ಮಕ್ಕಳ ಕವಿತೆ: ನವಿಲಿನ ಗರಿಗಳ ಕಣ್ಣುಗಳೆ

– ಚಂದ್ರಗೌಡ ಕುಲಕರ‍್ಣಿ.

children, ಮಕ್ಕಳು

ಹಾಲು ಮನಸಿನ ಮುದ್ದು ಮಕ್ಕಳೆ
ಕೇಳಿರಿ ಚಂದದ ಮಾತನ್ನು
ಮಕ್ಕಳ ಪ್ರೀತಿಯ ಚಾಚಾ ನೆಹರು
ಹುಟ್ಟಿದ ದಿನದ ಸವಿಯನ್ನು

ತಾನು ಜನಿಸಿದ ದಿನವನು ಮಕ್ಕಳ
ಹಬ್ಬವ ಮಾಡಿದ ಸತ್ಯವನು
ಬಾಲ್ಯದ ಅಮ್ರುತ ಸುದೆಯ ಸವಿಯುತ
ಬೆಳಗಿರಿ ಬಾರತ ದೇಶವನು

ಸರಿಗಮ ಸ್ವರದಲಿ ಮೂಡಿ ಬಂದ
ಸುಂದರ ಗೀತೆಯು ನೀವೆಲ್ಲ
ದೇವನು ಅಕ್ಶರ ಶಬ್ದವ ಬಳಸಿ
ಕಟ್ಟಿದ ಕವಿತೆ ರಸಗುಲ್ಲ

ಮೋಡ ಗುಡುಗಿಗೆ ಗರಿಗೆದರಾಡುವ
ನವಿಲಿನ ಗರಿಗಳ ಕಣ್ಣುಗಳೆ
ಗಿಳಿಗಳು ಕುಕ್ಕಿ ಸವಿರುಚಿ ನೋಡಿದ
ರಸಪುರಿ ಮಾವಿನ ಹಣ್ಣುಗಳೆ

ಇಂದಿನ ಮಕ್ಕಳೆ ನಿಜ ನಾಗರಿಕರು
ಉಜ್ವಲ ಬಾಳಿಗೆ ತಲೆಕಟ್ಟು
ಗತ ಇತಿಹಾಸದ ಸಂಸ್ಕ್ರುತಿ ಸವಿಯಿರಿ
ಗುರುವಿನ ಮಾತಲಿ ಮನವಿಟ್ಟು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: