ದುಡ್ಡು-ಉಳಿತಾಯ-ಗಳಿಕೆ: 3ನೇ ಕಂತು
– ನಿತಿನ್ ಗೌಡ.
ಹಿಂದಿನ ಬರಹದಂತೆ ಈ ಬರಹದಲ್ಲಿ ಹಣಕಾಸು ಸಂಬಂದಿತ ಹೂಡಿಕೆ/ಉಳಿತಾಯ ಬಗೆಗಿನ ಇನ್ನಶ್ಟು ಆಯ್ಕೆಗಳನ್ನು ನೋಡೋಣ.
ತನ್ ಸ್ತಿರ ಕಾತೆ ( Auto sweep )
ಸ್ತಿರ ಟೇವಣಿ ಒಳ್ಳೆಯ ಬಳುವಳಿಯನ್ನು ನೀಡುತ್ತದೆಯಾದರೂ, ಟೇವಣಿದಾರ ತನ್ನ ಕಾತೆಯ ಒಟ್ಟೂ ಹಣದ ಕೊಂಚ ಬಾಗವನ್ನು, ಟೇವಣಿಯ ಅವದಿ ಮುಗಿಯುವ ಒಳಗೆ ಹಿಂಪಡೆಯಲು ಬಯಸಿದರೆ, ಅದಕ್ಕಾಗಿ ದಂಡ ಕಟ್ಟಬೇಕಾಗುತ್ತದೆ. ಹೀಗಿರುವಾಗ, ಯಾರಿಗಾದರೂ ಸ್ತಿರ ಟೇವಣಿಯಂತೆ ಬಳುವಳಿಯೂ ಬೇಕು, ಜೊತೆಗೆ ತಮಗೆ ಅವಶ್ಯಕೆತೆ ಬಂದೊದಗಿದಾಗ, ಉಳಿತಾಯ ಕಾತೆಯಂತೆ ತಮ್ಮ ಹಣವನ್ನು ಯಾವುದೇ ದಂಡವಿಲ್ಲದೆ ಬಿಡಿಸಿಕೊಳ್ಳಬೇಕೆಂದಿದ್ದರೆ, ಅಂತವರು ಈ ಆಯ್ಕೆಗೆ ಹೋಗಬಹುದು. ಇದು ಅತಿ ಕಡಿಮೆ ಅಪಾಯ, ಹೆಚ್ಚು ಬದ್ರತೆ ಮತ್ತು ಉಳಿತಾಯ ಕಾತೆಯಿಂದ ದೊರಕುವ ಗಳಿಕೆಗಿಂತ, ಹೆಚ್ಚು ಗಳಿಕೆಯ ಆಯ್ಕೆಯಾಗಿದೆ. ಬಾರತದಲ್ಲಿ ಹಲವಾರು ಹಣಮನೆಗಳು ಈ ಆಯ್ಕೆಯನ್ನು ನೀಡುತ್ತಿರುವವು. ಎತ್ತುಗೆಗೆ ಹೆಚ್.ಡಿ.ಎಪ್.ಸಿ ,ಎಸ್.ಬಿ.ಐ, ಕೆನರಾ, ಆಕ್ಸಿಸ್ ಇತ್ಯಾದಿ. ಕೆಲವು ಹಣಮನೆಗಳು ನೇರವಾಗಿ ಈ ಆಯ್ಕೆಯನ್ನು ಸಕ್ರಿಯಗೊಳಿಸಿರುವುದಿಲ್ಲ. ಅಂತಹ ಹಣಮನೆಗಳಲ್ಲಿ ಕಾತೆದಾರ, ತನ್ನ ಕಾತೆಗೆ ಈ ಆಯ್ಕೆಯನ್ನು ಸಕ್ರಿಯಗೊಳಿಸಲು ಮನವಿ ಕೊಡಬೇಕು. ಇದನ್ನು ಮಿಂಬಲೆಯ ಬ್ಯಾಂಕಿಂಗ್( Net banking) ಮೂಲಕವೂ ಸಕ್ರಿಯಗೊಳಿಸಬಹುದು. ಹೀಗೆ ಮಾಡುವಾಗ ಕಾತೆದಾರ, ಹಣಮಿತಿ ಮಟ್ಟವನ್ನು( Threshold limit) ತಿಳಿಸಬೇಕು. ಇದನ್ನು ಒಂದು ಎತ್ತುಗೆಯ ಮೂಲಕ ತಿಳಿದುಕೊಳ್ಳೋಣ.
ಕಾತೆದಾರನ ಕಾತೆಯಲ್ಲಿರುವ ಹಣ -50,000 /-
ನಿಗದಿ ಪಡಿಸಿದ ಹಣಮಿತಿ ಮಟ್ಟ – 40,000 /-
ಹೊಸದಾಗಿ ಮೊದಲ್ಗೊಂಡ ತನ್ ಸ್ತಿರ ಕಾತೆ( Auto sweep FD account) – 40,000 /-
ಈಗ, ಎಂದೆಂದು ಕಾತೆದಾರನ ಉಳಿತಾಯ ಕಾತೆಯಲ್ಲಿ ಹಣಮಿತಿ ಮಟ್ಟ/ಮಟ್ಟಕ್ಕಿಂತ ಹೆಚ್ಚು ಹಣ ಸೇರುತ್ತದೆಯೋ; ಆಗ ಅಂತಹ ಹಣ ತನ್ ತಾನೆ, ತನ್ ಸ್ತಿರ ಕಾತೆಗೆ ಸೇರುತ್ತದೆ. ಇದನ್ನು ತನ್ ಹಣ ಒಳಸೇರುವಿಕೆ( auto sweep in) ಎನ್ನುವರು. ಈ ಆಯ್ಕೆಯನ್ನು ಒಮ್ಮೆ ಹಣಮನೆಯಲ್ಲಿ ಸಕ್ರಿಯಗೊಳಿಸಿದರೆ ಸಾಕು, ತದ ನಂತರ ಈ ಪ್ರಕ್ರಿಯೆ/ಕೆಲಸ ಕಾತೆಯ ಸಿತ್ತಿಗೆ ಅನುಗುಣವಾಗಿ ತಂತಾನೆ ಆಗುತ್ತಾ ಸಾಗುತ್ತದೆ.
ಹೀಗೆ ತನ್ ಸ್ತಿರ ಕಾತೆ ತೆರೆದಮೇಲೆ, 40,000 ರೂ ಗೆ ಸ್ತಿರ ಕಾತೆಯಶ್ಟೇ ಬಡ್ಡಿ( ಎತ್ತುಗೆಗೆ 7%) ಬರುತ್ತದೆ ಮತ್ತು ಉಳಿದ ಉಳಿತಾಯ ಕಾತೆಯ 10,000 ರೂ ಗೆ ಉಳಿತಯ ಕಾತೆಗೆ ನಿಗದಿ ಪಡಿಸಿದ ಬಡ್ಡಿ(2.5-4%) ದೊರಕುತ್ತದೆ. ಈಗ ಒಂದೊಮ್ಮೆ ಕಾತೆದಾರನಿಗೆ ಕಶ್ಟ ಬಂದೊದಗಿ, ತನ್ನ ಒಟ್ಟೂ ಹಣ ಇಲ್ಲವೇ 10,000 ಕ್ಕೂ ಮೀರಿ ಹಣ ಹಿಂಪಡೆಯಲು ಬಯಸಿದಲ್ಲಿ, ಇದಕ್ಕಾಗಿ ಯಾವುದೇ ದಂಡ ಪಾವತಿಸಬೇಕಿಲ್ಲ. ಎತ್ತುಗೆಗೆ, ಆತ 30,000 ರೂ ಹಿಂಪಡೆಯಲು ಬಯಸಿದಲ್ಲಿ; ಆತನ ಮೊದಲ 10,000 ಉಳಿತಾಯ ಕಾತೆಯಿಂದ ಮತ್ತು ಇನ್ನುಳಿದ 20,000 ರೂ ತನ್ ಸ್ತಿರ ಕಾತೆಯಿಂದ ಬಿಡಿಸಲಾಗುತ್ತದೆ. ಇದನ್ನು ತನ್ ಹಣ ಹೊರಪಡೆಯುವಿಕೆ( auto sweep out) ಎನ್ನುವರು. ಈ ಮೂಲಕ; ತನ್ ಸ್ತಿರ ಕಾತೆಯಲ್ಲಿ ಮಿಕ್ಕಿದ 20,000 ರೂಪಾಯಿಗೆ( 40,000 ಕಾತೆ- 20,000 ರೂ), ಈಗಲೂ ಕೂಡಾ ಸ್ತಿರ ಕಾತೆಯಶ್ಟೇ ಬಡ್ಡಿ (7%) ಸಿಗುತ್ತದ್ದೆ. ಈ ಮೂಲಕ, ಸ್ತಿರ ಕಾತೆಯನ್ನು ಮುಚ್ಚದೇಯೇ ಉತ್ತಮ ಬಳುವಳಿ ಮತ್ತು ಅವಶ್ಯಕತೆಗೆ ತಕ್ಕಂತೆ ದುಡ್ಡು ಬಿಡಿಸಿಕೊಳ್ಳುವ ಏರ್ಪಾಡು(Liquidity) ಕಾತೆದಾರನಿಗೆ ಸಿಗುತ್ತದೆ.
ಕಾತೆದರಾನ ಅವಶ್ಯಕತೆ(30,000)= ಉಳಿತಾಯ ಕಾತೆಯಿಂದ ಬಿಡಿಸಲ್ಪಡುವುದು (10,000) + ತನ್ ಸ್ತಿರ ಕಾತೆಯಿಂದ ಬಿಡಿಸಲ್ಪಡುವುದು (20,0000).
ಉಳಿತಾಯ ಕಾತೆಯ ಬಾಕಿ= ೦ ರೂ
ತನ್ ಸ್ತಿರ ಕಾತೆಯ ಬಾಕಿ – 20,000 /- ಈಗ ಸಿಗುವ ಬಡ್ಡಿ (7%)
ಈಗ ಮುಂದೊಮ್ಮೆ; ಕಾತೆದಾರನ ಉಳಿತಾಯ ಕಾತೆಗೆ 45,000 ರೂ ಸೇರಿದಲ್ಲಿ(ಜಮೆಯಾದಲ್ಲಿ); ಅದರಲ್ಲಿನ 40,000 ರೂ( ಹಣಮಿತಿ ಮಟ್ಟ) ತಂತಾನೇ; ತನ್ ಸ್ತಿರ ಕಾತೆಗೆ(FD) ಸೇರಿಕೊಳ್ಳುತ್ತದೆ ಮತ್ತು ಉಳಿತಾಯ ಕಾತೆಯಲ್ಲಿ ಇನ್ನುಳಿದ 5,000 ರೂ ಜಮೆಯಾಗುತ್ತದೆ.
ಈ ಆಯ್ಕೆಯಲ್ಲಿ ಕೆಲವು ಹಣಮನೆಗಳು ,ಹೆಚ್ಚುವರಿ ಶುಲ್ಕಗಳನ್ನು ಹಾಕಬಹುದು ಮತ್ತು ಅವದಿಗೆ ಮುನ್ನ ಒಟ್ಟೂ ಹಣ ಹಿಂಪಡೆಯುವಾಗ ಕೆಲವೊಂದಿಶ್ಟು ಶುಲ್ಕಗಳನ್ನು ಕಾತೆದಾರನಿಗೆ ಹಾಕಬಹುದು. ಇದರ ಒಡಂಬಡಿಕೆಗಳ ಬಗೆಗೆ ಅರಿತು ಹೂಡಿಕೆ ಮಾಡುವುದು ಒಳಿತು.
ಈ ಮೇಲಿನ ಆಯ್ಕೆಗಳಲ್ಲಿ ಗಳಿಸುವ ಬಡ್ಡಿಯು ಆದಾಯ ತೆರಿಗೆಗೆ ಒಳಪಡುತ್ತದೆ. ಸದ್ಯಕ್ಕೆ ಬಾರತದಲ್ಲಿ ಸೆಕ್ಶನ್ 80TTA ಅಲ್ಲಿ ಆಯಾ ಹಣಕಾಸಿನ ವರುಶಕ್ಕೆ( Financial Year ), 10,000 ರೂ ಬಡ್ಡಿಯ ವರೆಗೆ ಆದಾಯ ತೆರಿಗೆಯ ವಿನಾಯಿತಿ ಇದೆ. ಕಾತೆದಾರ ಇದಕ್ಕೂ ಹೆಚ್ಚು ಬಡ್ಡಿ ಪಡೆಯುತ್ತಿದ್ದಲ್ಲಿ; ತನ್ನ ಗಳಿಕೆ ಮತ್ತು ಅದಕ್ಕೆ ಅನ್ವಯವಾಗುವ ಆದಾಯ ತೆರಿಗೆಯ ಮಟ್ಟಕ್ಕೆ( Income tax slab) ಅನುಗುಣವಾಗಿ ತೆರಿಗೆ ಕಟ್ಟಬೇಕಾಗುತ್ತದೆ. ಟೇವಣಿಗಳು ಹತ್ತುಸಾವಿರಕ್ಕೂ ಹೆಚ್ಚಿನ ಬಡ್ಡಿಯನ್ನು ಗಳಿಸುತ್ತಿದ್ದಲ್ಲಿ, ಹಣಮನೆಗಳು ಆ ಬಡ್ಡಿಯ ಮೇಲೆ 10% ಕರವನ್ನು(Tax Deducted at source (TDS)- ಬಂಡವಾಳಕ್ಕೆ ಮುರಿದುಕೊಂಡ ಕರ) ಮುರಿದುಕೊಳ್ಳುತ್ತಾರೆ. ಇದರಿಂದ ಟೇವಣಿದಾರನಿಗೆ ತನ್ನ ಹೂಡಿಕೆಯ , ಕೊನೆಯಲ್ಲಿ ಸಿಗುವ ಹಣದಲ್ಲಿ(Maturity amount) ಕೊಂಚ ಬೇರ್ಮೆ ಕಾಣಬಹುದು. ಈ ಕಟ್ಟಳೆಗಳು ಕಾಲ ಕಾಲಕ್ಕೆ ಬದಲಾಗುತ್ತಿರುತ್ತವೆ.
ಮುಂದಿನ ಬರಹದಲ್ಲಿ ಇನ್ನುಳಿದ ಆಯ್ಕೆಗಳ ಬಗೆಗೆ ನೋಡೋಣ.
ಸೂಚನೆ( Disclaimer)
ಈ ಬರಹವು ಯಾವುದೇ ಹೂಡಿಕೆ,ಗಳಿಕೆ, ಹಣಕಾಸು, ಆಸ್ತಿಪಾಸ್ತಿ ಗೆ ಸಂಬಂದ ಪಟ್ಟಂತೆ ನೀಡಲಾಗುವ ಸಲಹೆಯಲ್ಲ. ಇದು ಕೇವಲ ಕಲಿಕೆ(Educational) ಬರಹವಾಗಿದೆ. ಓದುಗರು ತಾವು ಯಾವುದೇ ಆಯ್ಕೆ ಮಾಡುವ ಮುನ್ನ, ಮಾರುಕಟ್ಟೆ ನಿಯಮ, ಸರಕಾರದ ಕಟ್ಟಳೆ ಮತ್ತು ಇತರ ಸಂಸ್ತೆಗಳ ಕಟ್ಟಳೆಗಳನ್ನು ಅರಿತು ಮುನ್ನಡೆಯಬೇಕು ಮತ್ತು ತಮ್ಮ ನಿರ್ದಾರಕ್ಕೆ ತಾವೇ ಜವಾಬ್ದಾರರಾಗಿರುತ್ತಾರೆ.
( ಚಿತ್ರ ಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು