ಬಾರತದ ಕ್ರಿಕೆಟ್ ತಂಡದ ಕೋಚ್ ಗಳ ಇತಿಹಾಸ – ಕಂತು 3

– ರಾಮಚಂದ್ರ ಮಹಾರುದ್ರಪ್ಪ.

 

ಕಂತು 1 ಕಂತು 2

ಡಂಕನ್ ಪ್ಲೆಚರ್ (2011-2015)

ಎಂಟು ವರ‍್ಶಗಳ ಕಾಲ ಇಂಗ್ಲೆಂಡ್ ತಂಡದ ಕೋಚ್ ಆಗಿ ಯಶಸ್ಸು ಕಂಡಿದ್ದ ಜಿಂಬಾಬ್ವೆಯ ಡಂಕನ್ ಪ್ಲೆಚರ್ 2011 ರ ವಿಶ್ವಕಪ್ ಬೆನ್ನಲ್ಲೇ ಬಾರತ ತಂಡದ ಕೋಚ್ ಆಗಿ ನೇಮಕಗೊಂಡರು. ಹೆಚ್ಚು ಮಾತಾಡದ ತಮ್ಮದೇ ಆದ ವಿಶಿಶ್ಟ ಬಗೆಯ ತರಬೇತಿ ಮಾದರಿಯನ್ನು ಹೊಂದಿದ್ದ ಪ್ಲೆಚರ್ ತಮ್ಮ ನಾಲ್ಕು ವರ‍್ಶದ ಅವದಿಯಲ್ಲಿ ತಂಡದೊಂದಿಗೆ ಸಮಾನವಾಗಿ ಏಳು-ಬೀಳುಗಳನ್ನು ಕಂಡರು. ಟೆಸ್ಟ್ ಗಳಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ 0-4 ರಿಂದ ಹೀನಾಯ ಸರಣಿ ಸೋಲುಗಳನ್ನು ಕಂಡರೆ, ತವರಲ್ಲೂ ಇಂಗ್ಲೆಂಡ್ ಎದುರು 1-2 ರಿಂದ ಟೆಸ್ಟ್ ಸರಣಿ ಸೋತು ತೀವ್ರ ಮುಜುಗರಕ್ಕೆ ಒಳಗಾದರು. ಇದು ಎಂಟು ವರ‍್ಶಗಳ ಬಳಿಕ ತವರಲ್ಲಿ ಬಾರತದ ಮೊದಲ ಸೋಲಾಗಿದ್ದಿದ್ದರಿಂದ ಪ್ಲೆಚರ್ ರ ಕಡೆಗೆ ಕೆಲವು ಮಾಜಿ ಆಟಗಾರರು ಹಾಗೂ ವಿಮರ‍್ಶಕರು ಬೆರಳು ತೋರಿಸಿದರು. ಆದರೆ ಇದರ ಬೆನ್ನಲ್ಲೇ 2013 ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾವನ್ನು ಬಾರತದಲ್ಲಿ 4-0 ಇಂದ ಮಣಿಸಿ ಬರ‍್ಜರಿ ಟೆಸ್ಟ್ ಸರಣಿ ಜಯವನ್ನು ತಂಡ ದಾಕಲಿಸಿತು. ಇತಿಹಾಸದಲ್ಲಿ ಇದು ಇಂದಿಗೂ ಬಲಾಡ್ಯ ಆಸ್ಟ್ರೇಲಿಯಾ ಎದುರು ಬಾರತದ ಏಕೈಕ ಕ್ಲೀನ್ ಸ್ವೀಪ್.

ಟಿ-20 ಪಂದ್ಯಗಳಲ್ಲಿ ಹಾಗೂ 2012 ರ ವಿಶ್ವಕಪ್ ನಲ್ಲಿ ಹೆಚ್ಚು ಪ್ರಬಾವ ಬೀರಲಾಗದಿದ್ದರೂ 2014 ರ ವಿಶ್ವಕಪ್ ನ ಪೈನಲ್ ತಲುಪಿ ತಂಡ ಸಮಾದಾನಕರ ಆಟ ಆಡಿತು. ಇನ್ನು ಒಂದು ದಿನದ ಪಂದ್ಯಗಳಲ್ಲಿ ಟೆಸ್ಟ್ ಮಾನ್ಯತೆ ಪಡೆದಿರುವ ಎಲ್ಲಾ ಅಂತರಾಶ್ಟ್ರೀಯ ತಂಡಗಳು ಪಾಲ್ಗೊಂಡಿದ್ದ 2013 ರ ಚಾಂಪಿಯನ್ಸ್ ಟ್ರೋಪಿ ಗೆಲುವು ಕಂಡಿತವಾಗಿಯೂ ಬಾರತ ತಂಡದೊಂದಿಗೆ ಪ್ಲೆಚರ್ ರ ಶ್ರೇಶ್ಟ ಸಾದನೆ. ಆದರೆ ಬಳಿಕ ನಿರಂತರತೆ ಕಾಪಾಡಿಕೊಳ್ಳಲಾಗದೆ ತಂಡ ಹಳಿ ತಪ್ಪಿದಾಗ ಕ್ರಿಕೆಟ್ ಮಂಡಳಿ 2014 ರಲ್ಲಿ ರವಿ ಶಾಸ್ತ್ರಿ ಅವರನ್ನು ಟೀಮ್ ಡೈರೆಕ್ಟರ್ (ಅನದಿಕ್ರುತ ಕೋಚ್) ಆಗಿ ನೇಮಿಸಿ ಪ್ಲೆಚರ್ ರ ಪ್ರತಿಶ್ಟೆಗೆ ದಕ್ಕೆ ಉಂಟು ಮಾಡಿತು. ಕಡೆಗೆ 2015 ರ ವಿಶ್ವಕಪ್ ನಲ್ಲಿ ಬಾರತ ಸೆಮಿಪೈನಲ್ ನಲ್ಲಿ ಮುಗ್ಗರಿಸಿದಾಗ ತಂಡದೊಂದಿಗೆ ಪ್ಲೆಚರ್ ರ ನಂಟು ಕೊನೆಗೊಂಡಿತು. ಬಹುಶ ಜಾನ್ ರೈಟ್ ರ ನಂತರ ಮುಕ್ಯವಾಹಿನಿಗೆ ಬಾರದೆ ಹಿನ್ನಲೆಯಲ್ಲೇ ಹೆಚ್ಚು ಕೆಲಸ ಮಾಡಿದ ಬಾರತದ ಕೋಚ್ ಪ್ಲೆಚರ್ ಎಂದರೆ ತಪ್ಪಾಗಲಾರದು. ಅವರ ಕಾರ‍್ಯ ವಿದಾನಗಳ ಬಗ್ಗೆ ವಿರಾಟ್ ಕೊಹ್ಲಿ ಹಾಗೂ ನಾಯಕ ದೋನಿ ವಿಶೇಶ ಮೆಚ್ಚುಗೆ ಹೊಂದಿದ್ದರು. ಆದರೆ ಪ್ಲೆಚರ್ ರ ಕ್ರಿಕೆಟ್ ಅನುಬವ ಹಾಗೂ ಗ್ನಾನವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಬಾರತ ಸೋತಿತು ಎಂದು ಇಂಗ್ಲೆಂಡ್ ಮಾದ್ಯಮಗಳಲ್ಲಿ ವರದಿ ಆಗಿತ್ತು. ಪ್ಲೆಚರ್ ಮಾರ‍್ಗದರ‍್ಶಿಯಾಗಿದ್ದ ಕಾಲ ಯಾವುದೇ ಬಗೆಯ ದೊಡ್ಡ ವಿವಾದಗಳ ಸುಳಿಯಲ್ಲಿ ತಂಡ ಸಿಲುಕಲಿಲ್ಲ ಎಂಬುದು ಕೂಡ ಅವರ ವ್ರುತ್ತಿಪರತೆಗೆ ಎತ್ತುಗೆ.

ರವಿ ಶಾಸ್ತ್ರಿ (2014-16; 2017-21)

ಎರಡು ಪ್ರತ್ಯೇಕ ಅವದಿಗಳಲ್ಲಿ ಒಟ್ಟು ಅತಿಹೆಚ್ಚು ಆರು ವರ‍್ಶಗಳ ಕಾಲ ಕೋಚ್ ಆಗಿ ಬಾರತ ತಂಡದ ಉಸ್ತುವಾರಿ ನಿರ‍್ವಹಿಸಿದ ಶ್ರೇಯಸ್ಸು ಬಾರತದ ರವಿ ಶಾಸ್ತ್ರಿ ಅವರದು. ತಮ್ಮ ನೇರ ನುಡಿ ಹಾಗೂ ಆಕ್ರಮಣಕಾರಿ ಮನೋಬಾವಕ್ಕೆ ಹೆಸರುವಾಸಿಯಾಗಿರುವ ಶಾಸ್ತ್ರಿ ತಂಡವನ್ನೂ ಅದೇ ನಿಟ್ಟಿನಲ್ಲಿ ಬೆಳೆಸಿದರು. ಅದರಲ್ಲೂ ನಾಯಕ ಕೊಹ್ಲಿಯೊಂದಿಗೆ ಬಾರತ ಟೆಸ್ಟ್ ಪಂದ್ಯಗಳನ್ನು ಆಡುವ ಬಗೆಯನ್ನೇ ಮಾರ‍್ಪಡಿಸಿ ಸಾಲು-ಸಾಲು ಗೆಲುವುಗಳನ್ನು ಕಂಡರು. ಬಾರತದ ಮಟ್ಟಿಗೆ ಇದು ಟೆಸ್ಟ್ ಗಳಲ್ಲಿ ಹಿಂದೆಂದೂ ಕಾಣದಂತಹ ಅಬೂತಪೂರ‍್ವ ಯಶಸ್ಸು. ಶಾಸ್ತ್ರಿ ಅವರ ಮೊದಲ ಅವದಿಯಲ್ಲಿ 12 ವರ‍್ಶಗಳ ಬಳಿಕ ತಂಡ 2015 ರಲ್ಲಿ ಶ್ರೀಲಂಕಾದಲ್ಲಿ 2-1 ಇಂದ ಟೆಸ್ಟ್ ಸರಣಿ ಗೆದ್ದರೆ, ತವರಲ್ಲಿ ಬಲಿಶ್ಟ ದಕ್ಶಿಣ ಆಪ್ರಿಕಾ ಎದುರು 3-0 ರಿಂದ ಟೆಸ್ಟ್ ಸರಣಿ ತನ್ನದಾಗಿಸಿಕೊಂಡಿತು. ಇನ್ನು ಟಿ-20 ಮಾದರಿಯಲ್ಲಿ 2016 ರ ಏಶಿಯಾ ಕಪ್ ಗೆಲುವು ಹಾಗೂ ಕಾಂಗರೂ ನಾಡಲ್ಲಿ 3-0 ಅಂತರದಿಂದ ಗೆದ್ದ ಸರಣಿ ಗೆಲುವು ಪ್ರಮುಕವಾಗಿದ್ದವು. ಬಳಿಕ ಒಂದು ವರ‍್ಶ ಹೊರಗುಳಿದಿದ್ದ ಶಾಸ್ತ್ರಿ 2017 ರಲ್ಲಿ ಮತ್ತೊಮ್ಮೆ ಕೋಚ್ ಆಗಿ ಚುಕ್ಕಾಣಿ ಹಿಡಿದು ಸಾಕಶ್ಟು ಗೆಲುವುಗಳ ಸಿಹಿ ಉಂಡರು.

ಬಾರತದ ಟೆಸ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ 2018/19 ರಲ್ಲಿ 2-1 ಅಂತರದಿಂದ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ‍್ಮಿಸಿದರೆ, 2020/21 ರಲ್ಲಿ ಬಹುತೇಕ ಹೊಸಬರೇ ಇದ್ದ ಎರಡನೇ ದರ‍್ಜೆಯ ತಂಡದೊಂದಿಗೆ ಮತ್ತದೇ 2-1 ವಿನ ಜಯ ದಾಕಲಿಸಿ ಪ್ರಪಂಚವೇ ನಿಬ್ಬೆರಗಾಗುವಂತೆ ಮಾಡಿತು. ಇದರ ಹಿಂದೆ ಯುವ ಆಟಗಾರರನ್ನು ಪೋಶಿಸಿ ಬೆಳೆಸಿದ ಕೋಚ್ ಶಾಸ್ತ್ರಿ ಅವರ ಶ್ರಮ ಬಹಳಶ್ಟು ಇದ್ದದು ತಿಳಿಯದೇ ಏನಿಲ್ಲ. ಅದರಲ್ಲೂ ಅವರು ಯುವ ವೇಗಿಗಳ ಅಳವನ್ನು ಗುರುತಿಸಿ ಗುಣಮಟ್ಟದ 5-6 ವೇಗಿಗಳ ಪಡೆಯನ್ನು ಕಟ್ಟಿ ಕಾಂಗರೂಗಳನ್ನು ನಡುಗಿಸಿದ್ದ ಪರಿ ಅಬಿಮಾನಿಗಳ ಮೈನವಿರೇಳಿಸುವಂತೆ ಮಾಡಿದ್ದು ಸುಳ್ಳಲ್ಲ. ಇನ್ನು ಒಂದು-ದಿನದ ಪಂದ್ಯಗಳಲ್ಲಿ 2018 ರ ಏಶಿಯಾ ಕಪ್ ಹಾಗೂ ಹಲವಾರು ಸರಣಿಗಳನ್ನು ಬಾರತದಲ್ಲೂ, ಹೊರದೇಶಗಳಲ್ಲೂ ಗೆದ್ದರೂ ಬಹಳ ನಿರೀಕ್ಶೆ ಹುಟ್ಟಿಸಿದ್ದ 2019 ರ ವಿಶ್ವಕಪ್ ನಲ್ಲಿ ತಂಡದ ಹೋರಾಟ ಸೆಮಿಪೈನಲ್ ನಲ್ಲೇ ಕೊನೆಗೊಂಡಿದ್ದು ಶಾಸ್ತ್ರಿರಿಗೆ ತೀವ್ರ ಆಗಾತ ನೀಡಿತು. ಆ ಬಳಿಕ 2021 ರ ಟಿ-20 ವಿಶ್ವಕಪ್ ಗೆದ್ದು ತಮ್ಮ ಕೋಚ್ ಅವದಿಯ ಕೊರತೆಯನ್ನು ನೀಗಿಸಿಕೊಳ್ಳಲು ಹಾತೊರೆಯುತ್ತಿದ್ದ ಶಾಸ್ತ್ರಿರಿಗೆ ಕಡೆಗೂ ಅದ್ರುಶ್ಟ ಕೈಗೂಡಲೇ ಇಲ್ಲ. ಪ್ರತಿಬಾನ್ವಿತ ಆಟಗಾರರ ತಂಡವಾಗಿದ್ದರೂ ತಂಡ ಮೊದಲ ಹಂತದಲ್ಲೇ ಹೊರಬಿದ್ದು ನಿರಾಸೆ ಅನುಬವಿಸಿತು. ಅಲ್ಲಿಗೆ ಯಾವುದೇ ಐಸಿಸಿ ಟ್ರೋಪಿ ಗೆಲ್ಲದೇ ಕೋಚ್ ಶಾಸ್ತ್ರಿರ ಕಾಲಾವದಿ ಕೊನೆಗೊಂಡಿತು. ಆದರೆ ಆಟಗಾರರಲ್ಲಿ ತನ್ನಂಬಿಕೆ ತುಂಬಿದ ಶಾಸ್ತ್ರಿರವರ ಕೊಡುಗೆಯನ್ನು ಮುಕ್ಯವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ತಂಡ ಎಂದಿಗೂ ಮರೆಯುವಂತಿಲ್ಲ. ಇಂದು ಹೊರದೇಶಗಳಲ್ಲೂ ಬಾರತ ತಂಡ ಟೆಸ್ಟ್ ಗಳಲ್ಲಿ ಕಣಕ್ಕಿಳಿದರೆ ಗೆಲ್ಲುವ ನೆಚ್ಚಿನ ತಂಡ ಎಂದು ವಿಮರ‍್ಶಕರು ಗುರುತಿಸುವುದು ಕೋಚ್ ಶಾಸ್ತ್ರಿ ಅವರ ಕಾರ‍್ಯವಿದಾನಗಳ ಪಲ ಎನ್ನುವುದರಲ್ಲಿ ಎರಡು ಮಾತಿಲ್ಲ.

ಅನಿಲ್ ಕುಂಬ್ಳೆ (2016-17)

ಕೆಲವು ಅನೀರೀಕ್ಶಿತ ಬೆಳವಣಿಗೆಗಳ ನಂತರ 2016 ರಲ್ಲಿ ಅನಿಲ್ ಕುಂಬ್ಳೆ ಏಕಾಏಕಿ ತಂಡದ ಕೋಚ್ ಹುದ್ದೆಗೆ ಏರಿದರು. ಕಪಿಲ್ ದೇವ್ ರ ಬಳಿಕ ಒಬ್ಬ ದಿಗ್ಗಜ ಆಟಗಾರ ಮತ್ತೊಮ್ಮೆ ಬಾರತದ ಕೋಚ್ ಆದದ್ದು ಸಹಜವಾಗಿಯೇ ಬಹಳ ನಿರೀಕ್ಶೆಗಳನ್ನು ಹುಟ್ಟುಹಾಕಿದ್ದವು. ಶಿಸ್ತು, ಸಂಯಮ ಹಾಗೂ ವ್ರುತ್ತಿಪರತೆಗೆ ಇನ್ನೊಂದು ಹೆಸರು ಎಂಬಂತಿರುವ ಕುಂಬ್ಳೆ, ಆ ನಿರೀಕ್ಶೆಗಳನ್ನು ಹುಸಿ ಮಾಡದೆ ತಮ್ಮ ಸೀಮಿತ ಅವದಿಯಲ್ಲಿ ತಂಡವನ್ನು ಉತ್ತುಂಗಕ್ಕೆ ಕೊಂಡೊಯ್ದರು. ತಮ್ಮ ಅನುಬವವನ್ನು ದಾರೆ ಎರೆದು ತಂಡವನ್ನು ಎಲ್ಲಾ ಮಾದರಿಯ ಸವಾಲುಗಳಿಗೆ ಸಜ್ಜು ಮಾಡಿದರು.

ಮೊದಲಿಗೆ ವೆಸ್ಟ್ ಇಂಡೀಸ್ ನಲ್ಲಿ 2-0 ಇಂದ ಟೆಸ್ಟ್ ಸರಣಿ ಗೆದ್ದು ಕಾತೆ ತೆರೆದ ಅವರು ತವರಲ್ಲೂ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದರು. ಆ ವೇಳೆ ಬಾರತದಲ್ಲಿ ಆಡಿದ 13 ಟೆಸ್ಟ್ ಗಳ ಪೈಕಿ ತಂಡ ಕೇವಲ ಒಂದರಲ್ಲಿ ಮಾತ್ರ ಸೋಲುಂಡು ತನ್ನ ಪ್ರಾಬಲ್ಯವನ್ನು ಸಾಬೀತು ಮಾಡಿತು. ಕ್ರಮವಾಗಿ ನ್ಯೂಜಿಲ್ಯಾಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ಎದುರು ಟೆಸ್ಟ್ ಸರಣಿಗಳನ್ನು ನಿರಾಯಾಸವಾಗಿ ಗೆದ್ದು ಬೀಗಿತು. ಒಂದು-ದಿನದ ಸರಣಿಗಳಲ್ಲೂ ತಂಡ ಗೆಲುವು ಪಡೆದು ಕುಂದುಗಳಿಲ್ಲದ ಪರಿಪೂರ‍್ಣ ತಂಡವಾಗುವತ್ತಾ ದಾಪುಗಾಲಿಡುತ್ತಿದ್ದ ಹೊತ್ತಿನಲ್ಲೇ ನಾಯಕ ಕೊಹ್ಲಿ ಹಾಗೂ ಕೋಚ್ ಕುಂಬ್ಳೆ ನಡುವಿನ ಬಿನ್ನಾಬಿಪ್ರಾಯಗಳ ಬಗ್ಗೆ ವರದಿಗಳು ಹೊರಬಂದವು. ಕೊಹ್ಲಿರಿಗೆ ಕುಂಬ್ಳೆರ ತರಬೇತಿ ವಿದಾನ ಹಿಡಿಸದೇ ಇರುವುದರ ಜೊತೆಗೆ ಅವರಿಂದ ಡ್ರೆಸಿಂಗ್ ಕೋಣೆ ಬಯದ ವಾತಾವರಣದಲ್ಲಿ ಇರುತ್ತದೆ ಎಂದು ನೇರ ಆರೋಪ ಮಾಡಿದರು. ನಂತರ ಇಬ್ಬರ ನಡುವೆ ಸಂದಾನದ ಪ್ರಯತ್ನಗಳನ್ನು ಆಯ್ಕೆ ಮಂಡಳಿ ಮಾಡಿದರೂ ಏನೂ ಕೈಗೂಡದೆ 2017 ರ ಚಾಂಪಿಯನ್ಸ್ ಟ್ರೋಪಿ ಪೈನಲ್ ನ ಸೋಲಿನ ಬಳಿಕ ದಿಗ್ಗಜ ಕುಂಬ್ಳೆ ರಾಜೀನಾಮೆ ನೀಡಿ ಹೊರನಡೆದರು. ಇದು ಕುಂಬ್ಳೆರ ವ್ರುತ್ತಿಬದುಕಿನ ಒಂದು ಕರಾಳ ಅದ್ಯಾಯ ಎಂಬುದು ಮಾತ್ರ ಸುಳ್ಳಲ್ಲ. ಕೋಚ್ ಆಗಿ ಒಳ್ಳೆ ಕೆಲಸ ಮಾಡಿ ಸಾಲು-ಸಾಲು ಸರಣಿ ಗೆಲುವುಗಳನ್ನು ತಂದಿತ್ತರೂ, ಅವರ ಸೇವೆಯನ್ನು ಹಟಾತ್ತನೆ ಕೊನೆಗೊಳ್ಳಿಸಿದ್ದು ಬಾರತದ ಕ್ರಿಕೆಟ್ ನ ದೊಡ್ಡ ದುರಂತವೇ ಸರಿ.

ರಾಹುಲ್ ದ್ರಾವಿಡ್ – ಹಾಲಿ ಕೋಚ್ (2021-2023*)
ಆಟಗಾರನಾಗಿ ಗೋಡೆ ಎಂದು ಕ್ಯಾತಿ ಪಡೆದು, ಬಳಿಕ ಬಾರತದ ಕಿರಿಯರ ತಂಡ ಹಾಗೂ ಬಾರತ-ಏ ತಂಡಗಳನ್ನು ಉನ್ನತಿಯೆಡೆಗೆ ಕೊಂಡೊಯ್ದು ಕೋಚ್ ಆಗಿ ತಮ್ಮ ಆಳವನ್ನು ತೋರಿದ್ದ ರಾಹುಲ್ ದ್ರಾವಿಡ್ 2021 ರ ಕೊನೆಯಲ್ಲಿ ಬಾರತ ತಂಡದ ಕೋಚ್ ಹೊಣೆ ಹೊತ್ತರು. ಮೊದಲಿಗೆ ಮನೆ ಅಂಗಳದಲ್ಲೇ ನ್ಯೂಜಿಲ್ಯಾಂಡ್ ಎದುರು ಟೆಸ್ಟ್ ಸರಣಿ ಗೆದ್ದ ತಂಡ, ಅದೇ ಸಾಲಿನ ದಕ್ಶಿಣ ಆಪ್ರಿಕಾ ಪ್ರವಾಸದ ಟೆಸ್ಟ್ ಹಾಗೂ ಒಂದು-ದಿನದ ಪಂದ್ಯಗಳ ಸರಣಿಯನ್ನು ಸೋತು ತೀವ್ರ ಟೀಕೆಗೆ ಗುರಿಯಾಯಿತು. ಸೊರಗಿರುವ ದಕ್ಶಿಣ ಆಪ್ರಿಕಾ ಎದುರು ಕೂಡ ಬಾರತ ಈ ರೀತಿ ಎಡವಿದ್ದರಿಂದ ಸಹಜವಾಗಿಯೇ ದ್ರಾವಿಡ್ ರ ತರಬೇತಿ ವಿದಾನಗಳ ಬಗ್ಗೆ ಕೇಳ್ವಿಗಳು ಏಳಲಾರಂಬಿಸಿದವು. ಇದು ಸಾಲದು ಎಂಬಂತೆ ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಗೆಲ್ಲುವ ಬಂಗಾರದಂತಹ ಅವಕಾಶವನ್ನೂ ತಂಡ ಕೈಚೆಲ್ಲಿತು. ಆ ನಂತರ ಬಾರತದಲ್ಲಿ ಹಾಗೂ ಹೊರದೇಶದಲ್ಲೂ ಹಲವಾರು ಟಿ-20 ಹಾಗೂ ಒಂದು-ದಿನದ ಸರಣಿಗಳನ್ನು ಗೆದ್ದರೂ 2022 ರ ಟಿ-20 ವಿಶ್ವಕಪ್ ನಲ್ಲಿ ತಂಡ ಮತ್ತೊಮ್ಮೆ ಸೋಲುಂಡಿದ್ದು ದ್ರಾವಿಡ್ ರಿಗೆ ನುಂಗಲಾರದ ತುತ್ತಾಯಿತು. ಈಗ ಬಾಂಗ್ಲಾದೇಶದಲ್ಲೂ ತಂಡ ಒಂದು-ದಿನದ ಪಂದ್ಯಗಳ ಸರಣಿ ಸೋತು ಅಪಹಾಸ್ಯಕ್ಕೆ ಗುರಿಯಾಗಿದೆ. ದ್ರಾವಿಡ್ ಆಟಗಾರರನ್ನು ಹುರಿದುಂಬಿಸುವಲ್ಲಿ ಹಿಂದುಳಿದಿದ್ದಾರೆ ಎಂಬುದು ವಿಮರ‍್ಶಕರ ಅಂಬೋಣವಾದರೂ ಮೇಲ್ನೋಟಕ್ಕೇ ಅವರ ಮಾತಲ್ಲಿ ಹುರುಳಿರುವುದು ತಿಳಿಯುತ್ತದೆ. ಸದ್ಯಕ್ಕೆ ದ್ರಾವಿಡ್ ರ ಯಾವುದೇ ಯೋಜನೆಗಳು ಪಲ ನೀಡುತ್ತಿಲ್ಲ. ಅದನ್ನು ಎಲ್ಲರೂ ಒಪ್ಪಲೇಬೇಕು. ಡ್ರೆಸ್ಸಿಂಗ್ ಕೋಣೆಯಲ್ಲಿ ದ್ರಾವಿಡ್ ರ ಸಪ್ಪೆ ಮೊಗ ತಂಡದ ಸದ್ಯದ ಪರಿಸ್ತಿತಿಗೆ ಹಿಡಿದ ಕನ್ನಡಿಯೇ ಆಗಿದೆ.

2023 ರ ವಿಶ್ವಕಪ್ ಗೆ ಇನ್ನೂ 10 ತಿಂಗಳು ಮಾತ್ರ ಇರುವುದರಿಂದ ತಂಡವನ್ನು ಮತ್ತೆ ಗೆಲುವಿನ ಲಯಕ್ಕೆ ತರುವ ದೊಡ್ಡ ಜವಾಬ್ದಾರಿ ದ್ರಾವಿಡ್ ರ ಹೆಗಲೇರಿದೆ. ಆದರೆ ಆಟಗಾರರ ಗಾಯದ ಸಮಸ್ಯೆ, ವಿಶ್ರಾಂತಿಯ ಬೇಡಿಕೆಗಳ ನಡುವೆ ಒಂದು ತಂಡವಾಗಿ ನೆಲೆ ಕಂಡುಕೊಳ್ಳಲಾಗದೆ ಸರಣಿಯಿಂದ ಸರಣಿಗೆ ಹೊಸ ನಾಯಕನನ್ನು ನೇಮಿಸುತ್ತಾ ಆಡುತ್ತಿರುವ ತಂಡದಿಂದ ಹೆಚ್ಚೇನು ಎದುರು ನೋಡಲು ಸಾದ್ಯವಿಲ್ಲ ಎಂಬುದು ಆಯ್ಕೆ ಮಂಡಳಿಗೆ ತಿಳಿಯಬೇಕಿದೆ. ಹಾಗಾಗಿ ಎಲ್ಲಾ ಸೋಲುಗಳಿಗೂ ಕೋಚ್ ದ್ರಾವಿಡ್ ಒಬ್ಬರನ್ನೇ ಹೊಣೆ ಮಾಡುವುದು ತಪ್ಪಾದೀತು. ಇನ್ನಾದರೂ ಕ್ರಿಕೆಟ್ ಮಂಡಳಿ ಎಚ್ಚೆತ್ತುಕೊಂಡು, ಬಾರತಕ್ಕೆ ಆಡಲು ಸದಾ ಸಜ್ಜಾಗಿರುವ ಒಂದು ಜವಾಬ್ದಾರಿಯುತ ತಂಡವನ್ನು ಕಟ್ಟಬೇಕಿದೆ. ಹಾಗಾದಲ್ಲಿ ಮಾತ್ರ ಅಂತರಾಶ್ಟ್ರೀಯ ಮಟ್ಟದಲ್ಲಿ ನೆಲೆ ನಿಲ್ಲಲು ಸಾದ್ಯ. ಇಲ್ಲದಿದ್ದರೆ ಎಂತಹ ದಿಗ್ಗಜನೇ ಕೋಚ್ ಅತವಾ ನಾಯಕನಾದರೂ ಪ್ರದರ‍್ಶನದಲ್ಲಿ ಯಾವುದೇ ವ್ಯತ್ಯಾಸ ಕಂಡುಬರಲು ಸಾದ್ಯವಿಲ್ಲ. ಬಾರತ ತಂಡದೊಂದಿಗೆ ಕೋಚ್ ಆಗಿ ದ್ರಾವಿಡ್ ರ ಒಪ್ಪಂದ 2023 ರ ವಿಶ್ವಕಪ್ ವರೆಗೂ ಇರುವುದರಿಂದ ಆಗಿರುವ ತಪ್ಪುಗಳನ್ನು ತಿದ್ದುಕೊಳ್ಳುವ ಅವಕಾಶ ಕಂಡಿತ ಅವರಿಗಿದೆ.

(ಚಿತ್ರ ಸೆಲೆ: wikipedia.org, espncricinfo.com, stumpsandbails.com, espncricinfo.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಸೊಗಸಾದ ಮಾಹಿತಿಯುಕ್ತ ಬರಹ

ಅನಿಸಿಕೆ ಬರೆಯಿರಿ:

Enable Notifications OK No thanks