ಮರೆತು ಹೋಗಿರುವ ಕ್ರಿಕೆಟ್ ನ ಅದ್ಯಾಯಗಳು – 2

– ರಾಮಚಂದ್ರ ಮಹಾರುದ್ರಪ್ಪ.

ವಿಜಯನಗರಮ್ ನ ಮಹಾರಾಜ ಎಂಬ ಕುಟಿಲ ನಾಯಕ

ಬಾರತದ ಸ್ವಾತಂತ್ರಕ್ಕೂ ಮುನ್ನ ದೇಶದ ಕ್ರಿಕೆಟ್ ಸಂಸ್ತೆ ಇನ್ನೂ ಅಂಬೆಗಾಲಿಡುತ್ತಿದ್ದ ಹೊತ್ತಿನಲ್ಲಿ ಆಟ ಮತ್ತು ಆಡಳಿತದ ಚಟುವಟಿಕೆಗಳು ವ್ರುತ್ತಿಪರ ಮಾದರಿಯಲ್ಲಿ ನಡೆಯುತ್ತಿರಲಿಲ್ಲ ಎಂಬುದು ಎಲ್ಲರಿಗೂ ತಿಳಿದೇ ಇದೆ. ಇಂತಹ ಪರಿಸ್ತಿತಿಯಲ್ಲಿ ಹಣಬಲವುಳ್ಳವರು ಅದಿಕಾರದ ಚುಕ್ಕಾಣಿ ಹಿಡಿಯುವುದು ಸರ‍್ವೇ ಸಾಮಾನ್ಯವಾಗಿತ್ತು. ಹೀಗೆ ಆಟದಲ್ಲಿ ಹೇಳಿಕೊಳ್ಳುವಂತಹ ಪ್ರತಿಬೆ ಇಲ್ಲದಿದ್ದರೂ ತಮ್ಮ ವರ‍್ಚಸ್ಸು ಹಾಗೂ ಪ್ರಬಾವದಿಂದ ಬಾರತದ 1936 ರ ಇಂಗ್ಲೆಂಡ್ ಪ್ರವಾಸಕ್ಕೆ ವಿಜ್ಜಿ ಎಂದೇ ಪ್ರಕ್ಯಾತರಾಗಿದ್ದ ವಿಜಯನಗರಮ್ ನ ಮಹಾರಾಜ ನಾಯಕರಾಗಿ ಆಯ್ಕೆಯಾಗುತ್ತಾರೆ. ತಾನೊಬ್ಬ ಮಹಾರಾಜ ಇತರರಿಗಿಂತ ಶ್ರೇಶ್ಟ ಎಂದು ಅಂಗಳದ ಒಳಗೂ ಹೊರಗೂ ತಮ್ಮ ಗತ್ತನ್ನು ತೋರುತ್ತಿದ್ದ ವಿಜ್ಜಿ ತಮ್ಮ ತಂಡದ ಕೆಲವು ಪ್ರತಿಬಾನ್ವಿತ ಆಟಗಾರರನ್ನೇ ದ್ವೇಶಿಸುತ್ತಿದ್ದದು ಇತಿಹಾಸದ ಪುಟಗಳಲ್ಲಿ ದಾಕಲಾಗಿದೆ. ಬಾರತದ ಮಾಜಿ ನಾಯಕ ಸಿ.ಕೆ ನಾಯ್ಡುರ ಮೇಲೆ ವಿಜ್ಜಿರಿಗೆ ಅಸಹನೀಯ ಮಟ್ಟದ ಅಸೂಯೆ ಇದ್ದಿತು. ಹಾಗಾಗಿ ಆ ಪ್ರವಾಸದ ವೇಳೆ ನಾಯ್ಡುರನ್ನು ಊಟದ ವೇಳೆ ಅವಮಾನಿಸಿದ ಬೌಲರ್ ಒಬ್ಬರಿಗೆ ಟೆಸ್ಟ್ ಪಾದಾರ‍್ಪಣೆ ಮಾಡುವ ಅವಕಾಶ ವಿಜ್ಜಿ ನೀಡುತ್ತಾರೆ. ಇದಲ್ಲದೆ ಇದೇ ಪ್ರವಾಸದ ಕೌಂಟಿ ತಂಡದೆದುರಿನ ಅಬ್ಯಾಸ ಪಂದ್ಯದ ವೇಳೆ ಪ್ಯಾಡ್ ತೊಟ್ಟು ಬ್ಯಾಟಿಂಗ್ ಗೆ ಸಿದ್ದರಾಗಿದ್ದ ದಿಗ್ಗಜ ಬ್ಯಾಟ್ಸ್ಮನ್ ಲಾಲಾ ಅಮರ‍್ನಾತ್ ರನ್ನು ಬೇಕೆಂದೇ ಕೆಳಗಿನ ಕ್ರಮಾಂಕದಲ್ಲಿ ಆಡಲು ವಿಜ್ಜಿ ಕಳಿಸುತ್ತಾರೆ. ತಮ್ಮ ಬ್ಯಾಟಿಂಗ್ ಸರದಿಗಾಗಿ ಕಾದು ಹತಾಶರಾಗಿದ್ದ ಲಾಲಾ ಸಂಯಮ ಕಳೆದುಕೊಂಡು ಬೇಗನೆ ಔಟ್ ಆಗಿ ಬಂದು ಡ್ರೆಸ್ಸಿಂಗ್ ಕೋಣೆಯಲ್ಲಿ ತಮ್ಮ ತಾಯ್ನುಡಿ ಪಂಜಾಬಿಯಲ್ಲಿ ತಮ್ಮಶ್ಟಕ್ಕೆ ತಾವೇ ಶಪಿಸುತ್ತಾ ಅಸಮಾದಾನವನ್ನು ಹೊರಹಾಕುತ್ತಾರೆ. ಇದನ್ನು ಗಮನಿಸಿದ ವಿಜ್ಜಿ ಲಾಲಾ ತಮ್ಮನ್ನು ಅವಾಚ್ಯ ಪದಗಳಿಂದ ನಿಂದಿಸಿದರೆಂಬ ಆರೋಪ ಹೊರಿಸಿ ತಡಮಾಡದೆ ಒಡನೇ ಅವರನ್ನು ಬಾರತಕ್ಕೆ ವಾಪಸ್ಸು ಕಳಿಸುತ್ತಾರೆ. ಬಳಿಕ ಟೆಸ್ಟ್ ಪಂದ್ಯದ ವೇಳೆ ತಂಡದ ಆರಂಬಿಕ ಬ್ಯಾಟ್ಸ್ಮನ್ ವಿಜಯ್ ಮರ‍್ಚೆಂಟ್ ರನ್ನು ರನ್ ಔಟ್ ಮಾಡಿಸಿದರೆ ಬಂಗಾರದ ಕೈಗಡಿಯಾರ ನೀಡುವುದಾಗಿ ಸಯ್ಯದ್ ಮುಶ್ತಾಕ್ ಅಲಿರಿಗೆ ವಿಜ್ಜಿ ಆಮಿಶ ಒಡ್ಡಿದರೂ ಅಲಿ ಅವರ ಮಾತಿಗೆ ಸೊಪ್ಪು ಹಾಕದೆ ಒಳ್ಳೆ ಜೊತೆಯಾಟ ಆಡಿದ್ದು ಈಗ ಇತಿಹಾಸ. ಕೌಂಟಿ ಪಂದ್ಯಗಳಲ್ಲಿ ತಾವು ಬ್ಯಾಟ್ ಮಾಡಲು ಬಂದಾಗ ಸುಳುವಾದ ಪುಲ್ ಟಾಸ್ ಬೌಲ್ ಮಾಡಿದರೆ ಎದುರಾಳಿ ತಂಡದ ನಾಯಕನಿಗೆ ಬಂಗಾರದ ಕೈಗಡಿಯಾರ ನೀಡುವುದಾಗಿ ವಿಜ್ಜಿ ಆಮಿಶ ತೋರಿರುವ ದಾಕಲೆಗಳೂ ಇವೆ. ಇಂತಹ ಆಟಾಟೋಪಗಳನ್ನು ಇಂದಿನ ದಿನಗಳಲ್ಲಿ ಊಹಿಸಿಕೊಳ್ಳಲು ಸಾದ್ಯವಿಲ್ಲದಿದ್ದರೂ ಆ ಹಂತದಿಂದ ಈಗ ವ್ರುತ್ತಿಪರತೆಯನ್ನು ಮೈಗೂಡಿಸಿಕೊಂಡಿರುವ ಒಂದು ಕ್ರಿಕೆಟ್ ಸಂಸ್ತೆ ದೇಶದ ಕ್ರಿಕೆಟ್ ಆಡಳಿತವನ್ನು ನಿಬಾಯಿಸುತ್ತಿರುವುದು ಆಟ ಎಶ್ಟು ಮಾರ‍್ಪಾಡಾಗಿದೆ ಎಂಬುದುದಕ್ಕೆ ಎತ್ತುಗೆ. 1936 ರ ಈ ಪ್ರವಾಸದುದ್ದಕ್ಕೂ ಬೌಲ್ ಮಾಡದೆ ಸದಾ 9/10 ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ವೈಪಲ್ಯ ಕಂಡಿದ್ದ ವಿಜ್ಜಿರ ದಾಕಲೆಯನ್ನು ಇಂದು ಕಂಡಾಗ ಇವರು ನಾಯಕರಾಗುವುದು ದೂರದ ಮಾತು, ತಂಡದಲ್ಲಿಯೂ ಇಂತಹ ಆಟಗಾರರಿಗೆ ಅವಕಾಶ ಇರಕೂಡದು ಎಂದು ಅನಿಸದೇ ಇರದು. 2-0 ಇಂದ 3 ಟೆಸ್ಟ್ ಗಳ ಸರಣಿಯನ್ನು ಸೋತು ಹಿಂದಿರುಗಿದ ಬಾರತದ ಪರ ಕುಟಿಲ ನಾಯಕ ವಿಜ್ಜಿ ಮತ್ತೆಂದೂ ಆಡದದ್ದೊಂದೇ ಸಮಾದಾನಕರ ಸಂಗತಿ.

ನಾಲ್ಕು ನಾಯಕರನ್ನು ಕಂಡಿದ್ದ 1958/59 ರ ಸರಣಿ

ಬಾರತದ ಪ್ರಸ್ತುತ ಕ್ರಿಕೆಟ್ ತಂಡ ನಾಯಕ ರೋಹಿತ್ ಶರ‍್ಮ ಆಗಿದ್ದರೂ ಕಾರಣಾಂತರಗಳಿಂದ ರಾಹುಲ್, ಪಂತ್, ದವನ್ ಹಾಗೂ ಪಾಂಡ್ಯ ಕೂಡ ಕೆಲವು ಸರಣಿಗಳಿಗೆ ನಾಯಕರಾಗಿದ್ದು ಇತ್ತೀಚಿಗೆ ನಾವು ಕಂಡಿದ್ದೇವೆ. ಆದರೆ ವೆಸ್ಟ್ಇಂಡೀಸ್ ಎದುರಿನ 1958/59 ರ ತವರಿನ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ನಾಲ್ಕು ಬೇರೆ-ಬೇರೆ ನಾಯಕರನ್ನು ಬಾರತ ನೇಮಿಸಿದ್ದು ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ಇಂದಿಗೂ ಒಂದು ದಾಕಲೆಯೇ! ಅಸಲಿಗೆ ಈ ಸರಣಿಗೆ ಪೂರ‍್ಣಪ್ರಮಾಣದ ನಾಯಕರಾಗಿ ಗುಲಾಮ್ ಅಹಮದ್ ರನ್ನು ಮೊದಲು ಆಯ್ಕೆ ಮಾಡಲಾಗಿರುತ್ತದೆ. ಆದರೆ ಪೆಟ್ಟುಮಾಡಿಕೊಂಡು ಬಾಂಬೆಯ ಮೊದಲ ಟೆಸ್ಟ್ ನಿಂದ ಅಹಮದ್ ಹಿಂದೆ ಸರಿದಾಗ ಪಾಲಿ ಉಮ್ರಿಗಾರ್ ರನ್ನು ನಾಯಕರನ್ನಾಗಿ ನೇಮಿಸಲಾಗುತ್ತದೆ. ಬಳಿಕ ಎರಡನೇ ಕಾನ್ಪುರ್ ಟೆಸ್ಟ್ ಗೆ ನಾಯಕರಾಗಿ ಮರಳಿದ ಅಹಮದ್ ಮೂರನೇ ಕೊಲ್ಕತಾ ಟೆಸ್ಟ್ ಗೂ ನಾಯಕರಾಗಿ ಮುಂದುವರೆಯುತ್ತಾರೆ. ಆದರೆ ತಾವು ನಾಯಕರಾಗಿದ್ದ ಎರಡೂ ಪಂದ್ಯಗಳಲ್ಲಿ ತಂಡ ಅನುಬವಿಸಿದ ಹೀನಾಯ ಸೋಲಿನಿಂದ ಬೇಸತ್ತು ಆಟದಿಂದಲೇ ಅಹಮದ್ ದೂರ ಸರಿಯುತ್ತಾರೆ. ಹಾಗಾಗಿ ನಾಲ್ಕನೇ ಮದ್ರಾಸ್ ಟೆಸ್ಟ್ ಗೆ ಆಯ್ಕೆ ಮಂಡಳಿ ಮತ್ತೊಮ್ಮೆ ಉಮ್ರಿಗಾರ್ ರನ್ನು ಮುಂದಾಳುವಾಗಿ ನೇಮಿಸಿದರೂ ಆಯ್ಕೆಗಾರರು ಜಸ್ಸು ಪಟೇಲ್ ರಿಗೆ ಅವಕಾಶ ನೀಡಲೇಬೇಕು ಎಂದು ಒತ್ತಡ ಹೇರಿದ್ದರ ಎದುರು ಪ್ರತಿಬಟಿಸಿ ಕಡೇ ಗಳಿಗೆಯಲ್ಲಿ ಉಮ್ರಿಗಾರ್ ನಾಯಕನ ಪದವಿಗೆ ರಾಜೀನಾಮೆ ನೀಡುತ್ತಾರೆ. ಆಗ ವಿದಿ ಇಲ್ಲದೆ ತುರ‍್ತಾಗಿ ವಿನೂ ಮಂಕಡ್ ರನ್ನು ನಾಲ್ಕನೇ ಟೆಸ್ಟ್ ಗೆ ನಾಯಕ ಎಂದು ಗೋಶಿಸಲಾಗುತ್ತದೆ. ಮದ್ರಾಸ್ ಟೆಸ್ಟ್ ನಲ್ಲೂ ದೊಡ್ಡ ಸೋಲುಂಡದ್ದರಿಂದ ದೆಹಲಿಯ ಐದನೇ ಹಾಗೂ ಕಡೇ ಟೆಸ್ಟ್ ಗೆ ಮಂಕಡ್ ರನ್ನು ವಜಾಗೊಳಿಸಿ ಹೇಮು ಅದಿಕಾರಿರನ್ನು ನಾಯಕರಾಗಿ ಮಾಡಲಾಗುತ್ತದೆ. ಈ ಪಂದ್ಯ ಡ್ರಾ ಆದರೂ ಪ್ರವಾಸಿ ವಿಂಡೀಸ್ 3-0 ರಿಂದ ಸರಣಿಯನ್ನು ಗೆದ್ದು ಬೀಗುತ್ತದೆ. ಹೀಗೆ ಒಂದೇ ಸರಣಿಯಲ್ಲಿ ಉಮ್ರಿಗಾರ್, ಗುಲಾಮ್ ಅಹಮದ್, ವಿನೂ ಮಂಕಡ್ ಹಾಗೂ ಹೇಮು ಅದಿಕಾರಿರನ್ನು ಸೇರಿಸಿ ಒಟ್ಟು ನಾಲ್ಕು ನಾಯಕರನ್ನು ಕಂಡಿದ್ದು ಅಂತರಾಶ್ಟ್ರೀಯ ಕ್ರಿಕೆಟ್ ನ ಅತ್ಯಂತ ವಿಲಕ್ಶಣ ಗಟನೆ! ತಮಾಶೆ ಎಂದರೆ ಈ ಸರಣಿಯ ಪ್ರಹಸನ ಸಾಲದು ಎಂಬಂತೆ ಆನಂತರದ ಇಂಗ್ಲೆಂಡ್ ಪ್ರವಾಸಕ್ಕೆ ಹೊಸ ನಾಯಕರಾಗಿ ದತ್ತಾ ಗಾಯೆಕ್ವಾಡ್ ರನ್ನು ಆಯ್ಕೆ ಮಾಡಲಾಗುತ್ತದೆ!

ಗೆಟ್ ಔಟ್ ಎಂದಿದ್ದ ಬಾರತದ ಹೈ ಕಮಿಶನರ್

ಬಾರತದ 1974 ರ ಇಂಗ್ಲೆಂಡ್ ಪ್ರವಾಸ ಸಮ್ಮರ್ ಆಪ್ 42 ಎಂದೇ ಕುಕ್ಯಾತಿ ಪಡೆದಿದೆ. ಲಾರ‍್ಡ್ಸ್ ನಲ್ಲಿ ಕೇವಲ 42 ರನ್ ಗಳಿಗೆ ಆಲ್ ಔಟ್ ಆಗುವುದಲ್ಲದೇ ಟೆಸ್ಟ್ ಸರಣಿಯನ್ನು 3-0 ಹಾಗೂ ಒಂದು ದಿನದ ಸರಣಿಯನ್ನು 2-0 ರಿಂದ ಸೋತು ಬಾರತ ತೀವ್ರ ಮುಜುಗರಕ್ಕೊಳಗಾಗಿರುತ್ತದೆ. ಇದಲ್ಲದೆ ಅಂಗಳದ ಹೊರಗೂ ನಾನಾ ಅವಮಾನಗಳನ್ನು ತಂಡ ಎದುರಿಸಬೇಕಾಗಿ ಬಂದದ್ದು ದುರಂತವೇ ಸರಿ. ಅದರಲ್ಲಿಯೂ ಲಂಡನ್ ನಲ್ಲಿ ಪಾರ‍್ಟಿಗೆಂದು ಆಹ್ವಾನಿಸಿದ್ದ ಬಾರತದ ಹೈ ಕಮಿಶನರ್ ನಾಯಕ ಅಜಿತ್ ವಾಡೇಕರ್ ರನ್ನು ಅವಮಾನಿಸಿದ್ದು ದೇಶದ ಕ್ರಿಕೆಟ್ ಇತಿಹಾಸದ ಅತ್ಯಂತ ಕಹಿ ಗಟನೆಗಳಲ್ಲೊಂದು. ಸಂಜೆ 6:30ಕ್ಕೆ ತಮ್ಮ ಅದಿಕ್ರುತ ನಿವಾಸಕ್ಕೆ ಬರುವಂತೆ ಬಾರತ ತಂಡಕ್ಕೆ ಹೈ ಕಮಿಶನರ್ ಆಮಂತ್ರಣ ನೀಡಿರುತ್ತಾರೆ. ಆದರೆ ಇದಕ್ಕೂ ಮುನ್ನ ಬಾರತೀಯ ಸ್ಟೇಟ್ ಬ್ಯಾಂಕ್ ನ ಇನ್ನೊಂದು ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಂಡ ಅಲ್ಲಿಂದ ಹೊರಡುವುದೇ ತಡ ಮಾಡಿಕೊಂಡು ಸುಮಾರು 40 ನಿಮಿಶ ತಡವಾಗಿ ಹೈ ಕಮಿಶನರ್ ರವರ ಸ್ತಳ ತಲುಪುತ್ತದೆ. ತಂಡದ ಎಲ್ಲಾ ಸದಸ್ಯರಿಗೂ ಮುನ್ನ ನಾಯಕ ವಾಡೇಕರ್ ಕಮಿಶನರ್ ರಿಗೆ ತಡವಾಗಿ ಬಂದದ್ದಕ್ಕೆ ಕ್ಶಮೆ ಕೋರಿ ಮಾತಾಡಿಸಲು ಮುಂದಾದಾಗ ಸಿಡಿಮಿಡಿಗೊಂಡ ಕಮಿಶನರ್ ಹೊರನಡೆಯುವಂತೆ ಏರು ದನಿಯಲ್ಲಿ ಹೇಳುತ್ತಾರೆ. ಅವಮಾನ ತಾಳಲಾರದೆ ಹೊರಬಂದು ಹ್ಯಾಪ್ ಮೊರೆಯಲ್ಲಿ ಸಿಗರೇಟ್ ಸೇದುತ್ತಾ ವಾಡೇಕರ್ ವಿಶಯ ತಿಳಿಸಿದಾಗ ಎಲ್ಲ ಆಟಗಾರರೂ ಸಿಟ್ಟಾಗಿ, ಇನ್ನು ಈ ದೊಡ್ಡ ಎಡೆಯಲ್ಲಿ ನಮಗಾದ ಅವಮಾನ ಸಾಕು, ಹೋಟೆಲ್ ಗೆ ಮರಳೋಣ ಎಂದು ಮಾತಾಡಿಕೊಳ್ಳುತ್ತಾರೆ. ಆಗ ಮ್ಯಾನೇಜರ್ ಹೇಮು ಅದಿಕಾರಿ ವಿಶಯವನ್ನು ದೊಡ್ಡದು ಮಾಡದೆ ಅವರನ್ನು ಕ್ಶಮಿಸಿ ಪಾರ‍್ಟಿಯಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಂಡು ಮನವೊಲಿಸಲು ಪ್ರಯತ್ನ ಪಟ್ಟರೂ ಯಾರೂ ಒಪ್ಪುವುದಿಲ್ಲ. ಕಡೆಗೆ ವಿಶಯದ ಗಂಬೀರತೆ ಅರಿತ ಹಿರಿಯ ಆಟಗಾರ ವೆಂಕಟರಾಗವನ್ ಎಲ್ಲರ ಮನವೊಲಿಸಿ ಪಾರ‍್ಟಿಗೆ ಕರೆದೊಯ್ಯುತ್ತಾರೆ. ತಂಡ ಒಳಹೊಕ್ಕುತ್ತಿದಂತೆಯೇ ನಾಯಕ ವಾಡೇಕರ್ ರನ್ನು ತಬ್ಬಿಕೊಂಡು ತಮ್ಮ ಕೆಟ್ಟ ವರ‍್ತನೆಗೆ ಕ್ಶಮೆ ಕೋರಿ ಹೈ ಕಮಿಶನರ್ ವಾತಾವರಣ ತಿಳಿಮಾಡಿದರೂ ಗಾಸಿಗೊಂಡಿದ್ದ ಆಟಗಾರರು ಕಾಟಾಚಾರಕ್ಕೆ ಕೆಲಹೊತ್ತು ಪಾರ‍್ಟಿಯಲ್ಲಿ ಪಾಲ್ಗೊಂಡು ಈ ಪ್ರಸಂಗಕ್ಕೆ ಮುಕ್ತಾಯ ಹಾಡುತ್ತಾರೆ.

ಸುದೀರ್ ನಾಯಕ್ ರ ಮೇಲೆ ಕಳ್ಳತನದ ಆರೋಪ

ಬಾರತದ ಪರ 1974 ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಬಾಂಬೆಯ ಸುದೀರ್ ನಾಯಕ್ ತಮ್ಮ ಪಾದಾರ‍್ಪಣೆಗೂ ಮುನ್ನವೇ ಬೇರೆಯದೇ ಕಾರಣಗಳಿಂದ ದೊಡ್ಡ ಸುದ್ದಿಯಾಗಿದ್ದು ಕ್ರಿಕೆಟ್ ಇತಿಹಾಸದ ಅಪರೂಪದ ವಿಲಕ್ಶಣ ಗಟನೆ. ಈ ಪ್ರವಾಸದ ವೇಳೆ ಒಂದು ಬಿಡುವಿನ ದಿನ ತಂಡದ ಇತರೆ ಆಟಗಾರರು ಸಿನಿಮಾ ನೋಡುವ ಕಾರ‍್ಯಕ್ರಮ ಮಾಡಿಕೊಂಡಿದ್ದರಿಂದ ತಮಗೆ ಬೇಕಾದ ವಸ್ತುಗಳನ್ನು ತರುವಂತೆ ಸುದೀರ್ ರಿಗೆ ಹೇಳಿರುತ್ತಾರೆ. ಮೊದಲು ಬೌಟಿಕ್ ಒಂದರಲ್ಲಿ ತಮಗಾಗಿ ಎರಡು ಜೊತೆ ಸಾಕ್ಸ್ ಕೊಂಡ ಸುದೀರ್ ಆ ಬಳಿಕ ಲಂಡನ್ ನ ಆಕ್ಸ್ಪರ‍್ಡ್ ಸ್ಟ್ರೀಟ್ ನ ಮಾರ‍್ಕ್ಸ್ ಅಂಡ್ ಸ್ಪೆನ್ಸರ್ ಅಂಗಡಿಗೆ ತೆರಳಿ ತಮ್ಮ ಸಹ ಆಟಗಾರರಿಗಾಗಿ ಇಪ್ಪತ್ತು ಜೊತೆ ಸಾಕ್ಸ್ ಗಳನ್ನು ಕೊಳ್ಳುತ್ತಾರೆ. ಇಪ್ಪತ್ತು ಜೊತೆ ಸಾಕ್ಸ್ ಗಳಿಗೆ ಹಣ ಕಟ್ಟುವ ಸಂದರ‍್ಬದಲ್ಲಿ ಎರಡು ಹೆಚ್ಚುವರಿ ಜೊತೆ ಸಾಕ್ಸ್ ಅನ್ನು ಕಂಡ ಅಂಗಡಿಯವರು ಸುದೀರ್ ರ ಮೇಲೆ ಕಳ್ಳತನದ ಆರೋಪ ಹೊರಿಸುತ್ತಾರೆ. ಇದು ಬೇರೆಡೆ ಕೊಂಡದ್ದೆಂದು ಸುದೀರ್ ಪರಿಪರಿಯಾಗಿ ವಿವರಿಸಿದರೂ ಯಾರೂ ಅವರ ಮಾತನ್ನು ಒಪ್ಪದೇ ಅವರ ಮೇಲೆ ದಾವೆ ಹೂಡುವುದಾಗಿ ಹೆದರಿಸುತ್ತಾರೆ. ವಾದ-ವಿವಾದಗಳಿಂದ ಸಮಯ, ಹಣ ಪೋಲು ಮಾಡುವ ಬದಲು ಸುದೀರ್ ರಿಗೆ ಪರಿಸ್ತಿತಿಯನ್ನು ಬಿಗಡಾಯಿಸಲು ಅವಕಾಶ ನೀಡದೆ ಮ್ಯಾಜಿಸ್ಟ್ರೇಟ್ ಮುಂದೆ ತಪ್ಪೊಪ್ಪಿಕೊಳ್ಳುವಂತೆ ಬಾರತದ ಮ್ಯಾನೇಜರ್ ಸಲಹೆ ನೀಡುತ್ತಾರೆ. ದೇಸೀ ಕ್ರಿಕೆಟ್ ನಿಂದ ಆಗಶ್ಟೇ ಹೊರಹೊಮ್ಮಿದ್ದ ಪ್ರಪಂಚ ನೋಡದ ಸುದೀರ್ ನಾಯಕ್ ದೊಡ್ಡವರ ಸಲಹೆ ನಿರಾಕರಿಸಲಾಗದೆ ಕಡೆಗೆ ಮಾಡದ ತಪ್ಪನ್ನು ತಮ್ಮ ಮೇಲೆ ಹೊರಿಸಿಕೊಂಡು ಪ್ರಕರಣಕ್ಕೆ ಇತಿಶ್ರೀ ಹಾಡಿದರೂ, ಆ ಕಳಂಕದಿಂದ ಅವರಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ ಎಂಬುದು ದಿಟ. ಈ ಪ್ರಸಂಗದ ಕುರಿತು ಬ್ಯಾಟಿಂಗ್ ದಂತಕತೆ ಸುನಿಲ್ ಗವಾಸ್ಕರ್ ತಮ್ಮ ಆತ್ಮಕತೆ ‘ಸನ್ನಿ ಡೇಸ್’ ನಲ್ಲಿ ಏನೂ ಅರಿಯದ ಅಮಾಯಕ ಸುದೀರ್ ನಾಯಕ್ ರಿಗೆ ಕೆಟ್ಟ ಸಲಹೆಯೆಂದಾದ ಮೋಸ ಎಂದು ಬಣ್ಣಿಸಿದ್ದಾರೆ. ಹೌದು! ಇಪ್ಪತ್ತು ಜೊತೆ ಸಾಕ್ಸ್ ಗೆ ಹಣ ಕಟ್ಟಲು ಮುಂದಾದವರು ಎರಡು ಜೊತೆ ಸಾಕ್ಸ್ ಕಳ್ಳತನ ಮಾಡುತ್ತಾರೆ ಎಂದರೆ ನಂಬಲಸಾದ್ಯವೆಂದು ನಮಗಿಂದು ಅನಿಸದೇ ಇರದು.

(ಚಿತ್ರಸೆಲೆ: sportskeeda.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: