ಕವಿತೆ: ದೇವರಿಗೂ ಶೂನ್ಯಮಾಸ
– ಕೌಸಲ್ಯ.
ನಮ್ಮೂರಲ್ಲಿ ಶೂನ್ಯ ಮಾಸಾಚಾರಣೆ
ಗುಡಿಯಲಿ ಶಿವನಿಗೆ ಪೂಜಾ ಕೈಂಕರ‍್ಯ ಬಾರಿ ಜೋರು
ಕಾಡ್ಲಯ್ಯಪ್ಪ, ಓಣಿ ನಾತನು, ಶಿವನ ಆಗಮನಕ್ಕೆ ಕಾಯುತ್ತಿರುವರು
ಇದು ಶೂನ್ಯಮಾಸಾಚಾರಣೆ
ಚಂಡೆ, ಮದ್ದಳೆ, ಗಂಟೆ ಸ್ರುಶ್ಟಿಸಿದೆ ಅಲೆ
ನೆರೆದವರು, ಕೈಮುಗಿದವರು, ಹಣ್ಣುಕಾಯಿ ಮಾಡಿದವರು
ಶಿವನಿಗೆ ಒಂದೇ ಅಹವಾಲು
ಬೂಮಿ ಹೊತ್ತಿ ಉರಿಯುತ್ತಿದೆ
ತಣಿಸುವ ವರುಣ ಇಲ್ಲವಾದ
ಶಿವ ನಿರ‍್ಲಿಪ್ತನಾಗಿರುವ
ಇದು ಶೂನ್ಯ ಮಾಸಾಚರಣೆ
ಮಸೀದಿಗೆ ಬಕ್ತರು ಬಂದರು
ನಮಾಜ್ ಮಾಡುವಾಗಲೂ ಅಹವಾಲು
ರಂಜಾನ್ ಉಪವಾಸ
ಅಲ್ಲಾಹುನೂ ಬಕ್ತರಿಗೆ ಕಿವಿಯಾಗುತ್ತಿಲ್ಲ
ಇದು ಶೂನ್ಯಮಾಸಾಚರಣೆ
ಚರ‍್ಚಿನ ಗಂಟೆ ಹೊಡೆಯುತ್ತಿದೆ
ಈಸ್ಟರ್ ಕಾಲವಿದು
ಶಿಲುಬೆಯಲ್ಲಿ ಯೇಸು ಶಾಂತಚಿತ್ತನಾಗಿರುವ
ಬಕ್ತರ ಉಪವಾಸ ಪೂಜೆ
ಯೇಸುವಿಗೆ ಕಣ್ಣು ಕಾಣದಾಗಿದೆ
ಇದು ಶೂನ್ಯ ಮಾಸಾಚರಣೆ
ಪೂಜೆ ಪುನಸ್ಕಾರಕೆ
ಒಲಿಯದ ದೇವರುಗಳು
ಒಣಗಿದ ಮರ, ಉದುರುವ ತರಗೆಲೆ
ಕುರುಚಲು ಕಾಡಿಗೆ ಒಂದು ಕಿಡಿ ಬಿದ್ದರೇನು ಗತಿ?
ಜನರಾಡುವ ಮಾತಿಗೆ ಮಿತಿಯುಂಟೇ?
ಇದು ಶೂನ್ಯ ಮಾಸಾಚರಣೆ
ಬಿರುಸು ಮಳೆಯಾದರೆ ಬೇಡ ಎಂಬುವರು
ಸುಡುಬಿಸಿಲಿಗೆ ಜೀವ ಕರಗಿತು ಎಂಬುವರು
ಕೊರಕು ಚಳಿಗೆ ಅಯ್ಯೋ ಎಂಬುವರು
ಶಿವನೇ ಎಲ್ಲವನು ನೋಡುವ
ಅವನ ಬಳಿ ಬೇಡುವರು, ಕೇಳುವರು
ಶಿವನು, ಅಲ್ಲಾನು, ಯೇಸು ನಿರ‍್ಲಿಪ್ತ
ಇದು ಶೂನ್ಯ ಮಾಸಾಚರಣೆ
( ಚಿತ್ರ ಸೆಲೆ: shilrani.wordpress.com )
ಇತ್ತೀಚಿನ ಅನಿಸಿಕೆಗಳು