ಬಾರತದ ಕ್ರಿಕೆಟ್ ತಂಡದ ಕೋಚ್ ಗಳ ಇತಿಹಾಸ – ಕಂತು 2

– ರಾಮಚಂದ್ರ ಮಹಾರುದ್ರಪ್ಪ.

ಕಂತು 1

ಜಾನ್ ರೈಟ್ (2000-2005)

ಬಾರತ ತಂಡದ ಮೊದಲ ವಿದೇಶಿ ಕೋಚ್ ಎಂಬ ಹೆಗ್ಗಳಿಕೆ 2000 ದಲ್ಲಿ ನ್ಯೂಜಿಲ್ಯಾಂಡ್ ನ ಜಾನ್ ರೈಟ್ ರವರ ಪಾಲಾಯಿತು. ಆ ವರುಶದ ಇಂಗ್ಲಿಶ್ ಬೇಸಿಗೆಯಲ್ಲಿ ಕೆಂಟ್ ತಂಡದ ಪರ ಕೌಂಟಿ ಕ್ರಿಕೆಟ್ ಆಡಲು ಹೋಗಿದ್ದ ಆಗಿನ ಬಾರತದ ಉಪನಾಯಕ ರಾಹುಲ್ ದ್ರಾವಿಡ್ ರನ್ನು ಕೆಂಟ್ ನ ಕೋಚ್ ಆಗಿದ್ದ ರೈಟ್ ತಮ್ಮ ವ್ರುತ್ತಿಪರತೆ ಹಾಗೂ ಆಟದ ಗ್ನಾನದಿಂದ ಗಮನ ಸೆಳೆದರು. ಅದರ ಪಲವಾಗಿಯೇ ಅತೀ ಜವಾಬ್ದಾರಿಯುತ ಬಾರತದ ಕೋಚ್ ಹುದ್ದೆಯನ್ನು ಗಿಟ್ಟಿಸಿಕೊಂಡು, ಐದು ವರುಶಗಳ ಕಾಲ ತಂಡದೊಂದಿಗೆ ಸಾಕಶ್ಟು ಯಶಸ್ಸು ಕಂಡರು. ನಾಯಕ ಗಂಗೂಲಿರೊಂದಿಗೆ ಹೊಸಬಗೆಯ ತಂತ್ರಗಳನ್ನು ರೂಪಿಸಿ ಅಂಜದೆ ಆಟ ಆಡುವ ಮನಸ್ತಿತಿಯನ್ನು ಆಟಗಾರರಲ್ಲಿ ಮೈಗೂಡಿಸಿದರು. ಇಂದಿಗೆ ದೊಡ್ಡ ಆಟಗಾರರಾಗಿ ಗುರುತಿಸಿಕೊಳ್ಳುವ ಸೆಹ್ವಾಗ್, ಯುವರಾಜ್ ಸಿಂಗ್, ಜಹೀರ್ ಕಾನ್, ಹರ‍್ಬಜನ್ ಸಿಂಗ್, ಇರ‍್ಪಾನ್ ಪಟಾನ್, ಮೊಹಮ್ಮದ್ ಕೈಪ್, ದೋನಿರಂತವರಿಗೆ ಸಾಲು-ಸಾಲು ಅವಕಾಶಗಳನ್ನು ನೀಡಿ ಬೆನ್ನಿಗೆ ನಿಂತ ರೈಟ್ ರ ದೂರದ್ರುಶ್ಟಿಯನ್ನು ಮೆಚ್ಚಿಕೊಳ್ಳಲೇಬೇಕು.

ಮೊದಲಿಗೆ 2001 ರಲ್ಲಿ ಬಲಿಶ್ಟ ಆಸ್ಟ್ರೇಲಿಯಾ ಎದುರು 2-1 ರಿಂದ ಬಾರ‍್ಡರ್-ಗಾವಸ್ಕರ್ ಟೆಸ್ಟ್ ಸರಣಿ ಗೆಲುವು; ಅದರ ಬೆನ್ನಲ್ಲೇ 2002 ರ ನ್ಯಾಟ್ವೆಸ್ಟ್ ತ್ರಿಕೋನ ಸರಣಿ ಗೆಲುವು ಮತ್ತು ಇಂಗ್ಲೆಂಡ್ ನಲ್ಲಿ 1-1 ರಿಂದ ಟೆಸ್ಟ್ ಸರಣಿಯಲ್ಲಿ ಡ್ರಾ ಸಾದಿಸಿ ತಂಡ ಚೇತರಿಸಿಕೊಂಡಿತು. 2002 ರಲ್ಲಿ ವೆಸ್ಟ್ ಇಂಡೀಸ್ ನೆಲದಲ್ಲಿ 2-1 ರಿಂದ ಮೊದಲ ಬಾರಿಗೆ ಒಂದು-ದಿನದ ಪಂದ್ಯಗಳ ಸರಣಿಯನ್ನು ತಂಡ ತೆಕ್ಕೆಗೆ ಹಾಕಿಕೊಂಡಿತು. ಇದರ ಬೆನ್ನಲ್ಲೇ ತಂಡ 2002 ರ ಚಾಂಪಿಯನ್ಸ್ ಟ್ರೋಪಿಯಲ್ಲಿ ಶ್ರೀಲಂಕಾದೊಂದಿಗೆ ಜಂಟಿ-ವಿಜೇತ ಆಯಿತು. ನಂತರ 2003 ರಲ್ಲಿ ವಿಶ್ವಕಪ್ ಪೈನಲ್ ತಲುಪಿದ್ದು ಹಾಗೂ ಅದೇ ಸಾಲಿನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಬಾರಿಗೆ 1-1 ರಿಂದ ಟೆಸ್ಟ್ ಸರಣಿಯಲ್ಲಿ ಸಮಬಲ ಸಾದಿಸಿದ್ದು ಹಾಗೂ 2004 ರ ಪಾಕಿಸ್ತಾನ ಪ್ರವಾಸದಲ್ಲಿ 3-2 ರಿಂದ ಒಂದು-ದಿನದ ಪಂದ್ಯಗಳ ಸರಣಿ ಮತ್ತು 2-1 ರಿಂದ ಟೆಸ್ಟ್ ಸರಣಿ ಗೆದ್ದದ್ದು ರೈಟ್ ರ ಕಾಲದ ತಂಡದ ದೊಡ್ಡ ಸಾದನೆಗಳು. ಈ ಪ್ರದರ‍್ಶನಗಳ ಹೊರತಾಗಿ ಜಾನ್ ರೈಟ್ ಬಾಶೆಯ ತೊಡಕಿದ್ದರೂ ಬಾರತದ ಆಟಗಾರರ ವಿಶ್ವಾಸ ಗಳಿಸಿ, ಅವರಲ್ಲೊಬ್ಬರಾಗಿ, ಅವರಲ್ಲಿ ಹುಮ್ಮಸ್ಸು ತುಂಬಿ ತಂಡದ ಏಳಿಗೆಗೆ ಶ್ರಮಿಸಿದ್ದನ್ನು ಎಲ್ಲರೂ ಅಕ್ಕರೆಯಿಂದ ಇಂದಿಗೂ ನೆನೆಯುತ್ತಾರೆ. ಆ ಮಟ್ಟಕ್ಕೆ ರೈಟ್ ಬಾರತದ ಕ್ರಿಕೆಟ್ ನೊಂದಿಗೆ ಬೆರೆತು ಹೋಗಿದ್ದರು. 2004 ರಲ್ಲಿ ತವರಲ್ಲೇ ಆಸ್ಟ್ರೇಲಿಯಾ ಎದುರು 1-2 ಯಿಂದ ಟೆಸ್ಟ್ ಸರಣಿ ಸೋತದ್ದು ರೈಟ್ ರ ಅವದಿಯ ಒಂದೇ ಒಂದು ಕಪ್ಪು ಚುಕ್ಕೆ. ಬಳಿಕ 2005 ರಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುವ ಸಲುವಾಗಿ ರೈಟ್ ಬಾರತ ತಂಡವನ್ನು ತೊರೆದಾಗ, ಅವರೇ ದೇಶ ಕಂಡ ಅತ್ಯಂತ ಯಶಸ್ವಿ ಕೋಚ್ ಆಗಿದ್ದದು ಅವರ ಶ್ರಮಕ್ಕೆ ಸಿಕ್ಕ ತಕ್ಕ ಪ್ರತಿಪಲ ಎಂದೇ ಹೇಳಬೇಕು! ಕ್ರಿಕೆಟ್ ಅಂಗಳದಿಂದ ದೂರ ಸರಿದ ಮೇಲೆ ಬಾರತದಲ್ಲಿ ಕಳೆದ ಅವರ ವ್ರುತ್ತಿಬದುಕಿನ ಈ ಅತೀ ಮುಕ್ಯ ಗಟ್ಟದ ಅನುಬವಗಳನ್ನು ಪೋಣಿಸಿ ‘ಇಂಡಿಯನ್ ಸಮರ‍್ಸ್’ ಎಂಬ ಪುಸ್ತಕವನ್ನು ರೈಟ್ 2007 ರಲ್ಲಿ ಹೊರತಂದರು.

ಗ್ರೇಗ್ ಚಾಪೆಲ್ (2005-2007)

ಬಹುಶ ದೇಶದ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವಿವಾದಮಯ ಅವದಿ ಚಾಪೆಲ್ ರದು ಎಂದು ಡಾಳಾಗಿ ಕಾಣುತ್ತದೆ. ತಮ್ಮ ನಿಕಟವರ‍್ತಿಯಾಗಿದ್ದ ಗ್ರೇಗ್ ಚಾಪೆಲ್ ರನ್ನು ಕೋಚ್ ಆಗಿ ಆರಿಸುವಂತೆ ಬಾರತದ ಕ್ರಿಕೆಟ್ ಮಂಡಳಿಗೆ ಅಸಲಿಗೆ ತಾಕೀತು ಮಾಡಿದ್ದು ನಾಯಕ ಸೌರವ್ ಗಂಗೂಲಿ. ಆದರೆ ಕೆಲವೇ ತಿಂಗಳಲ್ಲಿ ಕಳಪೆ ಪ್ರದರ‍್ಶನದ ಹಿನ್ನಲೆಯಲ್ಲಿ ಗಂಗೂಲಿರನ್ನೇ ತಂಡದಿಂದ ಕೊಕ್ ನೀಡುವುದಕ್ಕೆ ಚಾಪೆಲ್ ಹಿಂಜರಿಯಲಿಲ್ಲ! ಈ ಬಗೆಯಲ್ಲಿ ಆಟಕ್ಕಿಂತ ಯಾರೂ ದೊಡ್ಡವರಲ್ಲ ಎನ್ನುತ್ತಾ ಬಾರತದ ವ್ಯಕ್ತಿಪೂಜೆ ಸಂಸ್ಕ್ರುತಿಗೆ ಸವಾಲೊಡ್ಡಿ, ಕ್ರಿಕೆಟ್ ವಲಯದ ಕೆಲವು ಪ್ರಬಾವಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಚಾಪೆಲ್ ತಂಡದೊಂದಿಗೆ ದ್ರಾವಿಡ್ ರ ಮುಂದಾಳ್ತನದಲ್ಲಿ ತಕ್ಕಮಟ್ಟಿನ ಯಶಸ್ಸನ್ನೂ ಕಂಡಿದ್ದದು ದಿಟ. ತವರಲ್ಲಿ ಶ್ರೀಲಂಕಾ ಹಾಗೂ ಇಂಗ್ಲೆಂಡ್ ಎದುರು ಒಂದು-ದಿನದ ಸರಣಿಗಳಲ್ಲಿ ಕ್ರಮವಾಗಿ 6-1 ಹಾಗೂ 5-1 ರ ಅಂತರದಿಂದ ಗೆದ್ದರೆ, 2006 ರಲ್ಲಿ ಪಾಕಿಸ್ತಾನದ ನೆಲದಲ್ಲೂ ಕೂಡ 4-1 ರ ಬರ‍್ಜರಿ ಗೆಲುವು ಪಡೆದು ತಂಡ ಇತಿಹಾಸ ನಿರ‍್ಮಿಸಿತು. ಎಂತಹ ದೊಡ್ಡ ಗುರಿಯನ್ನೂ ಬೆನ್ನಟ್ಟುವಂತಹ ಗೆಲುವಿನ ತಂತ್ರ ರೂಪಿಸಿ ಈ ಬಗೆಯಲ್ಲಿ ಸತತ 17 ಗೆಲುವುಗಳನ್ನು ಸಾದಿಸಿದ್ದು ಇಂದಿಗೂ ದಾಕಲೆಯೇ! ಇವರ ಕಾಲದಲ್ಲಿ ಬಾರತ ತಂಡ ದಕ್ಶಿಣ ಆಪ್ರಿಕಾದ ನೆಲದಲ್ಲಿ ಚೊಚ್ಚಲ ಟೆಸ್ಟ್ ಗೆಲುವು ಪಡೆದದ್ದು ಮಾತ್ರವಲ್ಲದೆ ವೆಸ್ಟ್ ಇಂಡೀಸ್ ನಲ್ಲಿ 35 ವರ‍್ಶಗಳ ಬಳಿಕ 1-0 ಇಂದ ಟೆಸ್ಟ್ ಸರಣಿ ಗೆದ್ದು ಬೀಗಿತು. ಪೀಲ್ಡಿಂಗ್ ಮತ್ತು ಆಲ್ ರೌಂಡ್ ಆಟಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದ ಚಾಪೆಲ್ ಯುವ ಆಟಗಾರರಾದ ರೈನಾ, ದೋನಿ, ಪಟಾಣ್ ರನ್ನು ಮುನ್ನೆಲೆಗೆ ತರುವಲ್ಲಿ ಮುಕ್ಯ ಪಾತ್ರ ವಹಿಸಿದರು. ಹಾಗೆಯೇ ತಂಡದ ಕೆಲವು ಹಿರಿಯ ಆಟಗಾರರಿಗೆ ಅವರ ಕಾರ‍್ಯವೈಕರಿ ಹಾಗೂ ತರಬೇತಿಯ ವಿದಾನಗಳು ಹಿಡಿಸದೆ ಡ್ರೆಸಿಂಗ್ ಕೋಣೆ ಗೊಂದಲದ ಗೂಡಾಗಿದ್ದು ಕೂಡ ಸತ್ಯ. ಬಳಿಕ ಬಹಳ ನಿರೀಕ್ಶೆ ಹುಟ್ಟಿಸಿದ್ದ ತಂಡ ವೆಸ್ಟ್ ಇಂಡೀಸ್ ನಲ್ಲಿ ನಡೆದ 2007 ರ ವಿಶ್ವಕಪ್‌ನಲ್ಲಿ ನೀರಸ ಪ್ರದರ‍್ಶನ ತೋರಿ ಮೊದಲ ಸುತ್ತಲ್ಲೇ ಪಂದ್ಯಾವಳಿಯಿಂದ ಹೊರಬಿದ್ದು ಗ್ರೇಗ್ ಚಾಪೆಲ್ ತಂಡವನ್ನು ತೊರೆಯುವಂತೆ ಮಾಡಿತು!

ಗ್ಯಾರಿ ಕರ‍್ಸ್ಟನ್ (2008-2011)

ನಾಯಕ ಮಹೇಂದ್ರ ಸಿಂಗ್ ದೋನಿ ಮತ್ತು ಕೋಚ್ ಗ್ಯಾರಿ ಕರ‍್ಸ್ಟನ್ ರ ಜುಗಲ್ಬಂದಿ ತಂಡವನ್ನು ಸಾಕಶ್ಟು ಬಲಗೊಳ್ಳಿಸಿತು. ಆಗಿನ್ನೂ ಟಿ-20 ಮಾದರಿಯ ಪಂದ್ಯ ಹೊಸದಾಗಿ ಮುನ್ನೆಲೆಗೆ ಬಂದಿದ್ದರೂ 2007 ರ ವಿಜೇತ ಬಾರತ ತಂಡ 2009 ಮತ್ತು 2010 ರ ವಿಶ್ವಕಪ್ ಗಳಲ್ಲಿ ನಿರಾಸೆ ಮೂಡಿಸಿದ್ದು ಈ ಜೋಡಿಯ ಗುರುತಿಸಬಹುದಾದ ಒಂದೇ ಒಂದು ವೈಪಲ್ಯ ಎನ್ನಬಹುದು. ಇದರ ಹೊರತಾಗಿ 2010/11 ರಲ್ಲಿ ಮೊದಲ ಬಾರಿಗೆ ದಕ್ಶಿಣ ಆಪ್ರಿಕಾದಲ್ಲಿ ಟೆಸ್ಟ್ ಸರಣಿಯನ್ನು 1-1 ರಿಂದ ಡ್ರಾ ಮಾಡಿಕೊಂಡಿದ್ದು ಇಂದಿಗೂ ದಾಕಲೆಯೇ! ಶ್ರೀಲಂಕಾದಲ್ಲೂ ಟೆಸ್ಟ್ ಸರಣಿಯಲ್ಲಿ 1-1 ರಿಂದ ಸಮಬಲ ಸಾದಿಸಲು ತಂಡ ಯಶಸ್ವಿಯಾಗಿತ್ತು. ಜೊತೆಗೆ ದಶಕಗಳ ಬಳಿಕ ಮೊದಲ ಬಾರಿಗೆ ನ್ಯೂಜಿಲ್ಯಾಂಡ್ ನಲ್ಲಿ 2009 ರಲ್ಲಿ ಟೆಸ್ಟ್ ಸರಣಿಯನ್ನು 1-0 ಯಿಂದ ತನ್ನದಾಗಿಸಿಕೊಂಡಿತ್ತು. ಹಾಗೂ ಈ ವೇಳೆ ತವರಲ್ಲಿ ಆಡಿದ ಎಲ್ಲಾ ಟೆಸ್ಟ್ ಸರಣಿಗಳನ್ನು ತಂಡ ಮುಡಿಗೇರಿಸಿಕೊಂಡಿತ್ತು. ಇನ್ನು ಒಂದು ದಿನದ ಪಂದ್ಯಗಳಲ್ಲಿ ನ್ಯೂಜಿಲ್ಯಾಂಡ್ ನೆಲದಲ್ಲಿ 3-1 ರಿಂದ ಮೊದಲ ಬಾರಿಗೆ ತಂಡ ಸರಣಿ ಗೆಲುವಿನ ರುಚಿ ಕಂಡರೆ 2010 ರಲ್ಲಿ ಶ್ರೀಲಂಕಾಲಿ ನಡೆದ ಪ್ರತಿಶ್ಟಿತ ಏಶಿಯಾ ಕಪ್ ಅನ್ನು ಕೂಡ ನಿರಾಯಾಸವಾಗಿ ಜಯಿಸಿತ್ತು.

ಇಂಡಿಯಾ ಕ್ರಿಕೆಟ್ ತಂಡದ ಗೆಲುವಿನ ನಾಗಾಲೋಟದಿಂದ ಸಹಜವಾಗಿಯೇ 2011 ರ ವಿಶ್ವಕಪ್ ಬಗ್ಗೆ ಸಾಕಶ್ಟು ನಿರೀಕ್ಶೆಗಳು ಹುಟ್ಟುಕೊಂಡಿದ್ದವು. ಕಡೆಗೆ ನೂರು ಕೋಟಿ ಬಾರತೀಯರ ನಿರೀಕ್ಶೆ ಹಾಗೂ ಬಯಕೆಯನ್ನು ಹುಸಿಮಾಡದೆ ಬಾರತ ತಂಡ 28 ವರ‍್ಶಗಳ ಬಳಿಕ ವಿಶ್ವಕಪ್ ಗೆದ್ದು ನಲಿವು ತಂದಿದ್ದು ಈಗ ಇತಿಹಾಸ. ಆಟಗಾರರಿಗೆ ತಮ್ಮ ಅಳವು ಹಾಗೂ ಕುಂದುಗಳ ಅರಿವು ಮೂಡಿಸಿ ಸಲಹೆ-ಸೂಚನೆಗಳನ್ನು ಅವರಿಗೆ ಹಿಡಿಸುವ ಬಗೆಯಲ್ಲಿ ನೀಡುತ್ತಿದ್ದ ಕರ‍್ಸ್ಟನ್ ರ ಸ್ವಬಾವ ಎಲ್ಲರ ಮೆಚ್ಚುಗೆ ಗಳಿಸಿತ್ತು. ಜೊತೆಗೆ ಯಾವುದೇ ಬಗೆಯ ಒತ್ತಡ ಹೇರದೆ ಆಟಗಾರರು ತಮ್ಮ ಅಳವಿನಾಸಾರುವಾಗಿ ಆಡುವಂತಹ ವಾತಾವರಣ ಹುಟ್ಟಿಹಾಕಿದ್ದು ಕರ‍್ಸ್ಟನ್ ರ ಹೆಗ್ಗಳಿಕೆ. ಹಾಗಾಗಿಯೇ ತಂಡದ ಹಿರಿಯರು-ಕಿರಿಯರು ಎಂತಲ್ಲದೆ ಎಲ್ಲರ ನಂಬಿಕೆ ಹಾಗೂ ವಿಶ್ವಾಸವನ್ನು ಅವರು ಗಳಿಸಿದ್ದರು. ಈ ಬಗೆಯಲ್ಲಿ ವಿಶ್ವಕಪ್ ಗೆಲುವಿನ ಹಿಂದೆ ಕರ‍್ಸ್ಟನ್ ರ ದೊಡ್ಡ ಕೊಡುಗೆ ಇತ್ತು ಎಂಬುದನ್ನು ಮರೆಯಕೂಡದು. ಇವರ ಅವದಿಯಲ್ಲಿ ಬಾರತದ ಡ್ರೆಸಿಂಗ್ ಕೊಣೆ ಒಂದು ಸುಕೀ ಕುಟುಂಬವಾಗಿತ್ತು ಎಂಬುದು ಸುಳ್ಳಲ್ಲ. ಯಶಸ್ಸಿನ ತುತ್ತತುದಿ ತಲುಪಿದ್ದರೂ 2011 ರ ವಿಶ್ವಕಪ್ ಬಳಿಕ ಬಾರತ ತಂಡದೊಂದಿಗೆ ಕರ‍್ಸ್ಟನ್ ತಮ್ಮ ಸಂಬಂದವನ್ನು ಕಡೆದುಕೊಂಡು ಎಲ್ಲರಿಗೂ ಬೇಸರ ಹಾಗೂ ಅಚ್ಚರಿ ಮೂಡಿಸಿದರು. ಆದರೆ ಈಗಲೂ ಕರ‍್ಸ್ಟನ್ ರ ಕೊಡುಗೆಯನ್ನು ಬಾರತದ ಕ್ರಿಕೆಟ್ ಅಬಿಮಾನಿಗಳು ನೆನೆದು ದನ್ಯವಾದ ವ್ಯಕ್ತಪಡಿಸುತ್ತಾರೆ. ದೇಶ ಕಂಡ ಅತ್ಯಂತ ಯಶಸ್ವಿ ಹಾಗೂ ಜನಮನ್ನಣೆ ಪಡೆದ ಕೋಚ್ ಗ್ಯಾರಿ ಕರ‍್ಸ್ಟನ್ ಎಂಬುದರಲ್ಲಿ ಎರಡು ಮಾತಿಲ್ಲ!

(ಚಿತ್ರ ಸೆಲೆ: sportskeeda.com, wikipedia.org, cricbuzz.com, indianexpress.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: