ಆರಗೋನ್ ರಾಜನ ಅದ್ಬುತ ಮೆಟ್ಟಿಲು

– .

ಪ್ರಾನ್ಸಿನ ಕಾರ‍್ಸಿಕಾದ ಬೋನಿಪಾಸಿಯೋದ ಕಮ್ಯೂನ್ ನಲ್ಲಿರುವ ಸುಣ್ಣದ ಬಂಡೆಯಲ್ಲಿ ಲಂಬವಾಗಿ ಕೆತ್ತಿದ ಕಲ್ಲಿನ ಮೆಟ್ಟಲನ್ನು ದ ಕಿಂಗ್ ಆಪ್ ಆರಗೋನ್ ಎಂದು ಕರೆಯಲಾಗುತ್ತದೆ. ಇದನ್ನು ಪ್ರೆಂಚ್ ಬಾಶೆಯಲ್ಲಿ ಎಸ್ಕಲಿಯರ್ ಡು ರೋಯಿ ಡಿ ಆರಗೋನ್ ಎನ್ನಲಾಗುತ್ತದೆ. ವಾಸ್ತವವಾಗಿ ಗಮನಿಸಿದರೆ ಇದು ಸುಮಾರು 45° ಕೋನದಲ್ಲಿ ಕೆತ್ತಲಾಗಿದೆ. ಇದರಲ್ಲಿ ಒಟ್ಟಾರೆ 187 ಮೆಟ್ಟಿಲುಗಳಿವೆ. ಇದು ಸಮುದ್ರಾಬಿಮುಕವಾಗಿರುವುದರಿಂದ ಅದ್ಬುತ ನೋಟವನ್ನು ತನ್ನದಾಗಿಸಿಕೊಂಡಿದೆ. ಸಮುದ್ರದ ಕಡೆಯಿಂದ ಈ ಅದ್ಬುತ ಮೆಟ್ಟಿಲುಗಳನ್ನು ಗಮನಿಸಿದರೆ, ಓರೆಯಾದ ರೇಕೆಯಂತೆ ಕಾಣುತ್ತದೆ. ಹಾಗೆಯೇ ಮೆಟ್ಟಿಲುಗಳ ಹತ್ತಿರ ಬಂದು ನೋಡಿದರೆ, ಅದು ಕೊಳವೆಯಾಕ್ರುತಿಯಲ್ಲಿ ಕಂಡು ಬರುತ್ತದೆ. ಇದೇ ಕಾರಣಕ್ಕೆ ಇದರ ಜನಪ್ರಿಯತೆ ಜಗದ್ವಿಕ್ಯಾತವಾಗಿದೆ.

ಈ ಅದ್ಬುತ ಮೆಟ್ಟಿಲುಗಳನ್ನು ಕೇವಲ ಒಂದೇ ರಾತ್ರಿಯ ಅವದಿಯಲ್ಲಿ ನಿರ‍್ಮಿಸಲಾಯಿತು ಎಂದರೆ ನಂಬಲು ಕಶ್ಟವಾಗುತ್ತದೆ. ಆದರೂ ಇದು ಸತ್ಯ ಎಂದು ಕೆಲವು ದಾಕಲೆಗಳು ಹೇಳುತ್ತವೆ. ಆರಗೋನ್ ರಾಜ ಆಲ್ಪೋನ್ಸೋನ ಸೈನ್ಯವು 1420ರಲ್ಲಿ ಬೊನಿಪಾಸಿಯೋವನ್ನು ಮುತ್ತಿಗೆ ಹಾಕಿದಾಗ ತನ್ನ ಅನುಕೂಲಕ್ಕಾಗಿ ಈ ಮೆಟ್ಟಿಲುಗಳನ್ನು ಕೆತ್ತಲಾಯಿತು. ಹಾಗಾಗಿ ಇದನ್ನು ‘ದ ಕಿಂಗ್ ಆಪ್ ಆರಗೋನ್’ ಎಂದು ಹೆಸರಿಸಲಾಗಿದೆ. ಇದರ ಬಗ್ಗೆ ಸಾಕಶ್ಟು ದ್ವಂದ್ವಗಳಿವೆ. ಈ ಅದ್ಬುತ ಮೆಟ್ಟಿಲುಗಳನ್ನು ಇಳಿಯುತ್ತಾ ಹೋದಲ್ಲಿ ಅದು ನೈಸರ‍್ಗಿಕ ಚಿಲುಮೆ ಹಾಗೂ ಗುಹೆಯನ್ನು ತಲುಪುತ್ತದೆ. ರಾಜ ಆಲ್ಪೋನ್ಸೋನ ಸೈನಿಕರು ಇದನ್ನು ನಿರ‍್ಮಿಸುವ ಮುನ್ನವೇ ಪ್ರಾನ್ಸಿಸ್ಕನ್ ಸನ್ಯಾಸಿಗಳು ಕೆತ್ತಿದ್ದಾರೆ ಎಂದು ಬಾವಿಸಲಾಗಿದೆ.

ದಾಕಲಾತಿಗಳಿಲ್ಲದ ಯಾವುದೇ ಜನಪ್ರಿಯ ತಾಣವಿದ್ದರೂ, ಅದರ ಸುತ್ತ ಸಾಕಶ್ಟು ದಂತಕತೆಗಳು ತಾನೇ ತಾನಾಗಿ ಹುಟ್ಟಿಕೊಳ್ಳುತ್ತವೆ. ದ ಕಿಂಗ್ ಆಪ್ ಆರಗೋನ್ ನ ಅದ್ಬುತ ಮೆಟ್ಟಿಲುಗಳು ಸಹ ಇದಕ್ಕೆ ಹೊರತಾಗಿಲ್ಲ. ಒಂದು ದಂತಕತೆಯ ಪ್ರಕಾರ ಈ ಮೆಟ್ಟಿಲುಗಳ ಮೊದಲ ಹಂತದ ಮೆಟ್ಟಿಲುಗಳನ್ನು ನವಶಿಲಾಯುಗದ ಕಾಲದಲ್ಲಿ ಕೆತ್ತಲಾಗಿದೆ ಎಂದು ಹೇಳಲಾಗಿದೆ. ನಂತರದ ದಿನಗಳಲ್ಲಿ ಉಳಿದ ಮೆಟ್ಟಿಲುಗಳನ್ನು ಕೆತ್ತಲಾಯಿತು. ಅಂದಿನಿಂದ ಇಂದಿನವರೆವಿಗೂ ಇದು ನಿರಂತರವಾಗಿ ಸುದಾರಣೆ ಕಂಡು ಬಂದಿದೆ.

ರಾತ್ರೋ ರಾತ್ರಿ ಈ ಮೆಟ್ಟಿಲುಗಳನ್ನು ಸೈನಿಕರು ಕೆತ್ತಿದರು ಎನ್ನಲಾಗುತ್ತಾದರೂ, ಇದರ ಹಿಂದೆ ಬೇರೆಯದೇ ಉದ್ದೇಶವಿತ್ತೆಂಬ ಅಂಶ ಸಹ ಹರಿದಾಡುತ್ತಿದೆ. ಅದೇನೆಂದರೆ, ಇದನ್ನು ಸೇಂಟ್ ಬಾರ‍್ತಲೆಮಿ ಎಂಬ ಸಿಹಿ ನೀರಿನ ಬಾವಿಗೆ ಹೋಗಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಿರ‍್ಮಿಸಲಾಯಿತು ಎಂದು ಮತ್ತೊಂದು ತಿಯರಿ ತಿಳಿಸುತ್ತದೆ. ಯಾವುದೇ ನಂಬಲರ‍್ಹವಾದ ದಾಕಲಾತಿಗಳು ಇಲ್ಲದ ಕಾರಣ ಎಲ್ಲಾ ಕತೆಗಳನ್ನು ಅಳೆದು ತೂಗಿ ನೋಡಿ ವಿವೇಚನೆಗೆ ಒಳಪಡಿಸಿ, ನಂಬಬೇಕಾಗುತ್ತದೆ.

ಪ್ರಸ್ತುತ ಈ ಮೆಟ್ಟಿಲುಗಳನ್ನು ಉಪಯೋಗಿಸಿಕೊಂಡು ಕೆಳೆಗಿಳಿದು ಸಮುದ್ರ ತೀರದಲ್ಲಿ ಅಡ್ಡಾಡಿ, ನಂತರ ಮತ್ತೆ ಮೇಲಕ್ಕೆ ಹೋಗಬಹುದು. ಸಮುದ್ರ ಮಟ್ಟದಿಂದ ಇದನ್ನು ಗಮನಿಸಿದಾಗ ಇದು ಮೇಲ್ಮುಕವಾಗಿದೆಯೋ ಇಲ್ಲ ಕೆಳಮುಕವಾಗಿದೆಯೋ ಎಂದು ಗೊಂದಲವಾಗುವುದು ಸಹಜ.
ಈ ವಿಶೇಶವಾದ ಸ್ತಳವನ್ನು ನೋಡಲು ಬರುವವರಿಗೆ ಕೆಲವೊಂದು ನಿಬಂದನೆಗಳಿವೆ. ನೋಡುಗರು ಉತ್ತಮ ದೈಹಿಕ ಸಾಮರ‍್ತ್ಯ ಹೊಂದಿರಬೇಕು ಮತ್ತು ಇಲ್ಲಿನ ಕಟ್ಟುಪಾಡುಗಳಿಗೆ ಸಂಪೂರ‍್ಣವಾಗಿ ಒಳಪಡಬೇಕು. ಈ ಮೆಟ್ಟಿಲುಗಳನ್ನು ಇಳಿದು ಹತ್ತುವ ನೋಡುಗರು ಮಟ್ಟಸವಾದ ಪಾದರಕ್ಶೆ ಮತ್ತು ಶಿರಸ್ತ್ರಾಣ ದರಿಸುವುದು ಕಡ್ಡಾಯ. ಹೈ ಹೀಲ್ಡ್, ಪ್ಲಿಪ್ ಪ್ಲಾಪ್, ಪಾದವನ್ನು ಪೂರ‍್ಣವಾಗಿ ಮುಚ್ಚದ ಪಾದರಕ್ಶೆ ದರಿಸಿರುವವರಿಗೆ ಪ್ರವೇಶ ನಿರಾಕರಿಸಲಾಗುತ್ತದೆ.

ನಲವತ್ತೈದು ಡಿಗ್ರಿ ಕೋನದಲ್ಲಿರುವ ಈ ಮೆಟ್ಟಿಲುಗಳನ್ನು ಐದು ವರ‍್ಶದ ಒಳಗಿನ ಮಕ್ಕಳು ಹತ್ತಿದರೆ, ಅವರುಗಳ ದೈರ‍್ಯ ಮತ್ತು ಸಾಹಸವನ್ನು ಮೆಚ್ಚಿ ಡಿಪ್ಲಮೋ ಪದವಿ ನೀಡಿ ಗೌರವಿಸಲಾಗುವುದು. ಗರ‍್ಬಿಣಿ ಸ್ತ್ರೀಯರಿಗೆ, ಹ್ರುದಯ ದೌರ‍್ಬಲ್ಯವಿರುವವರು ಈ ಮೆಟ್ಟಿಲುಗಳನ್ನು ಹತ್ತಿಳಿಯದಿರುವುದು ಕ್ಶೇಮಕರ. ಸುಣ್ಣದ ಕಲ್ಲಿನಲ್ಲಿ ಕೆತ್ತಲಾದ ಈ ಮೆಟ್ಟಿಲುಗಳ ಎತ್ತರ ಬಿನ್ನವಾಗಿದ್ದು, ಅಸಮವಾಗಿದೆ. ಹಾಗಾಗಿ ಈ ಮೆಟ್ಟಿಲುಗಳನ್ನು ಹತ್ತಿ ಇಳಿಯುವಾಗ ಜಾಗರೂಕತೆ ಮತ್ತು ಎಚ್ಚರಿಕೆ ಅತ್ಯಗತ್ಯ.

(ಮಾಹಿತಿ ಮತ್ತು ಚಿತ್ರ ಸೆಲೆ: vedettesthalassa.com, charismaticplanet.com, amusingplanet.com, elitereaders.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: