ಡ್ರೈ ಪ್ರೂಟ್ಸ್ ಬೇಸನ್ ಉಂಡೆ

– ಸವಿತಾ.

ಬೇಕಾಗುವ ಸಾಮಾನುಗಳು

ಕಡಲೇ ಹಿಟ್ಟು – 2.5 ಲೋಟ
ಪುಟಾಣಿ ಅತವಾ ಹುರಿಗಡಲೆ – 1/4 ಲೋಟ
ಒಣ ಕೊಬ್ಬರಿ ತುರಿ – 1/4 ಲೋಟ
ಎಳ್ಳು – 1/4 ಲೋಟ
ಶೇಂಗಾ/ಕಡಲೇ ಬೀಜ – 1/4 ಲೋಟ
ಬಾದಾಮಿ – 10
ಗೋಡಂಬಿ – 10
ಒಣ ಕರ‍್ಜೂರ – 20
ಬೆಲ್ಲದ ಪುಡಿ – 1.5 ಲೋಟ
ಏಲಕ್ಕಿ – 3
ಲವಂಗ – 2
ಜಾಯಿಕಾಯಿ ಪುಡಿ – ಒಂದು ಚಿಟಿಕೆ
ಗಸಗಸೆ – 1/2 ಚಮಚ
ತುಪ್ಪ – 1.5 ಲೋಟ

ಮಾಡುವ ಬಗೆ

ಕಡಲೇ ಬೀಜ ಹುರಿದು ತೆಗೆಯಿರಿ. ನಂತರ ಸಿಪ್ಪೆ ತೆಗೆದು ಮಿಕ್ಸರ್ ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ. ಎಳ್ಳು ಹುರಿದು ನಂತರ ಪುಡಿ ಮಾಡಿ ಕೊಳ್ಳಿ. ಬಿಳಿ ಅತವಾ ಕರಿ ಬಳಸಬಹುದು. ಹುರಿಗಡಲೆಯನ್ನು ಹಾಗೇ ಮಿಕ್ಸರ್ ನಲ್ಲಿ ಪುಡಿ ಮಾಡಿ ತೆಗೆದಿಟ್ಟುಕೊಳ್ಳಿ. ಒಣ ಕೊಬ್ಬರಿ ತುರಿ, ಒಣ ಕರ‍್ಜೂರ, ಬಾದಾಮಿ, ಗೋಡಂಬಿ, ಏಲಕ್ಕಿ, ಲವಂಗ, ಗಸಗಸೆ, ಜಾಯಿಕಾಯಿ ಪುಡಿ ಮಾಡಿ ಇಟ್ಟುಕೊಳ್ಳಿ. ಒಂದೂ ಕಾಲು ಲೋಟ ತುಪ್ಪ ಹಾಕಿ ಕಡಲೇ ಹಿಟ್ಟು ಚೆನ್ನಾಗಿ ಹುರಿದು ಒಲೆ ಆರಿಸಿ ತೆಗೆದಿಡಿ.

ಬೆಲ್ಲ ಪುಡಿ ಮಾಡಿ ಸ್ವಲ್ಪ ಬಿಸಿ ಮಾಡಿ ಬೆಲ್ಲ ಕರಗಿಸಿ ತೆಗೆಯಿರಿ. ಅರ‍್ದ ಬಾಗ ಕರಗಿಸಿದ ಬೆಲ್ಲಕ್ಕೆ ಮತ್ತು ಎಲ್ಲ ಪುಡಿ, ಕಡಲೇ ಬೀಜ, ಎಳ್ಳು, ಹುರಿ ಗಡಲೆ, ಒಣ ಕೊಬ್ಬರಿ ಮಿಶ್ರಣ ಸೇರಿಸಿ. ಇನ್ನೊಮ್ಮೆ ಕೊಂಚ ಬಿಸಿ ಮಾಡಿ ಸ್ವಲ್ಪ ತುಪ್ಪ ಹಾಕಿ ತಿರುಗಿಸಿ ಇಳಿಸಿ ಉಂಡೆ ಕಟ್ಟಿ ಇಟ್ಟು ಕೊಳ್ಳಿ. ಇನ್ನುಳಿದ ಅರ‍್ದ ಬಾಗ ಕರಗಿಸಿದ ಬೆಲ್ಲ ಕಡಲೇ ಹಿಟ್ಟಿಗೆ ಹಾಕಿ ಬಿಸಿ ಮಾಡಿ ಚೆನ್ನಾಗಿ ತಿರುಗಿಸಿ ಇಳಿಸಿ. ಮಾಡಿಟ್ಟ ಉಂಡೆ ಕಡಲೇ ಹಿಟ್ಟಿನ ಮಿಶ್ರಣದಲ್ಲಿ ಹೊರಳಾಡಿಸಿ, ಉಂಡೆ ಕಟ್ಟಿಕೊಳ್ಳಿ. ಡ್ರೈ ಪ್ರೂಟ್ಸ್ ಬೇಸನ್ ಉಂಡೆ ಸವಿಯಲು ಸಿದ್ದ. ಒಳಗೆ ಡ್ರೈ ಪ್ರೂಟ್ಸ್ ಮಿಶ್ರಣ, ಮೇಲೆ ಕಡಲೇ ಹಿಟ್ಟಿನ ಉಂಡೆ ಮಿಶ್ರಣ ಬಾಯಿಗೆ ಸವಿಯಲು ಚೆನ್ನಾಗಿರುತ್ತದೆ. ಹಬ್ಬದ ದಿನ ನೈವೇದ್ಯ ಮಾಡಿ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications