ಶೇನ್ ವಾರ‍್ನ್ ಎಂಬ ಸ್ಪಿನ್ ದೈತ್ಯ

– ರಾಮಚಂದ್ರ ಮಹಾರುದ್ರಪ್ಪ.

1990/91 ರ ಸಾಲಿನಲ್ಲಿ ಆಸ್ಟ್ರೇಲಿಯಾದ ಡಾರ‍್ವಿನ್ ನಲ್ಲಿರುವ ಅಕ್ಯಾಡೆಮಿಗೆ ಹೆಚ್ಚಿನ ತರಬೇತಿಗಾಗಿ ಪ್ರತಿಬಾನ್ವಿತ ಯುವ ಆಟಗಾರರಾದ ಜಸ್ಟಿನ್ ಲ್ಯಾಂಗರ್, ಡೇಮಿಯನ್ ಮಾರ‍್ಟಿನ್, ಗ್ರೇಗ್ ಬ್ಲಿವೆಟ್ ರೊಟ್ಟಿಗೆ ವಿಕ್ಟೊರಿಯಾದ ಇನ್ನೊಬ್ಬ ಆಟಗಾರನನ್ನು ಕೂಡ ಆಯ್ಕೆ ಮಾಡಿರಲಾಗುತ್ತದೆ. ಈ ಆಟಗಾರನ ಅನಿರೀಕ್ಶಿತ ಆಯ್ಕೆಯನ್ನು ಕಂಡು ಕ್ರಿಕೆಟ್ ವಲಯದಲ್ಲಿ ಹಲವಾರು ಮಂದಿ ಅಚ್ಚರಿ ವ್ಯಕ್ತಪಡಿಸಿರುತ್ತಾರೆ. ಒಂದು ವರ‍್ಶದ ಈ ತರಬೇತಿ ಮೊದಲಾದ ಕೆಲವು ದಿನಗಳಲ್ಲೇ ಅವನ ಆಟಾಟೋಪಗಳನ್ನು ತಾಳಲಾರದೆ ಅವನ ಮೇಲೆ ಶಿಸ್ತು ಕ್ರಮ ಜರುಗಿಸಿ ನಿಂತ ಕಾಲಲ್ಲೇ ಅವನನ್ನು ಅಕ್ಯಾಡೆಮಿಯಿಂದ ಹೊರಹಾಕಿ ಬಸ್ ನಲ್ಲಿ ಡಾರ‍್ವಿನ್ ನಿಂದ ಆಡಿಲೇಡ್ ಗೆ ಕಳಿಸಲಾಗುತ್ತದೆ. 30 ತಾಸಿಗೂ ಹೆಚ್ಚಿನ ಸುಮಾರು 3,000 ಕಿಮೀ ನ ಬಸ್ ಪ್ರಯಾಣದುದ್ದಕ್ಕೂ ನಡೆದುದ್ದರ ಬಗ್ಗೆ ಶಪಿಸುತ್ತಾ ತನ್ನ ಆಟದ ಬವಿಶ್ಯದ ಬಗ್ಗೆ ಯೋಚಿಸುತ್ತಾ ಕಾಲಕಳೆದ ಆ ಹುಡುಗ ಅಲ್ಲಿಂದ ಒಂದೇ ವರ‍್ಶದಲ್ಲಿ ಆಸ್ಟ್ರೇಲಿಯಾದ ಪರ ಟೆಸ್ಟ್ ಆಡುತ್ತಾನೆ! ಅಶ್ಟೇ ಅಲ್ಲ. ಪಂದ್ಯದಿಂದ ಪಂದ್ಯಕ್ಕೆ ತನ್ನ ಲೆಗ್ ಸ್ಪಿನ್ ಚಳಕದಿಂದ ಪ್ರಪಂಚವನ್ನು ಮಂತ್ರಮುಗ್ದಗೊಳಿಸಿ ಸ್ಪಿನ್ ಬೌಲಿಂಗ್ ನ ಅನಬಿಶಕ್ತದೊರೆಯಾಗಿ ಬೆಳೆಯುತ್ತಾನೆ. ಆ ಹುಡುಗನೇ ಕ್ರಿಕೆಟ್ ರಸಿಕರ ನೆಚ್ಚಿನ ಆಟಗಾರ ದಿಗ್ಗಜ ಶೇನ್ ಕೀತ್ ವಾರ‍್ನ್!

ಹುಟ್ಟು- ಎಳವೆಯ ಬದುಕು

ಮೆಲ್ಬರ‍್ನ್ ನಲ್ಲಿ ಸೆಪ್ಟೆಂಬರ್ 13, 1969 ರಂದು ಬ್ರಿಗಿಟ್ ಮತ್ತು ಕೀತ್ ವಾರ‍್ನ್ ರ ಮಗನಾಗಿ ಶೇನ್ ವಾರ‍್ನ್ ಹುಟ್ಟಿದರು. ಎಳವೆಯಿಂದಲೇ ಆಟೋಟಗಳಲ್ಲಿ ಹುರುಪಿನಿಂದ ಪಾಲ್ಗೊಳ್ಳುತ್ತಿದ್ದ ಶೇನ್, ಹ್ಯಾಂಪ್ಟನ್ ಶಾಲೆಯಲ್ಲಿ ಕ್ರಿಕೆಟ್, ಟೆನ್ನಿಸ್ ಮತ್ತು ಪುಟ್ಬಾಲ್ ಆಟಗಳಲ್ಲಿ ಮಿಂಚುತ್ತಾರೆ. ತಮ್ಮ ಹದಿನಾರರ ಹರೆಯದಲ್ಲಿ ಪುಟ್ಬಾಲ್ ನಲ್ಲಿ ದಾಕಲೆ ಬರೆದ ವಾರ‍್ನ್ ಪಂದ್ಯವೊಂದರಲ್ಲಿ 16 ಗೋಲ್ ಗಳನ್ನು ಗಳಿಸಿ ಅದರ ಬೆನ್ನಲ್ಲೇ ಇನ್ನೊಂದು ಪಂದ್ಯದಲ್ಲಿ 8 ಗೋಲ್ ಗಳಿಸಿ ಟಸ್ಮಾನಿಯ ಪ್ರವಾಸಕ್ಕೆ ಹೊರಡಲಿದ್ದ ಪುಟ್ಬಾಲ್ ತಂಡಕ್ಕೆ ಆಯ್ಕೆ ಆಗುತ್ತಾರೆ. ಟೆನ್ನಿಸ್ ನಲ್ಲೂ ವ್ರುತ್ತಿಪರರ ಮಟ್ಟದ ಅಳವು ಹೊಂದಿದ್ದ ವಾರ‍್ನ್ ಒಂದು ವರ‍್ಶ ಕ್ರಿಕೆಟ್ ಹಾಗೂ ಪುಟ್ಬಾಲ್ ಎರಡರಿಂದಲೂ ದೂರ ಉಳಿದು ಟೆನ್ನಿಸ್ ಒಂದನ್ನೇ ಅಬ್ಯಾಸ ಮಾಡಿ ವಿಕ್ಟೋರಿಯಾ ರಾಜ್ಯದ ಕಿರಿಯರ ರ‍್ಯಾಂಕಿಂಗ್‌ ನಲ್ಲಿ ಮೂರನೇ ಸ್ತಾನಕ್ಕೆ ಏರುತ್ತಾರೆ. ನಂತರ ತಮ್ಮ ಹ್ಯಾಂಪ್ಟನ್ ಶಾಲೆಯ ಕ್ರಿಕೆಟ್ ತಂಡದ ಪರ ಮೆನ್ಟನ್ ಗ್ರಾಮರ್ ಶಾಲೆಯ ಎದುರು 6 ವಿಕೆಟ್ ಪಡೆದು 60 ರನ್ ಗಳನ್ನು ಗಳಿಸಿ ಗಮನ ಸೆಳೆಯುವುದರೊಟ್ಟಿಗೆ ಅದೇ ಶಾಲೆಯ ಪುಟ್ಬಾಲ್ ತಂಡದ ಎದುರು 10 ಗೋಲ್ ಗಳಿಸಿ ಎದುರಾಳಿ ಪಾಳಯ ಬೆಕ್ಕಸಬೆರಗಾಗುವಂತೆ ಮೋಡಿ ಮಾಡುತ್ತಾರೆ. ಆ ವೇಳೆ ವಾರ‍್ನ್ ರ ವಿಶೇಶ ಪ್ರತಿಬೆಯಯನ್ನು ಗುರುತಿಸಿ, ಮೆನ್ಟನ್ ಗ್ರಾಮರ್ ಶಾಲೆ ಸ್ಕಾಲರ‍್ಶಿಪ್ ನೀಡಿ ವಾರ‍್ನ್ ರನ್ನು ತಮ್ಮ ಶಾಲೆಗೆ ಸೇರಿಸಿಕೊಳ್ಳುತ್ತದೆ. ಅಲ್ಲೂ ಕೂಡ ಎಲ್ಲಾ ಆಟಗಳಲ್ಲೂ ವಾರ‍್ನ್ ಪ್ರಾಬಲ್ಯ ಮೆರೆಯುತ್ತಾರೆ. ಅಲ್ಲಿಯ ಟರ‍್ಪ್ ಪಿಚ್ಗಳು ಹಾಗೂ ಒಳ್ಳೆ ಸೌಕರ‍್ಯಗಳು ಶೇನ್ ವಾರ‍್ನ್ ರ ಕ್ರಿಕೆಟ್ ಕಲಿಕೆಗೆ ಇಂಬು ನೀಡುತ್ತವೆ. ಲೆಗ್ ಸ್ಪಿನ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಕೂಡ ಮಾಡುತ್ತಿದ್ದ ಹದಿಹರೆಯದ ವಾರ‍್ನ್ ಕ್ರಿಕೆಟ್ ಆಟಗಾರನಾಗಿ ಹೊಸ ಶಾಲೆಯ ಗರಡಿಯಲ್ಲಿ ಪಳಗುತ್ತಾ ಹೋಗುತ್ತಾರೆ. ಆ ಹೊತ್ತಿಗೆ ಟೆನ್ನಿಸ್ ಅನ್ನು ಸಂಪೂರ‍್ಣವಾಗಿ ಬಿಟ್ಟಿದ್ದ ಅವರಿಗೆ ಕ್ರಿಕೆಟ್ ಗಿಂತ ಪುಟ್ಬಾಲ್ ಮೇಲೇ ಹೆಚ್ಚು ಒಲವು ಇದ್ದಿತು. ಆದರೆ 1989 ರ ಆರಂಬದಲ್ಲಿ ಅವರ ಸೆಂಟ್ ಕಿಳ್ದ ಪುಟ್ಬಾಲ್ ಕ್ಲಬ್ ವಾರ‍್ನ್ ರನ್ನು ಕೈಬಿಟ್ಟಾಗ ಪುಟ್ಬಾಲ್ ಕನಸಿಗೆ ತಿಲಾಂಜಲಿ ಇಟ್ಟು ಕ್ರಿಕೆಟ್ ನಲ್ಲಿ ಹೆಚ್ಚು ಬೆವರು ಹರಿಸಲು ಮೊದಲು ಮಾಡುತ್ತಾರೆ. ಅದೇ ಸಾಲಿನಲ್ಲಿ ಸೆಂಟ್ ಕಿಳ್ದ ಕ್ರಿಕೆಟ್ ಕ್ಲಬ್ ಪರ ಬಿಡುವಿಲ್ಲದೆ ಆಡಿ ವಿಕ್ಟೋರಿಯಾ ರಾಜ್ಯ ತಂಡದ ಹೊಸ್ತಿಲಲ್ಲಿ ಬಂದು ನಿಲ್ಲುತ್ತಾರೆ. ಬಳಿಕ ಆ ವರ‍್ಶದ ಬೇಸಿಗೆಯಲ್ಲಿ ಇಂಗ್ಲೆಂಡ್ ಗೆ ತೆರಳಿ ಬ್ರಿಸ್ಟಾಲ್ ನ ಇಂಪೀರಿಯಲ್ ಕ್ಲಬ್ ಪರ ಆಡಿ ಒಬ್ಬ ಆಟಗಾರನಾಗಿ ಇನ್ನೂ ಹೆಚ್ಚು ಸುದಾರಣೆ ಕಾಣುತ್ತಾರೆ. ಹೆಚ್ಚೆಚ್ಚು ಪಂದ್ಯಗಳನ್ನು ಆಡುವ ಅವಕಾಶ ದೊರೆತದ್ದರಿಂದ ಬೌಲರ್ ಆಗಿ ಸಾಕಶ್ಟು ಪಕ್ವಗೊಳ್ಳುತ್ತಾರೆ. ಅದರ ಮುಂದಿನ ವರುಶ ಕೂಡ ಇಂಗ್ಲೆಂಡ್ ನ ಲಂಕಾಶೈರ್ ಲೀಗ್ ನಲ್ಲಿ ಆಡಿ ಯಶಸ್ಸು ಕಾಣುತ್ತಾರೆ. ಅತ್ತ ತವರಿನಲ್ಲೂ ಕ್ಲಬ್ ಕ್ರಿಕೆಟ್ ನಲ್ಲಿ ವಿಕೆಟ್ ಬೇಟೆ ಮುಂದುವರೆಸಿದ್ದ ವಾರ‍್ನ್ ಕಡೆಗೆ 1990/91 ರ ದೇಸೀ ರುತುವಿನಲ್ಲಿ ತಮ್ಮ ವಿಕ್ಟೋರಿಯಾ ತಂಡದ ಪರ ಮೊದಲ ದರ‍್ಜೆ ಕ್ರಿಕೆಟ್ ಗೆ ಪಾದಾರ‍್ಪಣೆ ಮಾಡುತ್ತಾರೆ. ಅಲ್ಲಿಂದ ಒಂದು ವರ‍್ಶ ದೇಸೀ ಕ್ರಿಕೆಟ್ ನಲ್ಲಿ ತಮ್ಮ ಸ್ಪಿನ್ ಮೋಡಿಯಿಂದ ಗಮನ ಸೆಳೆದ ವಾರ‍್ನ್ 1990 ರಲ್ಲಿ ಆಸ್ಟ್ರೇಲಿಯಾ ಯುವ ಆಟಗಾರರ ತಂಡದೊಂದಿಗೆ ವೆಸ್ಟ್ ಇಂಡೀಸ್ ಪ್ರವಾಸ ಹಾಗೂ 1991 ಆಸ್ಟ್ರೇಲಿಯಾ-ಬಿ ತಂಡದೊಂದಿಗೆ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆ ಆಗುತ್ತಾರೆ. ಅಲ್ಲಿನ ಪಿಚ್ ಗಳಲ್ಲಿಯೂ ಚಾಪು ಮೂಡಿಸಿದ ವಾರ‍್ನ್ ಸ್ಪಿನ್ ಬೌಲರ್ ಗಳ ಬರ ಎದುರಿಸುತ್ತಿದ್ದ ಆಸ್ಟ್ರೇಲಿಯಾ ತಂಡದ ಕದ ತಟ್ಟಲಾರಂಬಿಸುತ್ತಾರೆ.

ಅಂತರಾಶ್ಟ್ರೀಯ ಕ್ರಿಕೆಟ್ ಬದುಕು

ಬಾರತದ ಎದುರು 1992 ರ ಜನವರಿಯಲ್ಲಿ ಸಿಡ್ನಿಯಲ್ಲಿ ಆಲನ್ ಬಾರ‍್ಡರ್ ರ ನಾಯಕತ್ವದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಆಡಿದ ವಾರ‍್ನ್, ಶಾಸ್ತ್ರಿ ಹಾಗೂ ಯುವ ತೆಂಡೂಲ್ಕರ್ ರ ಪ್ರಹಾರಕ್ಕೆ ಸಿಕ್ಕು ನಲಗುತ್ತಾರೆ. ಪಂದ್ಯದಲ್ಲಿ 150 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದು ದುಬಾರಿ ಎನಿಸುತ್ತಾರೆ. ನಂತರ ಆಡಿಲೇಡ್ ಟೆಸ್ಟ್ ನಲ್ಲೂ ಪ್ರಬಾವ ಬೀರಲಾಗದೆ ನಿರಾಸೆ ಅನುಬವಿಸುತ್ತಾರೆ. ಟೆಸ್ಟ್ ಕ್ರಿಕೆಟ್ ನ ಕಟಿಣತೆಯನ್ನು ಸವೆದು, ಈ ವೈಪಲ್ಯಗಳಿಂದ ಬೇಸತ್ತ ವಾರ‍್ನ್ ತಮ್ಮ ಅಳವನ್ನೇ ಅನುಮಾನಿಸಲು ಮೊದಲು ಮಾಡುತ್ತಾರೆ. ಆಗ, ತಾನು ಎಡವಿದ್ದೆಲ್ಲಿ? ಒಬ್ಬ ಬೌಲರ್ ಆಗಿ ಪರಿಪೂರ‍್ಣನಾಗಲು ನಾ ಏನು ಮಾರ‍್ಪಾಡು ಮಾಡಿಕೊಳ್ಳಬೇಕು ಎಂಬ ಕೇಳ್ವಿಗಳನ್ನು ಹೊತ್ತು ಮಾರ‍್ಚ್ 1992 ರಲ್ಲಿ ವಾರ‍್ನ್ ಕೋಚ್ ಟೆರ‍್ರಿ ಜೆನ್ನರ್ ರನ್ನು ಕಾಣುತ್ತಾರೆ. ವಾರ‍್ನ್ ರನ್ನು ಕಂಡು ಮೊದಲಿಗೆ ರೇಗಿದ ಜೆನ್ನರ್, “ಬೀರ್ ಕ್ಯಾನ್ ಗಳನ್ನು ನೀರಿನಂತೆ ಕುಡಿಯುವ ದಡೂತಿ ದೇಹದ ಶಿಸ್ತಿಲ್ಲದ ನೀನು ಆಸ್ಟ್ರೇಲಿಯಾ ಪರ ಆಡಿದ್ದು ಪವಾಡವೇ! ದೇಶದಲ್ಲಿ ಬೇರೆ ಸ್ಪಿನ್ನರ್ ಗಳಿಲ್ಲದ ಕಾರಣ ನೀ ಟೆಸ್ಟ್ ಆಡಿದೆ ಅಶ್ಟೇ.” ಎಂದು ಮೂದಲಿಸುತ್ತಾರೆ. ಬಳಿಕ, ಕಲಿಯಲು ಹಾತೊರೆಯುತ್ತಿದ್ದ ವಾರ‍್ನ್ ರ ಪ್ರಾಮಾಣಿಕತೆಗೆ ಕರಗಿದ ಜೆನ್ನರ್, ವಾರ‍್ನ್ ರಿಗೆ ಕೆಲ ತಿಂಗಳುಗಳ ಕಾಲ ಬೌಲಿಂಗ್ ಪಟ್ಟುಗಳನ್ನು ಕಲಿಸಿ ಅವರ ತಪ್ಪುಗಳನ್ನು ತಿದ್ದುತ್ತಾರೆ. ಆ ವಯಸ್ಸಿಗೇ ದೊಡ್ಡ ತಿರುವು ಪಡೆಯುತ್ತಿದ್ದ ಎಸೆತಗಳನ್ನು ಹೊಂದಿದ್ದ ವಾರ‍್ನ್ ಪ್ಲಿಪ್ಪರ್ ಹಾಗೂ ಗೂಗ್ಲಿಗಳನ್ನೂ ತಮ್ಮ ಬತ್ತಳಿಕೆಗೆ ಸೇರಿಸಿಕೊಳ್ಳುತ್ತಾರೆ. ನಂತರ 1992 ರ ಶ್ರೀಲಂಕಾ ಪ್ರವಾಸದ ಕೊಲಂಬೋ ಟೆಸ್ಟ್ ನ ರೋಚಕ ಗಟ್ಟದಲ್ಲಿ ಒಂದೇ ಸ್ಪೆಲ್ ನಲ್ಲಿ ತಮ್ಮ (3/11) ದಾಳಿಯಿಂದ ಆಸ್ಟ್ರೇಲಿಯಾಗೆ 16 ರನ್ ಗಳ ಗೆಲುವು ತಂದುಕೊಡುತ್ತಾರೆ. ಇದರ ಬೆನ್ನಲ್ಲೇ ವೆಸ್ಟ್ ಇಂಡೀಸ್ ಎದುರು ತವರು ಮೆಲ್ಬರ‍್ನ್ ನಲ್ಲಿ (7/52) ಪಡೆದ ವಾರ‍್ನ್ ಮತ್ತೆಂದೂ ಹಿಂತಿರುಗಿ ನೋಡುವುದೇ ಇಲ್ಲ! ಪಂದ್ಯದಿಂದ ಪಂದ್ಯಕ್ಕೆ ಬೆಳೆಯುತ್ತಲ್ಲೇ ಹೋಗುತ್ತಾರೆ. ಇಂಗ್ಲೆಂಡ್ ನಲ್ಲಿ 1993 ರ ಆಶಸ್ ಸರಣಿಯಲ್ಲಿ ತಮ್ಮ ಮೊದಲ ಎಸೆತವೇ ಲೆಗ್ ಸ್ಟಂಪ್ ಆಚೆ ಪುಟಿದ ಚೆಂಡು ಗ್ಯಾಟಿಂಗ್ ರ ಆಪ್ ಸ್ಟಂಪ್ ಎಗರಿಸಿದ್ದು ‘ಶತಮಾನದ ಎಸೆತ’ ಎಂದೇ ಪ್ರಕ್ಯಾತಿ ಪಡೆದಿದೆ. ಆ ಎಸೆತ ಕಂಡ ತಿರುವು ಅಕ್ಶರಶಹ ಎಲ್ಲರನ್ನೂ ನಿಬ್ಬೆರಗಾಗಿಸಿತ್ತು.

ಗಾಜಿನ ಮೇಲೂ ಚೆಂಡು ತಿರುಗಿಸಬಲ್ಲ ಮಾಯಾವಿ ವಾರ‍್ನ್ ಎಂದೇ ಕ್ರಿಕೆಟ್ ವಿಮರ‍್ಶಕರು ಕೊಂಡಾಡುತ್ತಾರೆ. ಹೀಗೆ ನೋಡನೋಡುತ್ತಿದ್ದಂತೆಯೇ ವರುಶದಿಂದ ವರುಶಕ್ಕೆ ವಿಕೆಟ್ ಗಳನ್ನು ಕಬಳಿಸುತ್ತಾ ಕೇವಲ ಎಂಟೇ ವರುಶಗಳಲ್ಲಿ ವಿಸ್ಡೆನ್ ನ ಶತಮಾನದ ಐದು ಶ್ರೇಶ್ಟ ಕ್ರಿಕೆಟರ್ ಗಳ ಪಟ್ಟಿಗೆ ವಾರ‍್ನ್ ಸೇರುತ್ತಾರೆ. 2000 ದಲ್ಲಿ ವಿಸ್ಡೆನ್ ಬಿಡುಗಡೆ ಮಾಡಿದ ಈ ಪಟ್ಟಿಯಲ್ಲಿ ಸರ್ ಡಾನ್ ಬ್ರಾಡ್ಮನ್, ಸರ್ ಗಾರ‍್ಪೀಲ್ಡ್ ಸೋಬರ‍್ಸ್, ಸರ್ ಜಾಕ್ ಹೋಬ್ಸ್ ಮತ್ತು ಸರ್ ವಿವಿಯನ್ ರಿಚರ‍್ಡ್ಸ್ ರೊಟ್ಟಿಗೆ ಇನ್ನೂ ವ್ರುತ್ತಿಪರ ಕ್ರಿಕೆಟ್ ಆಡುತ್ತಿದ್ದ ವಾರ‍್ನ್ ರಿಗೆ ಈ ವಿಶೇಶ ಗೌರವ ಸಂದದ್ದು ಅವರೆಂತ ಅಪರೂಪದ ಆಟಗಾರ ಎಂಬುದಕ್ಕೆ ಎತ್ತುಗೆಯಾಗಿತ್ತು. ಅತ್ತ ಒಂದು ದಿನದ ಕ್ರಿಕೆಟ್ ನಲ್ಲೂ ಬಿಳಿ ಚಂಡನ್ನು ತಮಗನಿಸಿದಂತೆ ತಿರುಗಿಸಿ ಸೈ ಎನಿಸಿಕೊಂಡಿದ್ದ ವಾರ‍್ನ್ ಆಸ್ಟ್ರೇಲಿಯಾದ 1999 ರ ವಿಶ್ವಕಪ್ ಗೆಲುವಿನ ಪ್ರಮುಕ ರೂವಾರಿಯಾಗಿದ್ದರು. 1996 ರ ವಿಶ್ವಕಪ್ ನ ಸೆಮಿ ಪೈನಲ್ ನಲ್ಲಿ ವೆಸ್ಟ್ ಇಂಡೀಸ್ ಎದುರು ಸೋಲಿನ ಸುಳಿಯಲ್ಲಿದ್ದ ಆಸ್ಟ್ರೇಲಿಯಾವನ್ನು ತಮ್ಮ (4/36)ದಾಳಿಯಿಂದ ಸ್ಪಿನ್ ಬಲೆ ಹೆಣೆದು ಪೈನಲ್ ಗೆ ಕೊಂಡೊಯ್ದದ್ದು ಪವಾಡವೇ ಸರಿ! ಪೈನಲ್ ನಲ್ಲಿ ಆಸ್ಟ್ರೇಲಿಯಾ ಸೋಲುಂಡರೂ ವಾರ‍್ನ್ ವಿಶ್ವಕಪ್ ನಲ್ಲಿ ತಮ್ಮ ತಂಡದ ಪರ ಅತಿಹೆಚ್ಚು 12 ವಿಕೆಟ್ ಗಳನ್ನು ಪಡೆಯುತ್ತಾರೆ. ನಂತರದ 1999 ರವಿಶ್ವಕಪ್ ನಲ್ಲೂ ಅತ್ಯದಿಕ ಒಟ್ಟು 20 ವಿಕೆಟ್ ಗಳನ್ನು ಪಡೆದ ಅವರು ದಕ್ಶಿಣ ಆಪ್ರಿಕಾ ಎದುರು ರೋಚಕ ಸೆಮಿಪೈನಲ್ ನಲ್ಲಿ ಮಾಡಿದ (4/29) ದಾಳಿ ಇಂದಿಗೂ ಕ್ರಿಕೆಟ್ ರಸಿಕರ ನೆಚ್ಚಿನ ಪ್ರದರ‍್ಶನವಾಗಿದೆ. ಹೀಗೆ ಎರಡೂ ಮಾದರಿಯ ಕ್ರಿಕೆಟ್ನಲ್ಲಿ ತಮಗೆ ಸರಿಸಾಟಿ ಇಲ್ಲದಂತೆ ಬೆಳೆದ ವಾರ‍್ನ್ ತಮ್ಮ ಕ್ರಿಕೆಟೇರರ ಚಟುವಟಿಕೆಗಳಿಂದ ಉಪನಾಯಕನ ಎಡೆಯನ್ನು ಕಳೆದುಕೊಂಡು ಬಳಿಕ ಎಂದೂ ಆಸ್ಟ್ರೇಲಿಯಾದ ನಾಯಕನಾಗದಂತೆ ಆದದ್ದು ಕ್ರಿಕೆಟ್ ನ ದುರಂತವೆಂದೇ ಹೇಳಬೇಕು.

ನಿರ‍್ಬಂದದ ಪೆಟ್ಟು, 2003 – ಮೇಲೆದ್ದ ವಾರ‍್ನ್

ದಕ್ಶಿಣ ಆಪ್ರಿಕಾದಲ್ಲಿ ನಡೆದ 2003 ರ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾದ ಮೊದಲನೆ ಪಂದ್ಯಕ್ಕೂ ಮುನ್ನವೇ ವಾರ‍್ನ್ ಉದ್ದೀಪನ ಮದ್ದು ಪರೀಕ್ಶೆಯಲ್ಲಿ ಸಿಕ್ಕಿಬಿದ್ದು ತವರಿಗೆ ಮರಳುತ್ತಾರೆ. ವಿಚಾರಣೆಯ ಬಳಿಕ ಅವರ ಮೇಲೆ ಒಂದು ವರ‍್ಶ ದೇಸೀ ಕ್ರಿಕೆಟ್ ಸೇರಿ ಎಲ್ಲಾ ಮಾದರಿಯ ಕ್ರಿಕೆಟ್ ಅನ್ನೂ ಆಡದಂತೆ ತಡೆ ಹೇರಲಾಗುತ್ತದೆ. ತಮ್ಮ ತಾಯಿ ನೀಡಿದ ಮಾತ್ರೆಯೊಂದು ಐಸಿಸಿಯ ನಿರ‍್ಬಂದಿತ ಪಟ್ಟಿಯಲ್ಲಿರುವುದರ ಬಗೆಗೆ ಅರಿವು ಇಲ್ಲದೆ ವಾರ‍್ನ್ ಈ ಎಡವಟ್ಟು ಮಾಡಿಕೊಂಡಿರುತ್ತಾರೆ. ಒಂದು ವರ‍್ಶ ತಮ್ಮ ಮನೆಯ ಅಂಗಳದಲ್ಲೇ ಬೌಲ್ ಮಾಡುತ್ತಾ ಶಿಸ್ತು, ನಿರಂತರತೆ ಹಾಗೂ ಬೌಲಿಂಗ್ ಲಯ ಕಾಯ್ದುಕೊಂಡ ವಾರ‍್ನ್ ನಂತರ 2004 ರ ಶ್ರೀಲಂಕಾ ಪ್ರವಾಸಕ್ಕೆ ತಂಡಕ್ಕೆ ಮರಳುತ್ತಾರೆ. ಅಲ್ಲಿಂದ ಮೊದಲಾದದ್ದೇ ಶೇನ್ ವಾರ‍್ನ್ ರ ಎರಡನೇ ಅಲೆ! ಮೂರು ಟೆಸ್ಟ್ ಗಳಿಂದ ಬರೋಬ್ಬರಿ 26 ವಿಕೆಟ್ ಪಡೆದು ತಮ್ಮ ಶ್ರೇಶ್ಟತೆಯನ್ನು ಮತ್ತೊಮ್ಮೆ ಪ್ರಪಂಚಕ್ಕೆ ಸಾರಿ ಹೇಳುತ್ತಾರೆ. ಈ ಆಟಗಾರ ಒಂದು ವರ‍್ಶ ಕ್ರಿಕೆಟ್ ನಿಂದ ದೂರ ಉಳಿದಿದ್ದದ್ದು ದಿಟವೇ ಎಂದು ವಿಮರ‍್ಶಕರು ಬೆರಗಾಗುತ್ತಾರೆ. ಇದೇ ಸರಣಿಯ ವೇಳೆ ವಾರ‍್ನ್ ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಗಳ ಸಾದನೆ ಕೂಡ ಮಾಡುತ್ತಾರೆ. ಆ ಬಳಿಕ ತಮ್ಮ ಎಂದಿನ ಬೌಲಿಂಗ್ ನಾಗಾಲೋಟ ಮುಂದುವರೆಸಿದ ವಾರ‍್ನ್ ವೈಯಕ್ತಿಯ ಬದುಕಿನಲ್ಲಾಗುತ್ತಿದ್ದ ಏರಿಳಿತಗಳು ಎಂದೂ ಆಟದ ಮೇಲೆ ಪ್ರಬಾವ ಬೀರದಂತೆ ಗಮನ ವಹಿಸುತ್ತಾರೆ. ಅವರ ಬಾಳಿನ ಅತ್ಯಂತ ನೋವಿನ ಗಳಿಗೆಯಲ್ಲಿ ಇಂಗ್ಲೆಂಡ್ ನಲ್ಲಿ ನಡೆದ 2005 ರ ಆಶಸ್ ನಲ್ಲಿ ಐದು ಟೆಸ್ಟ್ಗಳಿಂದ ಒಟ್ಟು 40 ವಿಕೆಟ್ ಗಳೊಂದಿಗೆ 249 ರನ್ ಕೂಡ ಬಾರಿಸಿ ತಮ್ಮ ತಂಡದ ಆಪತ್ಬಾಂದವ ಆದರೂ ಆಸ್ಟ್ರೇಲಿಯಾ ದಶಕಗಳ ಬಳಿಕ 1-2 ಇಂದ ಮೊದಲ ಬಾರಿಗೆ ಆಶಸ್ ಸರಣಿ ಸೋಲುತ್ತದೆ. ಈ ಸರಣಿಯಲ್ಲಿ ಅವರ ಎಸೆತವೊಂದು ಆಪ್ ಸ್ಟಂಪ್ ನ ಹೊರಗಿನಿಂದ ತಿರುಗಿ ಆಂಡ್ರೂ ಸ್ಟ್ರಾಸ್ ರ ಲೆಗ್ ಸ್ಟಂಪ್ ಚದುರಿಸಿದ್ದು ಎಲ್ಲರ ಮನ ತಣಿಸುತ್ತದೆ. ಹಾಗೂ ಇದೇ ಸರಣಿಯಲ್ಲಿ 600 ಟೆಸ್ಟ್ ವಿಕೆಟ್ ಗಳ ಸಾದನೆ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಕೊಡ ವಾರ‍್ನ್ ಪಾತ್ರರಾಗುತ್ತಾರೆ.

ಈ ಮೊದಲೇ ಒಂದು-ದಿನದ ಕ್ರಿಕೆಟ್ ನಿಂದ ದೂರ ಉಳಿದಿದ್ದ ವಾರ‍್ನ್ ಹಟಾತ್ತನೆ ಮೆಕ್‌ಗ್ರಾ ರೊಂದಿಗೆ 2006/07 ರ ತವರಿನ ಆಶಸ್ ಬಳಿಕ ನಿವ್ರುತ್ತರಾಗುವುದಾಗಿ ಗೋಶಿಸುತ್ತಾರೆ. ಇನ್ನೂ ತಮ್ಮಆಟದ ಉತ್ತುಂಗದಲ್ಲಿದ್ದ ವಾರ‍್ನ್ ರ ಈ ತೀರ‍್ಮಾನ ಬೇಸರ ತರಿಸಿದರೂ 37 ರ ಹರೆಯದ ಅವರು ಹೆಚ್ಚು ಕಾಲ ಆಡಲಾರರು ಎಂಬುದು ಕ್ರಿಕೆಟ್ ಬಲ್ಲವರಿಗೆಲ್ಲರಿಗೂ ತಿಳಿದೇ ಇತ್ತು. ತಮ್ಮ ಕಡೇ ಸರಣಿಯ ಐದು ಟೆಸ್ಟ್ ಗಳಿಂದ 23 ವಿಕೆಟ್ ಗಳನ್ನು ಪಡೆದದ್ದು ವಾರ‍್ನ್ ರಲ್ಲಿ ಇನ್ನೂ ಸಾಕಶ್ಟು ಕ್ರಿಕೆಟ್ ಇತ್ತು ಎಂಬುದಕ್ಕೆ ಸಾಕ್ಶಿಯಾಗಿತ್ತು. ಇದೇ ಹೊತ್ತಿನಲ್ಲಿ 700 ಟೆಸ್ಟ್ ವಿಕೆಟ್ ಗಳನ್ನು ಪಡೆದ ಮೊದಲ ಬೌಲರ್ ಎಂಬ ಹಿರಿಮೆ ಕೂಡ ವಾರ‍್ನ್ ಪಡೆದರು. ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ಅನ್ನು 5-0 ರಿಂದ ಮಣಿಸಿ ತಮ್ಮ ಟೆಸ್ಟ್ ಬದುಕು ಆರಂಬಿಸಿದ ಸಿಡ್ನಿಯಲ್ಲೇ ವಾರ‍್ನ್ ಆಟದಿಂದ ದೂರ ಸರಿಯುತ್ತಾರೆ. ಅಂದಿಗೆ ಆಸ್ಟ್ರೇಲಿಯಾದ ಕ್ರಿಕೆಟ್ ಇತಿಹಾಸದ ದೊಡ್ಡ ಕೊಂಡಿಯೇ ಕಳಚಿದಂತಾಗುತ್ತದೆ. ಅಂದು ಕ್ರಿಕೆಟ್ ಪಂಡಿತರು ವಾರ‍್ನ್ ರ ನಿರ‍್ಗಮನ ಕ್ರಿಕೆಟ್ ಗೆ ತುಂಬಲಾರದ ನಶ್ಟ ಎಂದದ್ದು ಅತಿಶಯವೇನಲ್ಲ. ವಾರ‍್ನ್ ಕಂಡಿತ ಕ್ರಿಕೆಟ್ ಆಟವನ್ನು ಜಗತ್ತಿನಾದ್ಯಂತ ಬೆಳಗಿದ ಮಾಂತ್ರಿಕರಾಗಿದ್ದರು. ತಮ್ಮ 15 ವರ‍್ಶಗಳ ವ್ರುತ್ತಿ ಬದುಕಿನಲ್ಲಿ ಒಟ್ಟು 145 ಟೆಸ್ಟ್ ಗಳನ್ನಾಡಿ 25.42 ಸರಾಸರಿಯಲ್ಲಿ ಬರೋಬ್ಬರಿ 708 ವಿಕೆಟ್ ಗಳನ್ನು ಪಡೆದಿರುವ ವಾರ‍್ನ್ 10 ಬಾರಿ ಪಂದ್ಯದಲ್ಲಿ ಹತ್ತು ವಿಕೆಟ್ ಮತ್ತು 37 ಬಾರಿ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಗಳ ಸಾದನೆ ಮಾಡಿದ್ದಾರೆ. ಬ್ಯಾಟಿಂಗ್ ನಲ್ಲೂ ತಂಡಕ್ಕೆ ನೆರವಾಗುತ್ತಿದ್ದ ಅವರು 12 ಅರ‍್ದಶತಕಗಳೊಂದಿಗೆ 3,154 ರನ್ ಗಳಿಸಿದ್ದು 99 ಅವರ ಅತಿಹೆಚ್ಚು ಸ್ಕೋರ್ ಆಗಿದೆ. ಒಂದು ದಿನದ ಪಂದ್ಯಗಳಲ್ಲಿಯೂ ತಂಡದ ಬೌಲಿಂಗ್ ಬೆನ್ನೆಲುಬಾಗಿದ್ದ ಅವರು 194 ಪಂದ್ಯಗಳಿಂದ 25.74 ಸರಾಸರಿಯಲ್ಲಿ ಒಟ್ಟು 293 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಯಾವ ಮಾದರಿಯ ಆಟವಾದರೂ ಪಂದ್ಯ ಯಾವುದೇ ಹಂತದಲ್ಲಿದ್ದರೂ ಶೇನ್ ವಾರ‍್ನ್ ಯಾವುದೇ ಒತ್ತಡಕ್ಕೆ ಒಳಗಾಗದೆ ಶೇನ್ ವಾರ‍್ನ್ ರಂತೆಯೇ ಬೌಲ್ ಮಾಡುತ್ತಿದ್ದದು ಅವರ ದೊಡ್ಡ ಶಕ್ತಿ! ವಾರ‍್ನ್ ರ ಕೈಗೆ ಚೆಂಡು ಇಟ್ಟರೆ ಸಾಕು ನಿಶ್ಚಿಂತೆಯಿಂದ ಇರಬಹುದು ಎಂಬುದು ಬಾರ‍್ಡರ್ ರಿಂದ ಪಾಂಟಿಂಗ್ ರವರೆಗೂ ಆಸ್ಟ್ರೇಲಿಯಾದ ನಾಯಕರ ನಂಬಿಕೆಯಾಗಿತ್ತು.

ಐಪಿಎಲ್ – ಬಾರತದೊಂದಿಗಿನ ನಂಟು

ಪ್ರಪಂಚದ ಎಲ್ಲಾ ಮಾದರಿಯ ಪಿಚ್ ಗಳ ಮೇಲೂ ಬುಗುರಿಯಂತೆ ಚೆಂಡನ್ನು ತಿರುಗಿಸಿ ವಿಕೆಟ್ ಗಳನ್ನು ಗೊಂಚಲುಗಳಲ್ಲಿ ಪಡೆಯುತ್ತಿದ್ದ ವಾರ‍್ನ್ ಸ್ಪಿನ್ ಗೆ ಸಹಾಯ ಮಾಡುವ ಬಾರತದ ಪಿಚ್ ಗಳ ಮೇಲೆ ಸತತ ವೈಪಲ್ಯ ಕಂಡದ್ದು ಕ್ರಿಕೆಟ್ ನ ದೊಡ್ಡ ಅಚ್ಚರಿ. ಇದಕ್ಕೆ ಕಾರಣ ಬಾರತದ ಬ್ಯಾಟ್ಸ್ಮನ್ ಗಳು ವಾರ‍್ನ್ ರ ಸಾಂಪ್ರದಾಯಿಕ ಸ್ಪಿನ್ ಅನ್ನು ಚೆನ್ನಾಗಿ ಆಡುತ್ತಿದ್ದರು ಎಂದು ಹೇಳದೆ ವಿದಿ ಇಲ್ಲ. 2007 ರಲ್ಲಿ ನಿವ್ರುತ್ತರಾದ ಬಳಿಕ ವಾರ‍್ನ್ ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ನಾಯಕ ಹಾಗೂ ಕೋಚ್ ಆಗಿ ಮರಳಿ ಅನುಬವವಿಲ್ಲದ ಒಂದು ಎಳೆಯರ ಪಡೆಯನ್ನು ಕಟ್ಟಿಕೊಂಡು 2008 ರ ಚೊಚ್ಚಲ ಐಪಿಎಲ್ ಗೆದ್ದದ್ದು ಪವಾಡವೆಂದೇ ಹೇಳಬೇಕು. ಪಂದ್ಯಾವಳಿಯ ಆರಂಬಕ್ಕೂ ಮುನ್ನ ರಾಜಸ್ತಾನ ತಂಡವನ್ನು ಕಂಡು ಹಲವಾರು ಕ್ರಿಕೆಟ್ ಪಂಡಿತರು ಮೂಗು ಮುರಿದಿದ್ದರು. ಆದರೆ ವಾರ‍್ನ್ ಯುವ ಆಟಗಾರರ ಅಳವನ್ನು ಗುರುತಿಸಿ, ತಂಡದಲ್ಲಿ ಅವರ ಹೊಣೆಗಾರಿಕೆಯ ಅರಿವು ಮೂಡಿಸಿ, ತನ್ನಂಬಿಕೆ ತುಂಬಿ ಐಪಿಎಲ್ ಗೆದ್ದೇ ಬಿಟ್ಟರು! ಅದೇ ಶೇನ್ ವಾರ‍್ನ್ ರ ಶ್ರೇಶ್ಟತೆ. ಈ ಗೆಲುವನ್ನು ಕ್ರಿಕೆಟ್ ಬಲ್ಲವರ‍್ಯಾರೂ ಸಹಜವಾಗಿಯೇ ಎದುರು ನೋಡಿರಲಿಲ್ಲ. ಅಂದು ಅವರು ಗುರುತಿಸಿ ರಾಕ್ ಸ್ಟಾರ್ ಎಂದು ಹೆಸರಿಸಿ ಬೆಳೆಸಿದ ರವೀಂದ್ರ ಜಡೇಜಾ ನಿಜವಾಗಿಯೂ ಇಂದು ಬಾರತ ತಂಡದ ರಾಕ್ ಸ್ಟಾರೇ ಆಗಿದ್ದಾರೆ. ಶೇನ್ ವಾಟ್ಸನ್ ರ ಅಂತರಾಶ್ಟ್ರೀಯ ಕ್ರಿಕೆಟ್ ಬದುಕು ಉತ್ತುಂಗ ತಲುಪಿದ್ದು ಕೂಡ ವಾರ‍್ನ್ ರ ಗರಡಿಯಲ್ಲಿ ಅವರು ಐಪಿಎಲ್ ಆಡಿದ ನಂತರವೇ. ಹೀಗೆ ಪ್ರತಿಬೆಯನ್ನು ಗುರುತಿಸಿ ಆ ಆಟಗಾರರನ್ನು ಬೆಳೆಸುವ ವಿಶೇಶ ಗುಣ ಶೇನ್ ವಾರ‍್ನ್ ರಲ್ಲಿ ಇದ್ದದ್ದು ಡಾಳಾಗಿ ಕಾಣುತ್ತದೆ. ಆ ಬಳಿಕ ರಾಜಸ್ತಾನ ಮತ್ತೆಂದೂ ಐಪಿಎಲ್ ಗೆಲ್ಲದಿದ್ದರೂ ವಾರ‍್ನ್ ಹಾಕಿಕೊಟ್ಟ ಅಡಿಪಾಯದ ಮೇಲೇ ತಂಡದ ಒಡೆಯರು ಇಂದಿಗೂ ತಂಡವನ್ನು ನಡೆಸುತ್ತಿದ್ದಾರೆ. ನಂತರ ವಾರ‍್ನ್ 2011 ರಲ್ಲಿ ಐಪಿಎಲ್ ನಿಂದಲೂ ದೂರ ಸರಿದರು. ನಾಲ್ಕು ಐಪಿಎಲ್ ಗಳಲ್ಲಿ 55 ಪಂದ್ಯಗಳಿಂದ 57 ಪಡೆದಿರುವ ವಾರ‍್ನ್ ಎಕಾನಮಿ ಓವರ್ ಗೆ ಕೇವಲ 7.27 ಇರುವುದು ಅವರ ಚಾಣಾಕ್ಶತನಕ್ಕೆ ಹಿಡಿದ ಕನ್ನಡಿ.

ನಿವ್ರುತ್ತಿ ನಂತರದ ಬದುಕು

2013 ರ ಬಳಿಕ ಬಿಬಿಎಲ್ ನಲ್ಲೂ ಆಡದೆ ಸಂಪೂರ‍್ಣವಾಗಿ ಆಟದಿಂದ ದೂರ ಸರಿದು ವಾರ‍್ನ್ ಚ್ಯಾನಲ್ 9 ಹಾಗೂ ಸ್ಕೈ ಸ್ಪೋರ‍್ಟ್ಸ್ನ ನೇರುಲಿಗರಾಗಿ ದುಡಿಯುವುದರ ಜೊತೆಗೆ ಐಪಿಎಲ್ ನಲ್ಲಿ ರಾಜಸ್ತಾನದ ಮೆಂಟರ್ ಕೂಡ ಆಗಿದ್ದರು. ತಮ್ಮ ಅನಸಿಕೆಯನ್ನು ಮುಲಾಜಿಲ್ಲದೆ ಹೊರಹಾಕುತ್ತಿದ್ದ ವಾರ‍್ನ್ ಕೆಲವರ ದ್ವೇಶ ಕಟ್ಟಿಕೊಂಡಿದ್ದೂ ಉಂಟು. ಯಾವುದೇ ದೊಡ್ಡ ಆಟಗಾರನ ಬಗೆಗಾದರೂ ಅಂಜಿಕೆಯಿಲ್ಲದ ಟೀಕಿಸುವ ದಯ್ರ್ಯ ಹೊಂದಿದ್ದ ವಾರ‍್ನ್ ಕ್ರಿಕೆಟ್ ಜಗತ್ತಿಗೆ ಅಚ್ಚರಿಯಾಗಿ ಕಂಡದ್ದು ಸುಳ್ಳಲ್ಲ. ಯಾವುದೇ ದೇಶದ ಯುವ ಬೌಲರ್ ಸಹಾಯ ಕೋರಿ ಬಂದೊಡನೆ ಅವರಿಗೆ ಸ್ಪಿನ್ ಬೌಲಿಂಗ್ ಪಟ್ಟುಗಳನ್ನು ಮನದಟ್ಟು ಮಾಡಿಸುವಲ್ಲಿ ವಾರ‍್ನ್ ಹಿಂಜರಿಯುತ್ತಿರಲಿಲ್ಲ. ಕ್ರಿಕೆಟ್ ಬಾಶೆ, ದೇಶಗಳನ್ನು ಮೀರಿದ ಜನರನ್ನು ಒಗ್ಗೂಡಿಸುವ ಒಂದು ದೊಡ್ಡ ಶಕ್ತಿ ಎಂಬುದು ಅವರ ನಂಬಿಕೆಯಾಗಿತ್ತು. ಹಾಗಾಗಿ ಆಟದಲ್ಲಿ ಹೊಸ ಪ್ರಯೋಗ ಮತ್ತು ಆವಿಶ್ಕಾರಗಳನ್ನು ಸ್ವಾಗತಿಸುವರಲ್ಲಿ ಅವರು ಮೊದಲಿಗರಾಗಿರುತ್ತಿದ್ದರು. ಪ್ರಪಂಚದಾದ್ಯಂತ ಕ್ರಿಕೆಟ್ ಆಟವನ್ನು ಹರಡುವ ಉದ್ದೇಶದಿಂದ ಅಮೆರಿಕಾ ಹಾಗೂ ಇನ್ನಿತರ ದೇಶಗಳಲ್ಲಿ ಅನೌಪಚಾರಿಕ ಕ್ರಿಕೆಟ್ ಪಂದ್ಯಗಳನ್ನು ಕೂಡ ವಾರ‍್ನ್ ಆಡಿದರು. ಆಟದ ಬಗೆಗೆ ಅವರಿಗಿದ್ದ ಗೌರವ ಹಾಗೂ ಅರಿವು ಅಪಾರ. ತಮ್ಮ ವಯಕ್ತಿಕ ಬದುಕು ಹಾಗೂ ಕ್ರಿಕೆಟ್ ಬದುಕು ಎರಡನ್ನೂ ಬೆಸೆದು ತಮ್ಮ ಆತ್ಮಕತೆ ‘ನೋ ಸ್ಪಿನ್’ (No Spin) ಅನ್ನು ವಾರ‍್ನ್ ಕೆಲ ವರ‍್ಶಗಳ ಹಿಂದೆ ಹೊರತಂದರು.

ವಾರ‍್ನ್ ಎಂಬ ಮಾಯಾವಿ!

ದೊಡ್ಡ ರನ್ ಅಪ್ ಇಲ್ಲದೆ ಸುಮ್ಮನೆ ಸಹಜವಾಗಿ ನಡೆದುಕೊಂಡು ಬಂದು ನಿರಾಯಾಸವಾಗಿ ಬೌಲ್ ಮಾಡುತ್ತಿದ್ದ ವಾರ‍್ನ್ ರ ಬಲಗೈ ಲೆಗ್ ಸ್ಪಿನ್ ಚಳಕವನ್ನು ಕಂಡು ಕಣ್ತುಂಬಿಕೊಂಡ ನಮ್ಮ ಪೀಳಿಗೆ ನಿಜಕ್ಕೂ ದನ್ಯ. ಆರು ಬಾಲ್ಗಳನ್ನು ಆರು ಬೇರೆ-ಬೇರೆ ಮಾದರಿಯಲ್ಲಿ ವರ‍್ತಿಸುವಂತೆ ಬೌಲ್ ಮಾಡುವ ಚಳಕ ಹೊಂದಿದ್ದ ವಾರ‍್ನ್ ಶತಮಾನದ ಶ್ರೇಶ್ಟ ಸ್ಪಿನ್ನರ್ ಎಂಬುದರಲ್ಲಿ ಎರಡು ಮಾತಿಲ್ಲ. ಮಾರುದ್ದ ತಿರುಗುತ್ತಿದ್ದ ಎಸೆತಗಳ ಮೇಲೂ ಅವರಿಗಿದ್ದ ನಿಯಂತ್ರಣ ನಂಬಲಸಾದ್ಯವಾದರೂ ದಿಟ. ಹಾಗೇ ಕೋನೆ ಬದಲಿಸದೆ ವೇಗ ಮಾರ‍್ಪಡಿಸಿ ಚೆಂಡು ತಿರುಗದೆ ಪ್ಲಿಪ್ಪರ್ ಆಗಿ ಹೆಚ್ಚು ವೇಗದಲ್ಲಿ ಒಳ ನುಗ್ಗುವಂತೆ ಮಾಡುತ್ತಿದ್ದ ಅವರ ಕೈಗಳಲ್ಲಿ ಯುವುದೋ ಮಾಯಾವಿ ಶಕ್ತಿ ಇತ್ತು ಎಂದೆನಿಸದೆ ಇರದು. ಹೆಚ್ಚು ಗೂಗ್ಲಿಗಳನ್ನು ಅವರು ಪ್ರಯೋಗಿಸದಿದ್ದರೂ ಆ ಎಸೆತವನ್ನೂ ಅವರು ಕರಗತ ಮಾಡಿಕೊಂಡಿದ್ದರು. ಇನ್ನು ಅವರ ಟಾಪ್ ಸ್ಪಿನ್ ಎದುರಿಸಿವುದು ಬ್ಯಾಟ್ಸ್ಮನ್ ಗಳಿಗೆ ದೊಡ್ಡ ಸವಾಲೇ ಆಗಿತ್ತು. ಯಾವುದೇ ಬಗೆಯ ಬ್ಯಾಟ್ಸ್ಮನ್ ಆಗಿರಲಿ ಪಿಚ್ ಎಂತಹುದೇ ಇರಲಿ, ತಮ್ಮ ಸ್ಪಿನ್ ಚಳಕದಿಂದ ವಿಕೆಟ್ ಉರುಳಿಸುತ್ತಿದ್ದ ವಾರ‍್ನ್ ಕ್ರಿಕೆಟ್ ಆಟಕ್ಕೆ ದೊಡ್ಡ ವರ ಆಗಿದ್ದರು. ಅವರ ಬೌಲಿಂಗ್ ನಲ್ಲಿ ಅಂತಹ ಶಕ್ತಿ ಇದ್ದಿತು. ಇನ್ನು ಆಟದಲ್ಲಿ ನೇರ‍್ಮೆಯನ್ನು ಸದಾ ಕಾಪಾಡಿಕೊಂಡಿದ್ದ ವಾರ‍್ನ್ 1994 ರ ಪಾಕಿಸ್ತಾನ ಪ್ರವಾಸದ ವೇಳೆ ಪಾಕಿಸ್ತಾನದ ನಾಯಕ ಸಲೀಮ್ ಮಲಿಕ್ ನೀಡಿದ ಆಮಿಶಕ್ಕೆ ಒಳಗಾಗದೆ ಮೋಸದಾಟಕ್ಕೆ ಸಂಬಂದಿಸಿದಂತೆ ಅವರ ಮೇಲೆ ದೂರು ನೀಡಿದ್ದು ಈಗ ಇತಿಹಾಸ! ಈ ಪ್ರಕರಣ ಶೇನ್ ವಾರ‍್ನ್ ರಿಗೆ ಆಟದ ಮೇಲಿದ್ದ ಗೌರವ ಹಾಗೂ ಕಾಳಜಿಗೆ ಎತ್ತುಗೆ. ಹಾಗೇ ಎದುರಾಳಿಗಳನ್ನು ಗೌರವಿಸುವಲ್ಲಿಯೂ ವಾರ‍್ನ್ ಹಿಂದೇಟು ಹಾಕುತ್ತಿರಲಿಲ್ಲ. ಹಾಗೇ ಯಾವ ಮಟ್ಟದ ಪಂದ್ಯಾವಳಿಯಾದರೂ ಅಶ್ಟೇ ತೀವ್ರತೆಯಿಂದ ಗಂಬೀರವಾಗಿ ಆಡುತ್ತಿದ್ದದ್ದು ದಿಗ್ಗಜ ವಾರ‍್ನ್ ರ ವಿಶೇಶ ಗುಣ. 2000-07 ರವೆರಗೂ ಒಟ್ಟು 7 ವರ‍್ಶಗಳ ಕಾಲ ಇಂಗ್ಲೆಂಡ್ ನ ಕೌಂಟಿ ತಂಡ ಹ್ಯಾಂಪ್ಶೈರ್ ಪರ ಆಡಿದ ಅವರು ವಿಕೆಟ್ ಗಳಿಕೆಯ ಹೊರತಾಗಿ ಒಬ್ಬ ನಾಯಕನಾಗಿ ತಂಡವನ್ನು ಕಟ್ಟಿ ಕೆಲವು ಪ್ರತಿಬೆಗಳನ್ನು ಮುನ್ನೆಲೆಗೆ ತಂದರು. ಅವರಲ್ಲಿ ಇಂಗ್ಲೆಂಡ್ ನ ಸ್ಪೋಟಕ ಬ್ಯಾಟ್ಸ್ಮನ್ ಕೆವಿನ್ ಪೀಟರ‍್ಸನ್ ಒಬ್ಬರು. ಆ ವೇಳೆ ಬೇರೆ ಕೌಂಟಿಗಳು ಹೆಚ್ಚು ಹಣ ಹಾಗೂ ಬೇರೆ ಸೌಕರ‍್ಯಗಳ ಒಪ್ಪಂದದ ಪತ್ರ ಮುಂದಿಟ್ಟಾಗಲೂ ವಾರ‍್ನ್ ಆಮಿಶಕ್ಕೆ ಬಲಿಯಾಗಲಿಲ್ಲ. ಬದಲಿಗೆ, “ಹ್ಯಾಂಪ್ಶೈರ್ ನನ್ನ ತವರು ವಿಕ್ಟೋರಿಯಾ ಇದ್ದಂತೆ, ಈ ತಂಡವನ್ನು ಹೆಚ್ಚಿನ ಹಣಕ್ಕಾಗಿ ಎಂದಿಗೂ ತೊರೆಯಲಾರೆನು” ಎಂದು ಕೌಂಟಿ ತಂಡದೊಂದಿಗಿನ ತಮ್ಮ ಸಂಬಂದದ ಗಟ್ಟಿತನವನ್ನು ತೋರುವುದರ ಜೊತೆಗೆ ತಾವು ಆಡುವುದಕ್ಕೆ ಕಾರಣ ಹಣವಲ್ಲವೆಂಬುದನ್ನು ಕ್ರಿಕೆಟ್ ಜಗತ್ತಿಗೆ ತಿಳಿಸಿದರು. ಒಮ್ಮೆ 1998 ರಲ್ಲಿ ತಮ್ಮ ವರ‍್ಚಸ್ಸಿನ ಬಗಗೆ ಆಲೋಚಿಸದೆ ತೆಂಡೂಲ್ಕರ್ ತಮ್ಮ ಕನಸಿನಲ್ಲಿಯೂ ಬಂದು ಕಾಡುತ್ತಾರೆ ಎಂದು ಹೇಳಿಕೊಂಡಿದ್ದು ಅವರ ದೊಡ್ಡತನವಾಗಿತ್ತು. ಪ್ರತಿಬೆ ಯಾರೊಬ್ಬರ ಸ್ವತ್ತು ಅಲ್ಲ, ಕ್ರಿಕೆಟ್ ಆಟದಲ್ಲಿ ಎಲ್ಲರೂ ಸರಿಸಮಾನರು ಎಂಬುದು ಅವರ ಅಂಬೋಣವಾಗಿತ್ತು.

ವಾರ‍್ನ್ ರ ದಿಡೀರ್ ಸಾವು- ಕ್ರಿಕೆಟ್ ಜಗತ್ತು ದಿಗ್ಬ್ರಮೆ

2022 ರ ಮಾರ‍್ಚ್ 4 ರಂದು ವಾರ‍್ನ್ ರ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದಾಗ ಬಹುತೇಕರು ಇದು ಊಹಾಪೋಹ ಅತವಾ ಸುಳ್ಳು ಸುದ್ದಿಯಾಗಿರಲಿ ಎಂದು ಬಯಸಿದರು. ಆದರೆ ಬಿಡುವಿನ ವೇಳೆ ಪ್ರವಾಸಕ್ಕೆಂದು ತೈಲಾಂಡಿಗೆ ಗೆ ಹೋಗಿದ್ದ 52 ರ ಹರೆಯದ ಶೇನ್ ವಾರ‍್ನ್ ಹ್ರುದಯಾಗಾತದಿಂದ ಹಟಾತ್ತನೆ ಸಾವನ್ನಪ್ಪಿದ್ದು ಸತ್ಯ ಎಂದು ಗೊತ್ತಾದ ಮೇಲೆ ಎಲ್ಲರ ಕಂಬನಿಯ ಕಟ್ಟೆ ಒಡೆಯಿತು. ಕ್ರಿಕೆಟ್ ಲೋಕ ಅಕ್ಶರಶಹ ಕೆಲ ಹೊತ್ತು ಸ್ತಬ್ದವಾಯಿತು. ಪ್ರಪಂಚದ ನಾನಾ ಮೂಲೆಗಳಿಂದ ವಾರ‍್ನ್ ರ ಅಬಿಮಾನಿಗಳು ಕಂಬನಿ ಮಿಡಿದರು. ಕ್ರಿಕೆಟ್ ಅಂಗಳದಲ್ಲಿ ಸೂತಕದ ಚಾಯೆ ಮನೆಮಾಡಿತು. ಹೌದು. ಏಕೆಂದರೆ ಶೇನ್ ವಾರ‍್ನ್ ಕ್ರಿಕೆಟ್ ಆಟದ ಮೇಲೆ ಅಂತಹ ಪ್ರಬಾವ ಬೀರಿದ್ದರು. ಅವರು ಕ್ರಿಕೆಟ್ ಆಟದ ಒಬ್ಬ ದೈತ್ಯ ಶಕ್ತಿಯಾಗಿದ್ದರು. ಬಳಿಕ ಮಾರ‍್ಚ್ 20 ರಂದು ಹುಟ್ಟೂರು ಮೆಲ್ಬರ‍್ನ್ ನಲ್ಲಿ ಜರುಗಿದ ಅವರ ಸಂಸ್ಕಾರದಂದು ಜನಸಾಗರವೇ ಸೇರಿದ್ದುದು ಶೇನ್ ವಾರ‍್ನ್ ಒಬ್ಬ ಆಟಗಾರನಾಗಿ, ಅದಕ್ಕೂ ಮೇಲೆ ಒಬ್ಬ ವ್ಯಕ್ತಿಯಾಗಿ ತಮ್ಮ ಬಾಳಿನಲ್ಲಿ ಗಳಿಸಿದ್ದೇನು ಎಂಬುದನ್ನು ಸಾರಿ ಹೇಳಿತು. ಅವರಿಂದ ಕ್ರಿಕೆಟ್ ಗೆ ಆಗಬೇಕಿದ್ದ ಇನ್ನೂ ಹತ್ತು-ಹಲವಾರು ಕೆಲಸಗಳಿದ್ದವು. ವಾರ‍್ನ್ ರ ಅಗಲಿಕೆಯಿಂದ ಕಂಡಿತವಾಗಿಯೂ ಕ್ರಿಕೆಟ್ ನ ಒಂದು ದೊಡ್ಡ ಗ್ನಾನ ಸಂಪತ್ತೇ ಮುಂದಿನ ಪೀಳಿಗೆಗೆ ಸಿಗದೇ ಹೋಯಿತು ಎಂದರೆ ತಪ್ಪಾಗಲಾರದು. ವಾರ‍್ನ್ ನಮ್ಮ ಎದುರಾಳಿ ತಂಡದವರಾಗಿದ್ದರೂ ಬಾರತದ ಎದುರು ನಮ್ಮ ಬ್ಯಾಟ್ಸ್ಮನ್ ಗಳನ್ನು ಕೆಡವಲು ಬಲೆ ಹೆಣೆಯುತ್ತಿದ್ದರೂ ಅವರ ಬೌಲಿಂಗ್ ಅನ್ನು ಮೆಚ್ಚಿ ಅವರಂತೆಯೇ ಬೌಲ್ ಮಾಡಲು ಪ್ರಯತ್ನಿಸಿದ ಪೀಳಿಗೆ ನಮ್ಮದು. ಇದೇ ‘ವಾರ‍್ನ್ ಎಪೆಕ್ಟ್’! ಅವರು ಬೌಲ್ಮಾಡುತ್ತಿದ್ದ ವೇಳೆ ಸ್ಟಂಪ್ಸ್ ಹಿಂದಿನಿಂದ ‘ಬೌಲಿಂಗ್ ಶೇನ್’ ಎಂದು ಆಸ್ಟ್ರೇಲಿಯಾದ ಕೀಪರ್ ಗಿಲ್ಕ್ರಿಸ್ಟ್ ಅವರನ್ನು ಹುರಿದುಂಬಿಸುತ್ತಿದ್ದದ್ದು ಕ್ರಿಕೆಟ್ ಅಬಿಮಾನಿಗಳ ಪ್ರತಿಯೊಬ್ಬರ ಕಿವಿಯಲ್ಲಿ ಪ್ರತಿದ್ವನಿಸುತ್ತಲೇ ಇರುತ್ತದೆ. ಹೋಗಿ ಬನ್ನಿ ಶೇನ್. ನಿಮ್ಮ ಕೊಡುಗೆಯನ್ನು ನಾವೆಂದೂ ಮರೆಯಲಾರೆವು. ನೀವು ಕ್ರಿಕೆಟ್ ನ ಅನರ‍್ಗ್ಯ ರತ್ನ. ನೀವು ಕೇವಲ ಆಸ್ಟ್ರೇಲಿಯಾದ ಸ್ವತ್ತಲ್ಲ, ಕ್ರಿಕೆಟ್ ಪ್ರೀತಿಸುವ ನಮ್ಮೆಲ್ಲರ ಸ್ವತ್ತು!

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: