ಬಹುರೂಪಿ ಚೌಡಯ್ಯನ ವಚನದ ಓದು

– ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು: ಬಹುರೂಪಿ ಚೌಡಯ್ಯ
ಊರು: ರೇಕಳಿಕೆ
ಕಸುಬು: ಕಲಾವಿದ
ವಚನಗಳ ಅಂಕಿತನಾಮ: ರೇಕಣ್ಣಪ್ರಿಯ ನಾಗಿನಾಥ
ದೊರೆತಿರುವ ವಚನಗಳು: 66

ಆಡುವಡೆ
ಸದಾಚಾರಿಗಳ ಕೂಡೆ ಆಡುವುದು
ನುಡಿವಡೆ
ಜಂಗಮ ಪ್ರೇಮಿಯ ಕೂಡೆ ನುಡಿವುದು
ಮಾತಾಡುವಡೆ
ಪ್ರಸಾದಿಯ ಕೂಡೆ ಮಾತನಾಡುವುದು
ಭಕ್ತಿಹೀನನ ಕಂಡಡೆ
ಮನ ಮುನಿಸ ಮಾಡಿಸಾ
ರೇಕಣ್ಣಪ್ರಿಯ ನಾಗಿನಾಥಾ.

ವ್ಯಕ್ತಿಯು ಜೀವನದಲ್ಲಿ ಯಾವುದೇ ವ್ಯವಹಾರವನ್ನು ಮಾಡಿದರೂ ಒಳ್ಳೆಯ ನಡೆನುಡಿಯುಳ್ಳವರ ಜೊತೆಯಲ್ಲಿ ಒಡನಾಡುತ್ತ, ಕೆಟ್ಟ ನಡೆನುಡಿಯುಳ್ಳವರಿಂದ ದೂರವಿರಬೇಕು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ಆಡು=ವ್ಯವಹರಿಸು/ವಹಿವಾಟು ನಡೆಸು; ಆಡುವಡೆ=ವ್ಯವಹರಿಸುವುದಾದರೆ; ಸದಾಚಾರಿ=ಒಳ್ಳೆಯ ನಡೆನುಡಿಯುಳ್ಳವನು; ವ್ಯಕ್ತಿಯು ತಾನಾಡುವ ಮಾತಿನಿಂದ ಮತ್ತು ಮಾಡುವ ದುಡಿಮೆಯಿಂದ ತನ್ನ ಮತ್ತು ತನ್ನ ಕುಟುಂಬಕ್ಕೆ ಒಳಿತನ್ನು ಮಾಡಿಕೊಳ್ಳುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವನು; ಕೂಡೆ=ಜೊತೆಯಲ್ಲಿ;

ಆಡುವಡೆ ಸದಾಚಾರಿಗಳ ಕೂಡೆ ಆಡುವುದು=ವ್ಯಕ್ತಿಯು ತನ್ನ ಸಾಮಾಜಿಕ ಜೀವನದಲ್ಲಿ ಯಾವುದೇ ವ್ಯವಹಾರವನ್ನು ಮಾಡಿದರೂ ಒಳ್ಳೆಯ ನಡೆನುಡಿಯುಳ್ಳವರ ಜೊತೆಯಲ್ಲಿಯೇ ಮಾಡುವುದು. ಏಕೆಂದರೆ ಸದಾಚಾರಿಯಾದವನು ಪರರಿಗೆ ಒಳಿತನ್ನು ಮಾಡುತ್ತಾನೆಯೇ ಹೊರತು ಎಂದಿಗೂ ಕೇಡನ್ನು ಬಗೆಯುವುದಿಲ್ಲ;

ನುಡಿ=ಹೇಳು; ನುಡಿವಡೆ=ಹೇಳುವುದಾದರೆ; ಜಂಗಮ=ಜೀವನದಲ್ಲಿ ಯಾವುದು ಸರಿ-ಯಾವುದು ತಪ್ಪು; ಯಾವುದು ದಿಟ-ಯಾವುದು ಸಟೆ; ಯಾವುದು ನೀತಿ-ಯಾವುದು ಅನೀತಿ ಎಂಬ ಸಾಮಾಜಿಕ ಅರಿವನ್ನು ಜನಮನದಲ್ಲಿ ಮೂಡಿಸಿ, ಮಯ್ ಮನವನ್ನು ಹತೋಟಿಯಲ್ಲಿಟ್ಟುಕೊಂಡು ಬಾಳಬೇಕೆಂಬ ಎಚ್ಚರವನ್ನು ಜನರಲ್ಲಿ ಮೂಡಿಸುತ್ತ, ಎಲ್ಲ ಕಡೆ ಸಂಚರಿಸುತ್ತಿರುವ ಶಿವಶರಣ; ಪ್ರೇಮ=ಒಲವು/ಅನುರಾಗ; ಜಂಗಮ ಪ್ರೇಮಿ=ಜಂಗಮರ ವ್ಯಕ್ತಿತ್ವವನ್ನು ಮೆಚ್ಚಿಕೊಂಡವನು/ಸಜ್ಜನ;

ನುಡಿವಡೆ ಜಂಗಮ ಪ್ರೇಮಿಯ ಕೂಡೆ ನುಡಿವುದು=ಏನನ್ನಾದರೂ ಹೇಳಬೇಕೆಂದರೆ ಜಂಗಮರಿಂದ ಅರಿವನ್ನು ಪಡೆದುಕೊಂಡು ಜೀವನದಲ್ಲಿ ಒಳ್ಳೆಯ ರೀತಿಯಲ್ಲಿ ಬಾಳುತ್ತಿರುವ ವ್ಯಕ್ತಿಯೊಡನೆ ಹೇಳಿಕೊಳ್ಳುವುದು. ಏಕೆಂದರೆ ಸಜ್ಜನರೊಡನೆ ನಡೆಸುವ ಮಾತುಕತೆಯಿಂದ ಒಳ್ಳೆಯ ಸಂಗತಿಗಳು ತಿಳಿದುಬರುತ್ತವೆ;

ಮಾತಾಡುವಡೆ=ಮಾತನಾಡಬೇಕೆಂದರೆ; ಪ್ರಸಾದ=ದೇವರನ್ನು ಪೂಜಿಸುವಾಗ ದೇವರ ವಿಗ್ರಹದ ಮುಂದಿಡುವ ಉಣಿಸು ತಿನಸನ್ನು ಪೂಜೆಯ ನಂತರ ದೇವರ ಅನುಗ್ರಹವೆಂದು ತಿಳಿದು ಅದನ್ನು ಸ್ವೀಕರಿಸುವುದು;

ಪ್ರಸಾದಿ=ತನ್ನ ಒಳ್ಳೆಯತನದ ನಡೆನುಡಿಯಿಂದ ಶಿವನನ್ನು ಪೂಜಿಸುತ್ತ, ಶಿವನ ಅನುಗ್ರಹಕ್ಕೆ ಪಾತ್ರನಾಗಿರುವ ಶಿವಶರಣ/ಶರಣೆ;

ಮಾತಾಡುವಡೆ ಪ್ರಸಾದಿಯ ಕೂಡೆ ಮಾತನಾಡುವುದು=ಮಾತನಾಡಬೇಕೆಂಬ ಆಸೆಯಾದರೆ ಶಿವಶರಣಶರಣೆಯರ ಜತೆಯಲ್ಲಿ ಮಾತಾಡುವುದು. ಏಕೆಂದರೆ ಶಿವಶರಣಶರಣೆಯರು ಪ್ರಾಮಾಣಿಕತನದ ಕಾಯಕವನ್ನು ಮತ್ತು ಕಾಯಕದಿಂದ ಬಂದ ಸಂಪತ್ತಿನಿಂದ ಹಸಿದು ಬಂದವರಿಗೆ ಅನ್ನದಾಸೋಹವನ್ನು ಮಾಡುವ ಅರಿವನ್ನು ಮೂಡಿಸುತ್ತಾರೆ;

ಭಕ್ತಿ=ನಿಜ ಜೀವನದಲ್ಲಿ ಒಳ್ಳೆಯ ನಡೆನುಡಿಯಿಂದ ಬಾಳುವುದೇ ಶಿವನ ಪೂಜೆಯೆಂದು ತಿಳಿದಿರುವುದು; ಹೀನ=ತೊರೆದ/ತ್ಯಜಿಸಿದ; ಭಕ್ತಿಹೀನ=ನಿತ್ಯ ಜೀವನದಲ್ಲಿ ಕೆಟ್ಟ ನಡೆನುಡಿಯಿಂದ ಬಾಳುತ್ತಿರುವ ವ್ಯಕ್ತಿ; ಕಂಡಡೆ=ನೋಡಿದರೆ ;

ಮನ=ಮನಸ್ಸು; ಮುನಿಸು=ಜುಗುಪ್ಸೆ/ಬೇಸರ/ಕೋಪ; ಮನ ಮುನಿಸು=ಕನ್ನಡ ನುಡಿ ಸಮುದಾಯದಲ್ಲಿ ‘ಮೊಕ ಮುನಿಸು’ ಎಂಬ ಒಂದು ನುಡಿಗಟ್ಟು ಬಳಕೆಯಲ್ಲಿದೆ. ಇಬ್ಬರು ವ್ಯಕ್ತಿಗಳ ನಡುವಣ ನಂಟು ಮುರಿದುಬಿದ್ದಾಗ, ಕೋಪಗೊಂಡ ಇಲ್ಲವೇ ಬೇಸರಗೊಂಡ ವ್ಯಕ್ತಿಗಳು ಪರಸ್ಪರ ಒಬ್ಬರ ಮೊಕವನ್ನು ಮತ್ತೊಬ್ಬರು ನೋಡದೆ, ದೂರ ದೂರವಿರುತ್ತಾರೆ. ಇದನ್ನು ‘ಮೊಕ ಮುನಿಸು’ ಎಂದು ಕರೆಯುತ್ತಾರೆ. ಇದೇ ರೀತಿಯಲ್ಲಿ ‘ಮನ ಮುನಿಸು’ ಎಂಬ ನುಡಿಗಟ್ಟು ರೂಪುಗೊಂಡಿದೆ.

ಮನ ಮುನಿಸು=ಕೆಟ್ಟ ವ್ಯಕ್ತಿಯ ಆಲೋಚನೆಗಳಿಗೆ ಕಿವಿಗೊಡದೆ, ಅವರ ನುಡಿಗಳಿಗೆ ಓಗೊಡದೆ ಅಂತಹ ವ್ಯಕ್ತಿಯಿಂದ ಮಾನಸಿಕವಾಗಿ ದೂರವಿರುವುದು; ಮಾಡಿಸಾ=ಮಾಡಿಸುವಂತಹವನಾಗು;

ಭಕ್ತಿಹೀನನ ಕಂಡಡೆ ಮನ ಮುನಿಸ ಮಾಡಿಸಾ=ಕೆಟ್ಟ ನಡೆನುಡಿಯುಳ್ಳ ವ್ಯಕ್ತಿಯೊಡನೆ ವ್ಯವಹರಿಸುವ ಸನ್ನಿವೇಶ ಎದುರಾದರೆ, ಅಂತಹ ನೀಚ ವ್ಯಕ್ತಿಯ ಜತೆಯಲ್ಲಿ ಯಾವುದೇ ಬಗೆಯಲ್ಲಿಯೂ ಒಡನಾಡದಂತೆ ನನ್ನನ್ನು ದೂರವಿರಿಸು. ಏಕೆಂದರೆ ಕೆಟ್ಟ ವ್ಯಕ್ತಿಯ ಆಲೋಚನೆ, ಮಾತು ಮತ್ತು ಕೆಲಸಗಳು ಅವನೊಡನೆ ಒಡನಾಡುವ ವ್ಯಕ್ತಿಯನ್ನು ದುರಂತಕ್ಕೆ ಈಡುಮಾಡುತ್ತವೆ;

ರೇಕಣ್ಣಪ್ರಿಯ ನಾಗಿನಾಥಾ=ಶಿವನ ಮತ್ತೊಂದು ಹೆಸರು/ಬಹುರೂಪಿ ಚೌಡಯ್ಯನವರ ವಚನಗಳ ಅಂಕಿತನಾಮ;

(ಚಿತ್ರ ಸೆಲೆ:  sugamakannada.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: