ಮದುವಯ್ಯನ ವಚನದ ಓದು

– ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು: ಮದುವಯ್ಯ
ಕಾಲ: ಹನ್ನೆರಡನೆಯ ಶತಮಾನ
ದೊರೆತಿರುವ ವಚನಗಳು: 102
ವಚನಗಳ ಅಂಕಿತನಾಮ: ಅರ್ಕೇಶ್ವರಲಿಂಗ

ತನು ನಿರ್ವಾಣ ಮನ ಸಂಸಾರ
ಮಾತು ಬ್ರಹ್ಮ ನೀತಿ ಅಧಮ
ಅದೇತರ ಅರಿವು
ಘಾತಕನ ಕೈಯ ಕತ್ತಿಯಂತೆ
ಇದು ನಿಹಿತವಲ್ಲ
ಅರ್ಕೇಶ್ವರಲಿಂಗವನರಿವುದಕ್ಕೆ.

ಬಹಿರಂಗದಲ್ಲಿ ಜನರ ಕಣ್ಣಿಗೆ ವಿರಕ್ತನಂತೆ ಕಾಣಿಸಿಕೊಳ್ಳುತ್ತ, ಅಂತರಂಗದ ಮನದಲ್ಲಿ ಕೆಟ್ಟ ಕಾಮನೆಗಳಿಂದ ಕೂಡಿರುವ ವ್ಯಕ್ತಿಯ ಕಪಟತನದ ನಡೆನುಡಿಯನ್ನು ಈ ವಚನದಲ್ಲಿ ಟೀಕಿಸಲಾಗಿದೆ.

ವಿರಕ್ತ=ವ್ಯಕ್ತಿಯು ತನ್ನ ಮಯ್ ಮನದಲ್ಲಿ ತುಡಿಯುವ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ಒಳ್ಳೆಯದನ್ನು ತನ್ನ ನಡೆನುಡಿಯಲ್ಲಿ ಅಳವಡಿಸಿಕೊಂಡು ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವನು;

ತನು=ದೇಹ/ಶರೀರ; ನಿರ್ವಾಣ=ಬೆತ್ತಲೆ/ಮಯ್ ಮೇಲೆ ಯಾವುದೇ ಬಗೆಯ ಉಡುಗೆ ತೊಡುಗೆಯಿಲ್ಲದಿರುವುದು;

ತನು ನಿರ್ವಾಣ=ಬೆತ್ತಲೆಯಾಗಿರುವುದು. ಇದು ಒಂದು ರೂಪಕವಾಗಿ ಬಳಕೆಗೊಂಡಿದೆ. ವ್ಯಕ್ತಿಯು ತನ್ನ ದೇಹದ ಅಂದಚೆಂದದ ಬಗ್ಗೆ ಯಾವುದೇ ಮೋಹವಿಲ್ಲದಿರುವುದು;

ಮನ=ಮನಸ್ಸು; ಸಂಸಾರ=ಲೋಕದ ಜೀವನ/ಬದುಕು;

ಮನ ಸಂಸಾರ=ಇದೊಂದು ರೂಪಕವಾಗಿ ಬಳಕೆಯಾಗಿದೆ. ಮನಸ್ಸಿನಲ್ಲಿ ಬಹು ಬಗೆಯ ಬಯಕೆಗಳು ತುಂಬಿಕೊಂಡು, ಅವನ್ನು ಈಡೇರಿಸಿಕೊಳ್ಳುವುದಕ್ಕಾಗಿ ಹಂಬಲಿಸುತ್ತಿರುವುದು/ಹೊಂಚುಹಾಕುತ್ತಿರುವುದು;

ತನು ನಿರ್ವಾಣ ಮನ ಸಂಸಾರ=ಬಹಿರಂಗದಲ್ಲಿ ಸಂನ್ಯಾಸಿ. ಅಂತರಂಗದಲ್ಲಿ ಕಾಮಿ;

ಬ್ರಹ್ಮ=ದೇವರು/ವೇದಾಂತದ ವಿಚಾರ/ಸತ್ಯ ನೀತಿ ನ್ಯಾಯದ ಸಂಗತಿ;

ಮಾತು ಬ್ರಹ್ಮ=ವ್ಯಕ್ತಿಯು ಆಡುವ ಮಾತೆಲ್ಲವೂ ಸತ್ಯ ನೀತಿ ನ್ಯಾಯದ ಸಂಗತಿಗಳಿಂದ ಕೂಡಿರುವುದು;

ನೀತಿ=ನಡೆನುಡಿ; ಅಧಮ=ಕೀಳು/ಕೆಳಮಟ್ಟದ್ದು;

ನೀತಿ ಅಧಮ=ವ್ಯಕ್ತಿಯ ನಡೆನುಡಿಯು ತುಂಬಾ ಕೀಳುಮಟ್ಟದಲ್ಲಿರುವುದು;

ಮಾತು ಬ್ರಹ್ಮ ನೀತಿ ಅಧಮ=ಆಡುವುದು ವೇದಾಂತ; ಮಾಡುವುದು ಕೀಳು ಕೆಲಸ;

ಅದು+ಏತರ; ಏತರ=ಯಾವ ಬಗೆಯ/ಯಾವ ರೀತಿಯ; ಅರಿವು=ತಿಳುವಳಿಕೆ;

ಅದೇತರ ಅರಿವು=ಕಾಣುವುದೊಂದು ರೀತಿ, ಬಾಳುವುದೊಂದು ರೀತಿ; ಆಡುವುದೊಂದು ರೀತಿ, ಮಾಡುವುದೊಂದು ರೀತಿ. ಇಂತಹ ಇಬ್ಬಗೆಯ ನಡೆನುಡಿಯನ್ನು ಅರಿವು ಎಂದು ಕರೆಯಲಾಗದು;

ಘಾತಕ=ಕೊಲೆಗಾರ; ನಿಹಿತ+ಅಲ್ಲ; ನಿಹಿತ=ಸರಿಯಾಗಿ ರೂಪುಗೊಂಡಿರುವುದು; ನಿಹಿತವಲ್ಲ=ಸರಿಯಾದುದಲ್ಲ;

ಘಾತಕನ ಕೈಯ ಕತ್ತಿಯಂತೆ ಇದು ನಿಹಿತವಲ್ಲ=ಕೊಲೆಗಾರನ ಕಯ್ಯಲ್ಲಿರುವ ಕತ್ತಿಯು ಹೇಗೆ ಜೀವಿಗಳನ್ನು ಕೊಲ್ಲುತ್ತದೆಯೋ ಅಂತೆಯೇ ಬಹಿರಂಗದಲ್ಲಿ ಒಳ್ಳೆಯವರಂತೆ ನಟಿಸುತ್ತ, ಅಂತರಂಗದಲ್ಲಿ ಕೆಟ್ಟ ನಡೆನುಡಿಯಿಂದ ಬಾಳುತ್ತಿರುವ ವ್ಯಕ್ತಿಗಳು ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುತ್ತಾರೆ. ಆದ್ದರಿಂದ ಒಳಗೊಂದು ಹೊರಗೊಂದು ಬಗೆಯ ಕಪಟತನದ ನಡೆನುಡಿಗಳು ಒಳ್ಳೆಯದಲ್ಲ;

ಅರ್ಕೇಶ್ವರಲಿಂಗ+ಅನ್+ಅರಿವುದಕ್ಕೆ; ಅರ್ಕೇಶ್ವರಲಿಂಗ=ಶಿವನ ಮತ್ತೊಂದು ಹೆಸರು/ಮದುವಯ್ಯನವರ ವಚನಗಳ ಅಂಕಿತನಾಮ; ಅನ್=ಅನ್ನು; ಅರಿವುದಕ್ಕೆ=ತಿಳಿಯುವುದಕ್ಕೆ;

“ಅರ‍್ಕೇಶ್ವರಲಿಂಗವನ್ನು ಅರಿಯುವುದು” ಎಂದರೆ ವ್ಯಕ್ತಿಯ ಒಳ್ಳೆಯ ನಡೆನುಡಿಗೆ ಶಿವನೇ ಮಾರ್‍ಗದಾತನೆಂದು ನಂಬಿ ಬಾಳುವುದು;

ಅರ್ಕೇಶ್ವರಲಿಂಗವನರಿವುದಕ್ಕೆ ಇದು ನಿಹಿತವಲ್ಲ=ಶಿವನನ್ನು ಅರಿತು ಬಾಳಬೇಕೆಂದರೆ ವ್ಯಕ್ತಿಯು ಕಪಟತನದ ನಡೆನುಡಿಯಿಂದ ಕೂಡಿರಬಾರದು;

(ಚಿತ್ರ ಸೆಲೆ:  sugamakannada.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: