ಕನ್ನಡ ಚಿತ್ರರಂಗದ ಮೊದಲುಗಳು

– ಕಿಶೋರ್ ಕುಮಾರ್

ಹಲವಾರು ವರುಶಗಳಿಂದ ಕನ್ನಡಿಗರಿಗೆ ಸದಬಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿರುವ ಕನ್ನಡ ಚಿತ್ರರಂಗವು, ಆಯಾ ಕಾಲಗಟ್ಟದ ಜನರ ಅಬಿರುಚಿಗೆ ತಕ್ಕಂತೆ ಚಿತ್ರಗಳನ್ನು ನೀಡುವುದರ ಜೊತೆಗೆ, ಕಾಲಕಾಲಕ್ಕೆ ಹೊಸಹೊಸ ತಂತ್ರಜ್ನಾನಗಳನ್ನು ಅಳವಡಿಸಿಕೊಳ್ಳುತ್ತಾ ಬೆಳೆದು ಬಂದಿದೆ. ಈ ಪಯಣದಲ್ಲಿ ಕನ್ನಡ ಚಿತ್ರರಂಗವು ಹಲವಾರು ಮೊದಲುಗಳನ್ನು ಕಂಡಿದ್ದು, ಅವುಗಳಲ್ಲಿ ಕೆಲವನ್ನು ಇಲ್ಲಿ ಮೆಲುಕು ಹಾಕೋಣ.

ಕನ್ನಡದ ಮೊದಲ ಮೂಕಿ ಸಿನೆಮಾ
1927 ರ ವರೆಗೂ ಸಿನೆಮಾಗಳಲ್ಲಿ ಮಾತು ಇರುತ್ತಿರಲಿಲ್ಲ. ಪರದೆಯ ಪಕ್ಕದಲ್ಲೆ ವಾದ್ಯಗಳಿಂದ ಹಿನ್ನೆಲೆ ಸದ್ದನ್ನು ಹೊರಡಿಸಲಾಗುತ್ತಿತ್ತು. ಮಾತಿಲ್ಲದ ಈ ಚಿತ್ರಗಳನ್ನು ಮೂಕಿ (silent) ಸಿನೆಮಾಗಳು ಎನ್ನಲಾಗುತ್ತಿತ್ತು. ಕನ್ನಡದಲ್ಲೂ ಸಹ ಈ ಪ್ರಯತ್ನ ನಡೆದು, 1931 ರಲ್ಲಿ ‘ವಸಂತಸೇನಾ’ ಎಂಬ ಮೂಕಿ ಚಿತ್ರ ನಿರ‍್ಮಾಣವಾಗಿತ್ತು. ಕಮಲಾದೇವಿ ಚಟ್ಟೋಪಾದ್ಯಾಯ ಹಾಗೂ ಟಿ. ಪಿ. ಕೈಲಾಸಂ ಅವರು ಈ ಚಿತ್ರದಲ್ಲಿ ನಟಿಸಿದ್ದರು.

ಕನ್ನಡದ ಮೊದಲ ಮಾತನಾಡುವ ಸಿನೆಮಾ
ಮಾತನಾಡುವ (talkie) ಸಿನೆಮಾ ಎಂಬುದು, ಸಿನೆಮಾ ಜಗತ್ತಿನಲ್ಲೇ ದೊಡ್ಡ ಮೈಲಿಗಲ್ಲು ಎಂದರೆ ತಪ್ಪಾಗಲಾರದು. 1927 ರಲ್ಲಿ ತೆರೆಕಂಡ ದಿ ಜಾಸ್ ಸಿಂಗರ್ ಪ್ರಪಂಚದ ಮೊದಲನೇ ಮಾತನಾಡುವ ಚಿತ್ರವಾಗಿತ್ತು. ಇದಾಗಿ 7 ವರುಶಗಳ ನಂತರ ಅಂದರೆ 1934 ರ ಮಾರ‍್ಚ್ 3 ರಂದು ಕನ್ನಡದ ಮೊಟ್ಟ ಮೊದಲ ಮಾತನಾಡುವ ಚಿತ್ರ ಸತಿಸುಲೋಚನ ಬಿಡುಗಡೆಯಾಯಿತು. ಚಿತ್ರೀಕರಣ ಮೊದಲಾದ ದಿನವನ್ನು ಗಣನೆಗೆ ತೆಗೆದುಕೊಂಡರೆ ಬಕ್ತ ದ್ರುವ ಕನ್ನಡದ ಮೊದಲ ಚಿತ್ರವಾಗುತ್ತದೆ, ಆದರೆ ಸತಿ ಸುಲೋಚನಾ ಚಿತ್ರ ಬಕ್ತ ದ್ರುವ ಚಿತ್ರಕ್ಕಿಂತ ಮೊದಲು ಬಿಡುಗಡೆಯಾಗಿ ಕನ್ನಡದ ಮೊದಲ ಮಾತನಾಡುವ ಚಿತ್ರವೆನಿಸಿಕೊಂಡಿದೆ. ಸೌತ್ ಇಂಡಿಯ ಮೂವಿಟೋನ್ ಕಂಪನಿಯು ಈ ಚಿತ್ರದ ನಿರ‍್ಮಾಣದ ಹೊಣೆಯನ್ನು ಹೊತ್ತಿತ್ತು. ಯರಾಗುಡಿಪತಿ ವರದರಾವ್ ಅವರು ಈ ಚಿತ್ರವನ್ನು ನಿರ‍್ದೇಶಿಸಿದ್ದರೆ, ಚಿತ್ರ ಕತೆಯನ್ನು ಬೆಳ್ಳಾವೆ ನರಹರಿ ಶಾಸ್ತ್ರಿ ಅವರು ಬರೆದಿದ್ದರು. ಮುಕ್ಯ ತಾರಾಗಣದಲ್ಲಿ ಸುಬ್ಬಯ್ಯ ನಾಯ್ಡು ಹಾಗೂ ತ್ರಿಪುರಾಂಬ ಅವರು ನಟಿಸಿದ್ದರೆ, ಸಹ ಕಲಾವಿದರಾಗಿ ಆರ್. ನಾಗೇಂದ್ರ ರಾವ್, ಲಕ್ಶ್ಮಿ ಬಾಯಿ, ಸಿ.ವಿ. ಶೇಶಾಚಲಂ, ಡಿ. ಎ. ಮೂರ‍್ತಿ ರಾವ್ ಮತ್ತು ಎಸ್.ಕೆ. ಪದ್ಮಾದೇವಿ ನಟಿಸಿದ್ದರು. ಸುಮಾರು 2 ತಿಂಗಳಕಾಲ ಕೊಲ್ಲಾಪುರದ ಚತ್ರಪತಿ ಸಿನೆಟೋನ್ ಸ್ಟುಡಿಯೋದಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿತ್ತು. ಅಂದಿಗೆ 40,000 ರೂ ವೆಚ್ಚದಲ್ಲಿ ನಿರ‍್ಮಾಣಗೊಂಡಿದ್ದ ಈ ಚಿತ್ರವು ಬೆಂಗಳೂರಿನ ಪ್ಯಾರಾಮೌಂಟ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ 6 ವಾರಗಳ ತುಂಬಿದ ಪ್ರದರ‍್ಶನ ಕಂಡಿತ್ತು.

ಕನ್ನಡದ ಮೊದಲ ಬಣ್ಣದ ಸಿನೆಮಾ
ಕಪ್ಪು ಬಿಳುಪು ಚಿತ್ರಗಳು ಸರಿದು ಬಣ್ಣದ ಚಿತ್ರಗಳ ಕಾಲ ಮೊದಲಾದಾಗ ಕನ್ನಡ ಚಿತ್ರರಂಗವೂ ಸಹ ಬಣ್ಣದ ಚಿತ್ರಗಳ ನಿರ‍್ಮಾಣಕ್ಕೆ ತೆರೆದುಕೊಂಡಿತು. 1955 ರ ನಂತರ ತೆರೆಕಂಡ ಸ್ತ್ರೀ ರತ್ನ, ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್ ಹಾಗೂ ಮಕ್ಕಳ ರಾಜ್ಯ (ಹಿರಿಯ ನಟ ಉಮೇಶ್ ಅವರು ಎಳೆಯ ನಟನಾಗಿ ನಟಿಸಿದ್ದ ಚಿತ್ರ) ಚಿತ್ರಗಳ ಕೆಲವು ಸನ್ನಿವೇಶಗಳು ಜೆವಾ ಬಣ್ಣದಲ್ಲಿ (gevacolor) ಚಿತ್ರೀಕರಣಗೊಂಡಿದ್ದವು. ನಂತರ ದಶಾವತಾರ ಹಾಗೂ ವೀರಕೇಸರಿ ಚಿತ್ರಗಳ ಕೆಲವು ಸನ್ನಿವೇಶಗಳನ್ನು ಈಸ್ಟ್ ಮನ್ ಬಣ್ಣದಲ್ಲಿ (eastmancolor) ಚಿತ್ರೀಕರಿಸಲಾಗಿತ್ತು. ಆದರೆ 1964 ರಲ್ಲಿ ಬಿಡುಗಡೆಯಾದ ಅಮರಶಿಲ್ಪಿ ಜಕಣಾಚಾರಿ ಚಿತ್ರವು ಪೂರ‍್ಣ ಪ್ರಮಾಣದಲ್ಲಿ ಈಸ್ಟ್ ಮನ್ ಕಲರ್ ನಲ್ಲಿ ಚಿತ್ರೀಕರಣಗೊಂಡು ಕನ್ನಡದ ಮೊದಲ ಬಣ್ಣದ ಚಿತ್ರ ಎನಿಸಿಕೊಂಡಿತು. ವಿಕ್ರಂ ಪ್ರೊಡಕ್ಶನ್ಸ್ ಅಡಿಯಲ್ಲಿ ಬಿ. ಎಸ್. ರಂಗ ಅವರು ನಿರ‍್ಮಿಸಿ, ನಿರ‍್ದೇಶಿಸಿದ್ದ ಈ ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಹಾಗೂ ಬಿ. ಸರೋಜಾದೇವಿ ಅವರು ಮುಕ್ಯ ಪಾತ್ರದಲ್ಲಿ ನಟಿಸಿದ್ದರು.

ಹೊರನಾಡಿನಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ
ಕನ್ನಡ ಚಿತ್ರಗಳು ಹೆಚ್ಚಾಗಿ ಮದರಾಸು, ಕರ‍್ನಾಟಕ ಇಲ್ಲವೇ ಸುತ್ತಮುತ್ತಲ ರಾಜ್ಯಗಳಲ್ಲಿ ಚಿತ್ರೀಕರಣಗೊಳ್ಳುತ್ತಿದ್ದವು. ಇಂಡಿಯಾದಿಂದ ಹೊರಗೆ ಚಿತ್ರೀಕರಣ ಮಾಡುವುದು, ಜೊತೆಗೆ ಅದಕ್ಕೆ ಬೇಕಾದ ಅನುಮತಿಗಳನ್ನು ಪಡೆಯುವುದು ಸುಲಬದ ಮಾತಾಗಿರಲಿಲ್ಲ. ಹೀಗಿರುವಾಗ ಕನ್ನಡ ಚಿತ್ರರಂಗ ಸಹ ಹೊಸತನಕ್ಕೆ ನಾಂದಿ ಹಾಡಿ, ಹೊರ ದೇಶಗಳಲ್ಲಿ ಚಿತ್ರೀಕರಣ ಮಾಡಲು ಮುಂದಾಯಿತು. 1978 ರ ಆಗಸ್ಟ್ ನಲ್ಲಿ ಬಿಡುಗಡೆಯಾದ ವರನಟ ಡಾ ರಾಜ್ ಕುಮಾರ್ ಅವರು ನಟಿಸಿರುವ ಆಪರೇಶನ್ ಡೈಮಂಡ್ ರ‍್ಯಾಕೆಟ್ ನೇಪಾಳದಲ್ಲಿ ಚಿತ್ರೀಕರಣಗೊಂಡಿತ್ತು. ಆದರೆ ಇದಾದ 4 ತಿಂಗಳ ಅಂತರದಲ್ಲಿ ಡಿಸೆಂಬರ್ 23 1978 ರಲ್ಲಿ ಬಿಡುಗಡೆಯಾದ ಸಾಹಸಸಿಂಹ ಡಾ ವಿಶ್ಣುವರ‍್ದನ್ ಹಾಗೂ ದ್ವಾರಕೀಶ್ ಅವರು ನಟಿಸಿರುವ ಸಿಂಗಾಪೂರಿನಲ್ಲಿ ರಾಜಾ ಕುಳ್ಳ ಹೊರನಾಡಿನಲ್ಲಿ ಚಿತ್ರೀಕರಣಗೊಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಕಾರಣವೂ ಇದೆ. ನೇಪಾಳದಂತೆ ಸಿಂಗಾಪೂರ್ ಇಂಡಿಯಾಗೆ ಹತ್ತಿರದ ನಾಡಲ್ಲ ಎಂಬುದು ‘ಸಿಂಗಾಪೂರಿನಲ್ಲಿ ರಾಜಾ ಕುಳ್ಳ’ ಹೊರನಾಡಿನಲ್ಲಿ ಚಿತ್ರೀಕರಣಗೊಂಡ ಮೊದಲ ಚಿತ್ರ ಎಂದು ಪರಿಗಣಿಸಲು ಮೂಲ ಕಾರಣವಾಗಿದೆ. ಈ ಚಿತ್ರವನ್ನು ದ್ವಾರಕೀಶ್ ಅವರು ನಿರ‍್ಮಿಸಿದ್ದು, ಸಿ.ವಿ. ರಾಜೇಂದ್ರನ್ ನಿರ‍್ದೇಶಿಸಿದ್ದರು. ಉಳಿದಂತೆ ಮಂಜುಳಾ, ತೂಗುದೀಪ ಶ್ರೀನಿವಾಸ್, ಶಕ್ತಿ ಪ್ರಸಾದ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಪೆಲಿನಾ ಎಂಬ ಹೊರನಾಡಿನ ನಟಿ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ಕನ್ನಡದ ಮೊದಲ 3D ಸಿನೆಮಾ
ಇತ್ತೀಚೆಗೆ 3D ಚಿತ್ರಗಳ ಬಗ್ಗೆ ತುಂಬಾ ಕೇಳಿರುತ್ತೇವೆ. ಕನ್ನಡದಲ್ಲೂ ಸಹ 2012 ರಲ್ಲಿ ಬಿಡುಗಡೆಯಾದ ಕಟಾರಿವೀರ ಸುರಸುಂದರಾಂಗಿ ಹಾಗೂ 2022 ರಲ್ಲಿ ತೆರೆಕಂಡ ವಿಕ್ರಾಂತ್ ರೋಣದಂತ ಪೂರ‍್ಣಪ್ರಮಾಣದ 3D ಚಿತ್ರಗಳು ಬಂದಿವೆ. ಇವುಗಳು ಇತ್ತೀಚೆಗೆ ತೆರೆಕಂಡ 3D ಚಲನಚಿತ್ರಗಳು. ಆದರೆ ಸುಮಾರು 36 ವರುಶಗಳ ಹಿಂದೆಯೇ ಅಂದರೆ 1986 ರಲ್ಲೇ ಕನ್ನಡದಲ್ಲಿ ಪೂರ‍್ಣಪ್ರಮಾಣದ 3D ಚಿತ್ರವೊಂದು ಚಿತ್ರೀಕರಣಗೊಂಡು ಬಿಡುಗಡೆಯಾಗಿತ್ತು. ಆ ಚಿತ್ರದ ಹೆಸರು ‘ಕಾಡಿನಲ್ಲಿ ಜಾತ್ರೆ’. 3D ಬಗ್ಗೆ ಕೇಳಿರದ ಕಾಲದಲ್ಲೇ ಕನ್ನಡ ಚಿತ್ರರಂಗದಲ್ಲಿ ಈ ತಂತ್ರಜ್ನಾನವನ್ನ ಬಳಸಿ ಚಿತ್ರವನ್ನು ನಿರ‍್ಮಿಸಲಾಗಿತ್ತು ಎಂದರೆ, ನಿಜಕ್ಕೂ ಮೆಚ್ಚಲೇಬೇಕಾದ ವಿಶಯ. ಸಸ್ತಾ ಪ್ರೊಡಕ್ಶನ್ಸ್ ಅಡಿಯಲ್ಲಿ ನಿರ‍್ಮಾಣವಾದ ಈ ಚಿತ್ರವನ್ನು, ಎನ್. ಎಸ್. ದನಂಜಯ ನಿರ‍್ದೇಶಿಸಿದ್ದರೆ, ಜಯನನ್ ವಿನ್ಸೆಂಟ್ ಅವರ ಸಿನೆಮಾಟೋಗ್ರಪಿ ಇತ್ತು. ಇನ್ನು ತಾರಾಗಣಕ್ಕೆ ಬಂದರೆ ವಿಜೇಂದ್ರ ಹಾಗೂ ಅನುರಾದಾ ಮುಕ್ಯ ನಟರಾಗಿ ನಟಿಸಿದ್ದು, ಆರ್. ಎನ್. ಸುದರ‍್ಶನ್, ಸುಂದರ್ ಕ್ರಿಶ್ಣ ಅರಸ್, ಕೆ. ಎಂ. ರತ್ನಾಕರ್ ಇನ್ನಿತರರು ಸಹ ಕಲಾವಿದರಾಗಿ ನಟಿಸಿದ್ದಾರೆ.

(ಮಾಹಿತಿ ಮತ್ತು ಚಿತ್ರ ಸೆಲೆ: facebook.com, timesofindia.indiatimes.com, kannadamoviesinfo.wordpress.com, wikipedia.org, anaamikamathuu.wordpress.comijellh.com, thehindu.com, deccanherald.com, timesofindia.indiatimes.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications