ಹಾವಿನಹಾಳ ಕಲ್ಲಯ್ಯನ ವಚನದ ಓದು

– ಸಿ.ಪಿ.ನಾಗರಾಜ.

ಹೆಸರು: ಹಾವಿನಹಾಳ ಕಲ್ಲಯ್ಯ
ಕಸುಬು: ಚಿನ್ನ ಬೆಳ್ಳಿ ಮುಂತಾದ ಲೋಹದಿಂದ ಒಡವೆಗಳನ್ನು ಮಾಡುವ ಅಕ್ಕಸಾಲೆ.
ಅಂಕಿತನಾಮ: ಮಹಾಲಿಂಗ ಕಲ್ಲೇಶ್ವರ
ದೊರೆತಿರುವ ವಚನಗಳು: 105

***

ತನ್ನ ಗುಣವ ಹೊಗಳಬೇಡ
ಇದಿರ ಗುಣವ ಹಳಿಯಬೇಡ
ಕೆಮ್ಮನೊಬ್ಬರ ನುಡಿಯಬೇಡ
ನುಡಿದು ನುಂಪಿತನಾಗಬೇಡ
ಇದಿರ ಮುನಿಯಿಸಬೇಡ
ತಾ ಮುನಿಯಬೇಡ
ತಾನು ಬದುಕವೈಸುದಿನ
ಸಮತೆ ಸಮಾಧಾನ ತುಂಬಿ
ತುಳುಕದಿರಬೇಕು
ಮಹಾಲಿಂಗ ಕಲ್ಲೇಶ್ವರದೇವರ
ನಿಚ್ಚಳ ನಿಜವರಿದಡೆ
ಬಚ್ಚಬರಿಯ ಸಹಜ ಸಮಾಧಾನವಳವಟ್ಟಿರಬೇಕು.

ವ್ಯಕ್ತಿಯು ಒಲವು, ನಲಿವು ಮತ್ತು ನೆಮ್ಮದಿಯಿಂದ ಕೂಡಿದ ಜೀವನವನ್ನು ನಡೆಸಲು ಯಾವ ಬಗೆಯ ಅರಿವು ಮತ್ತು ಎಚ್ಚರದ ನಡೆನುಡಿಗಳನ್ನು ಹೊಂದಿರಬೇಕು ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

ಗುಣ=ನಡತೆ/ನಡೆನುಡಿ; ಹೊಗಳು=ಕೊಂಡಾಡು/ಬಣ್ಣಿಸು;

ತನ್ನ ಗುಣವ ಹೊಗಳಬೇಡ=ಇತರರ ಮುಂದೆ ನಿನ್ನ ನಡೆನುಡಿಯನ್ನೇ ಬಲು ದೊಡ್ಡದೆಂದು ಬಣ್ಣಿಸಬೇಡ. ಏಕೆಂದರೆ ಹಾಗೆ ಹೊಗಳಿಕೊಳ್ಳುವುದರಿಂದ “ಇತರರಿಗಿಂತ ನೀನೊಬ್ಬನೇ ಉತ್ತಮನೆಂಬ ಅಹಂಕಾರವನ್ನು ಮೆರೆಸಿದಂತಾಗುತ್ತದೆ.”;

ಇದಿರ=ಇತರರ/ಮತ್ತೊಬ್ಬರ/ಬೇರೆಯವರ; ಹಳಿ=ನಿಂದಿಸು/ತೆಗಳು/ಹೀಯಾಳಿಸು;

ಇದಿರ ಗುಣವ ಹಳಿಯಬೇಡ=ಇತರರ ನಡೆನುಡಿಯಲ್ಲಿ ಕಂಡುಬರುವ ಸಂಗತಿಗಳನ್ನು ಎತ್ತಿ ಹಿಡಿದು ತೆಗಳಬೇಡ. ಏಕೆಂದರೆ ಮತ್ತೊಬ್ಬರನ್ನು ನಿಂದಿಸುವಾಗ ನೀನು ಆಡುವ ಮಾತುಗಳು ಅವರ ಮನಸ್ಸಿಗೆ ನೋವನ್ನು ಉಂಟುಮಾಡುವುದರ ಜತೆಗೆ ಅವರ ವ್ಯಕ್ತಿತ್ವವನ್ನೇ ಗಾಸಿಗೊಳಿಸುತ್ತವೆ;

ಕೆಮ್ಮನೆ+ಒಬ್ಬರ; ಕೆಮ್ಮನೆ=ಸುಮ್ಮನೆ/ಕಾರಣವೇ ಇಲ್ಲದೆ; ನುಡಿ=ಹೇಳು/ಮಾತನಾಡು;

ಕೆಮ್ಮನೊಬ್ಬರ ನುಡಿಯಬೇಡ=ಯಾವುದೇ ವ್ಯಕ್ತಿಯ ಬಗ್ಗೆ ಇಲ್ಲಸಲ್ಲದ ಕತೆಯನ್ನು ಕಟ್ಟಿ , ಸುಮ್ಮಸುಮ್ಮನೆ ಕೆಟ್ಟ ಮಾತುಗಳನ್ನಾಡಬೇಡ. ಏಕೆಂದರೆ ಇಂತಹ ಕಟ್ಟುಕತೆಗಳಿಂದ ವ್ಯಕ್ತಿಗಳ ನಡುವೆ ಇರಬೇಕಾದ ಪರಸ್ಪರ ನಂಬಿಕೆಯೇ ಹಾಳಾಗಿ, ವ್ಯಕ್ತಿಗಳ ಮನದಲ್ಲಿ ಅನುಮಾನ, ಆತಂಕ ಮತ್ತು ಹಗೆತನದ ಒಳಮಿಡಿತಗಳು ಕಾಡತೊಡಗಿ, ಇಡೀ ಸಮಾಜದ ನೆಮ್ಮದಿಯೇ ಹಾಳಾಗುತ್ತದೆ;

ನುಡಿದು=ಮಾತನಾಡಿ/ಒಬ್ಬರಿಗೆ ವಾಗ್ದಾನವನ್ನು ನೀಡಿ; ನುಂಪಿತನ್+ಆಗಬೇಡ; ನುಂಪಿತ=ಹಿಂಜರಿಯುವುದು/ಜಾರಿಕೊಳ್ಳುವುದು/ನುಣುಚಿಕೊಳ್ಳುವುದು;

ನುಡಿದು ನುಂಪಿತನಾಗಬೇಡ=ಇತರರಿಗೆ ನೆರವನ್ನು ನೀಡುವ ಮಾತುಗಳನ್ನಾಡಿ, ಅನಂತರ ಕೊಟ್ಟ ಮಾತಿಗೆ ತಪ್ಪಿ ನಡೆಯಬೇಡ. ಏಕೆಂದರೆ ನೀನು ಆಡಿದ ಮಾತಿಗೆ ನೀನೇ ಜವಾಬ್ದಾರನಾಗದೆ ನುಣುಚಿಕೊಂಡರೆ, ಅದರಿಂದ ಮುಂದಿನ ದಿನಗಳಲ್ಲಿ ನೀನು ಆಡುವ ಮಾತಿಗೆ ಯಾವುದೇ ಬೆಲೆಯಿಲ್ಲವಾಗುತ್ತದೆ. ಅಂತಿಮವಾಗಿ ನಿನ್ನ ವ್ಯಕ್ತಿತ್ವಕ್ಕೂ ಬೆಲೆಯಿಲ್ಲವಾಗುತ್ತದೆ;

ಮುನಿ=ಕೋಪ/ಸಿಟ್ಟು/ಆಕ್ರೋಶ; ಮುನಿಯಿಸು=ಕೋಪಗೊಳ್ಳುವಂತೆ ಮಾಡು/ಸಿಟ್ಟನ್ನು ತರಿಸು; ತಾ=ತಾನು/ನೀನು;

ಇದಿರ ಮುನಿಯಿಸಬೇಡ, ತಾ ಮುನಿಯಬೇಡ=ಇತರರು ಕೋಪಗೊಳ್ಳುವಂತೆ ಮಾಡಬೇಡ ಅಂತೆಯೇ ನೀನೂ ಕೋಪಗೊಳ್ಳಬೇಡ. ಏಕೆಂದರೆ ವ್ಯಕ್ತಿಗಳ ಮನದಲ್ಲಿ ಕೆರಳುವ ಕೋಪವು ಜೀವನದ ಎಲ್ಲಾ ಬಗೆಯ ದುರಂತಗಳಿಗೆ ನಾಂದಿಯಾಗುತ್ತದೆ. ಕೋಪಗೊಂಡ ಗಳಿಗೆಯಲ್ಲಿ ವ್ಯಕ್ತಿಗಳು “ ಯಾವ ನುಡಿಗಳನ್ನು ಆಡಬೇಕು/ಆಡಬಾರದು; ಯಾವುದನ್ನು ಮಾಡಬೇಕು/ಮಾಡಬಾರದು” ಎಂಬ ವಿವೇಕವನ್ನು ಕಳೆದುಕೊಂಡು ಒಬ್ಬರು ಮತ್ತೊಬ್ಬರ ಮೇಲೆ ಹಲ್ಲೆ ಮಾಡತೊಡಗುವುದರಿಂದ ಸಾವು ನೋವು ಉಂಟಾಗುತ್ತದೆ;

ತಾನು=ವ್ಯಕ್ತಿಯು; ಬದುಕುವ+ಏಸು+ದಿನ; ಏಸು=ಎಶ್ಟು; ಏಸುದಿನ=ಎಶ್ಟು ದಿನಗಳ ಕಾಲ/ವರುಶಗಳ ಕಾಲ;

ತಾನು ಬದುಕವೈಸುದಿನ=ನೀನು ಬದುಕಿರುವಶ್ಟು ದಿನ; ಸಾವು ಬರುವ ಕೊನೆ ಗಳಿಗೆಯವರೆಗೂ ಅಂದರೆ ಜೀವನದ ಉದ್ದಕ್ಕೂ;

ಸಮತೆ=ಯಾವುದನ್ನೂ ಇಲ್ಲವೇ ಯಾರನ್ನೂ ಮೇಲು/ಕೀಳು ಎಂದು ತಾರತಮ್ಯ ಮಾಡದೆ ಸಮಾನವಾಗಿ ಕಾಣುವುದು; ಸಮಾಧಾನ=ತಾಳ್ಮೆ/ಸಹನೆ/ಕೋಪವನ್ನು ಹತ್ತಿಕ್ಕಿಕೊಂಡು ತಾಪವನ್ನು ಸಹಿಸಿಕೊಂಡು ಬಾಳುವುದು; ತುಂಬಿ=ಕೂಡಿಕೊಂಡು/ಪೂರ್‍ಣವಾಗಿ ಪಡೆದುಕೊಂಡು; ತುಳುಕು=ಪಾತ್ರೆಗಳಲ್ಲಿ ಇಲ್ಲವೇ ಕೆರೆಕಟ್ಟೆಬಾವಿಗಳಲ್ಲಿ ನೀರು ತುಂಬಿ ಹೊರಚೆಲ್ಲುವುದು;

ತುಳುಕದಿರಬೇಕು=ವ್ಯಕ್ತಿಯು ತನ್ನ ಜೀವನದ ಯಾವುದೇ ಸನ್ನಿವೇಶದಲ್ಲಿಯೂ ಜಾತಿ/ಮತ/ರೂಪ/ವಿದ್ಯೆ/ಸಂಪತ್ತು/ಆಡಳಿತದ ಗದ್ದುಗೆಯ ಕಾರಣದಿಂದ ಇತರರ ಜತೆಯಲ್ಲಿ ಸೊಕ್ಕಿನಿಂದ ನಡೆದುಕೊಳ್ಳಬಾರದು;

ಸಮತೆ ಸಮಾಧಾನ ತುಂಬಿ ತುಳುಕದಿರಬೇಕು=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ಪ್ರತಿಯೊಬ್ಬ ವ್ಯಕ್ತಿಯು ಇತರರನ್ನು ಜಾತಿ, ಮತ, ಲಿಂಗ, ಪ್ರಾಂತ್ಯ, ಬಡತನ ಇಲ್ಲವೇ ಸಿರಿತನದ ಕಾರಣಕ್ಕಾಗಿ ತಾರತಮ್ಯದಿಂದ ನೋಡದೆ, ಎಲ್ಲರೊಡನೆ ಹೊಂದಿಕೊಂಡು ಬಾಳುವಂತಹ ತಾಳ್ಮೆಯ ನಡೆನುಡಿಗಳನ್ನು ಹೊಂದಿರಬೇಕು. ಯಾವುದೇ ಸನ್ನಿವೇಶದಲ್ಲಿಯೂ ವ್ಯಕ್ತಿಯು “ತಾನೇ ದೊಡ್ಡವನು/ತಾನೊಬ್ಬನೇ ಉತ್ತಮ“ ಎಂಬ ಅಹಂಕಾರದಿಂದ ನಡೆದುಕೊಳ್ಳಬಾರದು;

ಮಹಾಲಿಂಗ ಕಲ್ಲೇಶ್ವರದೇವ=ದೇವರಾದ ಶಿವನ ಮತ್ತೊಂದು ಹೆಸರು/ಹಾವಿನಹಾಳ ಕಲ್ಲಯ್ಯನವರ ವಚನಗಳ ಅಂಕಿತನಾಮ; ನಿಚ್ಚಳ=ಸರಿಯಾಗಿ ಮತ್ತು ಚೆನ್ನಾಗಿ ಕಾಣುವ; ನಿಜ+ಅನ್+ಅರಿದಡೆ; ನಿಜ=ವಾಸ್ತವ/ದಿಟ/ಸತ್ಯ; ಅನ್=ಅನ್ನು; ಅರಿ=ತಿಳಿ; ಅರಿದಡೆ=ತಿಳಿದರೆ;

ಮಹಾಲಿಂಗ ಕಲ್ಲೇಶ್ವರದೇವರ ನಿಚ್ಚಳ ನಿಜವನರಿದಡೆ=ಹನ್ನೆರಡನೆಯ ಶತಮಾನದ ಶಿವಶರಣಶರಣೆಯರು ನಿಜದ ನಡೆನುಡಿಯನ್ನೇ ಶಿವನೆಂದು ಅರಿತು ಬಾಳುತ್ತಿದ್ದರು. ಅವರ ಪಾಲಿನ ದೇವರು ಕಲ್ಲು/ಮಣ್ಣು/ಮರ/ಲೋಹದ ವಿಗ್ರಹರೂಪದ ಶಿವನಾಗಿರಲಿಲ್ಲ. ಆದ್ದರಿಂದಲೇ ಅವರು ಸರ್‍ವಸಮಾನತೆಯ ಸಮಾಜ ರೂಪುಗೊಳ್ಳುವುದಕ್ಕೆ ವ್ಯಕ್ತಿಗಳ ಒಳ್ಳೆಯ ನಡೆನುಡಿಗಳು ಅಗತ್ಯವೇ ಹೊರತು ದೇವರ ಪೂಜೆ ಇಲ್ಲವೇ ಯಾಗ ಮುಂತಾದ ಆಚರಣೆಗಳ ಅಗತ್ಯವಿಲ್ಲವೆಂಬ ನಿಲುವನ್ನು ಹೊಂದಿದ್ದರು; “ಸರ್‍ವಸಮಾನತೆಯ ಸಮಾಜ” ಎಂದರೆ ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಅನ್ನ,ಬಟ್ಟೆ,ವಸತಿ,ವಿದ್ಯೆ,ಉದ್ಯೋಗ,ಆರೋಗ್ಯ ದೊರೆಯುವಂತಹ ಸಾಮಾಜಿಕ ಮತ್ತು ಹಣಕಾಸಿನ ವ್ಯವಸ್ತೆಯು ಇರುವುದು;

ಬಚ್ಚಬರಿಯ=ಕೇವಲ/ಅಷ್ಟು ಮಾತ್ರ; ಸಹಜ=ದಿಟ/ವಾಸ್ತವ; ಸಮಾಧಾನವು+ಅಳವಟ್ಟಿರಬೇಕು;

ಅಳವಡು=ಸೇರು/ಒಪ್ಪು/ಹೊಂದಿಕೆಯಾಗು;

ಬಚ್ಚಬರಿಯ ಸಹಜ ಸಮಾಧಾನವಳವಟ್ಟಿರಬೇಕು=ಮಾನವ ಸಮುದಾಯದ ಬದುಕು ನೆಮ್ಮದಿಯಿಂದ ಕೂಡಿರಬೇಕಾದರೆ ವ್ಯಕ್ತಿಯ ಮಯ್ ಮನಸ್ಸು ತಿಳಿಯಾಗಿರಬೇಕು. ಈ ರೀತಿ ಇರಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯು ತನಗೆ ಮತ್ತು ತನ್ನ ಕುಟುಂಬಕ್ಕೆ ಒಲವು ನಲಿವು ನೆಮ್ಮದಿಯ ಬದುಕನ್ನು ಬಯಸುವಂತೆಯೇ ಸಹಮಾನವರಿಗೂ ಅವೆಲ್ಲವೂ ದೊರೆಯುಂತಹ ರೀತಿಯಲ್ಲಿ ಒಳ್ಳೆಯ ನಡೆನುಡಿಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಿರಬೇಕು. ಅಂದರೆ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ದುಡಿಮೆಯು ಅವನನ್ನು ಒಳಗೊಂಡಂತೆ ಎಲ್ಲರಿಗೂ ಒಳಿತನ್ನುಂಟುಮಾಡುವಂತಿರಬೇಕು.

(ಚಿತ್ರ ಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: