ಏಲೇಶ್ವರ ಕೇತಯ್ಯನವರ ವಚನದ ಓದು

ಸಿ.ಪಿ.ನಾಗರಾಜ.

ವಚನಗಳು, Vachanas

ಊರು: ಏಲೇಶ್ವರ, ಯಾದಗಿರಿ ಜಿಲ್ಲೆ
ಕಸುಬು: ವ್ಯವಸಾಯ
ವಚನಗಳ ಅಂಕಿತನಾಮ: ಏಲೇಶ್ವರಲಿಂಗ
ದೊರೆತಿರುವ ವಚನಗಳು: 75

***
ಆವ ವ್ರತ ನೇಮವ ಹಿಡಿದಡೂ

ಆ ವ್ರತ ನೇಮದ ಭಾವ ಶುದ್ಧವಾಗಿರಬೇಕು
ಅಸಿ ಕೃಷಿ ವಾಚಕ ವಾಣಿಜ್ಯತ್ವದಿಂದ
ಬಂದ ದ್ರವ್ಯಂಗಳಲಿ
ಬಾಹ್ಯದ ಬಳಕೆ
ಅಂತರಂಗದ ನಿರಿಗೆ
ಉಭಯ ಶುದ್ಧವಾಗಿಪ್ಪ ಭಕ್ತನಂಗವೆ
ಏಲೇಶ್ವರಲಿಂಗದಂಗ.

***

ವ್ಯಕ್ತಿಯು ಮಾಡುವ ದುಡಿಮೆಯು ಯಾವುದೇ ಆಗಿರಲಿ, ಅದರಲ್ಲಿ ತೊಡಗಿದಾಗ ಅವನ ಮಯ್ ಮನಸ್ಸು ಒಳ್ಳೆಯ ಉದ್ದೇಶ ಮತ್ತು ಗುರಿಯನ್ನು ಹೊಂದಿರಬೇಕೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ಆವ=ಯಾವ/ಯಾವುದೇ ಬಗೆಯ; ವ್ರತ=ವ್ಯಕ್ತಿಯು ಮಿಂದು , ಮಡಿಯುಟ್ಟು, ಉಪವಾಸವಿದ್ದು, ದೇವರ ಹೆಸರನ್ನು ಜಪಿಸುತ್ತ, ಹೂ ಹಣ್ಣು ಕಾಯಿ ಅನ್ನ ಪಾನಗಳನ್ನು ದೇವರ ಮುಂದೆ ಎಡೆಯಾಗಿ ಇಟ್ಟು, ದೀಪ ದೂಪಗಳಿಂದ ಬೆಳಗುತ್ತ, ದೇವರ ಅನುಗ್ರಹವನ್ನು ಪಡೆಯಲು ಮತ್ತು ದೇವರನ್ನು ಒಲಿಸಿಕೊಳ್ಳಲು ಮಾಡುವ ನಿಯಮಿತವಾದ ಆಚರಣೆಗಳನ್ನು ವ್ರತವೆಂದು ಕರೆಯುತ್ತಾರೆ. ವ್ರತವನ್ನು ಮಾಡುವಾಗ “ಇಂತಹ ದೇವರಿಗೆ ಇಂತಹ ರೀತಿಯಲ್ಲಿಯೇ ಪೂಜೆಯನ್ನು ಮಾಡಬೇಕು” ಎಂಬ ಕಟ್ಟುಕಟ್ಟಲೆಯಿರುತ್ತದೆ; ನೇಮ=ವ್ರತ/ನೋಂಪಿ; ಹಿಡಿ=ಕೈಕೊಳ್ಳು/ತೊಡಗು;

ಆವ ವ್ರತ ನೇಮವ ಹಿಡಿದಡೂ=ದೇವರ ಕರುಣೆ ಮತ್ತು ಅನುಗ್ರಹವನ್ನು ಪಡೆಯಲೆಂದು ವ್ಯಕ್ತಿಯು ಯಾವುದೇ ಬಗೆಯ ವ್ರತ ನೇಮಗಳನ್ನು ಮಾಡಲು ತೊಡಗಿದರೂ;

ಭಾವ=ಮನಸ್ಸು/ಮನದಲ್ಲಿ ಮೂಡುವ ಒಳಮಿಡಿತಗಳು; ಶುದ್ಧ+ಆಗಿರಬೇಕು; ಶುದ್ಧ=ಸರಿಯಾದುದು;

ಭಾವ ಶುದ್ಧವಾಗಿರಬೇಕು=ವ್ಯಕ್ತಿಯ ಮನದಲ್ಲಿ ಒಳ್ಳೆಯ ಆಲೋಚನೆ, ವಿಚಾರ ಮತ್ತು ನಿಲುವು ಇರಬೇಕು. ಅಂದರೆ ವ್ಯಕ್ತಿಯು ಆಡುವ ನುಡಿ ಮತ್ತು ಮಾಡುವ ಕಾಯಕವೆಲ್ಲವೂ ತನಗೆ, ತನ್ನ ಕುಟುಂಬಕ್ಕೆ ಒಳಿತನ್ನು ಉಂಟುಮಾಡುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕೆಂಬ ಒಳ್ಳೆಯ ಉದ್ದೇಶ ಮತ್ತು ಗುರಿಯನ್ನು ಹೊಂದಿರುವುದು;

ಆ ವ್ರತ ನೇಮದ ಭಾವ ಶುದ್ಧವಾಗಿರಬೇಕು=ದೇವರ ಪೂಜೆಯಲ್ಲಿ ತೊಡಗುವ ವ್ಯಕ್ತಿಯ ಮನದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಉದ್ದೇಶ ಮತ್ತು ಗುರಿಯಿರಬೇಕು;

ಅಸಿ=ಕತ್ತಿ. ಇದು ಒಂದು ರೂಪಕವಾಗಿ ಬಳಕೆಯಾಗಿದೆ.’ ಕತ್ತಿ ’ ಎಂಬ ಪದ ನಾಡಿನ ಗದ್ದುಗೆಯನ್ನೇರಿ ಆಡಳಿತವನ್ನು ನಡೆಸುವುದು ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ.; ಕೃಷಿ=ಆರಂಬ/ಬೇಸಾಯ; ವಾಚಕ=ಲಿಪಿರೂಪದ ಹೊತ್ತಿಗೆಗಳನ್ನು ಓದುವವನು; ವಾಣಿಜ್ಯತ್ವ+ಇಂದ; ವಾಣಿಜ್ಯ=ವಸ್ತುಗಳನ್ನು ಕೊಳ್ಳುವ ಮತ್ತು ಮಾರುವ ವ್ಯವಹಾರ; ವಾಣಿಜ್ಯತ್ವ=ವ್ಯಾಪಾರದ ವಹಿವಾಟು; ದ್ರವ್ಯ=ಹಣ/ಸಂಪತ್ತು;

ಅಸಿ ಕೃಷಿ ವಾಚಕ ವಾಣಿಜ್ಯತ್ವದಿಂದ ಬಂದ ದ್ರವ್ಯಂಗಳಲಿ=ಜನಸಮುದಾಯವನ್ನು ಕಾಪಾಡುವ ಮತ್ತು ಮುನ್ನಡೆಸುವ ಗದ್ದುಗೆಯನ್ನೇರಿ ನಡೆಸುವ ಆಡಳಿತದಿಂದ; ಬೂಮಿಯನ್ನು ಉತ್ತು ಬಿತ್ತು ಬೆಳೆ ತೆಗೆಯುವ ಬೇಸಾಯದಿಂದ; ಹೊತ್ತಿಗೆಯಲ್ಲಿನ ಲಿಪಿರೂಪದ ನುಡಿರಚನೆಯನ್ನು ಓದಿ ಇತರರಿಗೆ ಹೇಳುವ ಗುರುತನದಿಂದ; ವಸ್ತುಗಳನ್ನು ಕೊಳ್ಳುವ ಮತ್ತು ಮಾರುವ ವ್ಯಾಪಾರದಿಂದ ಗಳಿಸಿದ ಹಣದಲ್ಲಿ/ಸಂಪತ್ತಿನಲ್ಲಿ;

ಬಾಹ್ಯ=ಹೊರಗಡೆ/ಬಹಿರಂಗದಲ್ಲಿ; ಬಳಕೆ=ಉಪಯೋಗಿಸುವಿಕೆ;

ಬಾಹ್ಯದ ಬಳಕೆ=ವ್ಯಕ್ತಿಯು ತನ್ನ ನಿತ್ಯ ಜೀವನದಲ್ಲಿ ಬಹಿರಂಗವಾಗಿ ಮಾಡುವ ವ್ಯವಹಾರಗಳು;

ಅಂತರಂಗ=ಒಳಗೆ; ನಿರಿಗೆ=ಸ್ವರೂಪ/ರೀತಿ;

ಅಂತರಂಗದ ನಿರಿಗೆ=ವ್ಯಕ್ತಿಯ ಮನದಲ್ಲಿ ಸದಾಕಾಲ ಮೂಡಿಬರುತ್ತಿರುವ ಒಳಮಿಡಿತಗಳ ರೀತಿ;

ಉಭಯ=ಎರಡು; ಶುದ್ಧ+ಆಗಿ+ಇಪ್ಪ; ಇಪ್ಪ=ಇರುವ; ಆಗಿಪ್ಪ=ಆಗಿರುವ;

ಉಭಯ ಶುದ್ಧವಾಗಿಪ್ಪ=ವ್ಯಕ್ತಿಯ ಮನಸ್ಸು ಮತ್ತು ಕ್ರಿಯೆಗಳೆರಡು ಸರಿಯಾಗಿರುವುದು; ವ್ಯಕ್ತಿಯ ಅಂತರಂಗದ ಮನಸ್ಸಿನಲ್ಲಿ ಮೂಡುವ ಒಳ್ಳೆಯ ಮತ್ತು ಕೆಟ್ಟ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹತೋಟಿಯಲ್ಲಿಟ್ಟುಕೊಂಡು, ಒಳ್ಳೆಯದನ್ನು ಮಾತ್ರ ಬಹಿರಂಗದ ವ್ಯವಹಾರಗಳಲ್ಲಿ ಆಚರಣೆಗೆ ತರುವಂತಹ ನಡೆನುಡಿಯಿರುವ;

ಭಕ್ತನ+ಅಂಗವೆ; ಭಕ್ತ=ಒಳ್ಳೆಯ ನಡೆನುಡಿಗಳನ್ನೇ ದೇವರೆಂದು ತಿಳಿದು ಬಾಳುತ್ತಿರುವವನು; ಅಂಗ=ದೇಹ/ಶರೀರ;

ಭಕ್ತನ ಅಂಗ=ಬಕ್ತನ ನಡೆನುಡಿ/ವ್ಯಕ್ತಿತ್ವ; ಏಲೇಶ್ವರಲಿಂಗದ+ಅಂಗ; ಏಲೇಶ್ವರಲಿಂಗ=ಶಿವನ ಮತ್ತೊಂದು ಹೆಸರು. ಏಲೇಶ್ವರ ಕೇತಯ್ಯನವರ ವಚನಗಳ ಅಂಕಿತನಾಮ;

ಭಕ್ತನ ಅಂಗವೆ ಏಲೇಶ್ವರ ಲಿಂಗದ ಅಂಗ=ಈ ನುಡಿಗಳು ರೂಪಕವಾಗಿ ಬಳಕೆಯಾಗಿವೆ. ವ್ಯಕ್ತಿಯು ತನ್ನ ದುಡಿಮೆಯಿಂದ ಸಂಪಾದನೆ ಮಾಡುವ ಹಣ ಮತ್ತು ಅದನ್ನು ವೆಚ್ಚ ಮಾಡುವ ರೀತಿಯು ಪ್ರಾಮಾಣಿಕವಾಗಿರಬೇಕು. ಅಂದರೆ ಸಹಮಾನವರನ್ನು ಮತ್ತು ಸಮಾಜವನ್ನು ವಂಚಿಸಿ ಹಣವನ್ನು ಸಂಪಾದಿಸಬಾರದು ಮತ್ತು ಜನಸಮುದಾಯಕ್ಕೆ ಕೇಡನ್ನು ಬಗೆಯಬಾರದು. ಈ ರೀತಿ ಒಳ್ಳೆಯ ವ್ಯಕ್ತಿತ್ವವುಳ್ಳವನ ದೇಹದಲ್ಲಿಯೇ ಏಲೇಶ್ವರಲಿಂಗ ನೆಲೆಸಿದ್ದಾನೆ.

ಹನ್ನೆರಡನೆಯ ಶತಮಾನದ ವಚನಕಾರರು ದೇವರ ಇರುವಿಕೆಯನ್ನು ವ್ಯಕ್ತಿಯ ಅಂತರಂಗದ ಒಳ್ಳೆಯ ಮನಸ್ಸು ಮತ್ತು ಬಹಿರಂಗದ ಒಳ್ಳೆಯ ಕ್ರಿಯೆಗಳಲ್ಲಿ ಕಾಣುತ್ತಿದ್ದರು.

(ಚಿತ್ರ ಸೆಲೆ:  sugamakannada.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: