಳಿತನ್ನು ಮಾಡಿ ಮತ್ತೊಬ್ಬರಿಗೆ ಕೇಡನ್ನು ಬಗೆಯುವುದು/ಒಬ್ಬರನ್ನು ಹೆಚ್ಚು ಒಲವಿನಿಂದ ಕಂಡು ಮತ್ತೊಬ್ಬರನ್ನು ಸಂಪೂರ‍್ಣವಾಗಿ ಕಡೆಗಣಿಸುವುದು;

ಭಾವಿಸು = ವಿಚಾರಮಾಡಿ ನೋಡು/ತಿಳಿದು ನೋಡು; ಬಡವರುಗಳು+ಎನ್ನದೆ; ರಕ್ಷಿಸು = ಕಾಪಾಡು/ಸಲಹು; ನಿರ್ದಯ = ದಯೆಯಿಲ್ಲದ ನಡೆನುಡಿ; ಕುಟಿಲ = ವಂಚಕ/ಮೋಸಗಾರ; ಕುಟಿಲಾತ್ಮ = ಮೋಸ ಮಾಡುವ ನಡೆನುಡಿಯುಳ್ಳವನು/ಕೆಟ್ಟವನು;

ನಾನ್+ಎಲೈ; ನಾನೆಲೈ = ನಾನೇನೋ: ನಾನೆಲೈ ಲೋಕದಲಿ ನಿರ್ದಯನು = ನಾನೇನೋ ಕರುಣಿಯಿಲ್ಲದವನು… ನಾನಲ್ಲ, ನಿಜವಾಗಿಯೂ ನೀನು ನಿರ‍್ದಯನು;

ಬಳಿಕ+ಏನಲೈ; ಸದ್ಧರ್ಮ = ಒಳ್ಳೆಯ ನಡೆನುಡಿ; ಮಧುಪಾನ+ಆದೆಯಲಾ; ಮಧುಪಾನ = ಕಳ್ಳು ಹೆಂಡ ಮುಂತಾದ ಮಾದಕ ಪಾನೀಯಗಳ ಸೇವನೆ; ದುರಾತ್ಮಕ = ಕೆಟ್ಟ ವ್ಯಕ್ತಿ; ಸೇವಿಸು = ಉಣ್ಣು/ಕುಡಿ; ಕಿರಾತರು = ಕಾಡಿನಲ್ಲಿ ನೆಲೆಸಿರುವ ಒಂದು ಬುಡಕಟ್ಟಿನ ಜನರು;

ಜ್ಞಾನ+ಅಳಿದು; ಜ್ಞಾನ = ತಿಳುವಳಿಕೆ; ಅಳಿದು = ಇಲ್ಲವಾಗಿ; ವಿಕಾರ = ಕೆಟ್ಟ ರೀತಿಯಲ್ಲಿ ಬದಲಾಗುವುದು; ಮತಿಹೀನರು+ಆದರು; ಮತಿಹೀನ = ತಿಳಿಗೇಡಿ; ಗುಣ+ಏನು; ಗುಣ = ನಡವಳಿಕೆ/ನಡತೆ; ಅತಿಶಯ = ಹೆಚ್ಚುಗಾರಿಕೆ; ಕೊಂಡಾಡು = ಹೊಗಳು; ಕೊಂಬರೆ = ಕೊಳ್ಳುತ್ತಾರೆಯೆ; ಸಜ್ಜನರ+ಆಡಿದರೆ; ಸಜ್ಜನ = ಒಳ್ಳೆಯವರು;

ಪತಿಕರಿಸು = ಹೊಗಳು/ಮೆಚ್ಚು/ಕೊಂಡಾಡು; ಆಡು = ಹೇಳು/ನುಡಿ; ಲಜ್ಜೆ = ನಾಚಿಕೆ; ಸಿರ = ತಲೆ; ಬಾಗು = ಬಗ್ಗಿಸು; ಸಜ್ಜನರಾಡಿದರೆ ಪತಿಕರಿಸೆ ಲಜ್ಜೆಗೆ ಸಿರವ ಬಾಗುವರು = ಒಳ್ಳೆಯವರ ಬಗ್ಗೆ ಈ ರೀತಿ ಹೊಗಳಿಕೆಯ ಮಾತನಾಡಿದರೆ ಮೆಚ್ಚಬಹುದು. ಅಗ ಅವರು ನಾಚಿಕೆಯಿಂದ ತಲೆಯನ್ನು ತಗ್ಗಿಸುವರು . ಅಂದರೆ ನಿನ್ನ ಹಾಗೆ ಅಹಂಕಾರದಿಂದ ಮೆರೆಯುವುದಿಲ್ಲ;

ನೋಡಿರೈ = ನೋಡುವಂತಹವರಾಗಿ. ಈಗ ರಾಮನನ್ನು ಸುತ್ತುವರಿದಿದ್ದವರೆಲ್ಲರನ್ನೂ ಕುರಿತು ನರೆದಲೆಗ ಮಾತನಾಡತೊಡಗುತ್ತಾನೆ; ದುರ್ಮತಿ+ಕೇಡಿ; ದುರ್ಮತಿ = ಕೆಟ್ಟ ಮನಸ್ಸಿನವನು; ಕೇಡಿ = ಇತರರ ಮಾನಪ್ರಾಣಗಳಿಗೆ ಅಪಾಯವನ್ನು/ಹಾನಿಯನ್ನು ಮಾಡುವವನು;

ಇವನ್+ಆಡುವುದ; ಆಡುವುದ = ಹೇಳುವುದನ್ನು; ನಾವು+ಇನ್ನು+ಆಡಿದರೆ; ಆಡಿದರೆ = ಮಾತನಾಡಿದರೆ; ಹುರುಳು+ಇಲ್ಲ; ಹುರುಳು = ಸಾರ/ತಿರುಳು; ಪ್ರತಿಬಿಂಬರೂಪ = ಯಾವುದೇ ವಸ್ತು/ಜೀವಿಯ ಆಕಾರದಂತೆಯೇ ಮತ್ತೊಂದು ನಿರ‍್ಮಾಣಗೊಂಡಿರುವುದು; ಬಿತ್ತರಿಸು = ಅಣಿಮಾಡು/ತಯಾರುಮಾಡು;

ಪಿತೃ = ತಂದೆ; ನಾಮ = ಹೆಸರು; ಪಿತೃನಾಮ = ಇಲ್ಲಿ ಈ ಪದ ಒಂದು ನುಡಿಗಟ್ಟಾಗಿ ಬಳಕೆಯಾಗಿದೆ. ಒಂದು ಕುಟುಂಬದಲ್ಲಿ ಸಾವನ್ನಪ್ಪಿರುವ ತಂದೆ, ತಾತ, ಮುತ್ತಾತ ಮುಂತಾದವರ ಹೆಸರುಗಳು;

ನಿನಗೆ+ಇತ್ತು; ನಿನಗೆ = ಅನ್ನದ ಉಂಡೆಯ ರೂಪದಲ್ಲಿರುವ ಪಿಂಡಕ್ಕೆ; ಇತ್ತು = ನೀಡಿ/ಹೆಸರಿಸಿ; ನೆತ್ತಿ = ತಲೆ; ಬಡಿ = ಹೊಡೆದು; ಪಶು = ಹಸು; ತುತ್ತನು+ಇಡುವರು; ಎತ್ತು = ಹುಟ್ಟು/ಜನ್ಮ; ತನು = ದೇಹ;

ಏನ್+ಇಹಿರಿ; ಇಹಿರಿ = ಇರುವಿರಿ; ಹಿರಿ = ದೊಡ್ಡದು; ಕಿರಿ = ಚಿಕ್ಕದು; ಮೌನ+ದೀಕ್ಷಿತರು+ಆದಿರಲ; ಮೌನ = ಏನನ್ನೂ ಮಾತನಾಡದೆ ಸುಮ್ಮನಿರುವುದು; ದೀಕ್ಷಿತ = ವ್ರತವನ್ನು ಕಯ್ಗೊಂಡವರು; ಮೌನದೀಕ್ಷಿತರು = ಮಾತನ್ನಾಡದೆ ಸುಮ್ಮನಿರುವ ಉದ್ದೇಶವನ್ನು ಹೊಂದಿದವರು;

ಆದಿರಲ = ಆಗಿದ್ದೀರಲ್ಲ; ಕಂಡು+ಏನು; ಮುರಿದು+ಆಡುವಿರಿ; ಮುರಿ = ಕಡೆಗಣಿಸಿ/ತಿರಸ್ಕರಿಸಿ/ಕಳೆ; ಆಡುವಿರಿ = ಮಾತನಾಡುವಿರಿ; ಕಂಡು ಏನು ಮುರಿದಾಡುವಿರಿ = ನೋಡುತ್ತಿದ್ದರೂ ಯಾವ ಮಾತುಗಳನ್ನು ಆಡದೆ ಸುಮ್ಮನಿದ್ದೀರಿ; ಅಸಾಧ್ಯ = ಯಾವುದೇ ಕೆಲಸವನ್ನು ಮಾಡಲಾಗದು; ಸಾಧ್ಯ = ಯಾವುದೇ ಕೆಲಸವನ್ನು ಮಾಡುವುದು; ನಿಮಗೆ ಅಸಾಧ್ಯವೊ ಸಾಧ್ಯವೋ = ನಿಮ್ಮಿಂದ ಈ ಸಮಸ್ಯೆಯನ್ನು ಅಂದರೆ ನಮ್ಮಿಬ್ಬರಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂಬುದನ್ನು ತೀರ‍್ಮಾನಿಸಲು ಆಗುತ್ತದೆಯೋ ಇಲ್ಲವೋ ತಿಳಿಸಿ;

ನಪುಂಸಕ = ಇತ್ತ ಗಂಡೂ ಅಲ್ಲದ ಅತ್ತ ಹೆಣ್ಣೂ ಅಲ್ಲದ ಮಾನವ ಜೀವಿ. ಈ ಪದ ಒಂದು ನುಡಿಗಟ್ಟಾಗಿ ಬಳಕೆಗೆ ಬಂದಿದೆ. ಕೆಲಸಕ್ಕೆ ಬಾರದ ವ್ಯಕ್ತಿ/ಬಲಹೀನ ಎಂಬ ತಿರುಳಿನಲ್ಲಿ ಬಳಕೆಯಾಗಿದೆ; ನಿರಂತರ+ಏನು; ನಿರಂತರ = ಒಂದೇ ಸಮನೆ; ವಾದ+ಇದು; ವಾದ = ಚರ್ಚೆ; ಈ ನಪುಂಸಕನಲಿ ಏನು ಕಾರಣ ನಿರಂತರ ವಾದವಿದು = ಕೆಳಮಟ್ಟದ ಇಂತಹ ವ್ಯಕ್ತಿಯೊಡನೆ ನಾನೇಕೆ ವಾದವನ್ನು ಮಾಡಲಿ. ಅಂದರೆ ಇವನೊಡನೆ ಮಾತಿಗೆ ಮಾತನ್ನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ;

ಅರುಹು = ತಿಳಿಸು; ಮಸೆ = ತೀವ್ರಗೊಳ್ಳು/ಉದ್ರೇಕ/ಆವೇಶ/ಹುರುಡು; ಇತ್ತಂಡ = ಎರಡು ಕಡೆಯ ತಂಡದವರು; ಮತ್ಸರ = ಹಗೆತನ/ಹೊಟ್ಟೆಕಿಚ್ಚು; ಪಿಸುಣ = ಚಾಡಿಕೋರ; ಬಲರು = ಶಕ್ತಿಯುಳ್ಳವರು/ಕಸುವುಳ್ಳವರು; ಅತಿ = ಬಹಳ; ನಿಷ್ಠುರರು = ಒರಟರು;

ಪಿಸುಣ>ಹಿಸುಣ = ಚಾಡಿಕೋರ; ಇವದಿರ = ಇವರನ್ನು; ಮಾಣ್ = ನಿಲ್ಲಿಸು; ಹದನು+ಏನು; ಹದನು = ರೀತಿ/ಕ್ರಮ: ನಮಗೆ+ಈ+ನ್ಯಾಯವನು; ಪರಿಹರಿಸು = ಬಗೆಹರಿಸು/ನಿವಾರಿಸು; ಅಳವು+ಅಲ್ಲ; ಅಳವು = ಶಕ್ತಿ/ಕಸುವು; ಹರಿ+ಹರ+ವಿರಿಂಚಿ+ಆದ್ಯರನು; ಹರಿ = ವಿಶ್ಣು; ಹರ = ಶಿವ;

ವಿರಿಂಚಿ = ಬ್ರಹ್ಮ; ಆದ್ಯರು = ಮೊದಲಾದವರು; ಅವರ = ನರೆದಲೆಗ ಮತ್ತು ವ್ರಿಹಿ; ಗುಣ = ಯೋಗ್ಯತೆ; ನಯ = ನಾಜೂಕು; ಆಧರಿಸಿ = ಅವಲಂಬಿಸಿ/ಆಶ್ರಯಿಸಿ; ಪೌರುಷ = ಕೆಚ್ಚು; ಗಮನಿಸಿ = ತೆರಳಿರಿ; ಸೆರೆ = ಬಂದನ; ನೂಕಿ = ತಳ್ಳಿ;

ಸಿರಿ = ಐಶ್ವರ‍್ಯ; ಮದ = ಸೊಕ್ಕು/ಗರ‍್ವ; ಸಿರಿಯ ಮದ = ರಾಜತನದ ಗದ್ದುಗೆಯಲ್ಲಿ ಕುಳಿತಾಗ ಸಹಜವಾಗಿಯೇ ಬರುವ ಆಡಳಿತದ ಸೊಕ್ಕು; ಕಳೆ = ಬಿಡು/ನಾಶ ಮಾಡು; ಹೊರತಾಗಿ = ಉಳಿದು/ಬಿಟ್ಟು;

ಎಮ್ಮನು = ನಮ್ಮನ್ನು; ಮರದು = ನೆನಪಿನಲ್ಲಿಟ್ಟುಕೊಳ್ಳದೆ; ಆರು = ಯಾರು; ಧರೆ = ಬೂಮಿ; ಅಪಕೀರ್ತಿ = ಕೆಟ್ಟ ಹೆಸರು; ನಾರಿ = ಹೆಣ್ಣು; ಅಪಕೀರ್ತಿ ನಾರಿಯ ಸೆರಗ ಹಿಡಿವುದು = ಇದೊಂದು ನುಡಿಗಟ್ಟು. ವ್ಯಕ್ತಿಯು ತನ್ನ ನಡೆನುಡಿಗಳಿಂದಲೇ ಕೆಟ್ಟ ಹೆಸರನ್ನು ಪಡೆಯುವುದು; ರಾಮನ ಮುಂದೆ ತಾನು ಮತ್ತು ವ್ರಿಹಿಯು ಈ ರೀತಿ ಮಾತನಾಡಿದ್ದರಿಂದ ತನಗೆ ಕೆಟ್ಟ ಹೆಸರು ಬರುವುದೆಂಬ ಆತಂಕವು ನರೆದಲೆಗೆನನ್ನು ಕಾಡುತ್ತಿದೆ;

ಲೇಸು = ಒಳ್ಳೆಯದು; ತವೆ = ಅತಿಶಯವಾಗಿ/ಹೆಚ್ಚಾಗಿ; ಕರ = ಕಯ್; ತಲೆ+ಕುತ್ತಿ; ಕುತ್ತು = ಬಗ್ಗು; ತಲೆಗುತ್ತಿ = ತಲೆತಗ್ಗಿಸಿ; ಯೋಗಿ = ತಪಸ್ವಿ/ರಿಸಿ; ವಶಮಾಡಿ = ವಶಕ್ಕೆ ಕೊಟ್ಟು; ರಾಗ = ಪ್ರೀತಿ;

ಮುನಿವರರನ್+ಅಲ್ಲಿ; ಸರಾಗ = ಸಲೀಸು; ಸಂರಕ್ಷಕ = ಕಾಪಾಡುವವನು; ಅನಿಬರು = ಅವರೆಲ್ಲರು; ವೀಳೆಯವ+ಇತ್ತನು; ವೀಳೆಯ = ಗುರುಹಿರಿಯರಿಗೆ ಒಲವು ನಲಿವಿನ ಸಂಕೇತವಾಗಿ ನೀಡುವ ಹಣ್ಣುಕಾಯಿಹೂವು ಎಲೆ ಅಡಿಕೆಯಿಂದ ಕೂಡಿರುವ ತಾಂಬೂಲ; ಇತ್ತನು = ನೀಡಿದನು;

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: