ಜಿರಲೆಗಳ “ಹಾಲ್ ಆಪ್ ಪೇಮ್” ಮ್ಯೂಸಿಯಂ

– .

ಬಹುಶಹ ಮನುಶ್ಯ ಜನ್ಮದ ಹುಟ್ಟಿನಿಂದ ಅವನ ಜೊತೆ ಜೊತೆಯಾಗಿ ಮಾನವ ಕುಲದಶ್ಟೇ ಹಳೆಯದಾದ ಅತವಾ ಅದಕ್ಕೂ ಹಿಂದಿನ ಕೀಟವೆಂದರೆ ಅದು ಜಿರಲೆ. ಇದು ಅಸಾಮಾನ್ಯ ಕೀಟ. ಮಾನವ ತನ್ನ ಬುದ್ದಿಶಕ್ತಿಯನ್ನೆಲ್ಲಾ ವ್ಯಯ ಮಾಡಿ ಕಂಡುಹಿಡಿದ ಅನೇಕ ಔಶದಗಳನ್ನು, ದ್ರವೌಶದವನ್ನೂ, ಹಿಮಯುಗ ಹಾಗೂ ಅತ್ಯಂತ ಹೆಚ್ಚು ವಾತಾವರಣದ ಏರುಪೇರುಗಳನ್ನು ದ್ರುಡವಾಗಿ ಮೆಟ್ಟಿ ನಿಂತು, ಈಗಲೂ ಪ್ರತಿಯೊಂದು ಅಡುಗೆ ಮನೆಯನ್ನೂ ಅನುಗ್ರಹಿಸಿ, ತನ್ನ ಇರುವನ್ನು ಪ್ರತಿದಿನವೂ ಸಾರುವ ಕೀಟವೇ ಜಿರಲೆ.

ಸಾಮಾನ್ಯರ ಮನೆಯಲ್ಲಿ ಅತಿ ಹೆಚ್ಚು ದ್ವೇಶಿಸಲ್ಪಡುವ ಕೀಟ ಜಿರಲೆ. ದ್ವೇಶದಿಂದ ಮುಕ್ತಿ ಕೊಡ ಬಯಸಿದ ಮಾನವ, ಅದಕ್ಕೆ ಕಲಾತ್ಮಕ ಸ್ಪರ‍್ಶವನ್ನು ಕೂಡ ಕೊಡಲು ಚಿಂತಿಸಿದ. ಅದನ್ನೇ ಪ್ರಮುಕವಾಗಿ ಇರಿಸಿಕೊಂಡು ಜಿರಲೆಗಳ ವಸ್ತು ಸಂಗ್ರಹಾಲಯ ತೆರೆಯುವ ಬಹುದಿನಗಳ ಕನಸನ್ನು ಸಾಕಾರಗೊಳಿಸಲು ತೀರ‍್ಮಾನಿಸಿದಾಗಲೇ ಹುಟ್ಟಿದ್ದು ಜಿರಲೆಗಳ ‘ದಿ ಹಾಲ್ ಆಪ್ ಪೇಮ್’ ಮ್ಯೂಸಿಯಂ. ಕೀಟ ನಿಯಂತ್ರಣ ಸಂಸ್ತೆ ‘ದಿ ಪೆಟ್ ಶಾಪ್’ನ ಮಾಲೀಕರಿಗೆ ಜಿರಲೆ ಮುತ್ತಿಕೊಳ್ಳುವ ಪ್ರತಿ ಸ್ತಳಗಳ ಬಗ್ಗೆಯೂ ಹಾಗೂ ಅದನ್ನು ಹೋಗಲಾಡಿಸುವ ಬಗ್ಗೆಯೂ ಅನೇಕ ವರ‍್ಶಗಳ ಅನುಬವ ಇದೆ. ಜಿರಲೆಗಳ ಬಗ್ಗೆ ಸಾಕಶ್ಟು ಆದ್ಯಯನವನ್ನೂ ಮಾಡಿದ್ದಾರೆ. ಅದರ ಪ್ರತಿಪಲವೇ ಜಿರಲೆಗಳ ವಸ್ತು ಸಂಗ್ರಹಾಲಯ. ಅಮೇರಿಕಾದ ಟೆಕ್ಸಾಸ್‍ನ ಪ್ಲಾನೋದಲ್ಲಿರುವ “ದಿ ಕಾಕ್ರೋಚ್ ಹಾಲ್ ಆಪ್ ಪೇಮ್ ಅಂಡ್ ಮ್ಯೂಸಿಯಂ” ಎಂಬ ಅನನ್ಯ ಮ್ಯೂಸಿಯಂನಲ್ಲಿ, ಕೆಲವೊಂದು ಸಂದರ‍್ಬಗಳಲ್ಲಿ ಜಿರಲೆಗಳು ತೋರುವ ವಿಶಿಶ್ಟ ಬಂಗಿಯನ್ನು ಕಾಣಬಹುದು. ಇದು ಮೂಲತಹ ಸಣ್ಣ ಜಿರಲೆಗಳ ಸಂಗ್ರಹವಾಗಿದ್ದು, ಅವುಗಳನ್ನು ವಿವಿದ ರೀತಿಯ ಉಡುಗೆ ತೊಡುಗೆಯಿಂದ ಅಲಂಕರಿಸಲಾಗಿದೆ. ಟುಟು ರೀತಿಯ ಉಡುಗೆ ಮತ್ತು ಔಪಚಾರಿಕ ಉಡುಗೆಯ ಸುಮಾರು 25ಕ್ಕೂ ಹೆಚ್ಚು ಜಿರಲೆಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ಕಾಣಬಹುದು. ಕೆಲವು ಸೆಲಿಬ್ರಟಿಗಳ, ಅದರಲ್ಲೂ ಹಾಲಿವುಡ್ಡಿನ ಪ್ರಸಿದ್ದ ತಾರೆಗಳು, ಮಾಡೆಲ್‍ಗಳ, ಉದಾಹರಣೆಗೆ ಮರ‍್ಲಿನ್ ಮನ್ರೋ, ಡೇವಿಡ್ ಲೆಟಿರೋಚ್, ರಾಸ್ ಪೆರೋಚ್ ಅತವಾ ಲಿಬರೋಚಿ ಮುಂತಾದವರ ಅಣುಕು ಉಡುಪನ್ನು ದರಿಸಿರುವ ಜಿರಲೆಗಳು ಇಲ್ಲಿರುವುದು ಗಮನಾರ‍್ಹ. ವಸ್ತು ಸಂಗ್ರಹಾಲಯವನ್ನು ವೀಕ್ಶಿಸಲು ಬಂದವರಿಗೆ ಇದು ಹೆಚ್ಚಿನ ರಂಜನೆಯನ್ನು ಒದಗಿಸುತ್ತದೆ. ಈ ಜಿರಲೆಯ ‘ಹಾಲ್ ಆಪ್ ಪೇಮ್’ ನಲ್ಲಿ ತನ್ನದೇ ಆದ ‘ಜಿರಲೆ ಸ್ಟಾಚೂ ಆಪ್ ಪೇಮ್’ ಸಹ ಕಾಣಬಹುದು.

ಈ ವಸ್ತು ಸಂಗ್ರಹಾಲಯದಲ್ಲಿ ಇರುವ ಕೆಲವು ದ್ರುಶ್ಯಗಳು ಅದನ್ನು ಸ್ರುಶ್ಟಿಸಿದ ಕಲಾಕಾರ ಚಿಕ್ಕ ಚಿಕ್ಕ ವಿಶಯಕ್ಕೂ ನೀಡಿರುವ ಅಗಾದ ಶ್ರಮವನ್ನು ಪ್ರಶಂಸಿಸಬಹುದು. ಉದಾಹರಣೆಗೆ, ಹುಡುಗರು ಸಾಮಾನ್ಯವಾಗಿ ಬೇಸಿಗೆ ರಜೆಯನ್ನು ಕಳೆಯಲು ಸರ‍್ಪಿಂಗ್ ಮತ್ತು ಸೂರ‍್ಯಸ್ನಾನಕ್ಕೆ ಹೋಗುವುದುಂಟು. ಅದರ ಅಣಕವನ್ನು ಇಲ್ಲಿ ಕಾಣಬಹುದು. ಹುಡುಗ/ಹುಡುಗಿಯರಂತೆ ಡ್ರೆಸ್ ಮಾಡಿಕೊಂಡಿರುವ ಜಿರಲೆಗಳು ಸರ‍್ಪಿಂಗ್ ಮತ್ತು ಸೂರ‍್ಯಸ್ನಾನ ಮಾಡುತ್ತಿರುವುದನ್ನು ಕಲಾಕಾರ ಅಶ್ಟೇ ಸಹಜತೆಯಿಂದ ಕೂಡಿರುವಂತೆ ಚಿತ್ರಿಸಿದ್ದಾನೆ. ಜಿರಲೆಯನ್ನು ಕಂಡರೆ ಕಿಟಾರನೆ ಕಿರುಚಿ, ಮಾರು ದೂರ ಓಡಿಹೋಗುವವರೂ ಸಹ ಇಲ್ಲಿನ ಜಿರಲೆಗಳ ವೇಶಬೂಶಣಗಳನ್ನು ಕಂಡು ನಗೆಗಡಲಲ್ಲಿ ಮುಳುಗುವುದಂತೂ ಕಂಡಿತ. ಸೂರ‍್ಯಸ್ನಾನ ಮಾಡುವ ಸಮಯದಲ್ಲಿ ಹುಡುಗರ/ಹುಡುಗಿಯರು, ಸೂರ‍್ಯನ ನೇರ ರಶ್ಮಿಯಿಂದ ಕಣ್ಣುಗಳನ್ನು ರಕ್ಶಿಸಿಕೊಳ್ಳಲು ‘ಕೂಲಿಂಗ್ ಗ್ಲಾಸ್’ (ತಂಪು ಕನ್ನಡಕ) ದರಿಸಿವುದುಂಟು. ಅದೇ ರೀತಿಯಲ್ಲಿ ಸೂರ‍್ಯಸ್ನಾನ ಮಾಡುತ್ತಿರುವ ಜಿರಲೆಗಳ ಕಣ್ಣಿಗೂ ತಂಪು ಕನ್ನಡಕವಿದೆ. ಇವುಗಳನ್ನು ತಯಾರಿಸಿದ ಕಲಾಕಾರ, ಜಿರಲೆಗಳಿಗೂ ಅತ್ಯಂತ ಪುಟ್ಟ ತಂಪು ಕನ್ನಡಕ ತಯಾರಿಸಿ ಹಾಕಿದ್ದಾನೆಂದರೆ, ಆ ಕಲಾಕಾರನ ಕಲಾ ಕೌಶಲ್ಯವನ್ನು ಮೆಚ್ಚಬೇಕಾದದ್ದೇ ಮತ್ತು ಪ್ರಶಂಸಿಸಬೇಕಾದದ್ದೇ!. ಇದೇ ರೀತಿಯಲ್ಲಿ ಪಿಯಾನೋ ನುಡಿಸುವ, ಪುಟ್ ಬಾಲ್ ಆಟವಾಡುವ, ನ್ರುತ್ಯ ಮಾಡುವ, ಹೋಟೇಲಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಜಿರಲೆಗಳನ್ನು ಇಲ್ಲಿ ತಯಾರಿಸಿಟ್ಟಿದ್ದಾರೆ.

ಜೀವಂತ ಜಿರಲೆಗಳನ್ನು ಸ್ಪರ‍್ಶಿಸುವ ದೈರ‍್ಯವಂತರಿಗಾಗಿಯೇ, ಮೈಕೇಲ್ ಬೋಹ್ಡಾನ್ ರವರ ಜೀವಂತ ಪ್ರದರ‍್ಶನಗಳಿಗೆ ಪರಿಚಯಿಸಬಹುದು. ಇಲ್ಲಿ ಮಾತ್ರವಲ್ಲದೇ ಇಡೀ ಟೆಕ್ಸಾಸ್ ನಲ್ಲೇ ಅತಿ ದೊಡ್ಡ ಜೀವಂತ ಜಿರಲೆಗಳ ನೆಲೆಯಾಗಿದೆ, ಈ ವಸ್ತು ಸಂಗ್ರಹಾಲಯ. ಈ ಮ್ಯೂಸಿಯಂನಲ್ಲಿ ಬುಸುಗುಡುವ ಮಡಗಾಸ್ಕರ‍್ ಜಿರಲೆಗಳನ್ನು ಕಾಣಬಹುದು. ಜೀವಂತ ಜಿರಲೆಗಳು ಅಸುನೀಗಿದಾಗ, ಅವು ಇಲ್ಲಿನ ವಸ್ತು ಸಂಗ್ರಹಾಲಯಕ್ಕೆ ಸೇರ‍್ಪಡೆಯಾಗುತ್ತವೆ. ಇಂತಹ ಅತ್ಯದ್ಬುತ, ಅಸಾದಾರಣ ವಸ್ತು ಸಂಗ್ರಹಾಲಯವನ್ನು ನೋಡಿ ಕಣ್ತುಂಬಿಸಿಕೊಂಡು ಹೊರಬಂದರೆ, ಜಿರಲೆಗಳಿಂದ ಹಾಗೂ ಜಿರಲೆಗಳ ಮೊಟ್ಟೆ ‘ಲಾರ‍್ವಾ’ದಿಂದ ತಯಾರಿಸಿದ ವೈವಿದ್ಯಮಯ ಕಾದ್ಯಗಳು ಸವಿಯಲು ಲಬ್ಯ! ಇಶ್ಟವಾದಲ್ಲಿ ಪ್ರಯತ್ನಿಸಬಹುದು.

( ಮಾಹಿತಿ ಸೆಲೆ ಮತ್ತು ಚಿತ್ರಸೆಲೆ: planomagazine.complanomagazine.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: